• ರಂಗಸ್ವಾಮಿ ಮೂಕನಹಳ್ಳಿ

ಕೊಲಂಬಸ್, ಸ್ಪೇನಿನ ನೆಲದಾಹಕ್ಕೆ ಮೊದಲು ನಾಂದಿ ಹಾಕಿದ. ಆತ ಅಮೆರಿಕವನ್ನು ಪತ್ತೆ ಮಾಡಿದ ಮೇಲೆ ಏನೆಲ್ಲ ಬದಲಾವಣೆ ಆಗಿದೆ ಗೊತ್ತೆ? 19ನೆಯ ಶತಮಾನದವರೆಗೂ ಸ್ಪೇನ್ ವೆಸ್ಟ್ ಇಂಡೀಸಿನಿಂದ ಮೆಕ್ಸಿಕೋವರೆಗೆ ತನ್ನ ವಸಾಹತನ್ನು ವಿಸ್ತರಿಸಿಕೊಂಡಿತ್ತು. ಪರ ನೆಲದಲ್ಲಿ ತನ್ನ ಸಂಸ್ಕೃತಿ ಬೆಳೆಸಿಕೊಂಡು, ಅಲ್ಲಿನ ಸಂಪನ್ಮೂಲವನ್ನು ಲಪಟಾಯಿಸಿ, ಲ್ಯಾಟಿನ್ ಅಮೆರಿಕ ಎಂಬ ಭಾಗವನ್ನೇ ಸೃಷ್ಟಿ ಮಾಡಿತು ಇಂಕಾ - ಮಾಯಾಗಳನ್ನು ದೋಚಿತು'.

ನಿಜ ಹೇಳಬೇಕೆಂದರೆ ಸ್ಪೇನ್ ಎನ್ನುವ ದೇಶವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ ! ಕೊಲಂಬಸ್ , ವಾಸ್ಕೊ ದೆ ಗಾಮ (ನಾವು ಅಂದು ಕೊಂಡಂತೆ ವಾಸ್ಕೊಡಿಗಾಮ ಅಲ್ಲ!) ಎನ್ನುವ ಹೆಸರುಗಳನ್ನು ಕೇಳಿದ್ದು ಬಿಟ್ಟರೆ ಹೆಚ್ಚಿನ ಮಾಹಿತಿ ನನಗಂತೂ ಗೊತ್ತಿರಲಿಲ್ಲ. ಇನ್ನು ಗೂಳಿ ಕಾಳಗದ ಬಗ್ಗೆ ನನಗೆಲ್ಲಿ ತಿಳಿದಿರಬೇಕು ?

ಇದನ್ನೂ ಓದಿ: ಗೌದಿಯ ನಾಡು, ಕತಲಾನಾರ ಹೆಮ್ಮೆಯ ಗೂಡು !

ಗುಬ್ಬಚ್ಚಿ ಮರಿ ಮನೆಯ ಚಾವಣಿಯ ಗೂಡಿನಿಂದ ಬಿದ್ದು ವಿಲಿವಿಲಿ ಒದ್ದಾಡಿ ಸತ್ತಾಗ ನಾನೂ ಹಿಂಸೆ ಪಟ್ಟಿದ್ದ ಆ ದಿನಗಳು ಈಗಲೂ ಮನಸಿನಲ್ಲಿ ಅಚ್ಚೊತ್ತಿದೆ. ನನ್ನಂಥವನಿಗೆ ಗೂಳಿ ಕಾಳಗ ಮೆಚ್ಚುವುದಾಗಲಿ, ಅನುಭವಗಳಿಸುವುದಾಗಲಿ ಅಸಾಧ್ಯ. ಆದರೂ ಸ್ಪೇನಿನ ಗೂಳಿ ಕಾಳಗದ ಒಂದು ತುಣುಕನ್ನಾದರೂ ತಿಳಿಯಬೇಕೆಂದು ಬಯಸಿದೆ. ಜತೆಯಲ್ಲಿದ್ದ ಸ್ನೇಹಿತೆ ನೂರಿಯನ್ನು `ನಿನಗೆ ಗೊತ್ತೆ ಗೂಳಿ ಕಾಳಗ?' ಎಂದೆ. ಆಕೆ ಕಿಂಡರ್ ಗಾರ್ಟನ್ ಟೀಚರ್. ಮೋನ್ಸಿ ಎಂದಾದರೂ ಗೂಳಿ ಕಾಳಗಕ್ಕೆ ಹೋಗಿದ್ದೀಯಾ?' ಎಂದು ಪ್ರಶ್ನಿಸಿದ್ದೆ. ಈಕೆ ಅಂದಿನ ನನ್ನ ಆಫೀಸಿನಲ್ಲಿ ಅಕೌಂಟೆಂಟ್. ಯವಾ, ಕೂಡ ಅಷ್ಟೇ. ನಿನಗೆ ಅದರಲ್ಲಿ ಆಸಕ್ತಿ ಇದೆಯೆ?' ಎಂದು ಅವಳನ್ನೂ ಕೆಣಕಿದ್ದೆ. `ಒಲ್ಗಾ, ಗೂಳಿ ಕಾಳಗದಲ್ಲಿ ಏನು ಎಕನಾಮಿಕ್ಸ್ ಹುದುಗಿದೆ, ಆ ಬ್ಯುಸಿನೆಸ್ ಏನು ಬಿಡಿಸಿ ಹೇಳು' ಎಂದು ಬಯೋ ಕೆಮಿಸ್ಟ್ ಆದ ಅವಳನ್ನೂ ಕೆಣಕಿದ್ದೆ. ಅವರೆಲ್ಲರ ಒಟ್ಟಾಭಿಪ್ರಾಯವ ಗೂಳಿಕಾಳಗದ ವಿರುದ್ಧವಿತ್ತು! ಹಾಗೆ ನೋಡಿದರೆ ಬಾರ್ಸಿಲೋನಾದ ಯಾವ ವ್ಯಕ್ತಿಯೂ ಗೂಳಿ ಕಾಳಗದ ಪರ ಇಲ್ಲ. ಅದರ ಬಗ್ಗೆ ವಿಶೇಷ ಆಸಕ್ತಿಯೂ ಇಲ್ಲ. ಏನಿದ್ದರೂ ಈ ಐಲಾಟ, ಮೃಗೀಯ ವಿನೋದ ವಿದೇಶಿಯರದ್ದು. ಇಲ್ಲಿ ಮಧ್ಯಮ ವರ್ಗದವರೆಂದರೆ ಕಾರು, ಬಾರಿನವರಲ್ಲ. ಅವರದೇನಿದ್ದರೂ ಟ್ರೇನಿನಲ್ಲಿ ಓಡಾಟ. ಬಾರ್ಸಿಲೋನಾದಲ್ಲಿ ಹತ್ತು ಜನರಲ್ಲಿ ಒಬ್ಬ ಇದು ನಮ್ಮ ಸಾಂಪ್ರದಾಯಿಕ ಕ್ರೀಡೆ ಎಂದು ಪೆದ್ದು ಪೆದ್ದಾಗಿ ಸಮರ್ಥಿಸಿಕೊಂಡರೆ ಉಳಿದ ಒಂಬತ್ತು ಮಂದಿಗೆ ಅದು ಪ್ರಾಣಿಗಳ ಮೇಲಿನ ಕ್ರೌರ್ಯದ ಪ್ರತೀಕ. ಅಲ್ಲದೆ, ಅದು ಸ್ಪೇನ್ ನಲ್ಲಿನ ಕಲೆಯಿರಬಹುದು, ಅದೆಲ್ಲ ಮ್ಯಾಡ್ರಿಡ್ ನಲ್ಲಿರಬಹುದು. ಆದರೆ ಇದು ಬಾರ್ಸಿಲೋನಾ, ಕತಲೋನಿಯದ ರಾಜಧಾನಿ ಎಂದು ಎದೆ ಸೆಟೆದು ಹೇಳುತ್ತ, ಭಾಷಿಕವಾಗಿ, ರಾಜಕೀಯವಾಗಿ ಈ ಕ್ರೀಡೆಯನ್ನು ನೋಡುತ್ತ ಉಪೇಕ್ಷಿಸುವವರೇ ಹೆಚ್ಚು.

Untitled design - 2026-04-30T184610.938

ಕ್ರಿ.ಶ. 2004ರಲ್ಲಿ ಬಾರ್ಸಿಲೋನಾದ ಪ್ರಾಂತ್ಯ ಸರ್ಕಾರ ಗೂಳಿ ಕಾಳಗವನ್ನು ನಿಷೇಧಿಸಿತ್ತು. ಜನಮತ ಸಂಗ್ರಹಿಸಿತ್ತು. ಎರಡೂವರೆ ಲಕ್ಷ ಮಂದಿ ಗೂಳಿ ಕಾಳಗದ ವಿರುದ್ಧ ಕಾಳಗವನ್ನೇ ಘೋಷಿಸಿದ್ದರು. ದುರದೃಷ್ಟವೆಂದರೆ ಅನಂತರ ಕೆಲವು ರಾಜಕೀಯ ಒತ್ತಡಗಳಿಗೆ ಮಣಿದು ಈ ನಿಷೇಧವನ್ನು ಸರ್ಕಾರ ಹಿಂದೆ ಪಡೆದುಕೊಂಡಿತು. ಬಾರ್ಸಿಲೋನಾ ಎಂದರೆ ಅದು ಸಾಂಸ್ಕೃತಿಕ ರಾಜಧಾನಿ ಎಂದೇ ಯುರೋಪಿನಲ್ಲೆಲ್ಲ ಪರಿಚಿತವಾಗಿರುವಾಗ ಗೂಳಿ ಕಾಳಗದಂಥ ಕಪ್ಪು ಚುಕ್ಕೆ ನಮಗೇಕೆ ಎಂದು ರಾಷ್ಟ್ರಾಭಿಮಾನ ತೋರುವ ಪ್ರಜ್ಞಾವಂತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ, ಯಾವುದು ಸ್ಪ್ಯಾನಿಷ್ ಅನಿಸುತ್ತದೆಯೋ ಅದನ್ನೆಲ್ಲ ಹಂತಹಂತವಾಗಿ ಸಾರಾಸಗಟಾಗಿ ತಿರಸ್ಕರಿಸುವ ಮನೋಭಾವ ಇಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ನಮ್ಮದೇ ಪ್ರತ್ಯೇಕ ದೇಶ ಬೇಕು ಎಂಬ ಪ್ರತ್ಯೇಕತಾ ಕೂಗು ಕೂಡ ಎದ್ದಿದೆ. ಐತಿಹಾಸಿಕ ಕಾರಣಕ್ಕಾಗಿ ಇಲ್ಲಿ ಗೂಳಿ ಕಾಳಗದ ಮೂರು ಅಖಾಡಗಳು ಇವೆ. ಪ್ಲಾಜಾ ದೆಲ್ ಎ ತೋರಿನ್ 1834ರಲ್ಲೇ ನಿರ್ಮಿತವಾದ್ದು. ಈಗ ಬಿಕೋ ಎನ್ನುತ್ತಿದೆ. ಪ್ಲಾಜಾ ದೆಲಾಸ್ ಅರೆನಾಸ್ 1900ರಲ್ಲಿ ನಿರ್ಮಿತವಾದ್ದು. ಅದರದ್ದೂ ಇದೇ ಕಥೆ. ಈಗ ಅಖಾಡ ಎಂದು ಹೇಳಿಕೊಳ್ಳಬಹುದಾದ ಪ್ಲಾಜಾ ತೋರೋಸ್ ಮಾನ್ಯುಮೆಂಟೋ 1914ರಲ್ಲಿ ನಿರ್ಮಿತವಾದ್ದು. ಜಗತ್ತು ಮೊದಲ ಮಹಾಯುದ್ಧದಲ್ಲಿ ತೊಡಗಿದ್ದಾಗ ಸ್ಪ್ಯಾನಿಷರು ಇಲ್ಲಿ ಗೂಳಿಗಳೊಡನೆ ಯುದ್ಧ ಮಾಡುತ್ತಿದ್ದರು ಎಂದು ವ್ಯಂಗ್ಯವಾಡುವವರೂ ಉಂಟು. ವಾಸ್ತವವಾಗಿ ಪ್ಲಾಜಾ ತೋರಾಸ್ ಮಾನ್ಯುಮೆಂಟಿನಲ್ಲಿ ಬೇಸಿಗೆಯ ಭಾನುವಾರಗಳಂದು ಈ ಕ್ರೀಡೆ ನಡೆಯುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಈ ಒಂದು ಅಖಾಡದಲ್ಲೇ ಪ್ರತಿ ವರ್ಷ ನೂರು ಗೂಳಿಗಳು ಬುಲ್ ಫೈಟರುಗಳ ಕತ್ತಿಗೆ ಬಲಿಯಾಗಿ ನರಳಿ ನರಳಿ ಸಾವನ್ನಪ್ಪುತ್ತವೆ. ಪ್ರವಾಸಿಗಳ ಮನೋ ವೈಕಲ್ಯವೇ ಒಂದು ಬಗೆ. ಸ್ಪೇನ್ ಎಂದರೆ ಗೂಳಿ ಕಾಳಗ ನೋಡದೆ ಹೋಗುವುದುಂಟೆ ಎನ್ನುವವರೂ ಉಂಟು. ಸ್ಥಳೀಯರು ಇದನ್ನು ವಿರೋಧಿಸುತ್ತಾರೆ ಎಂದು ನಾಡಿಮಿಡಿತ ಗೊತ್ತಾಗುತ್ತಲೇ ಈ ಅಖಾಡಗಳು ಬಣಗುಟ್ಟುವುದುಂಟು. ಬಾರ್ಸಿಲೋನಾ ಈ ಹಿಂಸಾ ಪ್ರವೃತ್ತಿಗೆ ಪ್ರತಿರೋಧ ಒಡ್ಡಿದ್ದರೂ ಅಂದಲೂಸಿಯ ಮತ್ತು ದೇಶದ ರಾಜಧಾನಿ ಮ್ಯಾಡ್ರಿಡ್ ಈ ಕ್ರೀಡೆಗೆ ಈಗಲೂ ಕುಮ್ಮಕ್ಕು ಕೊಡುತ್ತಿವೆ. ರಾಷ್ಟ್ರೀಯ ಸ್ಪ್ಯಾನಿಷ್ ನೆಟ್ ವರ್ಕ್ ತನ್ನ ಮುಖ್ಯ ವಾಹಿನಿಯಲ್ಲಿ `ಪ್ರೈಮ್ ಟೈಂ ಈವೆಂಟ್' ಎಂದು ಗೂಳಿ ಕಾಳಗವನ್ನು ಬಿತ್ತರಿಸುವುದುಂಟು.

ಅಮೆರಿಕ, ಮೆಕ್ಸಿಕೋ, ಸ್ಪೇನ್ ಗೂಳಿಗಳು ಕಾಳಗಕ್ಕೆ ಲಾಗಾಯ್ತಿನಿಂದ ಹೆಸರಾದವು. ಮನುಷ್ಯ ಮತ್ತು ಹಿಂಸ್ರಕ ಪ್ರಾಣಿಗಳ ನಡುವೆ ನಡೆಯುವ ಸ್ಪರ್ಧೆ ಇದು ಎನ್ನುವ ಕುಟಿಲೋಕ್ತಿ ಮಾತುಗಳಿಂದ ಪ್ರವಾಸಿಗಳನ್ನು ಇಂಥ ಕ್ರೀಡೆಗಳಿಗೆ ಆಹ್ವಾನಿಸಲಾಗುತ್ತದೆ. ವಾಸ್ತವವಾಗಿ ಒಮ್ಮೆ ಭೇಟಿ ಕೊಟ್ಟ ಪ್ರೇಕ್ಷಕ ಮತ್ತೊಂದು ಷೋಗೆ ತನ್ನ ಜೀವಮಾನದಲ್ಲಿ ಬರುವುದಿಲ್ಲ ಎನ್ನುವುದು ಹೋಗಿ ಬಂದವರ ಅನುಭವ. ಒಳಗುಟ್ಟೇನು ಗೊತ್ತೆ? ವಾಸ್ತವವಾಗಿ ಮನುಷ್ಯ ಮತ್ತು ಗೂಳಿ ಸ್ಪರ್ಧಿಗಳೇ ಅಲ್ಲ. ಇದು ಪ್ರಚಾರ ಗಿಟ್ಟಿಸುವ ಮಾತು ಅಷ್ಟೇ. ಈ ಗೂಳಿಗಳಿಗೆ ಅರೆಮತ್ತು ಬರಿಸುವ ಔಷಧಿಗಳನ್ನು ಕೊಡಿಸುತ್ತಾರೆ. ವೃಷಣಗಳನ್ನು ಘಾಸಿಗೊಳಿಸುತ್ತಾರೆ, ಅವುಗಳ ದೃಷ್ಟಿ ಮಂಕಾಗಿ ದಾರಿ ತಪ್ಪಿ ನುಗ್ಗುವಂತೆ ಮಾಡಲು ಅವುಗಳ ಕಣ್ಣಿಗೆ ಗ್ರೀಸ್ ಬಳಿಯುತ್ತಾರೆ. ಗೂಳಿ ಕಾಳಗ ಪ್ರಾರಂಭವಾಗುವ ಒಂದೆರಡು ವಾರ ಮೊದಲೇ ಅವುಗಳ ಕೊರಳಿಗೆ ಹೊರಲಾಗದಷ್ಟು ಭಾರ ಹಾಕಿ ಜಗ್ಗಿಸಿರುತ್ತಾರೆ. ಇದರ ನಂತರ ಅವುಗಳಿಗೆ ಭ್ರಮೆ ಬರಲೆಂದು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಗುರಿ ಇಟ್ಟು ಆಕ್ರಮಣ ಮಾಡದಿರಲೆಂದು ಅವುಗಳ ಕೊಂಬನ್ನು ಯದ್ವಾತದ್ವಾ ಹೆರೆಯುತ್ತಾರೆ.

ಗೂಳಿ ಕಾಳಗದ ಆ ಘಳಿಗೆ ಬಂತೆಂದರೆ ಅಖಾಡದಲ್ಲಿ ಮಾತದೂರ್ ಅಂದರೆ ಕಾಳಗ ಮಾಡಿ ಗೂಳಿ ಕೊಲ್ಲುವವನು, ಇಬ್ಬರು ಕುದುರೆ ಸವಾರರು - ಪಿಕಾಡರ್ಸ್ ಬರುತ್ತಾರೆ. ಗೂಳಿ ಅಖಾಡವನ್ನು ಪ್ರವೇಶಿಸುತ್ತಲೇ ಮೂರು ಮಂದಿ ಕಾಲಾಳುಗಳು ಈಟಿಯನ್ನು ಗೂಳಿಗಳ ಡುಬ್ಬಕ್ಕೆ ತಿವಿಯುತ್ತಾರೆ. ರಕ್ತ ಸೋರಿಸುತ್ತ ನೋವು ತಾಳದೆ ಗೂಳಿ ಎರಗುತ್ತದೆ. ಎತ್ತೆಂದರತ್ತ ಓಡುತ್ತದೆ. ಎದುರಿಗಿದ್ದವರತ್ತ ನುಗ್ಗುತ್ತದೆ. ಪ್ರೇಕ್ಷಕರಿಗೆ ಇದು ರೋಮಾಂಚನ. ಮಾತದೂರ್ ಕತ್ತಿಯನ್ನು ಗೂಳಿಯ ಹೃದಯಕ್ಕೆ ಗುರಿ ಇಡಲು ಮುಂದಾಗುತ್ತಾನೆ. ಅನುಭವಿ ಮಾತದೂರ್ ಇದರಲ್ಲಿ ಸಫಲನಾಗಬಹುದು. ನಾಲಗೆ ಎಳೆಯುತ್ತ ಆ ಪ್ರಾಣಿಯ ಶರೀರ ವಿಲಿವಿಲಿ ಒದ್ದಾಡಿ ನೆಲ ಕಚ್ಚುವಾಗ ಪ್ರೇಕ್ಷಕರ ದೃಷ್ಟಿಯಲ್ಲಿ ಇವನು ಹೀರೋ - ಹರ್ಕ್ಯುಲಸ್ಸಿಗೆ ಸಮಾನ. ಆದರೆ ಅನಾನುಭವಿ ಮತಾದೂರ್ ಗಳು ಇರುತ್ತಾರಲ್ಲ. ಅವರು ಗುರಿ ತಪ್ಪಿ ಎಲ್ಲೆಲ್ಲಿಯೋ ಗೂಳಿಯನ್ನು ತಿವಿಯುತ್ತಾರೆ. ಹಿಂಸೆ ತಾರಕಕ್ಕೆ ಹೋಗುತ್ತದೆ. ಆದರೆ ಗೂಳಿ ದೂರು ಕೊಡುವಂತಿಲ್ಲವಲ್ಲ. `ನಿನ್ನ ಗುರಿ ತಪ್ಪಿದೆ' ಎಂದು ಹೇಳುವಂತಿಲ್ಲವಲ್ಲ. ವಿಜಯೋತ್ಸವದ ಕೊನೆಯ ಹಂತ ಯಾವುದು ಗೊತ್ತೆ? ಗೂಳಿ ನೆಲಕ್ಕೆ ಬಿದ್ದು ಇನ್ನೂ ಅದಕ್ಕೆ ಅರೆಬರೆ ಪ್ರಜ್ಞೆ ಇರುವಾಗಲೇ ಅದರ ಕಿವಿ, ಬಾಲವನ್ನು 'ಟ್ರೋಫಿ'ಯಾಗಿ ಕತ್ತರಿಸುವುದು.

Untitled design - 2026-04-30T184816.808

ಗೂಳಿಗೊಂದೇ ಈ ಪಾಡಲ್ಲ. ಉತ್ತಿ, ಬಿತ್ತಿ ಅಥವಾ ಗಾಡಿ ಎಳೆದು ಜೀವನ ಸಾಗಿಸಿರುವ ಕುದುರೆಗಳನ್ನು ಗೂಳಿ ಕಾಳಗದಲ್ಲಿ ಮತಾದೂರ್ ಬಳಸುವುದುಂಟು. ಇವುಗಳ ಸ್ಥಿತಿ ಏನು ಗೊತ್ತೆ? ಕಿವಿಯ ಪಕ್ಕಕ್ಕೆ ಮಾದಕ ದ್ರವ್ಯದ ಇಂಜೆಕ್ಷನ್ ಕೊಡುತ್ತಾರೆ. ಅವು ಶಬ್ದದಿಂದ ವಿಚಲಿತವಾಗದಂತೆ ಅದರ ಕಿವಿಗೆ ಹಸಿ ಕಾಗದ ತುರುಕಿರುತ್ತಾರೆ. ಕೆನೆದು ಪ್ರೇಕ್ಷಕರ ನೋಟಕ್ಕೆ ಭಂಗಬರದಿರಲೆಂದು ಅವುಗಳ ಧ್ವನಿ ಪೆಟ್ಟಿಗೆಯ ತಂತುಗಳನ್ನೇ ಕತ್ತರಿಸಿರುತ್ತಾರೆ. ಕತ್ತಿ ಅಥವಾ ಈಟಿಯಿಂದ ತಿವಿಸಿಕೊಂಡ ಗೂಳಿ ಒಮ್ಮೊಮ್ಮೆ ಕುದುರೆಯ ಮೇಲೆ ಎರಗುವುದುಂಟು. ಬಹುತೇಕ ಇವು ಕೈ ಕಾಲು ಮುರಿದುಕೊಳ್ಳುತ್ತವೆ ಅಥವಾ ನೆಲ ಕಚ್ಚುತ್ತವೆ. ಇಷ್ಟನ್ನೆಲ್ಲ ಸ್ಥಳೀಯರ ಬಾಯಿಂದಲೇ ಕೇಳಿದ ಮೇಲೆ ಪುಣ್ಯಕೋಟಿ ಕಥೆಯನ್ನು ಕೇಳಿ ಬೆಳೆದ ನನಗೆ ಗೂಳಿ ಕಾಳಗವನ್ನು ನೋಡುವ ಮನಸಾದರೂ ಎಲ್ಲಿದ್ದೀತು? ಕುತೂಹಲಕ್ಕೂ ನಾನು ಈ ಹಿಂಸಾ ಕ್ರೀಡೆಯನ್ನು ನೋಡುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ.

ಈಚೆಗೆ ಸ್ಪೇನ್ ಬದಲಾವಣೆಯ ಬಿರುಗಾಳಿಗೆ ಸಿಕ್ಕಿದೆ. ಕ್ಯಾಥೋಲಿಕ್ ಚರ್ಚುಗಳ ಹಿಡಿತ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಇದು ಅವರ ಆಹಾರ, ವೇಷ ಭೂಷಣಗಳಲ್ಲೂ ವ್ಯಕ್ತವಾಗುತ್ತಿದೆ. ಸ್ವಂತ ವಿಚಾರ ಬಂದಾಗ ಉಡುಪಿನ ಬಗ್ಗೆ ಅವರಿಗೆ ತೀವ್ರ ಕಾಳಜಿ. ಇತರರ ಕಣ್ಣಲ್ಲಿ ಹೇಗೆ ಕಾಣಿಸಬೇಕೆಂಬ ರಸಪ್ರಜ್ಞೆ. ಗುಣಮಟ್ಟಕ್ಕೆ ಎಂದೂ ಆದ್ಯತೆ. ಹೊಸ ಫ್ಯಾಷನ್ನುಗಳಿಗೆ ಬಹುವಾಗಿ ಒಲಿಯುವ ಮನಸು. ನಾನು ಎಷ್ಟೋ ಸಲ ಕಣ್ಣಾರೆ ಕಂಡಿದ್ದೇನೆ, ಹಣ್ಣು ಹಣ್ಣು ಮುದುಕಿಯರು ಇಲ್ಲಿ ಬ್ಯೂಟಿಪಾರ್ಲರುಗಳಿಗೆ ಬರುತ್ತಾರೆ. ಅವರನ್ನು ಕೈ ಹಿಡಿದು ನಡೆಸಬೇಕಾದ ಪರಿಸ್ಥಿತಿ. ಬಾಬ್ ಕಟ್, ಹೇರ್ ಡೈ ಮಾಡಿಸಿಕೊಂಡು ಹೊರಗೆ ಬರುವಾಗ ಅದೆಂಥದೋ ಪ್ರಸನ್ನತೆ ಅವರ ಮುಖದಲ್ಲಿ. ಇನ್ನು ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಸೀನಿಯರ್ ಸಿಟಿಜನ್ ಸವಲತ್ತು ಪಡೆಯಲು ಆ ಕ್ಯೂಗಳಲ್ಲಿ ನಿಲ್ಲಲು ಮನಸಿಲ್ಲದವರೂ ಉಂಟು. ನಾನು ಬಾರ್ಸಿಲೋನಾದಲ್ಲಿ ಕಾಣುತ್ತಿರುವುದು ಸರ್ವತಂತ್ರ ಸ್ವತಂತ್ರ ಮನೋಭಾವದ ನಾಗರಿಕರನ್ನು. ಬಂದ ಹೊಸತರಲ್ಲಿ ನನಗೆ ಶಾಕ್ ಎನ್ನಿಸಿತ್ತು. ಸಲಿಂಗಿಗಳು ವಿವಾಹವಾಗಲು ಇಲ್ಲಿನ ಕಾನೂನು ಅಡ್ಡಬರುವುದಿಲ್ಲ. ತೀರ ಸಲುಗೆಯಿಂದ ಇರುವ ಇಬ್ಬರು ಗಂಡಸರನ್ನು ಇಲ್ಲಿ ನೋಡುವ ದೃಷ್ಟಿಯೇ ಬೇರೆ. ಆದರೆ ಇವಾವೂ ದೊಡ್ಡ ಸುದ್ದಿಯೇ ಅಲ್ಲ ಈ ಸಮಾಜದಲ್ಲಿ. ಅದು ತೀರ ವೈಯಕ್ತಿಕ, ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.