Wednesday, May 20, 2026
Wednesday, May 20, 2026

ಉಸಿರು ನೀಡುವ ಮರಗಳಿಗೆ ವಿಷ ನೀಡುವ ಮನಸ್ಥಿತಿ ಏಕೆ?

ನಗರೀಕರಣ ಎಂಬ ಹೆಸರಿನಲ್ಲಿ ರಸ್ತೆಗಳನ್ನು ಅಗಲಗೊಳಿಸಿದ್ದಾಗಿದೆ, ಅಭಿವೃದ್ಧಿ ಎಂದು ಎತ್ತರದ ಕಟ್ಟಡಗಳನ್ನು ನಿರ್ಮಿಸಿ ಆಗಿದೆ. ಆದರೆ, ಇದರ ನಡುವೆ ಎಲ್ಲೋ ಚೂರು ಪಾರು ಹಸಿರಾಗಿ ನಿಂತಿದ್ದ ಮರಗಳು ಇಂದು ಮೌನವಾಗಿ ಸಾಯುತ್ತಿವೆ. ನಗರ ಪ್ರದೇಶಗಳಲ್ಲಿ ʼವೃಕ್ಷ ವಿಷಪ್ರಾಶನʼ (Tree Poisoning) ಎಂಬುದು ಒಂದು ವ್ಯವಸ್ಥಿತ ಮತ್ತು ಅಗೋಚರ ಅಪರಾಧವಾಗಿ ಬೆಳೆಯುತ್ತಿದೆ.

ಇತ್ತೀಚೆಗೆ ಗೆಳೆಯನ ಜತೆಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಮಾತನಾಡಿಕೊಳ್ಳುತ್ತಿದ್ದೆವು. ಅಭಿವೃದ್ಧಿ ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಪ್ರಕೃತಿಗೆ ವಿರುದ್ಧವಾದ ಅಭಿವೃದ್ಧಿ ಅಳಿವಿನ ಅಂಚಿಗೆ ಕರೆದೊಯ್ಯುತ್ತದೆ. ಈಗ ಒಂದೂವರೆ ಗಂಟೆಯಲ್ಲಿ ಮೈಸೂರು ತಲುಪುತ್ತೇವೆ. ಆದರೆ, ಈ ಮೊದಲು ರಾಮನಗರದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಒಬ್ಬರು ಮಾರುತ್ತಿದ್ದ ತಣ್ಣನೆಯ ಎಳನೀರ ರುಚಿಯನ್ನು ಸವಿದು ಹೋಗುತ್ತಿದ್ದೆವು. ಚನ್ನಪಟ್ಟಣದಲ್ಲಿದ್ದ ಅಂಗಡಿಗಳಲ್ಲಿ ಏನೋ ಒಂದಿಷ್ಟು ಆಟಿಕೆಗಳನ್ನು ಖರೀದಿ ಮಾಡುತ್ತಿದ್ದೆವು. ಇನ್ನೊಂದು ಕಡೆ ಕಾಫಿ, ಇನ್ನೆಲ್ಲೋ ಕಬ್ಬಿನ ಹಾಲು ಹೀಗೆ ಪಯಣ ಸಾಗುತ್ತಿತ್ತು. ಈಗ ಎಲ್ಲವೂ ಬದಲಾಗಿದೆ. ಅಷ್ಟೇ ಯಾಕೆ ಗಾಡಿ ಹಾಳಾಯಿತು ಅಂತಲೋ, ಸುಸ್ತಾಯಿತು ಅಂತಲೋ ಎಲ್ಲೋ ಒಂದು ಮರದ ಬುಡದಲ್ಲಿ ನಿಲ್ಲಿಸಲು ಮರಗಳು ಕೂಡ ಈಗ ಕಾಣುವುದಿಲ್ಲ. ಮರಗಳು ಎಂದಾಗ ಒಂದು ವಿಷಯ ನೆನಪಿಸಿಕೊಳ್ಳಬೇಕು. ಇತ್ತೀಚೆಗೆ ಒಂದು ಪಾಡ್‌ಕಾಸ್ಟ್‌ ನೋಡುತ್ತಿದ್ದೆ. ವಿಜಯ್‌ ನಿಶಾಂತ್‌ ಎಂಬ ʼಟ್ರೀ ಡಾಕ್ಟರ್‌ʼ ಒಂದು ಆಘಾತಕಾರಿ ವಿಷಯ ಪ್ರಸ್ತುತಪಡಿಸಿದರು. ಅದೇನೆಂದರೆ ಮರಗಳಿಗೆ ವಿಷ ನೀಡುವ ಹೀನ ಕೆಲಸ.

ಇದನ್ನೂ ಓದಿ: ಕರ ಮುಗಿದು ಕರೆಯುತ್ತೇವೆ.. ಕರ ಕೊಟ್ಟು ಒಳಗೆ ಬಾ!

ಯಾವುದೇ ಪ್ರವಾಸಿಗರನ್ನು ಮೊದಲು ಸೆಳೆಯುವುದೇನೆಂದರೆ ಪ್ರಕೃತಿ. ಏಕೆಂದರೆ, ಕಾಂಕ್ರೀಟ್‌ ನಗರಗಳಲ್ಲಿ ಸಿಗದ ಹಿತವಾದ ಅನುಭವ ಹಾಗೂ ನೆಮ್ಮದಿ ಪ್ರಕೃತಿಯ ಮಡಿಲಲ್ಲಿ ಸಿಗುತ್ತದೆ. ಈ ಸತ್ಯ ಎಲ್ಲರಿಗೂ ಗೊತ್ತಿರುವಂಥದ್ದೆ. ಪರಿಸರ ಉಳಿಸಬೇಕು, ಪ್ರಕೃತಿಯ ನಾಶಕ್ಕೆ ಕಾರಣವಾಗಬಾರದು ಎಂದು ಎಲ್ಲರೂ ಮಾತನಾಡುತ್ತೇವೆ. ಆದರೆ ಪಾಲಿಸುವ ವಿಷಯದಲ್ಲಿ ಎಷ್ಟು ಕಟ್ಟುನಿಟ್ಟು ಎನ್ನುವುದು ನಮ್ಮನ್ನು ನಾವು ಕೇಳಿಕೊಂಡರೆ ಅರ್ಥವಾಗುತ್ತದೆ. ಸುತ್ತಾಡಲು ಊರಾಚೆ ಕಾಡುಗಳಿವೆ, ಹತ್ತಲು ಬೆಟ್ಟಗಳಿವೆ ಎಂಬ ಮಾತ್ರಕ್ಕೆ ಊರೊಳಗಿರುವ ಮರಗಳನ್ನು ನಾಶ ಮಾಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ನಗರೀಕರಣ ಎಂಬ ಹೆಸರಿನಲ್ಲಿ ರಸ್ತೆಗಳನ್ನು ಅಗಲಗೊಳಿಸಿದ್ದಾಗಿದೆ, ಅಭಿವೃದ್ಧಿ ಎಂದು ಎತ್ತರದ ಕಟ್ಟಡಗಳನ್ನು ನಿರ್ಮಿಸಿ ಆಗಿದೆ. ಆದರೆ, ಇದರ ನಡುವೆ ಎಲ್ಲೋ ಚೂರುಪಾರು ಹಸಿರಾಗಿ ನಿಂತಿದ್ದ ಮರಗಳು ಇಂದು ಮೌನವಾಗಿ ಸಾಯುತ್ತಿವೆ. ನಗರ ಪ್ರದೇಶಗಳಲ್ಲಿ ʼವೃಕ್ಷ ವಿಷಪ್ರಾಶನʼ (Tree Poisoning) ಎನ್ನುವುದು ಒಂದು ವ್ಯವಸ್ಥಿತ ಮತ್ತು ಅಗೋಚರ ಅಪರಾಧವಾಗಿ ಬೆಳೆಯುತ್ತಿದೆ.

Untitled design (8)

ಇದು ಹೇಗೆ ಮಾಡಲಾಗುತ್ತದೆ ಎಂದರೆ, ಸಾಮಾನ್ಯವಾಗಿ ದೊಡ್ಡ ವಾಣಿಜ್ಯ ಸಂಕೀರ್ಣಗಳು, ಜಾಹೀರಾತು ಏಜೆನ್ಸಿಗಳು ಅಥವಾ ರಸ್ತೆ ಬದಿಯ ಆಸ್ತಿ ಮಾಲೀಕರು ತಮ್ಮ ಕಟ್ಟಡ ಅಥವಾ ಫಲಕಗಳು ಜನರಿಗೆ ಸ್ಪಷ್ಟವಾಗಿ ಕಾಣಿಸಲಿ ಎಂಬ ಉದ್ದೇಶದಿಂದ ಮರಗಳನ್ನು ಸಾಯಿಸಲು ಸಂಚು ರೂಪಿಸುತ್ತಾರೆ. ನೇರವಾಗಿ ಮರವನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಸಿಗುವುದಿಲ್ಲ. ಹೀಗಾಗಿ, ಮರವು ʼತಾನಾಗಿಯೇ ಒಣಗಿ ಸತ್ತಿದೆʼ ಎಂದು ತೋರಿಸಲು ವಿಷಪ್ರಾಶನದ ಹಾದಿ ಹಿಡಿಯುತ್ತಾರೆ. ರಾತ್ರೋರಾತ್ರಿ ಮರಗಳ ಬೇರುಗಳಿಗೆ ಆಸಿಡ್‌ ಅಥವಾ ವಿಷಕಾರಿ ರಾಸಾಯನಿಕಗಳನ್ನು ಸುರಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಮರದ ಕಾಂಡಕ್ಕೆ ರಂಧ್ರಗಳನ್ನು ಕೊರೆದು ಅದಕ್ಕೆ ಆಮ್ಲ ಅಥವಾ ಪ್ರಬಲ ರಾಸಾಯನಿಕಗಳನ್ನು ಸುರಿಯಲಾಗುತ್ತದೆ. ಇದು ಮರದ ಜೀವಕೋಶಗಳನ್ನು ಕ್ಷಣಮಾತ್ರದಲ್ಲಿ ಸುಟ್ಟುಹಾಕುತ್ತದೆ. ಇಲ್ಲದಿದ್ದರೆ, ಮರದ ಬುಡದ ಮಣ್ಣನ್ನು ಅಗೆದು ಅಲ್ಲಿ ವಿಷಕಾರಿ ದ್ರವಗಳನ್ನು ಸುರಿಯಲಾಗುತ್ತದೆ. ಇದರಿಂದ ಮರವು ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಮರದ ಬುಡದ ಸುತ್ತಲೂ ಉಸಿರಾಡಲು ಜಾಗವಿಲ್ಲದಂತೆ ಸಂಪೂರ್ಣ ಕಾಂಕ್ರೀಟ್ ಹಾಕುವುದು ಸಹ ಒಂದು ರೀತಿಯ ವಿಷಪ್ರಾಶನ. ಈಗ ಇರುವ ಮರ ಮುಂದೆ ಸಾಯಬಹುದು. ಒಂದು ಮರ ಸತ್ತರೆ ಆ ಮರ ಮಾತ್ರ ನಾಶವಾಗುವುದಿಲ್ಲ, ಒಂದು ಪುಟ್ಟ ಊರನ್ನೇ ನಾಶ ಮಾಡುವ ಸಾಮರ್ಥ್ಯವಿರುತ್ತದೆ. ಗ್ರೀನ್‌ ಟೂರಿಸಂ ಆಗಬಹುದಾದ ಜಾಗ ಮುಂದೊಂದು ದಿನ ಡಾರ್ಕ್‌ ಟೂರಿಸಂಗೆ ಹೆಸರಾಗಬಹುದು.

ನಗರದ ಮರಗಳು ಸಾವಿರಾರು ಹಕ್ಕಿಗಳು, ಅಳಿಲುಗಳು ಮತ್ತು ಕೀಟಗಳಿಗೆ ಆಸರೆಯಾಗಿರುತ್ತವೆ. ಇಂಥ ವಿಷಪ್ರಾಶನದಿಂದ ಮರ ಒಣಗಿದಾಗ ಈ ಜೀವಿಗಳಿಗೆ ವಸತಿ ಇಲ್ಲದಂತಾಗುತ್ತದೆ. ಇನ್ನು ಅತ್ಯಂತ ಪ್ರಸ್ತುತ ಎಂದರೆ ಈಗ ಬೆಂಗಳೂರು ಎದುರಿಸುತ್ತಿರುವ ಸೆಕೆಯ ಪ್ರಮಾಣ. ಬೆಂಗಳೂರಿನಂಥ ನಗರಗಳಲ್ಲಿ ಮರಗಳು ನಾಶವಾಗುತ್ತಿರುವುದರಿಂದ ಸರಾಸರಿ ತಾಪಮಾನವು ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಮರಗಳ ಹಸಿರು ಚಾವಣಿ ಇಲ್ಲದ ಜಾಗದಲ್ಲಿ ಕಾಂಕ್ರೀಟ್ ಶಾಖವನ್ನು ಹೀರಿಕೊಂಡು ನಗರವನ್ನು ಒಲೆಯಂತೆ ಮಾಡುತ್ತದೆ. ವಿಷಪ್ರಾಶನದಿಂದ ಸಾಯುವ ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ, ಇದು ಶ್ವಾಸಕೋಶದ ಕಾಯಿಲೆಗಳಿಗೆ ನೇರ ಹಾದಿ ಮಾಡಿಕೊಡುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ 'ವೃಕ್ಷಾಯುರ್ವೇದ'ದಂಥ ಅದ್ಭುತ ಜ್ಞಾನಪರಂಪರೆಯಿತ್ತು. ಮರಗಳ ರೋಗಗಳನ್ನು ಪತ್ತೆಹಚ್ಚುವ ಮತ್ತು ಅವುಗಳಿಗೆ ನೈಸರ್ಗಿಕವಾಗಿ ಚಿಕಿತ್ಸೆ ನೀಡುವ ವಿಧಾನಗಳು ನಮ್ಮ ಹಿರಿಯರಿಗೆ ತಿಳಿದಿತ್ತು. ಆದರೆ ಆಧುನಿಕ ಶಿಕ್ಷಣ ಮತ್ತು ಅವಸರದ ನಗರೀಕರಣ ನಮ್ಮನ್ನು ಈ ಮೂಲ ಜ್ಞಾನದಿಂದ ದೂರ ಮಾಡಿದೆ. ಇಂದು ನಾವು ರಸ್ತೆ ನಿರ್ಮಿಸುವಾಗ ಮರದ ಬೇರುಗಳಿಗೆ ಗಾಳಿಯಾಡದಂತೆ ಕಾಂಕ್ರೀಟ್ ಹಾಕುತ್ತೇವೆ ಅಥವಾ ಕೇಬಲ್ ಅಳವಡಿಸಲು ಬೇರುಗಳನ್ನು ಕತ್ತರಿಸುತ್ತೇವೆ. ಇದು ಮರಗಳಿಗೆ ನಾವು ನೀಡುತ್ತಿರುವ ಮರಣದಂಡನೆ. ವೈಜ್ಞಾನಿಕವಾಗಿ ಹೇಳುವುದಾದರೆ, ಮರಗಳು ಸಹ ಒತ್ತಡಕ್ಕೆ ಒಳಗಾಗುತ್ತವೆ. ನಗರದ ಮರಗಳು ನಿರಂತರ ಶಬ್ದ ಮಾಲಿನ್ಯ, ರಾತ್ರಿಯ ಹೊತ್ತು ಕೃತಕ ಬೆಳಕಿನ ಪ್ರಭಾವ ಮತ್ತು ಬೇರುಗಳಿಗೆ ಆಮ್ಲಜನಕದ ಕೊರತೆಯಿಂದ ಬಳಲುತ್ತಿವೆ. ಇಂಥ ದುರ್ಬಲ ಸ್ಥಿತಿಯಲ್ಲಿರುವ ಮರಗಳಿಗೆ ವಿಷ ಉಣಿಸಿದಾಗ ಅವುಗಳ ರೋಗನಿರೋಧಕ ಶಕ್ತಿ ಕ್ಷಣಾರ್ಧದಲ್ಲಿ ಕುಸಿಯುತ್ತದೆ.

ಕರ್ನಾಟಕದಲ್ಲಿ, ಪರಿಸರಕ್ಕೆ ಹಾನಿ ಉಂಟುಮಾಡುವ ಮತ್ತು ಲಕ್ಷಾಂತರ ಮರಗಳ ಬಲಿಯನ್ನು ಕೇಳುತ್ತಿರುವ ಕೆಲವು ಪ್ರಮುಖ ಯೋಜನೆಗಳ ವಿವರಗಳು ಬೆಚ್ಚಿಬೀಳಿಸುವಂತಿವೆ. ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿದ್ದರೂ, ಇದು ಸುಮಾರು 33,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಪ್ರಸ್ತಾವನೆ ಈ ಯೋಜನೆಯಲ್ಲಿದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯುವ ಅಂದಾಜಿದೆ. ಶರಾವತಿ ಭೂಗತ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಸಾವಿರಾರು ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಈಗ ರದ್ದಾಗಿರುವ ಆದರೆ ಚರ್ಚೆಯಲ್ಲಿರುವ ಬೆಂಗಳೂರಿನ ಸ್ಟೀಲ್ ಫ್ಲೈ ಓವರ್ ಯೋಜನೆಯಲ್ಲಿ 800ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಯೋಚನೆಯಿತ್ತು. ಹೆಸರಘಟ್ಟದ 5,000 ಎಕರೆ ಹುಲ್ಲುಗಾವಲನ್ನು ಫಿಲ್ಮ್ ಸಿಟಿ ಅಥವಾ ಇತರ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.

ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ ಮತ್ತು ಜಯನಗರ ಭಾಗಗಳಲ್ಲಿ ನಡೆದ ಘಟನೆಗಳು ಈ ಗಂಭೀರ ಸಮಸ್ಯೆಗೆ ಜ್ವಲಂತ ಉದಾಹರಣೆಗಳು. ಒಂದು ಪ್ರಕರಣದಲ್ಲಿ ಮರಕ್ಕೆ ರಂಧ್ರ ಕೊರೆದು ಪಾದರಸ ಮತ್ತು ಆಸಿಡ್ ಸುರಿದಿದ್ದನ್ನು ವಿಜಯ್‌ ನಿಶಾಂತ್‌ ಪತ್ತೆಹಚ್ಚಿದ್ದರು. ಅವರು ಆ ಮರದ ಗಾಯಗಳನ್ನು ಸ್ವಚ್ಛಗೊಳಿಸಿ, ನೈಸರ್ಗಿಕ ಮುಲಾಮುಗಳನ್ನು ಹಚ್ಚಿ ಅದನ್ನು ಬದುಕಿಸುವಲ್ಲಿ ಯಶಸ್ವಿಯಾದರು. ಆದರೆ, ಕಾನೂನು ಪ್ರಕ್ರಿಯೆ ಇಲ್ಲಿ ಅತ್ಯಂತ ದುರ್ಬಲವಾಗಿದೆ. ಭಾರತೀಯ ಅರಣ್ಯ ಕಾಯ್ದೆ ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ ಮರಗಳಿಗೆ ಹಾನಿ ಮಾಡುವುದು ಅಪರಾಧವಾಗಿದ್ದರೂ, ಶಿಕ್ಷೆಯ ಪ್ರಮಾಣ ಮತ್ತು ದಂಡದ ಮೊತ್ತ ಅತ್ಯಂತ ಕಡಿಮೆ ಇರುವುದರಿಂದ ಅಪರಾಧಿಗಳಿಗೆ ಭಯವಿಲ್ಲದಂತಾಗಿದೆ.

ಮರಗಳಿಗೆ ಹೊಡೆದ ಮೊಳೆಗಳನ್ನು ತೆಗೆಯುವುದು ಹಾಗೂ ಜಾಹೀರಾತುಗಳನ್ನು ತೆಗೆಯುವ ಕೆಲಸಗಳನ್ನು ಬೆಂಗಳೂರಿನಲ್ಲಿ ಪರಹಿತಮ್‌ ಫೌಂಡೇಶನ್‌, ಭರವಸೆ, ಸೇರಿದಂತೆ ಅನೇಕ ಯುವಕರ ತಂಡ ಮಾಡುತ್ತಿದೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾತ್ರಿ ಮತ್ತೆ ಅದೇ ಜಾಹೀರಾತನ್ನು ಅದೇ ಮರಕ್ಕೆ ಇನಷ್ಟು ಹೆಚ್ಚಿನ ಮೊಳೆ ಅಥವಾ ಸ್ಟೇಪ್ಲರ್‌ ಪಿನ್‌ ಹೊಡೆದು ಹಾಕಿರುತ್ತಾರೆ. ಆ ಜಾಹೀರಾತು ನೀಡುವ ಸಂಸ್ಥೆಗಳಿಗೆ ಕರೆ ಮಾಡಿದರೂ ಏನೂ ಪ್ರಯೋಜನ ಆಗುವುದಿಲ್ಲ.

ನಾವು ಹೀಗೆಯೇ ಮರಗಳನ್ನು ವಿಷ ನೀಡಿ ಸಾಯಿಸುತ್ತಾ ಹೋದರೆ, ಮುಂದಿನ 20 ವರ್ಷಗಳಲ್ಲಿ ನಮ್ಮ ನಗರಗಳು ಬರಿ ಕಾಂಕ್ರೀಟ್ ಮರುಭೂಮಿಗಳಾಗಲಿವೆ. ಅಂತರ್ಜಲ ಮಟ್ಟ ಕುಸಿಯುವುದು, ಅಕಾಲಿಕ ಮಳೆ ಮತ್ತು ವಿಪರೀತ ಶಾಖವು ನಗರ ಜೀವನವನ್ನು ಅಸಹನೀಯವಾಗಿಸುತ್ತದೆ. ಮರಗಳ ಡಿಜಿಟಲ್ ಮ್ಯಾಪಿಂಗ್ ಇಲ್ಲದ ಕಾರಣ, ಎಷ್ಟು ಮರಗಳು ಹುಟ್ಟುತ್ತಿವೆ ಮತ್ತು ಎಷ್ಟು ಮರಗಳನ್ನು ವ್ಯವಸ್ಥಿತವಾಗಿ ಸಾಯಿಸಲಾಗುತ್ತಿದೆ ಎಂಬ ನಿಖರ ಮಾಹಿತಿ ಸರಕಾರದ ಬಳಿಯೂ ಇಲ್ಲದಿರುವುದು ದೊಡ್ಡ ದುರಂತ.

Untitled design (7)

ಈ ಸಮಸ್ಯೆಗೆ ಕೇವಲ ಸರಕಾರದ ಮೇಲೆ ಅವಲಂಬಿತವಾಗುವುದು ಸಾಕಾಗುವುದಿಲ್ಲ. ಇಲ್ಲಿ ತಾಂತ್ರಿಕ ಮತ್ತು ಸಾಮಾಜಿಕ ಪರಿಹಾರಗಳ ಅಗತ್ಯವಿದೆ. ನಗರದ ಪ್ರತಿಯೊಂದು ಮರಗಳ ಡಿಜಿಟಲ್ ಸೆನ್ಸರ್ ಅಳವಡಿಕೆಯು ಮರಕ್ಕೆ ಹಾನಿಯಾದ ತಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಂತಾಗಬೇಕು. ಪ್ರತಿ ವಾರ್ಡ್ ಮಟ್ಟದಲ್ಲಿ ವಿಷಪ್ರಾಶನಕ್ಕೊಳಗಾದ ಮರಗಳನ್ನು ತಕ್ಷಣವೇ ಉಪಚರಿಸುವ ʼವೃಕ್ಷ ಆಂಬ್ಯುಲೆನ್ಸ್ʼ ಮತ್ತು ತಜ್ಞರ ತಂಡವಿರಬೇಕು. ಮರಗಳಿಗೆ ವಿಷ ಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನಾಗರಿಕರು ಮರದ ಕಾವಲುಗಾರರಾಗಿ ಕೆಲಸ ಮಾಡಿದರೆ ಉಳಿದೆಲ್ಲ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಹೆಚ್ಚು.

ಮರಗಳು ನಮ್ಮ ಪೂರ್ವಜರು ನಮಗಿತ್ತ ಉಡುಗೊರೆ. ಅವುಗಳನ್ನು ವಿಷವಿಕ್ಕಿ ಸಾಯಿಸುವುದು ಕೇವಲ ಪರಿಸರ ವಿರೋಧಿ ಕೃತ್ಯವಲ್ಲ, ಅದು ಮಾನವಕುಲದ ವಿರುದ್ಧದ ಅಪರಾಧ. ಅಭಿವೃದ್ಧಿ ಎಂದರೆ ಕೇವಲ ಎತ್ತರದ ಸೇತುವೆಗಳಲ್ಲ, ಅವುಗಳ ಕೆಳಗೆ ತಂಪಾದ ನೆರಳು ನೀಡುವ ಹಸಿರು ಮರಗಳು. ಪರಿಸರ ಎಂಬುದು ಕೇವಲ ಭಾಷಣದ ವಸ್ತುವಾಗಬಾರದು, ಅದು ನಮ್ಮ ಜೀವನದ ಉಸಿರಾಗಬೇಕು. ಮರಗಳಿಗೆ ವಿಷ ಹಾಕುವ ಮೌನ ಹಂತಕರ ವಿರುದ್ಧ ನಾವು ಧ್ವನಿ ಎತ್ತದಿದ್ದರೆ, ಭವಿಷ್ಯದ ಪೀಳಿಗೆಗೆ ನಾವು ಕೇವಲ ಹೊಗೆ ಮತ್ತು ಶಾಖವನ್ನು ಮಾತ್ರ ಉಳಿಸಿಕೊಡುತ್ತೇವೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?