ಬೆಳ್ಳಿಪರದೆಯ ಮೇಲೆ ಅಮೆರಿಕಾದ ದರ್ಶನ
ಕಥೆಯ ಬಹುಭಾಗವು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಚಿತ್ರಿತವಾಗಿದ್ದರೂ, ಚಿತ್ರದುದ್ದಕ್ಕೂ ಸಿನೆಮಾದ ಹಾಡುಗಳು ಮತ್ತು ದೃಶ್ಯಗಳಲ್ಲಿ ಅಮೆರಿಕದ ಹೆಗ್ಗುರುತುಗಳನ್ನು ಸುಂದರವಾಗಿ ಬಳಸಿಕೊಳ್ಳಲಾಗಿದೆ. ಪಶ್ಚಿಮ ಕರಾವಳಿಯ ಲಾಸ್ ಏಂಜಲೀಸ್, ಲಾಸ್ ವೆಗಾಸ್ ಹಾಗೂ ಪೂರ್ವ ಕರಾವಳಿಯ ನ್ಯೂಯಾರ್ಕ್, ವಾಷಿಂಗ್ಟನ್ ನಗರಗಳನ್ನು ನಾಗತಿಹಳ್ಳಿಯವರು ಅತ್ಯಂತ ಸೊಗಸಾಗಿ ಸೆರೆಹಿಡಿದಿದ್ದಾರೆ. ಒಬ್ಬ ಪ್ರವಾಸಿಗ ಸಾಮಾನ್ಯವಾಗಿ ಅಮೆರಿಕಾದಲ್ಲಿ ಏನನ್ನು ನೋಡಬಯಸುತ್ತಾನೋ ಬಹುತೇಕ ಎಲ್ಲವನ್ನೂ ಈ ಚಿತ್ರದ ದೃಶ್ಯಾವಳಿಗಳು ಒಳಗೊಂಡಿವೆ.
ಟೂರಿಂಗ್ ಟಾಕೀಸ್
- ಜ್ಯೋತಿ ಪ್ರಸಾದ್
ಪ್ರವಾಸ ಮತ್ತು ಅನಿವಾಸಿ ಭಾರತೀಯರ ಜೀವನದ ತೊಳಲಾಟದ ಬಗ್ಗೆ ಮಾತನಾಡುವಾಗ 1997 ರಲ್ಲಿ ಬಿಡುಗಡೆಯಾದ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಅಮೆರಿಕಾ ಅಮೆರಿಕಾ' ಚಿತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ವಿದೇಶಿ ನೆಲದ ಪ್ರವಾಸ ಮತ್ತು ಅಲ್ಲಿನ ಜೀವನಶೈಲಿಯನ್ನು ಅತ್ಯಂತ ನೈಜವಾಗಿ ಕಟ್ಟಿಕೊಟ್ಟ ಉತ್ತಮ ಚಿತ್ರಗಳ ಸಾಲಿನಲ್ಲಿ ಈ ಚಿತ್ರ ಮುಂಚೂಣಿಯಲ್ಲಿದೆ. 90 ರ ದಶಕದ ಮಧ್ಯಭಾಗದಲ್ಲಿ, ಅಮೆರಿಕಾ ಪ್ರವಾಸವೆನ್ನುವುದು ಸಾಮಾನ್ಯ ಜನರಿಗೆ ಒಂದು ಕನಸಾಗಿದ್ದ ಕಾಲದಲ್ಲಿ, ಈ ಸಿನಿಮಾ ಅಲ್ಲಿನ ಹೆದ್ದಾರಿಗಳು, ನಗರಗಳು, ಮಾಲ್ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುಗರ ಮನೆಬಾಗಿಲಿಗೇ ತಲುಪಿಸಿತ್ತು. ಈ ಸಿನೆಮಾದಲ್ಲಿ ಕಾಣಸಿಗುವ ಪ್ರವಾಸದ ಸೊಬಗು ಮತ್ತು ಸಂಸ್ಕೃತಿಗಳ ಸಂಘರ್ಷ ಇಂದಿಗೂ ಪ್ರಸ್ತುತವಾಗಿದೆ.
ಇದನ್ನೂ ಓದಿ: ಮೂರು ಭೂಖಂಡಗಳು,ಇಪ್ಪತ್ಮೂರು ದೇಶಗಳನ್ನು ಸುತ್ತಿಸುವ ಕಥನ
ಚಿತ್ರದ ಕಥೆ ಮೂವರು ಬಾಲ್ಯದ ಗೆಳೆಯರಾದ ಸೂರ್ಯ, ಶಶಾಂಕ್ ಮತ್ತು ಭೂಮಿ ಅವರ ಸುತ್ತ ಸುತ್ತುತ್ತದೆ. ಸಂಪ್ರದಾಯಬದ್ಧ ಹಳ್ಳಿಯ ಪರಿಸರದಲ್ಲಿ ಬೆಳೆದ ಇವರು, ಅನಿರೀಕ್ಷಿತವಾಗಿ ಅಮೆರಿಕಾದ ಆಧುನಿಕ ಜಗತ್ತಿಗೆ ತೆರಳಬೇಕಾಗುತ್ತದೆ. ತನ್ನ ತಾಯ್ನಾಡಿನ ಮಣ್ಣಿನ ವಾಸನೆಯನ್ನು ಪ್ರೀತಿಸುವ ಸೂರ್ಯ ಒಂದು ಕಡೆಯಾದರೆ, ಅಮೆರಿಕಾದ ಅದ್ದೂರಿ ಜೀವನಕ್ಕೆ ಮಾರುಹೋಗುವ ಶಶಾಂಕ್ ಮತ್ತೊಂದು ಕಡೆ. ಇವರ ನಡುವಿನ ಸೈದ್ಧಾಂತಿಕ ಸಂಘರ್ಷವೇ ಸಿನಿಮಾದ ಜೀವಾಳ. ಸಿನಿಮಾ ಆರಂಭವಾಗುವುದು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಹಸಿರು ಸಿರಿಯ ನಡುವೆ. ಆದರೆ ಕಥೆ ವೇಗವನ್ನು ಪಡೆದುಕೊಳ್ಳುವುದು ಪಾತ್ರಗಳು ಅಮೆರಿಕಾಕ್ಕೆ ಕಾಲಿಟ್ಟಾಗ. ಹಳ್ಳಿಯಿಂದ ಉನ್ನತ ವ್ಯಾಸಂಗಕ್ಕೆಂದು ಮೊದಲ ಬಾರಿಗೆ ಅಮೆರಿಕಾಕ್ಕೆ ಹೊರಟಿದ್ದ ಕಥಾನಾಯಕ ಶಶಾಂಕನನ್ನು ಅವನ ನೆಚ್ಚಿನ ಗೆಳೆಯರಾದ ಸೂರ್ಯ ಮತ್ತು ಭೂಮಿ ಬೀಳ್ಕೊಡುವ ಸಂದರ್ಭದ ಸಂಭಾಷಣೆಯು ಪ್ರವಾಸಪ್ರಿಯಳಾದ ನನ್ನ ಕಿವಿಯಲ್ಲಿ ಇಂದಿಗೂ ಗುನುಗುನಿಸುತ್ತಲೇ ಇರುತ್ತದೆ. “ಮನುಷ್ಯನಿಗೆ ರೆಕ್ಕೆಗಳಿರ್ಬೇಕು, ಅವನು ಹಕ್ಕಿ ತರ ಹಾರ್ಬೇಕು. ಬೆಟ್ಟ, ನದಿ, ಸಮುದ್ರದ ಮೇಲೆ ಹಾರ್ಬೇಕು, ಪ್ರಪಂಚ ನೋಡ್ಬೇಕು” ಎನ್ನುವ ಆ ಮಾತುಗಳು ದೇಶ ಸುತ್ತುವ ಹಂಬಲವನ್ನು ಹೆಚ್ಚಿಸುತ್ತವೆ. ಹಾರಲು ರೆಕ್ಕೆ ಮತ್ತು ತಳ ಊರಲು ಬೇರು - ಎಲ್ಲಿ ಹೋದರೂ ಹಿಂದಿರುಗಿ ಬರಲು ನಮ್ಮ ಊರು ಬಹಳ ಮುಖ್ಯ ಎಂಬ ಸತ್ಯ ಈ ಸಿನೆಮಾದ ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.

ಕಥೆಯ ಬಹುಭಾಗವು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಚಿತ್ರಿತವಾಗಿದ್ದರೂ, ಚಿತ್ರದುದ್ದಕ್ಕೂ ಸಿನೆಮಾದ ಹಾಡುಗಳು ಮತ್ತು ದೃಶ್ಯಗಳಲ್ಲಿ ಅಮೆರಿಕದ ಹೆಗ್ಗುರುತುಗಳನ್ನು ಸುಂದರವಾಗಿ ಬಳಸಿಕೊಳ್ಳಲಾಗಿದೆ. ಪಶ್ಚಿಮ ಕರಾವಳಿಯ ಲಾಸ್ ಏಂಜಲೀಸ್, ಲಾಸ್ ವೆಗಾಸ್ ಹಾಗೂ ಪೂರ್ವ ಕರಾವಳಿಯ ನ್ಯೂಯಾರ್ಕ್, ವಾಷಿಂಗ್ಟನ್ ನಗರಗಳನ್ನು ನಾಗತಿಹಳ್ಳಿಯವರು ಅತ್ಯಂತ ಸೊಗಸಾಗಿ ಸೆರೆಹಿಡಿದಿದ್ದಾರೆ. ಒಬ್ಬ ಪ್ರವಾಸಿಗ ಸಾಮಾನ್ಯವಾಗಿ ಅಮೆರಿಕಾದಲ್ಲಿ ಏನನ್ನು ನೋಡಬಯಸುತ್ತಾನೋ ಬಹುತೇಕ ಎಲ್ಲವನ್ನೂ ಈ ಚಿತ್ರದ ದೃಶ್ಯಾವಳಿಗಳು ಒಳಗೊಂಡಿವೆ.ವಾಷಿಂಗ್ಟನ್ ಡಿ.ಸಿ.ಯ ಲಿಂಕನ್ ಮೆಮೋರಿಯಲ್, ಪ್ರತಿಷ್ಠಿತ ಕ್ಯಾಪಿಟಲ್ ಬಿಲ್ಡಿಂಗ್ ಮತ್ತು ಶ್ವೇತಭವನದ ಹೊರಾಂಗಣ ದೃಶ್ಯಗಳು ಪ್ರೇಕ್ಷಕರಿಗೆ ಅಲ್ಲಿನ ಇತಿಹಾಸದ ಪರಿಚಯ ಮಾಡಿಕೊಡುತ್ತವೆ. ಇನ್ನು ಪ್ರವಾಸಿಗರ ಅಚ್ಚುಮೆಚ್ಚಿನ ನಯಾಗರಾ ಜಲಪಾತದ ಭೋರ್ಗರೆತವನ್ನು ಚಿತ್ರದ ಹಾಡಿನಲ್ಲಿ ಹಿಡಿದಿಟ್ಟಿರುವ ರೀತಿ ಅದ್ಭುತ. ಅಲ್ಲಿನ ಗಗನಚುಂಬಿ ಕಟ್ಟಡಗಳ ಸಾಲು ಮತ್ತು ಸುಸಜ್ಜಿತ ರಸ್ತೆಗಳನ್ನು ನೋಡುವಾಗ ಪ್ರೇಕ್ಷಕನಿಗೆ ತಾನೇ ಸ್ವತಃ 'ರೋಡ್ ಟ್ರಿಪ್' ಮಾಡುತ್ತಿರುವ ಅನುಭವವಾಗುತ್ತದೆ. ಸಿನೆಮಾ ಮುಗಿಯುವ ವೇಳೆಗೆ ಪ್ರೇಕ್ಷಕನಿಗೆ ಅಮೆರಿಕದ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಿಬಂದ ತೃಪ್ತಿ ಸಿಗುತ್ತದೆ. ಹಾಗಾಗಿ ಆ ಕಾಲಘಟ್ಟದಲ್ಲಿ ಅಮೆರಿಕಾವನ್ನು ಹತ್ತಿರದಿಂದ ನೋಡಿರದ ಪ್ರೇಕ್ಷಕರಿಗೆ ಈ ಚಿತ್ರವು ಒಂದು ಅದ್ಭುತ 'ವರ್ಚುವಲ್ ಟೂರ್' ನೀಡಿತ್ತು ಎನ್ನಬಹುದು. ಇಂದಿಗೂ ಅಮೆರಿಕಕ್ಕೆ ಭೇಟಿನೀಡುವ ಪ್ರವಾಸ ಪ್ರೇಮಿಗಳು ಈ ಚಿತ್ರದ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತಾರೆ.
ಉತ್ತಮ ಪ್ರವಾಸಿ ಲೇಖನವು ಕೇವಲ ಸ್ಥಳಗಳ ಬಗ್ಗೆ ಮಾತ್ರವಲ್ಲದೆ, ಅಲ್ಲಿನ ಜನರ ಜೀವನಶೈಲಿಯ ಬಗ್ಗೆಯೂ ತಿಳಿಸುತ್ತದೆ. ಈ ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗುತ್ತದೆ. ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರ ಜೀವನ, ಅಲ್ಲಿನ ಶಿಸ್ತು, ಸ್ವಚ್ಛತೆ ಹಾಗೂ ಸೌಂದರ್ಯವನ್ನು ಮತ್ತು ಆ ನಾಡಿನ ಜನರ ಸಂಸ್ಕೃತಿಯ ಪರಿಚಯವನ್ನೂ ತೆರೆಯ ಮೇಲೆ ನೈಜವಾಗಿ ತರಲಾಗಿದೆ. ಸೂರ್ಯ ಮತ್ತು ಶಶಾಂಕ್ ನಡುವಿನ ಸೈದ್ಧಾಂತಿಕ ಸಂಘರ್ಷವು, ಒಬ್ಬ ಪ್ರವಾಸಿಗ ವಿದೇಶಕ್ಕೆ ಹೋದಾಗ ಅಲ್ಲಿನ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸುತ್ತಾನೆ ಅಥವಾ ವಿರೋಧಿಸುತ್ತಾನೆ ಎಂಬ ಅಂಶವನ್ನೂ ಸೂಕ್ಷ್ಮವಾಗಿ ಧ್ವನಿಸುತ್ತದೆ. ಚಿತ್ರದ ಯಶಸ್ಸಿಗೆ ಮತ್ತೊಂದು ಮುಖ್ಯ ಕಾರಣ ಆ ಚಿತ್ರದ ಸಂಗೀತ. "ಅಮೆರಿಕಾ ಅಮೆರಿಕಾ" ಮತ್ತು "ನೂರು ಜನ್ಮಕೂ" ಹಾಡುಗಳು ಇಂದಿಗೂ ಎಲ್ಲರ ಅಚ್ಚುಮೆಚ್ಚಿನ ಗೀತೆಗಳಾಗಿವೆ.

ಇಂದು ಅಮೆರಿಕಾ ಪ್ರವಾಸವನ್ನು ಹಲವಾರು ಬಾರಿ ಕೈಗೊಂಡು, ಅಲ್ಲಿ ದೀರ್ಘಕಾಲ ನೆಲೆಸಿದರೂ ಕೂಡ ನನಗೆ ಇಂದಿಗೂ ಮನಸ್ಸಿಗೆ ಮುದ ನೀಡುವ ಕನ್ನಡ ಸಿನೆಮಾ ಎಂದರೆ ತಕ್ಷಣ ನೆನಪಾಗುವುದು ಈ ಚಿತ್ರವೇ. ‘ಅಮೆರಿಕಾ ಅಮೆರಿಕಾ’ ಕೇವಲ ಸಿನಿಮಾ ಮಾತ್ರವಲ್ಲ; ಪ್ರವಾಸದ ಮೂಲಕ ಪ್ರಪಂಚದೆಡೆಗೆ ಕಣ್ತೆರೆಸುವ ಒಂದು ಪ್ರಾಮಾಣಿಕ ಪ್ರಯತ್ನ. ನಾವು ಎಲ್ಲಿಗೇ ಹೋದರೂ ನಮ್ಮ ಬೇರುಗಳನ್ನು ಮರೆಯಬಾರದು ಎಂಬ ಸಂದೇಶದೊಂದಿಗೆ, ಬದುಕಿನ ಮೌಲ್ಯಗಳು ಮತ್ತು ದೇಶ ಸಂಚಾರದ ಆಸಕ್ತಿಯನ್ನು ಒಟ್ಟಾಗಿ ಕಟ್ಟಿಕೊಟ್ಟ ಈ ಚಿತ್ರ ಕನ್ನಡದ ಮಟ್ಟಿಗೆ ಒಂದು 'ಟ್ರಾವೆಲ್ ಕ್ಲಾಸಿಕ್' ಎನ್ನಬಹುದು.
ಹವ್ಯಾಸಿ ಲೇಖಕಿ ಮತ್ತು ಕವಯಿತ್ರಿ.