ಅಮರಶಿಲ್ಪಿ ಜಕಣಾಚಾರಿ ಭಾರತದ ಪ್ರಖ್ಯಾತ ಶಿಲ್ಪಿ. ಅವನು ಸಾವಿರಾರು ವಿಗ್ರಹಗಳನ್ನು ಕೆತ್ತಿದ್ದಾನೆ. ಅವನು ಕೆತ್ತಿದ ಪ್ರತಿ ವಿಗ್ರಹವೂ ಪ್ರಸಿದ್ಧಿಯಾಗಿದೆ. ಈಗಲೂ ಅವನ ಕಲೆಯನ್ನು ಸ್ಮರಿಸಲಾಗುತ್ತದೆ. ಬಹುತೇಕರಿಗೆ ಗೊತ್ತಿರುವ ಹಾಗೆ ಅಮರಶಿಲ್ಪಿಯ ಹುಟ್ಟೂರು ಕೈದಾಳ. ಅಲ್ಲಿಯೇ ಕೊನೆಯದಾಗಿ ಅವನು ಕೆತ್ತನೆ ಮಾಡಿರುವ ಚನ್ನಕೇಶವನ ಮೂರ್ತಿಯಿದೆ. ಈ ದೇವಾಲಯದಲ್ಲಿ ಪ್ರತಿದಿನ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇಲ್ಲಿನ ಕೆಲವು ಅದ್ಭುತ ಕೆತ್ತನೆಗಳು ಬೇಲೂರು ಚನ್ನಕೇಶವ ದೇವಾಲಯವನ್ನು ನೆನಪಿಸುತ್ತವೆ. ಗರ್ಭಗುಡಿಯಲ್ಲಿರುವ 8.5 ಅಡಿ ಎತ್ತರದ ಚನ್ನಕೇಶವ ಮೂರ್ತಿ ಪಶ್ಚಿಮ ಮುಖವಾಗಿರುವುದು ವಿಶೇಷ. ಅಂದಹಾಗೆ ಕೈದಾಳದಲ್ಲಿರುವ ಚನ್ನಕೇಶವನ ವಿಗ್ರಹವನ್ನು ಅಮರಶಿಲ್ಪಿ ಜಕಣಾಚಾರಿ ಕೆತ್ತಿದ್ದು, ಅದು ಅವನ ಕೊನೆಯ ಕೆತ್ತನೆಯ ವಿಗ್ರಹ ಎಂದು ಹೇಳಲಾಗುತ್ತದೆ. ಇತಿಹಾಸದ ಪ್ರಕಾರ ಜಕಣಾಚಾರಿ ಕೆತ್ತಿದ ಬೇಲೂರು ಚನ್ನಕೇಶವ(ಕಪ್ಪೆ ಚನ್ನಿಗರಾಯ) ಮೂರ್ತಿಯಲ್ಲಿ ದೋಷವಿದೆ ಎಂಬ ಮಾತುಗಳು ಕೇಳಿಬಂದಾಗ, ಬೇಸರಗೊಂಡ ಜಕಣಾಚಾರಿ ತನ್ನ ಕೈ ಬಲಿಕೊಟ್ಟನು ಎಂಬ ಕತೆಯೂ ಇದೆ.