ಗುಂಟೂರ್ ಮಸಾಲ: ದಾರಿಯಲ್ಲಿ ಹುಡುಗಿ ಸಿಕ್ಕಾಗ!
ಗೂಗಲ್ ಅಂದಾಗ ನೆನಪಾಗಿದ್ದು. ಗೂಗಲ್ ಎಂಬ ಹೆಸರಿನ ಊರು. ಹೌದು ಗೂಗಲ್ ಇರುವುದು ನಮ್ಮದೇ ಕರ್ನಾಟಕದಲ್ಲಿ. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಗೂಗಲ್ ಎಂಬ ಹಳ್ಳಿಯಿದೆ. ಆದರೆ ಇದು google ಅಲ್ಲ googal. ಸ್ಪೆಲ್ಲಿಂಗ್ ಯಾರಿಗೆ ಬೇಕು, ಗೂಗಲ್ ಅಂದಾಗ ಸೌಂಡಿಂಗ್ ಒಂದೇ ತಾನೆ. ಈ ಹಳ್ಳಿಯ ಗ್ರಾಮಪಂಚಾಯಿತಿ ಅಧ್ಯಕ್ಷ ಬೇಕಾದ್ರೆ, ನಾನು ಗೂಗಲ್ಲಲ್ಲಿ ಚೇರ್ ಮನ್ ಆಗಿದ್ದೇನೆ ಅಂತ ಧಾರಾಳವಾಗಿ ಹೇಳಿಕೊಳ್ಳಬಹುದು.
ಪ್ರವಾಸಕ್ಕೆ ಹೋದಾಗ ಅಥವಾ ಬಸ್/ರೈಲುಗಳಲ್ಲಿ ಪ್ರಯಾಣ ಮಾಡುವಾಗ ಸದಾ ಕಿಟಕಿಯಿಂದಾಚೆ ಒಂದು ಕಣ್ಣು ನೆಟ್ಟಿದ್ದರೆ ಸಾಕಷ್ಟು ಆಸಕ್ತಿದಾಯಕ ಮತ್ತು ತಮಾಷೆಗಳು ನೋಡಲು ಸಿಗುತ್ತವೆ. ವಿಶೇಷವಾಗಿ ಪ್ರಯಾಣಮಾರ್ಗದಲ್ಲಿ ಸಿಗುವ ಊರುಗಳ ಹೆಸರುಗಳು ಹಲವು ಬಾರಿ ಚಿತ್ರವಿಚಿತ್ರವಾಗಿರುತ್ತವೆ. ಡಬಲ್ ಮೀನಿಂಗ್ ಹೆಸರುಗಳು, ತಮಾಷೆಗೆ ಗ್ರಾಸವಾಗುವ ಹೆಸರುಗಳು ಸಿಗುತ್ತಲೇ ಇರುತ್ತವೆ. ಸರಿಯಾಗಿರುವ ಹೆಸರುಗಳನ್ನೇ ತಿರುಚಿ ತಮಾಷೆ ನೋಡುವ ತರಲೆಗಳಿಗೆ ತಮಾಷೆ ಹೆಸರುಗಳೇ ಸಿಕ್ಕುಬಿಟ್ಟರೆ?
ಉತ್ತರ ಕನ್ನಡದಲ್ಲಿ, ಬಾರೆ, ಕಳಚೆ ಎಂಬ ಹೆಸರಿನ ಊರುಗಳಿವೆ. ಅದನ್ನಿಟ್ಟುಕೊಂಡು ತಮಾಷೆ ಮಾಡುವವರಿಗೇನೂ ಕಮ್ಮಿ ಇಲ್ಲ. ಅದೇ ರೀತಿ ಹಾಸ್ಯಭಾಷಣಕಾರ ಪ್ರಾಣೇಶ ಅವರು ಉತ್ತರ ಭಾರತದ ಬೋಸಡಿ ಹೆಸರಿನ ಊರಿನ್ನಿಟ್ಟುಕೂಂಡು ನಿಮಿಷಗಟ್ಟಲೆ ನಗಿಸುತ್ತಾರೆ. ಭಾರತದಾದ್ಯಂತ ಇಂಥ ತಮಾಷೆ ಹೆಸರುಗಳ ರಾಶಿಯೇ ಇದೆ. ಕುತ್ತಾ, ಗಧಾ ಬೈನ್ಸಾ( ನಾಯಿ ಕತ್ತೆ ಎಮ್ಮೆ) ಹೆಸರಿನ ಊರುಗಳಿವೆ. ಬಿಹಾರದಲ್ಲಿ ಬಾರ್ ಎಂಬ ಹೆಸರಿನ ಊರಿದೆ ಅಂದ್ರೆ ನಂಬ್ತೀರಾ? ಊರಿಗೆ ಬಂದವ್ನ್ ಬಾರಿಗೆ ಬರದೇ ಇರ್ತಾನಾ ಅಂತ ಗಾದೆ ಆಗಬಹುದೇನೋ ಇಲ್ಲಿ.

ಕಾಲಾ ಬಕ್ರಾ ಎಂಬ ಊರು ಪಂಜಾಬಿನಲ್ಲಿದೆ. ತರೀಕೆರೆ ಏರಿಮೇಲೆ ಮೂರು ಕರಿ ಕುರಿಮರಿ ಹಾಡು ಕೇಳಿದೀರಲ್ವಾ.. ಅದರಲ್ಲಿ ಬರುವ ಕರಿಕುರಿ ಅನ್ನೋದು ಪಂಜಾಬಿನ ಊರೊಂದರ ಹೆಸರು ಎಂತ ವಿಶೇಷಾರ್ಥ ಕಲ್ಪಿಸಬಹುದೇನೋ ಈಗ. ಮೋದಿಯವರನ್ನು ಮೂದಲಿಸಿದಲು ಬಳಸಿದ ಪದ ಪನೌತಿ. ಆ ಹೆಸರಿನ ಊರೂ ಉತ್ತರಪ್ರದೇಶದಲ್ಲಿದೆ. ಪನೌತಿ ಅಂದ್ರೆ ಅಪಶಕುನ, ದುರದೃಷ್ಟ ಎಂಬರ್ಥವಿದೆ.
ಬೆಂಗಳೂರಲ್ಲೇ ನಿಮಗೆ ಕಾಕ್ಸ್ ಟೌನ್, ಡಿಕನ್ಸನ್ ರೋಡ್, ಹಡ್ಸನ್ ಸರ್ಕಲ್ ಮುಂತಾದುವುಗಳನ್ನು ಕನ್ನಡಕ್ಕೆ,ಉತ್ತರ ಕನ್ನಡ ಭಾಷೆಗೆ ಟ್ರಾನ್ಸ್ ಲೇಟ್ ಮಾಡಿ ನಗುವಿಗೆ ಸರಕು ಮಾಡಿಕೊಳ್ಳಲಾಗುತ್ತೆ.ವಿದೇಶಗಳೂ ಇಂಥ ಚಿತ್ರವಿಚಿತ್ರ ಹೆಸರಿನ ಊರು/ನಗರಗಳಿಂದ ಹೊರತಾಗಿಲ್ಲ. ಅಮೆರಿಕದಲ್ಲಿ ಚಿಕನ್ ಎಂಬ ಪಟ್ಟಣವಿದೆ. ಬಟರ್ ಮಿಲ್ಕ್ (ಮಜ್ಜಿಗೆ) ಇದೆ. ಫ್ರಾನ್ಸ್ ನಲ್ಲಿ ಕಾಂಡೊಮ್ ಎಂಬ ನಗರವಿದೆ. ಅಮೆರಿಕದ ವರ್ಜಿನಿಯಾದಲ್ಲಿ ಫಾರ್ಟ್ ಎಂಬ ಊರಿದೆ. ಫಾರ್ಟ್ ಅಂದ್ರೆ ಅಪಾನವಾಯು. ಮಿಚಿಗನ್ ನಲ್ಲಿ ಹೆಲ್ ಎಂಬ ಊರಿದೆ. ಅ ನರಕದಲ್ಲಿ ಅದ್ಯಾರಿರ್ತಾರೋ! ಜರ್ಮನಿಯಲ್ಲಿ ಕಿಸ್ಸಿಂಗ್ ಎಂಬೊಂದು ಊರಿದೆ. ಬಹುಶಃ ಬರೀತಾ ಹೋದ್ರೆ ಸಾವಿರಾರು ಪದದ ಲೇಖನವೇ ಆದೀತು. ಗೂಗಲ್ ಮಾಡಿದರೆ ಇನ್ನಷ್ಟು ಮತ್ತಷ್ಟು ಹೆಸರುಗಳು ಸಿಕ್ಕರೂ ಸಿಗಬಹುದು.
ಗೂಗಲ್ ಅಂದಾಗ ನೆನಪಾಗಿದ್ದು. ಗೂಗಲ್ ಎಂಬ ಹೆಸರಿನ ಊರು. ಹೌದು ಗೂಗಲ್ ಇರುವುದು ನಮ್ಮದೇ ಕರ್ನಾಟಕದಲ್ಲಿ. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಗೂಗಲ್ ಎಂಬ ಹಳ್ಳಿಯಿದೆ. ಆದರೆ ಇದು google ಅಲ್ಲ googal. ಸ್ಪೆಲ್ಲಿಂಗ್ ಯಾರಿಗೆ ಬೇಕು, ಗೂಗಲ್ ಅಂದಾಗ ಸೌಂಡಿಂಗ್ ಒಂದೇ ತಾನೆ. ಈ ಹಳ್ಳಿಯ ಗ್ರಾಮಪಂಚಾಯಿತಿ ಅಧ್ಯಕ್ಷ ಬೇಕಾದ್ರೆ, ನಾನು ಗೂಗಲ್ಲಲ್ಲಿ ಚೇರ್ ಮನ್ ಆಗಿದ್ದೇನೆ ಅಂತ ಧಾರಾಳವಾಗಿ ಹೇಳಿಕೊಳ್ಳಬಹುದು. ಯಾರೂ ತಕರಾರು ಎತ್ತುವಂತಿಲ್ಲ. ಅಲ್ಲೊಂದು ಚಿಕ್ಕ ಆಫೀಸು ಮಾಡಿ ಅಲ್ಲಿ ಸಿಇಓ ಆದಾತ, ಗೂಗಲಲ್ಲಿ ಸಿಇಓ ಆಗಿದ್ದೀನಿ ಎಂದು ಇದೇ ಗೂಗಲ್ಲಲ್ಲಿ ಅಪ್ಲೋಡ್ ಮಾಡಿ, ಗೂಗಲ್ ಸಿಇಓ ಸುಂದರ್ ಪಿಚೈಗೆ ಶಾಕ್ ಕೊಡಬಹುದು.
ಇದೇ ರೀತಿ ಗಮನ ಸೆಳೆದ ಇನ್ನೊಂದು ಹೆಸರು. ಹುಡ್ಗಿ. ಹೌದು ಊರಿನ ಹೆಸರೆ ಹುಡ್ಗಿ. ಹುಡುಗಿ ಅಂತಲೂ ಮೈಲಿಗಲ್ಲುಗಳ ಮೇಲೆ ಓದಸಿಗುತ್ತದೆ. ಬೀದರ್ ನ ಹುಮ್ನಾಬಾದ್ ನ ಈ ಗ್ರಾಮದ ಹೆಸರೇ ಹುಡುಗಿ. ಸುಮ್ಮನೇ ಈ ಹೆಸರಿನೊಂದಿಗೆ ಹಾಸ್ಯ ಶುರುವಾದರೆ ಏನೆಲ್ಲಾ ಅವಾಂತರ ಆಗಬಹುದು.ಬರೆದರೆ ಅದು ಪ್ರವಾಸಕಥನದ ಬದಲು ಪೋಲಿ ಲಲಿತಪ್ರಬಂಧವಾಗಿಬಿಡುತ್ತದೇನೋ. ತರಲೆಯನ್ನು ಓದುಗರೇ ಮುಂದುವರಿಸಲಿ ಎಂದು ಇಲ್ಲಿಗೆ ಪೂರ್ಣವಿರಾಮವನ್ನಿಡುತ್ತೇನೆ.