Wednesday, July 15, 2026
Wednesday, July 15, 2026

ಕನಸಿನ ಪ್ರವಾಸಕ್ಕೆ ಈಗಲೇ ಸಾಲ ಮಾಡಬೇಕೆ? ಇಲ್ಲಿದೆ ಟ್ರಾವೆಲ್ ಲೋನ್ ಮಾಹಿತಿ

ಪ್ರತಿ ಜನರೇಷನ್‌ಗೂ ತನ್ನದೇ ಆದ ಹಣಕಾಸು ಟ್ರೆಂಡ್ ಇರುತ್ತದೆ. ಒಂದು ಕಾಲದಲ್ಲಿ ಮನೆ ಕಟ್ಟಲು ಹೌಸಿಂಗ್ ಲೋನ್ ಪಡೆಯುವುದು, ಮದುವೆ ಖರ್ಚುಗಳಿಗಾಗಿ ಸಾಲ ಮಾಡುವುದು ಸಾಮಾನ್ಯವಾಗಿತ್ತು. ನಂತರ ವಾಹನ, ಶಿಕ್ಷಣ ಮತ್ತು ವ್ಯವಹಾರ ಸಾಲಗಳ ಬಳಕೆ ಹೆಚ್ಚಾಯಿತು. ಈಗ ಹೊಸ ಟ್ರೆಂಡ್ ಎಂದರೆ ʼಟ್ರಾವೆಲ್ ಲೋನ್ʼ. ಅಂದರೆ ಮೊದಲು ಹಣ ಉಳಿಸಿ ಪ್ರವಾಸ ಹೋಗುವ ಬದಲು, ಮೊದಲು ಪ್ರವಾಸ ಮಾಡಿ ನಂತರ ಇಎಂಐ ಮೂಲಕ ಅದರ ವೆಚ್ಚವನ್ನು ಪಾವತಿಸುವ ಪದ್ಧತಿ ಬೆಳೆಯುತ್ತಿದೆ.

  • ಕಾಂಚನಾ ಹೆಗಡೆ

ಇತ್ತೀಚಿನ ಪೈಸಾಬಝಾರ್‌ ವರದಿಯ ಪ್ರಕಾರ, 2025ರಲ್ಲಿ ಪರ್ಸನಲ್ ಲೋನ್ ಪಡೆದವರಲ್ಲಿ 27% ಮಂದಿ ತಮ್ಮ ಪ್ರವಾಸದ ವೆಚ್ಚಗಳಿಗೆ ಈ ಹಣವನ್ನು ಬಳಸಿದ್ದಾರೆ. 97 ನಗರಗಳ 5,700 ಪ್ರತಿಕ್ರಿಯೆದಾರರನ್ನು ಒಳಗೊಂಡ ಈ ಸಮೀಕ್ಷೆ, 2023ರ 21% ಪ್ರಮಾಣದಿಂದ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ. ಇದರಿಂದ ಪ್ರವಾಸಕ್ಕಾಗಿ ಸಾಲ ಪಡೆಯುವುದು ಪರ್ಸನಲ್ ಲೋನ್‌ಗಳ ಪ್ರಮುಖ ಬಳಕೆಗಳಲ್ಲಿ ಒಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ವಿದೇಶ ಪ್ರವಾಸದ ಮೋಹ- ಅರಿವಿರಲಿ: ಎಚ್ಚರವೂ ಇರಲಿ!

ಟ್ರಾವೆಲ್ ಲೋನ್ ಪಡೆದವರಲ್ಲಿ 71% ಮಂದಿ ಟೈರ್ -2 (Tier-2 )ಮತ್ತು ಟೈರ್-3 (Tier-3 ) ನಗರದವರಾಗಿದ್ದಾರೆ. ಇದು ಮೆಟ್ರೋ ನಗರಗಳ ಹೊರಗಿನ ಜನರಲ್ಲೂ ಉತ್ತಮ ಜೀವನಶೈಲಿ ಮತ್ತು ಹೊಸ ಅನುಭವಗಳ ಮೇಲಿನ ಆಸಕ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಜೆನ್‌ ಜಿ಼ ಯುವಕರಲ್ಲಿಯೂ ಈ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. 2023ರಲ್ಲಿ ಟ್ರಾವೆಲ್ ಲೋನ್ ಪಡೆದವರಲ್ಲಿ ಅವರ ಪಾಲು 14% ಇದ್ದರೆ, 2025ರಲ್ಲಿ ಅದು 29%ಕ್ಕೆ ಏರಿದೆ.

ಇಂದು ಪ್ರವಾಸ ಕೇವಲ ವಿಶ್ರಾಂತಿಗಾಗಿ ಮಾತ್ರವಲ್ಲ. ಅದು ಜೀವನಶೈಲಿ, ಮತ್ತು ಸ್ವಾತಂತ್ರ್ಯದ ಸಂಕೇತವಾಗುತ್ತಿದೆ. ಸ್ನೇಹಿತರು ಅಥವಾ ಇನ್‌ಫ್ಲುಯೆನ್ಸರ್‌ಗಳು ಹಂಚಿಕೊಳ್ಳುವ ವಿದೇಶ ಪ್ರವಾಸದ ಫೊಟೋ ಮತ್ತು ವಿಡಿಯೋಗಳು ಅನೇಕ ಮಂದಿಯಲ್ಲಿ ಅದೇ ಅನುಭವ ಪಡೆಯುವ ಆಸೆಯನ್ನು ಹುಟ್ಟಿಸುತ್ತವೆ. ಕೆಲವೊಮ್ಮೆ ಇದೇ ಆಸೆ ಸಾಲದ ಮೂಲಕ ಪ್ರವಾಸ ಮಾಡುವ ನಿರ್ಧಾರಕ್ಕೆ ಕಾರಣವಾಗುತ್ತದೆ.

Untitled design (84)

ಟ್ರಾವೆಲ್ ಲೋನ್ ಸೂಕ್ತವೇ?

ಟ್ರಾವೆಲ್ ಲೋನ್ ಸಾಮಾನ್ಯವಾಗಿ ಸ್ಥಿರ ಆದಾಯ ಹೊಂದಿರುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಲಭ್ಯವಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಪಡೆಯುವುದು ಸುಲಭ. ಕೆಲವು ಸಂದರ್ಭಗಳಲ್ಲಿ ರು. 50 ಲಕ್ಷದವರೆಗೂ ಸಾಲ ಸಿಗಬಹುದು. ಆದರೆ, ಇದು ಪರ್ಸನಲ್ ಲೋನ್ ಆಗಿರುವುದರಿಂದ ಬಡ್ಡಿದರ ಸಾಮಾನ್ಯವಾಗಿ ಹೆಚ್ಚು ಇರುತ್ತದೆ. ವಿಮಾನ ಟಿಕೆಟ್, ಹೊಟೇಲ್ ಬುಕಿಂಗ್ ಮತ್ತು ಇತರ ಪ್ರವಾಸ ವೆಚ್ಚಗಳನ್ನು ಈ ಸಾಲದಿಂದ ಭರಿಸಬಹುದು.

ಆದರೆ ಈ ಸಾಲ ಎಲ್ಲರಿಗೂ ಸೂಕ್ತವಲ್ಲ. ಈಗಾಗಲೇ ಮನೆ ಸಾಲ, ವಾಹನ ಸಾಲ ಅಥವಾ ಹೆಚ್ಚಿನ ಕ್ರೆಡಿಟ್ ಕಾರ್ಡ್ ಪಾವತಿ ಬಾಕಿ ಹೊಂದಿರುವವರಿಗೆ ಇದು ಹೆಚ್ಚುವರಿ ಹಣಕಾಸಿನ ಒತ್ತಡವನ್ನು ಉಂಟುಮಾಡಬಹುದು. ವಿಶೇಷವಾಗಿ ಆದಾಯದಲ್ಲಿ ಅನಿಶ್ಚಿತತೆ ಇರುವವರು ಅಥವಾ ತುರ್ತು ನಿಧಿ ಇಲ್ಲದವರು ಇಂಥ ಸಾಲಗಳಿಂದ ದೂರವಿರುವುದು ಉತ್ತಮ. ಏಕೆಂದರೆ ಪ್ರವಾಸವು ನೆನಪುಗಳು ಮತ್ತು ಅನುಭವಗಳನ್ನು ನೀಡಿದರೂ, ಅದು ನೇರ ಆರ್ಥಿಕ ಲಾಭ ತರುವ ಹೂಡಿಕೆ ಅಲ್ಲ. ಟ್ರಾವೆಲ್ ಲೋನ್‌ನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ದಂಡ ಮತ್ತು ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ. ಜತೆಗೆ ಕ್ರೆಡಿಟ್ ಸ್ಕೋರ್‌ಗೆ ಹಾನಿಯಾಗುವುದರಿಂದ ಭವಿಷ್ಯದಲ್ಲಿ ಮನೆ ಸಾಲ, ವಾಹನ ಸಾಲ ಅಥವಾ ಇತರ ಹಣಕಾಸು ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗಬಹುದು.

ಯಾವಾಗ ಲೋನ್ ಪಡೆಯಬಹುದು?

ಸ್ಥಿರ ಉದ್ಯೋಗ, ನಿಯಮಿತ ಆದಾಯ ಮತ್ತು ಕನಿಷ್ಠ 3–6 ತಿಂಗಳ ವೆಚ್ಚಗಳಿಗೆ ಸಾಕಾಗುವ ತುರ್ತು ನಿಧಿ ಹೊಂದಿರುವವರಿಗೆ ಟ್ರಾವೆಲ್ ಲೋನ್ ಉತ್ತಮ ಆಯ್ಕೆಯಾಗಬಹುದು. ವಿಶೇಷವಾಗಿ ಅಂತಾರಾಷ್ಟ್ರೀಯ ಸಮ್ಮೇಳನಗಳು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ವಿದೇಶಿ ಶಿಕ್ಷಣ ಮೇಳಗಳು ಅಥವಾ ಉದ್ಯಮ ಸಂಬಂಧಿತ ನೆಟ್‌ವರ್ಕಿಂಗ್ ಕಾರ್ಯಕ್ರಮಗಳಿಗೆ ಮಾಡುವ ಪ್ರಯಾಣಗಳು ಭವಿಷ್ಯದ ಆದಾಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಅಂಥ ಸಂದರ್ಭಗಳಲ್ಲಿ ಪ್ರಯಾಣದ ವೆಚ್ಚವನ್ನು ಕೇವಲ ಖರ್ಚು ಎಂದು ನೋಡುವ ಬದಲು, ವೃತ್ತಿಪರ ಬೆಳವಣಿಗೆಯ ಮೇಲಿನ ಹೂಡಿಕೆಯಾಗಿ ಪರಿಗಣಿಸಬಹುದು.

Untitled design (85)

ಈ ಲೆಕ್ಕ ಹಾಕಿ

ಟ್ರಾವೆಲ್ ಲೋನ್ ಪಡೆಯುವ ಮೊದಲು ಒಂದು ಸರಳ ಲೆಕ್ಕ ಹಾಕುವುದು ಸೂಕ್ತ.ಪ್ರವಾಸದ ವೆಚ್ಚವನ್ನು ಇಎಂಐ ಮೂಲಕ ಪಾವತಿಸಿದರೂ, ನಿಮ್ಮ ಮಾಸಿಕ ಬಜೆಟ್, ಉಳಿತಾಯ ಮತ್ತು ಇತರ ಹಣಕಾಸಿನ ಗುರಿಗಳ ಮೇಲೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ಈಗಾಗಲೇ ಮನೆ ಸಾಲ, ವಾಹನ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಾಕಿ ಇದ್ದರೆ ಮತ್ತೊಂದು ಇಎಂಐ ಸೇರಿಸುವುದು ಸರಿಯೇ ಎಂಬುದನ್ನು ಯೋಚಿಸಿ. ಜತೆಗೆ ಕನಿಷ್ಠ 3–6 ತಿಂಗಳ ವೆಚ್ಚಗಳಿಗೆ ಸಾಕಾಗುವ ತುರ್ತು ನಿಧಿ ನಿಮ್ಮ ಬಳಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಟ್ರಿಪ್ ಮುಗಿದ ನಂತರವೂ EMI ಪಾವತಿಸುವುದು ನಿಮಗೆ ಒತ್ತಡವಾಗಬಹುದು ಎಂದು ಅನಿಸಿದರೆ, ಸಾಲ ಪಡೆಯುವ ಬದಲು ಕೆಲವು ತಿಂಗಳು ಉಳಿತಾಯ ಮಾಡಿ ಪ್ರವಾಸ ಮಾಡುವುದು ಉತ್ತಮ ಆಯ್ಕೆಯಾಗಿರಬಹುದು

ಗಮನಿಸಿ

ಹಾಗಾದರೆ ಟ್ರಾವೆಲ್ ಲೋನ್ ತೆಗೆದುಕೊಳ್ಳಬೇಕಾ ಅಥವಾ ಬೇಡವಾ? ಎಂಬುದು ಅದನ್ನು ಬಳಸುವ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲ ದಿನಗಳ ಸಂತೋಷಕ್ಕಾಗಿ ತೆಗೆದುಕೊಂಡ ನಿರ್ಧಾರವು ಹಲವು ತಿಂಗಳುಗಳ ಹಣಕಾಸಿನ ಹೊರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಟ್ರಾವೆಲ್ ಲೋನ್ ಪಡೆಯುವ ನಿರ್ಧಾರವನ್ನು ಭಾವನೆಗಳ ಆಧಾರದ ಮೇಲೆ ಅಲ್ಲ, ನಮ್ಮ ಹಣಕಾಸಿನ ಸಾಮರ್ಥ್ಯದ ಆಧಾರದ ಮೇಲೆ ತೆಗೆದುಕೊಳ್ಳುವುದು ಸೂಕ್ತ.

ಲೇಖಕರು: ಆರ್ಥಿಕ ಸಲಹೆಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?