ಹುಟ್ಟಿಗೂ ಸಾವಿಗೂ ಸಸಿನೆಟ್ಟು ಕಾಪಿಟ್ಟರು; ಇದು ಭಾರತದ ವೃಕ್ಷಗ್ರಾಮದ ಯಶೋಗಾಥೆ
ಪಾಲಿವಾಲ್ ಕಾನನ ಸೃಷ್ಟಿಸುವ ಕನಸಿಗೆ ಇಂಧನ ತುಂಬಿದ್ದು, ಅಲ್ಲಿದ್ದ ಸಾಮಾಜಿಕ ಸಮಸ್ಯೆಗಳು. ಈ ಪ್ರದೇಶದಲ್ಲಿ ಇದ್ದದ್ದು ಪುರುಷ ಪ್ರಧಾನ ಕುಟುಂಬಗಳು, ಹೆಣ್ಣು ಮಕ್ಕಳು ಹುಟ್ಟಿದರೆ ಮದುವೆ, ವರದಕ್ಷಿಣೆ ಮತ್ತಿತರ ಕಾರ್ಯಗಳಿಗೆ ಹಣದ ಹೊಳೆಯೇ ಹರಿಸಬೇಕಾಗುತ್ತದೆ ಎಂದು ಪೋಷಕರು ಯೋಚಿಸುತ್ತಿದ್ದರು. ಹೆಣ್ಣು ಭ್ರೂಣಹತ್ಯೆಯ ಹಾವಳಿ ಅಲ್ಲಿ ಹೆಚ್ಚಾಗಿತ್ತು. ಇದನ್ನು ಮನಗಂಡ ಪಾಲಿವಾಲ್, ಹೆಣ್ಣು ಮಗು ಹುಟ್ಟಿದರೆ ಪೋಷಕರು 111 ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ ಮಾಡಲು ತಿಳಿಸಿದರು. ಮುಂದೆ ಅಲ್ಲಿ ಆಗಿದ್ದು ವನ ನಿರ್ಮಾಣ ಕ್ರಾಂತಿ.
ʼಪಾಲಿವಾಲ್ʼ ಈ ಹೆಸರು ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು-ಪೊಳ್ಳು ಮಾತನಾಡುತ್ತಾ, ಶೋಕಿಗೊಂದಿಷ್ಟು ವಿಡಿಯೋ ಮಾಡಿ ಹಂಚಿಕೊಂಡಿದ್ದರೆ ಬಹುಶಃ ಅವರು ನೆಟ್ಟಿಗರಿಗೆ ಪರಿಚಿತರಾಗಿರುತ್ತಿದ್ದರು. ಆದರೆ ಅವರು ರಾಜಸ್ಥಾನದ ರಣ ಬಿಸಿಲಿನ ನಡುವಿನ ಗುಡ್ಡಗಾಡು ಊರೊಂದರಲ್ಲಿ ತಂಪೆರೆಯುವ ಕಾಡು, ಸಮಾಜ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡುಬಿಟ್ಟರು. ರಾಜಸ್ಥಾನ, ಹೀಗೆಂದಾಗ ಭಾರತದಲ್ಲೇ ಅತಿಹೆಚ್ಚು ಬಿಸಿಲು ಆವರಿಸಿರುವ ರೂಹ್ಲಿ, ಫಲೋಡಿ ಪ್ರದೇಶಗಳು ಓದುಗರ ಕಣ್ಣು ಪಿಳುಕಿಸುವಂತೆ ಮಾಡುತ್ತವೆ. ಅಲ್ಲಿರುವ ಜಳವೂ ಅಂಥದ್ದೇ. ಕಲ್ಲು ಕರಗುವ ಬಿಸಿಲು ಎಂದರೂ ಅಚ್ಚರಿ ಪಡಬೇಕಿಲ್ಲ. ಈವರೆಗೆ ಅಲ್ಲಿ ದಾಖಲಾದ ಹೆಚ್ಚು ಬಿಸಿಲಿನ ಪ್ರಮಾಣ 51 ಡಿಗ್ರಿ! ಆದರೆ, ಈ ಬಿಸಿಲಿನ ಜಳ ಒಂಚೂರು ನಿಮಗೆ ತಾಕದಂತೆ ಕಾಪಾಡಿಕೊಳ್ಳುವ ಕಾನನ ಪಿಪ್ಲಾಂತ್ರಿಯಲ್ಲಿ ನೆಟ್ಟು ಬೆಳೆಸಲಾಗಿದೆ. ಇದರ ಶ್ರೇಯ ಮಾತ್ರ ಪಿಪ್ಲಾಂತ್ರಿ ಜನರು ಮತ್ತು ಸುಂದರ್ ಶ್ಯಾಮ್ ಪಾಲಿವಾಲ್ ಅವರಿಗೆ ಸಲ್ಲುತ್ತದೆ. 2005ರವರೆಗೂ ಪಿಪ್ಲಾಂತ್ರಿ ಅಕ್ಷರಶಃ ಬರಡಾಗಿತ್ತು. ಜಳಕ್ಕೆ ಅಲ್ಲಿ ಜಲರಾಶಿಯೂ ಬತ್ತಿಹೋಗಿತ್ತು. ಸಾವಿಗಿಷ್ಟು, ಸಂತೋಷಕ್ಕಿಷ್ಟು, ನೆನಪಿಗಿಷ್ಟು ಹೀಗೆ ಸಿಕ್ಕ ಅವಕಾಶಗಳಿಗೆಲ್ಲಾ ಸಸಿನೆಟ್ಟು ಈ ಸುಂದರ ಕಾಡನ್ನು ಅಲ್ಲಿನ ಜನರೇ ನಿರ್ಮಿಸಿದ್ದಾರೆ.
ಇದನ್ನೂ ಓದಿ: I will pray ಎಂಬ ಮಾತಿನಲ್ಲಿ ಅಡಗಿದ್ದ ಗಾಢ ಸಂದೇಶ!
ಸಾವು ಕಟ್ಟಿದ ಕಾಡು ನೆಡುವ ಕನಸು
ಈಗ ಪಿಪ್ಲಾಂತ್ರಿ ಕಾಡು ಕಟ್ಟಿದ ಕಥೆಯ ಹಂದರ ತೆರೆದುಕೊಳ್ಳುತ್ತದೆ. 2006ಕ್ಕೂ ಮೊದಲು ಪಿಪ್ಲಾಂತ್ರಿ ಈಗಿನಂತೆ ಇರಲಿಲ್ಲ. ಬದಲಿಗೆ ರಾಜಸ್ಥಾನದ ಒಂದು ಬಂಜರು ಭೂಮಿಯಾಗಿತ್ತು. ಬಿಸಿಲಿನ ಬೇಗೆ ಅಲ್ಲಿ ತಾಂಡವಾಡುತ್ತಿತ್ತು. ಕಾರಣಾಂತರಗಳಿಂದ ಹೆಣ್ಣು ಭ್ರೂಣ ಹತ್ಯೆಯ ಸಂಖ್ಯೆಯೂ ಹೆಚ್ಚಾಗಿತ್ತು. 2005ಕ್ಕೆ ಪಿಪ್ಲಾಂತ್ರಿಯ ಸರ್ಪಂಚ್ ಆಗಿ ಪಾಲಿವಾಲ್ ಆಯ್ಕೆಯಾದರು. ದುರದೃಷ್ಟಕ್ಕೆ ಮರುವರ್ಷಕ್ಕೆ 17ರ ಪ್ರಾಯದ ಅವರ ಮಗಳು ಕಿರಣ್ ನಿರ್ಜಲೀಕರಣದಿಂದ ಸಾವನ್ನಪ್ಪಿದರು. ಇದರಿಂದ ಮನನೊಂದ ಪಾಲಿವಾಲ್ ಮಗಳ ನೆನಪಿಗಾಗಿ ಒಂದು ಬರ್ಫ್ಲವರ್ ಅಥವಾ ಕದಮ್ ಸಸಿಯನ್ನು ನೆಟ್ಟು ಅದನ್ನು ಫೋಷಿಸಿದರು. ಅಲ್ಲಿಂದ ಸಸಿ ನೆಡುವ ಕಾರ್ಯಕ್ಕೆ ಪಾಲಿವಾಲ್ ತಮ್ಮನ್ನು ತೊಡಗಿಸಿಕೊಂಡರು. ಮುಂದಿನ ದಿನಗಳಲ್ಲಿ ಅದರಿಂದ ನೆರಳು ಜಲಮೂಲ ವೃದ್ಧಿಯಾಗಿದ್ದನ್ನು ಅರಿತುಕೊಂಡರು. ಅಲ್ಲಿಂದ ಕಾಡು ನೆಟ್ಟು ಬೆಳೆಸುವ ಕೆಲಸ ಆರಂಭವಾಯಿತು.

ಹೆಣ್ಣು ಮಗು ಹುಟ್ಟಿದರೆ 111 ಸಸಿ ನೆಡುವ ಪೋಷಕರು
ಪಾಲಿವಾಲ್ ಕಾನನ ಸೃಷ್ಟಿಸುವ ಕನಸಿಗೆ ಇಂಧನ ತುಂಬಿದ್ದು, ಅಲ್ಲಿದ್ದ ಸಾಮಾಜಿಕ ಸಮಸ್ಯೆಗಳು. ಈ ಪ್ರದೇಶದಲ್ಲಿ ಇದ್ದದ್ದು ಪುರುಷ ಪ್ರಧಾನ ಕುಟುಂಬಗಳು, ಹೆಣ್ಣು ಮಕ್ಕಳು ಹುಟ್ಟಿದರೆ ಮದುವೆ, ವರದಕ್ಷಿಣೆ ಮತ್ತಿತರ ಕಾರ್ಯಗಳಿಗೆ ಹಣದ ಹೊಳೆಯೇ ಹರಿಸಬೇಕಾಗುತ್ತದೆ ಎಂದು ಪೋಷಕರು ಯೋಚಿಸುತ್ತಿದ್ದರು. ಹೆಣ್ಣು ಭ್ರೂಣಹತ್ಯೆಯ ಹಾವಳಿ ಅಲ್ಲಿ ಹೆಚ್ಚಾಗಿತ್ತು. ಇದನ್ನು ಮನಗಂಡ ಪಾಲಿವಾಲ್, ಹೆಣ್ಣು ಮಗು ಹುಟ್ಟಿದರೆ ಪೋಷಕರು 111 ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ ಮಾಡಲು ತಿಳಿಸಿದರು. ಮುಂದೆ ಅಲ್ಲಿ ಆಗಿದ್ದು ವನ ನಿರ್ಮಾಣ ಕ್ರಾಂತಿ. ಜನರೇ ಸತ್ತವರ ನೆನಪಿಗೂ ವನಸೃಷ್ಟಿಸುವ ಕಾರ್ಯ ಆರಂಭಿಸಿದರು. ಸ್ಮೃತಿವನಗಳ ಹೆಸರಿನಲ್ಲೂ ಪಿಪ್ಲಾಂತ್ರಿ ಮರ-ಗಿಡಗಳ ವರ ಪಡೆಯಿತು.
ನವಜಾತ ಹೆಣ್ಣುಮಗುವಿನ ಹೆಸರಲ್ಲಿ 31ಸಾವಿರ ಠೇವಣಿ
ಬೇರೆ ಯಾರೋ ಆಗಿದ್ದರೆ ಹೆಣ್ಣುಮಗುವಿನ ಜನನಕ್ಕೊಮ್ಮೆ 111 ಗಿಡಗಳನ್ನು ನೆಡುವ ವಿಷಯ ಮಾತಿನಲ್ಲೇ ಸೋತು ಹೋಗಿರುತ್ತಿತ್ತು. ಮೊದಲೇ ಕಷ್ಟದಲ್ಲಿದ್ದ ಅಲ್ಲಿನ ಜನರೂ ಸಸಿ ನೆಟ್ಟು ಬೆಳೆಸುವ ತಾಪತ್ರಯಕ್ಕೆ ಹೋಗುತ್ತಿರಲಿಲ್ಲ. ಆದರೆ ಈ ಕಾರ್ಯ ಸಿದ್ಧಿಸಲು ಪಣ ತೊಟ್ಟಿದ್ದು ಪಾಲಿವಾಲ್. ಅವರು ಗ್ರಾಮದ ಜನರ ಮನವೊಲಿಸಿದರು. ಜನರಿಂದ ದೇಣಿಗೆ ಸಂಗ್ರಹಿಸಲು ಶುರು ಮಾಡಿದರು. ಹುಟ್ಟುವ ಪ್ರತಿ ಹೆಣ್ಣುಮಗುವಿಗೂ ಷರತ್ತುಬದ್ಧವಾಗಿ 31,000 ರುಪಾಯಿ ಠೇವಣಿ ಇಡಲು ಆರಂಭಿಸಿದರು. ಆ ಷರತ್ತುಗಳನ್ನೊಮ್ಮೆ ನೋಡಿ.

- ಯಾರೂ ಶಿಶು ಹತ್ಯೆ ಮಾಡಬಾರದು.
- ಹೆಣ್ಣು ಮಗು ಹುಟ್ಟಿದರೆ 111 ಗಿಡಗಳನ್ನು ನೆಡಬೇಕು.
- ನೆಟ್ಟ ಗಿಡಗಳ ಪಾಲನೆ ಪೋಷಣೆ ಮಾಡಬೇಕು.
- 18 ವರ್ಷಗಳು ತುಂಬುವವರೆಗೆ ಹೆಣ್ಣುಮಗುವಿಗೆ ವಿವಾಹ ಮಾಡಬಾರದು.
18 ವರ್ಷದೊಳಗೆ ಮಗುವಿನ ಹೆಸರಲ್ಲಿ ಠೇವಣಿ ಹಣ ವಿವಾಹ ಸಮಯಕ್ಕೆ ಉಪಯೋಗವಾಗುತ್ತದೆ ಎನ್ನುವುದು ಇದರ ಉದ್ದೇಶವಾಗಿತ್ತು. ಇಷ್ಟು ವರ್ಷಗಳಲ್ಲಿ ಪಿಪ್ಲಾಂತ್ರಿಯಲ್ಲಿ ಜನರು ನೆಟ್ಟು ಬೆಳೆಸಿದ್ದು ಬರೋಬ್ಬರಿ ನಾಲ್ಕು ಲಕ್ಷಕ್ಕೂ ಅಧಿಕ ಮರಗಳು. ಅವುಗಳಿಗೆ ರಕ್ಷಣೆಯಾಗಿ ಮತ್ತಷ್ಟು ಲಕ್ಷ ಲೋಳೇಸರ ಅಂದರೆ ಅಲೋವೇರಾ ಸಸಿಗಳನ್ನೂ ನೆಟ್ಟಿದ್ದಾರೆ.
ಬಂಧುವಾದ ಸುಂದರ ಬನ
ತಮ್ಮ ಹುಟ್ಟಿನ ಕಾರಣಕ್ಕೆ ನೆಟ್ಟು ಬೆಳೆಸಿದ ಸಸಿಗಳನ್ನು ಅಲ್ಲಿನ ಮಕ್ಕಳು ಮತ್ತು ಅವರ ಪೋಷಕರು ತಮ್ಮದೇ ಬಂಧುವಂತೆ ಕಾಣುತ್ತಿದ್ದಾರೆ. ಹಬ್ಬದ ಸಮಯದಲ್ಲೂ ಆ ಮರಗಳನ್ನು ನೆನೆಯುತ್ತಾರೆ. ವಿಶೇಷವೆಂದರೆ ರಕ್ಷಾಬಂಧನದ ಸಮಯದಲ್ಲಿ ಅವುಗಳಿಗೆ ರಾಕಿ ಕಟ್ಟುತ್ತಾರೆ. ಆದರೆ ಅದರಿಂದ ಅಲ್ಲಿನ ಪರಿಸರಕ್ಕೆ ಯಾವ ಅಪಾಯವೂ ಆಗದಂತೆ ನೋಡಿಕೊಳ್ಳುತ್ತಾರೆ. ಅಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬಂದಿದ್ದಾರೆ.
ವೃದ್ಧಿಯಾದ ವನ ಸಂಪತ್ತು
ಲಕ್ಷಾಂತರ ಮರಗಿಡಗಳನ್ನು ಅಲ್ಲಿನ ಸ್ಥಳೀಯರು ನೆಟ್ಟು ಬೆಳೆಸಿದರು. ಈ ಕೆಲಸಕ್ಕೆ ಬಳುವಳಿಯಾಗಿ ವನ್ಯ ಸಂಪತ್ತನ್ನು ಅಲ್ಲಿಗೆ ವನಸಂಪತ್ತನ್ನು ಸೆಳೆಯಿತು. ಬಾನಾಡಿಗಳು, ಮಿಗ-ಖಗಗಳು ಈಗ ಇಲ್ಲಿ ಬೀಡು ಬಿಟ್ಟಿವೆ. ರಾಜಸ್ಥಾನ ಎಂದಾಗ ನೆನಪಾಗುವ ಬ್ಲಾಕ್‌ಬಕ್‌ಗಳು ಇಲ್ಲಿ ಹಾಯಾಗಿ ಓಡಾಡಿಕೊಂಡಿರುವುದನ್ನು ನೀವು ಕಾಣಬಹುದು. ಇನ್ನೂ ಬೆಳೆದು ನಿಂತಿರುವ ಮರಗಳು ಮುಂದೆ ತನ್ನ ಮರಿ ಸಸಿಗಳಿಗೆ ಜನ್ಮ ನೀಡುತ್ತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಪ್ರಕೃತಿ ಸಹಜ ಕಾರ್ಯ.

ಬದುಕು ಕಟ್ಟಿಕೊಟ್ಟ ಬನಗಳು
ತಾವೇ ನೆಟ್ಟು ಎಳಸಿನಿಂದ ಬೆಳೆಸಿದ ಬನ ಇಂದು ತಮ್ಮ ಪೋಷಕರ ಬದುಕನ್ನು ಕಟ್ಟುತ್ತಿವೆ. ಅಲ್ಲಿನ ಜನರು ಜೇನು, ಫಲ-ಪುಷ್ಪ ಹೀಗೆ ಕಾಡು ನೀಡುವ ಫಲವನ್ನು ಆರ್ಥಿಕತೆಯ ಮೂಲವಾಗಿಸಿಕೊಂಡಿದ್ದಾರೆ. ಪಿಪ್ಲಾಂತ್ರಿಯಲ್ಲಿ ಜನರೇ ಕಾಡು ಕಟ್ಟಿದ ಕತೆ ಹಲವರನ್ನು ಮುಟ್ಟಿದೆ. ಹಾಗಾಗಿ ಪ್ರಕೃತಿ ಪ್ರಿಯರನ್ನು ಈ ಊರು ಕೈಬೀಸಿ ಕರೆಯುತ್ತಿದೆ. ಕೆಲವು ಇಲ್ಲಿನ ಜನರ ಬದುಕನ್ನು ಕಾಣಲು, ಇನ್ನೂ ಕೆಲವರು ಇದರ ಯಶೋಗಾಥೆಯಿಂದ ಪ್ರೇರೇಪಿತರಾಗಿ, ಮತ್ತೂ ಕೆಲವರು ಇಲ್ಲಿನ ಪ್ರಕೃತಿಯಲ್ಲಿ ಅಡ್ಡಾಡಲು ಬರುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಒಂದಷ್ಟು ಜನ ಪ್ರವಾಸಿಗರು ಇದ್ದೇ ಇರುತ್ತಾರೆ. ಪ್ರವಾಸಿ ತಾಣವಾಗಿಯೂ ಈ ಊರು ಆದಾಯ ಬಾಚಿಕೊಳ್ಳುವ ಹಾದಿಯಲ್ಲಿದೆ. ಇಷ್ಟರ ಹೊರತಾಗಿ ಅಲ್ಲಿನ ಜನರಿಗೆ ಕಾಡು ನಾನನು ನಿಮಗೆ ಸದಾ ಋಣಿ ಎನ್ನುತ್ತಿದೆ. ನೆಟ್ಟು ಬೆಳೆಸಿದ ಬಳಗಕ್ಕೆ ನಿತ್ಯ ಶುದ್ಧ ಗಾಳಿ, ನೆರಳು, ಬಿರು ಬಿಸಿಲಿನಲ್ಲು ಸಾಧ್ಯವಾದಷ್ಟು ತನುವು, ಆಹಾರ ನೀಡುತ್ತಲೇ ಇದೆ. ಮರಳುಗಾಡಲ್ಲೂ ಕಾಡು ಬೆಳೆಸುವ ಹಾದಿಯಲ್ಲಿನ ಯಾವುದೋ ದೇಶವನ್ನು ನೆನೆಯುವ ಜನರು, ಪಿಪ್ಲಾಂತ್ರಿಯ ಯಶೋಗಾಥೆಯನ್ನು ಒಮ್ಮೆ ಅರಿತು ನೋಡಿ. ಇಲ್ಲಿ ರಾಜಕೀಯವಿಲ್ಲ. ನಾನು, ನನ್ನವರು ಎನ್ನುವ ಭಾವನೆ ಅದರ ಜತೆಗೆ ನಮ್ಮ ನೆಲ ಎನ್ನುವ ಹಿರಿಮೆಯಿದೆ.
ಈ ಕತೆಯ ನಾಯಕ ಸುಂದರ್ ಶ್ಯಾಮ್ ಪಾಲಿವಾಲ್‌ರಿಗೆ 2021ರಲ್ಲಿ ಪದ್ಮಶ್ರೀ ಗೌರವ ಲಭಿಸಿದೆ. ಪಿಪ್ಲಾಂತ್ರಿಯ ಯಶೋಗಾಥೆ ಡೆನ್ಮಾರ್ಕ್‌ನಲ್ಲಿ ಪಠ್ಯಕ್ರಮವಾಗಿಯೂ ಅಳವಡಿಕೆಯಾಗಿದೆ. ಭಾರತದಲ್ಲಿ ಈ ಗ್ರಾಮ ವೃಕ್ಷ ಗ್ರಾಮ, ಮಹಿಳಾ ಗ್ರಾಮ, ಆದರ್ಶ ಗ್ರಾಮ ಹೀಗೆ ಹಲವು ಹೆಸರುಗಳಿಂದ ಗುರುತಿಸಿಕೊಂಡಿದೆ.
ಒಟ್ಟಾರೆ ʻಹಲ್ಲಿದ್ದವರಿಗೆ ಕಡಲೆ ಇಲ್ಲ ಹಾಗೇ ಕಡಲೆ ಇದ್ದವರಿಗೆ ಹಲ್ಲಿಲ್ಲʼ ಅನ್ನೋ ವಿಷಯ ನನಗಿಲ್ಲಿ ಸ್ಪಷ್ಟವಾಯಿತು. ಒಂದೆಡೆ ಕಾಲಿಟ್ಟರೂ ಕಾವಲಿಯಂತಾಗುವ ರಾಜಸ್ಥಾನದ ನೆಲದಲ್ಲಿ ಜನರು ಕಾಡನ್ನೇ ನಿರ್ಮಿಸಿದ್ದಾರೆ. ಇನ್ನೊಂದೆಡೆ ಮೊದಲೇ ಗಂಧದ ಗುಡಿಯೆಂದು ಗುರುತಿಸಿಕೊಂಡಿರುವ ಮತ್ತು ಕೃಷ್ಣ, ಕಾವೇರಿ, ತುಂಗೆಯರು ತುಂತುಂಬಿ ಹರಿಯುವ ನಮ್ಮ ನಾಡಿನಲ್ಲಿ ಮಾತ್ರ ಇರುವುದನ್ನು ಉಳಿಸಿಕೊಳ್ಳುವ ಮನಸು ಜನರಿಗಿಲ್ಲ. ಕಾಡಿಗೆ ಕೊಡಲಿ ಇಟ್ಟಾಗಲೇ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮೊದಲು ಕೈಬಿಡಬೇಕು. ಬಾಬಾಬುಡನ್‌ಗಿರಿಯನ್ನೇ ಉದಾಹರಣೆಗೆ ತೆಗೆದುಕೊಂಡರೂ ವಾಲ್ಪರೈ ದುರಂತ ನಮ್ಮ ಕಣ್ಣೆದುರಿಗೇ ಇದೆ. ಅಭಿವೃದ್ಧಿಗೆ ಕಾಡು ಖಾಲಿಯಾಗಿಸುವುದೊಂದೇ ಮಾರ್ಗವಾಗಬಾರದು. ಪಶ್ಚಿಮ ಘಟ್ಟಗಳ ದಟ್ಟ ಕಾಡು ನಮ್ಮ ನಾಡಿನ ಆಮ್ಲಜನಕ. ಅದನ್ನು ಉಳಿಸಿ. ಅಭಿವೃದ್ಧಿ ಕಾರ್ಯ ಅರಣ್ಯವನ್ನು ಉಳಿಸಿಕೊಂಡು ಅದರಿಂದ ಸ್ಥಳೀಯರಿಗೆ ಆದಾಯ ಮಾರ್ಗ ರೂಪಿಸಿಯೂ ಸಾಧ್ಯ ಎನ್ನುವುದಕ್ಕೆ ಪಿಪ್ಲಾಂತ್ರಿ ಜೀವಂತ ಸಾಕ್ಷಿ.