ಕೃತಿಯ ಹೆಸರು: ಬೊಂಬಾಟ್ ಜಪಾನಿನಲ್ಲಿ ಹತ್ತು ದಿನ

ಲೇಖಕರು: ಡಿ ವಿ ಪ್ರಹ್ಲಾದ್
ಪುಟಗಳು: 60

ಬೆಲೆ: 80 ರು

ಪ್ರಕಾಶನ: ಸಮನ್ವಿತ

ಹತ್ತೇ ಹತ್ತು ದಿನದ ಮಟ್ಟಿಗೆ ಜಪಾನ್ ಗೆ ಹೋಗಿಬಂದು, ಜಪಾನ್ ಬಗ್ಗೆ ಒಂದು ಪುಸ್ತಕ ಬರೆದುಬಿಡಬಹುದಾ? ಯಾಕೆ ಬರೆಯಲಾಗುವುದಿಲ್ಲ ಅನ್ನುತ್ತಾರೆ ಲೇಖಕ ಡಿ ವಿ ಪ್ರಹ್ಲಾದ್. ಹತ್ತು ದಿನಗಳಲ್ಲಿ ತಮಗೆ ದಕ್ಕಿದ್ದಷ್ಟನ್ನು, ತಮಗೆ ಸಿಕ್ಕಿದ್ದಷ್ಟನ್ನು ಬರೆದು ಓದುಗರಿಗೆ ಹಂಚುವುದರಲ್ಲಿ ತಪ್ಪೇನಿದೆ? ಬರಹ ಗೊತ್ತಿದ್ದಾಗ, ಯಾವುದೇ ವಸ್ತುವನ್ನು ನೋಡುವ ಒಳನೋಟಗಳು, ವಿಶೇಷ ಕಣ್ಣುಗಳು ಇದ್ದಾಗ ಎಷ್ಟು ದಿನ ಇದ್ದೆವು, ಎಷ್ಟು ಸ್ಥಳಗಳನ್ನು ಕವರ್ ಮಾಡಿದೆವು ಎಂಬುದು ಮುಖ್ಯವಾಗುವುದಿಲ್ಲ. ನೋಡಿದ್ದರಲ್ಲಿ ಏನೇನೆಲ್ಲ ಸಿಕ್ಕಿತು ಎಂಬುದು ಗಣ್ಯವಾಗುತ್ತದೆ.

ಇದನ್ನೂ ಓದಿ: ಮೂರು ಭೂಖಂಡಗಳು,ಇಪ್ಪತ್ಮೂರು ದೇಶಗಳನ್ನು ಸುತ್ತಿಸುವ ಕಥನ

ಮಗಳ ಸ್ನಾತಕೋತ್ತರ ಪದವಿಪ್ರದಾನದ ಸಂಭ್ರಮವನ್ನು ನೋಡಲೆಂದು ಜಪಾನ್ ಗೆ ಹೋದ ಪ್ರಹ್ಲಾದ್ ರವರು ಆ ಹತ್ತು ದಿನಗಳಲ್ಲಿ ತಾವು ನೋಡಿದ ಜಪಾನನ್ನು ಓದುಗರೆದುರು ಬೊಂಬಾಟಾಗಿ ಚಿತ್ರಿಸಿಕೊಟ್ಟಿದ್ದಾರೆ. ಸಮನ್ವಿತ ಪ್ರಕಾಶನದ ಮೂಲಕ ಪ್ರಕಟವಾಗಿರುವ ಈ ಪುಸ್ತಕದ ಹೆಸರು ಬೊಂಬಾಟ್ ಜಪಾನಿನಲ್ಲಿ ಹತ್ತು ದಿನ. ಇದು ಜಪಾನಿನ ಮ್ಯಾಪ್ ಅಲ್ಲ, ಜಪಾನ್ ಹೋಗುವವರಿಗೆ ಕೈಪಿಡಿ ಅಲ್ಲ, ಮಾರ್ಗದರ್ಶಿಯೂ ಅಲ್ಲ. ವೈಯಕ್ತಿಕ ಅನುಭವದ ಗುಚ್ಛ. ತಮಗೆ ಕಂಡಂತೆ ಬೇರೆಯವರಿಗೂ ಕಾಣಬೇಕು ಎಂಬ ಹಟವಾಗಲೀ, ಜಪಾನ್ ಅಂದರೆ ಹೀಗೆ ಎಂಬ ಜಡ್ಜ್ ಮೆಂಟ್ ಆಗಲೀ ಪುಸ್ತಕದಲ್ಲಿ ಇಲ್ಲ. ಹಿರಿಯ ಭಾರತೀಯರೊಬ್ಬರು ತಾವು ಅನಿರೀಕ್ಷಿತವಾಗಿ ಮಾಡಿದ ಜಪಾನ್ ಪ್ರವಾಸದ ಅನುಭವವನ್ನು ಪ್ರಬಂಧದ ರೂಪದಲ್ಲಿ ದಾಖಲಿಸಲು ಬರೆಯಕೂತಾಗ ಅದು ಹಿಗ್ಗಿ ಪುಸ್ತಕವಾಗಿದೆ. ಹಾಗೆ ಆಗಿದ್ದು ಒಳ್ಳೆಯದೇ ಆಗಿದೆ. ಪುಸ್ತಕವನ್ನೇ ಬರೆಯಲು ಹೊರಟಿದ್ದರೆ ಅದು ಬೇರೆ ಚೌಕಟ್ಟು ಪಡೆದುಕೊಳ್ಳುತ್ತಿತ್ತು. ಇದು ಚೌಕಟ್ಟು ಮೀರಿ ಪುಸ್ತಕವಾಗಿರುವುದರಿಂದ ತಾನಾಗಿ ಅರಳಿದ ಹೂವಿನಂತಾಗಿದೆ.

ಕೇವಲ ಅರವತ್ತು ಪುಟದ ಈ ಪುಸ್ತಕದ ತೂಕ ಹೆಚ್ಚಿಸಿರುವುದು ಸುಚಿತ್ರಾ ಹೆಗಡೆಯವರ ಮುನ್ನುಡಿ. ಪ್ರವಾಸ ಬರಹಗಳನ್ನು ಬರೆಯುವುದೆಂದರೆ ವರದಿ ಮತ್ತು ಹಗಲುಗನಸುಗಳ ನಡುವಿನ ಒಂದು ಇಕ್ಕಟ್ಟಾದ ಹಾದಿ. ವಸ್ತುನಿಷ್ಠತೆ ಮತ್ತು ಕಾಲ್ಪನಿಕತೆಯ ಹದವಾದ ಮಿಶ್ರಣ ಎಂಬ ಚೆಂದದ ವ್ಯಾಖ್ಯಾನ ನೀಡಿರುವ ಸುಚಿತ್ರಾ ಹೆಗಡೆಯವರು, ಪ್ರವಾಸದ ಅಂತಸ್ಸತ್ವ ಇರುವುದು ನೋಟದ ಹಸಿವಿನಲ್ಲಿ ಹಾಗೂ ಜಗತ್ತಿಗೆ ಸಾರುವ ಹಂಬಲದಲ್ಲಿ ಎನ್ನುವ ಮೂಲಕ ಪ್ರವಾಸಕಥನ ಬರೆಯುವವರಿಗೆ ಕಿವಿಮಾತು ಹೇಳುತ್ತಾರೆ. ಮುನ್ನುಡಿಯಲ್ಲಿ ಬರೆದಿರುವ ಅವರ ಒಂದೊಂದು ಮಾತುಗಳೂ ವಾಸ್ತವ. ಪ್ರವಾಸ ಬರಹಗಳು ಕಾಲ ಮತ್ತು ನೆನಪುಗಳ ಘರ್ಷಣೆ. ಪ್ರವಾಸ ಮುಗಿದ ಮೇಲೆ ನೆನಪಿನ ಗಾಳ ಹಾಕಿ ಕಾಲದ ಕ್ಷಣಗಳನ್ನು ಹಿಡಿಯುವ ಪ್ರಕ್ರಿಯೆ! ಎಂಥ ಸುಂದರ ಮಾತುಗಳು ನೋಡಿ.

Untitled design (54)

ಡಿ ವಿ ಪ್ರಹ್ಲಾದ್ ರವರು ಅನುಭವಿ ಬರಹಗಾರರೇ ಆದರೂ, ಜಪಾನನ್ನು ನೋಡಿ ಬರೆಯಲು ಕೂತಾಗ, ಅವರು ತಮ್ಮೊಳಗಿನ ಅಚ್ಚರಿ, ಮುಗ್ಧತೆ ಎಲ್ಲವನ್ನೂ ಜಾಗೃತಗೊಳಿಸಿಕೊಂಡು ಬರೆಯುತ್ತಾ ಹೋಗಿದ್ದಾರೆ. ತಮಗೆಲ್ಲಾ ಗೊತ್ತು ಅಂತಲೋ, ತಾವು ಪ್ರತಿಯೊಂದನ್ನೂ ವಿಮರ್ಶಾತ್ಮಕವಾಗಿಯೇ ನೋಡಬೇಕೆಂಬ ಹಟದಿಂದಲೇ ಈ ಕಥನವನ್ನು ಬರೆದಿಲ್ಲ. ಹಾಗಂತ ಕಂಡಿದ್ದನ್ನೆಲ್ಲ ವಾಹ್ ವಾಹ್ ಅಂತ ಹೊಗಳುತ್ತಾ ಅದರೊಂದಿಗೆ ಭಾರತವನ್ನು ಕಂಪೇರ್ ಮಾಡಿ ತೆಗಳುತ್ತಲೂ ಕುಳಿತಿಲ್ಲ. ಕೆಲವೆಡೆ ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದಾರೆಂಬಷ್ಟರ ಮಟ್ಟಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸುವ ಪ್ರಹ್ಲಾದ್, ಕೆಲವು ಕಡೆ ಬಹಳ ತಣ್ಣಗಿನ ಶೈಲಿಯಲ್ಲಿ ಜಪಾನ್ ಬಗೆಗಿನ ಅತಿರಂಜಿತ ಕತೆಗಳನ್ನು ಹೊಡೆದುಹಾಕುತ್ತಾರೆ.

ಜಗತ್ತಿಗೆಲ್ಲ ವಿಧವಿಧದ ಟೂವೀಲರ್ ಕೊಡುವ ಜಪಾನ್ ತಾನು ಮಾತ್ರ ಸೈಕಲ್ ಬಳಸುತ್ತದೆ ಎನ್ನುವ ಸಾಲಿನ ಜತೆಯಲ್ಲಿ ಮಾಮಾ ಪೋ ಎಂಬ ವಿಶೇಷ ಸೈಕಲ್ ಪರಿಚಯಿಸುವ ಪ್ರಹ್ಲಾದ್, ಇಂಥ ಸಣ್ಣಪುಟ್ಟ ಸಂಗತಿಗಳನ್ನು ಹೇಳುವ ಮೂಲಕ ಇತರರಿಗಿಂತ ಭಿನ್ನವಾದ ಜಪಾನ್ ತೋರಿಸುತ್ತಾರೆ. ಜಪಾನಿನ ಜಪಾನಿನ ಊರುಗಳಲ್ಲಿ ಸಂಜೆ ಐದಕ್ಕೆ ಸರಿಯಾಗಿ ಮೊಳಗುವ ಆಲ್ ಈಸ್ ವೆಲ್ ಅರ್ಥ ಕೊಡುವ ಸಂಗೀತದ ತುಣುಕು, ಯೂಷಿನ್ ಗಾರ್ಡನ್ ನ ಪ್ಲಸ್ಸು ಮೈನಸ್ಸುಗಳು, ಹಿರೋಷಿಮಾದ ಅರಮನೆ, ಗಾಂಧಿ ಮತ್ತು ಸಿ ವಿ ರಾಮನ್ ಪ್ರತಿಮೆಗಳನ್ನು ನೋಡುತ್ತಾ ಬಂದ ಆಲೋಚನೆಗಳು, ಬುಲೆಟ್ ಟ್ರೇನ್ ನ ಪ್ರಯಾಣ, ಯುದ್ಧಸ್ಮಾರಕದ ಅನುಭವ ಎಲ್ಲವನ್ನೂ ವೈಯಕ್ತಿಕ ಅನುಭವದಂತೆ ಹೇಳಿಯೂ ಸಾರ್ವತ್ರಿಕವಾಗಿ ವಿಷಯವನ್ನು ದಾಟಿಸಿರುವುದು ಬರಹದ ಶೈಲಿಯ ಶಕ್ತಿ. ಸರಿಯಾದ ಗ್ರಹಿಕೆ ಇದ್ದರೆ, ರುಚಿಕಟ್ಟಾಗಿ ಬರೆಯಲು ಬರುವುದಾದರೆ ಶಾರ್ಟ್ ಟ್ರಿಪ್ಪನ್ನು ಕೂಡ ಒಂದು ಪುಸ್ತಕವನ್ನಾಗಿಸಬಹುದು ಎಂಬುದಕ್ಕೆ ಈ ಪುಸ್ತಕ ಒಂದು ಉದಾಹರಣೆ.