ಸ್ಪೇನ್ ಎಂದರೆ ಕೊಮೆರ್, ಕಾಂತರ್ ಮತ್ತು ಬೈಲಾರ್!!
ಸ್ಪೇನ್ ದೇಶದಲ್ಲಿ ತಯಾರಾಗುವ ವೈನ್ ವಿಶ್ವಮಾನ್ಯತೆ ಪಡೆದಿದೆ. ಇಲ್ಲಿ ವೈನ್ ಟೂರಿಸಂ ಎನ್ನುವುದು ಕೂಡ ಪ್ರಸಿದ್ಧವಾಗಿದೆ. ಇಲ್ಲಿನ ಹಳ್ಳಿ ಪ್ರದೇಶದಲ್ಲಿನ ಜೀವನ ಶೈಲಿಗೆ ಮರುಳಾಗದವರೇ ಕಡಿಮೆ. ಮೋಜನ್ನು ಬಯಸುವ ಯುವ ಜನತೆ ವಿಶ್ವದ ಎಲ್ಲೆಡೆಯಿಂದ ಇಂಥ ಸ್ಥಳಕ್ಕೆ ಹಿಂಡುಹಿಂಡಾಗಿ ಬರುತ್ತಾರೆ
-ರಂಗಸ್ವಾಮಿ ಮೂಕನಹಳ್ಳಿ
ಜೀವಮಾನದಲ್ಲಿ ಸಾಧ್ಯವಾದರೆ ಸ್ಪೇನ್ ದೇಶವನ್ನು ಒಮ್ಮೆ ನೋಡಲೇಬೇಕು. ಅದಕ್ಕೆ ಕಾರಣಗಳು ಅನೇಕ. ವಯೋಮಾನಕ್ಕೆ ತಕ್ಕಹಾಗೆ ಅವರವರಿಗೆ ಬೇಕಾದ ಎಲ್ಲವನ್ನೂ ಸ್ಪೇನ್ ನೀಡುತ್ತದೆ. ಅದರಲ್ಲೂ ನೀವು ಇಪ್ಪತ್ತರಿಂದ ಮೂವತ್ತು ವರ್ಷದ ಆಸುಪಾಸಿನವರಾಗಿದ್ದರೆ ಇದು ಸ್ವರ್ಗ. ಸ್ಪೇನ್ ದೇಶದಲ್ಲಿನ 'ಇಬಿಸ' ಎನ್ನುವ ಐಲ್ಯಾಂಡ್ ಹೀಗೆ ಯುವಕ ಯುವತಿಯರು ನಡೆಸುವ ಪಾರ್ಟಿಗೆ ವಿಶ್ವ ಪ್ರಸಿದ್ಧ. ಯುರೋಪಿನ ಎಲ್ಲಾ ದೇಶಗಳಿಂದ, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹೀಗೆ ಜಗತ್ತಿನ ಎಲ್ಲ ಕಡೆಯಿಂದ ಯುವ ಜನತೆ ಇಲ್ಲಿಗೆ ಮೋಜು ಮಾಡಲು ಬರುತ್ತಾರೆ. ಎಗ್ಗಿಲ್ಲದೆ ಎಲ್ಲೆಡೆಯಿಂದ ಕೇವಲ ತಿನ್ನುವುದಕ್ಕೆ , ಕುಡಿಯುವುದಕ್ಕೆ ಮತ್ತು ಮೋಜು ಮಾಡುವುದಕ್ಕೆ ಯುವ ಜನತೆ ಬಂದು ಸೇರುತ್ತಾರೆ. ಎಲ್ಲಿಗೆ ಹೊರಟೆ ಎಂದು ಯಾರಾದರೂ ಕೇಳಿದಾಗ ನಿಮ್ಮ ಉತ್ತರ ಸ್ಪೇನ್, ಇಬಿಸ ಎಂದೇನಾದರೂ ಇತ್ತೆಂದರೆ, ’ಹುಬ್ಬೇರಿಸಿ, ಮಜಾ ಮಾಡಿ’ ಎಂದು ಹೇಳುವುದು ಖಚಿತ.

ಊರು ಯಾವುದಾದರೂ ಆಗಿರಲಿ ಅದು ನನ್ನ ಜೀವನ ಶೈಲಿಯನ್ನು ಬದಲಿಸಲು ಆಗಿಲ್ಲ. ಪೀಣ್ಯ ಮನೆಯಲ್ಲಿದ್ದಾಗ ನೀರಿಗಾಗಿ ಪಟ್ಟ ಪರಿಪಾಟಲು ಒಂದೆರಡಲ್ಲ. ನೀರಿಗಾಗಿ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸವಾಗಿ ಹೋಗಿತ್ತು. ಹೀಗಾಗಿ ಅದು ಇಂದಿಗೂ ಮುಂದುವರಿದಿದೆ. ರಾತ್ರಿ ಒಂಬತ್ತು ಅಥವಾ ಒಂಬತ್ತುವರೆಗೆ ನಿದ್ದೆ. ಹೀಗಾಗಿ ಯಾವುದೇ ದೇಶದಲ್ಲಿದ್ದರೂ ಅದೇ ನಿಯಮಾವಳಿಗಳನ್ನ ಪಾಲಿಸಿಕೊಂಡು ಬಂದಿದ್ದೇನೆ. ಒಂದು ಔನ್ಸ್ ಬಿಯರ್ ಕೂಡ ಕುಡಿಯದ, ಒಂದು ತುಂಡು ಮೊಟ್ಟೆ ತಿನ್ನದ , ರಾತ್ರಿ ಒಂಬತ್ತಕ್ಕೆ ನಿದ್ರಾದೇವಿಯ ತೆಕ್ಕೆಯಲ್ಲಿ ಪವಡಿಸುವ ನನ್ನಂಥವರಿಗೆ ಇಬಿಸ ಅಲ್ಲವೇ ಅಲ್ಲ. ಅಲ್ಲಿನ ಬದುಕು ಶುರುವಾಗುವುದೇ ರಾತ್ರಿ 11ರ ನಂತರ ! ಬೆಳಗ್ಗೆ ಐದೂವರೆ ಅಥವಾ ಆರಕ್ಕೆ ಪಾರ್ಟಿ ಮುಗಿಯುತ್ತದೆ. ಬೆಳಗಿನ ಜಾವ ಮೂರು ಅಥವಾ ನಾಲ್ಕರಿಂದ ಜನ ನಿಧಾನವಾಗಿ ಹೋಟೆಲ್ ರೂಮ್ ಸೇರಿಕೊಳ್ಳುತ್ತಾರೆ. ಹೆಚ್ಚು ದೈಹಿಕ ಶಕ್ತಿ ಇದ್ದವರು ಬೆಳಗ್ಗೆ ಆರರವರೆಗೆ ಪಾರ್ಟಿ ಮಾಡುತ್ತಲೇ ಇರುತ್ತಾರೆ. ನನಗೆ ಇಬಿಸಗೆ ಹೋಗಬೇಕು ಎನ್ನುವ ಮನಸ್ಸು ಇರಲಿಲ್ಲ. ಏಕೆಂದರೆ ಅಲ್ಲಿ ಬರೀ ಗಲಾಟೆ ಮತ್ತು ಗದ್ದಲ ಬಿಟ್ಟು ಬೇರೇನೂ ಇಲ್ಲ. ಹೀಗೆ ಯುವ ಜನತೆ ಸೇರಿದ ಮೇಲೆ ಮತ್ತು ಹೇಳಿಕೇಳಿ ಅದು ಮೋಜಿಗೆ ಪ್ರಸಿದ್ಧ ಎಂದ ಮೇಲೆ ಅಲ್ಲಿ ಹೊಡೆದಾಟ ಮತ್ತು ಕಿತ್ತಾಟ ಕೂಡ ಇದ್ದೇ ಇರುತ್ತದೆ. ಹೀಗಾಗಿ ಈ ಎಲ್ಲಾ ಗದ್ದಲಗಳಿಂದ ನಾನು ಮಾರುದೂರ. ಹೀಗಿದ್ದೂ ಎರಡು ದಿನದ ಮಟ್ಟಿಗೆ ಅಲ್ಲಿ ವಾಸ ಮಾಡಿದ ಅನುಭವ ಮರೆಯುವಂತಿಲ್ಲ. ಸಾಮಾನ್ಯವಾಗಿ ಸ್ಪ್ಯಾನಿಶರು ಎಂದಲ್ಲ ಎಲ್ಲಾ ಯುರೋಪಿಯನ್ನರು ಹದಿನಾರು ವರ್ಷದಿಂದ ಮೂವತ್ತು ಅಥವಾ ಮೂವತ್ತೈದು ವರ್ಷದವರೆಗೆ ಜೀವನ ಎಂದರೆ ಮೋಜಿಗಾಗಿ ಇರುವುದು ಎನ್ನುವಂತೆ ಕಳೆಯುತ್ತಾರೆ. ಎಲ್ಲರೂ ಅಂತಲ್ಲ ಬಹುತೇಕರು ಕಳೆಯುವುದು ಹೀಗೆ. ಜೀವನ ವೆಂದರೆ ಕುಣಿಯುವುದು, ಕುಡಿಯುವುದು ಮತ್ತು ತಿನ್ನುವುದು ಎನ್ನುವಂತೆ ಕಳೆಯುತ್ತಾರೆ. ಸಂಬಂಧಗಳ ಬಗ್ಗೆ ಕೂಡ ಸೀರಿಯಸ್ ಆಗಿರುವವರ ಸಂಖ್ಯೆ ಈ ವಯೋಮಾನದಲ್ಲಿ ಕಡಿಮೆ.
ಇನ್ನೊಂದು ಇದೇ ರೀತಿಯ ಜಾಗವಿದೆ. ಅದು ಜರ್ಮನ್ ಮತ್ತು ಬ್ರಿಟಿಷ್ ಜನರಿಗೆ ಇಷ್ಟವಾದ ಮೋಜಿನ ತಾಣ ಯೋರೆತ್ ದೆ ಮಾರ್. ಇದು ಕೂಡ ಸದಾ ಕಾಲ ಅಂದರೆ ಚಳಿಗಾಲ ಒಂದು ಬಿಟ್ಟು ಮಿಕ್ಕ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಇಬಿಸದಲ್ಲಿನ ಮಟ್ಟದ ಮೋಜಿಗಿಂತ ಒಂದಿಪ್ಪತ್ತು ಪ್ರತಿಶತ ಕಡಿಮೆ ಎನ್ನಬಹುದು. ಮಿಕ್ಕಂತೆ ಉಳಿದೆಲ್ಲವೂ ಇಲ್ಲಿಯೂ ಸೇಮ್ . ಹೀಗಾಗಿ ಮೋಜನ್ನು ಬಯಸುವ ಯುವ ಜನತೆ ವಿಶ್ವದ ಎಲ್ಲೆಡೆಯಿಂದ ಇಂಥ ಸ್ಥಳಕ್ಕೆ ಹಿಂಡುಹಿಂಡಾಗಿ ಬರುತ್ತಾರೆ. ಯೋರೆತ್ ದೆ ಮಾರ್ ನಲ್ಲಿ ಸಂಸಾರ ಸಮೇತ ಹಲವಾರು ತಿಂಗಳು ಕಳೆದಿದ್ದೇನೆ. ಅವರು ಮಾಡುವ ಯಾವುದನ್ನೂ ಮಾಡದೆ ನಮ್ಮದೇ ಆದ ಜೀವನವನ್ನು ಎಲ್ಲಿ ಬೇಕಾದರೂ ಕಟ್ಟಿ ಕೊಳ್ಳಬಹುದು ಎನ್ನುವುದನ್ನು ಅನುಭವಿಸಿ ಕಲಿತಿದ್ದೇನೆ.

ಮೊದಲ ಸಾಲಿನಲ್ಲಿ ಸ್ಪೇನ್ ಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಾಧ್ಯವಾದರೆ ಭೇಟಿ ಕೊಡಬೇಕು ಎನ್ನುವ ಸಲಹೆಯನ್ನು ನೀಡಲು ನನ್ನ ಪ್ರಕಾರ ಕೆಲವು ಕಾರಣಗಳಿವೆ. ಅವುಗಳನ್ನು ನಿಮಗಾಗಿ ಪಟ್ಟಿ ಮಾಡುತ್ತೇನೆ.
ಆಹಾರ:
ಸ್ಪ್ಯಾನಿಶ್ ಆಹಾರ ಜಗದ್ವಿಖ್ಯಾತ. ಅದರಲ್ಲೂ ಸ್ಪ್ಯಾನಿಶ್ ತಾಪಸ್, ಪಿಕಾಪಿಕಾ ಬಹಳ ಪ್ರಸಿದ್ಧವಾಗಿದೆ. ಭಾರತೀಯರಂತೆ ಇಲ್ಲಿ ಕೂಡ ಹಲವಾರು ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ. ಇಷ್ಟು ರೀತಿಯ ಆಹಾರ ಯರೋಪಿನ ಇತರ ನಗರಗಳಲ್ಲಿ ಅಥವಾ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲದೆ ಯರೋಪಿನ ಇತರ ನಗರಗಳಿಗೆ ಹೋಲಿಸಿದರೆ ಸ್ಪೇನ್ ನ ಯಾವುದೇ ನಗರವೂ ಅಷ್ಟೊಂದು ದುಬಾರಿಯಲ್ಲ. ಆಹಾರದ ಗುಣಮಟ್ಟದ ಮುಂದೆ ನಾವು ನೀಡುವ ಹಣ ಏನೂ ಅಲ್ಲ ಎನ್ನಿಸುತ್ತದೆ.
ವೈನ್:
ಸ್ಪೇನ್ ದೇಶದಲ್ಲಿ ತಯಾರಾಗುವ ವೈನ್ ವಿಶ್ವಮಾನ್ಯತೆ ಪಡೆದಿದೆ. ಇಲ್ಲಿ ವೈನ್ ಟೂರಿಸಂ ಎನ್ನುವುದು ಕೂಡ ಪ್ರಸಿದ್ಧವಾಗಿದೆ. ಇಲ್ಲಿನ ಹಳ್ಳಿ ಪ್ರದೇಶದಲ್ಲಿನ ಜೀವನ ಶೈಲಿಗೆ ಮರುಳಾಗದವರೇ ಕಡಿಮೆ.

ಬೀಚುಗಳು:
ಬೀಚುಗಳು ಎಂದ ತಕ್ಷಣ ನಿಮಗೆ ಕೆರೆಬಿಯನ್ ಬೀಚುಗಳು ನೆನಪಿಗೆ ಬರುತ್ತದೆ ಅಲ್ಲವೇ? ಅದು ಸತ್ಯ ಕೂಡ. ಹಾಗೆಯೇ ಸ್ಪೇನ್ ದೇಶದ ಬೀಚುಗಳು ಕೂಡ ವಿಶ್ವಮಾನ್ಯ. ಕೋಸ್ಟಾ ಬ್ರಾವಾ ವನ್ನು ಸ್ಪೇನ್ ದೇಶದ ಬೀಚುಗಳ ಮುಕುಟಮಣಿ ಎಂದು ಕರೆಯಲಾಗುತ್ತದೆ . ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಿಯೇ ತೀರಬೇಕು. ಅಲ್ಲದೆ ಸ್ಪೇನ್ ನ ಹಲವಾರು ಬೀಚುಗಳು ನ್ಯೂಡ್ ಬೀಚುಗಳು. ಹೀಗಾಗಿ ವಿಶ್ವದಾದ್ಯಂತ ಜನ ಇಲ್ಲಿಗೆ ಬರುತ್ತಾರೆ. ಸಾಮಾನ್ಯ ಬೀಚಿಗೂ ಮತ್ತು ನ್ಯೂಡ್ ಬೀಚಿಗೂ ಮಧ್ಯೆ ಗೆರೆಯೇನೂ ಎಳೆದಿರುವುದಿಲ್ಲ. ಹೀಗಾಗಿ ಸ್ವಲ್ಪ ದೂರದಿಂದ ಎಲ್ಲರಿಗೂ ಎಲ್ಲವೂ ಕಾಣುತ್ತಿರುತ್ತದೆ.
ಫೆಂಟಾಸ್ಟಿಕ್ ಫೀಯಸ್ತಾಸ್:
ಸ್ಪೇನ್ ನಲ್ಲಿ ಒಂದಲ್ಲ ಎರಡಲ್ಲ ಅನೇಕ ಹಬ್ಬಗಳಿವೆ. ಹಬ್ಬ ಎಂದ ತಕ್ಷಣ ಯಾವುದೋ ಧರ್ಮಕ್ಕೆ ಸಂಬಂಧ ಪಟ್ಟ ಆಚರಣೆ ಇರುತ್ತದೆ ಎನ್ನುವ ಭಾವನೆ ಬೇಡ. ಇವು ಫನ್ ಹಬ್ಬಗಳು. ಉದಾಹರಣೆಗೆ ಗೂಳಿ ಓಟ ಅಥವಾ ಬುಲ್ ರನ್ , ತಮಾತಿನ (ಟೊಮೋಟಿನ ), ಕೊರ್ರೆ ಫೋಕ್, ಹೀಗೆ ಧಾರ್ಮಿಕ ಹಬ್ಬಗಳ ಹೊರತು ಪಡಿಸಿ ಎಲ್ಲರೂ ಸೇರಿ ಕುಣಿಯಬಹುದಾದ ಹಬ್ಬಗಳಿಗೆ ಸ್ಪೇನ್ ನಲ್ಲಿ ಕೊರತೆಯಿಲ್ಲ. ಇಲ್ಲೇನಿದ್ದರೂ ಕೊಮೆರ್ , ಕಾಂತರ್ ಮತ್ತು ಬೈಲಾರ್! ಅಂದರೆ ತಿನ್ನುವುದು , ಹಾಡುವುದು ಮತ್ತು ಕುಣಿಯುವುದು ಮುಖ್ಯವಾಗುತ್ತದೆ. ಜಗತ್ತಿನ ಬೇರಾವ ಬಾಧೆಗಳು ಇಲ್ಲಿ ಬಾಧಿಸುವುದಿಲ್ಲ ಎನ್ನುವ ಮಟ್ಟದಲ್ಲಿ ಮೋಜು ಮಾಡುತ್ತಾರೆ.
ಯುನೆಸ್ಕೋ ಹೆರಿಟೇಜ್ ಸ್ಥಳಗಳು:
ಸ್ಪೇನ್ ದೇಶದಲ್ಲಿ ಯುನೆಸ್ಕೋ ದಿಂದ ಮಾನ್ಯತೆ ಪಡೆದಿರುವ ಒಟ್ಟು 45 ಪ್ರೇಕ್ಷಣೀಯ ಸ್ಥಳಗಳಿವೆ. ಒಂದಕ್ಕಿಂತ ಒಂದನ್ನು ಜತನದಿಂದ ಕಾಯ್ದಿಟ್ಟಿದ್ದಾರೆ. ಜಗತ್ತಿನೆಲ್ಲೆಡೆ ಯಿಂದ ಜನ ಇವುಗಳ ವೀಕ್ಷಣೆಗೆ ಬರುತ್ತಾರೆ. ಫ್ರಾನ್ಸ್ ದೇಶದ ಪ್ಯಾರಿಸ್ ನಗರ ಮತ್ತು ಇಂಗ್ಲೆಂಡ್ ದೇಶದ ಲಂಡನ್ ನಂತರ ಯುರೋಪಿನಲ್ಲಿ ಅತಿ ಹೆಚ್ಚು ಜನ ಭೇಟಿ ನೀಡಿರುವ ಜಾಗ ಎನ್ನುವ ಕೀರ್ತಿಗೂ ಬಾರ್ಸಿಲೋನಾ ಭಾಜನವಾಗಿದೆ.

ಫುಟ್ ಬಾಲ್:
ಬಾರ್ಸಿಲೋನಾ ಫುಟ್ ಬಾಲ್ ಕ್ಲಬ್ ಮತ್ತು ರಿಯಲ್ ಮ್ಯಾಡ್ರಿಡ್ ಫುಟ್ ಬಾಲ್ ಕ್ಲಬ್ ನಡುವಿನ ಆಟ ಅದು ಆಟವಲ್ಲ, ಕದನ ಎನ್ನುವಂತಿರುತ್ತದೆ. ಸ್ಟೇಡಿಯಂ ನಲ್ಲಿನ ವಾತಾವರಣ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಆಟದ ನೆನಪನ್ನು ತರಿಸುವಂತಿರುತ್ತದೆ. ಈ ಭಾಗದಲ್ಲಿ ಕ್ರಿಕೆಟ್ ಮತ್ತು ಇಂಗ್ಲಿಷ್ ಎರಡಕ್ಕೂ ಕವಡೆ ಕಿಮ್ಮತ್ತು ಕೂಡ ಇಲ್ಲ. ಇಲ್ಲಿ ಏನಿದ್ದರೂ ಅವರ ಭಾಷೆ ಅವರಿಗೆ ದೊಡ್ಡದು. ಇನ್ನು ಕ್ರಿಕೆಟ್ ಇಲ್ಲಿನವರು ಆಡುವುದೇ ಇಲ್ಲ. ಫುಟ್ ಬಾಲ್ ಇಲ್ಲಿನ ಪ್ರಮುಖ ಕ್ರೀಡೆ.
ವಿಶ್ವವಿಖ್ಯಾತ ಪ್ರವಾಸಿ ತಾಣಗಳು:
ಸ್ಪೇನ್ ದೇಶದಲ್ಲಿ ಟೆನೆರಿಫ್ ಎನ್ನುವ ದ್ವೀಪವಿದೆ , ಇಬಿಸ ದ್ವೀಪವಿದೆ. ಮಯೋರ್ಕ , ಮೆನೊರ್ಕ , ಬಾರ್ಸಿಲೋನಾ , ಗ್ರನಾದ , ಅಲಿಕಾಂತೆ , ವಾಲೆನ್ಸಿಯಾ , ಮ್ಯಾಡ್ರಿಡ್ , ಬಿಲ್ಬಾವ್ ಹೀಗೆ ವಿಖ್ಯಾತ ಸ್ಥಳಗಳ ದೊಡ್ಡ ಪಟ್ಟಿಯೇ ಇದೆ. ಪ್ರತಿ ನಗರದಲ್ಲೂ ವಾರಗಟ್ಟಲೆ ಕಳೆಯಬಹುದಾದಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಸ್ಪೇನ್ ದೇಶದ ಇಂಚಿಂಚು ಕೂಡ ನೋಡಲು ಅರ್ಹ ಸ್ಥಳಗಳಿಂದ ತುಂಬಿದೆ ಎಂದರೆ ಅದು ಅತಿಶಯೋಕ್ತಿ ಎನ್ನಿಸಿಕೊಳ್ಳುವುದಿಲ್ಲ.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸೌಂದರ್ಯ ಇದ್ದೇ ಇರುತ್ತದೆ. ನಾವೇಕೆ ಅಲ್ಲಿಗೆ ಹೋಗಬೇಕು ಎನ್ನುವುದಕ್ಕೆ ಸಬಲ ಕಾರಣಗಳು ಇರುತ್ತವೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದ್ದೇ ಇರುತ್ತದೆ. ಒಳಿತನ್ನು ತನ್ನದಾಗಿಸಿಕೊಳ್ಳುತ್ತಾ, ಕೆಟ್ಟದನ್ನು ಬಿಟ್ಟು ಮುಂದೆ ಸಾಗುವ ಪ್ರಯಾಣವೇ ಬದುಕು. ಅಂಥ ಬದುಕು ನಮ್ಮದಾಗಲಿ.