Tuesday, July 21, 2026
Tuesday, July 21, 2026

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನ ಹರ್ಮಿಟೇಜ್ ಮ್ಯೂಸಿಯಂ : ಅಪೂರ್ವ ಕಲಾ ಖಜಾನೆ

ಇಟಾಲಿಯನ್ ನವೋದಯ (Renaissance) ಕಾಲದ ಮಹಾನ್ ಮೇಧಾವಿ, ವಿಜ್ಞಾನಿ ಮತ್ತು ತತ್ವಜ್ಞಾನಿ ಲಿಯೊನಾರ್ಡೊ ಡಾ ವಿಂಚಿ ಅವರ ಮೂಲ ವರ್ಣಚಿತ್ರಗಳನ್ನು ನೋಡುವುದೇ ಜಗದೊಂದು ಅಪರೂಪದ ಸೌಭಾಗ್ಯ. ಏಕೆಂದರೆ ಇಡೀ ಜಗತ್ತಿನಲ್ಲಿ ಇಂದು ಲಭ್ಯವಿರುವ ಅವರ ದೃಢೀಕೃತ ವರ್ಣಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಅಂಥ ಅತ್ಯಂತ ಅಪರೂಪದ ಎರಡು ಅದ್ಭುತ ಕೃತಿಗಳು ಹರ್ಮಿಟೇಜ್ ಮ್ಯೂಸಿಯಂನ ಗಾಂಭೀರ್ಯವನ್ನು ಹೆಚ್ಚಿಸಿವೆ.

ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಆ ನಗರದ ಗರ್ಭದೊಳಗೆ ಇಳಿದು ಬಂದರೂ, ಇನ್ನೂ ಏನೋ ಬಾಕಿ ಉಳಿದಿದೆ ಎಂಬ ನಿರಂತರ ಹಸಿವಿನ ಹೆಸರೇ ಸೇಂಟ್ ಪೀಟರ್ಸ್ ಬರ್ಗ್. ಎರಡು ಸಲ ಹೋದಾಗಲೂ ತಲಾ ಒಂದು ವಾರದ ಕಾಲ ಅಲ್ಲಿನ ಬೀದಿಗಳಲ್ಲಿ, ಚಳಿಯ ಮುಸುಕಿನಲ್ಲಿ ಕಳೆದುಹೋಗಿದ್ದೆ. ಆದರೂ ಪ್ರತಿ ಬೆಳಗೂ ಹೊಸದೊಂದು ರಹಸ್ಯದ ಕದ ತೆರೆಯುವಂತೆ, ನೋಡಬೇಕಾದ ಜಗತ್ತು ಇನ್ನೂ ಮೈಲುದ್ದ ಚಾಚಿಕೊಂಡಿದೆ ಎನಿಸುತ್ತಲೇ ಇತ್ತು. ಕಾಲದ ಕಡುಬಣ್ಣಗಳು ಅಲ್ಲಿನ ಗೋಡೆಗಳ ಮೇಲೆ ದಿನವೂ ಹೊಸ ಚಿತ್ರ ಬಿಡಿಸುತ್ತಿದ್ದವು. ಅಲ್ಲಿನ ನೆವಾ ನದಿಯ ಮೇಲೆ ತೇಲುವ ತಣ್ಣನೆಯ ಗಾಳಿ ಮತ್ತು ಇತಿಹಾಸದ ನಿಟ್ಟುಸಿರುಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ದಾಟಿಸುತ್ತವೆ. ಈ ನಗರದಲ್ಲಿರುವಷ್ಟು ಗ್ರಂಥಾಲಯಗಳು, ಸ್ಮಾರಕಗಳು, ಕಲಾ ಗ್ಯಾಲರಿಗಳು ಮತ್ತು ವಿಶಿಷ್ಟ ಸೇತುವೆಗಳು ಪ್ರಾಯಶಃ ಈ ಭೂಮಿಯ ಬೇರೆ ಯಾವ ಮಣ್ಣಿನಲ್ಲೂ ಇರಲಿಕ್ಕಿಲ್ಲ. ಪ್ರತಿ ಕಲ್ಲಿನ ಕೆಳಗೂ ಒಂದೊಂದು ಕವಿತೆ, ಪ್ರತಿ ಗ್ಯಾಲರಿಯಲ್ಲೂ ಜೀವಂತ ಕಣ್ಣುಗಳು ನಮ್ಮನ್ನು ದಿಟ್ಟಿಸುವಂತೆ ಭಾಸವಾಗುತ್ತದೆ.

ಇದನ್ನೂ ಓದಿ: ಮೇಘಾಲಯದ ಯಶಸ್ಸಿನ ಸೂತ್ರ : ಕರ್ನಾಟಕಕ್ಕೆ ದಿಕ್ಸೂಚಿಯಾಗಬಲ್ಲದೇ?

ಇದು ಕೇವಲ ಕಲ್ಲು-ಸಿಮೆಂಟಿನ ನಗರಿಯಲ್ಲ, ಬದಲಿಗೆ ಬೆಳಕು ಮತ್ತು ನೆರಳುಗಳ ಜೂಜಾಟ. ಇದನ್ನು 'ರಿನೈಸನ್ ನಗರ' ಎಂದು ಕರೆದ ಆ ಮೊದಲ ಧ್ವನಿ ನಿಜಕ್ಕೂ ಸತ್ಯ ಮತ್ತು ಸಮರ್ಪಕ! ಇಲ್ಲಿನ ಪ್ರತಿಯೊಂದು ಕಟ್ಟಡವೂ ಗತಕಾಲದ ನೋವು ಮತ್ತು ಸೌಂದರ್ಯವನ್ನು ಒಟ್ಟಿಗೇ ಹೊತ್ತು ನಿಂತಿರುವ ಕಾವ್ಯದ ಸಾಲಿನಂತಿದೆ. ಅಲ್ಲಿನ ಗ್ರಂಥಾಲಯಗಳೊಳಗೆ ಕಾಲಿಟ್ಟರೆ ಸಿಗುವ ಮೌನಕ್ಕೆ ಒಂದು ವಿಶಿಷ್ಟ ಘಮಲಿದೆ. ಹಳೆಯ ಕಾಗದಗಳ ವಾಸನೆ, ದಶಕಗಳ ಹಿಂದಿನ ಲೇಖಕರ ಶಾಯಿ ಇಂದಿಗೂ ಒಣಗದಂತೆ ಇತಿಹಾಸದ ಪುಟಗಳು ಉಸಿರಾಡುತ್ತಿರುತ್ತವೆ. ಜಗತ್ತಿನ ಜ್ಞಾನವೆಲ್ಲವೂ ಇಲ್ಲಿನ ಕಪಾಟುಗಳಲ್ಲಿ ಅಡಗಿ ಕುಳಿತಿವೆಯೇನೋ ಎನ್ನುವಂತೆ, ದಿನವಿಡೀ ಕಳೆದರೂ ಮುಗಿಯದ ಮೌನದ ಸಂಭಾಷಣೆ ಅದು. ಬೀದಿ ಬೀದಿಯ ತಿರುವುಗಳಲ್ಲೂ ಸಿಗುವ ಸ್ಮಾರಕಗಳು ಇತಿಹಾಸದ ಮಹಾಪುರುಷರ, ಸಾಮಾನ್ಯರ ಕನಸುಗಳ ಪಳೆಯುಳಿಕೆಗಳು. ಹಿಮ ಬೀಳುವಾಗ ಆ ಸ್ಮಾರಕಗಳ ಹೆಗಲ ಮೇಲೆ ಬಿಳಿ ಶಾಲು ಹೊದಿಸಿದಂತೆ ಭಾಸವಾಗುತ್ತದೆ. ಆ ಮೌನದಲ್ಲೂ ಯಾವುದೋ ಹಳೆಯ ಕಾಲದ ಯುದ್ಧದ, ಪ್ರೇಮದ ಹಾಡುಗಳು ಕೇಳಿಸುವ ಹಾಗೆ ಭ್ರಮೆಯಾಗುತ್ತದೆ.

ನಿಜ, ನಾನು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ ಬಗ್ಗೆ ಹೇಳುತ್ತಿದ್ದೇನೆ.

ಸೇಂಟ್ ಪೀಟರ್ಸ್ ಬರ್ಗ್ ನೆನಪು ಕಣ್ಣ ಮುಂದೆ ಸುಳಿದು ಹೋದರೆ ನನಗೆ ಥಟ್ಟನೆ ನೆನಪಾಗುವುದು ಅಲ್ಲಿನ 'ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂ'. ಅದು ಜಗತ್ತಿನ ಕಲಾ ಇತಿಹಾಸದ ಅತ್ಯಂತ ಭವ್ಯವಾದ ಮತ್ತು ಪ್ರಭಾವಶಾಲಿ ಸಾಂಸ್ಕೃತಿಕ ದೇಗುಲ. ಪ್ರದರ್ಶನ ಸ್ಥಳಾವಕಾಶದ ದೃಷ್ಟಿಯಿಂದ ವಿಶ್ವದಲ್ಲೇ ಅತಿ ದೊಡ್ಡದಾದ ಈ ಮ್ಯೂಸಿಯಂ, ರಷ್ಯಾದ ಸಾಮ್ರಾಜ್ಯಶಾಹಿ ವೈಭವ ಮತ್ತು ಜಾಗತಿಕ ಕಲೆಯ ಅದ್ಭುತ ಸಂಗಮವಾಗಿದೆ. ಇಡೀ ಜಗತ್ತಿನ ಕಲಾತ್ಮಕ ಹಂಬಲಗಳನ್ನೆಲ್ಲ ಒಂದೇ ಸೂರಿನಡಿ ತಂದು ಕೂರಿಸಿದ ಪ್ರೀತಿಯ ಗೂಡಿನಂತೆ ಕಂಗೊಳಿಸುವ ಈ ಕಟ್ಟಡ, ಕೇವಲ ಕಲ್ಲು-ಮಣ್ಣುಗಳ ಇಟ್ಟಿಗೆಯಲ್ಲ; ಅದು ಶತಮಾನಗಳ ಕಾಲದ ಮನುಷ್ಯನ ಸೃಜನಶೀಲತೆಯ ಜೀವಂತ ಕಲಾಕಾರಂಜಿ.

Untitled design (13)

ಹರ್ಮಿಟೇಜ್ ಮ್ಯೂಸಿಯಂನ ಇತಿಹಾಸವು 1764 ರಲ್ಲಿ ರಷ್ಯಾದ ಸಾಮ್ರಾಜ್ಞಿ 'ಕ್ಯಾಥರಿನ್ ದಿ ಗ್ರೇಟ್' ಅವರು ಬರ್ಲಿನ್‌ನ ವ್ಯಾಪಾರಿಯೊಬ್ಬರಿಂದ ಅತ್ಯಂತ ಅಪರೂಪದ ಪಾಶ್ಚಾತ್ಯ ವರ್ಣಚಿತ್ರಗಳ ದೊಡ್ಡ ಸಂಗ್ರಹವನ್ನು ಖರೀದಿಸುವುದರೊಂದಿಗೆ ಪ್ರಾರಂಭವಾಯಿತು. ಆರಂಭದಲ್ಲಿ ಇದು ಕೇವಲ ರಾಜಮನೆತನದ ಖಾಸಗಿ ಸಂಗ್ರಹವಾಗಿತ್ತು. 'ಹರ್ಮಿಟೇಜ್' ಎಂದರೆ "ಏಕಾಂತ ವಾಸಸ್ಥಾನ" ಎಂದರ್ಥ. ಕ್ಯಾಥರಿನ್ ಅವರು ತಮ್ಮ ಮಾನಸಿಕ ಶಾಂತಿ ಮತ್ತು ಆತ್ಮಾವಲೋಕನಕ್ಕಾಗಿ ಕಲಾಕೃತಿಗಳ ಮಧ್ಯೆ ಸಮಯ ಕಳೆಯಲು ಈ ಹೆಸರನ್ನು ಇಟ್ಟಿದ್ದರು. ಕಾಲಾನಂತರದಲ್ಲಿ ಈ ಸಂಗ್ರಹ ಬೆಳೆಯುತ್ತಾ ಹೋಗಿ, 1852 ರಲ್ಲಿ ಇದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಮುಕ್ತಗೊಳಿಸಲಾಯಿತು.

ನೆವಾ ನದಿಯ ದಂಡೆಯ ಮೇಲಿರುವ ಈ ಮ್ಯೂಸಿಯಂ ಆರು ಭವ್ಯವಾದ ಐತಿಹಾಸಿಕ ಕಟ್ಟಡಗಳ ಸಂಕೀರ್ಣವನ್ನು ಒಳಗೊಂಡಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ಆಕರ್ಷಕವಾದದ್ದು 'ವಿಂಟರ್ ಪ್ಯಾಲೇಸ್'. ಇದು ಒಂದು ಕಾಲದಲ್ಲಿ ರಷ್ಯಾದ ಜಾರ್ ರಾಜರ ಅಧಿಕೃತ ನಿವಾಸವಾಗಿತ್ತು. ಬರೊಕ್ (Baroque) ಶೈಲಿಯ ಈ ಹಸಿರು ಮತ್ತು ಬಿಳಿ ಬಣ್ಣದ ಭವ್ಯ ಅರಮನೆ, ಚಿನ್ನದ ಲೇಪಿತ ಒಳಾಂಗಣಗಳು, ಅಮೃತಶಿಲೆಯ ಮೆಟ್ಟಿಲುಗಳು ಮತ್ತು ಭವ್ಯವಾದ ಕ್ರಿಸ್ಟಲ್ ದೀಪಗಳಿಂದ (Chandeliers) ಕೂಡಿದ್ದು, ಪ್ರತಿಯೊಬ್ಬ ಪ್ರವಾಸಿಯನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಸ್ಮಾಲ್ ಹರ್ಮಿಟೇಜ್, ಓಲ್ಡ್ ಹರ್ಮಿಟೇಜ್, ನ್ಯೂ ಹರ್ಮಿಟೇಜ್ ಮತ್ತು ಹರ್ಮಿಟೇಜ್ ಥಿಯೇಟರ್‌ಗಳು ಈ ಸಂಕೀರ್ಣದ ಇತರ ಪ್ರಮುಖ ಭಾಗಗಳಾಗಿವೆ.

ಹರ್ಮಿಟೇಜ್ ಮ್ಯೂಸಿಯಂ ಬಗ್ಗೆ ಯೋಚಿಸಿದಾಗಲೆಲ್ಲ ಅದು ಇಡೀ ಮಾನವ ಕುಲದ ಸಾಂಸ್ಕೃತಿಕ ವಿಕಾಸದ ದೃಶ್ಯರೂಪವೇನೋ ಎಂದು ನನಗೆ ಅನೇಕ ಸಲ ಅನಿಸಿದ್ದುಂಟು. ಸುಮಾರು 30 ಲಕ್ಷಕ್ಕೂ ಹೆಚ್ಚು ಕಲಾಕೃತಿಗಳು ಮತ್ತು ಐತಿಹಾಸಿಕ ವಸ್ತುಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ಈ ಮ್ಯೂಸಿಯಂ, ಜಗತ್ತಿನ ಅತಿ ದೊಡ್ಡ ಮತ್ತು ಅತ್ಯಂತ ಶ್ರೀಮಂತ ಕಲಾ ಖಜಾನೆಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರತಿಯೊಂದು ಗ್ಯಾಲರಿಯೂ ಇತಿಹಾಸದ ಭಿನ್ನ ಕಾಲಘಟ್ಟಗಳಿಗೆ ಮತ್ತು ಕಲಾವಿದರ ಅಪ್ರತಿಮ ಕಲ್ಪನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

ಹರ್ಮಿಟೇಜ್‌ನ ವಿಶೇಷತೆಯೆಂದರೆ ಇಲ್ಲಿನ ಸಂಗ್ರಹಗಳು ಕೇವಲ ಒಂದು ದೇಶ ಅಥವಾ ಒಂದು ಕಾಲಕ್ಕೆ ಸೀಮಿತವಾಗಿಲ್ಲ. ಮಾನವ ಇತಿಹಾಸದ ಆರಂಭಿಕ ದಿನಗಳಾದ ಶಿಲಾಯುಗದ ಪ್ರಾಚೀನ ಕಲ್ಲಿನ ಆಯುಧಗಳು, ಮಡಿಕೆಗಳು ಮತ್ತು ಆದಿಮಾನವನ ಕಲಾಕೃತಿಗಳಿಂದ ಹಿಡಿದು ಇಪ್ಪತ್ತನೇ ಶತಮಾನದ ಅತ್ಯಾಧುನಿಕ ಕಲಾ ಚಳವಳಿಗಳವರೆಗಿನ ಅಪರೂಪದ ವಸ್ತುಗಳು ಇಲ್ಲಿವೆ. ಅಲೆಮಾರಿ ಸಂಸ್ಕೃತಿಯ ಸೈಥಿಯನ್ (Scythian) ಚಿನ್ನದ ಆಭರಣಗಳು, ಪ್ರಾಚೀನ ಪೂರ್ವ ದೇಶಗಳ ಕಲಾಕೃತಿಗಳು ಇಲ್ಲಿನ ಐತಿಹಾಸಿಕ ಆಳವನ್ನು ಸಾಬೀತುಪಡಿಸುತ್ತವೆ. ಸಹಸ್ರಾರು ವರ್ಷಗಳ ಕಾಲ ಮಾನವನ ಸೃಜನಶೀಲತೆ ಹೇಗೆ ವಿಕಸನಗೊಂಡಿತು ಎಂಬುದನ್ನು ನೋಡಲು ಇದೊಂದು ಅದ್ಭುತ ವೇದಿಕೆಯಾಗಿದೆ.

Untitled design (9)

ವಿಶ್ವದ ಸಾಂಸ್ಕೃತಿಕ ಇತಿಹಾಸದಲ್ಲಿ ಕೆಲವು ಕಲಾಕೃತಿಗಳು ಕೇವಲ ಚಿತ್ರಗಳಾಗಿ ಉಳಿಯುವುದಿಲ್ಲ; ಅವು ಮಾನವನ ಆತ್ಮದ, ತತ್ತ್ವಜ್ಞಾನದ ಮತ್ತು ಭಾವನೆಗಳ ಪರಮೋಚ್ಚ ಅಭಿವ್ಯಕ್ತಿಗಳಾಗುತ್ತವೆ. ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂ ಇಂಥ ಸಾರ್ವಕಾಲಿಕ ಶ್ರೇಷ್ಠ ಕಲಾವಿದರ ಮೂಲ ಕೃತಿಗಳನ್ನೇ ತನ್ನ ಒಡಲಿನಲ್ಲಿಟ್ಟುಕೊಂಡಿರುವ ಜಾಗತಿಕ ಕಲಾ ಮಂದಿರ. ಯುರೋಪಿಯನ್ ಕಲೆಯ ಸುವರ್ಣ ಯುಗದಿಂದ ಹಿಡಿದು ಆಧುನಿಕ ಕಲಾ ಕ್ರಾಂತಿಯವರೆಗಿನ ಮೇರುಕೃತಿಗಳನ್ನು ಕಣ್ಣುಂಬಿಕೊಳ್ಳುವ ಇಲ್ಲಿನ ಅನುಭವವು ಒಬ್ಬ ಕಲಾಪ್ರೇಮಿಗೆ ಕೇವಲ ದೃಶ್ಯ ವೈಭವವಲ್ಲ, ಬದಲಿಗೆ ಅದೊಂದು ದೈವಿಕ ಮತ್ತು ಧ್ಯಾನಾತ್ಮಕ ಅನುಭವವಾಗಿದೆ.

ಇದನ್ನೂ ಓದಿ: ದೇಶ ಸುತ್ತುವ ಮುನ್ನ ಪ್ರವಾಸಿ ತಾಣಗಳ ಪಟ್ಟಿಯನ್ನಷ್ಟೇ ಅಲ್ಲ, ಅಲ್ಲಿನ ಬದುಕಿನ ನಿಯಮಗಳ ಪುಟಗಳನ್ನೂ ತಿರುವಿ!

ಇಟಾಲಿಯನ್ ನವೋದಯ (Renaissance) ಕಾಲದ ಮಹಾನ್ ಮೇಧಾವಿ, ವಿಜ್ಞಾನಿ ಮತ್ತು ತತ್ವಜ್ಞಾನಿ ಲಿಯೊನಾರ್ಡೊ ಡಾ ವಿಂಚಿ ಅವರ ಮೂಲ ವರ್ಣಚಿತ್ರಗಳನ್ನು ನೋಡುವುದೇ ಜಗದೊಂದು ಅಪರೂಪದ ಸೌಭಾಗ್ಯ. ಏಕೆಂದರೆ ಇಡೀ ಜಗತ್ತಿನಲ್ಲಿ ಇಂದು ಲಭ್ಯವಿರುವ ಅವರ ದೃಢೀಕೃತ ವರ್ಣಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಅಂಥ ಅತ್ಯಂತ ಅಪರೂಪದ ಎರಡು ಅದ್ಭುತ ಕೃತಿಗಳು ಹರ್ಮಿಟೇಜ್ ಮ್ಯೂಸಿಯಂನ ಗಾಂಭೀರ್ಯವನ್ನು ಹೆಚ್ಚಿಸಿವೆ. ಮಡೋನಾ ಲಿಟ್ಟಾ ವರ್ಣಚಿತ್ರವು ತಾಯಿ ಮರಿಯಾ ಮತ್ತು ಬಾಲ ಯೇಸುವಿನ ನಡುವಿನ ಪವಿತ್ರ ಹಾಗೂ ವಾತ್ಸಲ್ಯದ ಬಾಂಧವ್ಯವನ್ನು ಅದ್ಭುತವಾಗಿ ಚಿತ್ರಿಸುತ್ತದೆ. ತಾಯಿಯ ಮುಖದಲ್ಲಿರುವ ಮಂದಹಾಸ, ಮಗುವಿನ ಮುಖದ ಮುಗ್ಧತೆ ಮತ್ತು ಡಾ ವಿಂಚಿ ಅವರೇ ಕರಗತ ಮಾಡಿಕೊಂಡಿದ್ದ 'ಸ್ಫುಮಾಟೋ' (Sfumato - ಬಣ್ಣಗಳು ಒಂದಕ್ಕೊಂದು ಕರಗಿ ಹೋಗುವಂತೆ ಮಾಡುವ ತಂತ್ರಜ್ಞಾನ) ಶೈಲಿ ಇಲ್ಲಿ ಎದ್ದು ಕಾಣುತ್ತದೆ. ಮಗುವಿನ ಕೈಯಲ್ಲಿರುವ ಒಂದು ಸಣ್ಣ ಪಕ್ಷಿಯ ಚಿತ್ರವೂ ಇಲ್ಲಿ ಸಾಂಕೇತಿಕ ಅರ್ಥವನ್ನು ನೀಡುತ್ತದೆ. ಬೆನೊಯಿಸ್ ಮಡೋನಾ ಡಾ ವಿಂಚಿ ಅವರ ಆರಂಭಿಕ ದಿನಗಳ ಅತ್ಯಂತ ಪ್ರಸಿದ್ಧ ಕೃತಿ ಇದು. ಸಾಂಪ್ರದಾಯಿಕ ಧಾರ್ಮಿಕ ಚಿತ್ರಗಳಿಗಿಂತ ಭಿನ್ನವಾಗಿ, ತಾಯಿ ಮರಿಯಾ ತನ್ನ ಮಗುವಿನೊಂದಿಗೆ ಆಟವಾಡುತ್ತಿರುವ ಲೌಕಿಕ ಮತ್ತು ಸಹಜ ಕ್ಷಣವನ್ನು ಇದು ಸೆರೆಹಿಡಿದಿದೆ. ಕತ್ತಲೆಯ ಹಿನ್ನೆಲೆಯ ನಡುವೆ ಪಾತ್ರಗಳ ಮೇಲೆ ಬೀಳುವ ಬೆಳಕಿನ ಸಂಯೋಜನೆ ವೀಕ್ಷಕರನ್ನು ರೋಮಾಂಚನಗೊಳಿಸುತ್ತದೆ.

ಇಟಾಲಿಯನ್ ನವೋದಯ ಕಾಲದ ಕಲಾ ಪ್ರಪಂಚದ ಇಬ್ಬರು ದ್ರೋಣಾಚಾರ್ಯರಾದ ಮೈಕೆಲ್ಯಾಂಜೆಲೊ ಮತ್ತು ರಾಫೆಲ್ ಸಾಂಜ್‌ರವರ ಅಮರ ಕೃತಿಗಳು ರಷ್ಯಾದ ಹರ್ಮಿಟೇಜ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಒಂದು ದೈವಿಕ ಅನುಭವವನ್ನು ನೀಡುತ್ತವೆ. ಲಿಯೊನಾರ್ಡೊ ಡಾ ವಿಂಚಿಯ ಸಮಕಾಲೀನರಾದ ಇವರಿಬ್ಬರ ಕಲಾ ದೃಷ್ಟಿಕೋನ ಮತ್ತು ಸೃಷ್ಟಿಶೀಲತೆ ಹರ್ಮಿಟೇಜ್ ಮ್ಯೂಸಿಯಂನ ಇತಿಹಾಸಕ್ಕೆ ವಿಶಿಷ್ಟವಾದ ತೂಕ ಹಾಗೂ ಸಾಂಸ್ಕೃತಿಕ ಗಾಂಭೀರ್ಯವನ್ನು ತಂದುಕೊಟ್ಟಿವೆ. ಅಮೃತಶಿಲೆಗೆ ಜೀವ ತುಂಬುವಲ್ಲಿ ಮೈಕೆಲ್ಯಾಂಜೆಲೊ ಅವರ ಕೈಚಳಕ ಜಗತ್ಪ್ರಸಿದ್ಧವಾದದ್ದು. ಇಡೀ ರಷ್ಯಾದಲ್ಲಿ ಮೈಕೆಲ್ಯಾಂಜೆಲೊ ಅವರದ್ದೇ ಎಂದು ದೃಢಪಟ್ಟಿರುವ ಏಕೈಕ ಶಿಲ್ಪಕೃತಿ ಈ 'ದ ಕ್ರೌಚಿಂಗ್ ಬಾಯ್' (1530-1534). ಈ ಶಿಲ್ಪದಲ್ಲಿ ಒಬ್ಬ ಯುವಕ ಅಥವಾ ಹುಡುಗ ತನ್ನ ಕಾಲಿನ ಪಾದವನ್ನು ಗಟ್ಟಿಯಾಗಿ ಹಿಡಿದುಕೊಂಡು, ಸಂಪೂರ್ಣವಾಗಿ ಮುದುರಿಕೊಂಡು (Crouching) ಕುಳಿತಿರುವ ದೃಶ್ಯವಿದೆ. ಮೈಕೆಲ್ಯಾಂಜೆಲೊ ಅವರು ಮಾನವನ ಶರೀರದ ಸ್ನಾಯುಗಳ ವಿನ್ಯಾಸವನ್ನು ಎಷ್ಟು ನಿಖರವಾಗಿ ಕೆತ್ತಿದ್ದಾರೆಂದರೆ, ಆ ಹುಡುಗನ ಬೆನ್ನಿನ ಮೂಳೆಗಳು, ಭುಜದ ಸ್ನಾಯುಗಳು ತೀವ್ರವಾದ ಒತ್ತಡದಲ್ಲಿರುವುದು ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ. ಅದು ಕೇವಲ ಶಾರೀರಿಕ ನೋವಲ್ಲ, ಬದಲಿಗೆ ಆತನ ಮನಸಿನೊಳಗಿರುವ ತೀವ್ರ ಸಂಕಟದ ಪ್ರತಿಬಿಂಬವಾಗಿದೆ.

Untitled design (15)

ಈ ಶಿಲ್ಪವು ಸಂಪೂರ್ಣವಾಗಿ ಮುಕ್ತಾಯಗೊಂಡಿಲ್ಲ, ಅಂದರೆ ಅದರ ಕೆಲವು ಭಾಗಗಳು ಇನ್ನೂ ಕರಡು ಕಲ್ಲಿನ ರೂಪದಲ್ಲೇ ಇವೆ. ಆದರೂ, ಆ ಅಪೂರ್ಣತೆಯೇ ಈ ಶಿಲ್ಪದ ಆಕರ್ಷಣೆಯನ್ನು ಹೆಚ್ಚಿಸಿದೆ. ಕಲ್ಲಿನ ಸೆರೆಯಿಂದ ಒಂದು ಜೀವವನ್ನು ಹೊರತರುತ್ತಿರುವ ಕಲಾವಿದನ ಶ್ರಮ ಮತ್ತು ಆ ಭವ್ಯತೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಮೆಡಿಸಿ ಚಾಪೆಲ್‌ನ ಸ್ಮಾರಕಕ್ಕಾಗಿ ಉದ್ದೇಶಿಸಲಾಗಿತ್ತು ಎನ್ನಲಾಗುತ್ತದೆ. ಮೈಕೆಲ್ಯಾಂಜೆಲೊ ಶೈಲಿಯಲ್ಲಿ ಉದ್ವೇಗ, ಚಲನಶೀಲತೆ ಮತ್ತು ಹುರುಪು ಎದ್ದು ಕಂಡರೆ, ರಾಫೆಲ್ ಅವರ ಚಿತ್ರಗಳಲ್ಲಿ ಪ್ರಶಾಂತತೆ, ಮೃದುತ್ವ ಮತ್ತು ಸೌಂದರ್ಯದ ಪರಮ ಸೀಮೆ ಎದ್ದು ಕಾಣುತ್ತದೆ. ಹರ್ಮಿಟೇಜ್‌ನಲ್ಲಿರುವ ಅವರ ಎರಡು ಕೃತಿಗಳು ಧಾರ್ಮಿಕ ಪಾವಿತ್ರ್ಯದ ಅದ್ಭುತ ಕಾವ್ಯಗಳಾಗಿವೆ.

ಕನೆಸ್ಟಾಬೈಲ್ ಮಡೋನಾ ರಾಫೆಲ್ ತಮ್ಮ ಇಪ್ಪತ್ತರ ಹರೆಯದ ಆರಂಭದಲ್ಲೇ (ಸುಮಾರು 1502-1504) ರಚಿಸಿದ ಅತ್ಯಂತ ಅಪರೂಪದ ಸಣ್ಣ ಗಾತ್ರದ ವರ್ಣಚಿತ್ರ. ತಾಯಿ ಮರಿಯಾ ತನ್ನ ಕೈಯಲ್ಲಿರುವ ಒಂದು ಸಣ್ಣ ಧಾರ್ಮಿಕ ಪುಸ್ತಕವನ್ನು ಓದುತ್ತಾ ಸಾಗುತ್ತಿದ್ದರೆ, ಬಾಲ ಯೇಸು ಆ ಪುಸ್ತಕದ ಕಡೆಗೆ ಮುಗ್ಧತೆಯಿಂದ ನೋಡುತ್ತಿರುವ ದೃಶ್ಯವಿದು. ಚಿತ್ರದಲ್ಲಿರುವ ರೇಖೆಗಳ ಸ್ಪಷ್ಟತೆ, ತಾಯಿಯ ಮುಖದ ಮೇಲಿನ ಸೌಮ್ಯ ಭಾವನೆ ಮತ್ತು ಹಿನ್ನೆಲೆಯಲ್ಲಿರುವ ಪ್ರಕೃತಿ ಸೌಂದರ್ಯವು ರಾಫೆಲ್ ಅವರ ಕಲಾ ಪ್ರೌಢಿಮೆಯನ್ನು ಜಗತ್ತಿಗೆ ಸಾರುತ್ತದೆ. ಹಾಗೆ ರಾಫೆಲ್ ಅವರ 'ದ ಹೋಲಿ ಫ್ಯಾಮಿಲಿ ವಿತ್ ಎ ಬೀಯರ್ಡ್‌ಲೆಸ್ ಸೇಂಟ್ ಜೋಸೆಫ್' ಚಿತ್ರವು ಮತ್ತೊಂದು ಮೈಲಿಗಲ್ಲು. ಇಲ್ಲಿ ಸಾಂಪ್ರದಾಯಿಕವಾಗಿ ಗಡ್ಡದೊಂದಿಗೆ ಚಿತ್ರಿಸಲಾಗುತ್ತಿದ್ದ ಸೇಂಟ್ ಜೋಸೆಫ್ ಅವರನ್ನು ಗಡ್ಡವಿಲ್ಲದೇ, ಅತ್ಯಂತ ಚಿಂತಾಕ್ರಾಂತ ಮುಖಭಾವದೊಂದಿಗೆ ಚಿತ್ರಿಸಲಾಗಿದೆ. ತಾಯಿ ಮತ್ತು ಮಗುವಿನ ನಡುವಿನ ಪವಿತ್ರ ಪ್ರೀತಿ ಹಾಗೂ ಜೋಸೆಫ್ ಅವರ ರಕ್ಷಣಾತ್ಮಕ ನೋಟದ ನಡುವಿನ ಭಾವನಾತ್ಮಕ ಸಮತೋಲನವನ್ನು ರಾಫೆಲ್ ಅತ್ಯಂತ ಮೃದುವಾದ ಬಣ್ಣಗಳ ಸಂಯೋಜನೆಯ ಮೂಲಕ ಸಾಧಿಸಿದ್ದಾರೆ. ಚಿತ್ರದುದ್ದಕ್ಕೂ ಹರಡಿರುವ ಶಾಂತಿಪ್ರಿಯ ವಾತಾವರಣ ವೀಕ್ಷಕರ ಮನಸ್ಸನ್ನು ತಿಳಿಗೊಳಿಸುತ್ತದೆ.

Untitled design (16)

ಡಚ್ ಕಲೆಯ ಸುವರ್ಣ ಯುಗದ ಮಹಾನ್ ಮಾಂತ್ರಿಕ ರೆಂಬ್ರಾಂಟ್ ವ್ಯಾನ್ ರಿನ್ ಅವರ ಕುಂಚದಿಂದ ಮೂಡಿಬಂದ ಅತ್ಯಂತ ಭವ್ಯ ಹಾಗೂ ವಿವಾದಾತ್ಮಕ ಕೃತಿಗಳಲ್ಲಿ 'ಡಾನೇ' (1636) ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಗ್ರೀಕ್ ಪುರಾಣದ ಶೃಂಗಾರಮಯ ಕಥೆಯೊಂದನ್ನು ಆಧರಿಸಿ ರಚಿತವಾದ ಈ ತೈಲಚಿತ್ರವು, ಹರ್ಮಿಟೇಜ್ ಮ್ಯೂಸಿಯಂನ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲೊಂದಾಗಿದೆ. ಗ್ರೀಕ್ ಪುರಾಣಗಳ ಪ್ರಕಾರ, ಆರ್ಗೊಸ್ ದೇಶದ ರಾಜ ಅಕ್ರಿಸಿಯಸ್ ತನ್ನ ಮಗಳಾದ 'ಡಾನೇ'ಗೆ ಜನಿಸುವ ಮಗನೇ ತನ್ನ ಸಾವಿಗೆ ಕಾರಣನಾಗುತ್ತಾನೆಂಬ ಭವಿಷ್ಯವಾಣಿಯನ್ನು ಕೇಳಿ ಹೆದರುತ್ತಾನೆ. ಅದಕ್ಕಾಗಿ ಆಕೆಯನ್ನು ಯಾರೂ ತಲುಪಲಾಗದ ಕತ್ತಲೆಯ ಕಂಚಿನ ಕೋಟೆಯಲ್ಲಿ ಬಂಧಿಸಿಡುತ್ತಾನೆ. ಆದರೆ, ಆಕೆಯ ಸೌಂದರ್ಯಕ್ಕೆ ಮರುಳಾಗುವ ದೇವತೆಗಳ ರಾಜ 'ಜೀಯಸ್', ಚಿನ್ನದ ಮಳೆಯ ರೂಪದಲ್ಲಿ ಆಕೆಯ ಕೋಣೆಯನ್ನು ಪ್ರವೇಶಿಸುತ್ತಾನೆ. ರೆಂಬ್ರಾಂಟ್ ಈ ಚಿತ್ರದಲ್ಲಿ ಜೀಯಸ್ ಕೋಣೆಗೆ ಆಗಮಿಸುವ ಆ ರೋಮಾಂಚನಕಾರಿ ಕ್ಷಣವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾನೆ. ಮೃದುವಾದ ಹಾಸಿಗೆಯ ಮೇಲೆ ಮಲಗಿರುವ ಡಾನೇ, ತನ್ನ ಕೋಣೆಯನ್ನು ಆವರಿಸುತ್ತಿರುವ ಆ ದೈವಿಕ ಪ್ರಕಾಶವನ್ನು (ಜೀಯಸ್‌ನ ಸಂಕೇತ) ಸ್ವಾಗತಿಸಲು ಅತ್ಯಂತ ಕಾತರದಿಂದ ಮತ್ತು ಪ್ರೀತಿಯಿಂದ ತನ್ನ ಬಲಗೈಯನ್ನು ಚಾಚುತ್ತಿದ್ದಾಳೆ. ಆಕೆಯ ಮುಖದಲ್ಲಿ ಮೂಡಿರುವ ಆನಂದ, ನಿರೀಕ್ಷೆ ಮತ್ತು ಆಕೆಯ ಶರೀರದ ಸೌಂದರ್ಯವನ್ನು ರೆಂಬ್ರಾಂಟ್ ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ. ಹಿನ್ನೆಲೆಯಲ್ಲಿ ಕಟ್ಟಲಾಗಿರುವ ವೃದ್ಧ ದಾಸಿಯ ಮುಖದ ಮೇಲಿನ ಆಶ್ಚರ್ಯ ಮತ್ತು ಹಾಸಿಗೆಯ ಮೇಲ್ಭಾಗದಲ್ಲಿ ಕೈಗಳನ್ನು ಕಟ್ಟಿಕೊಂಡು ಅಳುತ್ತಿರುವಂತೆ ಚಿತ್ರಿಸಲಾಗಿರುವ ರೆಕ್ಕೆಯುಳ್ಳ ಕ್ಯುಪಿಡ್ ಶಿಲ್ಪವು ಚಿತ್ರದ ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸುತ್ತವೆ.

ಹಾಗೆಯೇ ಚಿಯಾರೊಸ್ಕುರೊ (Chiaroscuro) ಕಲಾಕೃತಿಯ ನಿಜವಾದ ಶಕ್ತಿ ಇರುವುದು ರೆಂಬ್ರಾಂಟ್ ಅವರು ಬಳಸಿರುವ ಬೆಳಕು ಮತ್ತು ನೆರಳಿನ ಅದ್ಭುತ ಸಂಯೋಜನೆಯಲ್ಲಿ. ಚಿತ್ರದ ಎಡಭಾಗದಿಂದ ಹರಿದುಬರುವ ರೇಷ್ಮೆಯಂಥ ಬಂಗಾರದ ಬಣ್ಣದ ಬೆಳಕು ನೇರವಾಗಿ ಡಾನೇ ಮತ್ತು ಆಕೆಯ ಹಾಸಿಗೆಯ ಮೇಲೆ ಬೀಳುತ್ತದೆ. ಆ ಬೆಳಕಿನ ಮೃದುವಾದ ಹೊಳಪು ಇಡೀ ಕೋಣೆಯ ಕತ್ತಲೆಯನ್ನು ಸರಿಸುವಂತೆ ಭಾಸವಾಗುತ್ತದೆ. ರೆಂಬ್ರಾಂಟ್ ಸಾಂಪ್ರದಾಯಿಕ ಚಿತ್ರಗಳಂತೆ ಜೀಯಸ್‌ನನ್ನು ಕೇವಲ ಭೌತಿಕ ಚಿನ್ನದ ನಾಣ್ಯಗಳ ಮಳೆಯಂತೆ ಚಿತ್ರಿಸದೇ, ಕೇವಲ ಒಂದು ದೈವಿಕ 'ಬೆಳಕಿನ ಪ್ರವಾಹ'ದಂತೆ ಚಿತ್ರಿಸಿರುವುದು ಅವರ ಕಲ್ಪನಾ ಶಕ್ತಿಗೆ ಸಾಕ್ಷಿಯಾಗಿದೆ. ಉಡುಪುಗಳ ಮಡಿಕೆಗಳು, ದಿಂಬಿನ ನಯನಾಜೂಕುತನ ಮತ್ತು ಡಾನೇ ಧರಿಸಿರುವ ಮುತ್ತಿನ ಬಳೆಗಳು ಆ ಬೆಳಕಿನಲ್ಲಿ ಅತ್ಯಂತ ಜೀವಂತವಾಗಿ ಕಂಗೊಳಿಸುತ್ತವೆ.

ಈ ಚಿತ್ರವು ಕೇವಲ ಕಲಾತ್ಮಕವಾಗಿ ಮಾತ್ರವಲ್ಲ, ಇತಿಹಾಸದ ದೃಷ್ಟಿಯಿಂದಲೂ ವಿಶಿಷ್ಟವಾಗಿದೆ. 1985ರಲ್ಲಿ ಒಬ್ಬ ದುಷ್ಕರ್ಮಿ ಈ ಚಿತ್ರದ ಮೇಲೆ ಆಸಿಡ್ ಹಾಕಿ, ಚಾಕುವಿನಿಂದ ಇರಿದು ಹಾನಿ ಮಾಡಲು ಯತ್ನಿಸಿದ್ದ. ಹರ್ಮಿಟೇಜ್‌ನ ಪರಿಣತರು ಸುಮಾರು 12 ವರ್ಷಗಳ ಕಾಲ ನಿರಂತರವಾಗಿ ಶ್ರಮಿಸಿ, ಈ ಮಹಾನ್ ಕೃತಿಯನ್ನು ಅದರ ಮೂಲ ರೂಪಕ್ಕೆ ಮರಳಿ ತರುವಲ್ಲಿ ಯಶಸ್ವಿಯಾದರು. ಹೀಗೆ, ಭಾವನೆಗಳ ಆಳ ಮತ್ತು ಬೆಳಕಿನ ಮಾಂತ್ರಿಕತೆಯನ್ನು ಏಕಕಾಲದಲ್ಲಿ ಉತ್ತುಂಗಕ್ಕೆ ಕೊಂಡೊಯ್ದಿರುವ 'ಡಾನೇ' ವರ್ಣಚಿತ್ರವು, ಮನುಷ್ಯನ ಆಸೆ, ಪ್ರೀತಿ ಮತ್ತು ದೈವಿಕತೆಯ ನಡುವಿನ ಬಾಂಧವ್ಯವನ್ನು ಸಾರುವ ಅಮರ ಕಾವ್ಯವಾಗಿ ಇಂದಿಗೂ ಹರ್ಮಿಟೇಜ್‌ನಲ್ಲಿ ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.

Untitled design (17)

ಇಟಲಿಯ ವಿಶ್ವಪ್ರಸಿದ್ಧ ನವ-ಕ್ಲಾಸಿಕಲ್ ಶಿಲ್ಪಿ ಆಂಟೋನಿಯೊ ಕ್ಯಾನೋವಾ ಅವರ ಶ್ರೇಷ್ಠ ಸೃಷ್ಟಿಗಳಲ್ಲಿ 'ದಿ ತ್ರೀ ಗ್ರೇಸಸ್' ಶಿಲ್ಪಕೃತಿಯು ಅತ್ಯಂತ ಪ್ರಮುಖವಾದದ್ದು. ಗ್ರೀಕ್ ಪುರಾಣದ ಕಥೆಗಳಿಂದ ಪ್ರೇರಿತರಾಗಿ ಕ್ಯಾನೋವಾ ಕೆತ್ತಿದ ಈ ಅಮೃತಶಿಲೆಯ ಮೂರ್ತಿಯು, ಮಾನವನ ಸೃಜನಶೀಲತೆ ಮತ್ತು ಸೌಂದರ್ಯದ ಪರಮ ಸೀಮೆಯಾಗಿ ರಷ್ಯಾದ ಹರ್ಮಿಟೇಜ್ ಮ್ಯೂಸಿಯಂನಲ್ಲಿ ಕಂಗೊಳಿಸುತ್ತಿದೆ. ಗ್ರೀಕ್ ಪುರಾಣಗಳ ಪ್ರಕಾರ, ದೇವತೆಗಳ ರಾಜನಾದ ಜೀಯಸ್‌ನ ಪುತ್ರಿಯರಾದ ಯೂಫ್ರೋಸಿನ್, ಅಗಲಾಯ ಮತ್ತು ಥಾಲಿಯಾ ಎಂಬ ಮೂವರು ಸಹೋದರಿಯರನ್ನು 'ತ್ರೀ ಗ್ರೇಸಸ್' ಎಂದು ಕರೆಯಲಾಗುತ್ತದೆ. ಇವು ಕ್ರಮವಾಗಿ ಪ್ರೀತಿ, ಸೌಂದರ್ಯ ಮತ್ತು ಸೃಜನಶೀಲತೆಯ (ಅಥವಾ ಆನಂದ ಮತ್ತು ಸೌಂದರ್ಯ) ದೇವತೆಗಳು. ಕ್ಯಾನೋವಾ ಈ ಮೂವರು ಸಹೋದರಿಯರು ಪರಸ್ಪರ ಅತ್ಯಂತ ನಿಕಟವಾಗಿ ಆಲಿಂಗಿಸಿಕೊಂಡು ನಿಂತಿರುವಂತೆ ಈ ಶಿಲ್ಪವನ್ನು ವಿನ್ಯಾಸಗೊಳಿಸಿದ್ದಾನೆ. ಮೂವರ ಮುಖದಲ್ಲಿರುವ ಪ್ರಶಾಂತತೆ, ಒಬ್ಬರನ್ನೊಬ್ಬರು ಹಿಡಿದುಕೊಂಡಿರುವ ರೀತಿ ಮತ್ತು ಅವರ ನಿಲುವು ಇಡೀ ಕಲಾಕೃತಿಗೆ ಒಂದು ಅಪೂರ್ವವಾದ ಲಯ ಹಾಗೂ ಸಾಮರಸ್ಯವನ್ನು ತಂದುಕೊಟ್ಟಿದೆ. ಈ ಕಲಾಕೃತಿಯ ನಿಜವಾದ ವೈಶಿಷ್ಟ್ಯ ಇರುವುದು ಕ್ಯಾನೋವಾ ಕಠಿಣವಾದ ಅಮೃತಶಿಲೆಯನ್ನು ನಿರ್ವಹಿಸಿರುವ ರೀತಿಯಲ್ಲಿ. ಕಲ್ಲನ್ನು ಕರಗಿಸಿ ಮೃದುವಾಗಿಸಿದಂತೆ ಭಾಸವಾಗುವ ಅವನ ಕೈಚಳಕ ಅದ್ಭುತವಾದದ್ದು. ಅಮೃತಶಿಲೆಯನ್ನು ಎಷ್ಟು ಸೂಕ್ಷ್ಮವಾಗಿ ಪಾಲಿಶ್ ಮಾಡಲಾಗಿದೆಯೆಂದರೆ, ಆ ಮೂರ್ತಿಗಳ ಮೇಲೆ ಬೆಳಕು ಬಿದ್ದಾಗ ಅವು ಕಲ್ಲಿನಂತೆ ಕಾಣದೆ, ಮಾನವನ ಜೀವಂತ ಚರ್ಮದ ನಯನಾಜೂಕುತನವನ್ನು ಮತ್ತು ಮೃದುತ್ವವನ್ನು ಪ್ರತಿಬಿಂಬಿಸುತ್ತವೆ.

ಇಂಪ್ರೆಷನಿಸಂ ಕಲಾ ಚಳವಳಿಯ ಪಿತಾಮಹ ಕ್ಲೋಡ್ ಮೊನೆಟ್ ನ 'ವುಮನ್ ಇನ್ ಎ ಗಾರ್ಡನ್' ಆರಂಭಿಕ ದಿನಗಳ ಅತ್ಯಂತ ಸುಂದರ ಚಿತ್ರವಿದು. ಬಿಳಿ ಉಡುಪನ್ನು ಧರಿಸಿದ ಮಹಿಳೆಯೊಬ್ಬಳು ಸೂರ್ಯನ ಬೆಳಕು ಬಿದ್ದಿರುವ ಹಸಿರು ತೋಟದಲ್ಲಿ ನಿಂತಿರುವ ದೃಶ್ಯವನ್ನು ಇದು ಒಳಗೊಂಡಿದೆ. ಮೊನೆಟ್ ಈ ಚಿತ್ರದಲ್ಲಿ ಪ್ರಕೃತಿಯ ನೈಸರ್ಗಿಕ ಬೆಳಕು, ಎಲೆಗಳ ನಡುವೆ ಸೋರಿ ಬರುವ ಬಿಸಿಲು ಮತ್ತು ನೆರಳುಗಳ ಆಟವನ್ನು ಹಿಡಿಯಲು ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಸಣ್ಣ ಸಣ್ಣ ಬಣ್ಣದ ಸ್ಟ್ರೋಕ್‌ಗಳನ್ನು ಬಳಸಿದ್ದಾನೆ. ಇದನ್ನು ನೋಡುತ್ತಿದ್ದರೆ ನಾವೇ ಆ ತೋಟದಲ್ಲಿ ನಿಂತ ಸೃಜನಾತ್ಮಕ ಅನುಭವವಾಗುತ್ತದೆ. ಹಾಗೆ ಇಪ್ಪತ್ತನೆಯ ಶತಮಾನದ ಆಧುನಿಕ ಕಲೆಯ ಶ್ರೇಷ್ಠ ಕೃತಿಗಳಲ್ಲಿ ಹೆನ್ರಿ ಮ್ಯಾಟಿಸ್ ನ 'ದಿ ಡಾನ್ಸ್' (1910) ಪ್ರಮುಖವಾದದ್ದು. ಕೇವಲ ಮೂರು ಪ್ರಾಥಮಿಕ ಬಣ್ಣಗಳನ್ನು (ಕೆಂಪು, ಹಸಿರು ಮತ್ತು ನೀಲಿ) ಬಳಸಿ ರಚಿಸಲಾದ ಈ ಬೃಹತ್ ಚಿತ್ರದಲ್ಲಿ ಐದು ಆಕೃತಿಗಳು ಕೈಕೈ ಹಿಡಿದು ವೃತ್ತಾಕಾರದಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಯಾವುದೇ ಜಟಿಲವಾದ ವಿವರಗಳಿಲ್ಲದೇ, ಕೇವಲ ಸರಳ ರೇಖೆಗಳು ಮತ್ತು ಗಾಢವಾದ ಬಣ್ಣಗಳ ಮೂಲಕ ಮನುಷ್ಯನ ಆದಿಮ ಸಂತೋಷ, ಲಯ ಮತ್ತು ನೃತ್ಯದ ಶಕ್ತಿಯನ್ನು ಮ್ಯಾಟಿಸ್ ಇಲ್ಲಿ ಕ್ರಾಂತಿಕಾರಕವಾಗಿ ಅಭಿವ್ಯಕ್ತಪಡಿಸಿದ್ದಾರೆ.

ಇವುಗಳ ಜತೆಗೆ ಹರ್ಮಿಟೇಜ್‌ನಲ್ಲಿರುವ 'ದ ಪೀಕಾಕ್ ಕ್ಲಾಕ್' ಎಂಬ ಚಿನ್ನದ ಲೇಪಿತ ಯಾಂತ್ರಿಕ ಗಡಿಯಾರ ಅತ್ಯಂತ ಪ್ರಸಿದ್ಧ. ಇದರಲ್ಲಿರುವ ಚಿನ್ನದ ನವಿಲು, ಕೋಳಿ ಮತ್ತು ಗೂಬೆಗಳು ಇಂದಿಗೂ ಸಮಯಕ್ಕೆ ಸರಿಯಾಗಿ ಚಲಿಸುತ್ತಾ ಹಕ್ಕಿಗಳ ಧ್ವನಿಯನ್ನು ಹೊರಡಿಸುತ್ತವೆ. ಇದು ಕಲೆ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮವಾಗಿದೆ.

ಹರ್ಮಿಟೇಜ್‌ನಲ್ಲಿರುವ ಕಲೆಗೆ ಬೆಲೆಯಿದೆ, ಆದರೆ ಕಲಾಕೃತಿಯ ಒಳಗೆ ಅಡಗಿರುವ ಸೃಜನಶೀಲತೆಗೆ ಬೆಲೆ ಕಟ್ಟಲಾಗದು. ಜಗತ್ತಿನ ಶ್ರೇಷ್ಠ ಕಲಾಕೃತಿಗಳ ಮುಂದೆ ನಿಂತಾಗ ನಮಗೆ ಅರಿವಾಗುವ ಮೊದಲ ಸತ್ಯವೇ ಇದು. ಮಾರುಕಟ್ಟೆಯಲ್ಲಿ ಒಂದು ಚಿತ್ರಕ್ಕೋ ಅಥವಾ ಶಿಲ್ಪಕ್ಕೋ ಕೋಟ್ಯಂತರ ರುಪಾಯಿಗಳ ಬೆಲೆ ನಿಗದಿಯಾಗಬಹುದು. ಆದರೆ ಆ ಕೃತಿಯು ಮಾನವ ನಾಗರೀಕತೆಗೆ, ಇತಿಹಾಸಕ್ಕೆ ಮತ್ತು ಮನುಷ್ಯನ ಅಂತರಾಳಕ್ಕೆ ನೀಡುವ ಕೊಡುಗೆಯನ್ನು ಯಾವುದೇ ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ.

ಒಂದು ಕಲಾಕೃತಿ ಎಂದರೆ ಕೇವಲ ಬಣ್ಣಗಳ ಲೇಪನ ಅಥವಾ ಕಲ್ಲಿನ ಆಕೃತಿಯಲ್ಲ. ಅದು ಆಯಾ ಕಾಲದ ಇತಿಹಾಸ, ಸಂಸ್ಕೃತಿ ಮತ್ತು ಸಮಾಜದ ಜೀವಂತ ದಾಖಲೆ. ಲಿಯೊನಾರ್ಡೊ ಡಾ ವಿಂಚಿಯವರ ಚಿತ್ರಗಳಾಗಲೀ ಅಥವಾ ಮೈಕೆಲ್ಯಾಂಜೆಲೊ ಅವರ ಶಿಲ್ಪಗಳಾಗಲೀ, ಅವು ರಚನೆಯಾಗಿ ನೂರಾರು ವರ್ಷಗಳು ಕಳೆದರೂ ಇಂದಿಗೂ ಅದೇ ಪ್ರಭಾವವನ್ನು ಹೊಂದಿವೆ. ಯುದ್ಧಗಳು ನಡೆದವು, ಸಾಮ್ರಾಜ್ಯಗಳು ಉರುಳಿದವು, ರಾಜ ಮಹಾರಾಜರು ಮಣ್ಣಾದರು. ಆದರೆ ಅವರು ರಚಿಸಿದ ಅಥವಾ ಪೋಷಿಸಿದ ಕಲೆ ಮಾತ್ರ ಇಂದಿಗೂ ಅಲ್ಲಿ ಜೀವಂತವಾಗಿದೆ. ಕಾಲದ ಹೊಡೆತಕ್ಕೆ ಸಿಲುಕದ ಈ ಅಮರತ್ವಕ್ಕೆ ಬೆಲೆ ಕಟ್ಟಲು ಸಾಧ್ಯವೇ?

Untitled design (18)

ಪ್ರತಿಯೊಂದು ಶ್ರೇಷ್ಠ ಕೃತಿಯ ಹಿಂದೆ ಕಲಾವಿದನ ವರ್ಷಗಳ ಪರಿಶ್ರಮ, ಆತನ ಕಣ್ಣೀರು, ಹತಾಶೆ, ಪ್ರೀತಿ ಮತ್ತು ಉನ್ಮಾದ ಅಡಗಿರುತ್ತದೆ. ವಿನ್ಸೆಂಟ್ ವ್ಯಾನ್ ಗಾಗ್ ತೀವ್ರ ಮಾನಸಿಕ ಸಂಘರ್ಷದ ನಡುವೆಯೂ ಬಿಡಿಸಿದ ಚಿತ್ರಗಳು ಅಥವಾ ರೆಂಬ್ರಾಂಟ್ ತನ್ನ ಬದುಕಿನ ಕಟು ಸತ್ಯಗಳನ್ನು ಕ್ಯಾನ್ವಾಸ್ ಮೇಲೆ ತಂದ ರೀತಿ ಕೇವಲ ಕೌಶಲವಲ್ಲ. ಅವು ಅವರ ಆತ್ಮದ ಆಳದಿಂದ ಬಂದ ಅಭಿವ್ಯಕ್ತಿಗಳು. ಕಲಾವಿದನೊಬ್ಬ ತನ್ನ ಜೀವಿತಾವಧಿಯನ್ನೇ ಧಾರೆ ಎರೆದು ಸೃಷ್ಟಿಸಿದ ಒಂದು ಅನನ್ಯ ಕೃತಿಗೆ ಮಾರುಕಟ್ಟೆಯ ಹಣ ಹೇಗೆ ತಾನೇ ಸಮನಾಗಬಲ್ಲುದು? ಹಣದಿಂದ ಬಣ್ಣ ಮತ್ತು ಕ್ಯಾನ್ವಾಸ್ ಖರೀದಿಸಬಹುದು, ಆದರೆ ಕಲಾವಿದನ ಕಲ್ಪನೆಯನ್ನಾಗಲಿ ಅಥವಾ ನೋಡುಗನ ಎದೆಯೊಳಗಿನ ತಂತಿಯನ್ನು ಮೀಟುವ ಶಕ್ತಿಯನ್ನಾಗಲಿ ಖರೀದಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಈ ಪುರುಷರ ಮೂತ್ರಾಲಯವನ್ನು ನೋಡಲು ಮಹಿಳೆಯರು ಸಾಲು ನಿಲ್ಲುತ್ತಾರೆ!

ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಎಂಥದ್ದೇ ಚಿತ್ರಗಳನ್ನು ಸೃಷ್ಟಿಸಿದರೂ, ಒಬ್ಬ ಮಹಾನ್ ಕಲಾವಿದನ ಕೈಬೆರಳುಗಳ ಚಲನೆಯಿಂದ ಮೂಡಿದ ಮೂಲ ಕೃತಿಯನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಹರ್ಮಿಟೇಜ್‌ನಲ್ಲಿರುವ 'ಮಡೋನಾ ಲಿಟ್ಟಾ' ಅಥವಾ 'ಡಾನೇ' ಚಿತ್ರದ ಮೂಲ ಪ್ರತಿ ಜಗತ್ತಿನಲ್ಲಿ ಒಂದೇ ಇರಲು ಸಾಧ್ಯ. ಆ ಅನನ್ಯತೆಯೇ ಅದರ ಮೌಲ್ಯವನ್ನು ಅತ್ಯುನ್ನತ ಸ್ಥಾನದಲ್ಲಿರಿಸುತ್ತದೆ. ಕಲಾಕೃತಿಯ ನಿಜವಾದ ಮೌಲ್ಯ ಇರುವುದು ಅದರ ಹರಾಜಿನ ಬೆಲೆಯಲ್ಲಲ್ಲ, ಬದಲಿಗೆ ಅದು ನೋಡುಗನ ಮನಸಿನಲ್ಲಿ ಮೂಡಿಸುವ ಶಾಂತಿ, ಹೃದಯದಲ್ಲಿ ಚಿಮ್ಮಿಸುವ ಭಾವಾಂತರಂಗ ಮತ್ತು ಸಮಯದ ಪ್ರಜ್ಞೆಯನ್ನೇ ಮರೆಸುವ ಆ ಮಾಂತ್ರಿಕ ಕ್ಷಣದಲ್ಲಿ. ಈ ಆನಂದ ಮತ್ತು ಆತ್ಮಾವಲೋಕನದ ಶಕ್ತಿ ಎಂದಿಗೂ ಬೆಲೆ ಕಟ್ಟಲಾಗದ್ದು.

ಜಗತ್ತಿನ ಯಾವುದೋ ಮೂಲೆಯಲ್ಲಿ, ಯಾವ ಕಾಲದಲ್ಲೋ ಕುಳಿತು ಯಾವನೋ ಒಬ್ಬ ಕಲಾವಿದ ತನ್ನ ಕುಂಚದಿಂದ ಚೆಲ್ಲಿದ ಬಣ್ಣ, ಇವತ್ತು ನಮ್ಮ ಎದೆಯೊಳಗಿನ ನಿಶ್ಶಬ್ದವನ್ನು ಹೀಗೆ ಆರ್ದ್ರಗೊಳಿಸುತ್ತದೆ ಎನ್ನುವುದೇ ಒಂದು ಅದ್ಭುತ. ಹರ್ಮಿಟೇಜ್ ಕೇವಲ ವಸ್ತುಗಳನ್ನು ಪ್ರದರ್ಶಿಸುವ ಜಾಗವಲ್ಲ. ಅದು ನಮ್ಮ ದೈನಂದಿನ ಬದುಕಿನ ಜಂಜಾಟಗಳ ನಡುವೆ ಕಳೆದುಹೋಗುವ ಮನುಷ್ಯತ್ವವನ್ನು, ಪ್ರೀತಿಯನ್ನು ಮತ್ತು ಕಳೆದುಹೋದ ಬಾಲ್ಯದ ಯಾವುದೋ ಒಂದು ಸುಂದರ ಮುಸ್ಸಂಜೆಯನ್ನು ನಮಗೆ ಮರಳಿ ಕೊಡುವ ಒಂದು ಮಾಂತ್ರಿಕ ಕಿಟಕಿ. ಅಲ್ಲಿಂದ ಹೊರಬಂದ ಮೇಲೂ ನಮ್ಮ ಒಳಗಣ್ಣುಗಳು ಆ ಚಿತ್ರಗಳನ್ನೇ ನೋಡುತ್ತಿರುತ್ತವೆ, ಯಾಕೆಂದರೆ ಕಲೆ ಮುಗಿದ ಮೇಲೂ ಅದರ ಲಯ ನಮ್ಮೊಳಗೆ ಇನ್ನು ದೀರ್ಘಕಾಲದವರೆಗೆ ಸದ್ದಿಲ್ಲದೇ ವಾಕಿಂಗ್ ಮಾಡುತ್ತಲೇ ಇರುತ್ತದೆ.

Vishweshwar Bhat

Vishweshwar Bhat

Editor in Chief

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...