ವಿಶ್ವ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ 8ಕ್ಕೇರಿದ ಭಾರತ! ಕಾರಣವೇನು?
ಕೇಂದ್ರ ಸರಕಾರವು ಸ್ವದೇಶಿ ದರ್ಶನ್ 2.0 ಮತ್ತು ಮೆಡಿಕಲ್ ಟೂರಿಸಂ ಅನ್ನು ಜನಪ್ರಿಯಗೊಳಿಸಿದೆ. " ಭಾರತದಲ್ಲಿ ಆರೋಗ್ಯವಂತರಾಗಿʼ ಅಭಿಯಾನ ಕೈಗೊಳ್ಳಲಾಗಿದೆ. ಭಾರತವು ಗ್ಲೋಬಲ್ ಹೆಲ್ತ್‌ಕೇರ್ ತಾಣವಾಗುತ್ತಿದೆ. ವಿದೇಶಗಳಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. 2023ರಲ್ಲಿ ವಿದೇಶಿ ಪ್ರವಾಸಿಗರ ಭೇಟಿಯಲ್ಲಿ 43 ಪರ್ಸೆಂಟ್ ಹೆಚ್ಚಳವಾಗಿತ್ತು. ವಿದೇಶಿ ಪ್ರವಾಸಿಗರ ಭೇಟಿಗೆ ಹಾದಿ ಸುಗಮಗೊಳಿಸಿರುವುದು ಇದಕ್ಕೆ ಕಾರಣ. ಟ್ರಾವೆಲ್ ಆಂಡ್ ಟೂರಿಸಂ ಡೆವಲಪ್‌ಮೆಂಟ್ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನ 2024ರಲ್ಲಿ 39ಕ್ಕೆ ಸುಧಾರಿಸಿದೆ. ಇದು 2021ರಲ್ಲಿ 54ರಲ್ಲಿ ಇತ್ತು.
-ಕೇಶವ ಪ್ರಸಾದ್
ಭಾರತವು ವಿಶ್ವ ಪ್ರವಾಸೋದ್ಯಮದ ಆರ್ಥಿಕತೆಯಲ್ಲಿ 10ರಿಂದ 8ನೇ ಸ್ಥಾನಕ್ಕೆ ಏರಿಕೆಯಾಗಿದೆ. 2024ರಲ್ಲಿ 10ರಲ್ಲಿದ್ದ ದೇಶ ಇದೀಗ 8ಕ್ಕೆ ಮುಂದಡಿ ಇಟ್ಟಿದೆ. ವರ್ಲ್ಡ್ ಟ್ರಾವೆಲ್ & ಟೂರಿಸಂ ಕೌನ್ಸಿಲ್ (WTTC) ತನ್ನ ವರದಿಯಲ್ಲಿ ಈ ವಿಷಯ ತಿಳಿಸಿದೆ. ಸಂತಸದ ಸಂಗತಿ ಏನೆಂದರೆ 2034ರ ವೇಳೆಗೆ ಭಾರತವು 4ನೇ ಸ್ಥಾನದಲ್ಲಿ ವಿರಾಜಮಾನವಾಗುವ ನಿರೀಕ್ಷೆ ಇದೆ. 2023ರಲ್ಲಿ ಪ್ರವಾಸೋದ್ಯಮವು ಭಾರತದ ಆರ್ಥಿಕತೆಗೆ 199 ಶತಕೋಟಿ ಡಾಲರ್ ಆದಾಯ ನೀಡಿದ್ದರೆ, 3 ಕೋಟಿ 21 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತ್ತು. WTTC ಪ್ರಕಾರ 2024-25ರಲ್ಲಿ ಅತಿ ದೊಡ್ಡ ಪ್ರವಾಸೋದ್ಯಮದ ಆರ್ಥಿಕತೆಗಳು ಇಂತಿವೆ:
- ಅಮೆರಿಕ- ಜಿಡಿಪಿಗೆ ಕೊಡುಗೆ 2,360 ಶತಕೋಟಿ ಡಾಲರ್
- ಚೀನಾ- 1,300 ಶತಕೋಟಿ ಡಾಲರ್
- ಜರ್ಮನಿ- 487 ಶತಕೋಟಿ ಡಾಲರ್
- ಜಪಾನ್- 297 ಶತಕೋಟಿ ಡಾಲರ್.
- ಬ್ರಿಟನ್ : 295 ಶತಕೋಟಿ ಡಾಲರ್
- ಫ್ರಾನ್ಸ್ : 264 ಶತಕೋಟಿ ಡಾಲರ್
- ಮೆಕ್ಸಿಕೊ : 261 ಶತಕೋಟಿ ಡಾಲರ್
- ಭಾರತ : 231 ಶತಕೋಟಿ ಡಾಲರ್
- ಇಟಲಿ : 231 ಶತಕೋಟಿ ಡಾಲರ್
- ಸ್ಪೇನ್ : 227 ಶತಕೋಟಿ ಡಾಲರ್.
ಭಾರತವು 2034ರ ವೇಳೆಗೆ 400 ಶತಕೋಟಿ ಡಾಲರ್ ಮೌಲ್ಯದ ಪ್ರವಾಸೋದ್ಯಮ ಆರ್ಥಿಕತೆಯಾಗಲಿದೆ ಎಂದು ಡಬ್ಲ್ಯುಟಿಟಿಸಿ ಬಿಂಬಿಸಿದೆ. ಇದು ಜಿಡಿಪಿಯ 7.2 ಪರ್ಸೆಂಟ್ ಆಗುತ್ತದೆ ಹಾಗೂ 6.40 ಕೋಟಿ ಜನರಿಗೆ ಉದ್ಯೋಗಗಳನ್ನೂ ನೀಡಲಿದೆ. ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವದ ಅವಕಾಶಗಳು ಇವೆ. ಯುನೆಸ್ಕೊದ ವಿಶ್ವ ಪರಂಪರೆಯ ತಾಣಗಳಲ್ಲಿ 43 ಸ್ಥಳಗಳು ಇವೆ. ವಿಶಾಲವಾದ ಕರಾವಳಿ ಪ್ರದೇಶಗಳು ಇವೆ. ಹಿಮಾಲಯದ ಶೃಂಗಗಳು ಇವೆ. ಆಧ್ಯಾತ್ಮಿಕ, ಸನಾನತ ಪರಂಪರೆಯ ಭವ್ಯತೆ ಇದೆ. ಇದೆಲ್ಲವೂ ಆಧ್ಯಾತ್ಮಿಕ, ಸಾಂಸ್ಕೃತಿಕ, ಅಡ್ವೆಂಚರ್ ಮತ್ತು ವೆಲ್‌ನೆಸ್ ಟೂರಿಸಂಗೆ ಅಗಾಧ ಅವಕಾಶಗಳನ್ನು ಸೃಷ್ಟಿಸಿದೆ. ಕೇಂದ್ರ ಸರಕಾರವು 2047ರ ವೇಳೆಗೆ ರಾಷ್ಟ್ರೀಯ ಜಿಡಿಪಿಗೆ ಪ್ರವಾಸೋದ್ಯಮ ಮೂಲಕ 10 ಪರ್ಸೆಂಟ್ ಕೊಡುಗೆಯನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡಿದೆ.
2014ರ ಬಳಿಕ ಹಲವಾರು ಉಪಕ್ರಮಗಳು, ನೀತಿಗಳು ಮತ್ತು ಸುಧಾರಣಾ ಕ್ರಮಗಳು ಜರುಗಿವೆ. ಇದು ಪ್ರವಾಸೋದ್ಯಮದ ಚಿತ್ರಣವನ್ನು ಬದಲಿಸಿದೆ. ಹಲವಾರು ಸವಾಲುಗಳನ್ನು ಬಗೆಹರಿಸಿದೆ. ಪ್ರವಾಸೋದ್ಯವು ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿತ್ತು. ಜಾಗತಿಕ ಮಟ್ಟದಲ್ಲಿ ಅದರ ಪ್ರಮೋಶನ್ ನಡೆಯುತ್ತಿರಲಿಲ್ಲ. ಆಡಳಿತಶಾಹಿ ಅಡಚಣೆಗಳು ಧಾರಾಳವಾಗಿಯೇ ಇತ್ತು. 2014-15ರ ಬಳಿಕ ಥೀಮ್ ಅಧಾರಿತ ಪ್ರವಾಸೋದ್ಯಮಗಳ ಸರ್ಕ್ಯೂಟ್‌ಗಳನ್ನು ಜನಪ್ರಿಯಗೊಳಿಸಲಾಯಿತು. ಉದಾಹರಣೆಗೆ ಬೌದ್ಧ ಸರ್ಕ್ಯೂಟ್, ರಾಮಾಯಣ ಸರ್ಕ್ಯೂಟ್, ವನ್ಯಜೀವಿ ಸರ್ಕ್ಯೂಟ್‌ಗಳನ್ನು ಜನಪ್ರಿಯಗೊಳಿಸಲಾಯಿತು. ಆರಂಭಿಕ ಹಂತದ ಅಡಚಣೆಗಳ ಹೊರತಾಗಿಯೂ ಸ್ವದೇಶ ದರ್ಶನ 2.0 ಕ್ಕೆ 2022ರಲ್ಲಿ ಚಾಲನೆ ನೀಡಲಾಯಿತು. ಮಧ್ಯಪ್ರದೇಶದ ಒರ್ಛ, ಆಂಧ್ರಪ್ರದೇಶದ ಗಂಡಿಕೋಟ, ಬಿಹಾರದ ಬೋಧ್ ಗಯಾದಲ್ಲಿ ಸ್ಥಳೀಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಯಿತು. ಜತೆಗೆ ಸ್ಥಳೀಯ ಪರಿಸರ, ಸಂಸ್ಕೃತಿಯ ಪರಂಪರೆಗಳನ್ನು ಸಂರಕ್ಷಿಸಲಾಯಿತು. ಜನರಿಗೆ ಹೆಚ್ಚು ಚಿರಪರಿಚಿತವಲ್ಲದ ತಾಣಗಳನ್ನು ಸುಧಾರಿಸಲಾಯಿತು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಟೂರಿಸಂಗೆ ಪುಷ್ಟಿ ನೀಡುತ್ತದೆ.

ಕೇಂದ್ರ ಸರಕಾರವು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಸಾದಮ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಪಿಲಿಗ್ರಿಮೇಜ್ ರಿಜ್ಯುವೆನ್ಷನ್ ಆಂಡ್ ಸ್ಪಿರಿಚುವಲ್ ಆಗ್ಯುಮೆಂಟೇಶನ್ ಡ್ರೈವ್ ಎಂಬುದು ಇದರ ಪೂರ್ಣ ಹೆಸರು. ( PRASAD) ಇದು ಧಾರ್ಮಿಕ ಪ್ರವಾಸೋದ್ಯಮದ ಚೇತರಿಕೆಗೆ ಪುಷ್ಟಿ ಕೊಡುತ್ತದೆ.
2024ರಲ್ಲಿ 73 ಪ್ರಾಜೆಕ್ಟ್‌ಗಳು ಮಂಜೂರಾಗಿದೆ. 1400 ಕೋಟಿ ಹೂಡಿಕೆಯಾಗಿದೆ. ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್, ಕೇದಾರನಾಥ ಮತ್ತು ಅಯೋಧ್ಯಾದಲ್ಲಿ ಇದೇ ಯೋಜನೆಯ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದರಿಂದ ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗಿರುವುದು ಮಾತ್ರವಲ್ಲದೆ ಸ್ಥಳೀಯವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ. ಸ್ಥಳೀಯ ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ದೇಶದ ಪ್ರವಾಸೋದ್ಯಮ ನಕಾಶೆಯಲ್ಲಿಯೇ ಅಯೋಧ್ಯೆ ಮುಂಚೂಣಿಗೆ ಬಂದು ನಿಂತಿದೆ. ಇದರಿಂದ ಉತ್ತರಪ್ರದೇಶದ ಪ್ರವಾಸೋದ್ಯಮ ಗರಿಗೆದರಿದೆ.
ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಚಾರ ವೃದ್ಧಿಗೆ ಮೀಸಲಾದ ಯೋಜನೆ. ಇದು ಕೂಡ ಪ್ರವಾಸೋದ್ಯಮ ಆರ್ಥಿಕತೆಗೆ ಸಹಾಯಕವಾಗಿದೆ. 2014ರ ಬಳಿಕ 88 ಹೊಸ ವಿಮಾನ ನಿಲ್ದಾಣಗಳನ್ನು ತೆರೆಯಲಾಗಿದೆ. 2-3ನೇ ಸ್ಥರದ ತಾಣಗಳಿಗೆ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಗಳು 2014ರಲ್ಲಿ 91,000 ಕಿಲೋಮೀಟರ್ ಇದ್ದರೆ, 2025ರ ವೇಳೆಗೆ 1 ಲಕ್ಷ 46 ಸಾವಿರ ಕಿಲೋಮೀಟರ್‌ಗೆ ಏರಿಕೆ ಆಗಿದೆ. ರೈಲ್ವೇ ವಿದ್ಯುದೀಕರಣ 98 ಪರ್ಸೆಂಟ್ ಆಗಿದೆ. ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳು ದೇಶೀಯ ಪ್ರಯಾಣವನ್ನು ಮತ್ತಷ್ಟು ಸುಧಾರಿಸಿದೆ. ಇವುಗಳಲ್ಲಿ ಸುಲಲಿತವಾಗಿ, ಹೆಚ್ಚಿನ ಅನುಕೂಲಗಳೊಂದಿಗೆ ಪ್ರಯಾಣ ಬೆಳೆಸಬಹುದು. ವೇಗವಾಗಿ ಸ್ಥಳಗಳನ್ನು ತಲುಪಬಹುದು. ಸಮಯದ ಉಳಿತಾಯ, ಅನುಕೂಲ ಎರಡೂ ಪ್ರವಾಸಿಗರಿಗೆ ಇಲ್ಲಿ ಸಿಗುತ್ತದೆ. ಕೇಂದ್ರ ಬಜೆಟ್‌ನಲ್ಲಿ 2541 ಕೋಟಿ ರುಪಾಯಿಗಳನ್ನು ಪ್ರವಾಸೋದ್ಯಮಕ್ಕಾಗಿ ಮೀಸಲಿಡಲಾಗಿದೆ. ಪ್ರವಾಸೋದ್ಯಮಕ್ಕೆ ಎಷ್ಟಿದ್ದರೂ ಸಾಲದು ಎಂಬ ಪರಿಸ್ಥಿತಿ ಇದೆ. ಏಕೆಂದರೆ ಇದಕ್ಕೆ ಬೇಕಾಗುವ ಮೂಲಸೌಕರ್ಯಕ್ಕೆ ಹೆಚ್ಚಿನ ಬಂಡವಾಳ ಅಗತ್ಯ. ಆದರೆ ಒಂದು ಸಲ ಹಾಕಿದರೆ ದೀರ್ಘಾವಧಿಯ ಲಾಭ ಸಿಗುತ್ತದೆ. ದೇಶದಲ್ಲಿ 50 ಟಾಪ್ ಟೂರಿಸ್ಟ್ ತಾಣಗಳ ಅಭಿವೃದ್ಧಿ, ಹೋಮ್ ಸ್ಟೇಗಳಿಗೆ ಮುದ್ರಾ ಸಾಲ, ಇ-ವೀಸಾ ಪದ್ಧತಿ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇವೆಲ್ಲವೂ ಪ್ರವಾಸಿಗರಿಗೆ ಅನುಕೂಲಕರ. ಕೇಂದ್ರ ಸರಕಾರವು ಸ್ವದೇಶಿ ದರ್ಶನ್ 2.0 ಮತ್ತು ಮೆಡಿಕಲ್ ಟೂರಿಸಂ ಅನ್ನು ಜನಪ್ರಿಯಗೊಳಿಸಿದೆ. " ಭಾರತದಲ್ಲಿ ಆರೋಗ್ಯವಂತರಾಗಿʼ ಅಭಿಯಾನ ಕೈಗೊಳ್ಳಲಾಗಿದೆ. ಭಾರತವು ಗ್ಲೋಬಲ್ ಹೆಲ್ತ್‌ಕೇರ್ ತಾಣವಾಗುತ್ತಿದೆ. ವಿದೇಶಗಳಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. 2023ರಲ್ಲಿ ವಿದೇಶಿ ಪ್ರವಾಸಿಗರ ಭೇಟಿಯಲ್ಲಿ 43 ಪರ್ಸೆಂಟ್ ಹೆಚ್ಚಳವಾಗಿತ್ತು. ವಿದೇಶಿ ಪ್ರವಾಸಿಗರ ಭೇಟಿಗೆ ಹಾದಿ ಸುಗಮಗೊಳಿಸಿರುವುದು ಇದಕ್ಕೆ ಕಾರಣ. ಟ್ರಾವೆಲ್ ಆಂಡ್ ಟೂರಿಸಂ ಡೆವಲಪ್ ಮೆಂಟ್ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನ 2024ರಲ್ಲಿ 39ಕ್ಕೆ ಸುಧಾರಿಸಿದೆ. ಇದು 2021ರಲ್ಲಿ 54ರಲ್ಲಿ ಇತ್ತು. ಹೀಗಿದ್ದರೂ, ವಿದೇಶಿ ಪ್ರವಾಸಿಗರನ್ನು ಮತ್ತಷ್ಟು ಭಾರತ ಸೆಳೆಯಬೇಕಿದೆ. ಆಗ ಆದಾಯದ ದೃಷ್ಟಿಯಿಂದಲೂ ಭಾರತ ಬಹು ದೂರ ಕ್ರಮಿಸಬಹುದು. ಮಹತ್ತರ ಸಾಧನೆಗೆ ಪಾತ್ರವಾಗಬಹುದು. ವಿಮಾನ-ರೈಲ್ವೆ-ರಸ್ತೆ ಸಂಪರ್ಕಗಳು ವ್ಯಾಪಕವಾಗಬೇಕು. ಭಾರತವು ಬಂದರುಗಳ ಅಭಿವೃದ್ಧಿಯ ಮೂಲಕವೂ ಟೂರಿಸಂ ಎಕಾನಮಿಯನ್ನು ಬಲಪಡಿಸುತ್ತಿದೆ. ಮೊಬೈಲ್ ಅಪ್ಲಿಕೇಶನ್, ವರ್ಚುವಲ್ ಟೂರ್‌ಗಳು, ಆನ್‌ಲೈನ್ ಬುಕಿಂಗ್ ಪ್ಲಾಟ್ ಫಾರ್ಮ್‌ಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಆಗಿದೆ. 145 ತಾಣಗಳಲ್ಲಿ 12,187 ಅಭ್ಯರ್ಥಿಗಳಿಗೆ ಟೂರಿಸಂ ಕ್ಷೇತ್ರದಲ್ಲಿ ವಿಶೇಷ ಕೌಶಲ ತರಬೇತಿ ನೀಡಲಾಗಿದೆ. ತಾಜ್ ಮಹಲ್, ಹಂಪಿ, ಅಜಂತಾ ಎಲ್ಲೋರಾ ಗುಹೆಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದ್ದು,ಲಕ್ಷಾಂತರ ಪ್ರವಾಸಿಗರನ್ನು ಪ್ರತಿ ವರ್ಷ ಆಕರ್ಷಿಸುತ್ತಿದೆ. ನಮ್ಮ ಧಾರ್ಮಿಕ ಕ್ಷೇತ್ರಗಳು, ಆರೋಗ್ಯ ಧಾಮಗಳು ಪ್ರವಾಸೋದ್ಯಮವನ್ನು ಬಲಪಡಿಸುತ್ತಿವೆ. ಧಾರ್ಮಿಕ ಪ್ರವಾಸೋದ್ಯಮವು ಎಕಾನಮಿಗೆ ಆಧಾರವಾಗಿದೆ. ರಾಮಜನ್ಮಭೂಮಿ ಮಂದಿರ, ಕಾಶಿ ವಿಶ್ವನಾಥ ದೇವಾಲಯ, ಉಜ್ಜಯನಿಯ ಮಹಾಕಾಲ ಮಂದಿರಗಳಿಗೆ ಜನರ ಸಂದರ್ಶನ ಹೆಚ್ಚುತ್ತಿದೆ. ಆಯುರ್ವೇದ-ಯೋಗಗಳು ವಿಶ್ವ ವಿಖ್ಯಾತವಾಗಿರುವುದು ಮಾತ್ರವಲ್ಲದೆ, ಪ್ರವಾಸಿಗರನ್ನು ಸೆಳೆಯುತ್ತಿದೆ.

ಭಾರತವು ಅದ್ಭುತ ನೈಸರ್ಗಿಕ ಪ್ರದೇಶಗಳನ್ನು ಹೊಂದಿರುವುದರಿಂದ ಚಾರಣದ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸುತ್ತಿದೆ. ಜನಪ್ರಿಯಗೊಳಿಸುತ್ತಿದೆ. ಗ್ರಾಮೀಣ ಪ್ರವಾಸೋದ್ಯಮವನ್ನು ಪರಿಚಯಿಸುತ್ತಿದೆ. 2024ರಲ್ಲಿ ದೇಶೀಯ ಟೂರಿಸಂನಲ್ಲಿ 15.5 ಲಕ್ಷ ಕೋಟಿ ರುಪಾಯಿ ವೆಚ್ಚವಾಗಿದೆ. 2023ರ ವೇಳೆಗೆ ಈ ಸೆಕ್ಟರ್‌ನಲ್ಲಿ 4.3 ಕೋಟಿ ಉದ್ಯೋಗಗಳಿತ್ತು. 2024ರಲ್ಲಿ ಹೆಚ್ಚುವರಿ 24 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2029ರ ವೇಳೆಗೆ 5.3 ಕೋಟಿ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಪ್ರವಾಸೋದ್ಯಮ ಆದಾಯ ತರುವುದರ ಜತೆಗೆ ಯುವಜನತೆಗೆ , ಮಹಿಳೆಯರಿಗೆ, ಗ್ರಾಮೀಣ ಜನರಿಗೆ ಹೇರಳ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಸ್ಥಳೀಯ ಕರಕುಶಲಕಲೆಗಳನ್ನು ಉತ್ತೇಜಿಸುತ್ತದೆ. 2023ರಲ್ಲಿ ಟೂರಿಸಂನಲ್ಲಿ ವಿದೇಶಿ ವಿನಿಮಯದ ಗಳಿಕೆ 2.31 ಲಕ್ಷ ಕೋಟಿಗೆ ಏರಿತ್ತು. 2025ರಲ್ಲಿ ಭಾರತವು ಜಾಗತಿಕ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ ಎಂಟನೇ ಸ್ಥಾನಕ್ಕೆ ಏರಿಕೆ ಆಗಿರುವುದರಿಂದ 231 ಶತಕೋಟಿ ಡಾಲರ್ ಸಂಪತ್ತು ಸೃಷ್ಟಿಯಾಗಿದೆ. 2047ರ ವೇಳೆಗೆ ಭಾರತವು 3 ಲಕ್ಷ ಕೋಟಿ ಡಾಲರ್ ಗಾತ್ರದ ಭವ್ಯ ದಿವ್ಯ ಗಾತ್ರದ ಟೂರಿಸಂ ಎಕಾನಮಿಯಾಗುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಆ ಉತ್ಸಾಹ ನೂರ್ಮಡಿಸಲಿ ಎಂಬುದು ಎಲ್ಲರ ಹಾರೈಕೆ. ಪ್ರವಾಸಿಗಳ ಅಶಯ.