• ಸಂಜೀವ್ ಪಿ ಪಿ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಬೇಕು ಎಂದರೆ ಪಾಸ್​ಪೋರ್ಟ್ ಬಹುಮುಖ್ಯ. ಹಾಗಂತ ಈ ಪಾಸ್​ಪೋರ್ಟ್​ಗಳಿಗೆ ವೋಟಿಂಗ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ರೀತಿ ಜೀವನ ಪರ್ಯಂತ ವ್ಯಾಲಿಡಿಟಿ ಇರೋದಿಲ್ಲ. 10 ವರ್ಷಗಳಿಗೆ ಪಾಸ್​ಪೋರ್ಟ್ ಎಕ್ಸ್​ಪೈರ್ ಆಗಿ ಬಿಡುತ್ತದೆ. ಆಗ ನೀವು ಬೇರೆ ಪಾಸ್​ಪೋರ್ಟ್ ತೆಗೆದುಕೊಳ್ಳಲೇಬೇಕು. ಅಷ್ಟೇ ಅಲ್ಲ, ಪಾಸ್​ಪೋರ್ಟ್ ಪೇಜ್​ಗಳು ಖಾಲಿ ಆದರೂ ನೀವು ಹೊಸ ಪಾಸ್​ಪೋರ್ಟ್ ಪಡೆಯಬೇಕು.

ಮೊದಲೆಲ್ಲ ಪಾಸ್​ಪೋರ್ಟ್ ನವೀಕರಿಸೋದು ಎಂದರೆ ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಈಗ ಆನ್​ಲೈನ್ ಮೂಲಕ ನೀವು ಹೊಸ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಇದಕ್ಕೆ ಪೊಲೀಸ್ ವೆರಿಫಿಕೇಷನ್ ಕೂಡ ಬೇಕಾಗುತ್ತದೆ. ಹಾಗಾದರೆ ಪಾಸ್​ಪೋರ್ಟ್ ನವೀಕರಣಕ್ಕೆ ಏನು ಮಾಡಬೇಕು? ಯಾವೆಲ್ಲ ದಾಖಲೆ ಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅರ್ಜಿ ಸಲ್ಲಿಸಿ

ಅಧಿಕೃತ ಪಾಸ್​ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಒಂದೊಮ್ಮೆ ನೀವು ಹೊಸ ಬಳಕೆದಾರರಾಗಿದ್ದರೆ New User Registration ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಖಾತೆಯನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಈಗಾಗಲೇ ನೀವು ಖಾತೆ ಹೊಂದಿದ್ದರೆ ಅದರ ಮೂಲಕ ಲಾಗಿನ್ ಆಗಬೇಕು.

ಪಾಸ್​ಪೋರ್ಟ್ ರಿನಿವಲ್ ಅಪ್ಲಿಕೇಷನ್ ವಿಭಾಗಕ್ಕೆ ತೆರಳಿ ‘ರೀ ಇಶ್ಯೂ ಆಫ್ ಪಾಸ್​ಪೋರ್ಟ್’ ಪೇಜ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪಾಸ್​ಪೋರ್ಟ್ ರಿನೀವಲ್​ಗೆ ಕಾರಣ ನೀಡಬೇಕು. ಪಾಸ್​ಪೋರ್ಟ್ ದಿನಾಂಕ ಮುಗಿದಿದ್ದರೆ, ಪೇಜ್ ಖಾಲಿ ಆಗಿದ್ದರೆ ಅಥವಾ ನಿಮ್ಮ ಮಾಹಿತಿ ಬದಲಾಯಿಸುವ ಉದ್ದೇಶದಿಂದ ಹೊಸ ಪಾಸ್​ಪೋರ್ಟ್ ಪಡೆಯಬಹುದು. ಅಪ್ಲಿಕೇಶನ್ ಸಲ್ಲಿಕೆ ಮಾಡುವ ಮೊದಲು ನಿಮ್ಮ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.

passport

ನೀವು ಪಾಸ್​ಪೋರ್ಟ್ ರಿನೀವಲ್​ಗೆ ಹಣವನ್ನು ಕೂಡ ಪಾವತಿಸಬೇಕು. ನೆಟ್ ಬ್ಯಾಂಕಿಂಗ್, ಕಾರ್ಡ್, ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ. ಆ ಬಳಿಕ ನಿಮ್ಮ ಅಪಾಯಿಂಟ್​ಮೆಂಟ್ ಫಿಕ್ಸ್ ಮಾಡಿಕೊಳ್ಳಿ. ನಿಮಗೆ ಹೊಂದಿಕೆ ಆಗುವ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ. ಆ ಬಳಿಕ ನಿಮ್ಮ ಅಪಾಯಿಂಟ್​ಮೆಂಟ್ ದಾಖಲೆಯನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಿ.

ನಂತರ ನಿಮ್ಮ ಪಾಸ್​ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಈ ವೇಳೆ ನಿಮ್ಮ ಒರಿಜಿನಲ್ ದಾಖಲೆಗಳನ್ನು ತೆಗೆದುಕೊಂಡ ಹೋಗಬೇಕು. ಅಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಪೊಲೀಸ್ ವೆರಿಫಿಕೇಶನ್

ನೀವು ಪಾಸ್​ಪೋರ್ಟ್ ರಿನೀವಲ್ ಮಾಡಿಸುವಾಗ ಎಲ್ಲಾ ಸಮಯದಲ್ಲೂ ಪೊಲೀಸ್ ವೆರಿಫಿಕೇಶನ್ ಬೇಕಾಗುವುದಿಲ್ಲ. ಆದರೆ, ನಿಮ್ಮ ಪಾಸ್​ಪೋರ್ಟ್ ಅವಧಿ ಪೂರ್ಣಗೊಂಡು ಮೂರು ವರ್ಷಗಳ ಮೇಲಾಗಿದ್ದರೆ ಅಥವಾ ನಿಮ್ಮ ಈಗಿನ ವಿಳಾಸ ಬದಲಾಗಿದ್ದರೆ ಪೊಲೀಸ್ ವೆರಿಫಿಕೇಶನ್​ ಅಗತ್ಯ ಇರುತ್ತದೆ. ಆಗ ಅವರು ನಿಮ್ಮ ಮನೆಗೆ ಭೇಟಿ ನೀಡಿ ವೆರಿಫಿಕೇಶನ್ ಮಾಡುತ್ತಾರೆ. ಆ ಬಳಿಕ ನಿಮ್ಮ ವಿಳಾಸಕ್ಕೆ ಪಾಸ್​ಪೋರ್ಟ್ ಬರಲಿದೆ.

ಯಾವೆಲ್ಲ ದಾಖಲೆ ಬೇಕು?

ಹಳೆಯ ಪಾಸ್​ಪೋರ್ಟ್ ಕಡ್ಡಾಯವಾಗಿ ಬೇಕೇ ಬೇಕು. ಮೊದಲ ಮತ್ತು ಕೊನೆಯ ಎರಡು ಪುಟಗಳ ಸ್ವಯಂ-ದೃಢೀಕರಿಸಿದ ಪ್ರತಿಗಳು. ವಿಳಾಸಕ್ಕೆ (ಆಧಾರ್ ಕಾರ್ಡ್, ವೋಟಿಂಗ್ ಐಡಿ, ವಾಟರ್ ಬಿಲ್ ಅಥವಾ ಫೋನ್ ಬಿಲ್) ಒಂದು ದಾಖಲೆ ಬೇಕು.

ನಿಮ್ಮ ಜನ್ಮ ದಿನಾಂಕ ಖಚಿತಪಡಿಸಲು ಬರ್ತ್​ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್ ಅಥವಾ ಆಧಾರ ಕಾರ್ಡ್ ಬೇಕು.

ಬೆಲೆ ಎಷ್ಟು?

ಪಾಸ್​ಪೋರ್ಟ್ ರಿನೀವಲ್​ಗೆ 36 ಪೇಜ್​ನ ಪಾಸ್​​ಬುಕ್​ಗೆ 1500 ರೂಪಾಯಿ, 60 ಪೇಜ್​ಗಳ ಪಾಸ್​​ಬುಕ್​ಗೆ 2000 ರೂಪಾಯಿ ಹಣ ಪಾವತಿಸಬೇಕು. ತತ್ಕಾಲ್​ ಅಡಿಯಲ್ಲಿ ಹೊಸ ಪಾಸ್​ಪೋರ್ಟ್ ಪಡೆಯಲು 36 ಪೇಜ್​ಗಳ ಪಾಸ್​ಬುಕ್​ಗೆ 3500 ರೂಪಾಯಿ, 60 ಪೇಜ್​ಗಳ ಪಾಸ್​ಪೋರ್ಟ್​ಗೆ 4 ಸಾವಿರ ರೂಪಾಯಿ ಬೇಕು.

ಈ ತಪ್ಪು ಮಾಡದಿರಿ

ನಿಮ್ಮ ಅಪ್ಲಿಕೇಶನ್​ನಲ್ಲಿ ಹೆಸರು, ದಿನಾಂಕ ಹಾಗೂ ಅಡ್ರೆಸ್ ಬರೆಯುವಾಗ ತಪ್ಪು ಮಾಡದಿರಿ. ಡ್ಯಾಕ್ಯುಮೆಂಟ್ ಮಿಸ್ ಮಾಡಬೇಡಿ. ಎಲ್ಲಾ ದಾಖಲೆಗಳು ಜೆರಾಕ್ಸ್ ಕೂಡ ನಿಮ್ಮ ಕೈಯಲ್ಲಿ ಇರಲಿ.