Tuesday, November 17, 2026
Tuesday, November 17, 2026

ಜಂಗಲ್ ಲಾಡ್ಜಸ್‌ನ ನ್ಯಾಚುರಲಿಸ್ಟ್ ಜತೆಗೊಂದು ಮಾತುಕತೆ

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಅರಣ್ಯದ ನಡುವೆ ಇರುವ 'ಕೆ.ಗುಡಿ ಜಂಗಲ್ ಲಾಡ್ಜಸ್ ಕ್ಯಾಂಪ್' ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಈ ಕ್ಯಾಂಪ್‌ನಲ್ಲಿ ನ್ಯಾಚುರಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಅವರು ಮೂಲತಃ 'ಸೋಲಿಗ' ಟ್ರೈಬ್‌ಗೆ ಸೇರಿದವರಾಗಿದ್ದಾರೆ. ಹೌಸ್‌ಕೀಪಿಂಗ್ ಕೆಲಸದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಸ್ವಂತ ಆಸಕ್ತಿ ಹಾಗೂ ಪರಿಶ್ರಮದಿಂದ ಇಂಗ್ಲಿಷ್ ಕಲಿತು ಇಂದು ಪ್ರವಾಸಿಗರಿಗೆ ಕಾಡಿನ ಪರಿಚಯ ಮಾಡಿಕೊಡುವ ನ್ಯಾಚುರಲಿಸ್ಟ್ ಆಗಿ ಬೆಳೆದಿದ್ದಾರೆ. ಕಾಡಿನ ನಂಟು, ವನ್ಯಜೀವಿಗಳ ಬಗೆಗಿನ ಜ್ಞಾನ ಹಾಗೂ ಪ್ರವಾಸೋದ್ಯಮದ ಕುರಿತಾದ ಅವರ ದೃಷ್ಟಿಕೋನವನ್ನು ಈ ವಿಶೇಷ ಸಂದರ್ಶನದಲ್ಲಿ ವಿವ

ನಿಮ್ಮ ಹಿನ್ನೆಲೆ ಮತ್ತು ನ್ಯಾಚುರಲಿಸ್ಟ್ ಆಗಿ ನಿಮ್ಮ ಪ್ರಯಾಣದ ಬಗ್ಗೆ ತಿಳಿಸಿ.

-ನಾನು ಕೆ.ಗುಡಿ ಕ್ಯಾಂಪ್‌ ಪಕ್ಕದಲ್ಲೇ ಇರುವ ಕನ್ನೇರಿ ಕಾಲೋನಿ ಎಂಬ ಸೋಲಿಗ ಗಿರಿಜನ ಹಾಡಿಯಲ್ಲಿ ಕಳೆದ 21 ವರ್ಷಗಳಿಂದ ವಾಸವಿದ್ದೇನೆ. ನಾನು ಜಂಗಲ್ ಲಾಡ್ಜಸ್ ಸಂಸ್ಥೆಯನ್ನು ಸೇರಿದಾಗ ಆರಂಭದಲ್ಲಿ ಹೌಸ್‌ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕಾಡಿನ ಮಧ್ಯೆಯೇ ಬೆಳೆದ ನನಗೆ ಸ್ಥಳೀಯ ಪ್ರಾಣಿ-ಪಕ್ಷಿಗಳು ಹಾಗೂ ಕಾಡಿನ ಬಗ್ಗೆ ಮೊದಲೇ ಜ್ಞಾನವಿತ್ತು, ಆದರೆ ನನಗೆ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ನಂತರ ನಾನು ಟ್ರ್ಯಾಕಿಂಗ್ ಕೆಲಸಕ್ಕೆ ಸೇರಿಕೊಂಡೆ. ನಮ್ಮ ಕಾಡಿನಲ್ಲೇ ನಮಗೆ ಉದ್ಯೋಗಾವಕಾಶ ಸಿಕ್ಕಿರುವಾಗ ಅದನ್ನು ಏಕೆ ಕಲಿಯಬಾರದು ಎಂಬ ತೀವ್ರ ಆಸಕ್ತಿಯಿಂದ ಇಂಗ್ಲಿಷ್ ಹಾಗೂ ಕಾಡಿನ ಬಗ್ಗೆ ವಿಶೇಷ ತರಬೇತಿ ಪಡೆದು, ಈಗ ನ್ಯಾಚುರಲಿಸ್ಟ್ ಆಗಿ ಕೆಲಸ ಮುಂದುವರಿಸುತ್ತಿದ್ದೇನೆ.

ಇದನ್ನೂ ಓದಿ: ಕಾಡಿನ ವಿಸ್ಮಯಗಳನ್ನು ಬಿಚ್ಚಿಡುವ ನ್ಯಾಚುರಲಿಸ್ಟ್

Untitled Design - 2026-11-17T154042.248

ಕೆ.ಗುಡಿ ಕ್ಯಾಂಪ್ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಐತಿಹಾಸಿಕ ವಿಶೇಷತೆಗಳೇನು?

-ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶವು ಒಟ್ಟು 574 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. 'ಕೆ.ಗುಡಿ' ಎಂದರೆ 'ಖ್ಯಾತದೇವರಾಯನ ಗುಡಿ' ಎಂದರ್ಥ, ಇದು ನಮ್ಮ ಸೋಲಿಗರ ಆರಾಧ್ಯ ದೈವವಾಗಿದೆ. ಪ್ರತಿ ಶುಕ್ರವಾರ ಮತ್ತು ಸೋಮವಾರ ಸೋಲಿಗರು ಈ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಬೇಟೆಗಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಸುಮಾರು 100 ರಿಂದ 120 ವರ್ಷ ಹಳೆಯದಾದ ಅವರ ಹಂಟಿಂಗ್ ಲಾಡ್ಜ್‌ಗಳು ಮತ್ತು ಅವರು ನೆಟ್ಟಿದ್ದ ದಾಸವಾಳದ ಮರಗಳು ಇಂದಿಗೂ ಇಲ್ಲಿ ಜೀವಂತವಾಗಿವೆ. ನಮ್ಮ ಕ್ಯಾಂಪ್‌ನಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ನಮ್ಮದೇ ಸೋಲಿಗ ಕಾಲೋನಿಯವರಾಗಿದ್ದಾರೆ. ಇಲ್ಲಿ 100-120 ವರ್ಷ ಹಳೆಯದಾದ ಆನೆಗಳ ಐಬಿ ಹಾಗೂ ಹಳೆಯ ಮರಗಳನ್ನು ಮಹಾರಾಜರು ಸಂರಕ್ಷಿಸಿದ್ದರು.

ಪ್ರವಾಸಿಗರಿಗೆ ಕ್ಯಾಂಪ್‌ನಲ್ಲಿರುವ ದಿನಚರಿ, ಚಟುವಟಿಕೆಗಳು ಹಾಗೂ ವ್ಯವಸ್ಥೆ ಹೇಗಿರುತ್ತದೆ?

-ಪ್ರವಾಸಿಗರು ಮಧ್ಯಾಹ್ನ 12:30 ರಿಂದ 1:00 ಗಂಟೆಯೊಳಗೆ ಕ್ಯಾಂಪ್‌ಗೆ ಆಗಮಿಸುತ್ತಾರೆ. ಆಗಮಿಸುವ ಮುನ್ನ ಬೆಳಗ್ಗೆ 9:30ಕ್ಕೆ ನಾವು ಅವರಿಗೆ ಕರೆ ಮಾಡಿ, ಅವರು ಬರುವ ದಾರಿ ಮತ್ತು ಅವರ ಊಟದ ಆದ್ಯತೆಯಾದ ಸಸ್ಯಾಹಾರಿ, ಮಾಂಸಾಹಾರಿ ಅಥವಾ ಜೈನ್ ಊಟದ ಬಗ್ಗೆ ಮಾಹಿತಿ ಪಡೆಯುತ್ತೇವೆ. ಅವರು ಬಂದ ತಕ್ಷಣ ವೆಲ್‌ಕಮ್ ಜ್ಯೂಸ್ ನೀಡಿ, ಗುರುತಿನ ಚೀಟಿಗಳನ್ನು ಸಂಗ್ರಹಿಸಿ ರೂಮ್‌ಗಳನ್ನು ನೀಡಲಾಗುತ್ತದೆ. ಮಧ್ಯಾಹ್ನ 1:30 ರಿಂದ 2:30ರವರೆಗೆ ಊಟದ ವ್ಯವಸ್ಥೆ ಇರುತ್ತದೆ ಹಾಗೂ 3:30ಕ್ಕೆ ಟೀ-ಕಾಫಿ ನೀಡುತ್ತಾ, ಸಫಾರಿ ಮತ್ತು ಬಿ.ಆರ್.ಟಿ ಕಾಡಿನ ಬಗ್ಗೆ ಬ್ರೀಫಿಂಗ್ ನೀಡುತ್ತೇವೆ. ಬಳಿಕ 3:30 ರಿಂದ 6:30ರವರೆಗೆ ಸಫಾರಿ ಇರುತ್ತದೆ. ಸಫಾರಿಯಿಂದ ಬಂದ ಬಳಿಕ ಸ್ನ್ಯಾಕ್ಸ್ ಜತೆಗೆ ವನ್ಯಜೀವಿ ಸಾಕ್ಷ್ಯಚಿತ್ರ ಪ್ರದರ್ಶನವಿರುತ್ತದೆ ಹಾಗೂ 8:30ಕ್ಕೆ ರಾತ್ರಿಯ ಭೋಜನದೊಂದಿಗೆ ಪ್ರವಾಸಿಗರೊಡನೆ ಕಾಡಿನ ಬಗ್ಗೆ ಚರ್ಚಿಸುತ್ತೇವೆ. ನಮ್ಮಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಸಂಜೆ 6:30 ರಿಂದ 10:00 ಗಂಟೆಯವರೆಗೆ ಜನರೇಟರ್ ಮೂಲಕ ವಿದ್ಯುತ್ ಒದಗಿಸುತ್ತೇವೆ ಮತ್ತು ಆ ನಂತರ 4-5 ಗಂಟೆಗಳ ಕಾಲ ಯುಪಿಎಸ್ ಬ್ಯಾಟರಿ ಬ್ಯಾಕಪ್ ಇರುತ್ತದೆ. ಯಾವುದೇ ತೊಂದರೆಯಾಗದಿರಲಿ ಎಂದು ಪ್ರತಿಯೊಬ್ಬರಿಗೂ ಟಾರ್ಚ್ ಲೈಟ್ ಮತ್ತು ಎಮರ್ಜೆನ್ಸಿ ಲ್ಯಾಂಪ್‌ಗಳನ್ನು ಮೊದಲೇ ಕೊಟ್ಟಿರುತ್ತೇವೆ. ನಾವು ಹುಲಿ ಸಂರಕ್ಷಿತ ಪ್ರದೇಶದ ಮಧ್ಯದಲ್ಲಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಕ್ಯಾಂಪಸ್ ಒಳಗೆ ಮಾತ್ರ ಪಕ್ಷಿ ವೀಕ್ಷಣೆ ಮತ್ತು ನೇಚರ್ ವಾಕ್ ಮಾಡಿಸುತ್ತೇವೆ, ರಾತ್ರಿ ವೇಳೆಯಲ್ಲಿ ಹೊರಗಡೆ ನೈಟ್ ವಾಕ್ ಇರುವುದಿಲ್ಲ.

Untitled Design - 2026-11-17T153913.472

ಕಾಡಿನಲ್ಲಿ ನಿಮ್ಮ ಅನುಭವಕ್ಕೆ ಬಂದ ಅಪರೂಪದ ಘಟನೆಗಳು ಹಾಗೂ ಜೀವವೈವಿಧ್ಯದ ಬಗ್ಗೆ ವಿವರಿಸಿ.

-2004ರಲ್ಲಿ ನನಗೆ ಇಂಗ್ಲಿಷ್ ಹಾಗೂ ಪಕ್ಷಿಗಳ ವೈಜ್ಞಾನಿಕ ಹೆಸರುಗಳು ಸರಿಯಾಗಿ ಗೊತ್ತಿರದ ಕಾರಣ ಪ್ರವಾಸಿಗರೊಬ್ಬರಿಗೆ 'ಬ್ರಾಹ್ಮಿನಿ ಕೈಟ್' ಪಕ್ಷಿಯನ್ನು ನೋಡಿ ನಾನು 'ಈಗಲ್' ಎಂದು ಹೇಳಿದ್ದೆ. ಅದಕ್ಕೆ ಅವರು ಅದು ಈಗಲ್ ಅಲ್ಲ, 'ಬ್ರಾಹ್ಮಿನಿ ಕೈಟ್' ಎಂದು ನನ್ನನ್ನು ತಿದ್ದಿದ ಘಟನೆ ನನ್ನನ್ನು ಕಾಡಿನ ಪ್ರತಿಯೊಂದು ಪಕ್ಷಿ, ಗಿಡ, ಮರಗಳ ಹೆಸರುಗಳನ್ನು ಕಲಿಯುವಂತೆ ಪ್ರೇರೇಪಿಸಿತು. ಕಾರ್ತಿಕ್ ಸರ್, ಅನಿಕೇತ್ ಸರ್ ಮತ್ತು ಶರತ್ ಸಂಪತ್ ಅವರಂತಹ ಚೀಫ್ ನ್ಯಾಚುರಲಿಸ್ಟ್‌ಗಳು ನನಗೆ ತರಬೇತಿ ನೀಡಿ ಎಲ್ಲವನ್ನೂ ಕಲಿಸಿದರು. ಒಮ್ಮೆ ಸಫಾರಿಯಲ್ಲಿ ಕೆರೆಯ ಮಧ್ಯದಲ್ಲಿದ್ದ ಮರದ ದಿಮ್ಮಿಯ ಮೇಲೆ ಆಮೆಯೊಂದು ಕುಳಿತಿತ್ತು ಮತ್ತು ಆ ಆಮೆಯ ಮೇಲೆಯೇ 'ಕಾರ್ಮೊರೆಂಟ್' ಎಂಬ ಪಕ್ಷಿಯೊಂದು ಕುಳಿತಿದ್ದ ಅದ್ಭುತ ದೃಶ್ಯವನ್ನು ನಾನು ನೋಡಿದ್ದೇನೆ. ಜೀವವೈವಿಧ್ಯದ ಬಗ್ಗೆ ಹೇಳುವುದಾದರೆ, ನಮ್ಮ ಕಾಡಿನಲ್ಲಿ ಕುರುಚಲು ಕಾಡು, ಒಣ ಎಲೆ ಉದುರುವ ಕಾಡು, ತೇವಭರಿತ ಎಲೆ ಉದುರುವ ಕಾಡು, ಅರೆ-ನಿತ್ಯಹರಿದ್ವರ್ಣ, ನಿತ್ಯಹರಿದ್ವರ್ಣ ಮತ್ತು ಶೋಲಾ ಕಾಡುಗಳು ಎಂಬ 6 ರೀತಿಯ ಅರಣ್ಯ ಪ್ರದೇಶಗಳಿವೆ. ಕೆ.ಗುಡಿ ಕ್ಯಾಂಪ್ ಪ್ರದೇಶವು ಒಣ ಮತ್ತು ತೇವಭರಿತ ಎಲೆ ಉದುರುವ ಕಾಡುಗಳ ಮಿಶ್ರಣವಾಗಿದೆ. ಇಲ್ಲಿ ವಲಸೆ ಮತ್ತು ಸ್ಥಳೀಯ ಸೇರಿದಂತೆ ಒಟ್ಟು 274 ಜಾತಿಯ ಪಕ್ಷಿಗಳಿವೆ ಹಾಗೂ ವನ್ಯಜೀವಿಗಳ ಪೈಕಿ ನಮ್ಮಲ್ಲಿ 68 ಹುಲಿಗಳು, 72 ಚಿರತೆಗಳು, ಕಾಡುನಾಯಿಗಳು, ಸ್ಲಾತ್ ಕರಡಿಗಳು ಮತ್ತು 619 ಆನೆಗಳಿವೆ. ಮಳೆಗಾಲದಲ್ಲಿ ಗೆದ್ದಲು ಹುಳು ಮತ್ತು ಜೇನು ತಿನ್ನಲು ಬರುವ ಕರಡಿಗಳು ಹಾಗೂ ಅವುಗಳು ಮಣ್ಣು ತೋಡಿದ ಗುರುತುಗಳು ಹೆಚ್ಚಾಗಿ ಕಾಣಸಿಗುವುದರಿಂದ, ಮಳೆಗಾಲದಲ್ಲಿ 'ಸ್ಲಾತ್ ಬೇರ್' ವೀಕ್ಷಣೆಗೆ ಇದು ಅತ್ಯುತ್ತಮ ಸಮಯವಾಗಿದೆ.

ಕಾಡಿನಲ್ಲಿ ಪ್ರಸ್ತುತ ಇರುವ ಸವಾಲುಗಳೇನು? ಹಾಗೂ ಇಲ್ಲಿರುವ ಟ್ರೈಬ್‌ ಬಗ್ಗೆ ಹೇಳಿ.

-'ಲಾಂಟಾನಾ' ಎಂಬ ಕಳೆಗಿಡ ಇಡೀ ಕಾಡನ್ನು ಆವರಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದ್ದು, ಇದರಿಂದಾಗಿ ಸಸ್ಯಾಹಾರಿ ಪ್ರಾಣಿಗಳಿಗೆ ತಿನ್ನಲು ಹುಲ್ಲು ಸಿಗುತ್ತಿಲ್ಲ. ಹಕ್ಕುಗಳ ಬಗ್ಗೆ ಹೇಳುವುದಾದರೆ, 2006ರ ಸುಪ್ರೀಂ ಕೋರ್ಟ್ ಆದೇಶದಂತೆ ಸೋಲಿಗರಿಗೆ ಕಾಡಿನಲ್ಲಿ ಜೇನುತುಪ್ಪ, ನೆಲ್ಲಿಕಾಯಿ, ಸೀಗೆಕಾಯಿ, ಪಾಚಿಯಂಥ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ನಡೆಸಲು ಅವಕಾಶ ನೀಡಲಾಗಿದೆ ಹಾಗೂ ಯಾವುದೇ ತೊಂದರೆಯಿಲ್ಲದೆ ಅವರು ಬದುಕುತ್ತಿದ್ದಾರೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿಮ್ಮ ಸಂದೇಶವೇನು?

-ಪ್ರವಾಸಿಗರಿಗೆ ನನ್ನ ಕಿವಿಮಾತು ಎಂದರೆ, ಕಾಡಿಗೆ ಬರುವಾಗ ಕೇವಲ ಹುಲಿ ಅಥವಾ ಚಿರತೆಯನ್ನು ನೋಡುವ ಉದ್ದೇಶದಿಂದ ಬರಬಾರದು, ಬದಲಾಗಿ ಕಾಡಿನ ಪ್ರಶಾಂತತೆ, ಶುದ್ಧ ಗಾಳಿ ಮತ್ತು ಪ್ರಕೃತಿಯನ್ನು ಆನಂದಿಸಲು ಬರಬೇಕು. ಕಾಡಿನೊಳಗೆ ಪ್ಲಾಸ್ಟಿಕ್ ಎಸೆಯಬಾರದು, ಜೋರಾಗಿ ಮಾತನಾಡಬಾರದು ಹಾಗೂ ಪ್ರಾಣಿಗಳಿಗೆ ತೊಂದರೆ ನೀಡಬಾರದು. ಕ್ಯಾಂಪ್‌ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರಕೃತಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂಬುದು ನನ್ನ ಕಳಕಳಿಯ ವಿನಂತಿಯಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್