ಗುರುತ್ವಾಕರ್ಷಣೆ ಕಳೆದುಕೊಂಡವರ ಬಗೆಗಿನ ಆಕರ್ಷಣೆ...!
“ಇಡೀ ಜಗತ್ತಿನ ದೃಷ್ಟಿ ಬಾಹ್ಯಾಕಾಶದ ಕಡೆಗೆ ನೆಟ್ಟಿರುವ ಈ ಸಮಯದಲ್ಲಿ, ಚಂದ್ರ ಮತ್ತು ಗ್ರಹಗಳತ್ತ ನಮ್ಮ ಹೆಜ್ಜೆಗಳನ್ನು ನಾವು ಶತ್ರು ದೇಶಗಳ ಮೇಲಿನ ವಿಜಯದ ಪತಾಕೆ ಎಂದು ನೋಡಲು ಬಯಸುವುದಿಲ್ಲ. ಬದಲಾಗಿ ಸ್ವಾತಂತ್ರ್ಯ ಮತ್ತು ಶಾಂತಿಯ ಸಂಕೇತವಾಗಿ ನೋಡಲು ಪ್ರತಿಜ್ಞೆ ಮಾಡಿದ್ದೇವೆ.”
- ಅಂಜಲಿ ರಾಮಣ್ಣ
“ನೀವು ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಂತೆ?” “ಹೌದು ಸರ್ ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ ಮತ್ತು ಮಾವಿನ ಸೀಕರಣೆ ತಂದಿದ್ದೇನೆ. ಇಲ್ಲಿ ನನ್ನೊಡನೆ ಇರುವ ಎಲ್ಲರಿಗೂ ತಿನ್ನಿಸಬೇಕು ಅಂತಿದ್ದೇನೆ” “ನೀವಿರುವ ಜಾಗದಲ್ಲಿ ಗ್ರ್ಯಾವಿಟಿ ಇಲ್ಲವಂತೆ ಆದರೆ ನೀವು ಮಾತ್ರ ಡೌನ್ ಟು ಅರ್ಥ್ ಇದ್ದೀರ ನೋಡಿ” ಹೀಗೆ ಮುಂದುವರಿದ ಅವರಿಬ್ಬರ ನಡುವಿನ ಈ ಸಂಭಾಷಣೆ ನೋಡುತ್ತಿದ್ದಂತೆ ವಾಹ್ ಎನಿಸಿತು. ಸ್ಪೇಸ್ ಶಟಲ್ ನೌಕೆಯಲ್ಲಿ ವ್ಯೋಮಕಕ್ಷೆಯನ್ನು ದಾಟಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲು 27 ಇತರೆ ರಾಷ್ಟ್ರಗಳೊಡನೆ ತೆರಳಿ ಈಗ ಆಂತರಿಕ್ಷದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಗಗನಯಾನಿ ಶುಭಾಂಶು ಶುಕ್ಲ ಅಲ್ಲಿಂದಲೇ ಮೋದಿಯವರೊಡನೆ ಮಾತನಾಡುತ್ತಿರುವ ಈ ದೃಶ್ಯ ನೋಡಿದ ಕೂಡಲೇ ನಾನು ಓಡಿದ್ದು ಫ್ಲೋರಿಡಾ ರಾಜ್ಯದಲ್ಲಿ ಇರುವ ನಾಸಾ ಅವರ ಜಾನ್ ಎಫ್ ಕೆನಡಿ ಅಂತರಿಕ್ಷ ಕೇಂದ್ರಕ್ಕೆ. ಆ ಭೇಟಿಯ ನೆನಪಿನ ಅಪ್ಪುಗೆಗೆ.

ನಾಸಾ ಎನ್ನುವ ಹೆಸರೇ ಆ ದಿನಗಳಲ್ಲಿ ಬಲು ದೊಡ್ಡ ಕುತೂಹಲಭರಿತ ಆಕರ್ಷಣೆ. ಈಗ ನಮ್ಮ ಇಸ್ರೋ ಕೂಡ ಅಪಾರ ಮನ್ನಣೆ ಗಳಿಸಿರುವುದು ನನಗಂತೂ ತೀರದ ಹೆಮ್ಮೆ. ಉಳಿದುಕೊಂಡಿದ್ದ ಒರ್ಲ್ಯಾಂಡೋ ನಗರದಿಂದ ಟ್ಯಾಕ್ಸಿಯಲ್ಲಿ ಒಂದೂವರೆ ಗಂಟೆಯ ಪ್ರಯಾಣ. ಅಲ್ಲಿ ಪ್ರವಾಸಿಗರಿಗೆಂದೇ ಮಾರ್ಗದರ್ಶಿಯ ಜತೆಯಲ್ಲಿ ನಾಸಾದವರೇ ಟೂರ್ ಮಾಡಿಸುತ್ತಾರೆ. ಒಬ್ಬರಿಗೆ ಎಂಟರಿಂದ ಹತ್ತು ಸಾವಿರ ರೂಪಾಯಿಗಳ ದರವನ್ನು ನೀಡಿ ಆನ್ ಲೈನ್ ನಲ್ಲಿಯೇ ಟಿಕೆಟ್ ಖರೀದಿಸಬಹುದು. ಒರ್ಲ್ಯಾಂಡೋನಿಂದ ಅಲ್ಲಿಗೆ ಹೋಗುವ ದಾರಿಯೇ ಗಂಗೆಯ ಹಾಗೆ ತಿರುವು, ಪುಂಗಿನಾದದಿಂದ ಬಂದ ಹಾವಿನಂತೆ ಬಾಗು. ಎರಡೂ ಕಡೆಗಳಲ್ಲಿ ಪರ್ವತ, ಬಯಲು, ಆಕಾಶವನ್ನೇ ತೋರುವ ನೀರುನೋಟವನ್ನು ಆಸ್ವಾದಿಸುತ್ತಾ ಹೋಗುವಾಗ ಎದುರಾಗುತ್ತದೆ ಅಟ್ಲಾಂಟಿಕ್ ಸಮುದ್ರದ ಹಿನ್ನೀರಿನಲ್ಲಿ ನಭಕ್ಕೆದ್ದು ನಿಂತಿರುವ ಮೆರಿಟ್ ದ್ವೀಪ. ಬನಾನಾ ಮತ್ತು ಇಂಡಿಯನ್ ನದಿಗಳ ಸಂಗಮದ ನಡುವೆ ಶ್ರೀರಂಗಪಟ್ಟಣದ ಒಡೆಯನ ಭಂಗಿಯಲ್ಲಿಯೇ ಆಕರ್ಷಿಸುತ್ತದೆ ನಾಸಾ ಅವರ ಜಾನ್ ಎಫ್ ಕೆನಡಿ ಅಂತರಿಕ್ಷ ಕೇಂದ್ರ.
ಆಳೆತ್ತರದ ಗೇಟುಗಳನ್ನು ಹಾದು ಸೆಕ್ಯೂರಿಟಿ ತಪಾಸಣೆ ಮುಗಿಸಿದ ಹತ್ತು ಹೆಜ್ಜೆ ದೂರದಲ್ಲಿ ಬಿಸಿಲ್ಛಾವಣಿಯ ಕೆಳಗೆ ಸರತಿ ಸಾಲಿನಲ್ಲಿ ನಿಲ್ಲಿಸುತ್ತಾರೆ. ಐದೇ ನಿಮಿಷದಲ್ಲಿ ಫಳಗುಟ್ಟುವ ಕಪ್ಪು ಬಣ್ಣದ ದೊಡ್ಡ ಬಸ್ ನಮ್ಮನ್ನು ಹತ್ತಿಸಿಕೊಂಡು ನಲವತ್ತು ನಿಮಿಷಗಳ ಕಾಲ ಕೇಂದ್ರದ ಸುತ್ತಲೂ ಇರುವ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತಾ, ನಾಸಾದ ಇತಿಹಾಸವನ್ನು, ಈ ಕೇಂದ್ರದ ಹಿನ್ನೆಲೆಯನ್ನೂ ಹೇಳುತ್ತಾ ಕರೆದುಕೊಂಡು ಹೋಗಿ ಒಂದು ಚೌಕಿಯಲ್ಲಿ ಇಳಿಸುತ್ತದೆ. ಅಲ್ಲಿದೆ ಭೂಗೋಳದ ನಮೂನೆ ಮತ್ತು ಅದರ ಮೇಲೆ ದಪ್ಪ ಅಕ್ಷರಗಳಲ್ಲಿ ನಾಸಾ ಎನ್ನುವ ಫಲಕ. ಬಂದಿದ್ದ ಎಲ್ಲರೂ ಅಲ್ಲಿ ಫೋಟೋ ತೆಗೆಸಿಕೊಳ್ಳಲು ಶಿಸ್ತಿನಿಂದ ನಿಂತಿದ್ದರು.
ಪ್ರತೀ ಹೆಜ್ಜೆಗೂ ಆಕಾಶ ಜಗತ್ತಿನ ಅದ್ಭುತಗಳನ್ನು ತೆರೆದಿಡುವ ಚಿತ್ರಗಳು, ರಾಕೆಟ್ ಗಳ ಮಾದರಿಗಳು, ನಿವೃತ್ತಿಗೊಂಡಿರುವ ಕ್ಷಿಪಣಿಗಳು, ಉಪಗ್ರಹಗಳ ಚಿಮ್ಮುನೆಲ, ಅದಕ್ಕೆ ಬೇಕಾದ ಬೆಂಕಿಯ ಶಾಖವನ್ನು ತೋರುವ ಗಾಜಿನ ಕೋಣೆ, ಪ್ರಯೋಗಶಾಲೆಗಳು, ಗಗನಯಾತ್ರಿಗಳ ತರಬೇತಿ ಶಾಲೆ, ರಾಕೆಟ್ ಗಳ ರಿಪೇರಿ ಸ್ಥಳ, ಉಸ್ತುವಾರಿ ಕಚೇರಿ, ದೂರಸಂಪರ್ಕ ಕೇಂದ್ರ, ಇಂಧನ ಸಂಗ್ರಹಣಾ ಗಡಂಗುಗಳು ಎಲ್ಲವನ್ನೂ ಒಪ್ಪವಾಗಿಟ್ಟಿದ್ದಾರೆ. ಎಲ್ಲಕ್ಕಿಂತ ದೂರದಲ್ಲಿ ತಾನೇ ಬೇರೆ ಎನ್ನುವ ಗತ್ತಿನಲ್ಲಿ ನಿಂತಿದ್ದ ಅಗಾಧ ಅಳತೆಯ ರೂಮಿನಲ್ಲಿ ಗುರುತ್ವಾಕರ್ಷಣೆ ಇಲ್ಲದ ಆಕಾಶ ನೌಕೆಯಲ್ಲಿ ಯಾತ್ರಿಗಳು ಹೇಗೆ ಇರುತ್ತಾರೆ ಎನ್ನುವುದನ್ನು ಪ್ರವಾಸಿಗರಿಗೆ ಖುದ್ದು ಅನುಭವಕ್ಕೆ ಬರುವ ಹಾಗೆ ಮಾಡುವ ಸಿಮ್ಯುಲೇಷನ್ ವ್ಯವಸ್ಥೆ ಕೂಡ ಅಲ್ಲಿದೆ.

ಎಲ್ಲಕ್ಕಿಂತ ನನ್ನನ್ನು ಬಹುವಾಗಿ ಹಿಡಿದಿಟ್ಟಿದ್ದು ಸಂವಾದ ಕೊಠಡಿ. ಅಲ್ಲಿ ಸದಾಕಾಲವೂ ಮಾಜಿ ಅಂತರಿಕ್ಷಯಾತ್ರಿಗಳು, ವಿಜ್ಞಾನಿಗಳು ವೇದಿಕೆಯ ಮೇಲೆ ತಮ್ಮ ಅನುಭವಗಳನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ನನಗೆ ಮಾತಿಗೆ ಸಿಕ್ಕಿದ್ದು ಗಗನಯಾತ್ರಿ Bruce E Melnick. ನ್ಯೂಯಾರ್ಕ್ ನಲ್ಲಿ ಹುಟ್ಟಿ ಫ್ಲೋರಿಡಾದಲ್ಲಿ ಓದಿ ಬಾಹ್ಯಾಕಾಶಕ್ಕೆ ಹೋದ ಮೊದಲ ಕೋಸ್ಟ್ ಗಾರ್ಡ್ ಏವಿಯೇಟರ್. 12 ದಿನ 23 ಗಂಟೆ 27 ನಿಮಿಷ ಬಾಹ್ಯಾಕಾಶದಲ್ಲಿ ಜೀವಿಸಿ ಬಂದಿದ್ದ ಮೆಲ್ನಿಕ್ ಅವರ ಮಾತಿನ ಶೈಲಿಯಲ್ಲಿ ಪದಗಳನ್ನು ವಿಂಗಡಿಸಿಕೊಳ್ಳಲು ನನಗೆ ಕಷ್ಟವಾಗುತ್ತಿತ್ತು. ನಂತರ ಅವರನ್ನು ಹತ್ತಿರದಿಂದ ಖುದ್ದು ಭೇಟಿಯಾಗಿ ನಿಧಾನವಾಗಿ ಮಾತನಾಡುತ್ತಾ ಅವರ ಮಾತುಗಳಿಂದಲೇ ಅವರ ಸಾಧನೆಗೆ ಪರಿಚಿತಳಾದೆ. ಆಂತರಿಕ್ಷದಲ್ಲಿ ವಂಶವಾಹಿಗಳು ಮತ್ತು ಸಸ್ಯಗಳಲ್ಲಿ ಜೀವಕೋಶಗಳ ವಿಭಜಿಸುವಿಕೆ ವಿಷಯದಲ್ಲಿ ಅವರು ಮಾಡಿರುವ ಸಂಶೋಧನೆ ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಆಕರ ಗ್ರಂಥವಾಗಿ ಬಳಸಲಾಗುತ್ತಿದೆ ಎಂದವರ ಕಣ್ರೆಪ್ಪೆಯಲ್ಲಿ ಕಂಡೂ ಕಾಣದಂತೆ ಅಡಗಿ ಕುಳಿತಿದ್ದ ಹೆಮ್ಮೆಯ ಕ್ಷಣಗಳನ್ನು ಚಿರಗೊಳಿಸಿಕೊಳ್ಳಲು ಅವರೊಡನೆ ಫೋಟೋ ತೆಗೆಸಿಕೊಂಡೆ. ಚಂದ್ರನ ಮೇಲಿಂದ ತಂದಿದ್ದ ಸುಣ್ಣದ ಕಲ್ಲಿನಂತೆ ಕಾಣುವ ಸಣ್ಣಸಣ್ಣ ಕಲ್ಲುಗಳನ್ನು ಇಟ್ಟಿದ್ದ ಚಂದ್ರಶಿಲೆ ennuva ಹೆಸರಿದ್ದ ಕೋಣೆಗೆ ಅವರೇ ಕರೆದುಕೊಂಡು ಹೋದರು.
“ಇಡೀ ಜಗತ್ತಿನ ದೃಷ್ಟಿ ಬಾಹ್ಯಾಕಾಶದ ಕಡೆಗೆ ನೆಟ್ಟಿರುವ ಈ ಸಮಯದಲ್ಲಿ, ಚಂದ್ರ ಮತ್ತು ಗ್ರಹಗಳತ್ತ ನಮ್ಮ ಹೆಜ್ಜೆಗಳನ್ನು ನಾವು ಶತ್ರು ದೇಶಗಳ ಮೇಲಿನ ವಿಜಯದ ಪತಾಕೆ ಎಂದು ನೋಡಲು ಬಯಸುವುದಿಲ್ಲ. ಬದಲಾಗಿ ಸ್ವಾತಂತ್ರ್ಯ ಮತ್ತು ಶಾಂತಿಯ ಸಂಕೇತವಾಗಿ ನೋಡಲು ಪ್ರತಿಜ್ಞೆ ಮಾಡಿದ್ದೇವೆ.” ಕೇಂದ್ರಕ್ಕೆ ಒಳಹೋಗುವ ದ್ವಾರದಲ್ಲಿ ಸುಂದರಾಂಗ ಜಾನ್ ಎಫ್ ಕೆನೆಡಿಯ ಚಿತ್ರವನ್ನು ಅಚ್ಚಾಗಿಸಿ ಆತನದ್ದೇ ಈ ಮಾತುಗಳನ್ನು ನೀಲ್ಗಪ್ಪು ಶಿಲೆಯ ಮೇಲೆ ಕೆತ್ತಿದ್ದಾರೆ. ಹಿಂದಿರುಗಿ ಬರುವಾಗ ಬ್ರಹ್ಮಾಂಡದ ಸೋಜಿಗದೆದುರು ನಾನೊಂದು ಮೃತ ಉಪಗ್ರಹ. ಅದರದ್ದೇ ಭಗ್ನ ಬಿಡಿಭಾಗ. ತುಕ್ಕಾದ ಸ್ಕ್ರೂ ನಟ್ ಬೋಲ್ಟು. ವ್ಯೋಮ ಸಾಧನದ ಕಿತ್ತಿಟ್ಟ ಬಣ್ಣದ ಚಕ್ಕೆ. ಮುರಿದ ರೆಕ್ಕೆ. ಕಳಚಿಕೊಂಡ ಇಂಧನದ ಟ್ಯಾಂಕ್. ಘರ್ಷಣೆಯಲ್ಲಿ ಛಿದ್ರಗೊಂಡು ಜಜ್ಜಿದಷ್ಟೂ ಹೆಚ್ಚಿಕೊಳ್ಳುವ ಅಂತರಿಕ್ಷ ಕಸವಾಗಿದ್ದೇನೆ. ನೀನೆಂಬ ಹಿರಿವ್ಯಾಸದ ಗುರುತ್ವಾಕರ್ಷಣೆಗಾಗಿ ಹಂಬಲಿಸುತ್ತೇನೆ. ಧೂಳ ಕಣಕ್ಕೂ ಭೂಮಿಯೇ ಅಂತ್ಯ ಅನಂತ ಎನಿಸಿದ್ದಂತೂ ನಿಜ. ಅಂದಹಾಗೆ ಒರ್ಲ್ಯಾಂಡೋದಿಂದ ನಾಸಾದ ಜಾನ್ ಎಫ್ ಕೆನಡಿ ಅಂತರಿಕ್ಷ ಕೇಂದ್ರಕ್ಕೆ ಹೋದ ಟ್ಯಾಕ್ಸಿಯ ಚಾಲಕ ಕಪ್ಪು ಜನಾಂಗದ ಡೇವಿಡ್ ಜತೆ ಆಡಿದ ರಾಜಕೀಯ, ನ್ಯಾಯಾಂಗ, ಕೌಟುಂಬಿಕ ವ್ಯವಸ್ಥೆಯ ಬಗೆಗಿನ ಮಾತುಗಳು ಕೂಡ ಗುರುತ್ವಾಕರ್ಷಣೆಯ ಅನುಭವ ನೀಡಿತ್ತು.