ಟ್ರೆಂಡ್ಸ್‌ ಅಂದ್ರೇನೇ ಹಾಗೆ, ಅದು ಯಾವಾಗಲೂ ಬದಲಾಗುತ್ತಿರುತ್ತದೆ. ಇನ್‌ಸ್ಟಾಗ್ರಾಂನಲ್ಲೇ ನೋಡಿ, ರೀಲ್ಸ್‌ ಮಾಡೋ ಟ್ರೆಂಡ್ಸ್‌ ಹೇಗೆ ಬದಲಾಗುತ್ತಿರುತ್ತದೆ. ಇಷ್ಟೊಂದು ವೇಗದಲ್ಲಿ ಓಡುತ್ತಿರುವ ದುನಿಯಾವನ್ನು ಹಿಡಿಯೋದು ಹೇಗೆ? ಟ್ರೆಂಡ್‌ಗೆ ತಕ್ಕಹಾಗೆ ನಾವು ಬದಲಾಗಬೇಕಲ್ವಾ? ಅಂತ ಯೋಚನೆಗಳು ಆಗಾಗ ಬರುತ್ತಲೇ ಇರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣ, ಎಐನ ಕಾಲದಲ್ಲಂತೂ ಇದು ಮತ್ತಷ್ಟು ಹೆಚ್ಚುತ್ತಿದೆ. ಪ್ರವಾಸದಲ್ಲೂ ಟ್ರೆಂಡ್ಸ್‌ ಇದೆ, ನೆನಪಿರಲಿ. ನಮ್ಮೂರ ಮಂದಾರ ಹೂವೆ ಸಿನಿಮಾ ಬರುವವರೆಗೂ ಯಾಣ ಆ ಪರಿ ಜನಪ್ರಿಯವಾಗಿರಲಿಲ್ಲ. ಹೆಚ್ಚು ಪರಿಚಯವೂ ಇರಲಿಲ್ಲ. ಹಾಗೇ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ಬರುವ ಮುಂಚೆ ಗುಣಾ ಗುಹೆಗಳ ಬಗ್ಗೆಯೂ ಜಾಸ್ತಿ ಗೊತ್ತಿರಲಿಲ್ಲ. ಆದರೆ, ಸಿನಿಮಾ ಬಂದಮೇಲೆ ನೋಡಿ, ಎಷ್ಟೊಂದೆಲ್ಲ ಬದಲಾಗಿದೆ. ಆಗುಂಬೆ ಅಂತ ನೆನಪು ಮಾಡಿಕೊಳ್ಳೋದೇ, ಡಾ. ರಾಜ್‌ಕುಮಾರ್‌ರವರ ಆಗುಂಬೆಯ ಪ್ರೇಮಸಂಜೆಯ ಹಾಡಿನಿಂದ. ಇವೆಲ್ಲ ಸಿನಿಮಾದ ಟ್ರೆಂಡ್‌ಗಳು. ಈಗ ಸೋಷಿಯಲ್‌ ಮಿಡೀಯಾ ಜಮಾನ. ಜನರು ಯಾರಿಗೂ ಗೊತ್ತಿರದ ಸ್ಥಳಕ್ಕೇ ಹೋಗಲು ಹಪಾಹಪಿಸುತ್ತಾರೆ. ಯಾರೋ ನಾಲ್ಕು ಜನ ಒಂದು ಸ್ಥಳಕ್ಕೆ ಹೋಗಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದರೆ ಸಾಕು, ಅದರ ಹಿಂದೆ ನೂರಾರು ಜನ ಆ ಸ್ಥಳಕ್ಕೆ ಹೋಗುತ್ತಾರೆ. ಯಾರೋ ಫಾರಿನ್‌ ಟ್ರಿಪ್‌ಗೆ ಹೋದರೆ, ನಾವೂ ಹೋಗಲೇಬೇಕು ಅಂತ ಹಠಕ್ಕೆ ಬಿದ್ದು ಹೋಗುವವರಿದ್ದಾರೆ. ಫೊಟೋ ಚನ್ನಾಗಿ ಬರುತ್ತೆ ಎನ್ನೋ ಕಾರಣಕ್ಕೆ, ನೂರಾರು ಕಿಮೀ ಹೋದವರಿದ್ದಾರೆ. ಇಂಥ ಟ್ರೆಂಡ್‌ಗಳು ಆಗಾಗ ಬದಲಾಗುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ, ತಿಂಗಳಿನಿಂದ ತಿಂಗಳಿಗೆ, ಋತುಗಳ ಮೇಲೂ ಟ್ರೆಂಡ್‌ಗಳು ಬದಲಾಗುತ್ತವೆ. ಹೀಗೆ 2026ರಲ್ಲಿನ ಟ್ರಾವೆಲ್‌ ಟ್ರೆಂಡ್‌ಗಳು ಹೇಗಿರಲಿವೆ ಎಂಬುದರ ಬಗ್ಗೆ ಈ ಲೇಖನ..

ಇದು ವಿಶ್ವದ ಟಾಪ್‌ ಹೊಟೇಲ್‌, ಟ್ರಾವೆಲ್‌ ಕಂಪನಿಗಳು, ಟ್ರೆಂಡ್‌ ಫೋರ್‌ಕಾಸ್ಟ್‌ಗಳು ಸೇರಿಸಿ ಮಾಡಿದ ಅಧ್ಯಯನದಲ್ಲಿ ಕಂಡು ಬಂದ ಮಾಹಿತಿ. ಅವರ ಪ್ರಕಾರ 2026 ಗಿಜಿಗುಡುವ ಪ್ರಯಾಣಕ್ಕಿಂತ ಶಾಂತತೆಯಿಂದ ಇರುವುದು (quiet escapes), ಅಲ್ಗೋರಿದಮ್‌ ಆಧರಿತ ಪ್ರಯಾಣ ಯೋಜನೆಗಳು, ಅಲ್ಟ್ರಾ ಪರ್ಸನಲೈಸ್ಡ್‌ ಪ್ರವಾಸ ಹೀಗೆ ಅತ್ಯಧಿಕವಾಗಿ ಶಾಂತತೆಯನ್ನು ಬಯಸುವ ಪ್ರಯಾಣಗಳ ಬಗ್ಗೆಯೇ ಮಾಹಿತಿ ಇದೆ.

ಇದನ್ನೂ ಓದಿ: ಕ್ಯಾಲೆಂಡರ್ ವರ್ಷ ಇದು ಜಗವೇ ಆಚರಿಸುವ ಹಬ್ಬ ಎಲ್ಲೆಲ್ಲಿ ಹೇಗೇಗೆ!?

ಶಾಂತಿಯೇ ಮುಖ್ಯ

ಮೊದಲೆಲ್ಲ ಕ್ರೌಡ್‌ ಇದ್ದ ಸ್ಥಳಗಳಲ್ಲೋ, ಜಾತ್ರೆಗಳಿಗೋ, ಫೆಸ್ಟ್‌ಗಳಿಗೋ ಹೋಗಲು ಬಯಸುತ್ತಿದ್ದ ಜನ ಈಗೆಲ್ಲ ಶಾಂತಿಯುತ ಸ್ಥಳಗಳಿಗೆ ಹೋಗಲು ಬಯಸುತ್ತಾರೆ. ಅವರಿಗೆ ಅಲ್ಲಿ ಶಾಂತಿ, ಸೌಕರ್ಯ ಮತ್ತು ಆಧುನಿಕ ಜೀವನ ಒತ್ತಡದಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ನು ಕೆಲವರು ಡಿಜಿಟಲ್‌ ಡಿಟಾಕ್ಸ್‌ ಅಂದರೆ, ಸೋಷಿಯಲ್‌ ಮಿಡಿಯಾ, ಮೊಬೈಲ್‌ ನಂಥ ಎಲ್ಲ ತಂತ್ರಜ್ಞಾನಗಳಿಂದ ದೂರವಿದ್ದು, ಯಾವುದೇ ಟೆನ್ಷನ್‌ ಇಲ್ಲದೇ ತಮ್ಮ ಪ್ರಯಾಣವನ್ನು ಮುಗಿಸುವ ಇರಾದೆಯಲ್ಲಿದ್ದಾರೆ.

ಈಗ ಕರ್ನಾಟಕದಲ್ಲಿಯೂ ಇಂಥ ಹಲವಾರು ಸ್ಥಳಗಳಿವೆ. ಹೋಮ್‌ ಮರೆಸುವಂಥ ಹೋಮ್‌ಸ್ಟೇಗಳು, ರೆಸಾರ್ಟ್‌ಗಳೆಲ್ಲ ಇರುವ ಸ್ಥಳಗಳು ಜನಸ್ತೋಮ ಕಾಣಲಿವೆ. ಹಾಗೇ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನಗಳೆಲ್ಲ ಪ್ರವಾಸೋದ್ಯಮಕ್ಕೆ ಹೆಸರಾಗಿದ್ದರೂ. ಅಲ್ಲಿಗೆ ಹೋಗಿ ಹೊರಗೆಲ್ಲೂ ಹೋಗದೆ, ರೂಮ್‌ನಲ್ಲಿ ಸಮಯ ಕಳೆಯುವ ಟ್ರೆಂಡ್‌ ಬರಬಹುದು.

TRAVEL (2)

ಪ್ಯಾಕೇಜ್‌ಗಿಂತ ಜಾಸ್ತಿ ಎಐ

ಮೊದಲೆಲ್ಲ ಟ್ರಾವೆಲ್‌ ಪ್ಲ್ಯಾನರ್ಸ್‌ ಅಥವಾ ಕೆಲವು ಕಂಪನಿಗಳ ಜತೆ ಪ್ರವಾಸಕ್ಕೆ ಹೋಗುವ ಟ್ರೆಂಡ್‌ ಇತ್ತು. ಆದರೆ, ಯುಕೆಯ ಅಮೇಡಿಯಸ್‌ ರಿಸರ್ಚ್‌ ಅವರ ಪ್ರಕಾರ ಈಗಾಗಲೇ ಜನ ಜನರೇಟಿವ್‌ ಎಐನ್ನು ತಮ್ಮ ಪ್ರವಾಸದಲ್ಲಿ ಬಳಸುತ್ತಿದ್ದಾರೆ. ಹಾಗೇ ಹಲವಾರು ಟ್ರಾವೆಲ್‌ ಸಂಸ್ಥೆಗಳೂ ಚ್ಯಾಟ್‌ ಜಿಪಿಟಿಯಂಥ ಎಐ ಕಂಪನಿಗಳ ಜತೆ ಕೈ ಜೋಡಿಸುತ್ತಿದ್ದಾರೆ. ಇದರಿಂದ ಪ್ರಯಾಣದಲ್ಲಿ ಎಐ ಮೇಲಿನ ಅವಲಂಬನೆ ಮತ್ತಷ್ಟು ಹೆಚ್ಚಲಿದೆ. ಅದರ ಜತೆಗೆ ರಿಯಲ್‌ ಟೈಮ್‌ ಟ್ರಾನ್ಸಲೇಷನ್‌ ಮತ್ತು ಎಐಗಳೇ ಪ್ರವಾಸದ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಪ್ರವಾಸಿಗು ಇದರ ಮೇಲೆಯೇ ಅವಲಂಬಿತರಾಗುತ್ತಿದ್ದಾರೆ,

ಹೀಗೆ ಎಐ ಮೇಲೆಯೇ ಸಂಪೂರ್ಣ ಅವಲಂಬಿತರಾದರೆ, ಓವರ್‌ ಟೂರಿಸಂ ಆಗುವ ಅಪಾಯವೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಯ್ಕೆಗಳ ಮೇಲಿನ ನಂಬಿಕೆ

ಇದು ಹೇಗೆಂದರೆ, ಜಾಸ್ತಿ ಆಯ್ಕೆಗಳನ್ನೇ ಮಾಡುವುದಲ್ಲ. ಅಥವಾ ಸಂಪೂರ್ಣ ಯೋಜನೆಯನ್ನು ರೂಪಿಸಿಯೇ ಹೋಗುವುದಲ್ಲ. ಬದಲಿಗೆ ಯಾರದ್ದೋ ಆಯ್ಕೆಗಳ ಮೇಲೆ ನಮ್ಮ ಪ್ರಯಾಣವನ್ನು ಮಾಡುವುದು. ಮೆಜೆಸ್ಟಿಕ್‌ಗೆ ಬಂದ ತಕ್ಷಣ ಅಲ್ಲಿನ ಯಾರಿಗೋ ʼಅಣ್ಣ ಇಲ್ಲಿ ಒಳ್ಳೆ ತಿಂಡಿ ಎಲ್ಲಿ ಸಿಗುತ್ತೆ? ಉಳ್ಕೊಳ್ಳೋಕೆ ಒಳ್ಳೆ ಹೊಟೇಲ್‌ ಯಾವ್ದು?ʼ ಅಂತ ಕೇಳಿ, ಅವರ ಉತ್ತರದ ಮೇಲೆ ಸಂಪೂರ್ಣ ಭರವಸೆಯನ್ನು ಇಟ್ಟು, ಅಲ್ಲಿಗೇ ಹೋಗೋದು.

ಇಂಥ ಟ್ರಾವೆಲ್‌ ಟ್ರೆಂಡ್‌ ಈಗಾಗಲೇ ಶುರುವಾಗಿದೆ, ಅರ್ಜೆಂಟೀನಾದಲ್ಲಿ ಸುಸಾನಾ ಬಲ್ಬೋವಾಸ್‌ ವೈನ್‌ಮೇಕರ್ಸ್‌ ಹೌಸ್‌ ಮತ್ತು ಸ್ಪಾ ಸ್ಯೂಟ್ಸ್‌ ಸಂಸ್ಥೆಯವರು ಒಂದು ನಿಗೂಢವಾದ ಪ್ರವಾಸವನ್ನು ಮಾಡಿಸುತ್ತಾರೆ. ಇದೊಂಥರ ಬಿಗ್‌ ಬಾಸ್‌ಗೆ ಹೋದಹಾಗೆ, ನಾಳೆ ಏನು ಇರುತ್ತೋ ಗೊತ್ತಿರೋದಿಲ್ಲ, ಆದರೆ, ಸರ್ಪ್ರೈಸ್‌ ಮಾತ್ರ ಇರುತ್ತೆ. ಇಲ್ಲಿನ ಪ್ರಯಾಣಿಕರಿಗೆ ಯೋಜನೆ, ಅಜೆಂಡಾದ ಬಗ್ಗೆಯೂ ಜಾಸ್ತಿ ಮಾಹಿತಿ ಇರಲ್ಲ, ಗಾಳಿ ಬಂದಂತೆ ಹಾರುವುದಷ್ಟೇ ಇವರ ಕೆಲಸ. ಇಂಥದ್ದೇ ಒಂದು ಪ್ರವಾಸ ನೀವೂ ಮಾಡಿ. ಯಾವುದೇ ಯೋಜನೆ ಇಲ್ಲದೇ ಒಂದು ಊರಿಗೆ ಹೋಗಿ, ಅಲ್ಲಿನ ಆಟೋ ಡ್ರೈವರ್‌ಗಳು, ಸ್ಥಳೀಯರ ಮಾತನ್ನು ಕೇಳಿ, ಅವರು ಹೇಳಿದಹಾಗೆ ಮಾಡಿಕೊಳ್ಳಿ, ಅದರಲ್ಲೂ ಮಜಾ ಇರುತ್ತೆ ಅಲ್ವಾ?

ಹಾರೋದು ಬೇಡ ಓಡಿಸೋದು ಓಕೆ!

ಈ ಟ್ರೆಂಡ್‌ನ್ನು ಹಲವಾರು ಜನ ಈಗಾಗಲೇ ಮಾಡಿದ್ದಾರೆ. ವಿಮಾನದ ಬದಲು ಕಾರಿನಲ್ಲೋ, ಬೈಕ್‌ನಲ್ಲೋ ಸುತ್ತಾಡೋದು. ಕರ್ನಾಟಕದಿಂದ ಈಗಾಗಲೇ ಎಷ್ಟೋ ಜನ ಈ ರೀತಿ ಕಾರಿನಲ್ಲಿ ಬೇರೆ ಬೇರೆ ದೇಶಕ್ಕೆ ಹೋಗಿ ಬಂದಿದ್ದಾರೆ. 2026ರ ಟ್ರೆಂಡ್‌ ಪ್ರಕಾರ ರೋಡ್‌ ಟ್ರಿಪ್‌ಗಳು ಮತ್ತಷ್ಟು ಹೆಚ್ಚಲಿವೆ.

ಕೆಲವರ ಪ್ರಕಾರ ರೋಡ್‌ ಟ್ರಿಪ್‌ಗಳು ಲಕ್ಸುರಿ ಎಕ್ಸ್‌ಪಿರಿಯೆನ್ಸ್‌ ನೀಡುತ್ತದೆ. ನೀವು ಔಡಿ ಅಥವಾ ಬೆಂಜ್‌ನಂಥ ಲಕ್ಸುರಿ ಕಾರ್‌ಗಳನ್ನು ರೋಡ್‌ ಟ್ರಿಪ್‌ಗೆ ತಗೊಂಡು ಹೋದರೆ ಅದು ಲಕ್ಸುರಿನೇ, ಆದರೆ, ಇನ್ನೂ ಕೆಲವರ ಪ್ರಕಾರ ಹಲವಾರು ದೇಶಗಳಲ್ಲಿರುವ ದುಬಾರಿ ವಿಮಾನ ದರದಿಂದ ಬೇಸತ್ತು ಹಣ ಉಳಿಸಲು, ಕಡಿಮೆ ದುಡ್ಡಿನಲ್ಲಿ ಡೆಸ್ಟಿನೇಷನ್‌ ತಲುಪುವ ಇರಾದೆಯೂ ಇರುತ್ತೆ. ಇದು ಮಾತ್ರ ಪ್ರವಾಸಿಗರ ಜೇಬಿನ ಮೇಲೆಯೇ ಅವಲಂಬಿತವಾಗಿದೆ.

ಅತ್ಯಂತ ವೈಯಕ್ತಿಕಗೊಳಿಸಿದ ಪ್ರವಾಸ

TRAVEL (3)

ಮೊದಲೆಲ್ಲ ಎಲ್ಲರೂ ಸೇರಿ ಹೋಗುವ ಪ್ರವಾಸಗಳು ಸಿಕ್ಕಾಪಟ್ಟೆ ಇದ್ದವು. ಆದರೆ, ಇತ್ತೀಚೆಗೆ ಅದೆಲ್ಲ ಕಡಿಮೆಯಾಗಿದೆ. ಐದಕ್ಕಿಂತ ಜಾಸ್ತಿ ಜನರ ಜತೆಗೆ ಪ್ರವಾಸಕ್ಕೆ ಹೋಗೋದಕ್ಕೆ ಹಿಂದೇಟು ಹಾಕುತ್ತಾರೆ, ನೀವೇ ಯೋಚನೆ ಮಾಡಿ, ಶಾಲೆ ಮತ್ತು ಕಾಲೇಜಿನ ಸಮಯದಲ್ಲಿ ನೂರಾರು ಜನ ವಿದ್ಯಾರ್ಥಿಗಳು ಸೇರಿ ಪ್ರವಾಸಕ್ಕೆ ಹೋಗುತ್ತಿದ್ದಿರಿ. ಆದರೆ, ಈಗೆಲ್ಲ ಪ್ರವಾಸಕ್ಕೆ ಹೋಗುವ ಮನಸ್ಸಿದ್ದರೂ ಅತ್ಯಂತ ಕ್ಲೋಸ್‌ ಫ್ರೆಂಡ್‌ ಜತೆ ಅಥವಾ ಒಬ್ಬರೇ ಹೋಗುವುದಕ್ಕೆ ಯೋಜನೆ ಮಾಡುತ್ತೀರಿ. ಹೀಗೆ ಮದುವೆಯಾದರೂ ತಮ್ಮ ಸಂಗಾತಿಯನ್ನು ಬಿಟ್ಟು ಒಬ್ಬರೇ ಪ್ರವಾಸಕ್ಕೆ ಹೋಗುವುದೂ ಇದೆ.

ಇದು ಡಿವೋರ್ಸ್‌ನ ಬೇಜಾರಿನಿಂದ ಹೊರಗೆ ಬರಲು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಂಡವರು ಒಬ್ಬರೇ ಇರೋಹಾಗೆ ಯೋಜನೆ ಕೇಳುವವರು ಅಥವಾ ಇನ್ನೂ ಹೇಳಬೇಕೆಂದರೆ, ಆಟ ಆಡಲು, ಹುಳುಗಳ ಮೇಲೆ ಅಧ್ಯಯನ ಮಾಡಲೂ ಹೋಗುವವರಿದ್ದಾರೆ ಅವರಿಗೆಂದೇ ವಿಶೇಷ ಯೋಜನೆಗಳನ್ನು ಪ್ರವಾಸಿ ಸಂಸ್ಥೆಗಳು ಮಾಡುತ್ತಿವೆ. ಇಂಥ ಪ್ರವಾಸಗಳೂ ಈ ವರ್ಷದಲ್ಲಿ ಹೆಚ್ಚಾಗಲಿವೆ.

ಗೊತ್ತಿಲ್ಲದ ಸ್ಥಳಗಳ ಮೇಲೇ ಕಣ್ಣು

ಇನ್‌ಸ್ಟಾಗ್ರಾಮ್‌ ನಿಂದಲೇ ಹಲವಾರು ಟ್ರಾವೆಲಿಂಗ್‌ ಟ್ರೆಂಡ್ಸ್‌ ಬರುತ್ತೆ ಅಂತ ಹೇಳಿದ್ದು ನಿಜ. ಆದರೆ, ಈ ಎಲ್ಲ ಟ್ರಾವೆಲಿಂಗ್‌ ಟ್ರೆಂಡ್ಸ್‌ ಇನ್‌ಸ್ಟಾಗ್ರಾಮ್‌ನ ʼವಿರೋಧ ಪಕ್ಷʼದ ಪ್ರವಾಸ ಇದ್ದಂತೆ. ಅಂದ್ರೆ ಹಲವಾರು ಸ್ಥಳಗಳು ಈಗಾಗಲೇ ಇನ್‌ಸ್ಟಾಗ್ರಾಮ್‌ ನಲ್ಲಿ ಫೇಮಸ್‌ ಆಗಿದೆ. ಆದರೆ, ಇವರೆಲ್ಲ ಅಂಥ ಸ್ಥಳಗಳಿಗೆ ಹೋಗುವುದೇ ಇಲ್ಲ. ಇವರದ್ದೇನಿದ್ದರೂ ತಮ್ಮದೇ ಓನ್‌ ಸ್ಟೈಲ್‌. ಓವರ್‌ಕ್ರೌಡೆಡ್‌ ನಂಥ ಸ್ಥಳಗಳನ್ನು ಬಿಟ್ಟು, ಜಾಸ್ತಿ ಗೊತ್ತಿಲ್ಲದ ಅಥವಾ ಅಂಡರ್‌ ರೇಟೆಡ್‌ ಅಂತ ಹೇಳುತ್ತೀವಲ್ಲ ಅಂಥ ಸ್ಥಳಗಳಿಗೆ ಹೋಗೋದು ಜಾಸ್ತಿ. ಸ್ಪೇನ್‌ನ ಟೊಲೆಡೊ, ಜರ್ಮನಿಯ ಬ್ರ್ಯಾಂಡೆನ್‌ಬರ್ಗ್‌, ಇರಾಕ್‌, ಕಾಟ್ಸ್‌ವೋಲ್ಡ್ಸ್‌ ಮತ್ತು ಕಾರ್ನ್‌ವಾಲ್‌ ನಂಥ ಫೇಮಸ್‌ ಸ್ಥಳಗಳನ್ನು ಬಿಟ್ಟು ನಾರ್ಥಂಬರ್‌ಲ್ಯಾಂಡ್‌, ವೇಲ್ಸ್‌ ಮತ್ತು ಸೊಮರ್‌ಸೆಟ್‌ನಂಥ ಕಡಿಮೆ ಜನಜಂಗುಳಿ ಇರುವಂಥ ಪ್ರದೇಶಗಳಿಗೆ ಹೋಗುತ್ತಾರೆ.

ಸಂಸ್ಕೃತಿಯೂ ಇಂಪಾರ್ಟೆಂಟ್‌

ಒಂದು ಸ್ಥಳದ ಸಂಸ್ಕೃತಿಯನ್ನು ಅನುಭವಿಸಲು ಹೋಗುವ ಪ್ರವಾಸಗಳು ಹೆಚ್ಚಾಗಲಿವೆ. ಹೇಗೆಂದರೆ, ಜೈಪುರ ಲಿಟ್‌ ಫೆಸ್ಟ್‌ಗೆ ಹೋಗೋದು, ವಾರಾಣಸಿಯಲ್ಲಿ ಪಾನ್‌ ತಿನ್ನೋಕೆ ಅಂತಾನೋ ಸೀರೆ ತರೋಕೆ ಅಂತಾನೋ ಹೋಗುವುದು. ಮುಂಬೈನ ನೈಟ್‌ಲೈಫ್‌ ಎಂಜಾಯ್‌ ಮಾಡೋಕೆ ಹೋಗೋದು, ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಬರುವ ಸ್ಥಳಗಳಿಗೆ ಹೋಗೋದು. ಇದನ್ನು ಸೀರಿಯಸ್‌ ಆಗಿ ತೆಗೆದುಕೊಂಡ ಕೇರಳ ಪ್ರವಾಸೋದ್ಯಮ ಇತ್ತೀಚೆಗೆ ಬೇಕಲ್‌ ಫೋರ್ಟ್‌ನ್ನು ಫೇಮಸ್‌ ಮಾಡಲು ಹೊರಟಿದೆ. ಚಿತ್ರದುರ್ಗಕ್ಕೆ ಹೊರಟರೆ, ನಾಗರಹಾವು ಸಿನಿಮಾ ನೆನಪಾಗುವ ಹಾಗೆ ಬೇಕಲ್ ಕೋಟೆ ಜತೆ ಬಾಂಬೆ ನೆನಪಾಗುತ್ತದೆ. ಇನ್ನು ಸಂಸ್ಕೃತಿ ಪ್ರವಾಸ ಅಂದರೆ, ಯಾವುದೋ ಕುಂಬಾರರ ಓಣಿಯಲ್ಲಿ ಹೋಗಿ ಕುಂಬಾರಿಕೆ ಮಾಡೋದು. ವಿಶ್ವದ ಖ್ಯಾತ ಲೈಬ್ರರಿಗಳಿಗೆ ಹೋಗಿ ಪುಸ್ತಕ ಓದೋದು…. ಹೀಗೆ ಕೆಲವು ಅನುಭವಗಳನ್ನು ಪಡೆಯುವಂಥ ಪ್ರವಾಸವನ್ನು ಮಾಡುವುದು ಹೊಸ ವರ್ಷಕ್ಕೆ ಹೆಚ್ಚಾಗಲಿದೆ.

ಪ್ರವಾಸೋದ್ಯಮ ಸಂಸ್ಥೆಗಳು ಸಂಶೋಧನೆ ಮಾಡಿ, ಟ್ರೆಂಡ್‌ಗಳ ಬಗ್ಗೆ ತಿಳಿದುಕೊಂಡು ಈ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಪ್ರವಾಸಿಗರಿಗೆ ಬೇಕಾದ ಯೋಜನೆಗಳನ್ನು ಮಾಡುತ್ತಾರೆ. ಇದರಲ್ಲಿ ಹಲವಾರು ಅಂಶಗಳು ನಮಗೆಲ್ಲ ಗೊತ್ತೇ ಇದೆ, ಅಥವಾ ನಾವೂ ಹಾಗೆ ಪ್ರಯಾಣ ಮಾಡಿರುತ್ತೇವೆ. ಆದರೆ, ಈ ರೀತಿಯ ಪ್ರವಾಸಗಳು ಇನ್ನುಂದೆ ಹೆಚ್ಚಾಗಲಿದೆ.