Monday, April 6, 2026
Monday, April 6, 2026

ಅಷ್ಟೂರ್‌ ಸ್ಮಾರಕಗಳಲ್ಲಿ ಉಸಿರಾಡುತ್ತಿರುವ ಮನಮೋಹಕ ಕವನಗಳು

ಅನೇಕ ಸಿನೀಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಹಿಂದು-ಮುಸ್ಲಿಮರ ಒಗ್ಗಟ್ಟು, ಜಾತ್ಯತೀತ ಸಂದೇಶ ಸಾರುವ ಸ್ಮಾರಕಗಳ ಮತ್ತು ಗುಂಬಜ್‌ಗಳಿಗೆ ಹಿಂದು ಮತ್ತು ಮುಸ್ಲಿಮರ ಆದಿಯಾಗಿ ಎಲ್ಲರು ಕೂಡ ಭೇಟಿ ನೀಡುತ್ತಾರೆ. ಇಂಥ ಅಪರೂಪದ ಸಂದೇಶ ಸಾರುವ ಸ್ಮಾರಕಗಳನ್ನು ಹಾಗೂ ಗುಂಬಜ್‌ಗಳನ್ನು ಹೊಸ ಪೀಳಿಗೆಗೆ ಪರಿಚಯಿಸಲು ಖುಷಿಯಾಗುತ್ತಿದೆ.

- ಗುರುರಾಜ್ ಕುಲಕರ್ಣಿ

ಅಷ್ಟೂರ್, `ಜಿಲ್ಲಾ ಕೇಂದ್ರ' ಬೀದರ್ ನಗರದ ನೆರಳು ಬೀಳುವ ಅಷ್ಟೂರ್ ಗ್ರಾಮ ಐತಿಹಾಸಿಕ ಮಹತ್ವ ಹೊಂದಿರುವ ಸ್ಮಾರಕಗಳ ಮತ್ತು ಗುಮ್ಮಟಗಳ ಬೀಡು. ಬೀದರ್ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳ ಕೂಡ ಹೌದು. ನಿಸರ್ಗದ ರಮಣೀಯ ಪ್ರದೇಶದಲ್ಲಿ ಶತಮಾನಗಳಷ್ಟು ಹಿಂದೆ ತಲೆ ಎತ್ತಿರುವ ಗುಂಬಜ್‌ಗಳು ಶ್ರೀಮಂತ ಪಾರಂಪರೀಕದ ಪ್ರತೀಕವಾಗಿವೆ. ನಿತ್ಯ ಅನೇಕ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಲಿವೆ. ನವ ಬೀದರ್‌ನವರಿಗೆ ಅಷ್ಟೂರ್ `ಪಿಕ್‌ನಿಕ್ ಸ್ಪಾಟ್' ಕೂಡ ಹೌದು. ಸ್ಮಾರಕಗಳು ಮತ್ತು ಗುಂಬಜ್‌ಗಳ ಈ ಪ್ರದೇಶ ಚಿತ್ರ ನಗರಿಯನ್ನು ಕೂಡ ತನ್ನತ್ತ ಆಕರ್ಷಿಸಿದೆ.

ಇದನ್ನೂ ಓದಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕು, ‘ಒಂದು ದೇಶ, ಒಂದು ಟೂರಿಸಂ ನೀತಿ’

ಪಕ್ಷಿಗಳ ಇಂಚರ

ಇದು ಅಚ್ಚರಿ, ಆದರೂ ಇದು ಸತ್ಯ. ಸುಮಾರು ಐನೂರು ವರ್ಷಗಳ ಹಿಂದೆ ಉತ್ತರ ಇರಾನಿನಲ್ಲಿದ್ದರು ಎಂದು ನಂಬಲಾಗಿರುವ ಓರ್ವ ಸಂತರು ಅಷ್ಟೂರ್ ಗುಂಬಜ್‌ಗಳ ಪೈಕಿ ಒಂದು ಗುಂಬಜ್‌ನ ಮೇಲೆ ಸೂಫಿ ಕವನ ಬರೆದಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಬೀದರ್ ಕೋಟೆಯಿಂದ ಹೊರ ಬಂದ ಬಳಿಕ ಮೂರು ಕಿ.ಮೀ ರಸ್ತೆಯನ್ನು ಸವೆಸಿದರೆ ಬಹಮನಿ ಆಡಳಿತಗಾರರ ಹಲವಾರು ಸಮಾಧಿಗಳನ್ನು ಒಳಗೊಂಡ ಪ್ರದೇಶ ಕಾಣಸಿಗುತ್ತದೆ. ಮುಸ್ಸಂಜೆ ಸಮಯ ರವಿಯ ಹೊಂಬೆಳಕು ಮತ್ತು ಪಕ್ಷಿಗಳ ಇಂಚರ ಶತಮಾನಗಳಷ್ಟು ಹಳೆಯದಾಗಿರುವ ಸ್ಮಾರಕಗಳ ಮತ್ತು ಗುಂಬಜ್‌ಗಳ ಸಹಜ ಸೊಬಗನ್ನು ವೃದ್ಧಿಸುತ್ತವೆ. ದಕ್ಷಿಣ ಭಾರತದಲ್ಲಿನ ಎರಡು ಚಕ್ರಾಧಿಪತ್ಯಗಳು ತುಘಲಕ್‌ನ ಆಡಳಿತದ ವಿರುದ್ಧ ಸೆಣೆಸಾಡಿದವು ಮತ್ತು ತಮ್ಮದೇ ಸಾಮ್ರಾಜ್ಯ ನಿರ್ಮಿಸಿದವು ಎಂಬುದು ಚರಿತ್ರೆ. ಇವುಗಳಲ್ಲಿ ಒಂದು ಹಂಪಿಯ ವಿಜಯನಗರ ಸಾಮ್ರಾಜ್ಯ ಇನ್ನೊಂದು ಅಂದಿನ ಗುಲ್ಬರ್ಗಾದಲ್ಲಿ ಸ್ಥಾಪಿತವಾಗಿ ಬೀದರ್‌ನಲ್ಲಿ ಕೊನೆಗೊಂಡ ಬಹಮನಿ ಚಕ್ರಾಧಿಪತ್ಯ. ಅಂದಿನ ಗುಲ್ಬರ್ಗಾದಲ್ಲಿ ಸಾಮ್ರಾಜ್ಯವನ್ನು ಸಂಸ್ಥಾಪಿಸಿದ ಅಲಾದ್ದೀನ್ ಬಹಮನಿ ಶಾ ನಂತರ ಎಂಟು ಸುಲ್ತಾನರು ಸಾಮ್ರಾಜ್ಯವನ್ನಾಳಿದರು. ಇವರಲ್ಲಿ ಎಂಟನೆ ಆಡಳಿತಗಾರ ಫಿರೋಜ್ ಶಾ ಬಹು ಪ್ರಮುಖರು. ಇವರು ಪರ್ಷಿಯನ್ ಕವನ/ಕವಿತೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಬಲು ಅಭಿರುಚಿ ಹೊಂದಿದವರಾಗಿದ್ದರು. ತಮ್ಮ ಸಾಮ್ರಾಜ್ಯಕ್ಕೆ ಇರಾನ್‌ನಿಂದ ಕವಿಗಳನ್ನು ಮತ್ತು ವಿದ್ವಾಂಸರನ್ನು ಆಹ್ವಾನಿಸಿದ್ದ ಖ್ಯಾತಿ ಫೀರೋಜ್ ಶಾಗೆ ಸಲ್ಲುತ್ತದೆ. ಇವರಲ್ಲಿ ಕೆಲವರು ಆಹ್ವಾನವನ್ನು ಸ್ವೀಕರಿಸಿದರೆ ಇನ್ನೂ ಕೆಲವರು ತಮ್ಮ ಕವನಗಳ ಪ್ರತಿಗಳನ್ನು ಸುಲ್ತಾನರಿಗೆ ರವಾನಿಸಿದ್ದರು.

Untitled design (71)

ಒಳ ಸಂಚು, ಬೇಗುದಿ

ಖ್ಯಾತ ಸಾಹಿತಿಗಳು ಮತ್ತು ಲೇಖಕರು ಆಗಿದ್ದ ಖ್ವಾಜಾ ಬಂದೇ ನವಾಜರು ಫಿರೋಜ್‌ರ ಆಳ್ವಿಕೆ ಅವಧಿಯಲ್ಲಿ ಅಂದಿನ ಗುಲ್ಬರ್ಗಾಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ತನ್ನ ಮಗನನ್ನು ಸಿಂಹಾಸನದ ಮೇಲೆ ಕೂರಿಸುವುದು ಫಿರೋಜ್‌ರ ಹೆಬ್ಬಯಕೆಯಾಗಿದ್ದರೆ ಆತನ ಸಹೋದರ ಅಹಮದ್ ಕೂಡ ಅರಸೊತ್ತಿಗೆ ಮೇಲೆ ಕಣ್ಣಿಟ್ಟಿದ್ದ. ಅಹಮದ್‌ಗೆ ಖ್ವಾಜಾ ಬಂದೇ ನವಾಜ್ ಬೆಂಬಲ ನೀಡಿದ್ದರು ಎಂಬುದು ಬಲ್ಲವರ ಪ್ರತಿಪಾದನೆ. ಇದರಿಂದಾಗಿ ಫಿರೋಜ್ ಬೇಗುದಿಗೆ ಒಳಗಾಗಿದ್ದರು. ಸಹೋದರರ ಕಾಳಗದಲ್ಲಿ ಕೊನೆಗೆ ಅಹಮದ್‌ರಿಗೆ ಜಯ ಸಂದಿತು. ಒಳಸಂಚು, ಪಿತೂರಿ ಮತ್ತು ರಕ್ತಪಾತದ ಕಾರಣವಾಗಿ ಅಹಮದ್ ತನ್ನ ಚಕ್ರಾಧಿಪತ್ಯದ ರಾಜಧಾನಿಯನ್ನು ಬೀದರ್‌ಗೆ ಸ್ಥಳಾಂತರಿಸಲು ಬಯಸಿದರು. ಏತನ್ಮಧ್ಯೆ ಫಿರೋಜ್ ಹಾಗೂ ಖ್ವಾಜಾ ಬಂದೇ ನವಾಜ್ ಇಬ್ಬರು ಕೂಡ ಕೊನೆಯುಸಿರೆಳೆದರು. ಫಲವತ್ತಾದ ಭೂಮಿ, ಶುದ್ಧ ಕುಡಿಯುವ ನೀರು, ಆಹ್ಲಾದಕ ಹವಾಮಾನ ಹಾಗೂ ರಮಣೀಯ ಪ್ರದೇಶವನ್ನೊಳಗೊಂಡ ಕಾರಣಗಳಿಂದಾಗಿ ಮಾತ್ರವಲ್ಲದೆ ದಖನ್ ಆಳ್ವಿಕೆಯ ಆಯಕಟ್ಟಿನ ಪ್ರದೇಶ ಎಂದು ಮತ್ತು ವಿಜಯನಗರ ಸಾಮ್ರಾಜ್ಯದಿಂದ ಅನತಿ ದೂರವಿರುವುದರಿಂದ ರಾಜಧಾನಿಯನ್ನಾಗಿಸಲು ಬೀದರ್ ಸೂಕ್ತ ತಾಣ ಎಂದು ಅಹಮದ್‌ರಿಗೆ ತೋಚಿತು. ತನ್ನ ಸಹೋದರ ಆರಂಭಿಸಿದ ಸಂಪ್ರದಾಯವನ್ನು ಅಹಮದ್ ಬೀದರ್‌ನಲ್ಲಿ ಮುಂದುವರಿಸಿ ಪರ್ಷಿಯಾದಿಂದ ಬೀದರ್‌ಗೆ ಕವಿಗಳನ್ನು ಮತ್ತು ವಿದ್ವಾಂಸರನ್ನು ಆಹ್ವಾನಿಸಿದರು.

ಹಿಂದು-ಮುಸ್ಲಿಂ ಒಗ್ಗಟ್ಟು

ಹಿಂದು-ಮುಸ್ಲಿಂ ಒಗ್ಗಟ್ಟಿನಲ್ಲಿ ಅಹಮದ್ ನಂಬಿಕೆ ಹೊಂದಿದ್ದರು. ಸೂಫಿ ಶಾಲೆ ವಿಚಾರ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಬಂದೇ ನವಾಜರು ಕಾಲವಾದ ಬಳಿಕ ಓರ್ವ ಆಧ್ಯಾತ್ಮಿಕ ಸಲಹೆಗಾರರ ಕೊರತೆ ಅಹಮದ್‌ರಿಗೆ ಕಾಡಿತು. ಈ ಕೊರತೆಯನ್ನು ತುಂಬಲು ಉತ್ತರ ಇರಾನಿನ ಕಿರ್‌ಮಾನ್ ಪ್ರದೇಶದಿಂದ ಸೂಫಿ ಕವಿ ನಿಯಾಮತ್-ಉಲ್ಲಾ ಅವರನ್ನು ಅಹಮದ್ ಆಹ್ವಾನಿಸಿದರು. ಸೂಫಿ ತತ್ತ್ವ, ಸಂಪ್ರಾಯ ಮತ್ತು ವಿಚಾರಧಾರೆಗಳ ಪಿತಾಮಹ ಎಂದೇ ಹೆಸರು ವಾಸಿಯಾಗಿದ್ದ 98 ವರ್ಷ ವಯಸ್ಸಿನ ನಿಯಾಮತ್-ಉಲ್ಲಾ ಇಳಿ ವಯಸ್ಸಿನ ಕಾರಣಕ್ಕೆ ಬೀದರ್‌ಗೆ ಪ್ರಯಾಣಿಸಲು ಬಯಸಲಿಲ್ಲ. ನಿಯಾಮತ್-ಉಲ್ಲಾ ತಮ್ಮ ಕವನಗಳನ್ನು ತಮ್ಮ ಮೊಮ್ಮಗನ ಮೂಲಕ ಉಡುಗೊರೆಯಾಗಿ ರವಾನಿಸಿದರು. ಈ ಎಲ್ಲ ಐತಿಹಾಸಿಕ ಹಿನ್ನೆಲೆಯಲ್ಲಿ ಅಷ್ಟೂರಿನಲ್ಲಿಯ ಅಹಮದ್‌ರ ಸ್ಮಾರಕದಲ್ಲಿ ಒಗ್ಗಟ್ಟು, ಐಕ್ಯತೆ ಮತ್ತು ಭಾವೈಕ್ಯತೆಯ ಮಹತ್ವದ ಸಂದೇಶ ಸಾರುವ ಸೂಫಿ ಕವನಗಳನ್ನು ಇಂದಿಗೂ ಪ್ರತಿಯೊಬ್ಬರೂ ಕಾಣಬಹುದು. ಕವನಗಳು ಹಿಂದು ಮತ್ತು ಇಸ್ಲಾಮಿಕ್ ಸಂಸ್ಕೃತಿಯ ಹದವಾದ ಮೇಳೈಕೆ ಹೊಂದಿವೆ. ಎರಡು ಸಂಸ್ಕೃತಿಗಳನ್ನು ಸಾದರಪಡಿಸುವ ಮನಮೋಹಕ ಬರಹಗಳು ಅಷ್ಟೂರಿನ ಅಹಮದ್ ಶಾ ವಲಿ ದರ್ಗಾದ ಮೇಲೆ ಕೂಡ ಕಾಣಬಹುದಾಗಿದೆ. ಅಮಹದ್ ಶಾ ಅವರ ಸ್ಮಾರಕನ್ನು ಹಿಂದುಗಳು ಅಲ್ಲಮಪ್ರಭು ಮಂದಿರ ಎಂದು ಪರಿಗಣಿಸಿದರೆ ಮುಸ್ಲಿಂ ಬಾಂಧವರು ವಲಿ ದರ್ಗಾ ಎಂದು ಪರಿಗಣಿಸುತ್ತಿದ್ದಾರೆ. ಜಾತ್ಯಾತೀತ ಸಂದೇಶ ಸಾರುವ ಬಲು ಅಪರೂಪದ ಸಂಗಮ ಇದಾಗಿದೆ.

ಮನಮೋಹಕ ಕವನ

ಬಂಗಾರದ ಬಣ್ಣದಲ್ಲಿ ಮತ್ತು ಇನ್ನೂ ಹಲವಾರು ರಂಗುಗಳಲ್ಲಿ ಬರೆದಿರುವ ನಿಯಾಮತ್-ಉಲ್ಲಾರ ಕವನಗಳನ್ನು ನೋಡುವುದೇ ಸೊಬಗು. ಒಳಾಂಗಣ ಗೋಡೆಗಳ ಮೇಲೆ ಕೂಡ ನಿಯಾಮತ್-ಉಲ್ಲಾ ಮನಮೋಹಕ ಕವನಗಳನ್ನು ಬರೆಯಲಾಗಿದೆ. ಕೇವಲ ನಿಯಾಮತ್-ಉಲ್ಲಾ ಕವನಗಳಿಗೆ ಮಾತ್ರ ಸೀಮಿತವಾಗದೇ ಕುರಾನ್‌ನ ಸಂದೇಶಗಳನ್ನು ಕೂಡ ಇಲ್ಲಿ ಬರೆಯಲಾಗಿದೆ. ಇನ್ನೂ ಅಷ್ಟೂರ್ ಸ್ಮಾರಕಗಳನ್ನು ಮತ್ತು ಗುಂಬಜ್‌ಗಳನ್ನು ನೋಡಿಲ್ಲವೆಂದರೆ ಹೊರಡಿ ಈಗಲೇ. ಮಹತ್ವದ ಸಾಧನೆಗಳನ್ನು ಮಾಡುವ ಮುನ್ನ ಚರಿತ್ರೆ ಅರಿಯುವುದು ಅಗತ್ಯವಾಗಿದೆ.

ಲೇಖಕರು: ನಿವೃತ್ತ ಪತ್ರಕರ್ತರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..