Wednesday, May 20, 2026
Wednesday, May 20, 2026

ಕರ ಮುಗಿದು ಕರೆಯುತ್ತೇವೆ.. ಕರ ಕೊಟ್ಟು ಒಳಗೆ ಬಾ!

ನಮ್ಮ ಮುಂದಿನ ಪ್ರವಾಸವು ನಿರೀಕ್ಷಿಸುವುದಕ್ಕಿಂತ ಸ್ವಲ್ಪ ಹೆಚ್ಚು ದುಬಾರಿಯಾಗಲಿದೆ. ಇದು ಕೇವಲ ಹಣದುಬ್ಬರದ ಕಾರಣದಿಂದಲ್ಲ. ಪ್ರಪಂಚಾದ್ಯಂತ ಹೆಚ್ಚುತ್ತಿರುವ ಪ್ರವಾಸಿ ತಾಣಗಳು, ಅಲ್ಲಿನ ವಾಸ್ತವ್ಯ, ಫೆರ್ರಿ ಟಿಕೆಟ್‌ಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು ಹಾಗೂ ಇತರ ಸಂರಕ್ಷಿತ ಪ್ರದೇಶಗಳು ಅವುಗಳ ಪ್ರವೇಶಕ್ಕೆ ಹಸಿರು ತೆರಿಗೆಯನ್ನು ವಿಧಿಸಲಿವೆ.

ಅಬ್ಬಬ್ಬಾ ಎಂದರೆ ಒಂದೂವರೆ ಸಾವಿರ ಹಿಡಿಸುವ ಒಂದು ಸಣ್ಣ ಹಳ್ಳಿಯಲ್ಲಿ ದಿನವೊಂದಕ್ಕೆ ಧಿಗ್ಗನೆ ಇಪ್ಪತ್ತು ಸಾವಿರಕ್ಕೂ ಮೀರಿದ ಸಂಖ್ಯೆಯ ಜನ ತುಂಬಿಕೊಂಡರೆ ಹೇಗಿರುತ್ತದೆ?! ಗಾಳಿಯೂ ಉಸಿರಿಗಾಗಿ ತಿಣುಕಾಡುತ್ತದೆ. ಭೂಮಿ ನಲುಗುವಾಗ ಆಕಾಶವೂ ಭಾರ ನೋಡಲಾರದೇ ಮುಳುಗುವುದೇನೋ. ಇದೆಲ್ಲಾ ನಮಗೆ ಊಹೆಯಲ್ಲಷ್ಟೇ ಪರಿಚಯ. ಗ್ರೀಸ್ ದೇಶದ ಸ್ಯಾಂಟೋರಿನಿ ಎನ್ನುವ ಸಣ್ಣ ದ್ವೀಪದಲ್ಲಿನ ಒಂದು ಹಳ್ಳಿ Oia. ಕೇವಲ ಹನ್ನೊಂದು ಕಿಲೋಮೀಟರ್ ಉದ್ದ ಅಗಲ ಇರುವ ಈ ಹಳ್ಳಿಯು ಸೂರ್ಯಾಸ್ತ ಸುಂದರವಾಗಿ ಕಾಣುವ ಜಗತ್ತಿನ ಸ್ಥಳಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಇಲ್ಲಿ ಸೂರ್ಯಾಸ್ತ ನೋಡಲು ಉತ್ಪ್ರೇಕ್ಷೆ ಇಲ್ಲದೆ ದಿನವೊಂದಕ್ಕೆ ಅಂದಾಜು ಇಪ್ಪತ್ತು ಸಾವಿರ ಜನ ಬರುತ್ತಾರೆ. ಅದರಲ್ಲಿ ಏಳೆoಟು ಸಾವಿರ ಜನ ಅಲ್ಲಿಯೇ ತಂಗುತ್ತಾರೆ. ಈ ಒತ್ತಡದಿಂದ, ಗುಜುಗುಜು ಸದ್ದಿನಿಂದ ಬೇಸರ ಪಟ್ಟು ಗ್ರಾಮಸ್ಥರು ತಮ್ಮತಮ್ಮ ಮನೆಗಳ ಮುಂದೆ ‘RESPECT Its your Holiday... but its our home’ ಅಂತಲೋ ’We welcome you... so respect Oia’ ಅಂತಲೋ ಬೋರ್ಡ್ ಸಿಕ್ಕಿಸಿ ಪ್ರವಾಸಿಗಳನ್ನು ಸಭ್ಯರಾಗಿ ನಡೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: ಮರಳಿದೆ.. ಮರಳಿದೆ.. ಗಡಿಯಲಿ ಮೆಟ್ಟಿದ ಮರಳಿದೆ!

ನಮ್ಮ ಅಗಾಧತೆ ಹಾಗೂ ನಮ್ಮ ಸಣ್ಣತನ ಎರಡಕ್ಕೂ ಇರುವ ಒಬ್ಬನೇ ಗುರು ಎಂದರೆ ಪ್ರವಾಸ ಎನ್ನುವುದನ್ನು ಅರಿತೇ ಪ್ರವಾಸಿಗಳಾಗಿರುತ್ತೇವೆ. ಆದರೆ ಮನುಷ್ಯ ಸಹಜ ಗುಣದಂತೆ ಜಗತ್ತು ಇರುವುದೇ ನಮ್ಮ ಸುಖಕ್ಕೆ ಅಂದುಕೊಂಡು ಸ್ಥಳೀಯರನ್ನು, ಸ್ಥಳಗಳನ್ನು, ಸೌಲಭ್ಯಗಳನ್ನು, ಸಜ್ಜನಿಕೆಯನ್ನು ಲಘುವಾಗಿ ಪರಿಗಣಿಸಲು ಆರಂಭಿಸಿಬಿಡುತ್ತೇವೆ. ಹಾಗಾದ ಮರುಕ್ಷಣವೇ ಪ್ರವಾಸಿ ಎನ್ನುವ ಪಟ್ಟವನ್ನು ಕಳೆದುಕೊಳ್ಳುತ್ತೇವೆ ಎಂಬ ಸತ್ಯವನ್ನು ಮರೆತುಬಿಡುತ್ತೇವೆ. ಅದಕ್ಕೇ ಈಗ ಸರ್ಕಾರಗಳು ಎಲ್ಲಕ್ಕೂ ಟ್ಯಾಕ್ಸ್ ಎನ್ನುವ ಛಾಬೂಕನ್ನು ತಿರುಗಿಸಿ ಪ್ರವಾಸಿಗಳನ್ನು ಹಳಿಯ ಮೇಲೆ ಇಟ್ಟುಕೊಳ್ಳುತ್ತಿರುತ್ತದೆ. ಒಂದು ಜಾಗ ತನ್ನನ್ನು ಪ್ರವಾಸಿಗಳಿಗಾಗಿ ತೆರೆದುಕೊಳ್ಳುತ್ತದೆ ಎಂದರೆ ಕಡ್ಡಾಯವಾಗಿ ಅಲ್ಲಿನ ಪರಿಸರ ಕೆಡುಕಿಗೂ ತೆರೆದುಕೊಂಡಂತೆ. ಇದು ಅನಿವಾರ್ಯ. ಹಾಗೆಂದು ಭೂಮಿಯನ್ನು ಯದ್ವಾತದ್ವಾ ಹಾಳುಗೆಡುವಲಾದೀತೇ? ಅದಕ್ಕೇ ಈಗ ಒಂದಷ್ಟು ದೇಶಗಳು ಪ್ರವಾಸಿಗರಿಂದ Green Tax (ಹಸಿರು ತೆರಿಗೆ) ವಸೂಲಿ ಮಾಡುತ್ತಿವೆ.

02-santorini-sunset-greece

ನಮ್ಮ ಮುಂದಿನ ಪ್ರವಾಸವು ನಿರೀಕ್ಷಿಸುವುದಕ್ಕಿಂತ ಸ್ವಲ್ಪ ಹೆಚ್ಚು ದುಬಾರಿಯಾಗಲಿದೆ. ಇದು ಕೇವಲ ಹಣದುಬ್ಬರದ ಕಾರಣದಿಂದಲ್ಲ. ಪ್ರಪಂಚಾದ್ಯಂತ ಹೆಚ್ಚುತ್ತಿರುವ ಪ್ರವಾಸಿ ತಾಣಗಳು, ಅಲ್ಲಿನ ವಾಸ್ತವ್ಯ, ಫೆರ್ರಿ ಟಿಕೆಟ್‌ಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು ಹಾಗೂ ಇತರ ಸಂರಕ್ಷಿತ ಪ್ರದೇಶಗಳು ಅವುಗಳ ಪ್ರವೇಶಕ್ಕೆ ಹಸಿರು ತೆರಿಗೆಯನ್ನು ವಿಧಿಸಲಿವೆ. ಪ್ರವಾಸಕ್ಕಾಗಿ ಹೆಚ್ಚು ಹಣ ಪಾವತಿಸುವುದು ಬೇಸರ ತರಿಸಿದರೂ, ಈ ಹೊಸ ಶುಲ್ಕಗಳು ಏರುತ್ತಿರುವ ಸಮುದ್ರ ಮಟ್ಟ, ದಾಖಲೆಯ ಬಿಸಿಲು ಮತ್ತು ನೈಸರ್ಗಿಕ ವಿಪತ್ತುಗಳ ಜಗತ್ತಿನಲ್ಲಿ ನಮ್ಮ ನೆಚ್ಚಿನ ತಾಣಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡಲಿದೆ.

ಅಂತಾರಾಷ್ಟ್ರೀಯ ಪ್ರವಾಸ ಫೋರಂ ನೀಡಿರುವ ವರದಿಯಂತೆ 75% ಜಾಗತಿಕ ಪ್ರಯಾಣಿಕರು ಮುಂದಿನ ವರ್ಷದಲ್ಲಿ ಹೆಚ್ಚು ಸುಸ್ಥಿರವಾಗಿ ಪ್ರಯಾಣಿಸಲು ಬಯಸುತ್ತಾರೆ ಮತ್ತು 71% ಜನರು ತಾವು ಭೇಟಿ ನೀಡುವ ಸ್ಥಳಗಳನ್ನು ತಾವು ನೋಡಿದ್ದಕ್ಕಿಂತ ಉತ್ತಮವಾಗಿ ಇರಿಸಲು ಆಶಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಸುಮಾರು 80% ಪ್ರವಾಸಿಗಳು ಕನಿಷ್ಠ 10% ಹೆಚ್ಚು ತೆರಿಗೆಯನ್ನು ಪಾವತಿಸಲು ಸಿದ್ಧರಿದ್ದಾರೆ ಎಂದು ಹೇಳುತ್ತಿದೆ ಸಮೀಕ್ಷೆ.

2023ರ ಆಗಸ್ಟ್‌ನಲ್ಲಿ, ಹವಾಯಿ ದ್ವೀಪದ ಐತಿಹಾಸಿಕ ಪಟ್ಟಣ ಲಹೈನಾದಲ್ಲಿ ದೊಡ್ಡ ಪ್ರಮಾಣದ ಕಾಡ್ಗಿಚ್ಚು ಹರಡಿತ್ತು. ವಿಪರೀತ ಶಾಖದ ಕಾರಣದಿಂದ ಉಂಟಾದ ಚಂಡಮಾರುತದ ಬಿಸಿ ಗಾಳಿಯಿಂದ ಉಲ್ಬಣಗೊಂಡ ಈ ಬೆಂಕಿ 102 ಜನರನ್ನು ಬಲಿ ತೆಗೆದುಕೊಂಡು ನಗರದವರೆಗೂ ಹರಡಿ 2,000ಕ್ಕೂ ಹೆಚ್ಚು ಕಟ್ಟಡಗಳನ್ನು ನಾಶಪಡಿಸಿತು. ಇದು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಮಾರಕ ಹವಾಮಾನ ಸಂಬಂಧಿತ ಕಾಡ್ಗಿಚ್ಚು ಎಂದೇ ದಾಖಲಾಯಿತು. ಮುಂದಿನ ವರ್ಷದ ಮೇ ತಿಂಗಳಲ್ಲಿ ಹವಾಯಿ ಹವಾಮಾನ ಬಿಕ್ಕಟ್ಟಿಗೆ ಸ್ಪಷ್ಟವಾಗಿ ಸಂಬಂಧಿಸಿದಂತೆ ಮೊದಲ ಪ್ರವಾಸಿ ತೆರಿಗೆಯನ್ನು ಜಾರಿಗೆ ತಂದು Green Tax ಪರಿಧಿಯಲ್ಲಿ USA ಮೊದಲ ಹೆಜ್ಜೆ ಇಟ್ಟಿತು.

ಗ್ರೀನ್ ಫೀ ಎಂದು ಕರೆಯಲ್ಪಡುವ ಈ ಮಸೂದೆಯಲ್ಲಿ ವಿಧಿಸಲಾಗುವ ಈ ಶುಲ್ಕವು ಕಾಡ್ಗಿಚ್ಚು ಚೇತರಿಕೆ, ದ್ವೀಪವನ್ನು ಸುತ್ತುವರಿದ ಸಮುದ್ರದ ಒಳಗಿನ ಹವಳದ ಗಡ್ಡೆಗಳ ಪುನಃಸ್ಥಾಪನೆ ಮತ್ತು ಹವಾಮಾನ ಹೊಂದಾಣಿಕೆಗಾಗಿ ವಾರ್ಷಿಕವಾಗಿ $100 ಮಿಲಿಯನ್ ಸಂಗ್ರಹಿಸಿ ಬಳಸುವ ಉದ್ದೇಶವನ್ನು ಹೊಂದಿದೆ.

ಪ್ರವಾಸಿಗರು ಇಲ್ಲಿಗೆ ಬರುವುದು ನೈಸರ್ಗಿಕ ಸೌಂದರ್ಯದ ಆಸ್ವಾದನೆಗಾಗಿ. ಜಲಪಾತಗಳ ನೋಟವನ್ನು ಸವಿದು, ಜಲಕ್ರೀಡೆಗಳಲ್ಲಿ ಸುಖಿಸಿ, ಸಮುದ್ರ ಸಂಪತ್ತನ್ನು ಅವುಗಳ ಮೂಲ ಸ್ಥಳದಲ್ಲೇ ಹತ್ತಿರದಿಂದ ನೋಡಿ ಆನಂದಿಸಲು ಬರುತ್ತಾರೆ. ಆದರೆ ಆ ಸಂಪನ್ಮೂಲಗಳೇ ಒತ್ತಡದಲ್ಲಿವೆ. ಈ ಸ್ಥಳಗಳ ಕಾಳಜಿಗೆ ಕೊಡುಗೆ ನೀಡುವಂತೆ ಅವರನ್ನು ಕೇಳುವುದು ಹೊರೆಯಲ್ಲ. ಅವುಗಳ ಸಂರಕ್ಷಣೆಯ ಭಾಗವಾಗಲು ಪ್ರವಾಸಿಗೆ ಇದು ಒಂದು ಅವಕಾಶ. ಹವಾಯಿಯ ಭವಿಷ್ಯವನ್ನು ರಕ್ಷಿಸುವಲ್ಲಿ ನಾವೆಲ್ಲರೂ ಜವಾಬ್ದಾರಿಯನ್ನು ಹಂಚಿಕೊಳ್ಳಲು, ಪರಸ್ಪರ ಗೌರವವನ್ನು ಅನುಭವಿಸಲು ಇದೊಂದು ಅಭೂತಪೂರ್ವ ಅವಕಾಶ ಎನ್ನುತ್ತಿದ್ದಾರೆ ಅಲ್ಲಿನ ಜನ.

ಹವಾಮಾನ ಸಂಬಂಧಿತ ವಿಪತ್ತುಗಳು ತೀವ್ರಗೊಳ್ಳುತ್ತಿದ್ದಂತೆ, ಪ್ರಪಂಚದಾದ್ಯಂತದ ಇತರ ತಾಣಗಳು ಪ್ರವಾಸೋದ್ಯಮ ಆದಾಯವನ್ನು ಹೇಗೆ ಸಂಗ್ರಹಿಸಬೇಕು ಮತ್ತು ಅದನ್ನು ಹೇಗೆ, ಎಲ್ಲೆಲ್ಲಿ ವ್ಯಯಿಸಬೇಕು ಎನ್ನುವುದರ ಬಗ್ಗೆ ಮರುಚಿಂತನೆ ಮಾಡುತ್ತಿವೆ. Green Tax ಈಗ ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಲಿದೆ. ಪ್ರವಾಸಿಗಳಿಂದ ಸಂಗ್ರಹಿಸಿದ ತೆರಿಗೆಯನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದರ ಬಗ್ಗೆ ಒಂದೊಂದು ದೇಶವು ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಗ್ರೀಸ್ ದೇಶದಲ್ಲಿ ಈಗಾಗಲೇ ‘ರಾತ್ರಿ ವಾಸ್ತವ್ಯ ತೆರಿಗೆ’ಯನ್ನು ವಿಧಿಸಲಾಗುತ್ತಿದೆ. ಅಲ್ಲಿ ಪ್ರವಾಸಿಗರು ಈಗ ಹೊಟೇಲ್ ವರ್ಗ (Stars) ಮತ್ತು ಋತುಮಾನವನ್ನು ಅವಲಂಬಿಸಿ ತಂಗುವಷ್ಟು ರಾತ್ರಿಗಳಿಗೆ ೦.5 ರಿಂದ 1 ಪರ್ಸೆಂಟ್‌ನಷ್ಟು ಹೆಚ್ಚುವರಿ ತೆರಿಗೆ ನೀಡುತ್ತಿದ್ದಾರೆ. ಅಲ್ಲಿನ ಮೈಕೊನೊಸ್ ಮತ್ತು ಸ್ಯಾಂಟೋರಿನಿಯಂಥ ಜನಪ್ರಿಯ ದ್ವೀಪಗಳಲ್ಲಿ ಪ್ರವಾಸದ ಸೀಸನ್ ಅವಧಿಯಲ್ಲಿ ಪ್ರತಿ ವ್ಯಕ್ತಿಗೆ ಒಂದು ರಾತ್ರಿಯ ವಾಸ್ತವ್ಯಕ್ಕೆ 20 ಯುರೋಸ್ ಹೆಚ್ಚುವರಿ ಶುಲ್ಕವಿದೆ.

ಗ್ರೀಸ್ ಸರ್ಕಾರವು ವಾರ್ಷಿಕವಾಗಿ 400 ಮಿಲಿಯನ್ ಯುರೋಸ್ ಸಂಗ್ರಹಿಸಲಿದ್ದು ಇದನ್ನು ದೇಶದಲ್ಲಿ ನೀರಿನ ಸೆಲೆಗಳನ್ನು ವೃದ್ಧಿಸಲು, ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ. ಹಸಿರು ತೆರಿಗೆಯ ಮೂಲ ಉದ್ದೇಶವೇ ಪರಿಸರದ ವ್ಯವಸ್ಥೆಯ ಪುನಃಸ್ಥಾಪನೆಯಾಗಿದೆ.

fe460178-f7d7-4a26-b17b-103a71c1

ಹಸಿರು ತೆರಿಗೆ ತಲೆಬರಹದಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ವಿದೇಶಿ ಪ್ರವಾಸಿಗಳಿಗೆ 7 ಪೌಂಡ್‌ಗಳಷ್ಟು ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಅಲ್ಲಿನ ಸಮುದ್ರ ಸಂಪತ್ತಿನ ಸಂರಕ್ಷಣೆಗೆ ಮೀಸಲಿಡಲಾಗಿದೆ. ಮಾಲ್ಡೀವ್ಸ್ ದೇಶವು ಪ್ರವಾಸಿಗಳಿಗೆ 12 ಡಾಲರ್‌ಗಳಷ್ಟು ಹೆಚ್ಚಿನ ಶುಲ್ಕ ವಿಧಿಸಿ ಅದರಿಂದ ಬರುವ ಆದಾಯವನ್ನು ಅಲ್ಲಿನ ತ್ಯಾಜ್ಯ ನಿರ್ವಹಣೆ ಮತ್ತು ಕರಾವಳಿ ಸ್ಥಿತಿಸ್ಥಾಪಕತ್ವದ ರಕ್ಷಣೆಗಾಗಿ ಮೀಸಲಾಗುತ್ತಿದೆ.

ನ್ಯೂಜಿಲೆಂಡ್ ದೇಶದಲ್ಲಿ ಅಂತರಾಷ್ಟ್ರೀಯ ಪ್ರವಾಸಿಗಳಿಗೆ ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಸುಸ್ಥಿರ ಪ್ರವಾಸೋದ್ಯಮ ಹೊಂದಲು ಇರಲೇಬೇಕಾದ ಅವಶ್ಯಕತೆಗಳನ್ನು ಸೃಷ್ಟಿಸಲು ಕಾಯ್ದಿರಿಸಲಾಗಿದೆ. ಪ್ರಯಾಣದ ಒಟ್ಟು ವೆಚ್ಚಕ್ಕೆ ಹೋಲಿಸಿದರೆ, ಈ ಶುಲ್ಕಗಳು ಸಾಮಾನ್ಯವಾಗಿ ಸಾಧಾರಣವಾಗಿರುತ್ತವೆ. ಆದರೆ ಅವುಗಳನ್ನು ಚೆನ್ನಾಗಿ ನಿರ್ವಹಿಸಿದರೆ, ಅವುಗಳ ಪರಿಣಾಮವು ಪ್ರವಾಸೋದ್ಯಮಕ್ಕೆ ರೂಪಾಂತರಕಾರಿಯಾಗಿರಬಹುದು.

ಭಾರತದಲ್ಲಿ ಹಿಮಾಚಲಪ್ರದೇಶ, ಲಡಾಖ್‌ ಮತ್ತು ಸಿಕ್ಕಿಂ ರಾಜ್ಯಗಳು ಹಸಿರು ತೆರಿಗೆಯನ್ನು ಪ್ರವಾಸಿಗಳಿಂದ ವಸೂಲಿ ಮಾಡುತ್ತಿವೆ. ಪ್ರವಾಸೋದ್ಯಮ ತೆರಿಗೆಗಳು ಸುಸ್ಥಿರತೆ ಮತ್ತು ಹದಗೆಟ್ಟ ಹವಾಮಾನಕ್ಕೆ ಉಪಶಮನವನ್ನು ಮಾಡುವ ಆಶಯವನ್ನು ಇಟ್ಟುಕೊಂಡಿವೆ. ಪರಿಸರ ಕಾಳಜಿಯನ್ನು ಪ್ರವಾಸ ಎನ್ನುವ ಅಭಿರುಚಿಯಲ್ಲಿ ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡರೆ ಪ್ರವಾಸಿಗರು ತೆರಿಗೆ ಕೊಡಲು ಹಿಂಜರಿಯುವುದಿಲ್ಲ. ಅದೊಂದು ಸರಳ ಮತ್ತು ಸ್ಪಷ್ಟವಾದ ಆಯ್ಕೆಯಾಗಿರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?