ಅಜ್ಜಿಯ ಮನೆಯಲ್ಲಿದ್ದ ಚರ್ಮದ ತುಣುಕಿನ ಮೂಲ ಹುಡುಕಿ ಹೊರಟಾಗ ಕಂಡಿದ್ದೇನು?
ಪಟಗೋನಿಯಾದಲ್ಲಿ ಮೆಗೆಲಾನಿಕ್ ಪೆಂಗ್ವಿನ್‌ಗಳ ಬೃಹತ್ ಸಮೂಹವಿದೆ. ಮನುಷ್ಯರಿಗಿಂತ ಪೆಂಗ್ವಿನ್‌ಗಳ ಸಂಖ್ಯೆಯೇ ಇಲ್ಲಿ ಹೆಚ್ಚು. ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತ ಹಿಮನದಿಗಳು ಕರಗುತ್ತಿದ್ದರೆ, ಇಲ್ಲಿನ ‘ಪೆರಿಟೋ ಮೊರೆನೊ’ ಹಿಮನದಿಯು ಇಂದಿಗೂ ಬೆಳೆಯುತ್ತಿದೆ. ಪಟಗೋನಿಯನ್ ಮರುಭೂಮಿಯು ಅರ್ಜೆಂಟೀನಾದ ಅತಿದೊಡ್ಡ ಮರುಭೂಮಿ. ಬ್ರಿಟನ್ ನ ವೇಲ್ಸ್ ದೇಶದ ಹೊರಗೆ ಅತ್ಯಂತ ಹೆಚ್ಚು ವೇಲ್ಸ್ ಭಾಷೆ ಮಾತನಾಡುವ ಜನರಿರುವ ಪ್ರದೇಶವಿದು. 1865ರಲ್ಲಿ ಇಲ್ಲಿಗೆ ವಲಸೆ ಬಂದವರು ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ.
ಬ್ರಿಟಿಷ್ ಲೇಖಕ ಮತ್ತು ಪ್ರವಾಸಿಗ ಬ್ರೂಸ್ ಚಾಟ್ವಿನ್ (1940–1989) ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಶಾಲಿ ಇಂಗ್ಲಿಷ್ ಬರಹಗಾರರಲ್ಲಿ ಒಬ್ಬ. ಆತ ತನ್ನ ವಿಶಿಷ್ಟ ಶೈಲಿಯ ಪ್ರವಾಸ ಕಥನಗಳು ಮತ್ತು ಕಾದಂಬರಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದವ. ಇವನ ಬರಹಗಳು ಕೇವಲ ಪ್ರವಾಸದ ವಿವರಗಳಾಗಿರದೇ, ಮಾನವನ ಅಲೆಮಾರಿ ಸ್ವಭಾವ, ಇತಿಹಾಸ ಮತ್ತು ತತ್ತ್ವಶಾಸ್ತ್ರದ ಮಿಶ್ರಣವಾಗಿರುವುದು ವಿಶೇಷ.
ನಾನು ಕೆಲ ವರ್ಷಗಳ ಹಿಂದೆ, ಆತ ಬರೆದ ದಿ ಸಾಂಗ್‌ಲೈನ್ಸ್ (The Songlines) ಕೃತಿಯನ್ನು ಓದಿದ್ದೆ. ಅದು ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ಅವರು ಭೂಮಿಯನ್ನು ಹಾಡುಗಳ ಮೂಲಕ ಹೇಗೆ ಗುರುತಿಸುತ್ತಾರೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಆತನ ವಿಶಿಷ್ಟ ಶೈಲಿ ಮತ್ತು ಹುಡುಕಾಟದಿಂದ ಚಾಟ್ವಿನ್ ಇಷ್ಟವಾದ. ನಂತರ ಆತನ ಮೊದಲ ಕೃತಿ ಮತ್ತು ಅತ್ಯಂತ ಜನಪ್ರಿಯ ಕೃತಿ ‘ಇನ್ ಪಟಗೋನಿಯಾ’ (In Patagonia) ಓದಲೇಬೇಕು ಎನಿಸಿತು. ಅರ್ಜೆಂಟೀನಾದ ಪಟಗೋನಿಯಾ ಪ್ರದೇಶಕ್ಕೆ ಅವನು ಕೈಗೊಂಡ ಪ್ರಯಾಣದ ಸಣ್ಣ ಕಥೆಗಳ ಸಂಕಲನವಿದು. ಇದು ಆಧುನಿಕ ಪ್ರವಾಸ ಸಾಹಿತ್ಯದ ದಿಕ್ಕನ್ನೇ ಬದಲಿಸಿತು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದಿಂದ ಭಾರತ ಕಲಿಯಬಹುದಾದ ಪಾಠಗಳೇನು?
ಚಾಟ್ವಿನ್ ಬರವಣಿಗೆ ಅತ್ಯಂತ ಸಂಕ್ಷಿಪ್ತ, ಸ್ಪಷ್ಟ ಮತ್ತು ಚಿತ್ರಾತ್ಮಕ. ಸುಳ್ಳು ಮತ್ತು ಸತ್ಯದ ನಡುವಿನ ಗೆರೆಯನ್ನು ಅಳಿಸಿ, ಕಾಲ್ಪನಿಕ ಸಂಗತಿಗಳನ್ನು ನೈಜ ಘಟನೆಗಳೊಂದಿಗೆ ಬೆರೆಸಿ ಬರೆಯುವಲ್ಲಿ ನಿಸ್ಸೀಮ. ಆತ ತನ್ನ 48ನೆಯ ವಯಸ್ಸಿನಲ್ಲಿ ನಿಧನನಾದ. ಅಲ್ಪಕಾಲ ಬದುಕಿದ್ದರೂ, ತನ್ನ ಕೃತಿಗಳ ಮೂಲಕ ಇಂದಿಗೂ ಅನೇಕ ಯುವ ಬರಹಗಾರರಿಗೆ ಮತ್ತು ಪ್ರವಾಸಿಗರಿಗೆ ಸ್ಫೂರ್ತಿಯಾಗಿದ್ದಾನೆ.
ಚಾಟ್ವಿನ್ ಲಂಡನ್‌ನ ‘ಸಂಡೇ ಟೈಮ್ಸ್’ ಪತ್ರಿಕೆಯಲ್ಲಿ ವರದಿಗಾರನಾಗಿದ್ದ. ಒಮ್ಮೆ ಆತ ಪ್ಯಾರಿಸ್‌ನಲ್ಲಿ 93 ವರ್ಷದ ವಿನ್ಯಾಸಕಿ ಐಲೀನ್ ಗ್ರೇ ಸಂದರ್ಶನ ಮಾಡುತ್ತಿದ್ದಾಗ, ಅವರ ಮನೆಯಲ್ಲಿದ್ದ ಪಟಗೋನಿಯಾದ ನಕ್ಷೆಯನ್ನು ನೋಡಿ ಆಕರ್ಷಿತರಾದ. ಆತನಿಗೆ ಏನನಿಸಿತೋ ಏನೋ, ಕೂಡಲೇ ತನ್ನ ಸಂಪಾದಕರಿಗೆ ‘ಪಟಗೋನಿಯಾಕ್ಕೆ ಹೋಗುತ್ತಿದ್ದೇನೆ’ ಎಂದು ಟೆಲಿಗ್ರಾಮ್ ಕಳುಹಿಸಿ ಕೆಲಸಕ್ಕೆ ರಾಜೀನಾಮೆ ನೀಡಿ, ಒಂದು ಹಳೇ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟೇ ಬಿಟ್ಟ!

ಅವನ ಈ ಪ್ರಯಾಣದ ಹಿಂದೆ ಒಂದು ವೈಯಕ್ತಿಕ ಕುತೂಹಲವೂ ಇತ್ತು. ಅವನ ಅಜ್ಜಿಯ ಮನೆಯಲ್ಲಿದ್ದ ಒಂದು ಸಣ್ಣ ಚರ್ಮದ ತುಣುಕು ಅವನನ್ನು ಬಾಲ್ಯದಿಂದಲೂ ಕಾಡುತ್ತಿತ್ತು. ಆ ಮೂಲವನ್ನು ಹುಡುಕುತ್ತಾ ಆತ ಅರ್ಜೆಂಟೀನಾದ ದಕ್ಷಿಣ ತುದಿಯಾದ ಪಟಗೋನಿಯಾಕ್ಕೆ ತಲುಪಿದ.
ಪಟಗೋನಿಯಾ ಎನ್ನುವುದು ದಕ್ಷಿಣ ಅಮೆರಿಕ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ವಿಶಾಲವಾದ ಮತ್ತು ಸುಂದರವಾದ ಪ್ರದೇಶ. ಇದು ಅರ್ಜೆಂಟೀನಾ ಮತ್ತು ಚಿಲಿ ಎಂಬ ಎರಡು ದೇಶಗಳ ನಡುವೆ ಹಂಚಿಹೋಗಿದೆ.
ಪಟಗೋನಿಯಾವು ಅರ್ಜೆಂಟೀನಾ (ಸುಮಾರು ಶೇ.90ರಷ್ಟು) ಮತ್ತು ಚಿಲಿ (ಸುಮಾರು ಶೇ.10ರಷ್ಟು) ದೇಶಗಳಲ್ಲಿ ಹರಡಿಕೊಂಡಿದೆ. ಪಟಗೋನಿಯಾ ಎಂದರೆ ‘ದೊಡ್ಡ ಪಾದಗಳ ನಾಡು’ ಎಂದರ್ಥ. ಇಲ್ಲಿನ ಸ್ಥಳೀಯರು ದೊಡ್ಡ ಪಾದಗಳನ್ನು ಹೊಂದಿದ್ದಾರೆ ಎಂದು 1520ರಲ್ಲಿ ಮೊದಲ ಬಾರಿಗೆ ಪ್ರದಕ್ಷಿಣೆ ಹಾಕಿದ ಪೋರ್ಚುಗೀಸ್ ನಾವಿಕ ಮತ್ತು ಪರಿಶೋಧಕ ಫರ್ಡಿನ್ಯಾಂಡ್ ಮೆಗೆಲ್ಲನ್ ಭಾವಿಸಿದ್ದರಿಂದ ಈ ಹೆಸರು ಬಂದಿತು. ಮೆಗೆಲ್ಲನ್ ಇಲ್ಲಿ 12-13 ಅಡಿ ಎತ್ತರದ ದೈತ್ಯ ಮನುಷ್ಯರನ್ನು ಕಂಡಿದ್ದಾಗಿ ಬರೆದಿದ್ದಾನೆ. ಇಲ್ಲಿರುವ ‘ಉಶುವಾಯಾ’ ನಗರವನ್ನು ‘ವಿಶ್ವದ ಕಟ್ಟಕಡೆಯ ಪಟ್ಟಣ’ (End of the World) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಭೂಮಿಯ ಅತ್ಯಂತ ದಕ್ಷಿಣಕ್ಕಿರುವ ನಗರವಾಗಿದೆ. ವಿಶ್ವದ ಅತಿದೊಡ್ಡ ಡೈನೋಸಾರ್ ಆದ ‘ಟೈಟಾನೋಸಾರ್’ ನ ಪಳೆಯುಳಿಕೆಗಳು ಇಲ್ಲಿ ಪತ್ತೆಯಾಗಿವೆ. ಇದು ಸುಮಾರು 70 ಟನ್ ತೂಕವಿತ್ತು ಎನ್ನಲಾಗಿದೆ.
ಪಟಗೋನಿಯಾದಲ್ಲಿ ಮೆಗೆಲಾನಿಕ್ ಪೆಂಗ್ವಿನ್‌ಗಳ ಬೃಹತ್ ಸಮೂಹವಿದೆ. ಮನುಷ್ಯರಿಗಿಂತ ಪೆಂಗ್ವಿನ್‌ಗಳ ಸಂಖ್ಯೆಯೇ ಇಲ್ಲಿ ಹೆಚ್ಚು. ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತ ಹಿಮನದಿಗಳು ಕರಗುತ್ತಿದ್ದರೆ, ಇಲ್ಲಿನ ‘ಪೆರಿಟೋ ಮೊರೆನೊ’ ಹಿಮನದಿಯು ಇಂದಿಗೂ ಬೆಳೆಯುತ್ತಿದೆ. ಪಟಗೋನಿಯನ್ ಮರುಭೂಮಿಯು ಅರ್ಜೆಂಟೀನಾದ ಅತಿದೊಡ್ಡ ಮರುಭೂಮಿ. ಬ್ರಿಟನ್ ನ ವೇಲ್ಸ್ ದೇಶದ ಹೊರಗೆ ಅತ್ಯಂತ ಹೆಚ್ಚು ವೇಲ್ಸ್ ಭಾಷೆ ಮಾತನಾಡುವ ಜನರಿರುವ ಪ್ರದೇಶವಿದು. 1865ರಲ್ಲಿ ಇಲ್ಲಿಗೆ ವಲಸೆ ಬಂದವರು ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಇದು ಒಂದು ವಿಶಾಲವಾದ ಪ್ರದೇಶವಾಗಿದ್ದರೂ, ಇಲ್ಲಿನ ಜನಸಂಖ್ಯೆ ಬಹಳ ಕಡಿಮೆ. ಪ್ರತಿ ಚದರ ಕಿಮೀಗೆ ಕೇವಲ 1-2 ಜನರು ವಾಸಿಸುತ್ತಾರೆ. ಅಂಟಾರ್ಕ್ಟಿಕಾಕ್ಕೆ ಪ್ರಯಾಣಿಸುವ ಹೆಚ್ಚಿನ ಹಡಗುಗಳು ಪಟಗೋನಿಯಾದ ನಗರಗಳಿಂದಲೇ ಹೊರಡುತ್ತವೆ. ಇಲ್ಲಿನ ಹಿಮನದಿಗಳು ಜಗತ್ತಿನ ಮೂರನೆಯ ಅತಿದೊಡ್ಡ ಸಿಹಿನೀರಿನ ಮೂಲಗಳಾಗಿವೆ.
ಪಟಗೋನಿಯಾ ಅಂದರೆ ಅದು ಗಾಳಿಯ ಸಾಮ್ರಾಜ್ಯ. ಅಲ್ಲಿನ ಗಾಳಿ ಎಷ್ಟೊಂದು ಕ್ರೂರ ಮತ್ತು ವೇಗವಾಗಿರುತ್ತದೆ ಅಂದರೆ, ಮನುಷ್ಯನ ತಲೆಯಲ್ಲಿರುವ ಯೋಚನೆಗಳನ್ನೆಲ್ಲ ಹಾರಿ ಹೋಗುವಷ್ಟು. ಇಲ್ಲಿನ ಕೆಲವು ಮರಗಳು ಒಂದು ಕಡೆಗೆ ಬಾಗಿಯೇ ಬೆಳೆಯುತ್ತವೆ. ‘ನೋಥೋಫಾಗಸ್’ ಎನ್ನುವ ಮರಗಳು ಗಾಳಿಗೆ ಬಾಗಿ ಬಾಗಿ, ಯಾವುದೋ ಹಳೆಯ ಕಾಲದ ಋಷಿಗಳು ತಪಸ್ಸು ಮಾಡುತ್ತಾ ನಿಂತಿರುವಂತೆ ಭಾಸವಾಗುತ್ತದೆ. ಗಾಳಿಯ ಹೊಡೆತಕ್ಕೆ ಇವುಗಳ ಆಕಾರವೇ ವಿಚಿತ್ರವಾಗಿ ಬದಲಾಗಿರುತ್ತದೆ, ಅದಕ್ಕೆಂದೇ ಇವುಗಳನ್ನು 'ಗಾಳಿಯ ಮರಗಳು' ಎಂದೂ ಕರೆಯುತ್ತಾರೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಈ ಪ್ರದೇಶದಲ್ಲಿ, ಹವಾಮಾನವು ಒಂದು ಕ್ಷಣದಲ್ಲಿ ಬಿಸಿಲನ್ನು ಚೆಲ್ಲಿದರೆ, ಇನ್ನೊಂದು ಕ್ಷಣದಲ್ಲಿ ಮಂಜಿನ ಮುಸುಕನ್ನು ಹೊದಿಸಿಬಿಡುತ್ತದೆ. ಅಲ್ಲಿನ ಚಳಿಗಾಲವಂತೂ ದೀರ್ಘವಾದ ಮೌನದಂತೆ, ಎಲ್ಲವನ್ನೂ ಬಿಳಿ ಬಣ್ಣದ ಹೊದಿಕೆಯಿಂದ ಮುಚ್ಚಿಡುತ್ತದೆ.
ಅಲ್ಲಿನ ಬೆಟ್ಟಗಳ ನಡುವೆ ಅಡಗಿರುವ 'ಪೂಮಾ' (Puma) ಎನ್ನುವ ಬೆಕ್ಕಿನ ಜಾತಿಯ ಪ್ರಾಣಿ ಪಟಗೋನಿಯಾದ ನಿಜವಾದ ಅಧಿಪತಿ. ಇದು ಕಾಣಿಸಿಕೊಳ್ಳುವುದು ಅಪರೂಪ, ಆದರೆ ಅದರ ಇರುವಿಕೆ ಅಲ್ಲಿನ ಪ್ರತಿಯೊಂದು ಗಿಡಗಂಟಿಗಳಿಗೂ ಗೊತ್ತು. ಪೂಮಾದ ಆ ಗುಪ್ತವಾದ ಬದುಕು ಮತ್ತು ಅದರ ವೇಗವು ಪಟಗೋನಿಯಾದ ನಿಗೂಢತೆಗೆ ಒಂದು ಹೊಸ ಆಯಾಮವನ್ನು ನೀಡುತ್ತದೆ. ಇವುಗಳನ್ನು ಆ ಮಣ್ಣಿನ ಆತ್ಮಗಳೆಂದು ಸ್ಥಳೀಯರು ಭಾವಿಸಿದ್ದಾರೆ.
ಈ ಕೃತಿಯ ಹುಟ್ಟಿಗೆ ಕಾರಣವಾದದ್ದು ಅವನ ಬಾಲ್ಯದ ಒಂದು ಪುಟ್ಟ ನೆನಪು ಮತ್ತು ಅವನ ಅಜ್ಜಿಯ ಮನೆಯಲ್ಲಿದ್ದ ಒಂದು ವಿಚಿತ್ರ ಚರ್ಮದ ತುಣುಕು. ಚಾಟ್ವಿನ್ ಬ್ರಿಟನ್‌ನಲ್ಲಿ ಬೆಳೆಯುತ್ತಿದ್ದಾಗ, ಅವನ ಅಜ್ಜಿಯ ಮನೆಯ ಗಾಜಿನ ಕ್ಯಾಬಿನೆಟ್‌ನಲ್ಲಿ ಒಂದು ಪುಟ್ಟ ಚರ್ಮದ ತುಣುಕನ್ನು ಇಡಲಾಗಿತ್ತು. ಅದು ಕೆಂಪು ಬಣ್ಣದ ಒರಟಾದ ಕೂದಲುಗಳಿಂದ ಕೂಡಿತ್ತು. ಅವನ ಅಜ್ಜಿ ಹೇಳುತ್ತಿದ್ದ ಕಥೆಯ ಪ್ರಕಾರ, ಅವರ ಸಂಬಂಧಿಯೊಬ್ಬರು ದಕ್ಷಿಣ ಅಮೆರಿಕದ ಪಟಗೋನಿಯಾದಲ್ಲಿ ಹಡಗು ಮುಳುಗಿದ ನಂತರ ಅಲ್ಲಿನ ಗುಹೆಯೊಂದರಲ್ಲಿ ಈ ಚರ್ಮವನ್ನು ಪತ್ತೆಹಚ್ಚಿದ್ದರು. ಬಾಲ್ಯದ ಮುಗ್ಧತೆಯಲ್ಲಿ ಚಾಟ್ವಿನ್ ಇದು ಪ್ರಾಗೈತಿಹಾಸಿಕ ಕಾಲದ ದೈತ್ಯ ಪ್ರಾಣಿ ‘ಬ್ರಾಂಟೊಸಾರಸ್’ ಚರ್ಮವೆಂದು ಗಾಢವಾಗಿ ನಂಬಿದ್ದ.
ಒಂದು ದೈತ್ಯಾಕಾರದ ಪ್ರಾಣಿಯ ತುಣುಕು ತನ್ನ ಅಜ್ಜಿಯ ಮನೆಯಲ್ಲಿದೆ ಎಂಬ ಕಲ್ಪನೆಯೇ ಚಾಟ್ವಿನ್‌ನಲ್ಲಿ ಪಟಗೋನಿಯಾ ಎಂಬ ನಿಗೂಢ ಪ್ರಪಂಚದ ಬಗ್ಗೆ ಅಪಾರ ಕುತೂಹಲ ಮೂಡಿಸಿತ್ತು. ಆದರೆ, ಕಾಲಾನಂತರದಲ್ಲಿ ಆ ಚರ್ಮದ ತುಣುಕು ಕಳೆದುಹೋಯಿತು. ಕಳೆದುಹೋದ ಆ ತುಣುಕನ್ನು ಹುಡುಕುವ ಮತ್ತು ಅದರ ಸತ್ಯಾಸತ್ಯವನ್ನು ತಿಳಿಯುವ ಹಂಬಲ ಅವನ ಮನಸಿನಲ್ಲಿ ಆಳವಾಗಿ ಬೇರೂರಿತು. ಅವನ ಈ ಪ್ರಯಾಣದ ಮುಖ್ಯ ಉದ್ದೇಶ ಕೇವಲ ಪ್ರವಾಸ ಮಾಡುವುದಾಗಿರಲಿಲ್ಲ. ಬಾಲ್ಯದ ಆ 'ಬ್ರಾಂಟೊಸಾರಸ್' ಚರ್ಮದ ಮೂಲವನ್ನು ಹುಡುಕುವುದಾಗಿತ್ತು. ಪಟಗೋನಿಯಾಕ್ಕೆ ತಲುಪಿದ ಚಾಟ್ವಿನ್, ಅಲ್ಲಿನ ಒರಟಾದ ಭೂಪ್ರದೇಶ, ವಿಚಿತ್ರ ಗಾಳಿ ಮತ್ತು ಅಲ್ಲಿ ವಾಸಿಸುವ ಜನರ ಕಥೆಗಳನ್ನು ಸಂಗ್ರಹಿಸಲು ಆರಂಭಿಸಿದ. ಹೋದಲ್ಲೆಲ್ಲ ಆ ಕೆಂಪು ಕೂದಲಿನ ಚರ್ಮದ ಬಗ್ಗೆ ವಿಚಾರಿಸುತ್ತಿದ್ದ. ಕೊನೆಗೆ ಅವನಿಗೆ ತಿಳಿದ ಸತ್ಯವೇನೆಂದರೆ, ಅದು ಬ್ರಾಂಟೊಸಾರಸ್ ಎಂಬ ಡೈನೋಸಾರ್‌ನದ್ದಲ್ಲ, ಬದಲಿಗೆ ‘ಮೈಲೋಡಾನ್’ (Mylodon) ಎಂಬ ಅಳಿದುಹೋದ ದೈತ್ಯ ಸ್ಲೋತ್ (Giant Ground Sloth) ಪ್ರಾಣಿಯದ್ದಾಗಿತ್ತು.
ಈ ಮಹಾಪ್ರಯಾಣದಲ್ಲಿ ಚಾಟ್ವಿನ್ ಕೊನೆಗೂ ಚಾರ್ಲಿ ಮಿಲ್ವರ್ಡ್ ಎಂಬ ವಿಜ್ಞಾನಿ ಚರ್ಮದ ತುಣುಕನ್ನು ಪತ್ತೆಹಚ್ಚಿದ್ದ ಆ ಪ್ರಸಿದ್ಧ ಗುಹೆಯನ್ನು ತಲುಪಿದ. ಅಲ್ಲಿ ಅವನಿಗೆ ನಿಜವಾಗಿಯೂ ಅದೇ ರೀತಿಯ ಕೂದಲಿನ ಮತ್ತಷ್ಟು ತುಣುಕುಗಳು ದೊರೆತವು. ಅದು ಡೈನೋಸಾರ್ ಅಲ್ಲದಿದ್ದರೂ, ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ಅಪರೂಪದ ಪ್ರಾಣಿಯ ಅವಶೇಷವಾಗಿತ್ತು. ಈ ಪ್ರಾಣಿಯು ಸಾವಿರಾರು ವರ್ಷಗಳ ಹಿಂದೆ ಜೀವಿಸಿತ್ತು. ಆ ಗುಹೆಯ ವಿಶಿಷ್ಟ ವಾತಾವರಣ ಮತ್ತು ಒಣ ಹವೆಯಿಂದಾಗಿ ಆ ಪ್ರಾಣಿಯ ಚರ್ಮವು ಕೊಳೆಯದೆ ಹಾಗೆಯೇ ಉಳಿದುಕೊಂಡಿತ್ತು.
ಚಾಟ್ವಿನ್ ಕೊನೆಗೂ ಆ ಗುಹೆಯಲ್ಲಿ ಕೆಲವು ಕೂದಲುಗಳನ್ನು ಮತ್ತು ಸಣ್ಣ ಚರ್ಮದ ಎಳೆಗಳನ್ನು ಪತ್ತೆಹಚ್ಚುತ್ತಾನೆ. ಅದನ್ನು ಪ್ರೀತಿಯಿಂದ ಸಂಗ್ರಹಿಸಿ, ತನ್ನ ಬಾಲ್ಯದ ಆ ಕುತೂಹಲಕ್ಕೆ ಒಂದು ತಾರ್ಕಿಕ ಅಂತ್ಯ ನೀಡುತ್ತಾನೆ. ಈ ಮಿಲೋಡಾನ್ ಗವಿಯ ಪ್ರಸಂಗವು ನಮಗೆ ಕಲಿಸುವುದು ಏನೆಂದರೆ, ನಮ್ಮ ಪ್ರತಿಯೊಂದು ಪ್ರಯಾಣದ ಹಿಂದೆಯೂ ಒಂದು ಗುಪ್ತ ಉದ್ದೇಶವಿರುತ್ತದೆ. ಅದು ಹಳೆಯ ನೆನಪಾಗಿರಬಹುದು ಅಥವಾ ಕಳೆದುಹೋದ ಇತಿಹಾಸವಾಗಿರಬಹುದು. ಚಾಟ್ವಿನ್ ಈ ಕೃತಿ ಪ್ರವಾಸ ಸಾಹಿತ್ಯದಲ್ಲಿ ಯಾಕೆ ಇಷ್ಟೊಂದು ಶ್ರೇಷ್ಠವೆಂದರೆ, ಆತ ಕೇವಲ ಭೂಪಟದಲ್ಲಿ ಇಲ್ಲದ ಸ್ಥಳಗಳಿಗೆ ಹೋಗಿದ್ದನೆಂಬ ಕಾರಣಕ್ಕಲ್ಲ, ಬದಲಿಗೆ ಮನುಷ್ಯನ ಮನಸಿನ ಆಳದ ನೆನಪುಗಳ ಗುಹೆಗೂ ಇಳಿಯುತ್ತಾನೆ ಎಂಬ ಕಾರಣಕ್ಕೆ.

ಈ ಶೋಧವು ಚಾಟ್ವಿನ್‌ಗೆ ಕೇವಲ ಒಂದು ಚರ್ಮದ ತುಣುಕನ್ನು ಮಾತ್ರ ನೀಡಲಿಲ್ಲ, ಬದಲಿಗೆ ಜಗತ್ತಿಗೆ ಒಂದು ಶ್ರೇಷ್ಠ ಪುಸ್ತಕವನ್ನು ನೀಡಿತು. ಆತ ತನ್ನ ಪುಸ್ತಕದಲ್ಲಿ ಪಟಗೋನಿಯಾವನ್ನು ಕೇವಲ ಒಂದು ಭೌಗೋಳಿಕ ಪ್ರದೇಶವಾಗಿ ಚಿತ್ರಿಸದೇ, ಅದನ್ನು ದೇಶಭ್ರಷ್ಟರ, ಕನಸುಗಾರರ ಮತ್ತು ವಿಚಿತ್ರ ವ್ಯಕ್ತಿಗಳ ನೆಲೆಬೀಡಾಗಿ, ಭೂಮಿಯ ಮೇಲಿನ ಒಂದು ಅನೂಹ್ಯ, ನಿಗೂಢ ತಾಣವಾಗಿ ಕಟ್ಟಿಕೊಟ್ಟ. ಚಾಟ್ವಿನ್‌ನ ಈ ಪ್ರಯಾಣವು ನಮಗೆ ಏನನ್ನು ಕಲಿಸುತ್ತದೆ ಎಂದರೆ, ಬಾಲ್ಯದ ಪುಟ್ಟ ಕುತೂಹಲಗಳು ನಮ್ಮ ಬದುಕಿನ ದಾರಿಯನ್ನೇ ಬದಲಿಸಬಲ್ಲವು. ಅಜ್ಜಿಯ ಮನೆಯ ಗಾಜಿನ ಕಪಾಟಿನಲ್ಲಿದ್ದ ಆ ಸಣ್ಣ ವಸ್ತು, ಅವರನ್ನು ಸಾವಿರಾರು ಮೈಲುಗಳ ದೂರಕ್ಕೆ ಕರೆದೊಯ್ದು, ಇಂದಿಗೂ ಪ್ರವಾಸ ಸಾಹಿತ್ಯದಲ್ಲಿ ಅಮರರನ್ನಾಗಿ ಮಾಡಿದೆ.
ಈ ಕೃತಿಯಲ್ಲಿ ಬರುವ ಒರೆಲಿ-ಆಂಟೊಯಿನ್ ಎಂಬುವವನ ಕಥೆಯು ಚರಿತ್ರೆಯ ಕ್ರೂರ ಅಪಹಾಸ್ಯ ಮತ್ತು ಒಬ್ಬ ಮನುಷ್ಯನ ಅತಿಯಾದ ಮಹತ್ವಾಕಾಂಕ್ಷೆಯ ಪ್ರತಿರೂಪದಂತಿದೆ. ಇದನ್ನು ಚಾಟ್ವಿನ್ ಅವರು ಅತ್ಯಂತ ಮಾರ್ಮಿಕವಾಗಿ ಮತ್ತು ಲೇವಡಿಯ ಧಾಟಿಯಲ್ಲಿ ವಿವರಿಸಿದ್ದಾನೆ. ಒರೆಲಿ-ಆಂಟೊಯಿನ್ ಮೂಲತಃ ಫ್ರಾನ್ಸ್‌ನ ಒಬ್ಬ ಸಾಮಾನ್ಯ ವಕೀಲ. ಆದರೆ ಆತನ ತಲೆಯಲ್ಲಿ ಅತೀಂದ್ರಿಯ ಎನ್ನಿಸುವಂಥ ರಾಜಪ್ರಭುತ್ವದ ಕನಸುಗಳಿದ್ದವು. 1858ರಲ್ಲಿ ದಕ್ಷಿಣ ಅಮೆರಿಕಕ್ಕೆ ಬಂದ ಇವನು, ಅಲ್ಲಿನ ಸ್ಥಳೀಯ ‘ಮಾಪುಚೆ’ ಬುಡಕಟ್ಟು ಜನಾಂಗದವರು ಚಿಲಿ ಮತ್ತು ಅರ್ಜೆಂಟೀನಾ ಸರಕಾರಗಳ ವಿರುದ್ಧ ಹೋರಾಡುತ್ತಿರುವುದನ್ನು ಕಂಡ. ಆ ಜನರಿಗೆ ಒಬ್ಬ ಸಮರ್ಥ ನಾಯಕನ ಅಗತ್ಯವಿದೆ ಎಂದು ಭಾವಿಸಿದ ಆತ, ತಾನೇ ಅವರೆಲ್ಲರ ‘ರಾಜ’ ಎಂದು ಘೋಷಿಸಿಕೊಂಡ!
1860ರಲ್ಲಿ ಈತ ‘ ಕಿಂಗಡಮ್ ಆಫ್ ಅರೌಕಾನಿಯಾ-ಪಟಗೋನಿಯಾ’ ಎಂಬ ಕಾಲ್ಪನಿಕ ರಾಷ್ಟ್ರವನ್ನು ಸ್ಥಾಪಿಸಿದ. ಕೇವಲ ಘೋಷಣೆ ಮಾಡುವುದಷ್ಟೇ ಅಲ್ಲ, ಒಬ್ಬ ನಿಜವಾದ ರಾಜನಿಗೆ ಇರಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ತನ್ನದೇ ಆದ ಸಂವಿಧಾನವನ್ನು ಬರೆದು, ನೀಲಿ, ಬಿಳಿ ಹಾಗೂ ಹಸಿರು ಬಣ್ಣದ ಧ್ವಜವನ್ನು ವಿನ್ಯಾಸಗೊಳಿಸಿದ. ತನ್ನ ಸಾಮ್ರಾಜ್ಯಕ್ಕೆ ಪ್ರತ್ಯೇಕ ನಾಣ್ಯಗಳನ್ನು ಚಲಾವಣೆಗೆ ತರಲು ಪ್ರಯತ್ನಿಸಿದ ಮತ್ತು ದೇಶಭಕ್ತಿ ಗೀತೆಯನ್ನು ಸಿದ್ಧಪಡಿಸಿದ. ಆಶ್ಚರ್ಯವೆಂದರೆ, ಕೆಲವು ಸ್ಥಳೀಯ ನಾಯಕರು ಇವನನ್ನು ನಂಬಿ ಬೆಂಬಲ ನೀಡಿದರು. ಆದರೆ ಇವನ ಮುಖ್ಯ ಉದ್ದೇಶ ಫ್ರಾನ್ಸ್‌ನಿಂದ ಸೇನಾ ಸಹಾಯ ಪಡೆದು ಒಂದು ಬಲಿಷ್ಠ ರಾಷ್ಟ್ರ ಕಟ್ಟುವುದಾಗಿತ್ತು.
ಚಿಲಿ ಸರಕಾರ ಈತನನ್ನು ‘ಹುಚ್ಚ’ ಅಥವಾ ‘ರಾಜದ್ರೋಹಿ’ ಎಂದು ಪರಿಗಣಿಸಿ ಬಂಧಿಸಿತು. ಹಲವಾರು ಬಾರಿ ಜೈಲಿಗೆ ಹೋದರೂ, ಪ್ರತಿಬಾರಿಯೂ ಫ್ರಾನ್ಸ್‌ಗೆ ಗಡಿಪಾರಾದ ಮೇಲೆ ಮತ್ತೆ ಪಟಗೋನಿಯಾಕ್ಕೆ ಮರಳಿ ರಾಜನಾಗಲು ಪ್ರಯತ್ನಿಸುತ್ತಿದ್ದ. ಕೊನೆಗೆ 1878ರಲ್ಲಿ ಫ್ರಾನ್ಸ್‌ನಲ್ಲಿ ಅತ್ಯಂತ ಬಡತನದಲ್ಲಿ ಸತ್ತು ಹೋದ.
ಚಾಟ್ವಿನ್ ಈ ಪ್ರಸಂಗವನ್ನು ವಿವರಿಸುವಾಗ, ಒಬ್ಬ ಮನುಷ್ಯ ತನ್ನ ಕಲ್ಪನಾ ಲೋಕದಲ್ಲಿ ಹೇಗೆ ಬದುಕಬಲ್ಲ ಎಂಬುದನ್ನು ತೋರಿಸುತ್ತಾನೆ. ಪಟಗೋನಿಯಾ ಎನ್ನುವ ಭೂಭಾಗವು ಇಂಥ ‘ದುರಂತ ನಾಯಕ’ರಿಗೆ ಅಥವಾ ಸಮಾಜ ತಿರಸ್ಕರಿಸಿದವರಿಗೆ ನೆಚ್ಚಿನ ತಾಣವಾಗಿತ್ತು. ಇಂದಿಗೂ ಪ್ಯಾರಿಸ್‌ನಲ್ಲಿ ಈ ‘ರಾಜವಂಶ’ದ ಉತ್ತರಾಧಿಕಾರಿಗಳು ಇದ್ದಾರೆ. ಇವರು ಕೇವಲ ಹೆಸರಿಗೆ ರಾಜರಾಗಿರದೇ, ಆಳಿನ ಮೂಲ ನಿವಾಸಿಗಳಾದ ‘ಮಾಪುಚೆ’ ಜನರ ಹಕ್ಕುಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತಾರೆ. ವಿಶ್ವಸಂಸ್ಥೆಯಂಥ ವೇದಿಕೆಗಳಲ್ಲಿ ಮಾಪುಚೆ ಜನರ ಪರವಾಗಿ ವಾದ ಮಂಡಿಸುತ್ತಾರೆ. ಅವರು ಸಾಂಕೇತಿಕವಾಗಿ ಈ ಪದವಿಯನ್ನು ಉಳಿಸಿಕೊಂಡಿದ್ದಾರೆ ಎಂಬುದನ್ನು ಚಾಟ್ವಿನ್ ತಮಾಷೆಯಾಗಿ ಬಣ್ಣಿಸಿದ್ದಾನೆ.
ಜಗತ್ತಿನ ಯಾವುದೇ ರಾಷ್ಟ್ರವು ಇವರನ್ನು ಅಧಿಕೃತ ರಾಜರೆಂದು ಮಾನ್ಯ ಮಾಡಿಲ್ಲ. ಚಿಲಿ ಮತ್ತು ಅರ್ಜೆಂಟೀನಾ ಸರಕಾರಗಳು ಇವರನ್ನು ಕೇವಲ ಒಬ್ಬ ತಮಾಷೆಯ ವ್ಯಕ್ತಿಗಳೆಂದು ಅಥವಾ ‘ಫ್ಯಾಂಟಸಿ’ ಎಂದು ಪರಿಗಣಿಸುತ್ತವೆ. ಚಾಟ್ವಿನ್ ಕೂಡ ಇವರನ್ನು ಒಂದು ಹಳೆಯ ಕಾಲದ 'ಹುಚ್ಚಾಟ'ದ ನೆನಪು ಎಂದು ಬಣ್ಣಿಸಿದ್ದಾನೆ. ಆದರೂ, ಈ ವಾರಸುದಾರರು ತಮ್ಮ ಪೂರ್ವಜ ಒರೆಲಿ-ಆಂಟೊಯಿನ್ ಅವರ ಮೇಲಿದ್ದ ದೇಶದ್ರೋಹದ ಕಳಂಕವನ್ನು ತೊಡೆದುಹಾಕಲು ಇಂದಿಗೂ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಈ ಕೃತಿಯಲ್ಲಿ ವೇಲ್ಷ್ (Welsh) ವಲಸಿಗರ ಕುರಿತಾದ ವಿವರಣೆಗಳು ಅತ್ಯಂತ ಕುತೂಹಲಕಾರಿಯಾಗಿವೆ. ಅರ್ಜೆಂಟೀನಾದ ಅತಿ ಶೀತಲ ಮತ್ತು ಬಂಜರು ಭೂಮಿಯಲ್ಲಿ ಬ್ರಿಟಿಷ್ ದ್ವೀಪಗಳ ಒಂದು ಪುಟ್ಟ ಸಂಸ್ಕೃತಿ ಹೇಗೆ ಜೀವಂತವಾಗಿದೆ ಎಂಬುದನ್ನು ಚಾಟ್ವಿನ್ ಅದ್ಭುತವಾಗಿ ಚಿತ್ರಿಸಿದ್ದಾನೆ. 1865ರಲ್ಲಿ ಸುಮಾರು 150ಕ್ಕೂ ಹೆಚ್ಚು ವೇಲ್ಷ್ ಜನರು ‘ಮಿಮೋಸಾ’ ಎಂಬ ಹಡಗಿನಲ್ಲಿ ಕುಳಿತು ಪಟಗೋನಿಯಾದ ತೀರಕ್ಕೆ ಬಂದಿಳಿದರು. ಅವರ ಮುಖ್ಯ ಉದ್ದೇಶವೆಂದರೆ, ಬ್ರಿಟಿಷ್ ಸರಕಾರದ ಆಡಳಿತ ಮತ್ತು ಇಂಗ್ಲಿಷ್ ಭಾಷೆಯ ಒತ್ತಡದಿಂದ ದೂರವಾಗಿ, ತಮ್ಮದೇ ಆದ ವೇಲ್ಷ್ ಭಾಷೆ, ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಒಂದು ‘ಹೊಸ ವೇಲ್ಸ್’ ಅನ್ನು ಸೃಷ್ಟಿಸುವುದು. ಇದನ್ನು ಅವರು ‘ವೈಚ್ಲಾಡ್’ ಎಂದು ಕರೆದರು.
ಚಾಟ್ವಿನ್ ಭೇಟಿ ನೀಡಿದ ಗೈಮನ್ ಮತ್ತು ಟ್ರೆಲಿವ್ ಎಂಬ ಹಳ್ಳಿಗಳಲ್ಲಿ ಈ ವಲಸಿಗರ ಕಷ್ಟದ ಕಥೆಗಳು ತೆರೆದುಕೊಳ್ಳುತ್ತವೆ. ಪಟಗೋನಿಯಾದ ಮರುಭೂಮಿಯಂಥ ಪ್ರದೇಶದಲ್ಲಿ ಕೃಷಿ ಮಾಡುವುದು ಅಸಾಧ್ಯವಾಗಿತ್ತು. ಆದರೆ ವೇಲ್ಷ್ ವಲಸಿಗರು ‘ಚುಬುಟ್’ ನದಿಯಿಂದ ಕಾಲುವೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆ ಮಾಡಿದರು. ನೀರಿನ ಲಭ್ಯತೆ ಇಲ್ಲದ ಕಡೆಗಳಲ್ಲಿ ಹಠ ಹಿಡಿದು ಸೇಬು ಮತ್ತು ಗೋಧಿಯನ್ನು ಬೆಳೆಯಲು ಯಶಸ್ವಿಯಾದರು. ಇದನ್ನು ಕಂಡ ಚಾಟ್ವಿನ್, ಒಬ್ಬ ಮನುಷ್ಯ ತನ್ನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಕೃತಿಯ ವಿರುದ್ಧ ಎಂಥ ಹೋರಾಟ ಮಾಡಬಲ್ಲ ಎಂಬುದನ್ನು ಅದ್ಭುತವಾಗಿ ವಿವರಿಸಿದ್ದಾರೆ.
ಈ ಹಳ್ಳಿಗಳಲ್ಲಿ ಸಂಚರಿಸುವಾಗ ಚಾಟ್ವಿನ್‌ಗೆ ತಾನು ಅರ್ಜೆಂಟೀನಾದಲ್ಲಿದ್ದೇನೆ ಎನ್ನುವುದೇ ಮರೆತುಹೋಗುತ್ತದೆ. ಅಲ್ಲಿನ ಜನರು ಇಂದಿಗೂ 'ವೇಲ್ಷ್ ಟೀ ಹೌಸ್'ಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ನೀಡಲಾಗುವ ವಿಶಿಷ್ಟವಾದ ಕಪ್ಪು ಚಹಾ ಮತ್ತು ಮನೆಯಲ್ಲೇ ತಯಾರಿಸಿದ ಕೇಕ್ ಹಾಗೂ ಬ್ರೆಡ್‌ಗಳು ವೇಲ್ಸ್ ನೆನಪು ತರುತ್ತವೆ. ಇಲ್ಲಿನ ಚರ್ಚುಗಳು ಬ್ರಿಟಿಷ್ ಶೈಲಿಯಲ್ಲಿದ್ದು, ಇಂದಿಗೂ ಪ್ರಾರ್ಥನೆಗಳು ವೇಲ್ಷ್ ಭಾಷೆಯಲ್ಲೇ ನಡೆಯುತ್ತವೆ. ಸ್ಪ್ಯಾನಿಷ್ ಭಾಷೆ ಪ್ರಧಾನವಾಗಿರುವ ದೇಶದಲ್ಲಿ, ಇಂದಿಗೂ ಸಾವಿರಾರು ಜನರು ಪ್ರಾಚೀನ ವೇಲ್ಷ್ ಭಾಷೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುವ ಸಂಗತಿ. ಈ ವೇಲ್ಷ್ ವಲಸಿಗರು ಪಟಗೋನಿಯಾದ ‘ಜೀವಂತ ಪಳೆಯುಳಿಕೆ’ಗಳು. ಆಧುನಿಕ ಜಗತ್ತಿನಿಂದ ತುಂಡಾಗಿ ಹೋದ ಒಂದು ಪುಟ್ಟ ದ್ವೀಪದಂತೆ ಈ ಹಳ್ಳಿಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಈ ಪ್ರಸಂಗವು ನಮಗೆ ಪ್ರವಾಸದಲ್ಲಿ ಸ್ಥಳೀಯ ಸಂಸ್ಕೃತಿಗಳಿಗಿಂತಲೂ ಹೆಚ್ಚಾಗಿ, ವಲಸೆ ಹೋದ ಸಂಸ್ಕೃತಿಗಳು ಹೇಗೆ ರೂಪಾಂತರಗೊಳ್ಳುತ್ತವೆ ಎಂಬುದನ್ನು ಕಲಿಸುತ್ತದೆ.
ಚಾಟ್ವಿನ್ ಅವರ ಬರವಣಿಗೆಯು ‘ಮಿನಿಮಲಿಸ್ಟ್’ ಶೈಲಿಯಲ್ಲಿದೆ. ಅಂದರೆ, ಅತಿಯಾದ ವರ್ಣನೆಗಳಿಲ್ಲದೇ, ಅತ್ಯಂತ ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ಸ್ಫುರಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈ ಪುಸ್ತಕದಲ್ಲಿ 97 ಸಣ್ಣ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವೂ ಒಂದು ಸ್ವತಂತ್ರ ಕಥೆಯಂತೆ ಕಂಡರೂ, ಅಂತಿಮವಾಗಿ ಇಡೀ ಪುಸ್ತಕವು ಒಂದು ಸುಂದರ ಚಿತ್ರಪಟದಂತೆ ಭಾಸವಾಗುತ್ತದೆ. ಅನೇಕ ವಿಮರ್ಶಕರು ಈ ಪುಸ್ತಕವನ್ನು ಫಿಕ್ಷನ್’ (ಕಾಲ್ಪನಿಕ) ಮತ್ತು ‘ನಾನ್-ಫಿಕ್ಷನ್’ (ವಾಸ್ತವ) ನಡುವಿನ ಸೇತುವೆ ಎನ್ನುತ್ತಾರೆ. ಚಾಟ್ವಿನ್ ತಾನು ಕಂಡ ದೃಶ್ಯಗಳಿಗೆ ಸ್ವಲ್ಪ ನಾಟಕೀಯ ರೂಪ ನೀಡಿ ಓದುಗರನ್ನು ಮಂತ್ರಮುಗ್ಧಗೊಳಿಸುತ್ತಾನೆ.
ಚಾಟ್ವಿನ್ ನ ‘ಇನ್ ಪಟಗೋನಿಯಾ’ ಕೃತಿ ಕೇವಲ ಒಂದು ಪ್ರವಾಸದ ಡೈರಿಯಲ್ಲ. ಇದು ಮನುಷ್ಯನ ಒಳಗಿರುವ ಅಲೆಮಾರಿತನಕ್ಕೆ ಬರೆದ ಒಂದು ಸುದೀರ್ಘ ಕೈಫಿಯತ್ತು. ಪಟಗೋನಿಯಾದ ಆ ಬಂಜರು ಭೂಮಿಯಲ್ಲಿ ಚಾಟ್ವಿನ್ ಹುಡುಕುತ್ತಾ ಹೋಗುವುದು ಮನುಷ್ಯನ ನೆನಪುಗಳ ಆಳದಲ್ಲಿ ಹೂತುಹೋಗಿರುವ ವಿಚಿತ್ರ ಕಥೆಗಳನ್ನು. ಈ ಪುಸ್ತಕವನ್ನು ಓದುತ್ತಿದ್ದರೆ, ನಾವೂ ಅವನ ಜತೆಗೆ ಆ ಹಳೆಯ ಬ್ಯಾಗ್ ಬೆನ್ನಿಗೇರಿಸಿಕೊಂಡು ದಕ್ಷಿಣದ ತುದಿಗೆ ಹೊರಟೇಬಿಟ್ಟಿದ್ದೇವೆ ಅನ್ನಿಸುವಷ್ಟು ಆಪ್ತವಾದ ದೃಶ್ಯಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ.
ಪಟಗೋನಿಯಾದ ಹವಾಮಾನವು ಮನುಷ್ಯನಿಗೆ ಒಂದು ವಿಚಿತ್ರವಾದ ಏಕಾಂತವನ್ನು ಕಲಿಸಿಕೊಡುತ್ತದೆ. ಅಲ್ಲಿನ ಸಸ್ಯಗಳು ಕೂಡ ಗುಂಪು ಗುಂಪಾಗಿ ಬೆಳೆಯದೇ, ದೂರ ದೂರ ನಿಂತು ತಮ್ಮದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತವೆ. ಅಲ್ಲಿನ ಮಂಜುಗಡ್ಡೆಗಳ ಹತ್ತಿರ ಹೋದರೆ, ಅಲ್ಲಿನ ಚಳಿ ಉಸಿರಾಟವನ್ನೇ ಹೆಪ್ಪುಗಟ್ಟಿಸಬಲ್ಲದು. ಆದರೆ ಅಂಥ ಚಳಿಯಲ್ಲೂ ಅರಳುವ ಪುಟ್ಟ ಪುಟ್ಟ ಕಾಡುಹೂವುಗಳು ನಮಗೆ ಬದುಕಿನ ಜಿಗುಟುತನವನ್ನು ನೆನಪಿಸುತ್ತವೆ. ಪಟಗೋನಿಯಾ ನಮಗೆ ಹೇಳುವುದು ಇಷ್ಟೇ - ಬದುಕು ಅಂದರೆ ಕೇವಲ ಸೌಕರ್ಯವಲ್ಲ, ಅದು ಹೊಂದಾಣಿಕೆ. ಅಂಥ ಚಳಿಯಲ್ಲಿ, ಅಂಥ ಗಾಳಿಯಲ್ಲಿ ಈ ಪ್ರಾಣಿಗಳು ತಮ್ಮದೇ ಆದ ಲಯವನ್ನು ಕಂಡುಕೊಂಡಿವೆ. ಆ ಲಯವನ್ನು ನಾವು ಸುಮ್ಮನೆ ನಿಂತು ಗಮನಿಸಿದರೆ ಸಾಕು, ನಮಗೆ ನಮ್ಮೊಳಗಿನ ಗದ್ದಲಗಳೆಲ್ಲ ತಣ್ಣಗಾಗಿ ಒಂದು ಅಪೂರ್ವ ಶಾಂತಿ ದಕ್ಕುತ್ತದೆ.
ಇದನ್ನೂ ಓದಿ: ಚಾಪ್‌ಮ್ಯಾನ್ಸ್ ಪೀಕ್ ಡ್ರೈವ್: ರಸ್ತೆಯೇ ಒಂದು ಅನನ್ಯ ಪ್ರೇಕ್ಷಣೀಯ ಸ್ಥಳ!
1977 ರಲ್ಲಿ ಈ ಪುಸ್ತಕ ಪ್ರಕಟವಾದಾಗ ಇಡೀ ಜಗತ್ತು ಬೆರಗಾಗಿತ್ತು. ಯಾಕೆಂದರೆ ಪ್ರವಾಸ ಅಂದರೆ ಕೇವಲ ನೋಡಿದ್ದನ್ನು ಬರೆಯುವುದಲ್ಲ, ಅದು ಅಧ್ಯಾತ್ಮ ಮತ್ತು ಕಲ್ಪನೆಯ ಸಮ್ಮಿಲನ ಎಂದು ಚಾಟ್ವಿನ್ ಸಾಬೀತುಪಡಿಸಿದ್ದ. ಪಟಗೋನಿಯಾದ ಮಂಜಿನ ನಡುವೆ ಆತ ಹುಡುಕಿದ ಆ ಚರ್ಮದ ತುಣುಕು ಅಥವಾ ಬಚ್ ಕ್ಯಾಸಿಡಿಯಂಥ ದರೋಡೆಕೋರರ ನೆನಪುಗಳು - ಎಲ್ಲವೂ ಒಂದು ಜೇಡರ ಬಲೆಯಂತೆ ಒಂದಕ್ಕೊಂದು ಬೆಸೆದುಕೊಂಡಿವೆ. ಈ ಪುಸ್ತಕ ಓದಿದ ಮೇಲೆ ನಮಗೆ ಪಟಗೋನಿಯಾ ಎಂಬುದು ಒಂದು ಮ್ಯಾಪ್‌ನಲ್ಲಿರುವ ಜಾಗವಾಗಿ ಉಳಿಯದೇ, ನಮ್ಮ ಮನಸ್ಸಿನ ಒಳಗಿನ ಒಂದು ನಿಗೂಢ ಪ್ರಾಂತ್ಯವಾಗಿಬಿಡುತ್ತದೆ.
ವಿಶ್ವ ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಪ್ರವಾಸ ಕಥನಗಳಲ್ಲಿ ಒಂದು ಎಂದು ಪರಿಗಣಿಸಲಾದ ‘ಇನ್ ಪಟಗೋನಿಯಾ’ ಚಾಟ್ವಿನ್ ಎಂಬ ಅಲೆಮಾರಿಯ ಆತ್ಮದ ಕನ್ನಡಿ. ಅಲ್ಲಿ ಆತ ಹುಡುಕಿದ್ದು ಕೇವಲ ಪಟಗೋನಿಯಾವನ್ನಲ್ಲ, ತನ್ನನ್ನೇ ತಾನು. ನಾವೂ ಅಷ್ಟೇ, ಈ ಪುಸ್ತಕವನ್ನು ಓದಿ ಮುಗಿಸಿದಾಗ ನಮ್ಮ ರೂಮಿನ ನಾಲ್ಕು ಗೋಡೆಗಳ ಮಧ್ಯೆಯೂ ನಮಗೆ ಪಟಗೋನಿಯಾದ ಆ ತಂಪು ಗಾಳಿ ಸೋಕಿದಂತಾಗುತ್ತದೆ. ಚಾಟ್ವಿನ್ ಮಾತುಗಳಲ್ಲಿ ಹೇಳುವುದಾದರೆ, ‘ಪ್ರಯಾಣ ಅಂದರೆ ಕೇವಲ ದೂರ ಹೋಗುವುದಲ್ಲ, ಅದು ನಮ್ಮೊಳಗಿನ ಆಳಕ್ಕೆ ಇಳಿಯುವುದು.’
ಲಂಡನ್‌ನ ಸುಸಂಸ್ಕೃತ ಬದುಕನ್ನು ಬಿಟ್ಟು, ಕೇವಲ ತನ್ನ ಅಜ್ಜಿಯ ಮನೆಯಲ್ಲಿದ್ದ ಒಂದು ಪುಟ್ಟ ಚರ್ಮದ ತುಣುಕಿನ ರಹಸ್ಯವನ್ನು ಹುಡುಕುತ್ತಾ ಹೊರಟ ಚಾಟ್ವಿನ್, ನಮಗೆ ಜೀವನದ ದೊಡ್ಡ ಸತ್ಯಗಳನ್ನು ಅತ್ಯಂತ ಸರಳವಾಗಿ ದಾಟಿಸುತ್ತಾನೆ. ಪ್ರವಾಸ ಸಾಹಿತ್ಯ ಅಂದರೆ ಬರಿ ತಲುಪಬೇಕಾದ ಜಾಗದ ಬಗ್ಗೆ ಇರುವುದಿಲ್ಲ, ಬದಲಾಗಿ ಆ ದಾರಿಯಲ್ಲಿ ಕಳೆದುಹೋಗುವ ಬಗ್ಗೆ ಇರುತ್ತದೆ ಎಂದು ಚಾಟ್ವಿನ್ ನಮಗೆ ಕಲಿಸಿಕೊಡುತ್ತಾನೆ.