Saturday, September 19, 2026
Saturday, September 19, 2026

ಸರಕಾರಗಳಿಗೆ ವರದಾನವಾಗುತ್ತಿರುವ ಮ್ಯೂಸಿಯಂ ಟೂರಿಸಂ

ಒಂದು ನಗರ ತನ್ನ ಕೈಗಾರಿಕೆಗಳನ್ನು ಕಳೆದುಕೊಂಡರೂ, ಪ್ರವಾಸೋದ್ಯಮದ ಮೂಲಕ ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಬಹುದೇ? ಬಿಲ್ಬಾವೋ ನಗರದಲ್ಲಿ ನಿರ್ಮಾಣವಾದ ವಿಶಿಷ್ಟ ಮ್ಯೂಸಿಯಂ ಇಂಥ ಅದ್ಭುತ ಬದಲಾವಣೆಗೆ ನಾಂದಿ ಹಾಡಿತು. ಇದೇ ‘ಬಿಲ್ಬಾವೋ ಎಫೆಕ್ಟ್’ ಮೂಲಕ ವಿಶ್ವದಾದ್ಯಂತ ಮ್ಯೂಸಿಯಂ ಟೂರಿಸಂಗೆ ಹೊಸ ದಿಕ್ಕು ದೊರೆಯಿತು.

  • ಡಿ. ವಿ. ಗುರುಪ್ರಸಾದ್‌

ಸ್ಪೇನ್ ದೇಶದ ಉತ್ತರ ಭಾಗದಲ್ಲಿ ಬಿಲ್ಬಾವೋ ಎನ್ನುವ ನಗರವಿದೆ. ಆ ದೇಶದ ನಾಲ್ಕನೆಯ ಅತಿ ದೊಡ್ಡ ನಗರವಾದ ಇದು ಹಡಗುಗಳ ನಿರ್ಮಾಣ ಹಾಗೂ ಉಕ್ಕಿನ ತಯಾರಿಕೆಗೆ ಪ್ರಸಿದ್ಧವಾಗಿತ್ತು. 20ನೆಯ ಶತಮಾನದ ಅಂತ್ಯದ ವೇಳೆಗೆ ಅಲ್ಲಿನ ಕೈಗಾರಿಕೆಗಳು ಮುಚ್ಚಿಹೋದವು. ಆಲ್ಲಿ ವಾಸಿಸುತ್ತಿದ್ದ ಸಾವಿರಾರು ಮಂದಿ ಬೇರೆ ಜಾಗಗಳಿಗೆ ವಲಸೆ ಹೋದರು. ಇದ್ದವರು ತೀವ್ರ ನಿರುದ್ಯೋಗದ ಸಮಸ್ಯೆಯನ್ನು ಎದುರಿಸತೊಡಗಿದರು. ಹೇಗಾದರೂ ಮಾಡಿ ಆ ನಗರದ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯ ಬಾಸ್ಕ್ ಸರಕಾರ ನಿರ್ಧರಿಸಿತು. ಆ ನಗರದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಿ ದೇಶವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಿ ಅವರಿಂದ ಬರುವ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಸಬೇಕೆಂದು ಸರಕಾರ ಯೋಚಿಸಿತು. ಆದರೆ, ಬಿಲ್ಬಾವೋನಲ್ಲಿ ಯಾವುದೇ ಪ್ರೇಕ್ಷಣೀಯ ಇಲ್ಲವೇ ಚಾರಿತ್ರಿಕ ಸ್ಥಳಗಳಿರಲಿಲ್ಲ. ಹಾಗಾದರೇನು ಮಾಡುವುದು?

Untitled design (84)

ಆಗ ಅಲ್ಲಿನ ಸರಕಾರಕ್ಕೆ ಸಾಂಸ್ಕೃತಿಕ ಪ್ರವಾಸೋದ್ಯಮದ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕೆನ್ನುವ ಯೋಚನೆ ಹೊಳೆಯಿತು. ಆ ನಿಟ್ಟಿನಲ್ಲಿ ಅದು ಬಿಲ್ಬಾವೋನಲ್ಲಿ ಒಂದು ವಿಶೇಷ ಬಗೆಯ ಮ್ಯೂಸಿಯಂ ನಿರ್ಮಿಸಲು ನಿರ್ಧರಿಸಿತು. ಅದರಂತೆ ಅದು ನ್ಯೂಯಾರ್ಕ್ ಮತ್ತು ವೆನಿಸ್ ನಗರಗಳಲ್ಲಿ ಹೆಸರಾಂತ ಮ್ಯೂಸಿಯಂಗಳನ್ನು ನಡೆಸುತ್ತಿದ್ದ ಗುಗ್ಗೆನ್‌ಹೇಮ್ ಸಂಸ್ಥೆಯನ್ನು ಸಂಪರ್ಕಿಸಿತು. ಬಿಲ್ಬಾವೋದಲ್ಲಿಯೂ ತನ್ನದೊಂದು ಶಾಖೆಯನ್ನು ತೆರೆಯಲು ಬಾಸ್ಕ್ ಸರಕಾರ ಕೋರಿದಾಗ ಅಲ್ಲಿನ ಅಧಿಕಾರಿಗಳು ಬಿಲ್ಬಾವೋಗೆ ಬಂದು ಸ್ಥಳ ಪರಿಶೀಲನೆಯನ್ನು ಮಾಡಿದರು. ಸ್ಥಳೀಯ ಸರಕಾರವೇ ತಾನು ತಿಳಿಸುವ ರೀತಿಯಲ್ಲಿಯೇ ಮ್ಯೂಸಿಯಂನ ಕಟ್ಟಡವನ್ನು ಕಟ್ಟಿಕೊಟ್ಟರೆ ತಾನು ಮ್ಯೂಸಿಯಂ ತೆರೆಯುವುದಾಗಿ ಅವರು ಹೇಳಿದರು. ಈ ಷರತ್ತಿಗೆ ಸರಕಾರವು ಒಪ್ಪಿದಾಗ ಆ ಸಂಸ್ಥೆಯು ನಿರ್ಮಾಣವೂ ಸೇರಿದಂತೆ ಈ ಮ್ಯೂಸಿಯಂ ತೆರೆಯಲು ಒಟ್ಟು ಖರ್ಚು ಸುಮಾರು 120 ಬಿಲಿಯನ್ ಡಾಲರ್‌ಗಳಾಗುತ್ತದೆ ಎಂದಾಗ ಸರಕಾರ ಅವಾಕ್ಕಾಯಿತು. ಒಂದು ಮ್ಯೂಸಿಯಂಗಾಗಿ ಇಷ್ಟು ಹಣವನ್ನು ವ್ಯಯಿಸುವುದು ಮೂರ್ಖತನ, ಮ್ಯೂಸಿಯಂಗಳನ್ನು ನೋಡಲು ಯಾರು ಬರುತ್ತಾರೆ? ಎಂದು ಕೆಲವರು ತಕರಾರೆತ್ತಿದರು. ದೀರ್ಘ ಸಮಾಲೋಚನೆಯ ನಂತರ ಆ ಖರ್ಚಿಗೆ ಒಪ್ಪಿಗೆ ದೊರಕಿತು. ವಿಖ್ಯಾತ ವಾಸ್ತುಶಿಲ್ಪಿ ಫ್ರಾಂಕ್ ಗೆಹ್ರಿ ಎನ್ನುವವನು ಮ್ಯೂಸಿಯಂ ಕಟ್ಟಡದ ವಿನ್ಯಾಸವನ್ನು ರೂಪಿಸಲು ನೇಮಕಗೊಂಡ. ಹೊಸ ಕಟ್ಟಡವು ಅತಿ ನವೀನ ವಿನ್ಯಾಸವನ್ನು ಹೊಂದಿರಬೇಕು, ಅದು ಸಿಡ್ನಿಯ ಒಪೆರಾ ಹೌಸ್, ಪ್ಯಾರಿಸ್ಸಿನ ಪಾಂಪಿಡೋ ಸೆಂಟರ್ ಮಾದರಿಯಲ್ಲಿ ಇರಬೇಕು ಎಂದು ಅವನಿಗೆ ಸೂಚಿಸಲಾಯಿತು.

ಬಿಲ್ಬಾವೋನಲ್ಲಿ ಹರಿಯುವ ನರ್ವಿಯಾನ್ ನದಿಯ ಪಕ್ಕದಲ್ಲಿರುವ ಜಾಗವೊಂದನ್ನು ಗೆಹ್ರಿ ಆಯ್ಕೆ ಮಾಡಿದ. ಅಲ್ಲಿ ಕಟ್ಟಡದ ನಿರ್ಮಾಣ ಪ್ರಾರಂಭವಾಯಿತು. 1997ರಲ್ಲಿ ಅದರ ನಿರ್ಮಾಣ ಮುಗಿದಾಗ ಅದನ್ನು ನೋಡಿದವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡರು. 2,60,000 ಚದರ ಅಡಿಗಳಷ್ಟು ವಿಸ್ತೀರ್ಣದ ಅತ್ಯಂತ ನವೀನ ವಿನ್ಯಾಸದ ಆ ಕಟ್ಟಡ ಇತರ ಗುಗ್ಗೆನ್‌ಹೇಮ್ ಮ್ಯೂಸಿಯಂಗಳಿಗಿಂತ ದೊಡ್ಡದಾಗಿದ್ದಲ್ಲದೆ ಆ ಕಟ್ಟಡದಂತೆ ವಿಶ್ವದ ಯಾವ ಮೂಲೆಯಲ್ಲಿಯೂ ಇನ್ನೊಂದು ಕಟ್ಟಡವಿರಲಿಲ್ಲ. ನಂತರ ಗುಗ್ಗೆನ್‌ಹೇಮ್ ಸಂಸ್ಥೆ ತನ್ನ ಸಂಗ್ರಹದಲ್ಲಿದ್ದ ಅತಿ ಹೆಸರಾಂತ ಹಾಗೂ ಅಮೂಲ್ಯ ಕಲಾಕೃತಿಗಳನ್ನು ಬಿಲ್ಬಾವೋಗೆ ತಂದು ಅವನ್ನು ಅಲ್ಲಿ ಪ್ರದರ್ಶನಕ್ಕಿಟ್ಟಿತು. ಮ್ಯೂಸಿಯಂನ ಉದ್ಘಾಟನೆಯನ್ನು 1998 ಅಕ್ಟೋಬರ್ 18ರಂದು ಸ್ಪೇನ್ ದೇಶದ ಅರಸನಿಂದ ಮಾಡಿಸಲಾಯಿತು.

ಇದನ್ನೂ ಓದಿ: ನಕಾಶೆ ಓದುವುದೆಂದರೆ ಅದು ಜಗತ್ತನ್ನು ನಾವೇ ಹುಡುಕಿಕೊಳ್ಳುವ ಅಂತರ್ಮುಖಿ ಪಯಣ

ಇಷ್ಟೆಲ್ಲ ಹಣವನ್ನು ಖರ್ಚು ಮಾಡಿರುವಾಗ ಮುಂದೇನಾಗುತ್ತದೋ ಏನೋ? ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬಿಲ್ಬಾವೋಗೆ ಬರುವರೇ? ಎಂದು ಎಲ್ಲರೂ ಆತಂಕದಲ್ಲಿದ್ದರು. ಆದರೆ, ಎಲ್ಲರ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶವಿದೇಶಗಳಿಂದ ಪ್ರವಾಸಿಗರು ಬಿಲ್ಬಾವೋಗೆ ಬರತೊಡಗಿದರು. ಸರಕಾರ ಖರ್ಚುಮಾಡಿದ ಅಷ್ಟೂ ಹಣ ಕೇವಲ ಐದು ವರ್ಷಗಳಲ್ಲಿ ವಾಪಸ್ ಬಂದದ್ದಲ್ಲದೆ ಬಿಲ್ಬಾವೋಗೆ ಪ್ರತಿವರ್ಷವೂ 6.5 ಬಿಲಿಯನ್ ಯೂರೋಗಳಷ್ಟು ಆದಾಯ ಬರತೊಡಗಿತು. ಸಾವಿರಾರು ಉದ್ಯೋಗಗಳು ಹುಟ್ಟಿಕೊಂಡವು. ಆ ನಗರವು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿತು. ಮ್ಯೂಸಿಯಂ ನಿರ್ಮಾಣದ ಮೂಲಕ ಬಿಲ್ಬಾವೋದಲ್ಲಾದ ಆರ್ಥಿಕ ಬೆಳವಣಿಗೆ ‘ಬಿಲ್ಬಾವೋ ಎಫೆಕ್ಟ್’ ಎಂದು ಹೆಸರನ್ನು ಗಳಿಸಿತು. ಮ್ಯೂಸಿಯಂ ಟೂರಿಸಂ ಎನ್ನಲಾಗುವ ಹೊಸ ಬಗೆಯ ಪ್ರವಾಸೋದ್ಯಮ ಮುನ್ನೆಲೆಗೆ ಬಂದಿತು.

ಮ್ಯೂಸಿಯಂ ಟೂರಿಸಂ ಎಂದರೆ ಒಂದು ದೇಶದ ಇಲ್ಲವೇ ಒಂದು ಪ್ರಾಂತದ ಚರಿತ್ರೆ, ಸಂಸ್ಕೃತಿ ಮತ್ತು ಜನಜೀವನವನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಅಲ್ಲಿರುವ ಸಂಗ್ರಹಾಲಯಗಳಿಗೆ ಪ್ರವಾಸವನ್ನು ಮಾಡುವುದು. ಇಂಥ ಪ್ರವಾಸದ ಉದ್ದೇಶ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವುದೇ ಆಗಿದೆ. ಇಂಥ ಪ್ರವಾಸದಿಂದ ಹಲವಾರು ವಯೋಮಾನದ ಗುಂಪಿನ ಸಂದರ್ಶಕರಿಗೆ ತರಹೇವಾರಿ ವಿಷಯಗಳ ಬಗ್ಗೆ ಜ್ಞಾನಾರ್ಜನೆಯಾಗುತ್ತದೆ. ನಾವು ಕಲಿಯುವ ಪಠ್ಯಪುಸ್ತಕಗಳಲ್ಲಿ ಸಿಗದಂಥ ಪಾಠಗಳು ಮ್ಯೂಸಿಯಂಗೆ ಹೋಗುವುದರಿಂದ ಸಿಗುವುದೆಂದು ಹೆಚ್ಚು ಜನ ಮ್ಯೂಸಿಯಂಗಳಿಗೆ ಹೋಗುತ್ತಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಕಲಾವಿದರು ಮತ್ತು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಾಧಾರಣ ಪ್ರವಾಸಿಗರೂ ಇಂಥ ವಿಶೇಷ ಪ್ರವಾಸಗಳನ್ನು ಮಾಡುವುದರಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಈ ಹಿಂದೆಯೂ ನಾವು ಯಾವುದಾದರೊಂದು ಜಾಗಕ್ಕೆ ಪ್ರವಾಸಕ್ಕೆಂದು ಹೋದಾಗ ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಜತೆಜತೆಗೇ ಆ ಪ್ರದೇಶದ ಚರಿತ್ರೆ, ಅಲ್ಲಿ ವಾಸಿಸುವ ಜನರ ಸಂಸ್ಕೃತಿ ಮತ್ತು ಆಚಾರವಿಚಾರಗಳನ್ನು ತಿಳಿಯಲು ಅಲ್ಲಿಯ ಮ್ಯೂಸಿಯಂಗಳಿಗೆ ಹೋಗುತ್ತಿದ್ದೆವು. ಶಾಲಾ ಕಾಲೇಜುಗಳು ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸುವಾಗ ಕಡ್ಡಾಯವಾಗಿ ಮಕ್ಕಳನ್ನು ವಸ್ತುಸಂಗ್ರಹಾಲಯಗಳಿಗೆ ಕರೆದುಕೊಂಡು ಹೋಗುತ್ತಿದ್ದವು. ಸಾಧಾರಣ ಪ್ರವಾಸಿಗರೂ ವಿದೇಶಗಳಿಗೆ ಹೋದಾಗ ಅಲ್ಲಿನ ಮ್ಯೂಸಿಯಂಗಳಿಗೆ ಭೇಟಿ ನೀಡುವ ಪರಿಪಾಠವನ್ನು ರೂಢಿಸಿಕೊಂಡರು. ಲಂಡನ್‌ಗೆ ಹೋದವರು ಅಲ್ಲಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ಮಾನವ ಕುಲದ ಉಗಮ, ಚರಿತ್ರೆ, ಸಂಸ್ಕೃತಿ, ಕಲೆಗಳ ಬಗೆಗಿನ ಪ್ರದರ್ಶನ ವಸ್ತುಗಳನ್ನು ನೋಡುವುದಲ್ಲದೆ ಹೆಸರಾಂತ ರೊಸೆಟ್ಟಾ ಸ್ಟೋನ್ ಅನ್ನು ನೋಡಿ ಬರಲಾರಂಭಿಸಿದರು. ಹಾಗೆಯೇ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ಹೋಗುವ ಸರಿಸುಮಾರು ಎಲ್ಲ ಪ್ರವಾಸಿಗಳೂ ಅಲ್ಲಿನ ಹೆಸರಾಂತ ಸ್ಟೇಟ್ ಹೆರಿಟೇಜ್ ಮ್ಯೂಸಿಯಂನಲ್ಲಿ ಕನಿಷ್ಠ ಅರ್ಧದಿನ ಕಳೆದು ಬರಲಾರಂಭಿಸಿದರು. ಪ್ಯಾರಿಸ್‌ಗೆ ಹೋಗುವವರು ಅಲ್ಲಿನ ಲೂವ್ರ್ ಮ್ಯೂಸಿಯಂಗೆ ಹೋಗಿ ಮೋನಾಲೀಸಾ ಪೇಂಟಿಂಗ್ ಮತ್ತು ವೀನಸ್ ಡಿಮೆಲೋ ಶಿಲ್ಪಗಳನ್ನು ನೋಡದೇ ಮರಳುತ್ತಿರಲಿಲ್ಲ. ವಾಷಿಂಗ್ಟನ್‌ಗೆ ಹೋಗುವವರು ಅಲ್ಲಿಯ 7 ಹೆಸರಾಂತ ಮ್ಯೂಸಿಯಂಗಳಲ್ಲಿ ಒಂದನ್ನಾದರೂ ನೋಡಿ ಬರುವುದು ವಾಡಿಕೆ. ಹಾಗೆಯೇ ಗೋಯಾನ ಪೇಂಟಿಂಗ್‌ಗಳಿಗಾಗಿ ಮ್ಯಾಡ್ರಿಡ್‌ನ ರಾಷ್ಟ್ರೀಯ ಮ್ಯೂಸಿಯಂಗೆ ಜನರು ಹೋದರೆ ಟುಟನ್ ಖಾಮೂನ್ ದೇಹವನ್ನು ನೋಡಲು ಕೈರೋದ ಮ್ಯೂಸಿಯಂಗೆ ಹೋಗುತ್ತಾರೆ.

ಸಾರ್ವಜನಿಕರಿಗೆ ಮ್ಯೂಸಿಯಂಗಳಿಗೆ ಹೋಗುವ ಆಸಕ್ತಿಯು ಬೆಳೆದಂತೆ ಎಲ್ಲ ಬಗೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುವ ಮ್ಯೂಸಿಯಂಗಳಲ್ಲದೆ ಸಾರ್ವಜನಿಕರ ವಿಶೇಷ ಆಸಕ್ತಿಗಳನ್ನು ತಣಿಸುವಂಥ ಮ್ಯೂಸಿಯಂಗಳು ಆರಂಭವಾದವು. ಪ್ರಾಚ್ಯವಸ್ತು ಮ್ಯೂಸಿಯಂ, ಚಿತ್ರಕಲಾ ಮ್ಯೂಸಿಯಂ, ಶಿಲ್ಪಕಲಾ ಮ್ಯೂಸಿಯಂ, ಆಭರಣಗಳ ಮ್ಯೂಸಿಯಂ, ವಿಜ್ಞಾನ ಮತ್ತು ತಂತ್ರಜ್ಞಾನದ ಮ್ಯೂಸಿಯಂ, ಕಾರುಗಳ ಮ್ಯೂಸಿಯಂ, ವಿಮಾನಗಳ ಮ್ಯೂಸಿಯಂ, ಬೊಂಬೆಗಳ ಮ್ಯೂಸಿಯಂ, ಸಂಗೀತ ವಾದ್ಯಗಳ ಮ್ಯೂಸಿಯಂ, ಕಪ್ ನೂಡಲ್ಸ್ ಮ್ಯೂಸಿಯಂ ಹೀಗೆ ತರಹೇವಾರಿ ಮ್ಯೂಸಿಯಂಗಳು ತೆರೆದವು. ಬೇಹುಗಾರಿಕೆಗೂ ಮೀಸಲಾಗಿರುವ ಮ್ಯೂಸಿಯಂ ಕೂಡಾ ಒಂದಿದೆ ಎಂದರೆ ಆಶ್ಚರ್ಯವಾಗಬಹುದು. ಎಲ್ಲ ಬಗೆಯ ವಸ್ತುಗಳೂ ಪ್ರದರ್ಶನಕ್ಕಿಟ್ಟಿರುವ ಕೆಲವು ವಿಶೇಷ ಮ್ಯೂಸಿಯಂಗಳೂ ಪ್ರವಾಸಿಗರನ್ನು ಆಕರ್ಷಿಸುವುದು ನಿಲ್ಲಲಿಲ್ಲ. ಈಗಾಗಲೇ ಹೇಳಿರುವ ಇಂಗ್ಲೆಂಡ್, ಫ್ರಾನ್ಸ್, ಈಜಿಪ್ಟ್ ಮತ್ತು ರಷ್ಯಾದ ಮ್ಯೂಸಿಯಂಗಳಲ್ಲದೆ ನ್ಯೂಯಾರ್ಕ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಹಾಗೂ ವಾಷಿಂಗ್ಟನ್ ನಗರದಲ್ಲಿ ವಿಜ್ಞಾನಕ್ಕೆಂದೇ ಮೀಸಲಾದ ಮೂರು ಮ್ಯೂಸಿಯಂಗಳು ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಕೆಲವೊಮ್ಮೆ ಈ ಮ್ಯೂಸಿಯಂಗಳಿಗೆ ಹೋಗಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬೇಕು.

ಮ್ಯೂಸಿಯಂ ಟೂರಿಸಂ ಮೂಡಿಸುತ್ತಿರುವ ಜನಪ್ರಿಯತೆಯನ್ನು ಮನಗಂಡ ಕೆಲವು ಸರಕಾರಗಳು ಆ ಬಗೆಯ ಪ್ರವಾಸೋದ್ಯಮದ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿವೆ. ಉದಾಹರಣೆಗೆ ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿ ಲೆನ್ಸ್ ಎನ್ನುವ ನಗರವಿದೆ. ಅಲ್ಲಿದ್ದ ಕಲ್ಲಿದ್ದಲು ಉದ್ಯಮ ಕ್ಷೀಣವಾದ ನಂತರ ಆ ನಗರ ಹಾಳು ಬಿದ್ದಿತ್ತು. ಫ್ರೆಂಚ್ ಸರಕಾರ ಲೂವ್ರ್ ಮ್ಯೂಸಿಯಂನ ಒಂದು ಶಾಖೆಯನ್ನು ಅಲ್ಲಿ ತೆರೆಯಿತು. ಪ್ರವಾಸಿಗರು ಲೆನ್ಸ್‌ಗೆ ಬರತೊಡಗಿದ ಕಾರಣದಿಂದ ಆ ನಗರ ಸಾಕಷ್ಟು ಅಭಿವೃದ್ಧಿಗೊಂಡಿತು. ಇದೇ ರೀತಿ ಲಂಡನ್‌ನಲ್ಲಿ ಮಿಲೆನಿಯಂ ಸೇತುವೆಯ ಬಳಿ ಟೇಟ್ ಮಾಡರ್ನ್ ಮ್ಯೂಸಿಯಂ ನಿರ್ಮಿಸಿದ ಕಾರಣ ಎರಡೂ ಜಾಗಗಳಿಗೆ ಪ್ರವಾಸಿಗರು ಬರತೊಡಗಿದರು. ನಗರ ರಾಷ್ಟ್ರವಾದ ಸಿಂಗಾಪುರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು 1857ರಲ್ಲಿಯೇ ಸ್ಥಾಪಿತವಾಗಿದ್ದ ನ್ಯಾಷನಲ್ ಮ್ಯೂಸಿಯಂ ಆಫ್ ಸಿಂಗಾಪುರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಂದರ್ಶಕರಿಗೆ ಒಂದು ವಿಶೇಷ ರೀತಿಯ ಅನುಭವವು ಉಂಟಾಗುವಂತೆ ಮಾಡಿದ್ದರಿಂದ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ನಾಲ್ಕು ಪಟ್ಟು ಏರಿತು.

Untitled design (85)

ಭಾರತದಲ್ಲಿ ಅತ್ಯುತ್ತಮ ಮ್ಯೂಸಿಯಂಗಳಿವೆ. ಇವು ಸರಕಾರದ ಮಟ್ಟದಲ್ಲಿ ಹೆಚ್ಚಾಗಿದ್ದರೂ ಖಾಸಗಿ ಸಂಗ್ರಹಾಲಯಗಳೂ ಸಾಕಷ್ಟಿವೆ. ಅವುಗಳನ್ನು ನೋಡುವವರ ಸಂಖ್ಯೆಯೂ ಏರುತ್ತಿದೆ. ಏಷ್ಯಾದಲ್ಲಿಯೇ ಅತಿ ಹಳೆಯದಾದ ಕೋಲ್ಕತಾದ ಇಂಡಿಯನ್ ಮ್ಯೂಸಿಯಂ, ದೆಹಲಿಯ ರಾಷ್ಟ್ರೀಯ ಮ್ಯೂಸಿಯಂ, ಮುಂಬಯಿನ ಛತ್ರಪತಿ ಶಿವಾಜಿ ಮ್ಯೂಸಿಯಂ ಮತ್ತು ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ನಮ್ಮ ದೇಶದ ಹೆಸರಾಂತ ವಸ್ತುಸಂಗ್ರಹಾಲಯಗಳು. ಆದರೆ, ಅವನ್ನು ಸೂಕ್ತವಾಗಿ ನವೀಕರಿಸದೆ, ಅವುಗಳಲ್ಲಿ ಏರ್ಪಡಿಸುವ ಪ್ರದರ್ಶನಗಳಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಇರುವುದರಿಂದ ನಮ್ಮ ದೇಶದಲ್ಲಿ ಮ್ಯೂಸಿಯಂ ಟೂರಿಸಂ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಈ ಬಗ್ಗೆ ಸರಕಾರಗಳು ಕೂಡಲೇ ಗಮನ ಹರಿಸಬೇಕಾಗಿದೆ. ಇದಲ್ಲದೆ ಈಗಾಗಲೇ ಮ್ಯೂಸಿಯಂಗಳನ್ನು ನಡೆಸುತ್ತಿರುವ ಖಾಸಗಿ ಸಂಸ್ಥೆಗಳು ಈ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬಹುದಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?