Saturday, May 9, 2026
Saturday, May 9, 2026

ಮರಳಿದೆ.. ಮರಳಿದೆ.. ಗಡಿಯಲಿ ಮೆಟ್ಟಿದ ಮರಳಿದೆ!

ಸೈನಿಕರ ತೀರ್ಥ ಸ್ಥಳ ಅಂತ ಗುರುತಿಸಿಕೊಂಡಿರುವ ಈ ದೇವಸ್ಥಾನದ ಸುತ್ತಮುತ್ತಲಿನಲ್ಲಿಯೇ ಹಿಂದಿಯ ಬಾರ್ಡರ್ ಸಿನಿಮಾದ ಚಿತ್ರೀಕರಣ ನಡೆದಿರುವುದು. ವಾಸ್ತವದಲ್ಲಿ ಈಗಲೂ ಪ್ರತೀ ಯೋಧನು ಯುದ್ಧಕ್ಕೆ ಹೊರಡುವ ಮೊದಲು ಇಲ್ಲಿ ಬಂದು ಪೂಜೆ ಸಲ್ಲಿಸಿಯೇ ಹೋಗುತ್ತಾನಂತೆ. ‘ಯಾಕೆ ಈ ದೇವಸ್ಥಾನವನ್ನು ಮಿಲಿಟರಿ ವಹಿಸಿಕೊಂಡಿದೆ’ ಎನ್ನುವ ಪ್ರಶ್ನೆಗೆ ಚಾಲಕ ಮಾತ್ರವಲ್ಲ ಗೂಗಲ್ ಕೂಡ ಉತ್ತರಿಸುತ್ತೆ. 1965ರಲ್ಲಿ ಪಾಕಿಸ್ತಾನದೊಡನೆ ಯುದ್ಧವಾದ ನಂತರ ಆ ಜಾಗ ಮಿಲಿಟರಿ ಆಡಳಿತಕ್ಕೊಳಪಟ್ಟಿದೆ.

  • ಅಂಜಲಿ ರಾಮಣ್ಣ

ಒಮ್ಮೆ ಗಾಂಧಿ ಜಯಂತಿಯಂದು ರಾಜಸ್ಥಾನದ ಜೈಸಲ್‍ಮೇರಿನಲಿದ್ದೆ. ಆ ಜಾಗ ನಮ್ಮ ದೇಶದ ಅಂಚಿನಿಂದ ಕೇವಲ 200 ಕಿಲೋಮೀಟರ್‌ಗಳಷ್ಟೇ. ಡ್ರೈವರ್ ಮಗನ್ ಸಿಂಗ್ ‘ತನ್ನೋಟಿ ಮಾ ಕಿ ದರ್ಶನ್ ಕೇಲಿಯೆ ಚಲೇ?’ ಎಂದು ಕೇಳಿದ ಕೂಡಲೇ ಹೊರಟಿದ್ದು.

‘ಇದು ಬೇರೆ ಎಲ್ಲಾ ಮಾತಾ ದೇವಸ್ಥಾನಗಳಂತೆ ಅಲ್ಲ ಮೇಡಮ್ ಜಿ. ಬಹಳ ಪವರ್‌ಫುಲ್ ದೇವಿ. ಈ ದೇವಸ್ಥಾನ ಸೈನಿಕರ ಕಾಶಿ ಇದ್ದಂತೆʼ ಎನ್ನುತ್ತಾ ಕಥೆ ಹೇಳುತ್ತಾ ಕಾರು ಓಡಿಸುತ್ತಿದ್ದ ಆತ.

122 ಕಿಲೋಮೀಟರ್‌ಗಳ ಪ್ರಯಾಣ. ಸ್ವಲ್ಪವೂ ಎಕ್ಕಾಸಕ್ಕ ಎಕ್ಕಾಸಕ್ಕಾ ಎಂದು ಮುಗ್ಗರಿಸದ, ಸಪೂಟು ಟಾರು ರಸ್ತೆ.

ಮಗನ್ ಸಿಂಗ್ ಕಥೆ ಮುಂದುವರಿಸುತ್ತಿದ್ದ. ʼಒಬ್ಬ ಮಾರ್ವಾಡಿ ವ್ಯಾಪಾರಿಗೆ ಮದುವೆಯಾಗಿ ಎಷ್ಟೋ ವರ್ಷಗಳಾದರೂ ಮಕ್ಕಳು ಆಗದೆ, ಆತ ಹಿಂಗಲಾಜ ಮಾತಾ (ಪಾರ್ವತಿ ದೇವಿ) ದೇವರಿಗೆ ಹರಕೆ ಹೊತ್ತಾಗ ಹುಟ್ಟಿದ 7 ಹೆಣ್ಣು ಮಕ್ಕಳಲ್ಲಿ ದೇವಿಯ ಅಂಶವನ್ನೇ ಹೊತ್ತುಕೊಂಡು ಹುಟ್ಟಿದವಳು ತನ್ನೋಟಿ ಮಾತಾ.

ಇದನ್ನೂ ಓದಿ: ಹಿಮಾಚಲದಲ್ಲಿ ಗುರುತು ಮೂಡಿಸಲಿದೆ ’ಅವಳ’ ಹೆಜ್ಜೆ...!

9ನೆಯ ಶತಮಾನದಲ್ಲಿ ರಜಪೂತ ರಾಜ ತನು ರಾವ್ ತನ್ನೋಟಿ ಮಾತಾಳ ವಿಗ್ರಹವನ್ನು ಈ ದೇವಸ್ಥಾನದಲ್ಲಿ ಸ್ಥಾಪಿಸಿದ್ದುʼ. ಹೀಗೆ ನಂಬಿಕೆಗಳನ್ನು, ಚರಿತ್ರೆಯೊಡ ಪೋಣಿಸಿಕೊಂಡ ಕಥೆ ಮುಂದುವರಿಯುತ್ತಿತ್ತು. ಸರಸ್ವತಿ ನದಿ ಈ ದೇವಸ್ಥಾನದ ಕೆಳಗೆ ಈಗಲೂ ಇದೆಯಂತೆ. ಭೂಮಿಗೆ ಕಿವಿಯೊತ್ತಿ ಆಲಿಸಿದರೆ ಜುಳುಜುಳು ನಾದ ಕೇಳಿಸುತ್ತಂತೆ.

Untitled design - 2026-05-09T152458.132

‘ಯಾಕೆ ಈ ದೇವಸ್ಥಾನವನ್ನು ಮಿಲಿಟರಿ ವಹಿಸಿಕೊಂಡಿದೆ’ ಎನ್ನುವ ಪ್ರಶ್ನೆಗೆ ಚಾಲಕ ಮಾತ್ರವಲ್ಲ ಗೂಗಲ್ ಕೂಡ ಉತ್ತರಿಸುತ್ತೆ. 1965ರಲ್ಲಿ ಪಾಕಿಸ್ತಾನದೊಡನೆ ಯುದ್ಧವಾದ ನಂತರ ಆ ಜಾಗ ಮಿಲಿಟರಿ ಆಡಳಿತಕ್ಕೊಳಪಟ್ಟಿದೆ. ಆ ಯುದ್ಧದಲ್ಲಿ ಎದುರಾಳಿಗಳು ಹಾಕಿದ ನೂರಾರು ಬಾಂಬ್‍ಗಳು ಒಂದೂ ಸ್ಫೋಟಗೊಳ್ಳದೆ ಇಲ್ಲಿ ಹಾಗೇ ಇದ್ದವಂತೆ.

ನಂತರ 1971ರಲ್ಲಿ ನಡೆದ ಯುದ್ಧದಲ್ಲೂ ಇದೇ ಪುನರಾವರ್ತನೆ ಆಗಿದ್ದು ಮಾತ್ರ ಸೋಜಿಗ. ಹೀಗೆ ಸ್ಫೋಟಗೊಳ್ಳದ ತೋಪುಗಳನ್ನು ಗಾಜಿನ ಶೋ‍ಕೇಸ್‍ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇಲ್ಲಿ ಸೈನಿಕರೇ ನಿತ್ಯಪೂಜೆ ಮಾಡುವುದು.

ನಿಗದಿಪಡಿಸಿದ ಹಬ್ಬ ಹರಿದಿನಗಳಲ್ಲಿ ಮಾತ್ರ ಸಾರ್ವಜನಿಕ ಭಕ್ತರಿಗೆ ಪ್ರವೇಶವುಂಟು.

ತನ್ನೋಟಿ ಮಾತಾಳ ದೇವಸ್ಥಾನದಿಂದ ಮುಂದಕ್ಕೆ 30 ಕಿಲೋಮೀಟರ್‌ ದೂರದಲ್ಲಿ ಭಾರತ ಪಾಕಿಸ್ತಾನದ ಸೂಕ್ಷ್ಮ ಗಡಿ ಪ್ರದೇಶ. ಅದಕ್ಕೆ ಈ ದೇವಸ್ಥಾನದಿಂದ ಮುಂದಕ್ಕೆ ಉಹೂಂ, ಬಿಲ್‍ಕುಲ್ ಸಾಮಾನ್ಯ ನಾಗರಿಕರಾರಿಗೂ ಪ್ರವೇಶವಿಲ್ಲ.

ಅಲ್ಲಿ ಒಂದೆರಡು ರಾಜಸ್ಥಾನಿ ಕುಟುಂಬಗಳು ಪೂಜೆಗೆ ಕಾಯುತ್ತಿದ್ದವು. ಒಬ್ಬ ಸೈನಿಕನ ತಾಯಿ, ತಂದೆ, ಹೆಂಡತಿ ಮತ್ತು ಮೂರು ವರ್ಷದ ಮಗು ಆತನನ್ನು ಭೇಟಿ ಮಾಡಲು ಬಂದಿದ್ದರು. ಮೂರು ಇಟ್ಟಿಗೆಯ ಒಲೆ ಮಾಡಿ ಮಗನಿಗೆ ಅಲ್ಲಿಯೇ ದಾಲ್ ಬಾಟಿ ಮಾಡಿಕೊಡುತ್ತಿದ್ದಳು ತಾಯಿ. ಯೂನಿಫಾರ್ಮ್‍ನಲ್ಲಿದ್ದ ಮಗ ಒದ್ದೆ ಚೊಣ್ಣದ ತನ್ನ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಸಹೋದ್ಯೋಗಿಗಳನ್ನು ಊಟಕ್ಕೆ ಕರೆಯುತ್ತಿದ್ದ.

ಇಷ್ಟೆಲ್ಲಾ ಕೇಳಿ, ನೋಡಿದವಳಿಗೆ ಇಂಡೋ-ಪಾಕ್ ಸರಹದ್ದು ನೋಡಲೇ ಬೇಕು ಎನ್ನುವ ಆಸೆ ಗುದ್ದತೊಡಗಿತು. ದೇಶಭಕ್ತಿ ಮರುಭೂಮಿಯ ಓಯಸಿಸ್‍ನಂತೆ ಚಿಮ್ಮುತ್ತಿತ್ತು. ಅಲ್ಲಿದ್ದ ಸೈನಿಕರನ್ನು ನೋಡುತ್ತಾ ತನ್ನೋಟಿ ಮಾತಾಳನ್ನು ಕೇಳಿಕೊಳ್ಳುತ್ತಿದ್ದೆ ಬಾರ್ಡರ್‌ಗೆ ಕರೆದುಕೊಂಡು ಹೋಗು ಎಂದು.

Untitled design - 2026-05-09T152507.065

ಸೈನಿಕರ ತೀರ್ಥ ಸ್ಥಳ ಅಂತ ಗುರುತಿಸಿಕೊಂಡಿರುವ ಈ ದೇವಸ್ಥಾನದ ಸುತ್ತಮುತ್ತಲಿನಲ್ಲಿಯೇ ಹಿಂದಿಯ ಬಾರ್ಡರ್ ಸಿನಿಮಾದ ಚಿತ್ರೀಕರಣ ನಡೆದಿರುವುದು. ವಾಸ್ತವದಲ್ಲಿ ಈಗಲೂ ಪ್ರತೀ ಯೋಧನು ಯುದ್ಧಕ್ಕೆ ಹೊರಡುವ ಮೊದಲು ಇಲ್ಲಿ ಬಂದು ಪೂಜೆ ಸಲ್ಲಿಸಿಯೇ ಹೋಗುತ್ತಾನಂತೆ.

ಯಾವಾಗ ಬಾರ್ಡರ್ ಕಂಡೇನೋ ಅಂತ ತುಡಿಯುತ್ತಿದ್ದವಳಿಗೆ ‘ನಹೀ ನಹೀ ನಹೀ, ಕೋಯೀ ಭೀ ಉದರ್ ನಹೀ ಜಾ ಸಕ್ತಾ’ ಎನ್ನುವ ಸೈನಿಕರ ಹುಕುಂ ವಿಪರೀತ ನಿರಾಸೆ ತಂದಿತು ಆದರೂ ಹುಚ್ಚು ಭರವಸೆ.

ಮನದಲ್ಲೇ ಹಲುಬುತ್ತಾ ದೇವಸ್ಥಾನದ ಹಜಾರದಲ್ಲಿ ಚಕ್ಕಳಮಕ್ಕಳ ಹಾಕಿ ಕೂತಿದ್ದೆ.

ಆವರಣದಲ್ಲಿ ಥಟ್ ಅಂತ ಸರಬರ ಸಂಚಲನ. ಬಿದ್ದ ಊಟ, ಚೆಲ್ಲಿದ ನೀರು ಎಲ್ಲವನ್ನೂ ಸ್ವಚ್ಛಗೊಳಿಸಲು ಶುರುವಿಟ್ಟರು. ಯುವ ಸೈನಿಕರು ಅಟೆನ್ಷನ್‌ ಭಂಗಿಗೆ ಬರಲು ತಯಾರಾಗುತ್ತಿದ್ದರು. ಮಟಮಟ ಮಧ್ಯಾಹ್ನ. ಏನಾಗುತ್ತಿದೆ ಎಂದು ವಿಚಾರಿಸಿದಾಗ ಹಿರಿಯ ಸೇನಾಧಿಕಾರಿಗಳು ಬರುತ್ತಿದ್ದಾರೆ ಎಂದು ತಿಳಿಯಿತು.

ಒಬ್ಬ ಅಧಿಕಾರಿ ಬಂದು ನೀವು ಇಲ್ಲಿಂದ ಹೊರಡಬೇಕು ಎಂದು ಹೇಳಿದಾಗ ದುಃಖ ಉಮ್ಮಳಿಸಿತು, ಥೇಟ್ ಸದ್ದಾಗದ ಸರಸ್ವತಿ ನದಿಯಂತೆ. ದಯವಿಟ್ಟು ನನ್ನನ್ನು ಇರಲು ಬಿಡಿ ಎಂದು ಗೋಗರೆದೆ. ನನ್ನ ಮನವಿ ಮುಂದುವರಿಯುತ್ತಿತ್ತು. ಆಗ ಮೂರು ಜೀಪ್‍ಗಳಲ್ಲಿ ಜ್ಜರ್ ಅಂತ ಬಂದು ಇಳಿದರು ಗರಿಗರಿ ಉಡುಪು ತೊಟ್ಟ ಖಡಕ್ ಅಧಿಕಾರಿಗಳು. ಅವರವರಲ್ಲೇ ಮಾತುಗಳು.

ಹಿರಿಯ ಅಧಿಕಾರಿ ದೇವಸ್ಥಾನದೊಳಗೆ ಬರುವಾಗ ಅವರ ಯೂನಿಫಾರ್ಮ್‌ ಷರ್ಟಿನ ಮೇಲಿದ್ದ ಹೆಸರು ಓದಿದೆ. ಕರ್ನಲ್ ಸಾರಸ್ವತ್- ಹಿಂದೊಮ್ಮೆ ಬೆಂಗಳೂರಿನಲ್ಲೂ ಸ್ವಲ್ಪ ದಿನಗಳು ಇದ್ದದ್ದು ನೆನಪಾಯ್ತು.

ಬ್ಯಾಗ್‍ನಿಂದ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಸೀದಾ ಅವರ ಮುಂದೆ ಹೋಗಿ ನಿಂತು. ಸರಹದ್ದು ತೋರಿಸಿ ಎನ್ನುವ ಮನವಿ ಮುಂದಿಟ್ಟೆ. ನನ್ನ ವಿವರವಾದ ಪರಿಚಯವನ್ನು ಅವರೇ ಪ್ರಶ್ನೆಗಳ ಮೂಲಕ ಮಾಡಿಕೊಂಡರು.

ಇದೆಲ್ಲಾ ಪಾರ್ವತಿ ರೂಪದ ತನ್ನೋಟಿ ಮಾತಾಳ ಆಶೀರ್ವಾದವೇ ಇರಬೇಕು ಎನ್ನುವ ಹಾಗೆ ಅವರು ಅಶುತೋಷ್ ಎನ್ನುವ ಅಧಿಕಾರಿಯನ್ನು ಕರೆದು ಅವರ ಜೀಪಿನಲ್ಲೇ ಕರೆದುಕೊಂಡು ಹೋಗಲು ನಿರ್ದೇಶನ ನೀಡಿದರು. ಮುಂದಿನ 30 ಕಿಲೋಮೀಟರ್‌ಗಳ ಪ್ರಯಾಣ ಕುತೂಹಲಕಾರಿಯಾಗಿ ಉತ್ಸಾಹದಿಂದ ಸಾಗಿತ್ತು. ಆ ಸೈನಿಕ ತಾನು ಮಿಲಿಟರಿ ಸೇರಿದ್ದು, ಸಂಸಾರ, ಭಾರತದ ತಾಕತ್ತು, ಪಾಕಿಸ್ತಾನಿಯರ ಬೆನ್ನು ಹಿಂದಿನ ಮಸಲತ್ತು ಹೀಗೇ ಮತ್ತೂ ಏನೇನೋ ಹೇಳುತ್ತಿದ್ದರು.

ಆ ಗಡಿ ಪ್ರದೇಶಕ್ಕೆ ‘ರಾಮ್ ಘರ್’ ಕ್ಷೇತ್ರ ಪೋಸ್ಟ್ 609 ಎನ್ನುತ್ತಾರೆನ್ನುವ ವಿಷಯ ಕಿವಿಗೆ ಬೀಳುತ್ತಿತ್ತು, ನನ್ನ ಕಣ್ಣು ಇಕ್ಕೆಲಗಳಲ್ಲೂ ಇದ್ದ ಮರಳು ದಿಬ್ಬದೆಡೆಗಿತ್ತು. ಆಹಾ, ಸಿಕ್ಕೇ ಬಿಟ್ಟಿತು ಅಲ್ಲಿ.. . .ಅಲ್ಲಿ. . .ಗಡಿ!

ಮತ್ತಿಬ್ಬರು ಸೈನಿಕರು ಜೊತೆಗೂಡಿದರು. ಉತ್ಸುಕತೆಯಿಂದ ನೋಡಿ ಮುಗುಳ್ನಗುತ್ತಿದ್ದರು. 25 ಅಡಿಗಳಷ್ಟು ಎತ್ತರವಿದ್ದ ಅಟ್ಟಣಿಗೆಯ ಮೇಲೆ ಸರಸರನೆ ಹತ್ತಿ ಗಜಗಾತ್ರದ ಬೈನಾಕ್ಯುಲರ್‌ನಲ್ಲಿ ಪಾಕಿಸ್ತಾನವನ್ನು ನೋಡಿಯೇ ಬಿಟ್ಟೆ. ನಾವು ಮಾಮೂಲಿ ಕೆಲಸಗಳಿಗೆ ಉಪಯೋಗಿಸುವುದಕ್ಕಿಂತ 8 ಪಟ್ಟು ದೊಡ್ಡದಾದ ಬೈನಾಕ್ಯುಲರ್ ಅದು. ಗಡಿಯನ್ನು ಮುಳ್ಳು ಬೇಲಿ ಆವರಿಸಿಕೊಂಡಿದೆ, ಆ ಕಡೆಯೂ ಹಾಗೆ. ಅವೆರಡರ ಮಧ್ಯದ್ದು ‘No man’s Land’ ಇದೆ.

ಸದೊಂಭತ್ತು ಕಾಲವೂ ಪಾಳಿಯಲ್ಲಿ ಇಬ್ಬರು ವೀರರು ಒಂಟೆಯ ಮೇಲೆ ಕುಳಿತು ಗಸ್ತು ತಿರುಗುತ್ತಾರೆ. ಬೇಲಿಯಿಂದೀಚೆಗೆ ಮೂರಡಿಗಳಷ್ಟು ಅಂತರದಲ್ಲಿ ಯಾರ ಹೆಜ್ಜೆ ಗುರುತು ಮೂಡಬಾರದು ಅದು ಕಾನೂನು. ಹಾಗೇನಾದರೂ ಹೆಜ್ಜೆ ಗುರುತು ಕಂಡರೆ ಯುದ್ಧ ಘೋಷಣೆ ಆಗುತ್ತದೆ.

ಸ್ಯಾಟಲೈಟ್ ಮೂಲಕ ನಮ್ಮ ನಡವಳಿಕೆಗಳು, ನಮ್ಮ ಬಟ್ಟೆಯ ಬಣ್ಣವೂ ಕೂಡ ರೆಕಾರ್ಡ್ ಆಗುತ್ತಿತ್ತು. ಅದು ಎರಡೂ ದೇಶಗಳ ಮಿಲಿಟರಿಗೆ ರವಾನೆಯಾಗುತ್ತಿತ್ತು ಎಂದು ನಂತರ ಅಶುತೋಷ್ ತಿಳಿಸಿದರು.

Untitled design - 2026-05-09T152439.947

ಅಭೂತಪೂರ್ವ ಆನಂದಾನುಭವ ಪಡೆದಿದ್ದೆ. ಅಟ್ಟಣಿಗೆ ಇಳಿಯುವಾಗ ಮೀನಖಂಡಗಳು ನಡುಗುತ್ತಿದ್ದವು.

ಈ ಜಾಗ ಎಷ್ಟು ಚೆನ್ನಾಗಿದೆ ಎನ್ನುವ ನನ್ನ ಉದ್ಗಾರಕ್ಕೆ ಅಲ್ಲಿಯೇ ಇದ್ದ ಒಂಟೆ ಮೇಲೆ ಕುಳಿತಿದ್ದ ಸೈನಿಕರೊಬ್ಬರು ‘ಅಯ್ಯೋ ಈ ಜಾಗ ಏನು ಚೆನ್ನಾಗಿದೆ. ನೀವಿರುವ ಊರು ಚಂದ’ ಎಂದರು. ಅನಾಯಾಸವಾಗಿ ‘ಭಯ್ಯಾ, ಜಗತ್ತಿನಲ್ಲಿ ಎರಡೇ ಜಾಗ ಸುಂದರವಾಗಿ ಇರುವುದು. ಒಂದು ಪ್ರತೀ ಹೆಣ್ಣಿನ ತವರು, ಇನ್ನೊಂದು ಸೈನಿಕ ಕೆಲಸ ಮಾಡುವ ಜಾಗ’ ಎನ್ನುವ ಪ್ರಾಮಾಣಿಕ ಮಾತು ಹೊರಬಿತ್ತು ನನ್ನಿಂದ. ಅವರೆಲ್ಲರೂ ‘ಸರಿ. . .ಸರಿ. . .’ ಎನ್ನುತ್ತಾ ಮುಖದಲ್ಲಿ ತೆಳುನಗು ಹೊತ್ತು ನಿಂತರು.

ಹೊರಡುವ ವೇಳೆ ಬಂದಿತು. ಅಕಸ್ಮಾತಾಗಿ ಪ್ಯಾಂಟಿನ ಜೇಬಿನಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ ಚೀಲ ಸಿಕ್ಕಿತು. ಅದರಲ್ಲಿ ಒಂದಷ್ಟು ಮರಳು ತುಂಬಿಕೊಳ್ಳುವುದು ಮರೆಯಲಿಲ್ಲ. ಅದನ್ನು ಈಗಲೂ ನನ್ನ ಮನೆಯಲ್ಲಿ ಒಂದು ಗಾಜಿನ ಕುಪ್ಪಿಯಲ್ಲಿ ಹಾಕಿಟ್ಟಿದ್ದೇನೆ. ನೋಡಿದಾಗಲೆಲ್ಲ ಗಡಿ ಮುಟ್ಟಿ ಬಂದ ನೆನಪು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?