ಈ ಸ್ಮಶಾನಕ್ಕೆ ಭೇಟಿ ನೀಡಿ 'ಸಮಾಧಿ ಸ್ಥಿತಿ' ತಲುಪಬಹುದು!
ಮನಿಲಾದಲ್ಲಿರುವ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್ ದಕ್ಷಿಣ ಏಶಿಯಾದ ಅತಿದೊಡ್ಡ ಅಮೆರಿಕನ್ ಯುದ್ಧ ಸಮಾಧಿ ಸ್ಥಳ. ಇದು ದ್ವಿತೀಯ ಮಹಾಯುದ್ಧದಲ್ಲಿ ಹುತಾತ್ಮರಾದ ಅಮೆರಿಕನ್ ಮತ್ತು ಫಿಲಿಪೀನೋ ಸೈನಿಕರ ಸ್ಮರಣೆಗೆ ಕಟ್ಟಲಾದ ಪುಣ್ಯಭೂಮಿ. ಸುಮಾರು 152 ಎಕರೆ (61.5 ಹೆಕ್ಟೇರ್) ಪ್ರದೇಶದಲ್ಲಿ ಹರಡಿರುವ ಈ ಸ್ಮಶಾನವು ವಿಶ್ವದೆಲ್ಲೆಡೆ ಇರುವ ಅಮೆರಿಕನ್ ಯುದ್ಧ ಸ್ಮಶಾನಗಳಲ್ಲಿಯೇ ಅತ್ಯಂತ ವಿಶಿಷ್ಟವಾದದ್ದು.
- ವಿಶ್ವೇಶ್ವರ ಭಟ್
'ಫಿಲಿಪ್ಪೈನ್ಸ್ ಗೆ ಹೋದರೆ, ಅಲ್ಲಿರುವ ‘ಮನಿಲಾ ಅಮೆರಿಕನ್ ಸಿಮೆಟರಿ (ಸ್ಮಶಾನ) ಮತ್ತು ಮೆಮೋರಿಯಲ್ (ಸ್ಮಾರಕ) ಗೆ ಹೋಗದೇ ಬರಬೇಡಿ' ಎಂದು ಸ್ನೇಹಿತರೊಬ್ಬರು ಹೇಳಿದ್ದರು. ಆಗ ನನ್ನ ಜತೆಗಿದ್ದ ಸ್ನೇಹಿತರೊಬ್ಬರು, ‘ಇವರೇನ್ರಿ? ಸ್ಮಶಾನಕ್ಕೆ ಹೋಗಿ ಅಂತಾರಲ್ಲ?’ ಎಂದು ಉದ್ಗಾರ ತೆಗೆದಿದ್ದರೂ. ನನಗೆ ಆಶ್ಚರ್ಯವಾಗಲಿಲ್ಲ. ಕಾರಣ ನಾನು ಅಮೆರಿಕ ಮತ್ತು ಯುರೋಪಿನಲ್ಲಿ ಸಾಕಷ್ಟು ಸಮಾಧಿ, ಸ್ಮಶಾನಗಳಿಗೆ ಹೋಗಿದ್ದೆ. ಅಲ್ಲಿ ಸ್ಮಶಾನ, ಸಮಾಧಿಗಳನ್ನು ಪ್ರೇಕ್ಷಣೀಯ ಸ್ಥಳಗಳಂತೆ ರೂಪಿಸಿದ್ದನ್ನು ಕಂಡು ಬೆರಗಾಗಿದ್ದೆ. ಆದರೆ ನನ್ನ ಸ್ನೇಹಿತರಿಗೆ ಮಾತ್ರ ಯಾಕೋ ಸಮಾಧಾನ ಆದಂತೆ ತೋರಲಿಲ್ಲ. ‘ಹೋಗಿ ಹೋಗಿ ಸ್ಮಶಾನಕ್ಕೆ ಯಾರಾದ್ರೂ ಭೇಟಿ ನೀಡ್ತಾರಾ? ಅವರು ಹೇಳ್ತಾರೆ ಅಂತ ನೀವು ಹೋಗಬೇಡಿ’ ಎಂದು ನನಗೆ ಉಪದೇಶ ಮಾಡಿದರು. ನಾನು ಅವರ ಮನಃಪರಿವರ್ತನೆ ಮಾಡಲು ಹೋಗಲಿಲ್ಲ.
ನಾನು ಪ್ಯಾರಿಸ್ ನಲ್ಲಿ ಪೆರೆ-ಲಚೈಸ್ ಸಿಮೆಟರಿ, ಲಂಡನ್ ನಲ್ಲಿರುವ ಹೈಗೇಟ್ ಸಿಮೆಟರಿ, ಅಮೆರಿಕದ ವಾಷಿಂಗ್ಟನ್ (ವರ್ಜಿನಿಯಾ)ನಲ್ಲಿರುವ ಆರ್ಲಿಂಗ್ಟನ್ ರಾಷ್ಟ್ರೀಯ ಸಿಮೆಟರಿ, ಲಾಸ್ ಏಂಜೆಲೀಸ್ ನಲ್ಲಿರುವ ಹಾಲಿವುಡ್ ಫಾರೆವರ್ ಸಿಮೆಟರಿಗಳಿಗೆ ನಾನು ಹೋಗಿದ್ದೆ. ಅವುಗಳನ್ನು ಸ್ಮಶಾನ ಎಂದು ಕರೆಯಲು ಮನಸ್ಸು ಬರುವುದಿಲ್ಲ. ಹಾಗಂದ್ರೆ ಅವುಗಳಿಗೆ ಅವಮಾನ ಮಾಡಿದಂತೆ. ಅವು ಯಾವುದೇ ಸುಂದರ ಮತ್ತು ಮನಮೋಹಕ ಉದ್ಯಾನವನಗಳಿಗಿಂತ ಸುಂದರವಾಗಿವೆ, ಅಚ್ಚುಕಟ್ಟಾಗಿವೆ. ಆ ಸ್ಮಶಾನಗಳನ್ನು ನೋಡಿದ ಬಳಿಕ, ಸಿಮೆಟರಿ ಬಗ್ಗೆ ನನಗಿದ್ದ ಅಭಿಪ್ರಾಯವೇ ಬದಲಾಗಿ ಹೋಗಿತ್ತು. ಸ್ಮಶಾನವನ್ನೂ ಇಷ್ಟು ಸುಂದರವಾಗಿ ರೂಪಿಸಲು ಸಾಧ್ಯವಾ ಎಂದು ಅನಿಸಿತ್ತು. ಅದಾದ ಬಳಿಕ ನಾನು ಅಮೆರಿಕ ಮತ್ತು ಯೂರೋಪಿನ ಯಾವುದೇ ದೇಶಗಳಿಗೆ ಹೋದರೂ, ಅಲ್ಲಿನ ಸ್ಮಶಾನಗಳಿಗೆ ಭೇಟಿ ನೀಡದೇ ಬರುವುದಿಲ್ಲ.
'ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿರುವ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್ ಗೆ ಭೇಟಿ ನೀಡಿ' ಎಂದು ಸ್ನೇಹಿತರೊಬ್ಬರು ಹೇಳಿದಾಗ, ಅಲ್ಲಿ ನಾನು ಭೇಟಿ ನೀಡಲೇ ಬೇಕಾದ ಸ್ಥಳಗಳ ಪಟ್ಟಿಯಲ್ಲಿ ಅದು ಇರಲಿಲ್ಲ. ಆದರೆ ಅವರು ಒತ್ತಿ ಹೇಳಿದಾಗ ಅಲ್ಲಿಗೆ ಹೋಗಲೇಬೇಕು ಎಂದು ನಿರ್ಧರಿಸಿದೆ. ನಂತರ ಅಲ್ಲಿಗೆ ಹೋಗಿ ಬಂದಾಗ, ಫಿಲಿಪ್ಪೈನ್ಸ್ ಪ್ರವಾಸ ಅನುಭವದ ನನ್ನ ಮನಸ್ಸಿನ ಕೆನೆಪದರದಲ್ಲಿ ತೇಲುತ್ತಿದ್ದುದು 'ಮನಿಲಾ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್' ಗೆ ನೀಡಿದ ಭೇಟಿ.

ಒಂದು ವೇಳೆ ಆ ಸ್ಮಶಾನಕ್ಕೆ ಹೋಗದಿದ್ದರೆ ಆ ಕೊರತೆ ನನ್ನಲ್ಲಿ ಸದಾ ಕಾಡುತ್ತಿತ್ತೇನೋ? ಒಂದು ಸ್ಮಶಾನವನ್ನು ಎಷ್ಟೊಂದು ಸುಂದರವಾಗಿ, ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ, ಶಿಸ್ತಿನಿಂದ ಮತ್ತು ಮನಮೋಹಕವಾಗಿ ನಿರ್ಮಿಸಿ ಪ್ರದರ್ಶಿಸಬಹುದು ಎಂಬುದಕ್ಕೆ ಅದೊಂದು ಉತ್ತಮ ನಿದರ್ಶನ. ನಾನು ಅಲ್ಲಿಂದ ಬರುವಾಗ ನನ್ನ ಜತೆಗಿದ್ದ ಸ್ನೇಹಿತರೊಬ್ಬರು, 'ಸಿಮೆಟರಿ ಮತ್ತು ಮೆಮೋರಿಯಲ್ ಹೇಗಿದೆ? ನಿಮಗೆ ಏನನಿಸಿತು?' ಎಂದು ಕೇಳಿದರು. ಅದಕ್ಕೆ ನಾನು, 'ಒಂದೇ ಮಾತಿನಲ್ಲಿ ಹೇಳುವುದಾದರೆ, ಮೃತದೇಹವನ್ನು ಹೂತರೆ, ಇಲ್ಲಿ ಹೂಳಬೇಕು..ಸತ್ತ ನಂತರದ ಬದುಕನ್ನು ಇಲ್ಲಿ ಬಾಳಬೇಕು.. ಹಾಗಿದೆ' ಎಂದು ಹೇಳಿದೆ.
ಎಲ್ಲಕ್ಕಿಂತ ದೊಡ್ಡ ಇತಿಹಾಸ ಮತ್ತು ಮುಗಿಯದಿರುವಷ್ಟು ಕಥೆಗಳು, ಸ್ಮಶಾನ-ಸ್ಮಾರಕಗಳ ಬಗ್ಗೆ ಮಾತ್ರ ಇರುತ್ತವಂತೆ. ಹೀಗಾಗಿ ದ್ವಿತೀಯ ಮಹಾಯುದ್ಧದ ಸ್ಮರಣಾರ್ಥವಾಗಿ ನಿರ್ಮಿಸಲಾದ ಅತೀ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿರುವ, ಇತಿಹಾಸ, ಶೌರ್ಯ, ಬಲಿದಾನದ ಸಂಕೇತವಾಗಿರುವ, ಮನಿಲಾ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್ ಬಗ್ಗೆ ನಿಮಗೆ ಹೇಳಬೇಕು.
ಮನಿಲಾದಲ್ಲಿರುವ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್ ದಕ್ಷಿಣ ಏಶಿಯಾದ ಅತಿದೊಡ್ಡ ಅಮೆರಿಕನ್ ಯುದ್ಧ ಸಮಾಧಿ ಸ್ಥಳ. ಇದು ದ್ವಿತೀಯ ಮಹಾಯುದ್ಧದಲ್ಲಿ ಹುತಾತ್ಮರಾದ ಅಮೆರಿಕನ್ ಮತ್ತು ಫಿಲಿಪೀನೋ ಸೈನಿಕರ ಸ್ಮರಣೆಗೆ ಕಟ್ಟಲಾದ ಪುಣ್ಯಭೂಮಿ. ಸುಮಾರು 152 ಎಕರೆ (61.5 ಹೆಕ್ಟೇರ್) ಪ್ರದೇಶದಲ್ಲಿ ಹರಡಿರುವ ಈ ಸ್ಮಶಾನವು ವಿಶ್ವದೆಲ್ಲೆಡೆ ಇರುವ ಅಮೆರಿಕನ್ ಯುದ್ಧ ಸ್ಮಶಾನಗಳಲ್ಲಿಯೇ ಅತ್ಯಂತ ವಿಶಿಷ್ಟವಾದದ್ದು. ಇದು ನೂರಾರು ಸೇನಾನಿಗಳ ಸ್ಮಶಾನವಷ್ಟೇ ಅಲ್ಲ, ಇತಿಹಾಸ, ತತ್ವ ಮತ್ತು ಶ್ರದ್ಧೆಯ ಸಂಕೇತ. ಮನಿಲಾ ನಗರದ ಟ್ಯಾಗಿಗ್ ಪ್ರದೇಶದಲ್ಲಿರುವ ಈ ಸಮಾಧಿಯು 'ಸಮಗ್ರವಾಗಿ ನಿರ್ವಹಣೆಯಲ್ಲಿರುವ ಸ್ಥಳ'ವಾಗಿದ್ದು, ವರ್ಷದಿಂದ ವರ್ಷಕ್ಕೆ ಸಾವಿರಾರು ಪ್ರವಾಸಿಗರು, ಯೋಧರು ಮತ್ತು ಕುಟುಂಬದ ಸದಸ್ಯರು ಇಲ್ಲಿ ಭೇಟಿ ನೀಡುತ್ತಾರೆ.
ಈ ಸ್ಮಶಾನವನ್ನು ವಿನ್ಯಾಸ ಮಾಡಿದವ ಜಗತ್ತಿನ ಖ್ಯಾತ ಸ್ಮಶಾನ ವಿನ್ಯಾಸಕನೆಂದು ಹೆಸರು ಮಾಡಿದ ಗಾರ್ಡ್ನರ್ ಎ.ಡೈಲೇ. ಇಲ್ಲಿನ ಸಮಾಧಿಗಳು ಯಾವ ದಿಕ್ಕಿನಿಂದ ನೋಡಿದರೂ ಸರಿಯಾದ ಸಾಲುಗಳಲ್ಲಿದ್ದು, ಮೊದಲ ನೋಟದಲ್ಲಿಯೇ ಅಭಿಮಾನ ಮತ್ತು ಶ್ರದ್ಧೆಯನ್ನು ಮೂಡಿಸುತ್ತದೆ. ಈ ಸ್ಥಳವನ್ನು ಅಮೆರಿಕನ್ ಸಮರ ಸ್ಮಾರಕ ಆಯೋಗ (ABMC) ಸಮರ್ಪಕವಾಗಿ ನಿರ್ವಹಿಸುತ್ತಿದೆ.
ಅಷ್ಟಕ್ಕೂ ಈ ಸ್ಮಶಾನವನ್ನು ನಿರ್ಮಿಸಿದ್ದು ಏಕೆ? ಅದರಲ್ಲೂ ಅಮೆರಿಕ ಸರಕಾರ ಮನಿಲಾದಲ್ಲಿ ನಿರ್ಮಿಸಿದ್ದು ಏಕೆ?
ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಪೆಸಿಫಿಕ್ ರಣರಂಗದಲ್ಲಿ ಸಾವಿರಾರು ಅಮೆರಿಕನ್ ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿದರು. ಜಪಾನ್ ವಿರುದ್ಧ ನಡೆದ ಭೀಕರ ಯುದ್ಧಗಳಲ್ಲಿ, ಫಿಲಿಪ್ಪೈನ್ಸ್ ಪ್ರಮುಖ ಯುದ್ಧ ಕ್ಷೇತ್ರವಾಗಿತ್ತು. ಬಟಾನ್ ಮಾರ್ಚ್, ಕೊರೆಗಿದೋರ್ ಯುದ್ಧ, ಲೆಯ್‌ಟೆ ಗದ್ದಲ, ಪಲಾವಾನ್ ದಾಳಿಗಳು... ಇವೆಲ್ಲವೂ ಇತಿಹಾಸದಲ್ಲೇ ಕರಾಳ ನೆನಪುಗಳಾಗಿ ಉಳಿದಿವೆ. ಈ ಎಲ್ಲ ಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು 1960ರ ದಶಕದ ಆರಂಭದಲ್ಲಿ ಈ ಸಮಾಧಿ ನಿರ್ಮಿಸಲಾಯಿತು. ಇಲ್ಲಿ ಸುಮಾರು 17,206 ಯೋಧರ ಸಮಾಧಿಗಳಿವೆ. ಇವರಲ್ಲಿ ಹೆಚ್ಚಿನವರು ಅಮೆರಿಕನ್ ಸೈನಿಕರು. ಆದರೆ ಕೆಲ ಫಿಲಿಪೀನೋ ಸೇನಾನಿಗಳು, ನೌಕಾಪಡೆಯ ಸಿಬ್ಬಂದಿ, ಎಂಜಿನಿಯರ್ ಮತ್ತು ವೈದ್ಯರು ಕೂಡ ಇದ್ದಾರೆ. ಈ ಯುದ್ಧಗಳಲ್ಲಿ ಮೂವತ್ತಾರು ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾದರು. ಅವರೆಲ್ಲರ ಹೆಸರುಗಳನ್ನು ಸ್ಮಾರಕದ ಗೋಡೆಯ ಮೇಲೆ ಉಲ್ಲೇಖಿಸಲಾಗಿದೆ. ಇವರ ಹೆಸರುಗಳು Walls of the Missing ಎಂಬ ದೊಡ್ಡ ಬಂಡೆಗಳ ಮೇಲೆ ಕೆತ್ತಲಾಗಿದೆ.
ಮೆಮೋರಿಯಲ್ ಸೆಂಟರ್ ಮತ್ತು ಅದರ ವೈಶಿಷ್ಟ್ಯ
ಸ್ಮಶಾನದ ಮಧ್ಯಭಾಗದಲ್ಲಿ ಒಂದು ವೃತ್ತಾಕಾರದ ಸ್ಮಾರಕ ಭವನವಿದೆ. ಅದು 'ಸಮಾಧಿ ವೃತ್ತ'. ಇದರ ಗೋಡೆಯ ಮೇಲೆ ವಿವಿಧ ನಕ್ಷೆಗಳಿದ್ದು, ಪೆಸಿಫಿಕ್ ಯುದ್ಧ ರಣತಂತ್ರ, ಅಮೆರಿಕನ್ ಸೈನಿಕರ ಕಾರ್ಯಚಟುವಟಿಕೆ ಮತ್ತು ವಿಜಯಗಳ ವಿವರಗಳಿವೆ. ಇಲ್ಲಿನ ನಕ್ಷೆಗಳಲ್ಲಿ ಲೆಯ್‌ಟೆ ಗಲಾಟೆ, ಮಿಲೋನ್ ಬೇ ದಾಳಿ, ಕ್ವಾಜಾಲೆನ್ ದಾಳಿಯಂಥ ಪ್ರಮುಖ ಸೈನಿಕ ಕಾರ್ಯಾಚರಣೆಗಳನ್ನು ಉಲ್ಲೇಖಿಸಲಾಗಿದೆ. ಈ ಯುದ್ಧಗಳಲ್ಲಿ ಸಾವಿಗೀಡಾದ ಯೋಧರ ಜೀವನವನ್ನು ಮೆಲುಕು ಹಾಕುವುದು ಭಾವನಾತ್ಮಕ ಅನುಭವ. ಹೀಗಾಗಿ ಇದು ಕೇವಲ ಸ್ಮಶಾನವಲ್ಲ, ಯುದ್ಧಗಳಲ್ಲಿ ವೀರ ಮರಣವನ್ನಪ್ಪಿದ ಬಯಲು ಸಮರ ಸ್ಮರಣಾಲಯ. ಇಲ್ಲಿಗೆ ಭೇಟಿ ನೀಡಿದಾಗ ಅಸಂಖ್ಯಾತ ಶ್ವೇತ ಶಿಲೆಗಳ ನಡುವೆ ನಡೆಯುವುದು, ಪ್ರತಿ ಸಮಾಧಿಗೆ ನಮಸ್ಕರಿಸುವುದು, ಮಾನವ ಇತಿಹಾಸದ ಘೋರ ಕ್ಷಣಗಳನ್ನು ನೆನೆಯುವುದು ಒಂದು ಹೃದಯಸ್ಪರ್ಶಿ ಅನುಭವವೇ.

ಪ್ರವಾಸಿಗರಿಗೆ ನೀಡುವ ಅನುಭವ
ಮನಿಲಾ ಅಮೆರಿಕನ್ ಸಿಮೆಟರಿಯಲ್ಲಿ ಪ್ರವೇಶ ಎಲ್ಲರಿಗೂ ಮುಕ್ತ. ಪ್ರವೇಶದ ಬಾಗಿಲಿನಲ್ಲಿ ಮಾಹಿತಿ ಕೇಂದ್ರವಿದ್ದು, ಅಲ್ಲಿ ಯೋಧರ ಹೆಸರುಗಳು, ಯುದ್ಧ ವಿವರಗಳು, ಮಾಹಿತಿ ದೊರೆಯುತ್ತದೆ. ನಿರ್ದಿಷ್ಟ ಸಮಯದಲ್ಲಿ ನಡೆಯುವ ಗೈಡೆಡ್ ಟೂರ್‌ಗಳಲ್ಲಿ ಭಾಗವಹಿಸುವ ಅವಕಾಶವಿದೆ. ವಿಶಾಲ ಗಿಡ, ಮರಗಳ ನಡುವೆ ಮೌನವಾಗಿ ನಡೆಯಲು ಅವಕಾಶವಿದೆ. ಸಂಬಂಧಿಕರು, ಪರಿಚಿತರು ಯೋಧರ ಸಮಾಧಿಗೆ ಪುಷ್ಪಾಲಂಕಾರ ಮಾಡಬಹುದು. ಕುಟುಂಬದವರು ಅಥವಾ ಇತಿಹಾಸ ಆಸಕ್ತರು ತಮ್ಮ ಸಂಬಂಧಿಕರ ಅಥವಾ ಇತರ ಯೋಧರ ಬಗ್ಗೆ ಅಂತರ್‌ಜಾಲದಲ್ಲಿ ಮಾಹಿತಿ ಪಡೆಯಬಹುದು. ಈ ಸ್ಮಶಾನ ಅಮೆರಿಕ ಮತ್ತು ಫಿಲಿಪ್ಪೈನ್ಸ್ ನಡುವಿನ ಸ್ನೇಹ ಸಂಬಂಧದ ಪ್ರತಿಬಿಂಬ. ಅಮೆರಿಕನ್ ಸೈನಿಕರ ಬಲಿದಾನ ಹಾಗೂ ಫಿಲಿಪೀನೋ ಜನರ ಸಹಕಾರ ಈ ನೆಲದಲ್ಲಿ ಬೆರೆತು ಹೋಗಿವೆ.
ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆ
ಈ ಸ್ಥಳವನ್ನು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸಲಾಗಿದ್ದು, ಹಸಿರು ಗಿಡ-ಮರಗಳು, ಸಮಾಧಿಗಳ ಸ್ವಚ್ಛತೆ, ಸಾರ್ವಜನಿಕ ಶಿಸ್ತು ಎಲ್ಲವೂ ಇಲ್ಲಿ ಗಮನಾರ್ಹ. ಇಲ್ಲಿನ ಗಿಡ-ಮರಗಳು ಕೂಡ ಸ್ಥಳದ ಸೌಂದರ್ಯವರ್ಧಕವಾಗಿದ್ದು, ಅಲ್ಲಿ ಪರಿಸರ ಸ್ನೇಹಿ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷವೂ 'ಸಂಸ್ಮರಣಾ ದಿನ' (ಮೇ ತಿಂಗಳ ಕೊನೆಯ ಸೋಮವಾರ)ವನ್ನು ಆಚರಿಸಲಾಗುತ್ತದೆ. ಅಮೆರಿಕದ ರಾಯಭಾರಿ ಕಚೇರಿ ಹಾಗೂ ಫಿಲಿಪ್ಪೈನ್ಸ್ ಸರಕಾರದ ಸಹಕಾರದಿಂದ ಈ ಕಾರ್ಯಕ್ರಮ ನಡೆಯುತ್ತದೆ.
ಮನಿಲಾದ ಅಮೆರಿಕನ್ ಸಿಮೆಟರಿ ಮತ್ತು ಮೆಮೋರಿಯಲ್ ಕೇವಲ ಸುಂದರ ಸ್ಥಳವೊಂದೇ ಅಲ್ಲ, ಇದು ಮಾನವ ಬಲಿದಾನದ ಶ್ರೇಷ್ಠತೆ, ಧೈರ್ಯ, ಹೋರಾಟ ಮತ್ತು ಇತಿಹಾಸಕ್ಕೆ ಸಾಕ್ಷ್ಯವಾದ ಪವಿತ್ರ ನೆಲ. ಇಲ್ಲಿ ಬರುವ ಪ್ರತಿಯೊಬ್ಬರಿಗೂ ಇದು ಅಸಂಖ್ಯ ನೆನಪು, ನೋವಿನ ಕಹಿ, ಮಾನವ ಬದುಕಿನ ಸಂಕೀರ್ಣತೆ, ಶಾಂತಿಯ ಮಹತ್ವವನ್ನು ತಿಳಿಸಿಕೊಡುವ ಮುಕ್ತ ವಿಶ್ವವಿದ್ಯಾಲಯದಂತೆ ಭಾಸವಾಗುತ್ತದೆ. ಬೇರೆ ದೇಶಗಳಿಗೆ ಹೋದಾಗ ಇಂಥ ಜಾಗಗಳಿಗೆ ಭೇಟಿ ನೀಡುವುದು ಒಂದು ಅನೂಹ್ಯ ಅನುಭವವೇ! ಈ ಸ್ಮಶಾನಕ್ಕೆ ಭೇಟಿ ನೀಡಿ 'ಸಮಾಧಿ ಸ್ಥಿತಿ' ತಲುಪಬಹುದು.