ಸಿಟಿ ಆಫ್ ಡೆಡ್ ಮತ್ತು ಬೆರಗುಗಣ್ಣಿನ ನಾನು!
ಹಲವಾರು ಮಿನಾರುಗಳಿಂದ ಒಂದೇ ಸಮಯದಲ್ಲಿ ಕೇಳಿಬರುವ ಆಝಾನ್ (ಪ್ರಾರ್ಥನಾ ಕರೆ), ಬೀದಿ ಜೀವನದ ಶಬ್ದಗಳೊಂದಿಗೆ ಬೆರೆತು ಕೈರೋಗೆ ವಿಶೇಷ ಧ್ವನಿಸಂಸ್ಕೃತಿಯನ್ನು ನೀಡುತ್ತದೆ. ಇಲ್ಲಿನ ಆಝಾನ್ ಬೇರೊಂದು ರೀತಿಯಲ್ಲಿ ಕೇಳಿಸುತ್ತದೆ. ಕಿವಿಗೆ ಇಂಪಾಗಿ ಕೇಳಿಸುತ್ತಿತ್ತು. ಇಲ್ಲಿ 90 ಪ್ರತಿಶತ ಸುನ್ನಿ ಮುಸ್ಲಿಮರು ಇದ್ದಾರೆ. ಹೀಗಿದ್ದೂ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗನ್ ಹಿಡಿದು ನಿಂತಿದ್ದ ಕಾವಲು ಪಡೆ ಕಣ್ಣಿಗೆ ಬಿತ್ತು. ಮೂಲಭೂತವಾದಿಗಳು ಅಂದರೆ ಕಟ್ಟರು ಪಂಥೀಯರು ಹೊಸ ನಾಗರೀಕತೆಗೆ ಈಜಿಪ್ಟ್ ತೆರೆದುಕೊಂಡಿರುವುದನ್ನು ಒಪ್ಪುವುದಿಲ್ಲ.
- ರಂಗಸ್ವಾಮಿ ಮೂಕನಹಳ್ಳಿ
ಗೀಸಾ ನಗರದಲ್ಲಿ ಪಿರಮಿಡ್ಡು ಮತ್ತು ರಾತ್ರಿಯ ವೇಳೆಯಲ್ಲಿ ಪ್ರದರ್ಶಿಸುವ ಸೌಂಡ್ ಅಂಡ್ ಲೈಟ್ ಕಾರ್ಯಕ್ರಮವನ್ನು ಮುಗಿಸಿಕೊಂಡು ನಾವು ಕೈರೋ ನಗರದ ಕಡೆಗೆ ಹೊರಟಿದ್ದೆವು. ನಾಗೇಂದ್ರ ಎಲ್ಲೆಡೆ ಮೊದಲಿಗೆ ಏರ್ ಬಿ ಎನ್ ಬಿ ಮೂಲಕ ಅತ್ಯುತ್ತಮ ಸುಸಜ್ಜಿತ ಅಪಾರ್ಟ್‌ಮೆಂಟ್ ಬುಕ್ ಮಾಡಿದ್ದರು. ಹೀಗಾಗಿ ರಾತ್ರಿ ಹತ್ತರ ಸುಮಾರಿಗೆ ಕೈರೋ ತಲುಪಿದರೂ ನಮಗೇನೂ ತೊಂದರೆಯಾಗಲಿಲ್ಲ. ಮಲಗಿದ್ದಷ್ಟೇ ನೆನಪು, ಬೆಳಗಾಗಿದ್ದು ಗೊತ್ತಾಗಲಿಲ್ಲ. ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕೈರೋ ನಗರ ಪ್ರದಕ್ಷಿಣೆ ಹಾಕಲು ಹೊರೆಟೆವು.
ಇದನ್ನೂ ಓದಿ: ಪಿರಮಿಡ್ ಎಂಬುದು ಸಾವಿನ ನಂತರದ ಬದುಕಿನ ಸಿದ್ಧತೆ!
ಕೈರೋ ಒಂದು ಅಪರೂಪದ ನಗರ. ಇಲ್ಲಿ ಫಾರೋ, ರೋಮನ್, ಕಾಪ್ಟಿಕ್, ಇಸ್ಲಾಮಿಕ್ ಮತ್ತು ಆಧುನಿಕ ನಾಗರೀಕತೆಗಳು ಒಂದೇ ಪ್ರದೇಶದಲ್ಲಿ ಸಹಜವಾಗಿ ತಲೆ ಎತ್ತಿ ನಿಂತಿವೆ. ಸುಮಾರು 4,500 ವರ್ಷಗಳಷ್ಟು ಹಳೆಯ ಗೀಸಾ ಪಿರಮಿಡ್‌ಗಳು, ಗಿಜಿಗುಡುತ್ತಿರುವ ಆಧುನಿಕ ಮಹಾನಗರದ ಅಂಚಿನಲ್ಲಿ ನಿಂತಿವೆ. ಇಂಥ ದೃಶ್ಯ ಜಗತ್ತಿನಲ್ಲಿ ಅಪರೂಪ ಎನ್ನಬಹುದು. ಐತಿಹಾಸಿಕ ಮಸೀದಿಗಳ ಅಪಾರ ಸಂಖ್ಯೆಯಿಂದ ಕೈರೋಗೆ ʼಸಾವಿರ ಮಿನಾರುಗಳ ನಗರʼ ಎಂಬ ಹೆಸರು ಕೂಡ ಬಂದಿದೆ. ಕೈರೋದಲ್ಲಿ ಸಾವಿರಾರು ಜನರು ಸಮಾಧಿಗಳ ಮಧ್ಯೆ ವಾಸಿಸುತ್ತಾರೆ. ಇದು ಬಡತನದ ಸಂಕೇತವಲ್ಲ. ಶತಮಾನಗಳ ಹಿಂದಿನ ನಗರ ವಿಸ್ತರಣೆಯ ಪರಿಣಾಮ ಮತ್ತು ಬದುಕಿನ ಹೊಂದಾಣಿಕೆಯ ಉದಾಹರಣೆ ಅಷ್ಟೇ. ಈ ರೀತಿ ಸಮಾಧಿಗಳ ನಡುವೆ ಜೀವಿಸುವ ಮತ್ತು ಹತ್ತಾರು ಸಮಾಧಿಗಳು ಇರುವ ಕಾರಣ ಈ ನಗರಕ್ಕೆ ಸಿಟಿ ಆಫ್ ಡೆಡ್ ಎಂದೂ ಕರೆಯಲಾಗುತ್ತದೆ.

ಇನ್ನೊಂದು ಅಚ್ಚರಿಯ ವಿಚಾರ ನನ್ನ ಕಣ್ಣಿಗೆ ಬಿದ್ದದ್ದು ಕೈರೋದಲ್ಲಿ ಇತಿಹಾಸ ಎಂದರೆ ಅದು ಕೇವಲ ಸಂಗ್ರಹಾಲಯದಲ್ಲಿರುವ ವಸ್ತುವಿನಂತೆ ಅಲ್ಲವೇ ಅಲ್ಲ. ಇಲ್ಲಿ ಜನರು ಶತಮಾನಗಳಷ್ಟು ಹಳೆಯ ಕಟ್ಟಡಗಳಲ್ಲೇ ವಾಸಿಸಿ, ಪ್ರಾರ್ಥಿಸಿ, ವ್ಯಾಪಾರ ಮಾಡಿ ಬದುಕುತ್ತಿದ್ದಾರೆ. ಕೆಲವೊಮ್ಮೆ ಈ ಕಟ್ಟಡ ಕುಸಿದರೇನು ಗತಿ ಎನಿಸಿದ್ದೂ ಉಂಟು. ಇಂಥ ಜತನವಾಗಿರುವ ಕಟ್ಟಡದ ಮುಂದೆ ನಿಂತು 'ನೋಡಿ ನಾಗೇಂದ್ರ, ಮುಂದೊಂದು ದಿನ ನ್ಯೂಸ್ ನಲ್ಲಿ ಈಜಿಪ್ಟಿನಲ್ಲಿ ಪುರಾತನ ಕಟ್ಟಡ ಕುಸಿತ' ಎಂದು ಸುದ್ದಿ ಬಂದರೆ ಅವತ್ತು ನೆನಪಿಸಿಕೊಳ್ಳೋಣ ಎಂದು ಮಾತಾಡಿಕೊಂಡೆವು. ಪ್ರವಾಸಿಗರಾಗಿ ಹೋದ ನಮಗೆ ಭಯ. ಅವರಿಗದು ಸಹಜ ಜೀವನ. ಇದೇ ವ್ಯತ್ಯಾಸ.
ಹಲವಾರು ಮಿನಾರುಗಳಿಂದ ಒಂದೇ ಸಮಯದಲ್ಲಿ ಕೇಳಿಬರುವ ಆಝಾನ್, ಬೀದಿ ಜೀವನದ ಶಬ್ದಗಳೊಂದಿಗೆ ಬೆರೆತು ಕೈರೋಗೆ ವಿಶೇಷ ಧ್ವನಿಸಂಸ್ಕೃತಿಯನ್ನು ನೀಡುತ್ತದೆ. ಇಲ್ಲಿನ ಆಝಾನ್ ಬೇರೊಂದು ರೀತಿಯಲ್ಲಿ ಕೇಳಿಸುತ್ತದೆ. ಕಿವಿಗೆ ಇಂಪಾಗಿ ಕೇಳಿಸುತ್ತಿತ್ತು. ಇಲ್ಲಿ 90 ಪ್ರತಿಶತ ಸುನ್ನಿ ಮುಸ್ಲಿಮರು ಇದ್ದಾರೆ. ಹೀಗಿದ್ದೂ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗನ್ ಹಿಡಿದು ನಿಂತಿದ್ದ ಕಾವಲು ಪಡೆ ಕಣ್ಣಿಗೆ ಬಿತ್ತು. ಮೂಲಭೂತವಾದಿಗಳು ಅಂದರೆ ಕಟ್ಟರ್ ಪಂಥೀಯರು ಹೊಸ ನಾಗರೀಕತೆಗೆ ಈಜಿಪ್ಟ್ ತೆರೆದು ಕೊಂಡಿರುವುದನ್ನು ಒಪ್ಪುವುದಿಲ್ಲ. ಹೀಗಾಗಿ ಸರಕಾರ ಮತ್ತು ಮೂಲಭೂತವಾದಿಗಳ ನಡುವೆ ಸಂಘರ್ಷ ಜಾರಿಯಲ್ಲಿದೆ. ಎಲ್ಲಾ ದೇಶಗಳಲ್ಲಿ ಮಾಡುವಂತೆ ಇವರು ಸದ್ದಿಲ್ಲದೇ ಬಂದು ಜನ ಸಾಂದ್ರತೆ ಹೆಚ್ಚಿರುವ ಕಡೆ ಜೀವಹಾನಿ ಮಾಡುವ ಕೃತ್ಯಗಳನ್ನು ಮಾಡಿ ಹೋಗುತ್ತಾರೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಹೆಜ್ಜೆಹೆಜ್ಜೆಗೂ ಪೊಲೀಸರನ್ನು ಕಾಣಬಹುದು. ಅಚ್ಚರಿ ಅನಿಸಿದ್ದು ಎಲ್ಲರ ಕೈಯಲ್ಲೂ ಇದ್ದ ಆಟೋಮ್ಯಾಟಿಕ್ ಮೆಷಿನ್ ಗನ್ನುಗಳು. ಕೈರೋ ಅರಬ್ ಜಗತ್ತಿನ ಬೌದ್ಧಿಕ, ಚಲನಚಿತ್ರ ಮತ್ತು ಮಾಧ್ಯಮ ಕೇಂದ್ರ. ಇಲ್ಲಿ ನಿರ್ಮಾಣವಾದ ಭಾಷೆ, ಸಿನಿಮಾ ಮತ್ತು ಸಂಗೀತವು ಕೋಟಿ ಜನರನ್ನು ಪ್ರಭಾವಿಸುತ್ತದೆ. ಸಂಗೀತ, ಹಾಡು, ಕಲೆ ಇತ್ಯಾದಿಗಳನ್ನು ಇಸ್ಲಾಂ ಒಪ್ಪುವುದಿಲ್ಲ ಎನ್ನುವ ಕಟ್ಟರ್ ಮನಸ್ಥಿತಿ ಜನರ ಮಧ್ಯೆ ಈಜಿಪ್ಟ್ ಸಾಂಸ್ಕೃತಿಕವಾಗಿ ಅರಬ್ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಗಲ್ಲಿಗಳಲ್ಲಿ ನಡೆದುಕೊಂಡು ಹೋಗುತ್ತಾ ಭಾನುವಾರದ ಒಂದು ಸಂಜೆ ಥಿಯೇಟರ್ ಮುಂದೆ ಟಿಕೆಟ್ ಕೊಳ್ಳಲು ಕ್ಯೂ ನಿಂತಿದ್ದ ಜನರನ್ನು ಕಂಡು 'ದೇಶ, ಭಾಷೆ, ವೇಷ, ಧರ್ಮ, ಆಚರಣೆ ಬದಲಾದರೂ, ಸಾಹಿತ್ಯ, ಸಂಗೀತ, ಸಿನಿಮಾ, ಒಟ್ಟಾರೆ ಎಂಟರ್ಟೇನ್ಮೆಂಟ್ ವಿಷಯದಲ್ಲಿ ಜನಸಾಮಾನ್ಯನ ನಡವಳಿಕೆ ಸೇಮ್' ಎಂದು ನಾಗೇಂದ್ರ, ನಾನು ಮಾತಾಡಿಕೊಂಡೆವು. ಕೊನೆಗೂ ಬದುಕಿಗೆ ಬೇಕಿರುವುದು ಉತ್ತಮ ಬದುಕು, ಒಂದೊಳ್ಳೆ ಊಟ, ನಿದ್ದೆಗೆ ಅನುಗುಣವಾದ ಮನೆ, ಬಟ್ಟೆ, ಖರ್ಚಿಗೊಂದಷ್ಟು ದುಡ್ಡು ಮತ್ತು ಮನೋರಂಜನೆ ಅಲ್ವಾ? ಇರಲಿ ಒಂದು ಕೈರೋ ನಗರದಲ್ಲಿ ನಿಮಗೆ ಹತ್ತು ಕೈರೋ ನೋಡಲು ಸಿಗುತ್ತದೆ. ಪ್ರಾಚೀನ ಕೈರೋ ನೋಡಬೇಕು, ಹೆಚ್ಚು ಇತಿಹಾಸ ತಿಳಿದುಕೊಳ್ಳಬೇಕು ಎನ್ನುವವರು ತಪ್ಪದೇ ಭೇಟಿ ನೀಡಬೇಕಾದ ಸ್ಥಳಗಳು ಹಲವಾರಿವೆ.
ಅದರಲ್ಲ ಪ್ರಮುಖವೆಂದರೆ ಗೀಸಾ ಪಿರಮಿಡ್‌ಗಳು, ಗ್ರೇಟ್ ಪಿರಮಿಡ್, ಖಫ್ರೆ ಮತ್ತು ಮೆನ್ಕೌರೆ. ಆನಂತರ ಸ್ಫಿಂಕ್ಸ್(ರಹಸ್ಯಮಯ ಹಾಗೂ ಐತಿಹಾಸಿಕ ಶಿಲ್ಪ), ಈಜಿಪ್ಷಿಯನ್ ಮ್ಯೂಸಿಯಂ (ತಹ್ರೀರ್ ಚೌಕ್) ಮತ್ತ ಕಿಂಗ್ ಟುಟಾನ್‌ಖಾಮೆನ್ ಅವರ ಖಜಾನೆಗಳು. ಇದು ಹಳೆಯ ಮ್ಯೂಸಿಯಂ.

ಇನ್ನು ಗ್ರ್ಯಾಂಡ್ ಈಜಿಪ್ಷಿಯನ್ ಮ್ಯೂಸಿಯಂ (GEM) ವಿಶ್ವದ ಅತಿ ದೊಡ್ಡ ಪುರಾತತ್ವ ಮ್ಯೂಸಿಯಂ. ಇದು 2025ರ ನವೆಂಬರ್ ಒಂದರಿಂದ ಜನರಿಗೆ ನೋಡಲು ಸಿಗುತ್ತಿದೆ. ಈ ನಿಟ್ಟಿನಲ್ಲಿ ನೋಡಿದಾಗ ನಾನು ಮತ್ತು ನಾಗೇಂದ್ರ ಪುಣ್ಯವಂತರು. ಇದು ಲೋಕಾರ್ಪಣೆಯಾದ ತಿಂಗಳಿನಲ್ಲೇ ಇದನ್ನು ನೋಡುತ್ತೇವೆ ಎಂದು ನಾವಂತೂ ಅಂದುಕೊಂಡಿರಲಿಲ್ಲ. ಕೆಲವೆಲ್ಲಾ ಪ್ಲಾನ್ ಮಾಡಬಾರದು ಎನ್ನುವ ನನ್ನ ನಂಬಿಕೆಗೆ ಇದರಿಂದ ಇನ್ನಷ್ಟು ಬಲ ಬಂದಿತು.
ಇಸ್ಲಾಮಿಕ್ ಕೈರೋ, ಅಥವಾ ವಾಸ್ತುಶಿಲ್ಪ ಮತ್ತು ಧಾರ್ಮಿಕ ಪರಂಪರೆಯನ್ನು ಕಣ್ತುಂಬಿಕೊಳ್ಳಲು ಬಯಸಿದರೆ ಸಲಾದಿನ್ ಕೋಟೆ (Citadel), ಮೊಹಮ್ಮದ್ ಅಲಿ ಮಸೀದಿ, ಅಲ್-ಅಝರ್ ಮಸೀದಿ,(ಜಗತ್ತಿನ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದು) ಸುಲ್ತಾನ್ ಹಸನ್ ಮತ್ತು ಅಲ್-ರಿಫಾಯಿ ಮಸೀದಿಗಳು –ಇವುಗಳನ್ನು ಮಿಸ್ ಮಾಡುವಂತಿಲ್ಲ.
ಹಳೆಯ ಅಥವಾ ಪುರಾತನ ಕೈರೋ ಮತ್ತು ಕಾಪ್ಟಿಕ್ ಪರಂಪರೆಯನ್ನು ಕಾಣಬೇಕು ಎನ್ನುವ ಪ್ರವಾಸಿಗರು ಹ್ಯಾಂಗಿಂಗ್ ಚರ್ಚ್, ಬೆನ್ ಎಝ್ರಾ ಸೈನಗಾಗ್, ಅಮ್ರ್ ಇಬ್ನ್ ಅಲ್-ಆಸ್ ಮಸೀದಿ(ಇದು ಈಜಿಪ್ಟ್‌ನ ಮೊದಲ ಮಸೀದಿ) ಶತಮಾನಗಳ ಇತಿಹಾಸ ಹೇಳುವ ಶಾಂತ ಗಲ್ಲಿಗಳು; ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ.
ಅವೆಲ್ಲಾ ಇದ್ದದ್ದೇ ಕಣ್ರೀ.. ನನಗೆ ಸ್ಥಳೀಯ ಜೀವನ, ಮಾರುಕಟ್ಟೆಗಳು ಮತ್ತು ನೈಲ್ ನದಿ ಜಾಸ್ತಿ ಇಷ್ಟ ಎನ್ನುವವರಿಗೂ -ಖಾನ್ ಎಲ್-ಖಲೀಲಿ ಬಜಾರ್ – ಸ್ಮರಣಿಕೆಗಳು, ಮಸಾಲೆಗಳು, ದೀಪಗಳು, ಕಾಫಿ ಅಂಗಡಿಗಳು ಇಂಥವು ಕೈರೊದಲ್ಲಿ ಬಹಳಷ್ಟಿದೆ.
ನೈಲ್ ನದಿಯಲ್ಲಿ ಫೆಲುಕ್ಕಾ ದೋಣಿ ಸವಾರಿ, ಸೂರ್ಯಾಸ್ತ ಸಮಯದಲ್ಲಿ ಅತ್ಯಂತ ಸುಂದರ. ನೈಲ್ ನದಿ ಕೈರೋಗೆ ಕೇವಲ ನೈಸರ್ಗಿಕ ಸೌಂದರ್ಯವಲ್ಲ, ಅದು ನಗರದ ಸಂಸ್ಕೃತಿ, ಜೀವನಶೈಲಿ ಮತ್ತು ದಿನನಿತ್ಯದ ಜೀವನದ ಅವಿಭಾಜ್ಯ ಅಂಗ.
ಕೈರೋ ಟವರ್ ನಿಂದ ನಗರದ ವಿಶಾಲ ದೃಶ್ಯ, ಅಲ್-ಅಝರ್ ಪಾರ್ಕ್, ನಗರದ ಮಧ್ಯೆ ಹಸಿರು ವಿಶ್ರಾಂತಿ ಸ್ಥಳ ಇವೆಲ್ಲ ಬಿಸಿಲು, ಟ್ರಾಫಿಕ್ ನಡುವೆ ಮನಸ್ಸಿಗೆ ಮುದ ನೀಡುತ್ತದೆ.
ಖಾನ್ ಎಲ್-ಖಲೀಲಿ ಮುಂತಾದ ಮಾರುಕಟ್ಟೆಗಳು 600 ವರ್ಷಕ್ಕಿಂತಲೂ ಹೆಚ್ಚು ಕಾಲ ನಿರಂತರವಾಗಿ ವ್ಯಾಪಾರ ನಡೆಸುತ್ತಾ ಬಂದಿವೆ. ಇಲ್ಲಿನ ಅನುಭವ ವಿವರವಾಗಿ ಬರೆಯುವೆ. ಹಾಗೆಯೇ ಟ್ರಾಫಿಕ್, ಜನಸಂದಣಿ, ಶಬ್ದಗಳ ನಡುವೆಯೂ ಕೈರೋ ನಗರದ ಮಾನವೀಯತೆ, ಆತಿಥ್ಯ, ಹಾಸ್ಯಪ್ರಜ್ಞೆ ಮತ್ತು ಸಹನಶೀಲತೆ ಉಳಿಸಿಕೊಂಡು ಅದನ್ನು ಹೇಗೆ ವಿಶೇಷವಾಗಿಸುತ್ತವೆ. ಕೈರೋದಲ್ಲಿನ ಕೆಲವು ಕಟ್ಟಡಗಳಿಗೆ ಬಣ್ಣ ಹಚ್ಚದೇ ಇರುವುದೇಕೆ? ಇಲ್ಲಿ ಜಖಂಗೊಳ್ಳದೆ ಇರುವ ಕಾರುಗಳು ಅಥವಾ ವಾಹನಗಳೇ ಇಲ್ಲ, ಹೀಗಿದ್ದೂ ದೊಡ್ಡ ಅಪಘಾತ ಆಗುವುದು, ಜನ ಜಗಳಕ್ಕೆ ನಿಲ್ಲುವುದು ಕಡಿಮೆ. ಇಂಥ ಇನ್ನಷ್ಟು ವೈಶಿಷ್ಟ್ಯಗಳ ಜತೆಗೆ ಮುಂದಿನವಾರ ಸಿಗುವೆ.