Thursday, October 8, 2026
Thursday, October 8, 2026

ಕಾಡಿನ ವಿಸ್ಮಯಗಳನ್ನು ಬಿಚ್ಚಿಡುವ ನ್ಯಾಚುರಲಿಸ್ಟ್

ನಾವು ಎಕೋ-ಟೂರಿಸಂ ಅನ್ನು ಪ್ರಮೋಟ್ ಮಾಡುತ್ತಿದ್ದು, JLR ವತಿಯಿಂದ ಸ್ಥಳೀಯ ಶಾಲಾ ಮಕ್ಕಳನ್ನು ಸಫಾರಿಗೆ ಕರೆದುಕೊಂಡು ಹೋಗಿ ಅರಿವು ಮೂಡಿಸುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಪರಿಸರದ ಬಗ್ಗೆ ಶಿಕ್ಷಣ ನೀಡುವುದರಿಂದ ಮುಂದಿನ ಪೀಳಿಗೆಗೆ ಕಾಡನ್ನು ಉಳಿಸಲು ಸಹಾಯವಾಗುತ್ತದೆ. ಹೀಗಾಗಿ ಸಫಾರಿಗೆ ಬರುವವರು ಕೇವಲ ಪ್ರವಾಸ ಎಂದಷ್ಟೇ ಅಲ್ಲದೆ, ಅರಿವನ್ನು ಹೆಚ್ಚಿಸಿಕೊಳ್ಳುವ, ಕಾಡಿನ ಜತೆ ಬೆರೆಯುವ ಸಮಯ ಎಂದು ಭಾವಿಸಿ ಬಂದರೆ ಒಳ್ಳೆಯದು.

ದಟ್ಟವಾದ ಕಾಡು, ಪ್ರಾಣಿಗಳ ನಿಗೂಢ ಹೆಜ್ಜೆಗುರುತುಗಳು ಮತ್ತು ಮರಗಿಡಗಳ ನಡುವೆ ಅಡಗಿರುವ ಸಾವಿರಾರು ರೋಚಕ ಕಥೆಗಳು... ಇವೆಲ್ಲವನ್ನೂ ಪ್ರವಾಸಿಗರಿಗೆ ಉಣಬಡಿಸುವವರು ಸಫಾರಿ ನ್ಯಾಚುರಲಿಸ್ಟ್‌ಗಳು. ನಾಗರಹೊಳೆಯಂಥ ಸುಂದರ ಅರಣ್ಯಗಳಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ, ಜೆಎಲ್‌ಆರ್ (JLR) ಕಿಂಗ್ಸ್ ಸ್ಯಾಂಕ್ಚುರಿ ರೆಸಾರ್ಟ್‌ನ ನ್ಯಾಚುರಲಿಸ್ಟ್ ವಿಜಯ್‌ ಜತೆಗಿನ ವಿಶೇಷ ಸಂದರ್ಶನ ಇಲ್ಲಿದೆ. ಪ್ರಕೃತಿ, ಪ್ರಾಣಿಗಳ ವರ್ತನೆ, ಪ್ರವಾಸಿಗರ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತಾದ ಅವರ ರೋಚಕ ಅನುಭವದ ಮಾತುಗಳು ನಿಮ್ಮ ಮುಂದಿವೆ.

ನೀವು ಎಷ್ಟು ವರ್ಷಗಳಿಂದ ಈ ವೃತ್ತಿಯಲ್ಲಿದ್ದೀರಿ?

ನಾನು ಪ್ರಸ್ತುತ ಈ ಪ್ರಾಪರ್ಟಿಗೆ ಬಂದು 5 ವರ್ಷಗಳಾಗಿವೆ. ಇದಕ್ಕೂ ಮುನ್ನ ಭದ್ರಾ ಟೈಗರ್ ರಿಸರ್ವ್‌ನ ಲಕ್ಕವಳ್ಳಿಯಲ್ಲಿರುವ ರಿವರ್ ಟರ್ನ್ ಲಾಡ್ಜ್‌ನಲ್ಲಿ ಒಂಬತ್ತುವರೆ ವರ್ಷ ಕೆಲಸ ಮಾಡಿದ್ದೆ. 2021ರಲ್ಲಿ ಅಲ್ಲಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದೆ.

ಇದನ್ನೂ ಓದಿ: ರೋರಿಕ್–ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಕೈಗೊಳ್ಳಲಾಗುತ್ತಿರುವ ಎಕೋ ಟೂರಿಸಂ ಕಾಮಗಾರಿಗಳನ್ನು ಚುರುಕುಗೊಳಿಸಿ: ಕೆ.ಜೆ. ಜಾರ್ಜ್

ನಿಮ್ಮ ಜೆಎಲ್‌ಆರ್ (JLR) ಪ್ರಾಪರ್ಟಿ ಹಾಗೂ ಸಫಾರಿ ಬಗ್ಗೆ ಮಾಹಿತಿ ನೀಡಬಹುದಾ?

ನಮ್ಮ ರೆಸಾರ್ಟ್ ಹೆಸರು ಜೆಎಲ್‌ಆರ್ ಕಿಂಗ್ಸ್ ಸ್ಯಾಂಕ್ಚುರಿ. ಇದು ನಾಗರಹೊಳೆ ಟೈಗರ್ ರಿಸರ್ವ್‌ನ ಕೊಡಗು ಭಾಗದಲ್ಲಿ, ಅಂದರೆ ಕುಟ್ಟ ಮತ್ತು ಪೊನ್ನಂಪೇಟೆ ಕಡೆಗೆ ಬರುತ್ತದೆ. ಇದರಲ್ಲಿ ಒಟ್ಟು 22 ಕೊಠಡಿಗಳಿದ್ದು, 9 ಕೊಠಡಿಗಳ ಸ್ಟ್ಯಾಂಡರ್ಡ್ ಹಾಗೂ 12-13 ಕೊಠಡಿಗಳ ಮಹಾರಾಜ ಎಂಬ ಎರಡು ಪ್ಯಾಕೇಜ್‌ಗಳಿವೆ. ಎರಡೂ ಪ್ಯಾಕೇಜ್‌‌ಗಳಲ್ಲಿ ಸಫಾರಿ ಸೇರಿರುತ್ತದೆ. ನಮ್ಮ ಸಫಾರಿ ವಲಯವು ಸುಮಾರು 15 ರಿಂದ 16 ಚದರ ಕಿಮೀ. ವಿಸ್ತೀರ್ಣ ಹೊಂದಿದ್ದು, ವೀರನಹೊಸಹಳ್ಳಿ ಗೇಟ್‌ನಿಂದ ಸಫಾರಿ ಶುರುವಾಗುತ್ತದೆ. ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 3 ರಿಂದ 6 ಗಂಟೆಯವರೆಗೆ, ಒಟ್ಟು 3 ಗಂಟೆಗಳ ಸಫಾರಿ ಇರುತ್ತದೆ.

Untitled design - 2026-10-08T171128.320

ಭದ್ರಾ ಮತ್ತು ನಾಗರಹೊಳೆ ಕಾಡುಗಳ ನಡುವಿನ ವ್ಯತ್ಯಾಸಗಳೇನು?

ಭದ್ರಾ ಕಾಡು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದೆ. ನಾಗರಹೊಳೆ ಕಾಡು ಬಂಡೀಪುರ, ಮದುಮಲೈ ಮತ್ತು ವಯನಾಡು ಕಾಡುಗಳೊಂದಿಗೆ ಸಂಪರ್ಕ ಹೊಂದಿದ್ದು, ಇವೆಲ್ಲವನ್ನೂ ಸೇರಿಸಿ ನೀಲಗಿರಿ ಬಯೋಸ್ಪಿಯರ್ ಎನ್ನುತ್ತಾರೆ. ಈ ನಾಲ್ಕು ರಿಸರ್ವ್‌ಗಳಲ್ಲಿ ಒಟ್ಟು 2000ದಿಂದ 2500 ಆನೆಗಳಿವೆ. ನಾಗರಹೊಳೆಯೊಂದರಲ್ಲೇ ಸುಮಾರು 135ಕ್ಕೂ ಹೆಚ್ಚು ಹುಲಿಗಳು ಹಾಗೂ 600ಕ್ಕೂ ಹೆಚ್ಚು ಆನೆಗಳಿವೆ. ಕಬಿನಿ ಭಾಗದ ಕಾಡು ಒಣ ಮತ್ತು ತೇವದಿಂದ ಕೂಡಿದ್ದರೆ, ಕೊಡಗು ಭಾಗದ ನಾಗರಹೊಳೆಯಲ್ಲಿ ಒಣ, ತೇವ ಹಾಗೂ ಸೆಮಿ-ಎವರ್‌ಗ್ರೀನ್ ಕಾಡುಗಳು ಸಿಗುತ್ತವೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಜವಳು ಪ್ರದೇಶ, ಇದನ್ನು ಸ್ಥಳೀಯರು 'ಹಡ್ಲು' ಎನ್ನುತ್ತಾರೆ. ಕಪ್ಪು ಮಣ್ಣಿನ ಈ ಜಾಗ ಮಳೆಗಾಲದಲ್ಲಿ ಸ್ಪಾಂಜ್‌ನಂತೆ ನೀರನ್ನು ಹಿಡಿದಿಟ್ಟುಕೊಂಡು, ಬೇಸಗೆಯಲ್ಲಿ ಹೊರಬಿಡುತ್ತದೆ. ಇಲ್ಲಿ ಕಬಿನಿಗೆ ಹೋಲಿಸಿದರೆ ಬಿಗ್‌ ಕ್ಯಾಟ್ಸ್‌ ದರ್ಶನ ಸ್ವಲ್ಪ ಕಡಿಮೆ, ಆದರೆ ಆನೆ, ಕಾಡುಕೋಣ ಮತ್ತು ಕಾಡುನಾಯಿಗಳು ಹೆಚ್ಚಾಗಿ ಕಾಣಸಿಗುತ್ತವೆ.

ಪ್ರವಾಸಕ್ಕೆ ಬಂದವರನ್ನು ಕೂರಿಸಿಕೊಂಡು ಕಾಡಿನ ಕಥೆಗಳನ್ನು ಹೇಳುವುದು ಎಷ್ಟು ಮುಖ್ಯ?

ಬಹಳ ಮುಖ್ಯ. ಮರಗಳ ಬಗ್ಗೆ ಹೇಳುವುದಾದರೆ, ಮರದ ತೊಗಟೆಯ ಮೇಲಿರುವ ಲೈಕನ್ (Lichen) ಬಗ್ಗೆ ಹೇಳುತ್ತೇವೆ. ಮರದಿಂದ ಬೀಳುವ ಒಣಗಿದ ಎಲೆಗಳು ಕಾಂಪೋಸ್ಟ್ ಆಗುವ ಪ್ರಕ್ರಿಯೆ ಹಾಗೂ ಮಳೆ ಬಂದಾಗ ಮಣ್ಣಿನ ಸವೆತವನ್ನು ತಡೆಯುವ ಬಗೆಯನ್ನು ವಿವರಿಸುತ್ತೇವೆ. ಬಿದಿರಿನ ಜೀವಿತಾವಧಿ ಮತ್ತು ಅದನ್ನು ತಿನ್ನುವ ಪ್ರಾಣಿಗಳ ಬಗ್ಗೆ ತಿಳಿಸುತ್ತೇವೆ. ಆನೆಗಳು ಬಿದಿರಿನಲ್ಲಿರುವ ನಾರಿನಂಶಕ್ಕಾಗಿ ಅದನ್ನು ಹೆಚ್ಚಾಗಿ ತಿನ್ನುತ್ತವೆ. ಆನೆ ತಿಂದ ಲದ್ದಿ ಬಿದ್ದಾಗ, ಸಗಣಿ ಹುಳುಗಳು (Dung beetles) ಅದನ್ನು ಉಂಡೆಗಳನ್ನಾಗಿ ಮಾಡಿ ಒಳಗೆ ಮೊಟ್ಟೆ ಇಡುತ್ತವೆ ಹಾಗೂ ಲಾರ್ವಾಗಳು ಅದನ್ನು ತಿಂದು ಬೆಳೆಯುತ್ತವೆ. ಪಟ್ಟೆ ಕತ್ತಿನ ಮುಂಗುಸಿಗಳು (Stripe-necked mongooses) ಈ ಹುಳದ ಲಾರ್ವಾಗಳನ್ನು ತಿನ್ನುತ್ತವೆ. ಇದು ಕಾಡಿನ ಅದ್ಭುತ ಆಹಾರ ಸರಪಳಿ. ಉದಾಹರಣೆಗೆ, ಮತ್ತಿ ಮರದ ತೊಗಟೆ ನೋಡಲು ಮೊಸಳೆಯ ಚರ್ಮದಂತಿರುತ್ತದೆ ಎಂದು ಹೇಳುತ್ತೇವೆ. ಈ ರೀತಿ ಕಥೆಗಳ ಮೂಲಕ ವಿವರಿಸಿದಾಗ ಅವರು ಖುಷಿಪಡುತ್ತಾರೆ.

ಸಫಾರಿಯಲ್ಲಿ ಹುಲಿ ಕಾಣಿಸದಿದ್ದಾಗ ನಿರಾಸೆಗೊಳ್ಳುವ ಪ್ರವಾಸಿಗರನ್ನು ಹೇಗೆ ನಿಭಾಯಿಸುತ್ತೀರಿ?

ಹುಲಿ ನೋಡಲೇಬೇಕೆಂದು ಬಂದವರನ್ನು ನಿಭಾಯಿಸುವುದು ಸ್ವಲ್ಪ ಕಷ್ಟ. ಆದರೆ ಫ್ಯಾಮಿಲಿ ಜತೆ ಬಂದವರಿಗೆ ಸಫಾರಿಯಲ್ಲಿ ಕಾಡು, ಮರಗಳ ವಿಶೇಷತೆ ಮತ್ತು ಪ್ರಾಣಿಗಳ ಬಗ್ಗೆ ಎಕ್ಸ್‌ಪ್ಲೈನ್ ಮಾಡುತ್ತೇವೆ. ಅವರ ಗಮನವನ್ನು ಇಡೀ ಕಾಡಿನ ಅಂದದ ಕಡೆಗೆ ಸೆಳೆಯುತ್ತೇವೆ. ಫೊಟೋಗ್ರಫರ್‌ಗಳಿಗೆ ಕೆಲವೊಮ್ಮೆ ಬೇಸರವಾಗುತ್ತದೆ.

ನಿಮ್ಮ ಸಫಾರಿಯ ಅನುಭವದಲ್ಲಿ ಯಾವುದಾದರೂ ಆಸಕ್ತಿದಾಯಕ ದೃಶ್ಯ ನೋಡಿದ್ದೀರಾ?

ಒಮ್ಮೆ ಭದ್ರಾ ಹಿನ್ನೀರಿನಲ್ಲಿ ಬೋಟ್ ಸಫಾರಿಗೆ ಹೋಗಿದ್ದಾಗ, ರ‍್ಯಾಪ್ಟರ್ಸ್ (Raptors) ನೋಡಲು ಇಷ್ಟಪಡುವ ಅತಿಥಿಗಳಿದ್ದರು. ಚಳಿಗಾಲ ಮತ್ತು ಬೇಸಗೆಯಲ್ಲಿ ಕಾಣಸಿಗುವ ವೈಟ್-ಬೆಲ್ಲಿಡ್ ಸೀ ಈಗಲ್ (White-bellied sea eagle) ಅನ್ನು ನೋಡಲು ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಿದಾಗ ಒಂದು ಮರದ ಮೇಲೆ ಈಗಲ್ ಕುಳಿತಿರುವುದು ಕಂಡಿತು. ಅದೇ ಮರದ ಕೆಳಗೆ ಬ್ಲ್ಯಾಕ್ ಪ್ಯಾಂಥರ್ (Black panther) ಕೂಡ ಇತ್ತು, ಇದು ಬಹಳ ಅಪರೂಪದ ದೃಶ್ಯವಾಗಿತ್ತು.

ಕಾಡಿನಲ್ಲಿ ಪ್ರಾಣಿಗಳನ್ನು ಟ್ರ್ಯಾಕ್ ಮಾಡುವುದು ಹೇಗೆ?

ತಾಜಾ ಹೆಜ್ಜೆಗುರುತುಗಳ ಅಂಚುಗಳು ಚೂಪಾಗಿರುತ್ತವೆ ಮತ್ತು ಹಸಿಯಾಗಿರುತ್ತವೆ. ಲಂಗೂರ್, ಸಾಂಬಾರ್, ಕಾಡುಕುರಿ ಮತ್ತು ಚುಕ್ಕೆ ಜಿಂಕೆಗಳು ನೀಡುವ ಅಲಾರ್ಮ್ ಕಾಲ್‌ಗಳು ಬಹಳ ಮುಖ್ಯ. ಪ್ರಾಣಿ ಚಲಿಸುತ್ತಿದ್ದಾಗ ಕಾಲ್‌ಗಳು ನಿರಂತರವಾಗಿ ಕೇಳಿಸುತ್ತವೆ ಮತ್ತು ಆ ಶಬ್ದ ಬರುವ ದಿಕ್ಕನ್ನು ಆಧರಿಸಿ ಪ್ರಾಣಿ ಎಲ್ಲಿದೆ ಎಂದು ಊಹಿಸುತ್ತೇವೆ.

ಕಾಡಿನಲ್ಲಿರುವಾಗ ಅನಿರೀಕ್ಷಿತ ಅಪಾಯ ಎದುರಾದಾಗ ಪ್ರವಾಸಿಗರ ಸುರಕ್ಷತೆಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ?

ಅರಣ್ಯ ಇಲಾಖೆಯ ನಿಯಮದಂತೆ ಪ್ರಾಣಿಗಳಿಂದ ವಾಹನಕ್ಕೆ ಕನಿಷ್ಠ 10 ರಿಂದ 15 ಮೀಟರ್ ಅಂತರ ಕಾಯ್ದುಕೊಳ್ಳುತ್ತೇವೆ. ಹೆಚ್ಚಾಗಿ ಮರಿಯೊಂದಿಗೆ ಇರುವ ಆನೆ ಅಥವಾ ಮದವೇರಿದ ಗಂಡು ಆನೆಯಿಂದ ಅಪಾಯವಿರುತ್ತದೆ. ಆನೆಗಳು ಮೊದಲೇ 'ಮಾಕ್ ಚಾರ್ಜ್' ಮಾಡುವ ಮೂಲಕ ಎಚ್ಚರಿಕೆ ನೀಡುತ್ತವೆ. ಆ ಎಚ್ಚರಿಕೆಯನ್ನು ಅರ್ಥಮಾಡಿಕೊಂಡು ನಾವು ವಾಹನವನ್ನು ಹಿಂದೆ-ಮುಂದೆ ಮಾಡಿಕೊಳ್ಳುತ್ತೇವೆ.

ಪ್ರವಾಸಿಗರು ಮಾತು ಕೇಳದಿದ್ದಾಗ ಹೇಗೆ ನಿಭಾಯಿಸುತ್ತೀರಾ?

ಸಫಾರಿಗೂ ಮುನ್ನವೇ ಕಾಡಿನ ನಿಯಮಗಳ ಬಗ್ಗೆ ವಿವರಿಸಿ, ವಾಹನದಲ್ಲಿ ಸೈಲೆಂಟ್ ಆಗಿ ಕುಳಿತುಕೊಳ್ಳಬೇಕು ಎಂದು ತಿಳಿಸುತ್ತೇವೆ. ಒಂದೆರಡು ಬಾರಿ ಎಚ್ಚರಿಕೆ ನೀಡಿಯೂ ಕೇಳದಿದ್ದರೆ ಜೀಪ್ ಅನ್ನು ವಾಪಸ್ ತರುತ್ತೇವೆ.

ಪರಿಸರ ಸಂರಕ್ಷಣೆ ಬಗ್ಗೆ ಹೇಗೆ ಜಾಗೃತಿ ಮೂಡಿಸುತ್ತಿದ್ದೀರಿ?

ಕಾಡಿನಲ್ಲಿ ಜಿಂಕೆಗಳಂಥ ಪ್ರಾಣಿಗಳ ಸಂಖ್ಯೆ ನಿಯಂತ್ರಣದಲ್ಲಿರಲು ಕಾಡುನಾಯಿ ಮತ್ತು ಚಿರತೆಗಳು ಸಹಾಯ ಮಾಡುತ್ತವೆ. ಬೇಸಗೆಯಲ್ಲಿ ಆನೆಗಳು ಆಹಾರ ಅರಸಿ ಊರೊಳಗೆ ಬಂದು ಬೆಳೆ ನಾಶ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆ ಆನೆ ಕಂದಕ, ಸೋಲಾರ್ ಫೆನ್ಸಿಂಗ್ ಹಾಗೂ ರೈಲ್ವೇ ಬ್ಯಾರಿಕೇಡ್‌ಗಳಂಥ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮಾಹಿತಿ ನೀಡುತ್ತೇವೆ.

Untitled design - 2026-10-08T171123.887

ಪ್ರತಿದಿನ ಹೊಸ ವಿಷಯಗಳನ್ನು ಹೇಗೆ ಅಪ್‌‌ಡೇಟ್ ಆಗುತ್ತೀರಾ?

ರಿಸರ್ಚ್ ಪೇಪರ್‌ಗಳನ್ನು ಓದುತ್ತೇವೆ. ಮೊದಲು ಕರ್ನಾಟಕದಲ್ಲಿ ಒಂದೇ ತಳಿಯ ಲಂಗೂರ್ ಇದೆ ಅಂದುಕೊಂಡಿದ್ದೆವು, ಆದರೆ ಈಗ 3-4 ಪ್ರಭೇದಗಳಿವೆ ಎಂದು ತಿಳಿದಿದೆ. ಇಂಟರ್ನೆಟ್ ಮತ್ತು ಪುಸ್ತಕಗಳ ಮೂಲಕ ಓದಿ ತಿಳಿದುಕೊಳ್ಳುತ್ತೇವೆ.

ಜೆಎಲ್‌ಆರ್‌‌ಗೆ (JLR) ಬರುವವರಿಗೆ ನಿಮ್ಮ ಸಂದೇಶವೇನು?

ನಾವು ಎಕೋ-ಟೂರಿಸಂ ಅನ್ನು ಪ್ರಮೋಟ್ ಮಾಡುತ್ತಿದ್ದು, JLR ವತಿಯಿಂದ ಸ್ಥಳೀಯ ಶಾಲಾ ಮಕ್ಕಳನ್ನು ಸಫಾರಿಗೆ ಕರೆದುಕೊಂಡು ಹೋಗಿ ಅರಿವು ಮೂಡಿಸುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಪರಿಸರದ ಬಗ್ಗೆ ಶಿಕ್ಷಣ ನೀಡುವುದರಿಂದ ಮುಂದಿನ ಪೀಳಿಗೆಗೆ ಕಾಡನ್ನು ಉಳಿಸಲು ಸಹಾಯವಾಗುತ್ತದೆ. ಹೀಗಾಗಿ ಸಫಾರಿಗೆ ಬರುವವರು ಕೇವಲ ಪ್ರವಾಸ ಎಂದಷ್ಟೇ ಅಲ್ಲದೆ, ಅರಿವನ್ನು ಹೆಚ್ಚಿಸಿಕೊಳ್ಳುವ, ಕಾಡಿನ ಜತೆ ಬೆರೆಯುವ ಸಮಯ ಎಂದು ಭಾವಿಸಿ ಬಂದರೆ ಒಳ್ಳೆಯದು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್