ಇದು ವಿಮಾನವನ್ನು ಕೆಳಗಿಳಿಸುವುದಷ್ಟೇ ಅಲ್ಲ
ಅಷ್ಟಕ್ಕೂ ಲ್ಯಾಂಡಿಂಗ್ ಒಂದು ಸಂಕೀರ್ಣವಾದ, ಪೂರ್ವಯೋಜಿತ ಪ್ರಕ್ರಿಯೆಯಾಗಿದ್ದು, ಅದು ಹಲವು ಹಂತಗಳನ್ನು ಒಳಗೊಂಡಿದೆ. ಲ್ಯಾಂಡಿಂಗ್‌ನಲ್ಲಿ ಫ್ಲೇರ್(Flare) ಎನ್ನುವುದು ನಿರ್ಣಾಯಕ ಹಂತ. ವಿಮಾನವು ರನ್‌ವೇಗೆ ಹತ್ತಿರವಾದಾಗ, ಪೈಲಟ್‌ಗಳು ವಿಮಾನದ ಮೂಗ(nose)ನ್ನು ನಿಧಾನವಾಗಿ ಮೇಲಕ್ಕೆತ್ತುತ್ತಾರೆ. ಇದರಿಂದ ವಿಮಾನದ ಇಳಿಯುವ ವೇಗ(descent rate) ಕಡಿಮೆಯಾಗುತ್ತದೆ.
ವಿಮಾನ ಲ್ಯಾಂಡಿಂಗ್ ಬಗ್ಗೆ ಒಂದು ತಮಾಷೆಯ, ಆದರೆ ವಾಸ್ತವಿಕವಾದ ಮಾತಿದೆ- ‘ವಿಮಾನ ಲ್ಯಾಂಡ್ ಆದ ಬಳಿಕ ಪ್ರಯಾಣಿಕರೆಲ್ಲ ಸಲೀಸಾಗಿ ನಡೆದು ಹೋದರೆ ಅದು ಒಳ್ಳೆಯ ಲ್ಯಾಂಡಿಂಗ್. ಅದೇ ವಿಮಾನ ಮರುದಿನವೂ ಹಾರುವಂತಾದರೆ, ಅದು ಅತ್ಯದ್ಭುತ ಲ್ಯಾಂಡಿಂಗ್’.
ಲ್ಯಾಂಡಿಂಗ್ ಒಂದು ಅಪರೂಪದ ಕಲೆ. ಈ ಕಲೆಯಲ್ಲಿ ಯಾವತ್ತೂ ಪರಿಣತಿ ಸಾಧಿಸಿದ್ದೇನೆ ಎಂದು ಹೇಳುವ ಪೈಲಟ್ ಇಲ್ಲವಂತೆ. ಲ್ಯಾಂಡಿಂಗ್ (ವಿಮಾನವನ್ನು ಭೂಮಿಗೆ ಇಳಿಸುವುದು) ಎನ್ನುವುದು ಪೈಲಟ್‌ಗಳ ಕೌಶಲ ಮತ್ತು ಪರಿಣತಿಯ ನಿಜವಾದ ಪರೀಕ್ಷೆ. ಇದು ಕೇವಲ ವಿಮಾನವನ್ನು ಕೆಳಗಿಳಿಸುವುದಲ್ಲ, ಬದಲಿಗೆ ಪ್ರಯಾಣಿಕರ ಭದ್ರತೆ, ಸುರಕ್ಷತೆ ಮತ್ತು ಆರಾಮವನ್ನು ಖಚಿತಪಡಿಸಿಕೊಳ್ಳುವುದು ಕೂಡ ಹೌದು.

ಅಷ್ಟಕ್ಕೂ ಲ್ಯಾಂಡಿಂಗ್ ಒಂದು ಸಂಕೀರ್ಣವಾದ, ಪೂರ್ವಯೋಜಿತ ಪ್ರಕ್ರಿಯೆಯಾಗಿದ್ದು, ಅದು ಹಲವು ಹಂತಗಳನ್ನು ಒಳಗೊಂಡಿದೆ. ಲ್ಯಾಂಡಿಂಗ್‌ನಲ್ಲಿ ಫ್ಲೇರ್(Flare)ಎನ್ನುವುದು ನಿರ್ಣಾಯಕ ಹಂತ. ವಿಮಾನವು ರನ್‌ವೇಗೆ ಹತ್ತಿರವಾದಾಗ, ಪೈಲಟ್‌ಗಳು ವಿಮಾನದ ಮೂಗ(nose)ನ್ನು ನಿಧಾನವಾಗಿ ಮೇಲಕ್ಕೆತ್ತುತ್ತಾರೆ. ಇದರಿಂದ ವಿಮಾನದ ಇಳಿಯುವ ವೇಗ(descent rate) ಕಡಿಮೆಯಾಗುತ್ತದೆ.
ಇದನ್ನೂ ಓದಿ: ವಿಮಾನ ನಿರ್ವಹಣಾ ತಂತ್ರಜ್ಞರು
ನಂತರ ವಿಮಾನವು ‘ಮೃದುವಾಗಿ’ ರನ್‌ವೇಯನ್ನು ಸ್ಪರ್ಶಿಸುತ್ತದೆ. ಇದು ‘ಫ್ಲೇರ್’. ಇದರ ನಂತರ, ವಿಮಾನದ ಮುಖ್ಯ ಚಕ್ರಗಳು(main wheels) ಮೊದಲು ರನ್‌ವೇಯನ್ನು ಸ್ಪರ್ಶಿಸುತ್ತವೆ. ನಂತರ ವಿಮಾನದ ಮುಂಭಾಗದ ಚಕ್ರ(nose wheel) ಸ್ಪರ್ಶಿಸುತ್ತದೆ. ಇದು ವಿಮಾನದ ಸಮತೋಲನ ಕ್ಕೆ ಅತಿ ಮುಖ್ಯ. ಇದನ್ನು ಟಚ್‌ಡೌನ್(Touchdown) ಅಂತಾರೆ. ವಿಮಾನದ ಚಕ್ರಗಳು ರನ್‌ವೇಯನ್ನು ಸ್ಪರ್ಶಿಸಿದ ತಕ್ಷಣ, ರೆಕ್ಕೆಗಳ ಮೇಲೆ ಇರುವ ‘ಸ್ಪಾಯಿಲರ್‌ಗಳು’ ಅಥವಾ ‘ಗ್ರೌಂಡ್ ಸ್ಪಾಯಿಲರ್’ಗಳು ಸ್ವಯಂಚಾಲಿತವಾಗಿ ಅಥವಾ ಪೈಲಟ್‌ನಿಂದ ಮೇಲಕ್ಕೆ ಏಳುತ್ತವೆ.
ಇವುಗಳ ಮುಖ್ಯ ಕಾರ್ಯವೆಂದರೆ ವಿಮಾನದ ರೆಕ್ಕೆಗಳ ಮೇಲೆ ಉತ್ಪತ್ತಿಯಾಗುವ ‘ಲಿಫ್ಟ್’ ಅನ್ನು ನಿಯಂತ್ರಿಸುವುದು. ಲಿಫ್ಟ್ ಇಲ್ಲದಿದ್ದಾಗ, ವಿಮಾನದ ಸಂಪೂರ್ಣ ತೂಕವು ಚಕ್ರಗಳ ಮೇಲೆ ಬೀಳುತ್ತದೆ. ಇದು ಬ್ರೇಕಿಂಗ್‌ಗೆ ಹೆಚ್ಚು ಪರಿಣಾಮಕಾರಿ. ಸ್ಪಾಯಿಲರ್‌ಗಳು ಗಾಳಿಯ ಪ್ರತಿರೋಧವನ್ನು(air resistance) ಹೆಚ್ಚಿಸುತ್ತವೆ, ಇದರಿಂದ ವಿಮಾನದ ವೇಗ ಬಹುಬೇಗ ಕಡಿಮೆಯಾಗುತ್ತದೆ.
ಸ್ಪಾಯಿಲರ್‌ಗಳ ನಿಯೋಜನೆಯ ನಂತರ, ಪೈಲಟ್ ಗಳು ಕ್ರಮೇಣ ಬ್ರೇಕ್‌ಗಳನ್ನು ಅನ್ವಯಿಸುತ್ತಾರೆ. ಇದರೊಂದಿಗೆ, ‘ರಿವರ್ಸ್ ಥ್ರಸ್ಟ್’ ಅನ್ನು ಸಹ ಬಳಸುತ್ತಾರೆ. ರಿವರ್ಸ್ ಥ್ರಸ್ಟ್ ಎಂದರೆ ಎಂಜಿನ್‌ನಿಂದ ಹೊರಬರುವ ಗಾಳಿಯ ಹರಿವನ್ನು ಮುಂದಕ್ಕೆ ತಿರುಗಿಸುವುದು. ಇದು ವಿಮಾನವನ್ನು ನಿಲ್ಲಿಸಲು ಸುಮಾರು ಶೇ.30-50ರಷ್ಟು ಬ್ರೇಕಿಂಗ್ ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ವಿಮಾನಗಳಲ್ಲಿ ಚಕ್ರಗಳ ಬ್ರೇಕಿಂಗ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)ನ್ನು ಹೊಂದಿರುತ್ತವೆ.
ಇದು ಕಾರುಗಳಲ್ಲಿರುವಂತೆ, ಸ್ಕಿಡ್ ಆಗುವುದನ್ನು ತಡೆಯುತ್ತದೆ ಮತ್ತು ಸುರಕ್ಷಿತ ಬ್ರೇಕಿಂಗ್ ಅನ್ನು ಖಚಿತಪಡಿಸುತ್ತದೆ. ಯಾವತ್ತೂ ಸುಲಲಿತ, ಹಿತವಾದ ಅಥವಾ ಮೃದು ಲ್ಯಾಂಡಿಂಗ್ (Smooth landings)ಗೆ ಆದ್ಯತೆ ನೀಡಲಾಗುತ್ತದೆ. ಅದು ಮೂಲಭೂತವಾಗಿ ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಅತಿ ಕಡಿಮೆ ಅಂತರದಲ್ಲಿ ವಿಮಾನವನ್ನು ನಿಲ್ಲಿಸುವುದಕ್ಕಿಂತ, ಮೃದುವಾದ ಸ್ಪರ್ಶ ಮತ್ತು ಸುಗಮ ನಿಲುಗಡೆ ಮುಖ್ಯ. ಇದು ಪೈಲಟ್‌ನ ಕೌಶಲದ ಸಂಕೇತವೂ ಹೌದು.

ಸಾಮಾನ್ಯವಾಗಿ ಒದ್ದೆಯಾದ (wet) ಅಥವಾ ಕಡಿಮೆ ಉದ್ದದ ರನ್ ವೇಗಳಲ್ಲಿ ವಿಮಾನವನ್ನು ಗಕ್ಕನೆ ನಿಲ್ಲಿಸುತ್ತಾರೆ. ಇದನ್ನು ಹಾರ್ಡ್ ಬ್ರೇಕಿಂಗ್ ಅಂತಾರೆ. ಕೆಲವು ಸಂದರ್ಭಗಳಲ್ಲಿ ಸುರಕ್ಷತೆಗಾಗಿ ಹಾಗೆ ನಿಲ್ಲಿಸುವುದು ಅನಿವಾರ್ಯ. ಅನೇಕ ಆಧುನಿಕ ವಿಮಾನಗಳು ಆಟೋಬ್ರೇಕ್ ವ್ಯವಸ್ಥೆಯನ್ನು ಹೊಂದಿರುತ್ತವೆ. ವಿಮಾನವು ರನ್‌ವೇಯನ್ನು ಸ್ಪರ್ಶಿಸಿದ ತಕ್ಷಣ, ವ್ಯವಸ್ಥೆಯು ಸ್ವಯಂಚಾಲಿತವಾಗಿ ಆಯ್ದ ಮಟ್ಟದ ಬ್ರೇಕಿಂಗ್ ಅನ್ನು ಅನ್ವಯಿಸುತ್ತದೆ. ಇದು ಪೈಲಟ್‌ನ ಕಾರ್ಯಭಾರವನ್ನು ಕಡಿಮೆ ಮಾಡಿ ಸ್ಥಿರ ಬ್ರೇಕಿಂಗ್ ಅನ್ನು ಒದಗಿಸುತ್ತದೆ.
ಒಮ್ಮೊಮ್ಮೆ ಬೆಣ್ಣೆಯಂತೆ ನಯವಾದ, ಮೆತ್ತನೆಯ ಬಹುತೇಕ ಅನುಭವಕ್ಕೆ ಬಾರದ ರೀತಿಯಲ್ಲಿ ಲ್ಯಾಂಡಿಂಗ್ ಮಾಡುತ್ತಾರೆ. ಇದನ್ನು Butter-smooth glide ಅಂತಾರೆ. ಕೆಲವೊಮ್ಮೆ ಕಡಿಮೆ ರನ್‌ವೇ ಇದ್ದಾಗ ವೇಗವಾಗಿ ಲ್ಯಾಂಡಿಂಗ್ ಮಾಡುತ್ತಾರೆ. ಇದನ್ನು Short-field performance ಅಂತಾರೆ. ಒಮ್ಮೊಮ್ಮೆ ವಿಮಾನವು ರನ್‌ವೇಯನ್ನು ಸ್ಪರ್ಶಿಸಿದ್ದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಅದು ಹಾರ್ಡ್ ಲ್ಯಾಂಡಿಂಗ್ ಅಲ್ಲ, ಹಾಗಂತ ಮೃದುವೂ ಅಲ್ಲ. ಅದನ್ನು Firm positive touchdown ಅಂತಾರೆ.