Tuesday, October 13, 2026
Tuesday, October 13, 2026

ಅರುಣಾಚಲದ ಆರ್ಕಿಡ್‌ಗಳಿಗೆ ಜೀವ ತುಂಬಿದ ಕನ್ನಡಿಗ

ಪ್ರವಾಸವೆಂದರೆ ಅಪರೂಪದ ಕಥೆಗಳನ್ನು ಹುಡುಕುವ ಪಯಣ. ಅರುಣಾಚಲ ಪ್ರದೇಶದ ಆರ್ಕಿಡ್‌ಗಳ ಲೋಕದ ಹಿಂದೆ ಕನ್ನಡಿಗನೊಬ್ಬನ ಅಪೂರ್ವ ಕೊಡುಗೆ ಅಡಗಿರುವುದು ಸಂತಸ ಮೂಡಿಸುವುದು ಖಚಿತ. ಸಸ್ಯಶಾಸ್ತ್ರಜ್ಞ ಡಾ. ಸದಾನಂದ ಹೆಗ್ಡೆಯವರು ಆರ್ಕಿಡ್‌ಗಳ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಅವರ ಸಾಹಸ, ಸಂಶೋಧನೆ ಮತ್ತು ಪರಿಸರ ಕಾಳಜಿಯ ಈ ಪಯಣ ಕನ್ನಡಿಗರೆಲ್ಲರೂ ಹೆಮ್ಮೆಪಡುವಂಥದ್ದು.

  • ಅಂಜಲಿ ರಾಮಣ್ಣ

ಗೂಗಲ್‍ನಲ್ಲಿ ಸಿಗದ ಮಾಹಿತಿಯೊಂದು ಪ್ರವಾಸದಲ್ಲಿ ಮಾತ್ರ ಸಿಕ್ಕಿದ್ದನ್ನು ಪ್ರವಾಸದ ಇತಿಹಾಸದಲ್ಲಿ ದಾಖಲಿಸದಿದ್ದಲ್ಲಿ ಕನ್ನಡದ ಪರಂಪರೆಗೆ ಮಾಡಿದಂಥ ಮೋಸವೇ ಸರಿ. ಅರುಣಾಚಲ ಪ್ರದೇಶದ ಆರ್ಕಿಡ್ ಹೂವುಗಳನ್ನು ಜಗತ್ತಿಗೇ ಪರಿಚಯಿಸಿದ ವ್ಯಕ್ತಿಯು ಒಬ್ಬ ಕನ್ನಡಿಗ ಎನ್ನುವ ಹೆಮ್ಮೆ ನಮ್ಮದು.

1947ರಲ್ಲಿ ಸಿರಸಿಯಲ್ಲಿ ಜನಿಸಿ, ಅಲ್ಲೇ ವಿದ್ಯಾಭ್ಯಾಸ ಪಡೆದು ನಂತರ 1976ರಲ್ಲಿ ಧಾರವಾಡ ವಿಶ್ವವಿದ್ಯಾಲಯದಲ್ಲಿ ‘ಪಶ್ಚಿಮಘಟ್ಟಗಳ ಆರ್ಕಿಡ್ ಹೂವುಗಳು’ ಎನ್ನುವ ವಿಷಯದಲ್ಲಿ ಡಾಕ್ಟರೇಟ್ ಪಡೆದ ಡಾ. ಸದಾನಂದ ಹೆಗ್ಡೆ ಅವರು ಅರುಣಾಚಲ ಪ್ರದೇಶ ಕಂಡ ಮೊಟ್ಟಮೊದಲ ವಿಜ್ಞಾನಿ ಎನ್ನುವ ಹೆಮ್ಮೆ ಕನ್ನಡನಾಡಿನದು. 1978 ರಿಂದ 2005ರಲ್ಲಿ ನಿವೃತ್ತಿ ಪಡೆಯುವವರೆಗೂ ಅರುಣಾಚಲ ಪ್ರದೇಶದಲ್ಲಿಯೇ ಇದ್ದು ಅಲ್ಲಿನ ಪರಿಸರವನ್ನು ಕ್ರಮಬದ್ಧವಾಗಿ ಉಳಿಸಿ ಬೆಳೆಸಿದ ಇವರ ಕೊಡುಗೆ ಅನನ್ಯ. ಪುಷ್ಪತಳಿಶಾಸ್ತ್ರವನ್ನು ಅಲ್ಲಿನ ಗುಡ್ಡಗಾಡು ಜನಕ್ಕೆ, ಅರಣ್ಯ ವಿಭಾಗಕ್ಕೆ, ಸರಕಾರಕ್ಕೆ ಶಾಸ್ತ್ರೀಯವಾಗಿ ಮೊಟ್ಟಮೊದಲ ಬಾರಿಗೆ ಪರಿಚಯಿಸಿದ್ದು ಹೆಗ್ಡೆಯವರು. ಅರುಣಾಚಲ ಪ್ರದೇಶದ ವ್ಯವಸಾಯಕ್ಕೆ ಮತ್ತು ಪುಷ್ಪತಳಿಶಾಸ್ತ್ರದ ಸಂಶೋಧನೆಗಳಿಗೆ ತಾಂತ್ರಿಕತೆಯನ್ನು ಅಳವಡಿಸಿದ ಮೊಟ್ಟಮೊದಲ ವ್ಯಕ್ತಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ವಿದ್ಯುತ್ಚಕ್ತಿ, ಫೋನ್, ಟಪಾಲುಗಳಂಥ ಸಂಪರ್ಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಪ್ರಯೋಗಾಲಯದಲ್ಲಿ ಹೂವಿನ ತಳಿಗಳಿಗೆ ಜೀವಕೊಟ್ಟು, ಬೆಳೆಸಿ, ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಗುಡ್ಡಗಾಡಿನ ಮಹಿಳೆಯರಿಗೆ ನೀಡಿ ಅವರುಗಳು ಅದನ್ನು ತಮ್ಮತಮ್ಮ ಪ್ರದೇಶದಲ್ಲಿ ಬೆಳೆಸುವಂತೆ ಪ್ರೇರೇಪಣೆ ನೀಡಿದ್ದು ಇವರ ಸಾಧನೆ.

ಇದನ್ನೂ ಓದಿ: ಬಾಜಿರಾಯನ ಪ್ರೀತಿಯ ನೆರಳಲ್ಲಿ ಮಸ್ತಾನಿಯ ಹುಡುಕಾಟ

ಆರ್ಕಿಡ್ ಸೊಸೈಟಿ ಆಫ್ ಇಂಡಿಯವನ್ನು ಸ್ಥಾಪಿಸಿ, ಆರ್ಕಿಡ್ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಹುಟ್ಟು ಹಾಕಿದ್ದೂ ಇವರೇ. ಆರ್ಕಿಡ್‌ಗಳ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದ ಈಶಾನ್ಯ ಭಾರತದ ಅರಣ್ಯ ಇಲಾಖೆಯ ನಿರ್ದೇಶಕರಾಗಿದ್ದರು. ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಮತ್ತು ಸಹಜವಾದ ಕಾಡು ಎನ್ನಿಸಿಕೊಂಡಿರುವ ಅರುಣಾಚಲ ಪ್ರದೇಶದ ಒಂದು ಭಾಗದ ಕಾಡನ್ನು ಮರದ ದಿಮ್ಮಿಗಳನ್ನು ತಯಾರು ಮಾಡುವ ಜಾಗವನ್ನಾಗಿ ಪರಿವರ್ತಿಸಲು ಸರಕಾರ ಮುಂದಾದಾಗ ಹೋರಾಟದ ಹಾದಿ ಹಿಡಿದು, ಸರಕಾರದ ಮನವೊಲಿಸಿ ಕಾಡನ್ನು ಉಳಿಸಿಕೊಟ್ಟದ್ದು ಇದೇ ಕನ್ನಡಿಗ. ಅಷ್ಟೇ ಅಲ್ಲ ಭಾರತೀಯ ವನ್ಯಜೀವನ ಸಂರಕ್ಷಣಾ ಕಾಯಿದೆ 1972ರಲ್ಲಿ ಅರಣ್ಯ ಸಂರಕ್ಷಣೆ ಎಂದರೆ ದೊಡ್ಡದೊಡ್ಡ ಗಿಡ ಮರಗಳನ್ನು ರಕ್ಷಿಸುವುದಕ್ಕೆ ಮತ್ತು ಅಲ್ಲಿನ ಪ್ರಾಣಿ ಸಮೂಹವನ್ನು ರಕ್ಷಿಸುವುದಕ್ಕೆ ಮಾತ್ರ ಆದ್ಯತೆ ಇತ್ತು. ಆದರೆ, ಅರಣ್ಯ ಎಂದರೆ ಅಲ್ಲಿ ಬೆಳೆಯುವ ಹೂವುಗಳನ್ನೂ ರಕ್ಷಿಸಿದರೆ ಮಾತ್ರ ಜೈವಿಕ ಸಮತೋಲನ ಸಾಧ್ಯ ಎನ್ನುವ ಅರಿವು ಸಾಮಾನ್ಯರಿಗಿರಲಿ ಕಾನೂನು ತಜ್ಞರಿಗೂ ಇರಲಿಲ್ಲ. ಹೆಗ್ಡೆಯವರು ಹೂವುಗಳ ಸಂರಕ್ಷಣೆಯ ಮಹತ್ವವನ್ನು, ಅವುಗಳ ಅಳಿವಿನಿಂದ ಪರಿಸರದಲ್ಲಿ ಉಂಟಾಗುವ ಅಸಮತೋಲನವನ್ನು ಶಾಸಕಾಂಗಕ್ಕೆ ಮನವರಿಕೆ ಮಾಡಿಕೊಟ್ಟು, ಪ್ರಾಣಿಗಳು ಮತ್ತು ಇತರೆ ಗಿಡ, ಮರಗಳಂತೆಯೇ ಹೂವುಗಳನ್ನೂ ಅರಣ್ಯ ಸಂಪತ್ತು ಮತ್ತು ಅವಗಳನ್ನು ರಕ್ಷಿಸಬೇಕು ಎನ್ನುವ ಅಂಶವನ್ನು ಇದೇ ಕಾಯಿದೆಯಲ್ಲಿ ಸೇರಿಸಲು ಸಫಲರಾಗಿದ್ದಾರೆ.

Untitled design - 2026-10-13T153146.623

ʼಲೇಡಿಸ್ ಸ್ಲಿಪ್ಪರ್ ಆರ್ಕಿಡ್ʼಎಂದು ಗುರುತಿಸಲ್ಪಡುವ ಒಂದು ಬಗೆಯ ಆರ್ಕಿಡ್ ಹೂವು ಆಗತಾನೆ ನಡಿಗೆ ಕಲಿತ ಪುಟ್ಟ ಮಕ್ಕಳಿಗೆ ಹಾಕುವ ಶೂಜೀನಾಕಾರದ ಹೂವು. ದಕ್ಷಿಣ ಅಮೆರಿಕ, ಯುರೋಪಿನ ಕೆಲವು ಭಾಗಗಳು ಹಾಗೂ ಏಷ್ಯಾ ಖಂಡದಲ್ಲಿ ಮಾತ್ರ ಸಹಜವಾಗಿ ಬೆಳೆಯುತ್ತಿದ್ದ ಈ ಹೂವು ವಿನಾಶದಂಚಿನ ಪ್ರಬೇಧವಾಗಿತ್ತು. ಬರೀ ಚಿತ್ರಪಟಗಳಲ್ಲಿ ಮಾತ್ರ ನೋಡಲು ಸಿಗುತ್ತಿದ್ದ ಈ ಹೂವನ್ನು ಮತ್ತೆ ಅರುಣಾಚಲ ಪ್ರದೇಶದ ಕಾಡುಗಳಲ್ಲಿ ಕಂಡುಕಿಡಿದು ಅದರ ಬಗ್ಗೆ ಹೆಚ್ಚಿನ ಮಟ್ಟದ ಸಂಶೋಧನೆ ಮಾಡಿದ ಹೆಮ್ಮೆ ಕನ್ನಡಿಗ ಹೆಗ್ಡೆಯವರದ್ದು. ಇಷ್ಟೊಂದು ಮೊದಲುಗಳಿಗೆ ಕಾರಣವಾದ ಅವರನ್ನು ನೋಡಲೇಬೇಕೆಂದು ಹೊರಟಿದ್ದೆ ಒಮ್ಮೆ.

ಇಟಾನಗರದಿಂದ ಬೊಂಡಿಲ್ಲಾ ಎನ್ನುವ ಸಣ್ಣ ನಗರ ಪ್ರದೇಶದ ಕಡೆಗೆ ಹೋಗುವಾಗ ಇಕ್ಕೆಲಗಳಲ್ಲೂ ಸಿಗುವುದು ಸೆಸಾ ಎನ್ನುವ ಸುಂದರ ಶೀತವಲಯ ಅರಣ್ಯ ಪ್ರದೇಶ. ಇಲ್ಲಿನ ಟಿಪಿ ನದಿಯ ಮುಂದಿನ ಒಂದು ಬೆಟ್ಟೇಣಿನ ಮೇಲ್ಗಡೆ ಹೆಗ್ಡೆಯವರು ‘ಸೆಸಾ ಆರ್ಕಿಡ್ ಸೆಂಚುರಿʼ ಎಂದು ಆರ್ಕಿಡ್‌ಗಳಿಗಾಗಿಯೇ ಒಂದು ಆರ್ಕಿಡ್ ಧಾಮವನ್ನು ಸ್ಥಾಪಿಸಿದ್ದಾರೆ. ಇಲ್ಲಿನ ಸೌಂದರ್ಯವನ್ನು ನೋಡಿದಾಗಲೇ ತಿಳಿಯಲು ಸಾಧ್ಯ ಯಾಕಾಗಿ ಚೀನಾ ದೇಶವು ಸದಾಕಾಲವೂ ಸೆಸಾ ತನಗೇ ಸೇರಬೇಕೆಂದು ಕ್ಯಾತೆ ತೆಗೆಯುತ್ತಿರುತ್ತದೆ ಎಂದು. 1000 ಚದರ ಅಡಿಗಳಷ್ಟು ಜಾಗದಲ್ಲಿ 200ಕ್ಕೂ ಹೆಚ್ಚು ಆರ್ಕಿಡ್ ಪ್ರಬೇಧಗಳನ್ನು ರಕ್ಷಿಸಿ ಇಡಲಾಗಿದೆ. ಅದರಲ್ಲಿ 114 ಪ್ರಬೇಧಗಳು ಭಾರತದ್ದಾಗಿದ್ದು ಇನ್ನು ಉಳಿದವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿ ಅವುಗಳನ್ನು ಬೆಳೆಸಲಾಗುತ್ತಿದೆ. ಸದಾನಂದ ಹೆಗ್ಡೆಯವರಿಗೆ ನಿವೃತ್ತಿಯಾಗಿದ್ದ ವಿಷಯ ಆಗ ತಿಳಿಯಿತು.

Untitled design - 2026-10-13T153140.788

Rhynchostylis retusa ಅಥವಾ Foxtail Orchid ಎನ್ನುವುದು ಅರುಣಾಚಲ ಪ್ರದೇಶದ ರಾಜ್ಯದ ಹೂವೆಂದು ಘೋಷಿಸಲಾಗಿದೆ. ಇದನ್ನು ಬಯಲು ಸೀಮೆಯವರು ಸೀತಾಳೆ ಅಥವಾ ಸೀತೆ ಹೂವೆಂದು ಕರೆದರೆ ಮಲೆನಾಡಿನವರು ಕೊಪೂಂಪ ಹೂವು ಎನ್ನುತ್ತಾರೆ. ರಕ್ತ ಸುರಿವ ಗಾಯಗಳನ್ನು ವಾಸಿ ಮಾಡಲು ಆಯುರ್ವೇದದಲ್ಲಿ ಈ ಹೂವನ್ನು ಬಳಸಲಾಗುತ್ತದೆ. ಈ ಹೂಗುಂಪು ಗಿಡದ ಮೇಲಿನಿಂದ ಹೆಣ್ಣಿನ ಜಡೆಯೊಂದು ಭೂಮಿಯಕಡೆಗೆ ಬಗ್ಗಿ ನೋಡುತ್ತಿರುವಂತೆ ಕಾಣುತ್ತದೆ. ನಿಜಾರ್ಥದ ಭೂಮುಖ ಸುಂದರಿ. ಆರ್ಕಿಡ್ ಹೂವುಗಳು ನೋಡಲು ಸುಂದರ ಎನ್ನುವುದು ಬಿಟ್ಟರೆ ಪರಿಸರ ವಿಜ್ಞಾನದ ದೃಷ್ಟಿಯಿಂದ ಅದರ ಮಹತ್ವ ಏನೆಂದು ತಿಳಿದಿರಲಿಲ್ಲ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಸದಾನಂದರ ಹೆಗ್ಡೆಯವರನ್ನು ಅಂತರ್ಜಾಲದಲ್ಲಿ ಹುಡುಕಿದೆ. ಭಾರತೀಯ ಆರ್ಕಿಡ್ ಸೊಸೈಟಿಯವರ ವೆಬ್‌ಸೈಟ್‌ನಲ್ಲಿ ಅವರ ಹೆಸರು ಸಿಕ್ಕಿತು. ಸದಾನಂದ ಹೆಗ್ಡೆಯವರ ಫೋನ್ ಸಂಖ್ಯೆಗಳನ್ನು ಪಡೆದುಕೊಂಡೆ.

Untitled design - 2026-10-13T153152.610

ಜಗತ್ತು ತಮ್ಮನ್ನು ಕಡೆಗಣಿಸಿದೆ ಎಂದು ಬಲವಾಗಿ ನಂಬಿ ಎಲ್ಲ ಸಾಧ್ಯತೆಗಳಿಗೆ ಕಣ್ಣುಮುಚ್ಚಿಕೊಂಡಂತಾಗಿದ್ದ ಅರುಣಾಚಲದ ಗುಡ್ಡಗಾಡು ಜನರ ಮನಸನ್ನು ಅವರ ಮೂಢನಂಬಿಕೆಗಳಿಂದ ಹೊರತಂದು ಒಲಿಸಿ ಕೆಲಸ ಮಾಡುವಾಗಿನ ಅವರ ಅನುಭವಗಳನ್ನು ನಿತ್ಯವೂ ಒಂದೊಂದೇ ಕಣ್ಣಿಗೆ ಕಟ್ಟಿದಂತೆ ಹೇಳಿದರು ಹೆಗ್ಡೆಯವರು. ‘ಕರ್ನಾಟಕ ಸರಕಾರಕ್ಕೂ ಆರ್ಕಿಡ್ ಹೂವಿನ ಮಹತ್ವದ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದರು. “ಅದ್ಯಾಕೆ ಆರ್ಕಿಡ್‌ಗೋಸ್ಕರವೇ ಅಷ್ಟು ಕೆಲಸ ಮಾಡಿದ್ದು?” ಸಸ್ಯ ಶಾಸ್ತ್ರದಲ್ಲಿಯೇ ಪ್ರಾಚೀನ ಪ್ರಬೇಧಗಳಲ್ಲಿ ಒಂದಾದ ಆರ್ಕಿಡ್ ಹೂವು ಅತ್ಯಂತ ಗಟ್ಟಿ ಪ್ರಬೇಧ ಎಂದು ಗುರುತಿಸಿಕೊಂಡಿದೆ. ಶತಶತಮಾನಗಳಿಂದ ಎಲ್ಲ ನೆಲಗುಣ ಬದಲಾವಣೆಗೂ, ಹವಾಮಾನ ಸ್ವಭಾವದಲ್ಲಿನ ಏರುಪೇರಿಗೂ ಹೊಂದಿಕೊಳ್ಳುವಂತೆ ತನ್ನ ಬೇರಿನಿಂದ ಎಲೆಯವರೆವಿಗೂ, ಹೂವಿನ ಗಾತ್ರ, ಅಳತೆ, ಆಕಾರವನ್ನೂ ತನಗೆ ತಾನೇ ಸಹಜ ಮಾರ್ಪಾಡುಗಳನ್ನು ಮಾಡಿಕೊಂಡು, ವೈರಸ್ ಮತ್ತು ಫಂಗಸ್‌ಗಳಿಂದ ರಕ್ಷಣಾತ್ಮಕ ಚಾಕಚಕ್ಯತೆಯನ್ನು ಮೈಗೂಡಿಸಿಕೊಂಡು, ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಮನುಷ್ಯನ ಹಿಂದಿನಿಂದಲೂ ಅವನ ಜತೆಜತೆಗೂ ಬದುಕಿ ಬಂದಿರುವುದು ಆರ್ಕಿಡ್ ಹೂವುಗಳ ವೈಶಿಷ್ಟ್ಯ. ಆರ್ಕಿಡ್ ಹೂವುಗಳನ್ನೇ ನಂಬಿಕೊಂಡಿರುವ ಹಲವಾರು ಸಣ್ಣಸಣ್ಣ ಪಕ್ಷಿಗಳು, ಸಾವಿರಾರು ವಿಧದ ಚಿಟ್ಟೆಗಳು, ಕ್ರಿಮಿಕೀಟಗಳು ಆರ್ಕಿಡ್ ಹೂವಿನೊಂದಿಗೇ ನಶಿಸಿ ಹೋಗಿದ್ದಿದ್ದರೆ ಭೂಮಂಡಲದ ಜೀವಜಗತ್ತಿನ ಒಂದು ಕೊಂಡಿಯೇ ಕಳಚಿ ಹೋಗುತ್ತಿತ್ತು.

ಸದಾನಂದ ಹೆಗ್ಡೆಯವರಿಗೆ ಆರ್ಕಿಡ್ ಬಗೆಗಿನ ಅದಮ್ಯ ಒಲವು ಎದ್ದು ಕಂಡಿದ್ದು ಅವರ ಒಬ್ಬಳೆ ಮಗಳಿಗೆ ಇಟ್ಟಿರುವ ಹೆಸರಿನಲ್ಲಿ! ಸಸ್ಯಶಾಸ್ತ್ರದಲ್ಲಿ Coerulea ಅಥವಾ Blue Vanda ಎಂದು ಗುರುತಿಸಿಕೊಂಡಿರುವ ಆರ್ಕಿಡ್ ಹೂವು ’ಸಿರುಲಿಯಾʼ ಇವರ ಮಗಳ ಹೆಸರಾಗಿದೆ. ಸಿರುಲಿಯಾ ಹೆಸರು ಕೇಳಿದೊಡನೆ ನಿಘಂಟಿನಲ್ಲಿ ಹುಡುಕಬೇಕು ಎನ್ನಿಸುವುದು ಸಹಜವೇ. ಆದರೆ, ನಮ್ಮದೇ ಮಹಾಭಾರತದಲ್ಲಿ ದ್ರೌಪದಿಗಾಗಿ ಈಶಾನ್ಯದ ಕಾಡುಗಳಿಂದ ಭೀಮ ತಂದುಕೊಟ್ಟ ಸೌಗಂಧಿಕಾ ಪುಷ್ಪ ಇದು ಎಂದು ಹೇಳಿದರೆ, ಆರ್ಕಿಡ್ ಹೂವುಗಳು, ಸಿರುಲಿಯಾ ಎನ್ನುವ ಕನ್ನಡತಿ, ಆರ್ಕಿಡ್‌ಗಳನ್ನೇ ಉಸಿರಾಡುತ್ತಿರುವ ಡಾ. ಸದಾನಂದ ಹೆಗ್ಡೆಯವರು ಎಲ್ಲರೂ ಎಷ್ಟೊಂದು ನಮ್ಮವರಾಗಿ, ನಾವು ಹೆಮ್ಮ ಪಡಬಹುದಾದ ಮುಖ್ಯ ಕಾರಣವಾಗಿ ತೋರುತ್ತಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?