ಕ್ಯಾಲೆಂಡರ್ ವರ್ಷ ಇದು ಜಗವೇ ಆಚರಿಸುವ ಹಬ್ಬ ಎಲ್ಲೆಲ್ಲಿ ಹೇಗೇಗೆ!?
ಗ್ರೀಸ್‌ನಲ್ಲಿ ದಾಳಿಂಬೆಯನ್ನು ಬಾಗಿಲಿಗೆ ಹೊಡೆಯುವ ಪದ್ಧತಿಯಿದೆ. ಅದರ ಬೀಜಗಳೆಲ್ಲ ಸಿಡಿದರೆ ಅದು ಲಕ್ ಅಂತೆ. ಐರ್ಲೆಂಡ್‌ನಲ್ಲಿ ಜನರು ಕ್ರಿಸ್‌ಮಸ್ ಬ್ರೆಡ್ ಮಾಡಿ ಅದನ್ನು ಮನೆಯ ಗೋಡೆಗಳಿಗೆಲ್ಲ ಎಸೆದು ಸಂಭ್ರಮ ಪಡುತ್ತಾರೆ. ಇದು ಕೆಟ್ಟ ಆತ್ಮಗಳನ್ನು ಹೊರದೂಡಿ ಒಳ್ಳೆಯ ಆತ್ಮಗಳನ್ನು ಬರಮಾಡಿಕೊಳ್ಳುವ ಆಚರಣೆಯಂತೆ.
ʼನಮ್ಮದು ಯುಗಾದಿ ಹೊಸ ವರ್ಷ. ಜನವರಿ ಒಂದು ನಮಗೆ ಹೊಸ ವರ್ಷ ಅಲ್ಲ, ನಾನು ಜನವರಿ ಒಂದರ ದಿನವನ್ನು ಎಲ್ಲ ದಿನಗಳ ರೀತಿ ನೋಡುತ್ತೇನೆ. ಭಾರತೀಯರಿಗೆ ಯುಗಾದಿಯೇ ಹೊಸವರ್ಷ, ಅವತ್ತೇ ನಮಗೆ ಶುಭಾಶಯ ತಿಳಿಸಿʼ ಅಂತ ಹೇಳುವ ಗುಂಪೊಂದು ಇರುತ್ತೆ. ಡಿಸೆಂಬರ್ 31ರ ರಾತ್ರಿ, ಎಂದೂ ಕಂಡಿರದ ರೀತಿಯಲ್ಲಿ ಕುಡಿದು, ಅಮಲಿನಲ್ಲಿ ರೋಡಲ್ಲೆಲ್ಲ ಬಿದ್ದು, ಯಾರ್ಯಾರದ್ದೋ ಸಹಾಯದಿಂದ ಎದ್ದು, ಎಲ್ಲೆಲ್ಲಿಗೋ ಹೋಗಿ ಏನೇನೋ ಮಾಡುವವರ ಗುಂಪೊಂದಿದೆ. ಹಾಗೆಯೇ ಯಾರಾದರೂ ಪಾರ್ಟಿಗೆ ಕರೆದರೆ ಮಾತ್ರ ಹೋಗೋದು, ಇಲ್ಲಾಂದ್ರೆ ಮನೇಲಿ ತಿಂದು ಮಲಗೋ ಗುಂಪೊಂದಿದೆ. ಪ್ರತಿ ದಿನ ಪಾರ್ಟಿ ಮಾಡ್ತೀನಿ, ಪ್ರತಿ ದಿನ ಕುಡೀತೀನಿ, ಹಾಗಂತ ಡಿಸೆಂಬರ್ 31ರ ರಾತ್ರಿ ಯಾವ ಪಾರ್ಟೀನೂ ಇಲ್ಲ, ಎಲ್ಲ ಕಾಮನ್ ಎನ್ನುವ ಇನ್ನೊಂದು ಗುಂಪೂ ಇದೆ. ಇನ್ನು ಆಫೀಸ್‌ಗಳಲ್ಲಿ, ಸೀಕ್ರೆಟ್ ಸಾಂಟಾ ಅಂತಾನೋ, ನ್ಯೂ ಇಯರ್ ಪಾರ್ಟಿ ಅಂತಾನೋ ಸಂಭ್ರಮಾಚರಣೆ ಪಡುವುದೂ ಇದೆ. ಹಾಗೆ ಶಾಲೆಗಳಲ್ಲಿ. ವರ್ಷದ ಮೊದಲನೆಯ ದಿನ ಆಟ, ಸಾಂಸ್ಕೃತಿಕ ಕಾರ್ಯಕ್ರಮ, ಹೀಗೆ ಹಲವಾರು ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ.

ಡಿಸೆಂಬರ್ 31ರ ರಾತ್ರಿ ಪಾರ್ಟಿ ಅಂದ ತಕ್ಷಣ ನಶೆ ಏರಿಸಿಕೊಳ್ಳುವುದು, ಡ್ಯಾನ್ಸ್ ಮಾಡುವುದು ಬಿಟ್ಟರೆ, ಪಟಾಕಿ ಹೊಡೆಯುವುದು. ಅದಕ್ಕಿಂತ ಹೇಳಿಕೊಳ್ಳುವಂಥ ಸಂಭ್ರಮಾಚರಣೆ ನಮ್ಮ ದೇಶದಲ್ಲಿಲ್ಲ. ರಾತ್ರಿಯೆಲ್ಲ ಪಬ್‌ಗಳಲ್ಲಿ ಇರುವ ಜನರು ಬೆಳಗ್ಗೆ ದೇವಸ್ಥಾನಕ್ಕೂ ಹೋಗಿರಬಹುದು. ನಮ್ಮ ದೇಶದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಕೆ ಇಂಥದ್ದೇ ಆಚರಣೆ ಅಂತ ಏನೂ ಇಲ್ಲ. ಆದರೆ, ವಿಶ್ವದ ಹಲವಾರು ಕಡೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬರೀ ಕುಡಿದು, ಪಟಾಕಿ ಸಿಡಿಸುವುದು ಅಷ್ಟೇ ಅಲ್ಲ. ಎಷ್ಟೋ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗಳಿವೆ. ಅಂಥ ಕೆಲವು ಆಚರಣೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪಪ್ಪಾಂಜಿಗೆ ಬೆಂಕಿ

ಪಕ್ಕದ ರಾಜ್ಯ ಕೇರಳದಲ್ಲಿ ಒಂದು ಮಟ್ಟಕ್ಕೆ ಬೇರೆ ದೇಶಗಳ ಸಂಸ್ಕೃತಿ ಹಾಸುಹೊಕ್ಕಾಗಿದೆ. ಯುರೋಪ್, ಅರಬ್ ಹಾಗೂ ಹಲವಾರು ದೇಶಗಳಲ್ಲಿನ ವಾಸ್ತುಶಿಲ್ಪ, ಆಚರಣೆಗಳು ಇಲ್ಲಿವೆ. ಅದೇ ರೀತಿ ಹೊಸ ವರ್ಷದ ಸಂದರ್ಭದಲ್ಲಿ ಪಪ್ಪಾಂಜಿಗೆ ಬೆಂಕಿ ಹಚ್ಚುವುದು ಇಲ್ಲಿನ ಆಚರಣೆ. ಪಪ್ಪಾಂಜಿ ಅಂದರೆ ಅಪ್ಪ ಅಲ್ಲ! ಬದಲಿಗೆ, ಉತ್ತರ ಭಾರತದಲ್ಲಿ ದಸರಾದ ಸಮಯದಲ್ಲಿ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದ ಹಾಗೆ ಇಲ್ಲಿ ಪಪ್ಪಾಂಜಿ ಎನ್ನುವ ಯುರೋಪಿಯನ್ ಥರದ ಮನುಷ್ಯನ ಪ್ರತಿಕೃತಿಗೆ ಬೆಂಕಿ ಹಚ್ಚುವುದು ಪ್ರತೀತಿ. ಈ ಆಚರಣೆ ಇಡೀ ಕೇರಳಾದ್ಯಂತ ಆಚರಿಸದಿದ್ದರೂ, ಕೊಚ್ಚಿಯ ಸಮುದ್ರ ದಂಡೆಯಲ್ಲಿ ಈ ಆಚರಣೆ ಇರುತ್ತದೆ. ಈ ವರ್ಷವೂ ಇತ್ತು.
ಇಲ್ಲಿನ ಸ್ಥಳೀಯ ಕುಶಲಕರ್ಮಿಗಳು ಸ್ಟ್ರಾ, ಪೇಪರ್ ಮತ್ತು ಬಟ್ಟೆಯನ್ನು ಬಳಸಿ ಒಂದು ದೊಡ್ಡ ಆಕೃತಿಯನ್ನು ಮಾಡುತ್ತಾರೆ. ಡಿಸೆಂಬರ್ 31ರಂದು ರಾತ್ರಿ 12 ಗಂಟೆಗೆ ಇದಕ್ಕೆ ಬೆಂಕಿ ಹಚ್ಚುತ್ತಾರೆ. ಅದರ ಜತೆಗೆ ಪಟಾಕಿ ಹಚ್ಚೋದು, ಮ್ಯೂಸಿಕ್‌ಗೆ ಕುಣಿಯೋದು ಇವೆಲ್ಲವೂ ಇರುತ್ತೆ. ಹಳೆಯ ವರ್ಷದ ಕಷ್ಟ ದಾರಿದ್ರ್ಯಗಳನ್ನು ಸುಟ್ಟು ಹೊಸವರ್ಷವನ್ನು ಹೊಸತನ, ಆಶಾವಾದ ಮತ್ತು ಭರವಸೆಯಿಂದ ಆಗಮನ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ. ಪೋರ್ಚುಗೀಸ್ ರ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆ, ಕೇರಳದ ಸಂಸ್ಕೃತಿ, ಕಲೆ, ಜನರ ಮನೋಭಾವವನ್ನು ಪ್ರದರ್ಶಿಸುತ್ತದೆ.
ಹೊಟ್ಟೆಯಲ್ಲ ತಟ್ಟೆ ಒಡೆಯೋದು!

ಶಾಂಪೇನ್ ಚಿಮ್ಮಿಸುವುದು ಅಥವಾ ಪಾರ್ಟಿ ಪಾಪರ್‌ನ್ನು ಸಿಡಿಸಿ ಸಂಭ್ರಮಿಸುವುದಷ್ಟೇ ಅಲ್ಲ, ಡೆನ್ಮಾರ್ಕ್‌ನಲ್ಲಿ ಹೊಸ ವರ್ಷವನ್ನು ಪಾತ್ರೆಗಳನ್ನು ಒಡೆಯುವುದರ ಮುಖಾಂತರ ಆಚರಿಸುತ್ತಾರೆ. ಡಿಸೆಂಬರ್ 31ರ ರಾತ್ರಿ ಹಳೆಯ ಪಿಂಗಾಣಿ ಪ್ಲೇಟ್‌ಗಳು, ಬೌಲ್‌ಗಳನ್ನೆಲ್ಲ ಕೂಡಿಸಿ, ಮಧ್ಯರಾತ್ರಿಯಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಮನೆಯ ಡೋರ್‌ಗಳ ಮುಂದೆ ಅದನ್ನೆಲ್ಲ ಒಡೆಯುತ್ತಾರೆ.
ಡೆನ್ಮಾರ್ಕ್ ಜನಕ್ಕೆ ಇದು, ಹೊಸ ವರ್ಷದ ಸಮಯದಲ್ಲಿ ಹಳೆಯ ಕಷ್ಟಗಳನ್ನೆಲ್ಲ ತೊಡೆದು ಹಾಕಿ, ಹೊಸ ವರ್ಷವನ್ನು ಬರಮಾಡಿಕೊಂಡ ಹಾಗೆ. ಇಲ್ಲಿ ಇನ್ನೊಂದು ಮಜವೇನೆಂದರೆ, ಯಾರ ಮನೆಯ ಮುಂದೆ ಜಾಸ್ತಿ ಪಾತ್ರೆಗಳ ತುಂಡುಗಳು ಬಿದ್ದಿರುತ್ತವೋ, ಅಷ್ಟು ಅದು ಅವರಿಗೆ ಒಳ್ಳೆಯದಂತೆ. ಅದು ಅಷ್ಟೊಂದು ಸ್ನೇಹ ಮತ್ತು ಪ್ರೀತಿಗಳಿಸಿದ ಸಂಕೇತವಂತೆ. ಬೆಳಗ್ಗೆ ಬಾಗಿಲು ತೆಗೆದಾಗ ಹಳೆಯ ಪಾತ್ರೆ ಒಡೆದಿರುವುದನ್ನು ನೋಡಿ ಇಲ್ಲಿ ಯಾರೂ ಕೂಗಾಡಲ್ಲ, ಬದಲಿಗೆ ಖುಷಿ ಪಡುತ್ತಾರೆ. ಈ ಖುಷಿ ಒಡೆಯುವವರಿಗೂ ಮತ್ತು ಆ ಮನೆಯವರಿಗೂ ಇರುತ್ತದೆ.
ಅದೇ ರೀತಿ ಗ್ರೀಸ್‌ನಲ್ಲಿ ದಾಳಿಂಬೆಯನ್ನು ಬಾಗಿಲಿಗೆ ಹೊಡೆಯುವ ಪದ್ಧತಿಯಿದೆ. ಅದರ ಬೀಜಗಳೆಲ್ಲ ಸಿಡಿದರೆ ಅದು ಲಕ್ ಅಂತೆ. ಐರ್ಲೆಂಡ್‌ನಲ್ಲಿ ಜನರು ಕ್ರಿಸ್‌ಮಸ್ ಬ್ರೆಡ್ ಮಾಡಿ ಅದನ್ನು ಮನೆಯ ಗೋಡೆಗಳಿಗೆಲ್ಲ ಎಸೆದು ಸಂಭ್ರಮ ಪಡುತ್ತಾರೆ. ಇದು ಕೆಟ್ಟ ಆತ್ಮಗಳನ್ನು ಹೊರದೂಡಿ ಒಳ್ಳೆಯ ಆತ್ಮಗಳನ್ನು ಬರಮಾಡಿಕೊಳ್ಳುವ ಆಚರಣೆಯಂತೆ.
ಅಹನ್‌ಯೋ ವೇಯ್ ಯೋ!

Año Viejo ಅಂದ ತಕ್ಷಣ ಯಾರಿಗೂ ಗೊತ್ತಾಗಲ್ಲ, ಇದು ಭಾರತೀಯ ಭಾಷೆಯೂ ಅಲ್ಲ, ಇಂಗ್ಲಿಷೂ ಅಲ್ಲ. ಇಕ್ವೆಡಾರ್ ಭಾಷೆಯಲ್ಲಿ ಅಹನ್‌ಯೋ ವೇಯ್ ಯೋ ಅಂದರೆ ಹಳೆಯ ವರ್ಷ ಅಂತ. ನಾವು ಕಾಮ ದಹನ ಮಾಡುವ ರೀತಿ, ಅಲ್ಲಿಯವರು ಅಹನ್‌ಯೋ ವೇಯ್ ಯೋ ಎಂಬ ಆಚರಣೆಯಲ್ಲಿ ಪ್ರತಿಕೃತಿಗಳನ್ನು ಸುಡುತ್ತಾರೆ. ಇಲ್ಲಿ ಗೊಂಬೆಗಳಲ್ಲಿ ಪಟಾಕಿಯನ್ನು ತುಂಬಿರುತ್ತಾರೆ. ಗೊಂಬೆಗಳಿಗೆ ಇಂಥದ್ದೇ ರೂಪ ಇರಬೇಕು ಎಂದೇನೂ ನಿಯಮವಿಲ್ಲ. ಅದು ರಾಜಕಾರಣಿಗಳಿರಬಹುದು, ಕಾರ್ಟೂನ್‌ನ ಗೊಂಬೆಗಳಿರಬಹುದು ಅಥವಾ ಸಿನಿಮಾ ಆಕ್ಟರ್‌ಗಳೂ ಇರಬಹುದು. ತಮಗೆ ಬೇಕಾದ ರೀತಿಯಲ್ಲಿ ಗೊಂಬೆಗಳನ್ನು ಮಾಡಿ ಅದರಲ್ಲಿ ಪಟಾಕಿಗಳನ್ನು ಇಟ್ಟು ಅವುಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡುತ್ತಾರೆ.
ಮಧ್ಯರಾತ್ರಿಯಲ್ಲಿ ಊರಿನ ಜನಗಳೆಲ್ಲ ಒಂದು ಸ್ಥಳದಲ್ಲಿ ಸೇರಿ ಪ್ರತಿಕೃತಿಗಳನ್ನು ಸುಟ್ಟು ಸಂಗೀತ, ನೃತ್ಯ, ನಗು ಮೋಜು ಮಸ್ತಿಗಳ ಜತೆಗೆ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಈ ರೀತಿ ಪ್ರತಿಕೃತಿಗಳನ್ನು ಸುಡುವುದು ನಕಾರಾತ್ಮಕತೆಯನ್ನು ಸುಟ್ಟು, ವೈಬ್‌ಗಳನ್ನು ಸ್ವಾಗತಿಸಿದ ಹಾಗಂತೆ. ಭಾರತದಲ್ಲೂ ಇಂಥ ಹಬ್ಬವಿತ್ತೆಂದರೆ, ಈ ವರ್ಷ ಡಿ ಬಾಸ್‌ರ ಪ್ರತಿಕೃತಿಗಳೂ ಎಷ್ಟು ದಹನವಾಗುತ್ತಿತ್ತೋ! ಇದ್ರೆ ನೆಮ್ಮದಿಯಾಗಿರ್ಬೇಕ್ ಅಂತ ಏನೇನೆಲ್ಲ ಮಾಡ್ತಿದ್ರೋ!
12 ಗಂಟೆಗೆ 12 ದ್ರಾಕ್ಷಿ

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಟೇಬಲ್ ಕೆಳಗೆ ಕೂತು 12 ದ್ರಾಕ್ಷಿ ತಿಂದೆ ಅಂತ ಒಂದು ಟ್ರೆಂಡ್ ಶುರುವಾಗಿದೆ. ಆದರೆ, ಆ ಟ್ರೆಂಡ್ ಬರುವುದಕ್ಕೂ ಎಷ್ಟೋ ಶತಮಾನಗಳ ಹಿಂದೆ ಸ್ಪ್ಯಾನಿಷ್ ಜನ ಈ ಆಚರಣೆಯನ್ನು ಮಾಡುತ್ತಿದ್ದರು. ಇವರು ತಮ್ಮ ಹಣೆಬರಹವನ್ನು ಆಹಾರದ ಜತೆಗೆ ಕನೆಕ್ಟ್ ಮಾಡುತ್ತಾರೆ. ರಾತ್ರಿ 12 ಗಂಟೆ ಆದ ತಕ್ಷಣ, ಗಡಿಯಾರಗಳು 12 ಬಾರಿ ಘಂಟೆ ಹೊಡೆಯುತ್ತವೆ. ಆಗ ಒಂದೊಂದು ಘಂಟೆಗೂ ಒಂದೊಂದು ದ್ರಾಕ್ಷಿ ತಿನ್ನುತ್ತಾರೆ. ಒಂದೊಂದು ದ್ರಾಕ್ಷಿಯೂ ಒಂದೊಂದು ತಿಂಗಳಿಗೆ ಲಕ್ ತರಲಿ ಎಂಬುವುದು ಇದರ ವ್ಯಾಖ್ಯಾನ.
ಮ್ಯಾಡ್ರಿಡ್‌ನ ಪೊರ್ತಾ ಡೇ ಸೊಲ್ ನಲ್ಲಿ ಸ್ನೇಹಿತರು ಕುಟುಂಬ ವರ್ಗದವರೆಲ್ಲ ಸೇರಿ 12 ಆಗುವುದನ್ನು ಕೈಯಲ್ಲಿ ದ್ರಾಕ್ಷಿ ಹಿಡಿದುಕೊಂಡು ಕಾಯುತ್ತಿರುತ್ತಾರೆ. ಹಾಗೇ ಆ ದೇಶದ ಟಿವಿಗಳಲ್ಲೂ 12 ಗಂಟೆಗೆಲ್ಲ ಅದಕ್ಕೆ ಸರಿಹೊಂದುವ ಕಾರ್ಯಕ್ರಮಗಳನ್ನು ಮಾಡಿ ಮನರಂಜಿಸುತ್ತಾರೆ.
ಹೊಸ ವರ್ಷಕ್ಕೆ ಜಿಗಿಯೋಣ

ಹಳೆ ವರ್ಷದಿಂದ ಹೊಸ ವರ್ಷಕ್ಕೆ ಎಲ್ಲರೂ ಕಾಲಿಟ್ಟರೆ, ಡೆನ್ಮಾರ್ಕ್‌ನ ಜನರು ಜಿಗಿಯುತ್ತಾರೆ. ಮಧ್ಯರಾತ್ರಿ 12 ಗಂಟೆ ಆದ ತಕ್ಷಣವೇ ಚೇರ್‌ನ ಮೇಲಿಂದ, ಟೇಬಲ್ ಅಥವಾ ಸೋಫಾದ ಮೇಲಿಂದ ಜಿಗಿಯುವುದು ಇವರ ಸಂಭ್ರಮ. ಈ ರೀತಿ ಮಾಡಿದರೆ, ಹಳೆಯ ಬ್ಯಾಡ್ ಲಕ್‌ನ್ನು ಬಿಟ್ಟು ಹೊಸ ವರ್ಷಕ್ಕೆ ಉತ್ಸಾಹದಿಂದ ಜಿಗಿದಂತೆ. ನಗು ಮೋಜು ಮಸ್ತಿ ಹರಟೆ ಆಟಗಳಿಂದ ತುಂಬಿದ ಕಾರ್ಯಕ್ರಮದಲ್ಲಿ ಸ್ನೇಹಿತರು ಕುಟುಂಬ ವರ್ಗದವರೆಲ್ಲ ಸೇರಿ ಹೊಸ ಶುರುವಾತಿಗೆ ಜಿಗಿಯುತ್ತಾರೆ. ಹಾಗೆ ಟೇಬಲ್, ಚೇರ್ ನಿಂದ ಜಿಗಿದರೆ ಬೆಸ್ಟು, ಬಿಲ್ಡಿಂಗ್‌ನಿಂದ ಜಿಗಿಯುವುದಲ್ಲ!
ಅದೃಷ್ಟವನ್ನೇ ತಿನ್ನೋದು!
ಜಪಾನ್‌ನಲಿ ತೋಶಿಕೋಶಿ ಸೊಬಾ ಅಂತ ತಮ್ಮ ವರ್ಷವನ್ನು ಕಳೆಯುತ್ತಾರೆ. ಇದರರ್ಥ ವರ್ಷ ಕಳೆಯುವ ನೂಡಲ್ಸ್ ಅಂತ. ಇಲ್ಲಿ ದೊಡ್ಡ ಹುರುಳಿ ಕಾಳುಗಳ ಪದಾರ್ಥ ತಿನ್ನುವುದು ದೀರ್ಘಾಯುಷ್ಯ ಮತ್ತು ಸಹಿಷ್ಣುತೆಯ ಪ್ರತೀಕವಂತೆ.
ಬ್ರೆಜಿಲ್‌ನಲ್ಲಿ ಆಯುಷ್ಯ ಐಶ್ವರ್ಯ ಹೆಚ್ಚಲು ದಾಳಿಂಬೆ ಕಡೆ ಮುಖಮಾಡುತ್ತಾರೆ. 7 ದಾಳಿಂಬೆಯ ಬೀಜಗಳನ್ನು ಜೇಬು ಅಥವಾ ಪರ್ಸ್‌ನಲ್ಲಿ ಇಟ್ಟುಕೊಂಡು ಅದು ಲಕ್ ತರುತ್ತದೆ ಎಂದುಕೊಳ್ಳುತ್ತಾರೆ.
ಡಚ್‌ನಲ್ಲಿ ಹೊಸ ವರ್ಷದ ಪ್ರಯುಕ್ತ ಆಲೀಬೊಲ್ಲೇನ್ ಎಂಬ ಪ್ರಾಚೀನ ಜರ್ಮನ್ ಸಂಸ್ಕೃತಿಯ ಅನ್ವಯ ಡೀಪ್ ಆಗಿ ಫ್ರೈ ಮಾಡಿರುವ ಹಿಟ್ಟಿನ ಬಾಲ್‌ಗಳನ್ನು ತಿನ್ನುತ್ತಾರೆ. ಅಲ್ಲಿನ ಜನಪದದ ಪ್ರಕಾರ ಈ ರೀತಿಯ ಕೊಬ್ಬಿನಾಂಶದ ಆಹಾರಗಳನ್ನು ತಿನ್ನುವುದರಿಂದ ಪರ್ಚ್ಟಾ ಎಂಬ ದೇವರಿಂದ ಸಂರಕ್ಷಣೆ ದೊರೆಯುತ್ತಂತೆ.
ಇಸ್ಟೋನಿಯಾನಲ್ಲಿ ತಿನ್ನುವುದೇ ಒಂದು ಹಬ್ಬ. ತಮ್ಮ ಲಕ್ಕಿ ನಂಬರ್‌ಗೆ ತಕ್ಕನಾಗಿ 7, 9 ಅಥವಾ 12 ಹೀಗೆ ಯಾವುದೋ ನಂಬರ್‌ನಷ್ಟು ಊಟವನ್ನು ಮಾಡುತ್ತಾರಂತೆ. ಹೀಗೆ ಮಾಡುವುದರಿಂದ ಅವರಿಗೆ ಅದೃಷ್ಟ ಬರುತ್ತದಂತೆ. ಪ್ಲೇಟ್‌ನಲ್ಲಿದ್ದಷ್ಟನ್ನೂ ತಿನ್ನುವುದರ ಬದಲು ಸ್ವಲ್ಪ ತಿಂದು ಸ್ವಲ್ಪ ಉಳಿಸುತ್ತಾರಂತೆ. ಇದು ರಾತ್ರಿ ಭೇಟಿ ಮಾಡುವ ಅವರ ಹಿರಿಯರ ಆತ್ಮಗಳಿಗೆ ಆಹಾರ ಎನ್ನುವುದು ಅವರ ನಂಬಿಕೆ.
ಜೆಕ್ ರಿಪಬ್ಲಿಕ್‌ನಲ್ಲಿ ಮಿಡ್‌ನೈಟ್‌ನಲ್ಲಿ ಸೇಬನ್ನು ಮಧ್ಯದಲ್ಲಿ ಕತ್ತರಿಸುತ್ತಾರೆ. ಹಾಗೆ ಕತ್ತರಿಸಿದಾಗ ಮಧ್ಯದಲ್ಲಿ ಸ್ಟಾರ್ ಕಂಡರೆ, ವರ್ಷವಿಡೀ ಒಳ್ಳೆಯ ಲಕ್ ಮತ್ತು ಒಳ್ಳೆಯ ಆರೋಗ್ಯ ಇರುತ್ತದೆ. ಅದೇನಾದರೂ ಬೇರೆ ಶೇಪ್‌ನಲ್ಲಿತ್ತೆಂದರೆ, ಆ ಪಾರ್ಟಿಗೆ ಬಂದಿರುವ ಯಾರಿಗಾದರೂ ಆರೋಗ್ಯ ಸಮಸ್ಯೆ ಬರುತ್ತದೆಂಬುದು ಅವರ ನಂಬಿಕೆ.
ಬೂದಿಯನ್ನು ಕುಡಿಯುವುದು
ನಮ್ಮಲ್ಲಿ ಕುಡಿದು ಟೈಟ್ ಆಗಿರುವವರು ಆ ನಶೆನಲ್ಲಿ ತಮ್ಮ ಗ್ಲಾಸ್ ಗೆ ಸಿಗರೇಟ್ ಆಶ್ ಹೊಡೆದು ಅದನ್ನೂ ಕುಡಿಯುತ್ತಾರೆ. ಇಂಥದ್ದೇ ಆಚರಣೆ ರಷ್ಯಾದಲ್ಲಿದೆ. ನಾವೆಲ್ಲ ನ್ಯೂ ಇಯರ್‌ಗೆ ರೆಸಲ್ಯೂಷನ್ ಮಾಡಿಕೊಳ್ಳುವ ಥರ ಅವರು ತಮ್ಮ ವಿಶ್‌ಗಳನ್ನು ಒಂದು ಪೇಪರ್‌ನಲ್ಲಿ ಬರೆಯುತ್ತಾರೆ. ರಾತ್ರಿ 12ಗಂಟೆ ಆದ ತಕ್ಷಣ ಅದನ್ನು ಸುಟ್ಟು, ತಮ್ಮ ಶಾಂಪೇನ್‌ನಲ್ಲಿ ಹಾಕಿ ಕುಡಿಯುತ್ತಾರೆ. ಅವರು 12.01 ಆಗುವುದರೊಳಗೆ ಕುಡಿದು ಮುಗಿಸಿದರೆ, ಅವರ ವಿಶ್ ನೆರವೇರುತ್ತದೆ ಎಂಬುದು ನಂಬಿಕೆ.
ಹೀಗೆ ಹಲವಾರು ದೇಶಗಳಲ್ಲಿ ಅವರದ್ದೇ ಆದ ರೀತಿಯಲ್ಲಿ ಹೊಸವರ್ಷವನ್ನು ಬರ ಮಾಡಿಕೊಳ್ಳುತ್ತಾರೆ. ಈ ಹೊಸ ವರ್ಷವನ್ನು ಮತ್ತಷ್ಟು ರಂಗೇರಿಸಲು ಎಷ್ಟೋ ಜನ ಪ್ರವಾಸಕ್ಕೂ ಹೋಗುತ್ತಾರೆ. ಹಬ್ಬಗಳೆಲ್ಲ ನಮ್ಮ ಆಚರಣೆ, ಸೆಲೆಬ್ರೇಷನ್‌ಗಾಗಿಯೇ ಹೊರತು, ಕೊಂಕಾಡುವುದಕ್ಕಲ್ಲ. ನಮ್ಮ ದೇಶದಲ್ಲಿ ಹೊಸ ವರ್ಷದ ದಿನ ಮಹಾ ವೈವಿಧ್ಯಮಯವಾಗಿ ಆಚರಿಸದಿದ್ದರೂ ಕೆಲವು ದಿನಗಳವರೆಗೂ ಜಿಮ್‌ಗೆ ಹೋಗಲು, ಮ್ಯೂಸಿಕ್ ಕಲಿಯಲು, ಹಳೆ ಚಟ ಬಿಡಲು ಶಪಥಗೈಯ್ಯುವುದಕ್ಕಂತೂ ಇದು ಮಹತ್ವದ ದಿನ. ಆದರೆ, ಆ ನ್ಯೂ ಇಯರ್ ರೆಸಲ್ಯೂಷನ್‌ಗಳ ಆಯಸ್ಸು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ. ಒಟ್ಟಾರೆ ಹೊಸ ವರ್ಷ ಎಲ್ಲರಿಗೂ ಸುಖ ಸಮೃದ್ಧಿ ಆರೋಗ್ಯ ಶುಭವನ್ನು ತರಲಿ ಎಂಬುದೇ ಎಲ್ಲರ ಹಾರೈಕೆಯೂ ಆಗಿರಲಿ.