ಕಳೆದ ಐದಾರು ವರ್ಷಗಳಿಂದ ದೇಶಾದ್ಯಂತ ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಕುರಿತಾದ ಚರ್ಚೆಗಳು ದೇಶದ ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಿರತೆಯ ದೃಷ್ಟಿಯಿಂದ ಹೊಸ ಆಯಾಮವನ್ನು ಪಡೆದುಕೊಂಡಿವೆ. ಚುನಾವಣಾ ಪ್ರಕ್ರಿಯೆಯಲ್ಲಿನ ವ್ಯಯ ಮತ್ತು ಸಮಯವನ್ನು ಉಳಿಸಲು ಈ ನೀತಿ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಇಂಥದ್ದೇ ಒಂದು ಏಕೀಕೃತ ನೀತಿಯ ಅಗತ್ಯ ಇಂದು ಎದ್ದುಕಾಣುತ್ತಿದೆ. ಭಾರತದಂಥ ವೈವಿಧ್ಯಮಯ ದೇಶದಲ್ಲಿ ಪ್ರವಾಸೋದ್ಯಮವು ಕೇವಲ ಮನೋರಂಜನೆ ಅಲ್ಲ. ಇದು ಕೋಟ್ಯಂತರ ಜನರ ಬದುಕಿಗೆ ಆಧಾರವಾಗಿರುವ ಬೃಹತ್ ಉದ್ಯಮ. ಆದರೆ, ಇಂದಿಗೂ ನಮ್ಮ ದೇಶದ ಪ್ರವಾಸಿಗರು ಮತ್ತು ಪ್ರವಾಸಿ ವಾಹನ ಆಪರೇಟರ್‌ಗಳು ಎದುರಿಸುತ್ತಿರುವ ಅತಿದೊಡ್ಡ ಶತ್ರುವೆಂದರೆ ಅದು ‘ಅಂತಾರಾಜ್ಯ ಗಡಿಗಳ ನಿಯಮಾವಳಿ’ಗಳು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವೇಶಿಸುವಾಗ ಎದುರಾಗುವ ಸಂಕೀರ್ಣ ಪ್ರಕ್ರಿಯೆಗಳು ಭಾರತದ ಪ್ರವಾಸೋದ್ಯಮದ ನೈಜ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿವೆ.

ಪ್ರಸ್ತುತ ವ್ಯವಸ್ಥೆಯಲ್ಲಿ, ಒಂದು ಪ್ರವಾಸಿ ವಾಹನವು ತನ್ನ ಮೂಲ ರಾಜ್ಯವನ್ನು ಬಿಟ್ಟು ನೆರೆಯ ರಾಜ್ಯಕ್ಕೆ ಪ್ರವೇಶಿಸಿದ ಕೂಡಲೇ ತೆರಿಗೆಯ ಸುಳಿಯಲ್ಲಿ ಸಿಲುಕುತ್ತದೆ. ಪ್ರತಿ ರಾಜ್ಯಕ್ಕೂ ತನ್ನದೇ ಆದ ರಸ್ತೆ ತೆರಿಗೆ, ಪ್ರವೇಶ ಶುಲ್ಕ ಮತ್ತು ಪರ್ಮಿಟ್ ನಿಯಮಗಳಿವೆ. ಪ್ರವಾಸಿಗರು ಸುಂದರ ತಾಣಗಳನ್ನು ನೋಡುವ ಉತ್ಸಾಹದಲ್ಲಿರುವಾಗ, ಗಡಿಭಾಗದ ಚೆಕ್-ಪೋಸ್ಟ್‌ಗಳಲ್ಲಿ ಗಂಟೆಗಟ್ಟಲೆ ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಸರಿಪಡಿಸುವುದು ಮತ್ತು ದುಬಾರಿ ತೆರಿಗೆ ಪಾವತಿಸುವುದು ಅವರ ಪ್ರವಾಸದ ಸಂತೋಷವನ್ನೇ ಕಸಿದುಕೊಳ್ಳುತ್ತಿದೆ. ಇದು ಕೇವಲ ಹಣದ ವ್ಯಯವಲ್ಲ, ಬದಲಿಗೆ ಪ್ರವಾಸಿಗರ ಅಮೂಲ್ಯ ಸಮಯದ ಅಪವ್ಯಯವೂ ಹೌದು.

ಇದನ್ನೂ ಓದಿ: ಬ್ರೂಷ್ : ಪ್ರೀತಿ ಮತ್ತು ಪರಂಪರೆಯ ಸಂಗಮ

ವಿವಿಧ ರಾಜ್ಯಗಳ ಮೋಟಾರು ವಾಹನ ಕಾಯ್ದೆಗಳಲ್ಲಿನ ವ್ಯತ್ಯಾಸಗಳು ಟ್ರಾವೆಲ್ ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದರೂ, ತಾಂತ್ರಿಕ ದೋಷಗಳು ಅಥವಾ ನಿಯಮಗಳ ಅಸ್ಪಷ್ಟತೆಯಿಂದಾಗಿ ಚಾಲಕರು ಗಡಿಗಳಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗುವುದು ಸಾಮಾನ್ಯ. ‘ಒಂದು ರಾಷ್ಟ್ರ, ಒಂದು ತೆರಿಗೆ’ ಎನ್ನುವ ಜಿಎಸ್‌ಟಿ ವ್ಯವಸ್ಥೆ ಬಂದಿದ್ದರೂ, ರಸ್ತೆ ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉಪಕೇಂದ್ರಿತ ತೆರಿಗೆಗಳು ಇಂದಿಗೂ ಪ್ರತ್ಯೇಕವಾಗಿಯೇ ಇರುವುದು ಈ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿದೆ.

Untitled design (63)

ಈ ಹಿನ್ನೆಲೆಯಲ್ಲಿ ನಮಗೆ ಇಂದು ಬೇಕಿರುವುದು ‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ (One Nation, One Tourism Policy). ಈ ನೀತಿಯು ಜಾರಿಗೆ ಬಂದರೆ, ಪ್ರವಾಸಿ ವಾಹನಗಳು ಇಡೀ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೇ ಸಂಚರಿಸಲು ಸಾಧ್ಯವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಒಂದು ಏಕೀಕೃತ ಪರವಾನಗಿ (Single Window Clearance) ಮತ್ತು ಏಕರೂಪದ ತೆರಿಗೆ ವ್ಯವಸ್ಥೆಯು ಜಾರಿಯಾದಲ್ಲಿ, ಪ್ರವಾಸಿಗರಿಗೆ ಮತ್ತು ಸಾರಿಗೆ ಉದ್ಯಮಿಗಳಿಗೆ ದೊಡ್ಡ ‘ರಿಲೀಫ್’ ಸಿಗಲಿದೆ. ಇದು ಪ್ರವಾಸದ ಒಟ್ಟು ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ, ಪ್ರವಾಸೋದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತದೆ.

ಏಕೀಕೃತ ಪ್ರವಾಸೋದ್ಯಮ ನೀತಿಯು ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾಗಿಲ್ಲ. ಇದು ರಾಜ್ಯ-ರಾಜ್ಯಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ. ಪ್ರವಾಸಿಗರು ಸುಲಭವಾಗಿ ರಾಜ್ಯಗಳ ಗಡಿ ದಾಟಿದಾಗ ಸಂಸ್ಕೃತಿ, ಭಾಷೆ ಮತ್ತು ಆಹಾರ ಪದ್ಧತಿಗಳ ವಿನಿಮಯ ಸುಲಭವಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೇ, ಪ್ರವಾಸೋದ್ಯಮವನ್ನು ಒಂದು ರಾಷ್ಟ್ರೀಯ ಮಿಷನ್ ಆಗಿ ಪರಿವರ್ತಿಸಲು ಸಹಕಾರಿಯಾಗುತ್ತದೆ. ಗಡಿಗಳಲ್ಲಿನ ಸಂಘರ್ಷಗಳಿಗಿಂತ ಹೆಚ್ಚಾಗಿ, ಪ್ರವಾಸಿಗರ ಸ್ವಾಗತಕ್ಕೆ ರಾಜ್ಯಗಳು ಸ್ಪರ್ಧಿಸುವಂತಾಗುವುದು ಈ ನೀತಿಯ ಮುಖ್ಯ ಉದ್ದೇಶವಾಗಬೇಕು.

‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ಯಿಂದ ಉದ್ಯೋಗ ಸೃಷ್ಟಿ ಮತ್ತು ವಿದೇಶಿ ಪ್ರವಾಸಿಗರಿಗೆ ಆಗುವ ಅನುಕೂಲಗಳು ಅಷ್ಟಿಷ್ಟಲ್ಲ. ಪ್ರವಾಸೋದ್ಯಮ ಕ್ಷೇತ್ರವು ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿರುವ ಕ್ಷೇತ್ರ. ಏಕೀಕೃತ ನೀತಿಯು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯಗಳ ನಡುವೆ ವಾಹನ ಸಂಚಾರ ಸುಲಭವಾದಂತೆ, ಟ್ರಾವೆಲ್ ಏಜೆನ್ಸಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತವೆ. ಇದರಿಂದ ಸಾವಿರಾರು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆಗ ಚಾಲಕರು, ಟೂರ್ ಆಪರೇಟರ್‌ಗಳು ಮತ್ತು ವಾಹನ ನಿರ್ವಹಣಾ ಸಿಬ್ಬಂದಿಗೆ ಬೇಡಿಕೆ ಹೆಚ್ಚಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ, ಐತಿಹಾಸಿಕ ತಾಣಗಳಲ್ಲಿ ಅಧಿಕೃತ ಪ್ರವಾಸಿ ಮಾರ್ಗದರ್ಶಕರ ಅಗತ್ಯ ಹೆಚ್ಚುತ್ತದೆ. ಇದು ಸ್ಥಳೀಯ ಯುವಕರಿಗೆ ತಮ್ಮ ಭಾಷೆ ಮತ್ತು ಇತಿಹಾಸದ ಜ್ಞಾನವನ್ನು ಬಳಸಿಕೊಂಡು ಗೌರವಾನ್ವಿತ ಉದ್ಯೋಗ ಪಡೆಯಲು ನೆರವಾಗುತ್ತದೆ.

ಅಡೆತಡೆಯಿಲ್ಲದ ಪ್ರಯಾಣವು ಪ್ರವಾಸಿಗರನ್ನು ದೂರದ ಮತ್ತು ಅಪರಿಚಿತ ಸ್ಥಳಗಳಿಗೂ ಕರೆದೊಯ್ಯುತ್ತದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಹೋಮ್‌ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೊಟೇಲ್‌ಗಳು ತಲೆಯೆತ್ತುತ್ತವೆ, ಇದು ಸ್ಥಳೀಯರಿಗೆ ಅಡುಗೆ, ಸ್ವಚ್ಛತೆ ಮತ್ತು ನಿರ್ವಹಣಾ ಕೆಲಸಗಳನ್ನು ಒದಗಿಸುತ್ತದೆ. ಪ್ರವಾಸಿಗರು ಹೆಚ್ಚಾದಷ್ಟು ಸ್ಥಳೀಯ ಕರಕುಶಲ ವಸ್ತುಗಳ ಮಾರಾಟ ಹೆಚ್ಚುತ್ತದೆ. ಇದು ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆ ಒದಗಿಸಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರು ಹೆಚ್ಚಾಗಿ ‘ಮಲ್ಟಿ-ಸ್ಟೇಟ್’ (ಹಲವು ರಾಜ್ಯಗಳ) ಪ್ರವಾಸವನ್ನು ಇಷ್ಟಪಡುತ್ತಾರೆ. ಉದಾಹರಣೆಗೆ, ದೆಹಲಿಯಿಂದ ರಾಜಸ್ಥಾನಕ್ಕೆ ಹೋಗಿ ಅಲ್ಲಿಂದ ಆಗ್ರಾವನ್ನು ನೋಡಲು ಬಯಸುತ್ತಾರೆ.

Untitled design (65)

ಇಂಥ ಸಂದರ್ಭದಲ್ಲಿ ಈ ನೀತಿ ಅವರಿಗೆ ಸಹಕಾರಿ. ಮೊದಲನೆಯದಾಗಿ, ಸರಳ ಪ್ರಯಾಣದ ಅನುಭವ. ವಿದೇಶಿ ಪ್ರವಾಸಿಗರು ಭಾರತದ ಸಂಕೀರ್ಣ ತೆರಿಗೆ ಪದ್ಧತಿಯನ್ನು ಕಂಡು ಗೊಂದಲಕ್ಕೊಳಗಬಹುದು. ಏಕೀಕೃತ ನೀತಿಯು ಅವರಿಗೆ ‘ಒಂದೇ ವೀಸಾ, ಒಂದೇ ಪರ್ಮಿಟ್’ ನಂಥ ಸರಳ ಅನುಭವ ನೀಡುತ್ತದೆ. ಇದು ಭಾರತವನ್ನು 'ಪ್ರವಾಸಿ ಸ್ನೇಹಿ' ದೇಶವನ್ನಾಗಿ ಜಾಗತಿಕ ಮಟ್ಟದಲ್ಲಿ ಬಿಂಬಿಸುತ್ತದೆ. ಎರಡನೆಯದಾಗಿ, ಸಮಯ ಮತ್ತು ಹಣದ ಉಳಿತಾಯ. ಗಡಿಗಳಲ್ಲಿನ ವಿಳಂಬ ತಪ್ಪುವುದರಿಂದ ವಿದೇಶಿ ಪ್ರವಾಸಿಗರು ತಾವು ನಿಗದಿಪಡಿಸಿದ ಸಮಯದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳನ್ನು ಸಂದರ್ಶಿಸಬಹುದು. ಇದು ಅವರ ಪ್ರವಾಸದ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಮೂರನೆಯದಾಗಿ, ಡಿಜಿಟಲ್ ಪಾರದರ್ಶಕತೆ. ವಿದೇಶಿಯರು ಹೆಚ್ಚಾಗಿ ಆನ್‌ಲೈನ್ ಬುಕಿಂಗ್ ಮತ್ತು ಪಾರದರ್ಶಕ ವ್ಯವಹಾರವನ್ನು ಬಯಸುತ್ತಾರೆ. ಏಕೀಕೃತ ನೀತಿಯ ಅಡಿಯಲ್ಲಿ ಬರುವ ಡಿಜಿಟಲ್ ಪಾವತಿ ವ್ಯವಸ್ಥೆಯು ಅವರನ್ನು ಮಧ್ಯವರ್ತಿಗಳ ಕಾಟದಿಂದ ಮತ್ತು ವಂಚನೆಯಿಂದ ರಕ್ಷಿಸುತ್ತದೆ. ನಾಲ್ಕನೆಯದಾಗಿ, ಸುರಕ್ಷತೆಯ ಖಾತರಿ. ರಾಷ್ಟ್ರಮಟ್ಟದ ಏಕರೂಪದ ನೀತಿಯು ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿರುತ್ತದೆ. ಇದು ವಿದೇಶಿ ಪ್ರವಾಸಿಗರಲ್ಲಿ ಭಾರತದ ಬಗ್ಗೆ ನಂಬಿಕೆ ಮತ್ತು ಸುರಕ್ಷಿತ ಭಾವನೆಯನ್ನು ಮೂಡಿಸುತ್ತದೆ.

ಭಾರತವು ‘ಅತಿಥಿ ದೇವೋ ಭವ’ ಎಂಬ ಉದಾತ್ತ ಪರಂಪರೆಯನ್ನು ಹೊಂದಿರುವ ದೇಶ. ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಯೂ ಒಬ್ಬ ಅತಿಥಿ. ಆದರೆ, ಇಂದು ನಮ್ಮ ದೇಶದ ಆಡಳಿತಾತ್ಮಕ ವ್ಯವಸ್ಥೆ ಮತ್ತು ರಾಜ್ಯಗಳ ನಡುವಿನ ಸಂಕೀರ್ಣ ನಿಯಮಗಳು ಈ ಅತಿಥಿ ಸತ್ಕಾರಕ್ಕೆ ಅಡ್ಡಗೋಡೆಯಾಗಿ ನಿಂತಿವೆ. ಭಾರತವು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಅಗ್ರಸ್ಥಾನಕ್ಕೇರಬೇಕಾದರೆ, ಮೊದಲು ನಮ್ಮೊಳಗಿನ ಸಣ್ಣಪುಟ್ಟ ಗಡಿ ಗೋಡೆಗಳನ್ನು ನಾವು ಕೆಡವಬೇಕಿದೆ. ಈ ನಿಟ್ಟಿನಲ್ಲಿ ‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ ಕೇವಲ ಒಂದು ಬೇಡಿಕೆಯಲ್ಲ, ಅದು ಇಂದಿನ ತುರ್ತು ಅಗತ್ಯ. ಪ್ರವಾಸೋದ್ಯಮವನ್ನು ಕೇವಲ ವಿಹಾರ ಎಂದು ನೋಡಬಾರದು. ಇದು ದೇಶದ ಅಭಿವೃದ್ಧಿಯ ಎಂಜಿನ್. ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿಯು ಜಾರಿಯಾದಲ್ಲಿ, ಅದು ಈ ಎಂಜಿನ್‌ಗೆ ಇಂಧನದಂತೆ ಕೆಲಸ ಮಾಡುತ್ತದೆ. ಏಕೀಕೃತ ನೀತಿಯಿಂದ ಪ್ರವಾಸದ ವೆಚ್ಚ ಕಡಿಮೆಯಾಗುತ್ತದೆ ಮತ್ತು ಪ್ರಯಾಣ ಸುಲಭವಾಗುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿ, ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಪ್ರವಾಸೋದ್ಯಮದ ಕೊಡುಗೆ ಗಣನೀಯವಾಗಿ ಹೆಚ್ಚುತ್ತದೆ. ರಾಷ್ಟ್ರಮಟ್ಟದಲ್ಲಿ ಒಂದೇ ಪರವಾನಗಿ ಮತ್ತು ಏಕರೂಪದ ತೆರಿಗೆ ವ್ಯವಸ್ಥೆಯು ಜಾರಿಯಾದಲ್ಲಿ, ಪ್ರವಾಸಿ ವಾಹನಗಳ ಚಾಲಕರು ಯಾವುದೇ ಭೀತಿಯಿಲ್ಲದೆ ಸಂಚರಿಸಬಹುದು. ಇದು ಸಾರಿಗೆ ಉದ್ಯಮಕ್ಕೆ ಹೊಸ ಚೈತನ್ಯ ನೀಡುತ್ತದೆ.

ಕರ್ನಾಟಕದ ಪ್ರವಾಸಿಗನು ಕಾಶ್ಮೀರಕ್ಕೆ ಅಥವಾ ಕೇರಳದ ಪ್ರವಾಸಿಗನು ಅಸ್ಸಾಂಗೆ ಹೋದಾಗ ಅಲ್ಲಿನ ಸಂಸ್ಕೃತಿಯನ್ನು ಅರಿಯುತ್ತಾನೆ. ಪ್ರವಾಸೋದ್ಯಮ ನೀತಿಯು ಸರಳವಾದಷ್ಟೂ ಜನರ ಸಂಚಾರ ಹೆಚ್ಚುತ್ತದೆ. ಇದು ರಾಜ್ಯ-ರಾಜ್ಯಗಳ ನಡುವೆ ಕೇವಲ ವ್ಯಾಪಾರ ಸಂಬಂಧವನ್ನಲ್ಲದೇ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪ್ರೀತಿಯ ಸೇತುವೆಯನ್ನು ನಿರ್ಮಿಸುತ್ತದೆ. ರಾಜ್ಯಗಳು ಪರಸ್ಪರ ಸಹಕರಿಸಿದಾಗ, ಭಾರತವು ಜಾಗತಿಕ ವೇದಿಕೆಯಲ್ಲಿ ಒಂದು ಸಮಗ್ರ ಪ್ರವಾಸಿ ತಾಣವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಮೂಲಸೌಕರ್ಯಗಳ ಜತೆಗೆ ನೀತಿಗಳೂ ನವೀಕರಣಗೊಳ್ಳಬೇಕು. ಡಿಜಿಟಲೀಕರಣದ ಈ ಕಾಲದಲ್ಲಿ ಗಡಿಗಳಲ್ಲಿ ಕಾಗದದ ದಾಖಲೆಗಳಿಗಾಗಿ ಕಾಯುವುದು ವಿಪರ್ಯಾಸ. ಎಲ್ಲವನ್ನೂ ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಂದು, ಪ್ರವಾಸಿಗರಿಗೆ ಮತ್ತು ಚಾಲಕರಿಗೆ ‘ಸಾರಿಗೆ ಸರಳೀಕರಣ’ (Ease of Travelling) ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಪ್ರವಾಸಿಗನನ್ನು ತೆರಿಗೆ ಮತ್ತು ಪರವಾನಗಿಗಳ ಹೆಸರಿನಲ್ಲಿ ಕಾಡುವುದು ನಮ್ಮ ಸಂಸ್ಕೃತಿಗೂ ವಿರೋಧ ಮತ್ತು ಆರ್ಥಿಕ ಪ್ರಗತಿಗೂ ಮಾರಕ. ‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ಯು ಜಾರಿಯಾದಲ್ಲಿ, ಅದು ಭಾರತವನ್ನು ವಿಶ್ವದ ಪ್ರವಾಸಿಗರ ಆದ್ಯತೆಯಾಗಿ ಮಾಡುವುದರಲ್ಲಿ ಸಂಶಯವಿಲ್ಲ. ನೀತಿಗಳಲ್ಲಿನ ಅಡೆತಡೆಗಳನ್ನು ನಿವಾರಿಸಿ, ಅತಿಥಿಗಳಿಗೆ ಮುಕ್ತ ಹಸ್ತದ ಸ್ವಾಗತ ಕೋರಿದಾಗ ಮಾತ್ರ ಭಾರತವು ಜಾಗತಿಕ ಪ್ರವಾಸೋದ್ಯಮದ ಶಕ್ತಿಯಾಗಿ ಬೆಳೆಯಬಲ್ಲದು. ಈ ನೀತಿಯು ರಾಜ್ಯಗಳ ನಡುವೆ ‘ನಕಾರಾತ್ಮಕ ಸ್ಪರ್ಧೆ’ಯನ್ನು (ತೆರಿಗೆ ಹೆಚ್ಚು ಮಾಡುವುದು) ಕಡಿಮೆ ಮಾಡಿ, ‘ಸಕಾರಾತ್ಮಕ ಸ್ಪರ್ಧೆ’ಯನ್ನು (ಉತ್ತಮ ಸೌಲಭ್ಯ ನೀಡುವುದು) ಪ್ರೋತ್ಸಾಹಿಸುತ್ತದೆ. ರಾಜ್ಯಗಳು ತಮ್ಮಲ್ಲಿರುವ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪರಸ್ಪರ ಸಹಕರಿಸುತ್ತವೆ. ‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ ಕೇವಲ ಸಾರಿಗೆಗೆ ಸಂಬಂಧಿಸಿದ್ದಲ್ಲ; ಇದು ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗುರಿಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ವಿಶ್ವ ಪ್ರವಾಸೋದ್ಯಮ ಮಂಡಳಿಯ (WTTC) ವರದಿಗಳ ಪ್ರಕಾರ, ಭಾರತದ ಜಿಡಿಪಿಗೆ ಪ್ರವಾಸೋದ್ಯಮವು ಸುಮಾರು ಶೇ.6 ರಿಂದ ಶೇ.7ವರೆಗೆ ಕೊಡುಗೆ ನೀಡುತ್ತಿದೆ. ಆದರೆ, ‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ ಜಾರಿಯಾದಲ್ಲಿ ಈ ಕೊಡುಗೆಯನ್ನು ಶೇ.ಹತ್ತಕ್ಕಿಂತ ಕ್ಕಿಂತ ಹೆಚ್ಚು ಹೆಚ್ಚಿಸುವ ಸಾಮರ್ಥ್ಯ ಭಾರತಕ್ಕಿದೆ. ದೇಶದಲ್ಲಿ ಪ್ರತಿ 10 ಉದ್ಯೋಗಗಳಲ್ಲಿ ಒಂದು ಉದ್ಯೋಗವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದೆ. ಸಾರಿಗೆ ನಿಯಮಗಳು ಸರಳವಾದರೆ, ಗ್ರಾಮೀಣ ಭಾಗಗಳಲ್ಲಿ ಈ ಉದ್ಯೋಗ ಸೃಷ್ಟಿ ದರವು ಶೇ.ಇಪ್ಪತ್ತರಷ್ಟು ವೇಗವಾಗಿ ಬೆಳೆಯಬಹುದು. ಗಡಿಭಾಗದ ಚೆಕ್-ಪೋಸ್ಟ್‌ಗಳಲ್ಲಿನ ವಿಳಂಬದಿಂದಾಗಿ ವರ್ಷಕ್ಕೆ ಸರಾಸರಿ ದಶಲಕ್ಷಗಟ್ಟಲೆ ಲೀಟರ್ ಇಂಧನ ವ್ಯರ್ಥವಾಗುತ್ತಿದೆ ಮತ್ತು ವಾಹನಗಳ ನಿರ್ವಹಣಾ ವೆಚ್ಚ ಶೇ.15 ರಷ್ಟು ಹೆಚ್ಚಾಗುತ್ತಿದೆ.

Untitled design (66)

ಕರ್ನಾಟಕದ ಮೈಸೂರಿನಿಂದ ತಮಿಳುನಾಡಿನ ಊಟಿಗೆ ಹೋಗುವ ಪ್ರವಾಸಿ ವಾಹನದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಮೈಸೂರಿನಿಂದ ಹೊರಟ ವಾಹನವು ಬಂಡೀಪುರ ದಾಟಿ ತಮಿಳುನಾಡು ಗಡಿ ಪ್ರವೇಶಿಸಿದ ಕೂಡಲೇ, ಅಲ್ಲಿನ ‘ಪ್ರವೇಶ ತೆರಿಗೆ’ ಪಾವತಿಸಲು ದೀರ್ಘ ಸಾಲಿನಲ್ಲಿ ನಿಲ್ಲಬೇಕು. ಪ್ರವಾಸಿಗರು ಈಗಾಗಲೇ ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಸಿರುತ್ತಾರೆ, ಆದರೂ ತಮಿಳುನಾಡಿನಲ್ಲಿ ಮತ್ತೆ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ 3 ದಿನದ ಪ್ರವಾಸದ ಬಜೆಟ್‌ನಲ್ಲಿ ಕೇವಲ ತೆರಿಗೆಗಾಗಿಯೇ 2,000 ದಿಂದ 5,000 ರುಪಾಯಿಗಳವರೆಗೆ ಹೆಚ್ಚುವರಿ ಹೊರೆ ಬೀಳುತ್ತದೆ. ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರವಾಸದ ಆಸಕ್ತಿಯನ್ನೇ ಕುಗ್ಗಿಸುತ್ತದೆ.

ಜಾಗತಿಕವಾಗಿ ಪ್ರವಾಸೋದ್ಯಮದಲ್ಲಿ ಅಗ್ರಸ್ಥಾನದಲ್ಲಿರುವ ಯೂರೋಪ್ ದೇಶಗಳನ್ನು ಗಮನಿಸಿ. ಅಲ್ಲಿನ ‘ಷೆಂಗೆನ್’ ಒಪ್ಪಂದದಂತೆ, ಒಂದು ದೇಶದ ವೀಸಾ ಅಥವಾ ಪರ್ಮಿಟ್ ಇದ್ದರೆ ಹತ್ತಾರು ದೇಶಗಳ ಗಡಿಯನ್ನು ಯಾವುದೇ ಅಡೆತಡೆಯಿಲ್ಲದೆ ದಾಟಬಹುದು. ನಮ್ಮಲ್ಲಿ ರಾಜ್ಯಗಳ ನಡುವೆ ಇಂಥದ್ದೇ ಒಂದು ‘ಮುಕ್ತ ಸಂಚಾರ ವಲಯ’ ನಿರ್ಮಾಣವಾಗಬೇಕು. ಇಸ್ರೇಲ್ ಅಥವಾ ಅಮೆರಿಕದ ಪ್ರವಾಸಿಗನೊಬ್ಬ ಕೇರಳದಿಂದ ಗೋವಾಕ್ಕೆ ಹೋಗುವಾಗ ಗಡಿಯಲ್ಲಿ ತಪಾಸಣೆಗೆ ಒಳಗಾಗುವುದು ಭಾರತದ ಇಮೇಜ್‌ಗೆ ಧಕ್ಕೆ ತರುತ್ತದೆ. ನಮಗೆ ರಸ್ತೆ ಟೋಲ್‌ಗಳಲ್ಲಿ ‘ಫಾಸ್ಟ್ಯಾಗ್’ ಹೇಗೆ ಸಮಯ ಉಳಿಸಿದೆಯೋ, ಅದೇ ರೀತಿ ಪ್ರವಾಸಿ ಪರ್ಮಿಟ್‌ಗಳಿಗೂ ಒಂದು ‘ಟೂರಿಸ್ಟ್-ಫಾಸ್ಟ್ಯಾಗ್’ ವ್ಯವಸ್ಥೆ ಬರಬೇಕು. ಉದಾಹರಣೆಗೆ, ವಾಹನವು ಗಡಿ ದಾಟಿದ ತಕ್ಷಣ ಆಯಾ ರಾಜ್ಯದ ತೆರಿಗೆಯು ಡಿಜಿಟಲ್ ವಾಲೆಟ್‌ನಿಂದ ಕಡಿತವಾಗಬೇಕು. ಇದರಿಂದ ವಾಹನ ನಿಲ್ಲಿಸುವ ಅಗತ್ಯವಿರುವುದಿಲ್ಲ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ.

‘ಒಂದು ದೇಶ, ಒಂದು ಪ್ರವಾಸೋದ್ಯಮ ನೀತಿ’ಯು ಕೇವಲ ಸಾರಿಗೆ ಇಲಾಖೆಯ ಸುಧಾರಣೆಯಲ್ಲ. ಇದು ದೇಶದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಂದು ಸುಸಂಘಟಿತ ‘ಪ್ರವಾಸಿ ಹಬ್’ ಆಗಿ ಪರಿವರ್ತಿಸುವ ಆರ್ಥಿಕ ಕ್ರಾಂತಿ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.