ಅದು ಮ್ಯೂನಿಕ್ ನಗರದಿಂದ ಬಾರ್ಸಿಲೋನಾಕ್ಕೆ ಹೊರಟಿದ್ದ ಮುಂಜಾನೆಯ ವಿಮಾನ. ವಿಮಾನ ನಿಲ್ದಾಣದ ಜಂಜಾಟ ಮುಗಿಸಿ ಪ್ರಯಾಣಿಕರೆಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ನೆಲೆಸಿದ್ದರು. ಕೆಲವರು ನಿದ್ದೆಗೆ ಜಾರುತ್ತಿದ್ದರೆ, ಇನ್ನು ಕೆಲವರು ಕಿಟಕಿಯ ಮೂಲಕ ಹೊರಗಿನ ಮೋಡಗಳನ್ನು ನೋಡುತ್ತಾ ಮಗ್ನರಾಗಿದ್ದರು. ಎಂದಿನಂತೆ ಎಲ್ಲವೂ ಸಹಜವಾಗಿಯೇ ಇತ್ತು.

ಆದರೆ, ಆ ವಿಮಾನದಲ್ಲಿ ಅಂದು ನಡೆಯಲಿದ್ದ ಘಟನೆ ಒಬ್ಬ ಬಾಲಕನ ಬದುಕನ್ನೇ ಬದಲಿಸಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಆ ವಿಮಾನದ ಸಿಬ್ಬಂದಿ ತಂಡದಲ್ಲಿ ಇಸಾಬೆಲಾ ಮೊರೊ ಎಂಬ ಅನುಭವಿ ಫ್ಲೈಟ್ ಅಟೆಂಡೆಂಟ್ (ಗಗನಸಖಿ) ಇದ್ದರು. ಇಸಾಬೆಲಾ ಕೇವಲ ತಮ್ಮ ಕೆಲಸವನ್ನು ಯಾಂತ್ರಿಕವಾಗಿ ಮಾಡುವವರಾಗಿರಲಿಲ್ಲ.

ಬದಲಿಗೆ ಪ್ರಯಾಣಿಕರ ಅಗತ್ಯಗಳನ್ನು ಮತ್ತು ಅವರ ವರ್ತನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಸಂವೇದನಾಶೀಲ ವ್ಯಕ್ತಿಯಾಗಿದ್ದರು. ವಿಮಾನವು ಆಗಸಕ್ಕೆ ಏರಿ, ‘ಸೀಟ್ ಬೆಲ್ಟ್’ ದೀಪಗಳು ಆರಿ ಹೋದ ನಂತರ ಇಸಾಬೆಲಾ ಪ್ರಯಾಣಿಕರಿಗೆ ಊಟೋಪಚಾರ ನೀಡಲು ಸಿದ್ಧತೆ ನಡೆಸುತ್ತಿದ್ದರು. ಅವರು ಕ್ಯಾಬಿನ್‌ನಲ್ಲಿ ನಡೆದುಕೊಂಡು ಹೋಗುವಾಗ, ಮೂರನೇ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ಅವರ ಗಮನ ಸೆಳೆದರು. ‌

ಇದನ್ನೂ ಓದಿ: ಆಕಾಶದಲ್ಲಿ ಅದೃಶ್ಯ ತಂತಿ

ಕಿಟಕಿಯ ಪಕ್ಕದಲ್ಲಿ ಸುಮಾರು ಹತ್ತು ವರ್ಷದ ಬಾಲಕನೊಬ್ಬ ಕುಳಿತಿದ್ದ. ಅವನು ನೋಡಲು ಬಡಕಲಾಗಿದ್ದ ಮತ್ತು ಅತಿಯಾದ ಆತಂಕ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅವನ ಪಕ್ಕದಲ್ಲಿ ಸುಮಾರು ನಲವತ್ತರ ಆಸುಪಾಸಿನ ದೃಢಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಆ ವ್ಯಕ್ತಿಯ ಹಾವಭಾವಗಳು ತುಂಬಾ ಗಂಭೀರವಾಗಿದ್ದವು ಮತ್ತು ಆತ ಆ ಬಾಲಕನ ಪ್ರತಿಯೊಂದು ಚಲನವಲನವನ್ನೂ ಹದ್ದಿನ ಕಣ್ಣಿನಿಂದ ಕಾಯುತ್ತಿದ್ದಂತೆ ತೋರುತ್ತಿತ್ತು.

ಇಸಾಬೆಲಾ ಆ ಸಾಲನ್ನು ದಾಟಿ ಮುಂದೆ ಹೋಗುವಾಗ, ಆ ಬಾಲಕನ ಕಣ್ಣುಗಳನ್ನು ನೋಡಿದರು. ಆ ಕಣ್ಣುಗಳಲ್ಲಿ ಭಯ ಮತ್ತು ಅಸಹಾಯಕತೆ ತುಂಬಿತ್ತು. ಬಾಲಕ ಏನನ್ನೂ ಮಾತನಾಡುತ್ತಿರಲಿಲ್ಲ. ಆದರೆ ಅವನ ಕಣ್ಣುಗಳು ಮೌನವಾಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವು.

ಇದ್ದಕ್ಕಿದ್ದಂತೆ, ಆ ಬಾಲಕ ತನ್ನ ಕೈಬೆರಳುಗಳಿಂದ ವಿಚಿತ್ರವಾದ ಸನ್ನೆಯೊಂದನ್ನು ಮಾಡಿದ. ಅವನು ಗಾಳಿಯಲ್ಲಿ ಏನನ್ನೋ ಬರೆಯುವಂತೆ ಅಥವಾ ನಿರ್ದಿಷ್ಟ ಆಕಾರವನ್ನು ತೋರಿಸುವಂತೆ ಬೆರಳುಗಳನ್ನು ಮಡಚುತ್ತಿದ್ದ. ಮೊದಲಿಗೆ ಇಸಾಬೆಲಾ ಇದೊಂದು ಆಟವಿರಬಹುದು ಎಂದುಕೊಂಡರು.

ಮಕ್ಕಳು ಸಾಮಾನ್ಯವಾಗಿ ಸುಮ್ಮನೆ ಕುಳಿತಾಗ ಹೀಗೆ ಮಾಡುವುದು ಸಹಜ. ಆದರೆ, ಇಸಾಬೆಲಾ ಅವರ ಅನುಭವ ಮತ್ತು ಅಂತಃಪ್ರಜ್ಞೆ ಇದು ಸಾಮಾನ್ಯವಲ್ಲ ಎಂದು ಎಚ್ಚರಿಸಿತು. ಆ ಬಾಲಕ ಆ ಸನ್ನೆಯನ್ನು ಮಾಡುತ್ತಿದ್ದಾಗ ಪಕ್ಕದ ವ್ಯಕ್ತಿ ಅವನನ್ನು ನೋಡದಂತೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದ. ಆ ದೃಶ್ಯದಲ್ಲಿ ಏನೋ ಅಸ್ವಾಭಾವಿಕತೆ ಇತ್ತು. ಆ ಸನ್ನೆಯು ತಮಾಷೆಯಾಗಿರಲಿಲ್ಲ, ಬದಲಿಗೆ ಅದು ಪ್ರಾಣಾಪಾಯದಲ್ಲಿರುವ ವ್ಯಕ್ತಿ ನೀಡುವ ‘ಗೌಪ್ಯ ಕರೆ’ಯಂತಿತ್ತು. ಇಸಾಬೆಲಾಗೆ ಆ ಬಾಲಕ ಮತ್ತು ಪಕ್ಕದ ವ್ಯಕ್ತಿಯ ನಡುವಿನ ಸಂಬಂಧದ ಬಗ್ಗೆ ಅನುಮಾನ ಮೂಡಿತು. ಅವರು ತಂದೆ-ಮಗನಂತೆ ಕಾಣುತ್ತಿರಲಿಲ್ಲ. ಆ ವ್ಯಕ್ತಿಯ ನಿಯಂತ್ರಣ ಮತ್ತು ಬಾಲಕನ ಭಯ ಇವೆರಡೂ ತಾಳೆ ಯಾಗುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ, ಪಕ್ಕದ ವ್ಯಕ್ತಿ ಶೌಚಾಲಯಕ್ಕೆ ಹೋಗಲು ಎದ್ದು ನಿಂತ. ಇದೇ ಸರಿಯಾದ ಸಮಯ ಎಂದು ಭಾವಿಸಿದ ಆ ಬಾಲಕ, ಇಸಾಬೆಲಾ ಕಡೆಗೆ ತಿರುಗಿ ಅದೇ ಕೈ ಸನ್ನೆಯನ್ನು ಅತ್ಯಂತ ಹತಾಶೆಯಿಂದ ಮತ್ತು ವೇಗವಾಗಿ ಮಾಡಿದ.

ಅವನ ಮುಖದಲ್ಲಿನ ಆತಂಕ ಈಗ ಸ್ಪಷ್ಟವಾಗಿತ್ತು. ಆ ಕ್ಷಣದಲ್ಲಿ ಇಸಾಬೆಲಾ ಒಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಒಂದು ವೇಳೆ ತಮ್ಮ ಅನುಮಾನ ತಪ್ಪಾಗಿದ್ದರೆ? ಪ್ರಯಾಣಿಕರೊಬ್ಬರ ಮೇಲೆ ವಿನಾಕಾರಣ ಆರೋಪ ಮಾಡಿದಂತಾಗುತ್ತದೆ. ಆದರೆ, ಒಂದು ವೇಳೆ ತಮ್ಮ ಅನುಮಾನ ನಿಜವಾಗಿದ್ದು, ಈಗ ಸುಮ್ಮನಿದ್ದರೆ ಆ ಮಗುವಿನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

boy watching through flight window 1

ಇಸಾಬೆಲಾ ತಮ್ಮ ಮನಸ್ಸಾಕ್ಷಿಯ ಮಾತನ್ನು ಕೇಳಿದರು. ಅವರು ತಕ್ಷಣವೇ ಯಾವುದೇ ಗದ್ದಲ ವಿಲ್ಲದಂತೆ ಕಾಕ್‌ಪಿಟ್‌ಗೆ ತೆರಳಿದರು. ಕ್ಯಾಪ್ಟನ್ ಬಳಿ ಹೋದ ಇಸಾಬೆಲಾ, ಅತ್ಯಂತ ತುರ್ತು ಮತ್ತು ಗೌಪ್ಯ ಸಂದೇಶವನ್ನು ರವಾನಿಸಿದರು - ’3-ಎ ಸೀಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ಬಲವಾದ ಅನುಮಾನವಿದೆ. ಇದು ಸಂಭಾವ್ಯ ಅಪಹರಣ ಅಥವಾ ಮಾನವ ಕಳ್ಳಸಾಗಣೆಯ ಪ್ರಕರಣವಾಗಿರಬಹುದು. ತಕ್ಷಣವೇ ಲ್ಯಾಂಡಿಂಗ್ ಮತ್ತು ನೆಲದ ಮೇಲೆ ಪೊಲೀಸ್ ಭದ್ರತೆಯನ್ನು ಕೋರುತ್ತಿದ್ದೇನೆ’ ಮುಂದೇನಾಯಿತು?

ವಿಮಾನದ ಕ್ಯಾಪ್ಟನ್ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ. ಪ್ರಯಾಣಿಕರಿಗೆ ನಿಜವಾದ ವಿಷಯ ತಿಳಿದರೆ ಆತಂಕ ಸೃಷ್ಟಿಯಾಗಬಹುದು ಮತ್ತು ಆ ಅಪಹರಣಕಾರ ವಿಮಾನದಲ್ಲಿ ಏನಾದರೂ ಅನಾಹುತ ಮಾಡಬಹುದು ಎಂಬ ಭಯವಿತ್ತು. ಆದ್ದರಿಂದ, ಪೈಲಟ್ ಜಾಣತನದಿಂದ ಒಂದು ಘೋಷಣೆ ಮಾಡಿದ- “ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ನಾವು ಹತ್ತಿರದ ಜಿನೀವಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿದ್ದೇವೆ".

ಈ ಘೋಷಣೆ ಕೇಳಿ ಆ ಬಾಲಕನ ಪಕ್ಕದಲ್ಲಿದ್ದ ವ್ಯಕ್ತಿ ಸಿಟ್ಟಿಗೆದ್ದ. ಆತ ವಿಚಲಿತನಾಗಿದ್ದ. ಆದರೆ ಅಷ್ಟರಲ್ಲಾಗಲೇ ವಿಮಾನವು ಜಿನೀವಾದ ಕಡೆಗೆ ತಿರುಗಿತ್ತು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ, ಪ್ರಯಾಣಿಕರಿಗೆ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ, ಸಾದಾ ಉಡುಪಿನಲ್ಲಿದ್ದ ವಿಶೇಷ ಭದ್ರತಾ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿದರು. ಆ ವ್ಯಕ್ತಿ ಪ್ರತಿರೋಧ ತೋರಲು ಪ್ರಯತ್ನಿಸಿದನಾದರೂ, ಪೊಲೀಸರು ಕ್ಷಣಮಾತ್ರದಲ್ಲಿ ಅವನನ್ನು ಸುತ್ತುವರಿದರು. ಪರಿಶೀಲನೆ ನಡೆಸಿದಾಗ ಅವನ ಬಳಿ ಇದ್ದ ದಾಖಲೆಗಳು ಮತ್ತು ಪಾಸ್‌ಪೋರ್ಟ್ ನಕಲಿ ಎಂದು ತಿಳಿದುಬಂತು. ಅವನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಕಾಗಿದ್ದ ಒಬ್ಬ ಕುಖ್ಯಾತ ಮಾನವ ಕಳ್ಳಸಾಗಣೆಗಾರನಾಗಿದ್ದ. ಪೊಲೀಸರು ಆ ಬಾಲಕನನ್ನು ಪ್ರತ್ಯೇಕವಾಗಿ ವಿಚಾರಿಸಿದಾಗ, ಅವನು ಕಣ್ಣೀರು ಹಾಕುತ್ತಾ ನಡುಗುವ ದ್ವನಿಯಲ್ಲಿ ಸತ್ಯವನ್ನು ಬಾಯಿಬಿಟ್ಟ.

ಅವನನ್ನು ಕೆಲವು ವಾರಗಳ ಹಿಂದೆಯೇ ಅಪಹರಿಸಲಾಗಿತ್ತು. ಅವನ ಪೋಷಕರು ಅವನನ್ನು ಹುಡುಕುತ್ತಿದ್ದರು ಮತ್ತು ಇಂಟರ್‌ಪೋಲ್ ಕೂಡ ಈ ಬಾಲಕನಿಗಾಗಿ ಬಲೆ ಬೀಸಿತ್ತು. ಆ ವ್ಯಕ್ತಿ ಬಾಲಕನನ್ನು ಬೇರೊಂದು ದೇಶಕ್ಕೆ ಸಾಗಿಸಲು ಕರೆದೊಯ್ಯುತ್ತಿದ್ದ. ಬಾಲಕನಿಗೆ ತಾನು ಮಾಡುವ ಆ ‘ಕೈಸನ್ನೆ’ ಯಾರಾದರೂ ಅರ್ಥಮಾಡಿಕೊಳ್ಳುತ್ತಾರೆ ಎಂಬ ಸಣ್ಣ ಆಸೆಯಷ್ಟೇ ಉಳಿದಿತ್ತು.

ಅಂದು ಇಸಾಬೆಲಾ ಅವರ ಆ ಒಂದು ಸೂಕ್ಷ್ಮದೃಷ್ಟಿ, ಆ ಬಾಲಕನ ಪಾಲಿಗೆ ದೇವರ ದೃಷ್ಟಿಯಾಗಿ ಪರಿಣಮಿಸಿತ್ತು. ಆ ಕ್ಷಣದಲ್ಲಿ ಇಸಾಬೆಲಾ ಅವರಿಗೆ ಅರ್ಥವಾಯಿತು; ತಾನು ಕೇವಲ ಊಟ ಬಡಿಸುವ ಸಿಬ್ಬಂದಿಯಲ್ಲ, ಬದಲಿಗೆ ಒಂದು ಜೀವವನ್ನು ಉಳಿಸಿದ ರಕ್ಷಕಿ ಎಂದು. ಪೊಲೀಸರು ಆ ಬಾಲಕನನ್ನು ಕರೆದೊಯ್ಯುವಾಗ, ಅವನು ಬಾಗಿಲ ಬಳಿ ನಿಂತು ಹಿಂದೆ ತಿರುಗಿ ನೋಡಿದನು. ಕಣ್ಣೀರಿನ ನಡುವೆಯೂ ಅವನ ಮುಖದಲ್ಲಿ ಮುಗ್ಧ ನಗು ಮೂಡಿತ್ತು. ಅವನು ಇಸಾಬೆಲಾ ಅವರ ಕಡೆಗೆ ಕೈಬೀಸಿ, ಮೌನವಾಗಿ ವಿದಾಯ ಹೇಳಿದನು. ಈ ಘಟನೆ ನಡೆದು ಕೆಲವು ದಿನಗಳು ಕಳೆದಿದ್ದವು. ಇಸಾಬೆಲಾ ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆಗ ಅವರಿಗೆ ಇಂಟರ್‌ಪೋಲ್‌ನಿಂದ ಒಂದು ಪತ್ರ ಬಂತು. ಆ ಲಕೋಟೆಯನ್ನು ತೆರೆದಾಗ ಅದರಲ್ಲಿ ಬಾಲಕ ಬರೆದ ಒಂದು ಚಿತ್ರವಿತ್ತು.

ಆ ಚಿತ್ರದಲ್ಲಿ ಮೋಡಗಳ ನಡುವೆ ಹಾರುತ್ತಿರುವ ಒಂದು ವಿಮಾನವಿತ್ತು. ವಿಮಾನದ ಪಕ್ಕದಲ್ಲಿ ನಗುತ್ತಿರುವ ಒಬ್ಬ ಫ್ಲೈಟ್ ಅಟೆಂಡೆಂಟ್ ಚಿತ್ರವಿತ್ತು. ಚಿತ್ರದ ಕೆಳಭಾಗದಲ್ಲಿ, ಬಾಲಕನ ಕೈಬರಹದಲ್ಲಿ ಸರಳವಾದ ಆದರೆ ಅತ್ಯಂತ ಆಳವಾದ ಅರ್ಥವುಳ್ಳ ಒಂದು ಸಾಲಿತ್ತು- “ಅಂದು ನನ್ನನ್ನು ನೋಡಿದ್ದಕ್ಕೆ ಧನ್ಯವಾದಗಳು". ಈ ಸಾಲು ಇಸಾಬೆಲಾ ಅವರ ಕಣ್ಣಲ್ಲಿ ನೀರು ತರಿಸಿತು.

ಜಗತ್ತಿನ ಎಷ್ಟೋ ಜನ ಕೇವಲ ನೋಡುತ್ತಾರೆ, ಆದರೆ ಗಮನಿಸುವುದಿಲ್ಲ. ಆದರೆ ಇಸಾಬೆಲಾ ಅಂದು ಕೇವಲ ನೋಡಲಿಲ್ಲ, ಆ ಬಾಲಕನ ಮೂಕವೇದನೆಯನ್ನು ಗಮನಿಸಿದರು. ಈ ಸತ್ಯ ಘಟನೆಯು ನಮಗೆ ಒಂದು ದೊಡ್ಡ ಪಾಠವನ್ನು ಕಲಿಸುತ್ತದೆ. ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಎಷ್ಟೋ ಬಾರಿ ಜನರು, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಸಂಕಷ್ಟದಲ್ಲಿದ್ದಾಗ ಬಾಯಿಬಿಟ್ಟು ಸಹಾಯ ಕೇಳಲಾಗದ ಪರಿಸ್ಥಿತಿಯಲ್ಲಿರುತ್ತಾರೆ.

ಅಂಥ ಸಮಯದಲ್ಲಿ ಅವರು ನೀಡುವ ಸಣ್ಣ ಸುಳಿವುಗಳು, ಕಣ್ಣಿನ ಭಾಷೆ ಅಥವಾ ಕೈಸನ್ನೆಗಳು ಅವರ ಪ್ರಾಣ ಉಳಿಸಲು ಇರುವ ಏಕೈಕ ದಾರಿಯಾಗಿರುತ್ತವೆ. ನಾವು ನಮ್ಮ ಮೊಬೈಲ್ ಫೋನ್‌ ಗಳಲ್ಲಿ ಅಥವಾ ನಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುವ ಬದಲು, ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಿದರೆ, ನಾವು ಕೂಡ ಯಾರದೋ ಪಾಲಿನ ರಕ್ಷಕರಾಗಬಹುದು.

ಇಸಾಬೆಲಾ ಮೊರೊ ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಯು ವಿಮಾನಯಾನ ಜಗತ್ತಿನಲ್ಲಿ ಒಂದು ಮಾದರಿಯಾಗಿ ಉಳಿಯಿತು. ಕೆಲವೊಮ್ಮೆ, ಒಂದು ಅದೃಶ್ಯವೆನಿಸುವ ಸನ್ನೆ, ಇಡೀ ಜೀವವನ್ನೇ ಉಳಿಸಬಲ್ಲದು ಎಂಬುದಕ್ಕೆ ಈ ಕಥೆಯೇ ಸಾಕ್ಷಿ.