Tuesday, November 17, 2026
Tuesday, November 17, 2026

ಊಟಿಯ ಆಧುನಿಕತೆಯ ಹೆಗ್ಗುರುತು ‘ಸ್ಟೋನ್‌ ಬಂಗ್ಲೋ’

ಇಂದಿನ ಆಧುನಿಕ ಊಟಿಯ ಹಿಂದೆ ಅಡಗಿರುವ ಇತಿಹಾಸದ ಹೆಜ್ಜೆ ಗುರುತುಗಳನ್ನು ಹುಡುಕಿದರೆ ಕಾಣಸಿಗುವುದು ‘ಸ್ಟೋನ್‌ ಬಂಗ್ಲೋ’. 1822ರಲ್ಲಿ ಜಾನ್‌ ಸುಲಿವಾನ್‌ ನಿರ್ಮಿಸಿದ ಈ ಬಂಗಲೆ ಊಟಿಯಲ್ಲಿ ಬ್ರಿಟಿಷರ ವಾಸ್ತುಶೈಲಿ ಮತ್ತು ಆಧುನಿಕ ಜೀವನಶೈಲಿಯ ಆರಂಭಕ್ಕೆ ಸಾಕ್ಷಿಯಾಗಿದೆ. ತಂಪಿನ ಊಟಿಯ ಪ್ರಕೃತಿ ಸೌಂದರ್ಯದ ನಡುವೆ ನಿಂತಿರುವ ಈ ಐತಿಹಾಸಿಕ ತಾಣ, ಇತಿಹಾಸಪ್ರಿಯ ಪ್ರವಾಸಿಗರಿಗೆ ಅಪರೂಪದ ಅನುಭವ ನೀಡುತ್ತದೆ.

  • ಅಮೃತ ಹೆಗಡೆ

ಆಧುನಿಕತೆಯ ಯಾವ ಅಬ್ಬರವೂ ಇಲ್ಲದ, ಬೂದು ಬಣ್ಣದ ಕಲ್ಲುಗಳ ಗೋಡೆಗಳು, ಸಾಂಪ್ರದಾಯಿಕ ಇಳಿಜಾರು ಚಾವಣಿ ಮತ್ತು ಎತ್ತರದ ಚಿಮಣಿಯಿಂದ ವಿಂಟೇಜ್‌ ನೋಟವನ್ನು ಹೊಂದಿರುವ ಬಂಗಲೆಯೊಂದು ಊಟಿಯ ಇತಿಹಾಸದ ಕಥೆ ಹೇಳುತ್ತದೆ.

ಊಟಿಯ ಪ್ರಪ್ರಥಮ ಬಂಗಲೆ ಎಂಬ ಖ್ಯಾತಿ ಪಡೆದ ಆ ಬಂಗಲೆಯೇ ʼಸ್ಟೋನ್‌ ಬಂಗ್ಲೋʼ. ಇದು ನಿರ್ಮಿಸಲ್ಪಟ್ಟಿದ್ದು 1822ರಲ್ಲಿ. ಜಾನ್‌ ಸುಲಿವಾನ್‌ (John Sullivan) ಎಂಬ ಬ್ರಿಟಿಷ್‌ ಅಧಿಕಾರಿಯೊಬ್ಬ ಈ ಮನೆಯನ್ನು ಉದಕಮಂಡಲದಲ್ಲಿ ಕಟ್ಟಿಸಿದ್ದ. ಊಟಿ ಎಂಬ ಸ್ವರ್ಗವೊಂದು ಆಧುನಿಕತೆಗೆ ತೆರೆದುಕೊಂಡಿದ್ದರ ಹೆಗ್ಗುರುತೇ ಈ ಬಂಗಲೆ. ಯುರೋಪಿಯನ್‌ ವಾಸ್ತುಶೈಲಿಯ ಅದ್ಭುತ ಬಂಗಲೆಯಾಗಿರುವ ಇದಕ್ಕೆ ಸ್ಥಳೀಯರು ಕಲ್‌ ಬಂಗ್ಲಾ ಎಂದು ಕರೆದಿದ್ದಾರೆ.

ಇದನ್ನೂ ಓದಿ: ನಿಮಗೆ ಊಟಿ ಗೊತ್ತು. ಆದರೆ ಕೂನೂರು ಗೊತ್ತಾ?

1820ರ ಸುಮಾರಿಗೆ ಕೊಯಮತ್ತೂರಿನ ಬ್ರಿಟಿಷ್‌ ಅಧಿಕಾರಿಯಾದ ಜಾನ್‌ ಸುಲಿವಾನ್‌ ಎಂಬಾತನು ತನ್ನ ತಂಡದೊಂದಿಗೆ ಊಟಿಗೆ ಬಂದಿದ್ದ. ಊಟಿಯ ಹವಾಮಾನ, ಪ್ರಕೃತಿ ಸೌಂದರ್ಯಕ್ಕೆ ಮನಸೋತುಹೋದ. ಯುರೋಪಿಯನ್‌ ಹವಾಮಾನದಂತೆ ತಂಪಾಗಿದ್ದ ಊಟಿಯಲ್ಲಿ ನೆಲೆಸುವುದಕ್ಕಾಗಿ ಬಂಗಲೆ ನಿರ್ಮಿಸಲು ನಿರ್ಧರಿಸಿದ್ದ. ಹೀಗಾಗಿ ಒಂದು ಎಕರೆ ಜಾಗಕ್ಕೆ ಒಂದು ರುಪಾಯಿ ಕೊಟ್ಟು, ಸ್ಥಳೀಯ ತೋಡಾ ಬುಡಕಟ್ಟು ಜನಾಂಗದವರಿಂದ ಭೂಮಿಯನ್ನು ಕೊಂಡುಕೊಂಡ ಜಾನ್‌ ಸುಲಿವಾನ್‌, ಯುರೋಪಿಯನ್‌ ವಾಸ್ತುಶೈಲಿಯಲ್ಲಿ ಒಂದು ಬಂಗಲೆಯನ್ನು ಕಟ್ಟಿಸಿದ್ದ. ಆ ಬಂಗಲೆಯೇ ಸ್ಟೋನ್‌ ಬಂಗ್ಲೋ. ಅಲ್ಲಿಂದಲೇ ಅಧಿಕೃತವಾಗಿ ಶುರುವಾಯ್ತು ಊಟಿಯ ಮೇಲಿನ ಬ್ರಿಟಿಷರ ಪಾರುಪತ್ಯ.

Untitled Design - 2026-11-17T155224.031

ಜಾನ್‌ ಸುಲಿವನ್‌ ಉದಕಮಂಡಲವನ್ನು ಏರುವುದಕ್ಕೂ ಮುಂಚೆ, ಈ ಸ್ಥಳ ಬುಡಕಟ್ಟು ಜನಾಂಗದವರ ತಾಣವಾಗಿತ್ತು. ತಲತಲಾಂತರದಿಂದ ತೋಡಾ, ಬಡಗ, ಕೋಟಾ, ಕುರುಂಬ, ಇರುಳ ಈ ಮುಂತಾದ ಹಲವು ಬುಡಕಟ್ಟು ಜನಾಂಗಗಳು ತಮ್ಮದೇ ತಾಂಡಾಗಳಲ್ಲಿ ಬದುಕು ಕಟ್ಟಿಕೊಂಡಿದ್ದವು. ಗುಡ್ಡದ ಇಳಿಜಾರಿನಲ್ಲಿ ರಾಗಿ, ಸಾಮೆ ಮುಂತಾದ ಧಾನ್ಯಗಳನ್ನು ಬೆಳೆಯುತ್ತಾ, ಎಮ್ಮೆ, ಕುರಿಗಳನ್ನು ಸಾಕುತ್ತಾ, ಜೀವನ ನಡೆಸುತ್ತಿದ್ದರು. ಇಂಥ ಬುಡಕಟ್ಟು ಜನಾಂಗಗಳಿಗೆ ಟೀ, ಕಾಫಿ, ಆಲೂಗಡ್ಡೆ, ಕ್ಯಾರೇಟ್‌, ಕೋಸುಗಳನ್ನು ಬೆಳೆಯಲು ಹೇಳಿಕೊಡಲಾಯಿತು. ತಮಗೆ ಬೇಕಾದ ಕೋಳಿ, ಕುರಿಗಳನ್ನು ಬೆಳೆಸಲು ತಾಕೀತು ಮಾಡಲಾಯಿತು. ಅಲ್ಲಿಯ ತನಕ ವಸ್ತು ವಿನಿಮಯ ಪದ್ಧತಿಯಲ್ಲಿ ಬದುಕುತ್ತಿದ್ದ ಅಲ್ಲಿಯ ಜನರಿಗೆ ಹಣದ ಉಪಯೋಗವನ್ನೂ ಕಲಿಸಲಾಯಿತು. ಹುಲ್ಲಿನ ಗುಡಿಸಿಲಿನಲ್ಲಿ ಬದುಕುತ್ತಿದ್ದ ಬುಡಕಟ್ಟು ಜನರೆಲ್ಲ ಬ್ರಿಟಿಷರಂತೆ ಕಲ್ಲುಮಣ್ಣುಗಳ ಮನೆಕಟ್ಟಿಕೊಳ್ಳಲು ಶುರುಮಾಡಿದ್ದರು. ಹೀಗೆ ಊಟಿಯ ಜೀವನ ಶೈಲಿಯನ್ನೇ ಬದಲಾಯಿಸಿ, ಆಧುನಿಕತೆಯ ಭವಿಷ್ಯ ಬರೆದ ಇತಿಹಾಸದ ಕಥೆಯನ್ನು ಈ ಬಂಗಲೆ ಈಗ ಹೇಳುತ್ತಿದೆ. ಊಟಿಯ ಪ್ರಸಿದ್ಧ ಪ್ರವಾಸಿತಾಣಗಳ ಪಟ್ಟಿಯಲ್ಲಿ ಈ ತಾಣದ ಹೆಸರಿಲ್ಲ. ಆದರೂ ಊಟಿಯ ಇತಿಹಾಸವನ್ನು ಅರಿಯುವ ಮನಸಿನ ಪ್ರವಾಸಿಗರಿಗೆ ಇದೊಂದು ಅಚ್ಚರಿ ಎಂಬುದಂತೂ ಸತ್ಯ.

ಈಗ ಸ್ಟೋನ್‌ ಬಂಗ್ಲೋದ ಒಳಗೆ ಒಂದು ಮ್ಯೂಸಿಯಂ ಇದೆ. ಊಟಿಯ ಬುಡಕಟ್ಟು ಜನಾಂಗಗಳಿಗೆ ಸೇರಿದ ಬಹಳಷ್ಟು ವಸ್ತುಗಳನ್ನು ಇಲ್ಲಿ ಇರಿಸಿ, ಆಸಕ್ತರಿಗೆ ಅವರ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಊಟಿ ಸರಕಾರ ಮಾಡುತ್ತಿದೆ.

ತನ್ನ ತಂಪು ಹವಾಮಾನ, ಅದ್ಭುತ ರೆರ್ಸಾಟ್, ಚಾಕೊಲೆಟ್‌, ಚೆಂದದ ಟೀ ತೋಟದ ಅನುಭವಗಳಿಗಾಗಿಯೇ ಖ್ಯಾತಿ ಪಡೆದಿರುವ ಇಂದಿನ ಮಾಡರ್ನ್‌ ಊಟಿಯ ಮೊಟ್ಟಮೊದಲ ಐತಿಹಾಸಿಕ ಬಂಗಲೆ ನೋಡಿ ನನಗಂತೂ ಖುಷಿಯಾಯ್ತು. ಊಟಿಯ ಆಧುನಿಕತೆಯ ಮೊದಲ ಮೆಟ್ಟಿಲಾದ ಈ ಬಂಗಲೆಯನ್ನು ನೀವೂ ಒಮ್ಮೆ ನೋಡಿಬನ್ನಿ.

ಮಾಹಿತಿಗಾಗಿ

ಊಟಿ ರೈಲ್ವೇ ನಿಲ್ದಾಣದಿಂದ ಕೇವಲ 3 ಕಿಮೀ. ದೂರದಲ್ಲಿರುವ ಸ್ಟೋನ್‌ ಬಂಗಲೆಗೆ ಟ್ಯಾಕ್ಸಿ, ಆಟೋ ಅಥವಾ ಬೈಕ್‌ನಲ್ಲಿ ಆರಾಮಾಗಿ ಬರಬಹುದು. ಬೆಳಗ್ಗೆ10ರಿಂದ ಸಂಜೆ 5ರ ತನಕ ಪ್ರವಾಸಿಗರಿಗೆ ಅವಕಾಶ ಇದೆ. ಎರಡನೆಯ ಶನಿವಾರ ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಎಲ್ಲ ದಿನಗಳಲ್ಲೂ ಆಸಕ್ತರು ಇಲ್ಲಿಗೆ ಭೇಟಿ ನೀಡಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ