ಕ್ಯಾಮೆರಾದ ಮೂಲ ವಿಧಗಳ ಬಗ್ಗೆ ಗೊತ್ತಾ?
ಸಿಲ್ವರ್ ಕ್ಲೋರೈಡ್ ಲೇಪನವಿರುವ, ತಾಮ್ರದ ಪ್ಲೇಟ್ ಮೇಲೆ ಕ್ಯಾಮೆರಾದಲ್ಲಿ ಬೆಳಕನ್ನು ಹರಿಸಿ ಚಿತ್ರ ಮೂಡಿದ ನಂತರ ಪಾದರಸದ ಆವಿ ಹಾಗೂ ಉಪ್ಪಿನ ದ್ರಾವಣದಲ್ಲಿ ರಾಸಾಯನಿಕ ಕ್ರಿಯೆ ನೆಡೆಸಿ ಚಿತ್ರ ತಯಾರಿಸುತ್ತಾನೆ. ಈ ಪ್ರಯತ್ನ ಮೂಲ ಕ್ಯಾಮೆರಾದಲ್ಲಿ ಚಿತ್ರ ಮೂಡಿಸಲು ಬೇಕಿದ್ದ ಎಂಟು ಗಂಟೆ ಸಮಯವನ್ನು ಮೂವತ್ತು ನಿಮಿಷಕ್ಕೆ ಇಳಿಸಲು ಯಶಸ್ವಿಯಾಯಿತು. ಈ ಚಿತ್ರದ ಗುಣಮಟ್ಟವೂ ಅತ್ಯುನ್ನತವಾಗಿತ್ತು. ಆದರೆ ತಾಮ್ರದ ಪ್ಲೇಟಿನ ಮೇಲೆ ಮೂಡಿದ ಚಿತ್ರದ ನಕಲು ಪ್ರತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಕ್ಯಾಮೆರಾ ʻಡೆಗ್ಗೊರೆಟೈಪ್ ಕ್ಯಾಮೆರಾʼ ಎಂದು ಕರೆಯಲ್ಪಟ್ಟಿತು.
- ಅನಂತ್ ಹರಿತ್ಸ
ಇದು ಪ್ರವಾಸಿ ಕಾಲ. ಕಣ್ಮನಗಳಲ್ಲೂ ಪ್ರವಾಸಿ ತಾಣಗಳನ್ನು ತುಂಬಿಕೊಳ್ಳುವ ಕಾಲ. ಕ್ಯಾಮೆರಾ ಕಣ್ಣುಗಳಿಗೂ ಒಂದಷ್ಟು ಫೊಟೋಗಳು ತುಂಬಿಕೊಳ್ಳುತ್ತೇವೆ. ಅದಿಲ್ಲದ ಪ್ರವಾಸ ಮುಂದುವರಿದೀತೇ? ಈಗಂತೂ ಒಂದಕ್ಕಿಂತ ಒಂದು ಅದ್ಭುತ ಕ್ಯಾಮೆರಾದ ಮೊಬೈಲ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಕ್ಯಾಮೆರಾ ಛಾಯಾಗ್ರಹಣ ಲೋಕಕ್ಕೆ ಕಾಲಿಟ್ಟಾಗ ಇದ್ದ ವಿಧಗಳು ಯಾವುವು, ಅವುಗಳ ಕುರಿತು ನಿಮಗೆ ಗೊತ್ತಾ?
ಇದನ್ನೂ ಓದಿ:ಸ್ಮಾರ್ಟ್‌ಫೋನ್ ಅನ್ನು 'ಸೂಪರ್ ಝೂಮ್' ಕ್ಯಾಮೆರಾ ಮಾಡಬಹುದು

ʻಡೆಗ್ಗೊರೆಟೈಪ್ ಕ್ಯಾಮೆರಾʼ
1835ರಲ್ಲಿ ಜೋಸೆಫ್ ನಿಸೆಫೋರ್ ನಿಯಾಪ್ಸ್ ಮರಣವಾಯಿತು. ಅದರ ನಂತರದಲ್ಲಿ ಡೆಗ್ಗೊರೆಯು ನಿಯಾಪ್ಸ್‌ನ ಮಗ ಇಸಿಡೊರೆಯ ಜತೆಗೂಡಿ ಕ್ಯಾಮೆರಾ ಕುರಿತಾದ ಪರೀಕ್ಷೆಗಳನ್ನು ಮುಂದುವರಿಸುತ್ತಾನೆ. ಇತರೆ ಚಿತ್ರ ಕಲಾವಿದರಂತೆ ಡೆಗ್ಗೊರೆಯೂ ತನ್ನ ಪ್ರಾರಂಭಿಕ ಚಿತ್ರ ರಚನೆಯನ್ನು ಕ್ಯಾಮೆರಾ ಅಬ್‌ಸ್ಕ್ಯೂರ ಅಥವಾ ಕ್ಯಾಮೆರಾ ಲೂಸಿಡಾ ಬಳಸಿಕೊಂಡು ಮಾಡುತ್ತಿದ್ದನು. ತನ್ನ ಸಹವರ್ತಿ ನಿಯಾಪ್ಸ್‌ನಂತೆಯೇ ಕ್ಯಾಮೆರಾ ಅಬ್‌ಸ್ಕ್ಯೂರದ ಒಳಗೆ ಅಳವಡಿಸಲಾದ ಗಾಜಿನಲಿ ಪ್ರತಿಫಲಿಸಿದ ಚಿತ್ರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ.
ಸಿಲ್ವರ್ ಕ್ಲೋರೈಡ್ ಲೇಪನವಿರುವ, ತಾಮ್ರದ ಪ್ಲೇಟ್ ಮೇಲೆ ಕ್ಯಾಮೆರಾದಲ್ಲಿ ಬೆಳಕನ್ನು ಹರಿಸಿ ಚಿತ್ರ ಮೂಡಿದ ನಂತರ ಪಾದರಸದ ಆವಿ ಹಾಗೂ ಉಪ್ಪಿನ ದ್ರಾವಣದಲ್ಲಿ ರಾಸಾಯನಿಕ ಕ್ರಿಯೆ ನೆಡೆಸಿ ಚಿತ್ರ ತಯಾರಿಸುತ್ತಾನೆ. ಈ ಪ್ರಯತ್ನ ಮೂಲ ಕ್ಯಾಮೆರಾದಲ್ಲಿ ಚಿತ್ರ ಮೂಡಿಸಲು ಬೇಕಿದ್ದ ಎಂಟು ಗಂಟೆ ಸಮಯವನ್ನು ಮೂವತ್ತು ನಿಮಿಷಕ್ಕೆ ಇಳಿಸಲು ಯಶಸ್ವಿಯಾಯಿತು. ಈ ಚಿತ್ರದ ಗುಣಮಟ್ಟವೂ ಅತ್ಯುನ್ನತವಾಗಿತ್ತು. ಆದರೆ ತಾಮ್ರದ ಪ್ಲೇಟಿನ ಮೇಲೆ ಮೂಡಿದ ಚಿತ್ರದ ನಕಲು ಪ್ರತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಕ್ಯಾಮೆರಾ ʻಡೆಗ್ಗೊರೆಟೈಪ್ ಕ್ಯಾಮೆರಾʼ ಎಂದು ಕರೆಯಲ್ಪಟ್ಟಿತು. ಈ ರೀತಿಯ ಕ್ಯಾಮೆರಾವನ್ನು 1839ರಲ್ಲಿ ಡೆಗ್ಗೊರೆ ಹಾಗೂ ಇಸಿಡೊರೆಯ ಅನುಮತಿಯೊಂದಿಗೆ ಅಲ್ಫಾನ್ಸೆ ಗಿರಾಕ್ಸ್ ಅಭಿವೃದ್ಧಪಡಿಸಿ ಫ್ರಾನ್ಸ್‌ನಲ್ಲಿ ಬಿಡುಗಡೆ ಮಾಡಿದನು.

ಕ್ಯಾಲೊಟೈಪ್ ಕ್ಯಾಮೆರಾ
1940ರಲ್ಲಿ ಬ್ರಿಟನ್ನಿನ ಹೆನ್ರಿ ಫಾಕ್ಸ್ ಟಾಲ್ಬೋಟ್ ಎಂಬಾತ ಕ್ಯಾಲೊಟೈಪ್ ಕ್ಯಾಮೆರಾವನ್ನು ಆವಿಷ್ಕರಿಸುತ್ತಾನೆ. ಒಂದರೊಳಗೊಂದು ಅಳವಡಿಸಲಾದ ಪೆಟ್ಟಿಗೆಯಲ್ಲಿ ಮುಂದೆ ಮಸೂರವನ್ನು ಅಳವಡಿಸಿ ಅದಕ್ಕೆ ಮುಚ್ಚುಳವನ್ನು ಹಾಕಲಾಗಿರುತ್ತದೆ. ಹಿಂಬದಿಯ ಪೆಟ್ಟಿಗೆಗೆ ಗಾಜಿನ ಪರದೆಯನ್ನು ಅಳವಡಿಸಿ, ಅದನ್ನು ಮುಂದೆ ಹಿಂದೆ ಚಲಿಸುವಂತೆ ಮಾಡಲಾಗಿತ್ತು. ಚಿತ್ರದ ಸರಿಯಾದ ಫೋಕಸ್ ಗಾಜಿನ ಪರದೆಯಲ್ಲಿ ಮೂಡಿದ ನಂತರ ಆ ಗಾಜಿನ ಪರದೆ ತೆಗೆದು ಆ ಜಾಗದಲ್ಲಿ ರಾಸಾಯನಿಕ ಲೇಪದ ಹಾಳೆಯನ್ನು ಇಡಲಾಗಿತ್ತು. ನಂತರ ಪೆಟ್ಟಿಗೆಯ ಮುಂಭಾಗದ ಮಸೂರದ ಮುಚ್ಚಳ ತೆಗೆದು ಕೆಲ ಸಮಯದವರೆಗೆ ಬೆಳಕನ್ನು ಮಸೂರದ ಮುಖೇನ ಹಾಳೆಗೆ ಹರಿಸಿಲಾಯಿತು. ಚಿತ್ರವು ಮೂಡುತ್ತಿದ್ದಂತೆ ಮುಚ್ಚುಳವನ್ನು ಮುಚ್ಚಲಾಯಿತು. ಇದರಿಂದ ಚಿತ್ರವನ್ನು ಒಂದು ನಿಮಿಷದಲ್ಲಿ ಮೂಡಿಸಲಾಯಿತು. ಈ ಚಿತ್ರ ನೆಗೆಟಿವ್ ಚಿತ್ರವೆಂದು ಕರೆಯಲ್ಪಟ್ಟಿತು. ಇಲ್ಲಿ ಟಾಲ್ಬೋಟ್ ಬೆಳ್ಳಿಯ ಕ್ಲೋರೈಡ್‌ನ ತಾಮ್ರದ ಪ್ಲೇಟಿಗೆ ಬದಲಾಗಿ ಬೆಳ್ಳಿಯ ಕ್ಲೋರೈಡ್‌ನ ಕಾಗದವನ್ನು ಉಪಯೋಗಿಸುತ್ತಾನೆ. ಗ್ಯಾಲಿಕ್ ಆಸಿಡ್ ಉಪಯೋಗಿಸಿದ ರಾಸಾಯನಿಕ ಕ್ರಿಯೆಯಿಂದ ನೈಜ ಚಿತ್ರವನ್ನು (ಪಾಸಿಟೀವ್ ಚಿತ್ರ) ಪಡೆಯಲಾಯಿತು. ಇದರಿಂದಾಗಿ ರಾಸಾಯನಿಕ ಲೇಪಿತ ಪ್ಲೇಟ್‌ಗಳನ್ನು ಬಳಸುವುದಕ್ಕಿಂತ ಹಾಳೆಗಳನ್ನು ಬಳಸಿ ಚಿತ್ರ ತೆಗೆಯುವುದು ಸುಲಭವಾಯಿತು. ಡೆಗ್ಗೊರೆಟೈಪ್‌ನಲ್ಲಿ ಕೇವಲ ಪಾಸಿಟೀವ್ ಚಿತ್ರಗಳನ್ನು ಪಡೆಯಲು ಸಾಧ್ಯವಾದರೆ ಕ್ಯಾಲೋಟೈಪ್‌ನಲ್ಲಿ ನೆಗೆಟೀವ್ ಚಿತ್ರವನ್ನು ತೆಗೆದ ಕಾರಣ ಚಿತ್ರದ ಅನೇಕ ನಕಲು ಪ್ರತಿಗಳನ್ನು ಮಾಡಲು ಸಾಧ್ಯವಾಯಿತು. ಆದರೆ ಕ್ಯಾಲೋಟೈಪ್ ಚಿತ್ರದ ಗುಣಮಟ್ಟ ಡೆಗ್ಗೊರೆಟೈಪ್ ಕ್ಯಾಮೆರಾದಲ್ಲಿ ತೆಗೆದ ಚಿತ್ರದಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯತ್ನಗಳೇ ಇಂದಿನ ಮೆಗಾ ಪಿಕ್ಸೆಲ್ ಕ್ಯಾಮೆರಾ ಉಗಮಕ್ಕೆ ಕಾರಣವಾದವು ಎಂಬುದು ವಿಶೇಷ.