ಕಣ್ಮರೆಯಾಗುವ ಮುನ್ನ ನೋಡಬೇಕೇ, ಉಳಿಸಬೇಕೇ?
ಕಣ್ಮರೆಯಾಗುವ ಮುನ್ನ ನೋಡಬೇಕು ಎಂಬ ಆತುರಕ್ಕಿಂತ, ಕಣ್ಮರೆಯಾಗದಂತೆ ಕಾಪಾಡಬೇಕು ಎಂಬ ಜವಾಬ್ದಾರಿ ಪ್ರವಾಸಿಗರಲ್ಲಿ ಮುಖ್ಯ. ಲಾಸ್ಟ್- ಚಾನ್ಸ್ ಟೂರಿಸಂ ಪ್ರಕೃತಿಯ ಸೌಂದರ್ಯವನ್ನು ಮಾತ್ರವಲ್ಲ, ಅದರ ನಾಶದ ಎಚ್ಚರಿಕೆಯನ್ನೂ ನಮ್ಮ ಮುಂದೆ ತೆರೆದಿಡುತ್ತದೆ. ನಾವು ಇಂದು ಉಳಿಸದ ತಾಣಗಳು, ನಾಳೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ಉಳಿಯುವ ಅಪಾಯವಿದೆ.
- ನಂದಿನಿ ಪಟೇಲ್
ಕೆಲವು ಪ್ರವಾಸಗಳು ಹೊಸ ಜಗತ್ತನ್ನು ಪರಿಚಯಿಸುತ್ತವೆ. ಇನ್ನು ಕೆಲವು ಪ್ರವಾಸಗಳು ಕಣ್ಮರೆಯಾಗುತ್ತಿರುವ ಜಗತ್ತನ್ನು ಕೊನೆಯ ಬಾರಿಗೆ ಕಣ್ಣಲ್ಲಿ ತುಂಬಿಕೊಳ್ಳುವ ಆತುರದಿಂದ ಹುಟ್ಟುತ್ತವೆ. ಕರಗುತ್ತಿರುವ ಹಿಮನದಿಗಳು, ಬಣ್ಣ ಕಳೆದುಕೊಳ್ಳುತ್ತಿರುವ ಹವಳದ ದಿಬ್ಬಗಳು, ಮುಳುಗುವ ಅಪಾಯದಲ್ಲಿರುವ ದ್ವೀಪಗಳು, ಬದಲಾಗುತ್ತಿರುವ ಕರಾವಳಿಗಳು ʼಇದನ್ನು ಇನ್ನೆಷ್ಟು ವರ್ಷ ನೋಡಲು ಸಾಧ್ಯ?ʼ ಎಂಬ ಪ್ರಶ್ನೆಯೇ ಪ್ರವಾಸದ ಕಾರಣವಾಗುತ್ತಿರುವ ಕಾಲವಿದು.
ಇಂಥ ತಾಣಗಳನ್ನು ಅವುಗಳ ಸ್ವರೂಪ ಬದಲಾಗುವ ಅಥವಾ ಕಣ್ಮರೆಯಾಗುವ ಮುನ್ನ ನೋಡಲು ಕೈಗೊಳ್ಳುವ ಪ್ರವಾಸಕ್ಕೆ ‘ಲಾಸ್ಟ್-ಚಾನ್ಸ್ ಟೂರಿಸಂ’ ಎಂದು ವ್ಯಾಖ್ಯಾನಿಸಲಾಗಿದೆ. ಹವಾಮಾನ ಬದಲಾವಣೆ ಮತ್ತು ಪರಿಸರ ಹಾನಿಯಿಂದ ಅಪಾಯದಲ್ಲಿರುವ ತಾಣಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಈ ಪ್ರವಾಸದ ಪ್ರವೃತ್ತಿಯನ್ನು ಮತ್ತಷ್ಟು ಮುನ್ನೆಲೆಗೆ ತಂದಿದೆ. ಆದರೆ, ಈ ಪರಿಕಲ್ಪನೆಯೊಳಗೆ ಒಂದು ದೊಡ್ಡ ವೈರುಧ್ಯವು ಅಡಗಿದೆ. ಕಣ್ಮರೆಯಾಗುತ್ತಿರುವ ಪ್ರಕೃತಿಯನ್ನು ನೋಡಲು ನಾವು ಪ್ರವಾಸ ಕೈಗೊಳ್ಳುತ್ತೇವೆ, ಆದರೆ ಆ ಪ್ರವಾಸವೇ ಕೆಲವೊಮ್ಮೆ ಅದರ ನಾಶದ ವೇಗವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ಪೆಟ್ ಫ್ರೆಂಡ್ಲಿ ಟೂರಿಸಂ - ಸಾಕು ಪ್ರಾಣಿಗಳೊಡನೆ ಪ್ರವಾಸ
‘ಈಗ ನೋಡದಿದ್ದರೆ ಮತ್ತೆ ಕಾಣುವುದಿಲ್ಲ’ ಎಂಬ ಬಯಕೆಯಿಂದ ಜನರು ಹಿಮನದಿಗಳ ಕರಗುವಿಕೆ, ಸಮುದ್ರಮಟ್ಟ ಏರಿಕೆ, ಸಮುದ್ರದ ಉಷ್ಣತೆ ಹೆಚ್ಚಳ, ಸಾಗರ ಆಮ್ಲೀಕರಣ ಮತ್ತು ಬದಲಾಗುತ್ತಿರುವ ಹವಾಮಾನ ಮಾದರಿಗಳು ಹಲವು ಪ್ರವಾಸಿ ತಾಣಗಳ ಸ್ವರೂಪವನ್ನೇ ಬದಲಿಸುತ್ತಿವೆ. ಹಿಮನದಿಗಳಿಂದ ಹಿಡಿದು ಹವಳದ ದಿಬ್ಬಗಳವರೆಗೆ, ಒಮ್ಮೆ ಪ್ರವಾಸಿಗರನ್ನು ಆಕರ್ಷಿಸಿದ ನೈಸರ್ಗಿಕ ಸೌಂದರ್ಯವೇ ಈಗ ಹವಾಮಾನ ಬದಲಾವಣೆಯ ಪರಿಣಾಮದ ಸಂಕೇತವಾಗುತ್ತಿದೆ.

ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಪ್ರದೇಶಗಳು, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್, ವೆನಿಸ್, ಮಾಲ್ಡೀವ್ಸ್ ಹಾಗೂ ವಿಶ್ವದ ವಿವಿಧ ಭಾಗಗಳ ಹಿಮನದಿಗಳು ಇಂಥ ಬದಲಾವಣೆಗಳ ಕುರಿತು ಜಾಗತಿಕವಾಗಿ ಚರ್ಚೆಯಲ್ಲಿವೆ. ಗ್ರೇಟ್ ಬ್ಯಾರಿಯರ್ ರೀಫ್ನಲ್ಲಿ ಸಮುದ್ರದ ಉಷ್ಣತೆ ಹೆಚ್ಚಳಕ್ಕೆ ಸಂಬಂಧಿಸಿದ ಹವಳ ಬಿಳುಪಾಗುವಿಕೆ ಗಂಭೀರ ಪರಿಸರ ಸಮಸ್ಯೆಯಾಗಿದೆ. ಮಾಲ್ಡೀವ್ಸ್ನಂಥ ಕಡಿಮೆ ಎತ್ತರದ ದ್ವೀಪ ರಾಷ್ಟ್ರಗಳು ಸಮುದ್ರಮಟ್ಟ ಏರಿಕೆಯ ಪರಿಣಾಮಗಳಿಗೆ ವಿಶೇಷವಾಗಿ ಸೂಕ್ಷ್ಮವಾಗಿವೆ.
ಈ ದೃಶ್ಯಗಳನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಸಾರ ಮಾಡುತ್ತಿದ್ದಂತೆ, “ಕಣ್ಮರೆಯಾಗುವ ಮುನ್ನ ಒಮ್ಮೆ ನೋಡಿ” ಎಂಬ ಮನಸ್ಥಿತಿ ಪ್ರವಾಸಿಗರಲ್ಲಿ ಬೆಳೆಯುವುದು ಸಹಜ. ಆದರೆ, ಇಲ್ಲಿಂದಲೇ ನಿಜವಾದ ಪ್ರಶ್ನೆ ಆರಂಭವಾಗುತ್ತದೆ. ಪ್ರಕೃತಿಯನ್ನು ಉಳಿಸಲು ಹೋಗಿ, ಪ್ರಕೃತಿಗೇ ಹಾನಿ ಮಾಡುತ್ತಿದ್ದೇವೆಯೇ? ಒಂದು ಹಿಮನದಿ ಹವಾಮಾನ ಬದಲಾವಣೆಯಿಂದ ಕರಗುತ್ತಿದೆ ಎಂದು ತಿಳಿದು, ಅದನ್ನು ನೋಡಲು ಸಾವಿರಾರು ಕಿಲೋಮೀಟರ್ ವಿಮಾನದಲ್ಲಿ ಪ್ರಯಾಣಿಸುವುದು ಒಂದು ವಿಚಿತ್ರ ವೈರುಧ್ಯವನ್ನು ಸೃಷ್ಟಿಸುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ದೂರದ ತಾಣಗಳಿಗೆ ತಲುಪಲು ವಿಮಾನ, ಕ್ರೂಸ್, ಕಾರು ಸೇರಿದಂತೆ ಹಲವು ಸಾರಿಗೆ ವ್ಯವಸ್ಥೆಗಳನ್ನು ಬಳಸಬೇಕಾಗುತ್ತದೆ. ವಸತಿ, ಆಹಾರ, ಸ್ಥಳೀಯ ಸಾರಿಗೆ ಮತ್ತು ಇತರ ಪ್ರವಾಸ ಚಟುವಟಿಕೆಗಳೂ ಪರಿಸರದ ಮೇಲೆ ತಮ್ಮದೇ ಆದ ಹೆಜ್ಜೆಗುರುತು ಬಿಡುತ್ತವೆ.
ಇದರ ಪರಿಣಾಮ ಕೇವಲ ಇಂಗಾಲ ಹೊರಸೂಸುವಿಕೆಗೆ ಸೀಮಿತವಾಗುವುದಿಲ್ಲ. ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಅತಿಯಾದ ಕಾಲ್ನಡಿಗೆ ಮಣ್ಣು ಸವಕಳಿ ಮತ್ತು ಸಸ್ಯವರ್ಗದ ಹಾನಿಗೆ ಕಾರಣವಾಗಬಹುದು. ವನ್ಯಜೀವಿಗಳ ಸಹಜ ಚಟುವಟಿಕೆಗಳಿಗೆ ಪ್ರವಾಸಿಗರ ಹಸ್ತಕ್ಷೇಪ ಅಡ್ಡಿಯಾಗಬಹುದು. ದೋಣಿಗಳು, ವಾಹನಗಳು ಮತ್ತು ಪ್ರವಾಸಿಗರ ಮೂಲಕ ಅನ್ಯಜಾತಿಯ ಜೀವಿಗಳು ಹೊಸ ಪ್ರದೇಶಗಳಿಗೆ ಪ್ರವೇಶಿಸುವ ಅಪಾಯವೂ ಇರುತ್ತದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಅವರಿಗಾಗಿ ರಸ್ತೆಗಳು, ಹೊಟೇಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಮೂಲಸೌಕರ್ಯಗಳ ನಿರ್ಮಾಣವೂ ಹೆಚ್ಚಬಹುದು. ಇದರಿಂದ ನೀರು, ವಿದ್ಯುತ್ ಮತ್ತು ಭೂ ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚುವುದರ ಜತೆಗೆ ತ್ಯಾಜ್ಯ ಮತ್ತು ಮಾಲಿನ್ಯದ ಸಮಸ್ಯೆಯೂ ಉಲ್ಬಣಿಸಬಹುದು.
ಹೀಗಾಗಿ ʼಕಣ್ಮರೆಯಾಗುವ ಮುನ್ನ ನೋಡಿʼ ಎಂಬ ಪ್ರವಾಸದ ಆತುರ, ʼಕಣ್ಮರೆಯಾಗದಂತೆ ಉಳಿಸಿʼ ಎಂಬ ಜವಾಬ್ದಾರಿಯನ್ನು ಅರಿಯಬೇಕು.
ಇದಕ್ಕೆಲ್ಲಾ ಪ್ರವಾಸೋದ್ಯಮವೇ ಶತ್ರುವೇ? ಎಂಬ ಜಿಜ್ಞಾಸೆಯು ಮೂಡಬಹುದು. ಸಮಸ್ಯೆ ಪ್ರವಾಸೋದ್ಯಮದಲ್ಲೇ ಇದೆ ಎಂದು ನೇರವಾಗಿ ಹೇಳಲಾಗುವುದಿಲ್ಲ. ಪ್ರವಾಸೋದ್ಯಮದಿಂದ ಬರುವ ಆದಾಯವೇ ಹಲವು ಸಂರಕ್ಷಣಾ ಚಟುವಟಿಕೆಗಳಿಗೆ ಹಣಕಾಸಿನ ಮೂಲವಾಗಬಹುದು. ರಾಷ್ಟ್ರೀಯ ಉದ್ಯಾನಗಳು, ಸಮುದ್ರ ಸಂರಕ್ಷಿತ ಪ್ರದೇಶಗಳು ಮತ್ತು ಜೀವವೈವಿಧ್ಯ ಸಂರಕ್ಷಣಾ ಯೋಜನೆಗಳಿಗೆ ಪ್ರವೇಶ ಶುಲ್ಕ, ಮಾರ್ಗದರ್ಶಕರ ಸೇವೆ, ಪರವಾನಗಿ ಶುಲ್ಕ ಹಾಗೂ ಪ್ರವಾಸೋದ್ಯಮದಿಂದ ಬರುವ ಇತರ ಆದಾಯ ನೆರವಾಗಬಹುದು. ವೈಜ್ಞಾನಿಕ ಸಂಶೋಧನೆ, ಜೀವವೈವಿಧ್ಯ ಮೇಲ್ವಿಚಾರಣೆ ಮತ್ತು ಸ್ಥಳೀಯ ಸಂರಕ್ಷಣಾ ಉದ್ಯೋಗಗಳಿಗೂ ಈ ಹಣ ಬಳಕೆಯಾಗಬಹುದು.
ಇಲ್ಲಿಯೇ ‘ಲಾಸ್ಟ್-ಚಾನ್ಸ್ ಟೂರಿಸಂ’ನ ದೊಡ್ಡ ವಿರೋಧಾಭಾಸ ಕಾಣಿಸುತ್ತದೆ. ಪ್ರವಾಸೋದ್ಯಮವು ಒಂದು ಕಡೆ ಸಂರಕ್ಷಣೆಗೆ ಹಣ ಒದಗಿಸಬಹುದು; ಮತ್ತೊಂದೆಡೆ ಅತಿಯಾದ ಪ್ರವಾಸೋದ್ಯಮ ಅದೇ ಪರಿಸರದ ಮೇಲೆ ಒತ್ತಡವನ್ನೂ ಹೆಚ್ಚಿಸಬಹುದು.
ಅದರರ್ಥ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲ. ಯಾವ ರೀತಿಯ ಪ್ರವಾಸೋದ್ಯಮ ಬೇಕು ಎಂಬುದನ್ನು ಮರುಚಿಂತಿಸುವುದು ಮುಖ್ಯ.
ಪ್ರತಿಯೊಂದು ಪ್ರವಾಸಿ ತಾಣಕ್ಕೂ ಒಂದು ಪರಿಸರ ಮಿತಿ ಇರುತ್ತದೆ. ಒಂದು ಪ್ರದೇಶ ತನ್ನ ಪರಿಸರ ವ್ಯವಸ್ಥೆಗೆ ಅತಿಯಾದ ಹಾನಿಯಾಗದಂತೆ ಎಷ್ಟು ಪ್ರವಾಸಿಗರನ್ನು ಸ್ವೀಕರಿಸಬಲ್ಲದು ಎಂಬುದೇ ಅದರ ‘ಕ್ಯಾರಿಯಿಂಗ್ ಕೆಪಾಸಿಟಿ’.
ಒಂದು ಬೆಟ್ಟ ಪ್ರದೇಶಕ್ಕೆ ಸಾವಿರಾರು ವಾಹನಗಳು ಪ್ರತಿದಿನ ಪ್ರವೇಶಿಸಿದರೆ ರಸ್ತೆ, ಗಾಳಿ, ನೀರು ಮತ್ತು ತ್ಯಾಜ್ಯದ ಸಮಸ್ಯೆಗಳು ಎದುರಾಗಬಹುದು. ಒಂದು ಸಣ್ಣ ದ್ವೀಪಕ್ಕೆ ನಿರಂತರವಾಗಿ ಹೆಚ್ಚಿನ ಪ್ರವಾಸಿಗರು ಬಂದರೆ ಅದರ ಕುಡಿಯುವ ನೀರು, ವಿದ್ಯುತ್, ತ್ಯಾಜ್ಯ ನಿರ್ವಹಣೆ ಮತ್ತು ಸಮುದ್ರ ಪರಿಸರದ ಮೇಲೆ ಒತ್ತಡ ಹೆಚ್ಚಬಹುದು. ಹವಳದ ದಿಬ್ಬಗಳಂಥ ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ನಿಯಂತ್ರಣವಿಲ್ಲದ ಡೈವಿಂಗ್, ಸ್ನಾರ್ಕೆಲಿಂಗ್ ಮತ್ತು ದೋಣಿ ಸಂಚಾರವೂ ಸಮಸ್ಯೆಯಾಗಬಹುದು.
ಆದ್ದರಿಂದ ʼಹೆಚ್ಚು ಪ್ರವಾಸಿಗರಿಂದ ಅಧಿಕ ಆದಾಯʼ ಎಂಬ ಲೆಕ್ಕಾಚಾರವನ್ನು ಪ್ರಕೃತಿಯ ಪ್ರತಿಯೊಂದು ಪ್ರದೇಶಕ್ಕೂ ಅನ್ವಯಿಸಲಾಗುವುದಿಲ್ಲ. ಪ್ರವಾಸಿಗರ ಸಂಖ್ಯೆಗೆ ಮಿತಿ, ಸೂಕ್ಷ್ಮ ಋತುಗಳಲ್ಲಿ ಪ್ರವೇಶ ನಿಯಂತ್ರಣ, ಪರಿಸರ ಶುಲ್ಕ, ಬಲವಾದ ತ್ಯಾಜ್ಯ ನಿರ್ವಹಣೆ, ಹೊಸ ಪ್ರವಾಸೋದ್ಯಮ ಯೋಜನೆಗಳಿಗೆ ಪರಿಸರ ಪರಿಣಾಮದ ಮೌಲ್ಯಮಾಪನ ಇಂಥ ಕ್ರಮಗಳು ಅಗತ್ಯವಾಗುತ್ತವೆ.
ಲಾಸ್ಟ್-ಚಾನ್ಸ್ ಟೂರಿಸಂ ಕುರಿತು ಮಾತನಾಡುವಾಗ ಸ್ಥಳೀಯ ಸಮುದಾಯವನ್ನು ಮರೆಯಲು ಸಾಧ್ಯವಿಲ್ಲ. ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ಪ್ರದೇಶಗಳಿಗೆ ಪ್ರವಾಸಿಗರೇ ಪ್ರಮುಖ ಆದಾಯದ ಮೂಲವಾಗಿರಬಹುದು. ಆದರೆ, ಇದೇ ಅವಲಂಬನೆ ಅಪಾಯಕಾರಿಯೂ ಆಗಬಹುದು.
ಹವಾಮಾನ ವೈಪರೀತ್ಯ, ಪ್ರವಾಹ, ಚಂಡಮಾರುತ, ಕಾಡ್ಗಿಚ್ಚು ಅಥವಾ ಪರಿಸರ ಹಾನಿಯಿಂದ ಪ್ರವಾಸಿಗರ ಸಂಖ್ಯೆ ಕುಸಿದರೆ ಸ್ಥಳೀಯರ ಆದಾಯವೂ ಕುಸಿಯುತ್ತದೆ. ಕೋವಿಡ್-19ರಂಥ ಜಾಗತಿಕ ಆಘಾತಗಳು ಪ್ರವಾಸೋದ್ಯಮದ ಮೇಲಿನ ಅತಿಯಾದ ಆರ್ಥಿಕ ಅವಲಂಬನೆಯ ಅಪಾಯವನ್ನು ತೋರಿಸಿಕೊಟ್ಟಿವೆ.
ಹೀಗಾಗಿ ಪ್ರವಾಸೋದ್ಯಮದ ಆದಾಯ ಸ್ಥಳೀಯ ಮಾರ್ಗದರ್ಶಕರು, ಹೋಮ್ಸ್ಟೇ ಮಾಲೀಕರು, ದೋಣಿ ಚಾಲಕರು, ಕರಕುಶಲ ಕಲಾವಿದರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಲುಪುವ ವ್ಯವಸ್ಥೆ ಇರಬೇಕು. ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಆರ್ಥಿಕ ಲಾಭ ದೊರೆತಾಗ, ಅದೇ ಸಮುದಾಯ ಪರಿಸರ ಸಂರಕ್ಷಣೆಯ ಪಾಲುದಾರರಾಗುವ ಸಾಧ್ಯತೆಯೂ ಹೆಚ್ಚುತ್ತದೆ.
ಭವಿಷ್ಯದ ಪ್ರವಾಸೋದ್ಯಮದ ಗುರಿ ಕೇವಲ ಹೆಚ್ಚು ಜನರನ್ನು ಹೆಚ್ಚು ತಾಣಗಳಿಗೆ ಕರೆದೊಯ್ಯುವುದಾಗಿರಬಾರದು. ‘ಲಾಸ್ಟ್-ಚಾನ್ಸ್’ ಬದಲು ‘ಲಾಸ್ಟ್-ಇಂಪ್ಯಾಕ್ಟ್’ ಪ್ರವಾಸವಾಗಬೇಕಿದೆ. ಅಂದರೆ ಕಡಿಮೆ ಸಂಖ್ಯೆಯ ಪ್ರವಾಸಿಗರು, ಹೆಚ್ಚು ಸಮಯದ ತಂಗುವಿಕೆ, ಸ್ಥಳೀಯ ಸೇವೆಗಳಿಗೆ ಆದ್ಯತೆ, ಪರಿಸರ ಸ್ನೇಹಿ ಸಾರಿಗೆ, ಸಣ್ಣ ಗುಂಪಿನ ಪ್ರವಾಸ, ಸ್ಥಳೀಯ ಮಾರ್ಗದರ್ಶಕರ ಬಳಕೆ ಮತ್ತು ಸಂರಕ್ಷಣೆಗೆ ಕೊಡುಗೆ ನೀಡುವ ಪ್ರವಾಸ ಮಾದರಿಗಳು ಹೆಚ್ಚು ಅರ್ಥಪೂರ್ಣವಾಗಬಹುದು.

‘ಸಸ್ಟೇನಬಲ್ ಟ್ರಾವೆಲ್’ ಮಾತ್ರವಲ್ಲದೆ ‘ರಿಜೆನೆರೇಟಿವ್ ಟ್ರಾವೆಲ್’ ಎಂಬ ಕಲ್ಪನೆಯೂ ಇದೇ ದಿಕ್ಕಿನಲ್ಲಿ ಸಾಗುತ್ತದೆ, ಪ್ರವಾಸದ ನಂತರ ತಾಣವು ಮೊದಲಿಗಿಂತ ಉತ್ತಮ ಸ್ಥಿತಿಯಲ್ಲಿರಲು ಪ್ರಯತ್ನಿಸುವುದು. ಸಂರಕ್ಷಣಾ ಯೋಜನೆಗಳಿಗೆ ಕೊಡುಗೆ ನೀಡುವ ಪ್ರವಾಸ, ಸಮುದಾಯ ಆಧಾರಿತ ಪ್ರವಾಸೋದ್ಯಮ, ಆಫ್-ಸೀಸನ್ ಪ್ರಯಾಣ ಮತ್ತು ಕಡಿಮೆ ಇಂಗಾಲದ ಸಾರಿಗೆ ಇಂಥ ಮಾದರಿಗಳ ಭಾಗವಾಗಬಹುದು.
ಇದಕ್ಕೆಲ್ಲಾ ಪ್ರವಾಸಿಗರ ಕೈಯಲ್ಲೂ ಒಂದು ಆಯ್ಕೆ ಇದೆ. ಪ್ರವಾಸೋದ್ಯಮವನ್ನು ಬದಲಿಸುವ ಜವಾಬ್ದಾರಿ ಸರಕಾರ ಅಥವಾ ಪ್ರವಾಸೋದ್ಯಮ ಸಂಸ್ಥೆಗಳಿಗಷ್ಟೇ ಸೇರಿದ್ದಲ್ಲ. ಪ್ರವಾಸಿಗನ ಆಯ್ಕೆಯೂ ಮುಖ್ಯವಾಗುತ್ತದೆ.
ನಿಗದಿತ ಮಾರ್ಗದಿಂದ ಹೊರಗೆ ಹೋಗದಿರುವುದು, ವನ್ಯಜೀವಿಗಳಿಗೆ ಆಹಾರ ನೀಡದಿರುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು, ಪರಿಸರ ಸ್ನೇಹಿ ವಸತಿ ಆಯ್ಕೆ ಮಾಡುವುದು ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವುದು ಸಣ್ಣ ಹೆಜ್ಜೆಗಳಂತೆ ಕಾಣಬಹುದು. ಆದರೆ, ಇಂಥ ಸಾವಿರಾರು ಸಣ್ಣ ನಿರ್ಧಾರಗಳು ಒಟ್ಟಾಗಿ ದೊಡ್ಡ ಪರಿಣಾಮ ಉಂಟುಮಾಡಬಹುದು.
ಸಾಮಾಜಿಕ ಜಾಲತಾಣಗಳ ಕಾಲಮಾನದಲ್ಲಿ ಮತ್ತೊಂದು ಜವಾಬ್ದಾರಿ ಇದೆ. ಒಂದು ಸುಂದರ ಸ್ಥಳದ ಫೊಟೋ ವೈರಲ್ ಮಾಡಿ ಸಾವಿರಾರು ಜನರನ್ನು ಅಲ್ಲಿಗೆ ಕರೆದೊಯ್ಯುವುದು ಯಾವಾಗಲೂ ಆ ತಾಣಕ್ಕೆ ಒಳ್ಳೆಯದಲ್ಲ. ಕೆಲವೊಮ್ಮೆ ಜನಪ್ರಿಯತೆಯೇ ಒಂದು ಸೂಕ್ಷ್ಮ ಪರಿಸರ ಪ್ರದೇಶದ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ ಪ್ರವಾಸದ ಚಿತ್ರವನ್ನು ಹಂಚಿಕೊಳ್ಳುವಾಗ ಅದರ ಪರಿಸರದ ಕಥೆಯನ್ನೂ ಹಂಚಿಕೊಳ್ಳುವುದು ಅಗತ್ಯ.
‘ಲಾಸ್ಟ್-ಚಾನ್ಸ್ ಟೂರಿಸಂ’ ಅಂತಿಮವಾಗಿ ಪ್ರವಾಸದ ಬಗ್ಗೆ ಮಾತ್ರವಲ್ಲದೆ, ನಾವು ಪ್ರಕೃತಿಯನ್ನು ನೋಡುವ ದೃಷ್ಟಿಕೋನದ ಬಗ್ಗೆಯೂ ಮಾತನಾಡುತ್ತದೆ. ಹಿಮನದಿಯನ್ನು ನೋಡಲು ಹೋಗಿ ಅದರ ಕರಗುವಿಕೆಯ ಹಿಂದಿರುವ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಆ ಪ್ರವಾಸದ ಅನುಭವ ಅಪೂರ್ಣ. ಹವಳದ ದಿಬ್ಬದ ಬಣ್ಣಗಳನ್ನು ಕಣ್ಣಲ್ಲಿ ತುಂಬಿಕೊಂಡು, ಸಮುದ್ರದ ಉಷ್ಣತೆ ಮತ್ತು ಆಮ್ಲೀಕರಣದ ಸಮಸ್ಯೆಯನ್ನು ಮರೆತರೆ ಆ ಸೌಂದರ್ಯದ ಅರ್ಥವೇನು? ಮ್ಯಾಂಗ್ರೂವ್ ಕಾಡಿನ ಸೌಂದರ್ಯವನ್ನು ಆಸ್ವಾದಿಸಿ ಅದರ ಸಂರಕ್ಷಣೆಯ ಅಗತ್ಯವನ್ನು ಕಡೆಗಣಿಸಿದರೆ, ನಾವು ಪ್ರವಾಸಿಗರಾಗಿಯೇ ಉಳಿಯುತ್ತೇವೆ, ಪ್ರಕೃತಿಯ ಪಾಲುದಾರರಾಗುವುದಿಲ್ಲ.
ಹೀಗಾಗಿ ‘ಕೊನೆಯ ಅವಕಾಶ’ ಎಂಬ ಪದವನ್ನು ಪ್ರವಾಸದ ಜಾಹೀರಾತಿನ ಸಾಲಾಗಿ ನೋಡುವುದಕ್ಕಿಂತ ಒಂದು ಎಚ್ಚರಿಕೆಯ ಫಂಟೆಯಾಗಿ ನೋಡಬೇಕಿದೆ.
ಕಣ್ಮರೆಯಾಗುವ ಮುನ್ನ ನೋಡುವುದಕ್ಕಿಂತ, ಕಣ್ಮರೆಯಾಗದಂತೆ ಕಾಪಾಡುವುದು ಮುಖ್ಯ.
ನಾವು ಇಂದು ಒಂದು ತಾಣವನ್ನು ನೋಡಿ ಅದರ ಚಿತ್ರವನ್ನು ತೆಗೆದುಕೊಂಡು ಬರಬಹುದು. ಆದರೆ ನಾಳೆ ಆ ಚಿತ್ರದಲ್ಲಿರುವ ದೃಶ್ಯ ಮಾತ್ರ ಉಳಿದು, ನಿಜವಾದ ತಾಣವೇ ಇಲ್ಲದಂತಾಗಬಾರದು. ಪ್ರವಾಸದ ಯಶಸ್ಸು ನಾವು ಎಷ್ಟು ತಾಣಗಳನ್ನು ನೋಡಿದೆವು ಎಂಬುದರಲ್ಲಿ ಮಾತ್ರವಲ್ಲ. ನಮ್ಮ ನಂತರದ ಪೀಳಿಗೆಯೂ ಅದೇ ತಾಣಗಳನ್ನು ತನ್ನ ಕಣ್ಣಾರೆ ನೋಡುವ ಅವಕಾಶವನ್ನು ನಾವು ಉಳಿಸಿದ್ದೇವೆಯೇ ಎಂಬುದರಲ್ಲಿದೆ.
ಪ್ರವಾಸವು ಪ್ರಕೃತಿಯ ಕೊನೆಯ ದರ್ಶನವಾಗಬಾರದು, ಅದರ ಮುಂದಿನ ಅಧ್ಯಾಯವಾಗಬೇಕು.