Monday, August 24, 2026
Monday, August 24, 2026

ಆಲ್ಟಿಟ್ಯೂಡ್ ಸಿಕ್‌ನೆಸ್!

ಕೊನೆಗೆ ಗೂಗಲ್ ಮೊರೆ ಹೊಕ್ಕು, ಆಮ್ಲಜನಕದ ಶುದ್ಧತ್ವ ಮಟ್ಟ ಚೆಕ್ ಮಾಡಿದಾಗ 77%. ತಕ್ಷಣವೇ ಆಸ್ಪತ್ರೆಗೆ ಹೋಗಿ ಎಂದು ಇಂಟರ್‌ನೆಟ್ ಹೇಳಿದಾಗ, ಮೈಯಲ್ಲಿ ಆಗುತಿದ್ದ ಹಿಂಸೆ ತಾಳಲಾಗದೆ, ಲೇಹ್ ನಗರದ ಎಸ್‌ಎನ್‌ಎಂ ಆಸ್ಪತ್ರೆಗೆ ಹೋದೆವು. ಅಲ್ಲಿ ಡಾಕ್ಟರ್ ರೂಮಿನ ಹೊರಗೆ ನಮ್ಮಂತೆ ಬಂದಿರುವ ಜನರ ಕ್ಯೂ. ಹೆಚ್ಚೂಕಮ್ಮಿ ಎಲ್ಲರದ್ದೂ ಇದೇ ಸಮಸ್ಯೆ. ನಮ್ಮ ಸರದಿ ಬಂದಾಗ ಆಮ್ಲಜನಕದ ಮಟ್ಟ ಮತ್ತಷ್ಟು ಕುಸಿದಿತ್ತು!

  • ಸಹನಾ ಪ್ರಸಾದ್‌

ನಾವು ಕಳೆದ ವಾರ ಲೇಹ್- ಲಡಾಖ್ ಸುತ್ತಾಟಕ್ಕೆ ಹೋಗಿದ್ದೆವು. ಕಾರ್ಗಿಲ್ ನಗರದಿಂದ ಲೇಹ್ ನಗರದವರೆಗೆ ಟೆಂಪೋ ಟ್ರಾವೆಲರ್ ಗಾಡಿಯಲ್ಲಿ ಹೋದಾಗ, ಹಲವರಿಗೆ ತಲೆ ಸುತ್ತು, ವಾಂತಿ. ಸುಮಾರು 215 ಕಿಮೀ ಅಂಕು ಡೊಂಕಿನ ರಸ್ತೆ. ಕಾರ್ಗಿಲ್‌ನಿಂದ ಹೊರಟಾಗ ಅರಳಿದ ಮಲ್ಲಿಗೆಯಂತೆ ಫ್ರೆಶ್ ಆಗಿದ್ದ ಜನರು ಬಾಡಿ, ಬಸವಳಿದು, ಸುಸ್ತಾಗಿ ಒಣಗಿದ್ದರು. ಪ್ರಯಾಣದಲ್ಲಿ ಮತ್ತೆ ಮತ್ತೆ ವಾಂತಿಯಾಗಬಹುದೆಂಬ ಭಯದಲ್ಲಿ, ತಿನ್ನುವುದು, ನೀರು ಕುಡಿಯುವುದು ಸಹ ಬಂದ್.

ಇದನ್ನೂ ಓದಿ: ಮುಂಡಾ ಪಹಾಡ್‌ ಬೀಚ್

ಲೇಹ್ ತಲುಪಿದ ಮಾರನೆಯ ದಿನದಿಂದ ಸುಸ್ತು, ಸಂಕಟ. ಹೇಗೋ ನಿಭಾಯಿಸಿ, ಲೇಹ್ ಮತ್ತು ಸುತ್ತಮುತ್ತಲಿನ ಜಾಗಗಳಿಗೆ ಭೇಟಿನೀಡಿ, ಮಧ್ಯಾಹ್ನ ಊಟಕ್ಕೆ ಹೊಟೇಲಿಗೆ ಬಂದರೆ ತೀವ್ರ ಆಯಾಸ. ಮಾತನಾಡಲು ಆಗದಷ್ಟು ದಣಿವು. ಮಲಗಿ ಎದ್ದರೂ ಬಾರದ ಲವಲವಿಕೆ, ಮಂಪರು. ಕೊನೆಗೆ ಗೂಗಲ್ ಮೊರೆ ಹೊಕ್ಕು, ಆಮ್ಲಜನಕದ ಶುದ್ಧತ್ವ ಮಟ್ಟ ಚೆಕ್ ಮಾಡಿದಾಗ 77%. ತಕ್ಷಣವೇ ಆಸ್ಪತ್ರೆಗೆ ಹೋಗಿ ಎಂದು ಇಂಟರ್‌ನೆಟ್ ಹೇಳಿದಾಗ, ಮೈಯಲ್ಲಿ ಆಗುತಿದ್ದ ಹಿಂಸೆ ತಾಳಲಾಗದೆ, ಲೇಹ್ ನಗರದ ಎಸ್‌ಎನ್‌ಎಂ ಆಸ್ಪತ್ರೆಗೆ ಹೋದೆವು. ಅಲ್ಲಿ ಡಾಕ್ಟರ್ ರೂಮಿನ ಹೊರಗೆ ನಮ್ಮಂತೆ ಬಂದಿರುವ ಜನರ ಕ್ಯೂ. ಹೆಚ್ಚೂಕಮ್ಮಿ ಎಲ್ಲರದ್ದೂ ಇದೇ ಸಮಸ್ಯೆ. ನಮ್ಮ ಸರದಿ ಬಂದಾಗ ಆಮ್ಲಜನಕದ ಮಟ್ಟ ಮತ್ತಷ್ಟು ಕುಸಿದಿತ್ತು. ಇಂದು ರೆಸ್ಟ್ ಮಾಡಬೇಕಿತ್ತು. ಸುತ್ತಲು ಹೋಗಬಾರದಿತ್ತು ಎಂದು ಹೇಳಿದ ಡಾಕ್ಟರ್, ಆಮ್ಲಜನಕ ತೆಗೆದುಕೊಳ್ಳಲು ಬರೆದುಕೊಟ್ಟರು. ಆಗ ಸಮಯ ರಾತ್ರಿ 11:30. ಸುಮಾರು ಹೊತ್ತು ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಕುಳಿತರೂ, ಆಮ್ಲಜನಕದ ಮಟ್ಟ ಏರಲಿಲ್ಲ. ಅಡ್ಮಿಟ್ ಮಾಡಿಕೊಂಡು, ವಾರ್ಡ್‌ಗೆ ಶಿಫ್ಟ್ ಮಾಡಿದರು. ಬೆಳಗ್ಗೆ 2:30ರ ಹೊತ್ತಿಗೂ ಆಸ್ಪತ್ರೆಯಲ್ಲಿ ಜನ ನೆರೆದಿದ್ದರು. ಅದರಲ್ಲಿ 90% ಪ್ರವಾಸಿಗರು. ಎಲ್ಲರಿಗೂ ಆಮ್ಲಜನಕದ ಕೊರತೆ, ಕೆಲವರಿಗೆ ಹೆಚ್ಚಿದ ರಕ್ತದೊತ್ತಡ. ನರ್ಸ್, ಡಾಕ್ಟರ್‌ಗಳಿಗೆ ಒಂದೇ ಸಮನೆ ಕೆಲಸ.

Untitled design (11)

ಅದು ಸರಕಾರಿ ಆಸ್ಪತ್ರೆ. ಸುಸಜ್ಜಿತವಾಗಿತ್ತು. ಪ್ರೈವೇಟ್ ವಾರ್ಡ್ ಇರಲಿಲ್ಲ. ಬೇರೆ ಏನೂ ತೊಂದರೆ ಇಲ್ಲದೆ ಇದ್ದಿದ್ದರಿಂದ ಬೆಳಗ್ಗಿನ ಹೊತ್ತಿಗೆ ಆಮ್ಲಜನಕದ ಮಟ್ಟ ಏರಿತ್ತು. ಲಡಾಕಿ ರೊಟ್ಟಿ ಹಾಗೂ ಹಾಲು ಬಂತು. ಅದನ್ನು ತಿಂದು ಡಾಕ್ಟರ್ ಬರುವಿಕೆಗಾಗಿ ಮಾಸ್ಕ್ ಹಾಕಿಕೊಂಡು ಕಾಯುತ್ತಿದ್ದೆವು. ಸುಮಾರು 11:30ರ ಹೊತ್ತಿಗೆ ಡಿಸ್ಚಾರ್ಜ್ ಮಾಡಿದರು. ನಮ್ಮ ಆಸ್ಪತ್ರೆಗಳಂತೆ ಡಿಸ್ಚಾರ್ಜ್ ಕಾರ್ಯದಲ್ಲಿ ಇಡೀ ದಿವಸ ಹಾಳಾಗದೆ, ಒಂದೆರಡು ನಿಮಿಷದಲ್ಲಿಯೇ ಹೊರಬಂದೆವು. ಜೀವನದಲ್ಲಿ ಆಲ್ಟಿಟ್ಯೂಡ್ ಸಿಕ್‌ನೆಸ್ ಅನುಭವಿಸಿದ್ದು ಇದೇ ಮೊದಲು.

ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿನ ಪರ್ವತ ಪ್ರದೇಶಗಳಿಗೆ ಅಥವಾ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವುದು ಹಲವರ ಕನಸು. ಆದರೆ, ಇಂಥ ಎತ್ತರದ ಪ್ರದೇಶಗಳಿಗೆ ಹೋದಾಗ ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆಲ್ಟಿಟ್ಯೂಡ್ ಸಿಕ್‌ನೆಸ್ ಎಂದರೆ ಹೆಚ್ಚಿನ ಎತ್ತರದಲ್ಲಿ ಅಕ್ಸಿಜನ್‌ನ ಕೊರತೆಯಿಂದ ಉಂಟಾಗುವ ಒಂದು ಆರೋಗ್ಯ ಸಮಸ್ಯೆ.

ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 8,000 ಅಡಿಗಳಿಗಿಂತ (2,400 ಮೀಟರ್) ಹೆಚ್ಚು ಎತ್ತರವಿರುವ ಪ್ರದೇಶಗಳಿಗೆ ಹೋದಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಟ್ರೆಕ್ಕಿಂಗ್ ಮಾಡುವವರು ಮತ್ತು ಹಿಮಾಲಯದಂಥ ಎತ್ತರದ ಪ್ರದೇಶಗಳಿಗೆ ಭೇಟಿನೀಡುವ ಪ್ರವಾಸಿಗರು ಈ ಬಗ್ಗೆ ಜಾಗೃತರಾಗಿರಬೇಕು.

ನಾವು ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದಲ್ಲಿ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಆಮ್ಲಜನಕದ ಪ್ರಮಾಣವೂ ಕುಸಿಯುತ್ತದೆ. ನಮ್ಮ ದೇಹ ಈ ಹಠಾತ್ ಬದಲಾವಣೆಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗದಿದ್ದಾಗ ಕಾಣಿಸಿಕೊಳ್ಳುವ ದೈಹಿಕ ತೊಂದರೆಗಳನ್ನೇ ಆಲ್ಟಿಟ್ಯೂಡ್ ಸಿಕ್‌ನೆಸ್ ಎನ್ನಲಾಗುತ್ತದೆ.

Untitled design (13)

ಪ್ರಮುಖ ಲಕ್ಷಣಗಳು

ಆಲ್ಟಿಟ್ಯೂಡ್ ಸಿಕ್‌ನೆಸ್ನ ಲಕ್ಷಣಗಳು ಸಾಮಾನ್ಯವಾಗಿ ಆ ಪ್ರದೇಶಕ್ಕೆ ತಲುಪಿದ ಕೆಲವು ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ತೀವ್ರತೆಯ ಆಧಾರದ ಮೇಲೆ ಲಕ್ಷಣಗಳನ್ನು ಹೀಗೆ ವರ್ಗೀಕರಿಸಬಹುದು:

ಸಾಮಾನ್ಯ ಲಕ್ಷಣಗಳು: ತಲೆನೋವು, ತಲೆಸುತ್ತು, ಆಯಾಸ ಮತ್ತು ನಿಶ್ಶಕ್ತಿ.

ಜೀರ್ಣಕ್ರಿಯೆಯ ತೊಂದರೆ: ವಾಕರಿಕೆ, ವಾಂತಿ ಮತ್ತು ಹಸಿವಾಗದಿರುವುದು.

ನಿದ್ರಾಹೀನತೆ: ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು.

ಉಸಿರಾಟದ ತೊಂದರೆ: ನಡೆಯುವಾಗ ಅಥವಾ ವಿಶ್ರಾಂತಿ ಪಡೆಯುವಾಗಲೂ ಉಸಿರಾಟದ ವೇಗ ಹೆಚ್ಚಾಗುವುದು.

ಆಲ್ಟಿಟ್ಯೂಡ್ ಸಿಕ್‌ನೆಸ್‌ನ ಮುಖ್ಯ ವಿಧಗಳು

ಅಕ್ಯೂಟ್ ಮೌಂಟೇನ್ ಸಿಕ್‌ನೆಸ್ (AMS): ಇದು ಅತ್ಯಂತ ಸಾಮಾನ್ಯ ಮತ್ತು ಸೌಮ್ಯ ರೂಪವಾಗಿದೆ. ಹ್ಯಾಂಗೋವರ್ ಥರದ ಅನುಭವ ನೀಡುತ್ತದೆ.

ಹೈ ಆಲ್ಟಿಟ್ಯೂಡ್ ಪಲ್ಮನರಿ ಎಡಿಮಾ (HAPE): ಇದು ತೀವ್ರವಾದ ಸ್ಥಿತಿಯಾಗಿದ್ದು, ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗುತ್ತದೆ. ಜೀವಕ್ಕೆ ಅಪಾಯಕಾರಿಯಾಗಬಹುದು.

ಹೈ ಆಲ್ಟಿಟ್ಯೂಡ್ ಸೆರೆಬ್ರಲ್ ಎಡಿಮಾ (HACE): ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಮೆದುಳಿನಲ್ಲಿ ದ್ರವ ಸಂಗ್ರಹವಾಗಿ ಊತ ಉಂಟಾಗುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು

ನಿಧಾನವಾಗಿ ಎತ್ತರಕ್ಕೆ ಸಾಗಿ: ಒಂದೇ ದಿನದಲ್ಲಿ ಅತಿ ಎತ್ತರದ ಪ್ರದೇಶವನ್ನು ತಲುಪಬೇಡಿ. ದೇಹವು ವಾತಾವರಣಕ್ಕೆ ಹೊಂದಿಕೊಳ್ಳಲು ದಿನಕ್ಕೆ 1,000 ಅಡಿಗಳಿಗಿಂತ ಹೆಚ್ಚು ಎತ್ತರ ಏರಬೇಡಿ.

ಹೆಚ್ಚು ನೀರು ಕುಡಿಯಿರಿ: ಎತ್ತರದ ಪ್ರದೇಶಗಳಲ್ಲಿ ದೇಹವು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಮತ್ತು ಎಲೆಕ್ಟ್ರೋಲೈಟ್ ದ್ರವಗಳನ್ನು ಕುಡಿಯಿರಿ.

ಮದ್ಯಪಾನ ಮತ್ತು ಧೂಮಪಾನ ಬೇಡ: ಪ್ರಯಾಣದ ಸಮಯದಲ್ಲಿ ಮತ್ತು ಅದಕ್ಕೂ ಮುನ್ನ ಮದ್ಯ ಹಾಗೂ ಧೂಮಪಾನದಿಂದ ದೂರವಿರಿ. ಇವು ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ಹೆಚ್ಚಿಸುತ್ತವೆ.

ಕಾರ್ಬೋಹೈಡ್ರೇಟ್ ಭರಿತ ಆಹಾರ ಸೇವಿಸಿ: ದೇಹಕ್ಕೆ ಶಕ್ತಿ ನೀಡಲು ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಸೇವಿಸಿ.

ಔಷಧಿಗಳ ಬಳಕೆ: ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಮುಂಜಾಗ್ರತೆಯಾಗಿ ತೆಗೆದುಕೊಳ್ಳಿ.

ತೊಂದರೆಯಾದಾಗ ಏನು ಮಾಡಬೇಕು?

ಪ್ರಯಾಣದ ಸಮಯದಲ್ಲಿ ನಿಮಗೆ ಅಥವಾ ಸಹಪ್ರಯಾಣಿಕರಿಗೆ ತೀವ್ರ ತಲೆನೋವು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ತಕ್ಷಣವೇ ಕೆಳಗಿನ ಪ್ರದೇಶಗಳಿಗೆ ಮರಳುವುದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗ. ಅಗತ್ಯವಿದ್ದರೆ ತಕ್ಷಣವೇ ವೈದ್ಯಕೀಯ ಆಮ್ಲಜನಕದ ಸಹಾಯ ಪಡೆಯಬೇಕು.

ಪ್ರಯಾಣದ ಕಿಟ್‌ನಲ್ಲಿರಲಿ ಈ ವಸ್ತುಗಳಿರಲಿ

ಎತ್ತರದ ಪ್ರದೇಶಗಳಿಗೆ ಪ್ರಯಾಣ ಬೆಳೆಸುವಾಗ ಕೇವಲ ಬಟ್ಟೆ- ಬರೆಗಳಷ್ಟೇ ಅಲ್ಲದೆ, ತುರ್ತು ಆರೋಗ್ಯ ರಕ್ಷಣೆಗೆ ಬೇಕಾದ ಕೆಲವು ಪ್ರಮುಖ ವಸ್ತುಗಳನ್ನು ನಿಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಮುಖ್ಯ.

Untitled design (12)

ಪೋರ್ಟಬಲ್ ಆಕ್ಸಿಜನ್ ಕ್ಯಾನ್‌ಗಳು: ಇತ್ತೀಚಿನ ದಿನಗಳಲ್ಲಿ ಸಣ್ಣ ಗಾತ್ರದ, ಸುಲಭವಾಗಿ ಸಾಗಿಸಬಹುದಾದ ಆಕ್ಸಿಜನ್ ಕ್ಯಾನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಉಸಿರಾಟದ ತೊಂದರೆ ಆರಂಭವಾದ ತಕ್ಷಣ ಇವು ಪ್ರಾಥಮಿಕ ಚಿಕಿತ್ಸೆಯಾಗಿ ನೆರವಾಗುತ್ತವೆ.

ಪಲ್ಸ್ ಆಕ್ಸಿಮೀಟರ್: ನಿಮ್ಮ ದೇಹದ ಆಮ್ಲಜನಕದ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಲು ಇದು ಅತ್ಯಗತ್ಯ. ಆಮ್ಲಜನಕದ ಮಟ್ಟ 80ಕ್ಕಿಂತ ಕಡಿಮೆಯಾದರೆ ತಕ್ಷಣ ಜಾಗೃತರಾಗಬಹುದು.

ಗ್ಲುಕೋಸ್ ಮತ್ತು ಎನರ್ಜಿ ಬಾರ್‌ಗಳು: ಹಠಾತ್ ನಿಶ್ಶಕ್ತಿ ಎದುರಾದಾಗ ದೇಹಕ್ಕೆ ತಕ್ಷಣದ ಶಕ್ತಿ ನೀಡಲು ಇವು ಸಹಕಾರಿಯಾಗುತ್ತವೆ.

ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಆಸ್ವಾದಿಸುವುದು ಎಷ್ಟು ರೋಚಕವೋ, ನಮ್ಮ ದೇಹದ ಮಿತಿಗಳನ್ನು ಅರಿತು ಅದನ್ನು ಗೌರವಿಸುವುದೂ ಅಷ್ಟೇ ಮುಖ್ಯ. ಲೇಹ್- ಲಡಾಖ್‌ನಂಥ ತಾಣಗಳು ನಮ್ಮ ಮನಸಿಗೆ ಆನಂದ ನೀಡಿದರೂ, ಅಲ್ಲಿನ ಹವಾಮಾನ ಕಠಿಣವಾಗಿರುತ್ತದೆ. ಆಲ್ಟಿಟ್ಯೂಡ್ ಸಿಕ್‌ನೆಸ್ ಬಗ್ಗೆ ಮುಂಚಿತವಾಗಿಯೇ ಅರಿವು ಹೊಂದುವುದು ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಪ್ರವಾಸದ ಖುಷಿಯನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಿ ಸವಿಯಬಹುದು. ಸುರಕ್ಷಿತವಾಗಿ ಪ್ರಯಾಣಿಸಿ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!