Thursday, September 10, 2026
Thursday, September 10, 2026

ಪ್ರವಾಸದಲ್ಲೊಂದು ಅವಘಡವಾದಾಗ…

ಕೆರೆಯಲ್ಲಿದ್ದ ಎರಡು ನರಹಂತಕ ಮೊಸಳೆಗಳು ಇವರಿಬ್ಬರನ್ನು ಆಕ್ರಮಿಸುತ್ತವೆ. ಅಸಹಾಯಕ ಸ್ಥಿತಿಯಲ್ಲಿ ಇವರಿಬ್ಬರಲ್ಲಿ ಯಾರು ಜೀವ ಸಹಿತ ಪಾರುಗುತ್ತಾರೆ, ಈಜು ಬರದ ಮಾರುತಿ ಅದು ಹೇಗೆ ನೀರು ಮತ್ತು ಮೊಸಳೆಯ ನಡುವೆ ಸೆಣೆಸಾಡುತ್ತಾನೆ, ಇವರಿಬ್ಬರಲ್ಲಿ ನಿಜವಾದ ಪ್ರೀತಿ ಇರುತ್ತಾ?

  • ಮೃಣಾಲಿನಿ ಪಿ. ಅಗರಖೇಡ್

ರೋಡ್ ಟ್ರಿಪ್, ಸೋಲೋ ಟ್ರಿಪ್, ಫ್ರೆಂಡ್ಸ್ ಟ್ರಿಪ್ ಅಂತ ಈಗಿರುವ ಟ್ರೆಂಡ್ ಪ್ರಕಾರ ಪ್ರವಾಸಕ್ಕೆ ಹೋಗಿ, ಎಂಜಾಯ್ ಮಾಡಿ. ಆದರೆ ಜೋಕೆ, ನೀವು ಎಲ್ಲಿ ಸ್ಟೇ ಮಾಡ್ತೀರಾ, ಎಲ್ಲಿ ಊಟ ಮಾಡ್ತೀರಾ, ಎಲ್ಲಿ ಬ್ರೇಕ್ ತಗೋತೀರಾ ಅನ್ನೋದು ಬಹಳ ಮುಖ್ಯ. ಹುಚ್ಚು ಸಾಹಸ ಮಾಡಿ, ಎಲ್ಲೋ ಹೋಗಿ, ಎಂಥದ್ದೋ ಅನಾಹುತಕ್ಕೆ ಸಿಕ್ಕಿಹಾಕಿಕೊಂಡರೆ ಮಾತ್ರ, ಅದು ಜೀವಕ್ಕೆ ಕುತ್ತು ತರೋ ಪ್ರವಾಸವಾಗಿ ಬಿಡುತ್ತದೆ.

ಇಂಥದ್ದೇ ಒಂದು ಕಥೆ ಹೊಂದಿದ ಎದೆ ನಡುಗಿಸುವ ದೃಶ್ಯಗಳೊಂದಿಗೆ ನಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ, ನಾನು ನೋಡಿದ ಹಿಂದಿ ಚಿತ್ರ ‘ತೂ ಯಾ ಮೇ.’ 14 ನೆಯ ಫೆಬ್ರವರಿ, 2026ಗೆ ತೆರೆಕಂಡ ಈ ಸಿನಿಮಾ ಒಂದು ಸರ್ವೈವಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದು ಪ್ರಸಿದ್ಧ ಥೈ ಸಿನಿಮಾ ‘ದಿ ಪೂಲ್’ ಚಿತ್ರದ ರಿಮೇಕ್ ಆಗಿದೆ.

ನಾವು ಪ್ರವಾಸಕ್ಕೇನೋ ಹೋಗುತ್ತೇವೆ. ಆದರೆ, ಅಲ್ಲಿ ತಂಗುವ ಹೋಂ ಸ್ಟೇ, ಲಾಡ್ಜ್, ರೆಸಾರ್ಟ್‌ನಲ್ಲಿರುವ ಎಲಿವೇಟರ್, ಈಜು ಕೊಳ, ಬಾತ್ ರೂಮ್, ಝಿಪ್ ಲೈನ್, ಸಾಹಸ ಕ್ರೀಡೆಗಳು ಅಲ್ಲಿ ಬಳಸುವ ಪರಿಕರಗಳು ಒಳ್ಳೆ ಕಂಡೀಶನ್ನಲ್ಲಿ ಇವೆಯೇ ಎಂದು ತಿಳಿದುಕೊಳ್ಳುವುದು ಸೂಕ್ತ. ಸುತ್ತ- ಮುತ್ತ ಸಾಕಷ್ಟು ಜನರು ಇದ್ದಾರೆಯೇ?, ಸುರಕ್ಷಾ ಕಾಯ್ದೆಗಳನ್ನು ಪಾಲಿಸಿದ್ದಾರೆಯೇ? ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಏನಾದ್ರೂ ಅಪಾಯಕಾರಿ, ನಿಷೇಧಿತ ಸ್ಥಳಗಳ ಎಚ್ಚರಿಕೆ ಫಲಕಗಳಿದ್ದರೆ ಅವುಗಳನ್ನು ಅನುಸರಿಸಬೇಕು.

ಇದನ್ನೂ ಓದಿ: ಜೀವನ ಒಮ್ಮೆ ಮಾತ್ರ ಸಿಗೋದು..ಈ ಸಿನಿಮಾ ಕಲಿಸಿದ ಜೀವನ ಪಾಠ

ಸ್ವಲ್ಪವು ನಿರ್ಲಕ್ಷಿಸದೇ ಜೋಪಾನವಾಗಿ ಪ್ರವಾಸಕ್ಕೆ ಹೋಗಿ, ಇತ್ತೀಚೆಗೆ ದುಡ್ಡಿಗಾಗಿ ಇಂಥ ಸ್ಥಳ ನಿರ್ವಹಿಸುತ್ತಿರುವರು ಕೂಡ ತಮ್ಮ ಹಣಗಳಿಸುವ ದುರಾಸೆಯಿಂದ ಅಮಾಯಕ ಪ್ರವಾಸಿಗರ ಜೀವದ ಜತೆ ಆಟವಾಡಬಾರದು, ಸುರಕ್ಷತೆ ಅಲ್ಲಿದ ಸಿಬ್ಬಂದಿಗಳ ಆದ್ಯತೆ ಆಗಬೇಕು ಎನ್ನುವ ಮಹತ್ವದ ವಿಚಾರಗಳನ್ನು ರೋಚಕ ಸ್ಕ್ರೀನ್ ಪ್ಲೇಯೊಂದಿಗೆ ‘ತೂ ಯಾ ಮೇʼ ಚಿತ್ರ. ಈ ಚಿತ್ರ ನಮ್ಮನ್ನು ಸುಮಾರು ಎರಡುವರೆ ತಾಸು ರೆಪ್ಪೆ ಬಡಿಯದಂತೆ ಹಿಡಿದಿಡುತ್ತದೆ.


ಚಿತ್ರ ಕಥೆ

ಮುಂಬಯಿ ನಾಲಾಸುಪಾರದ ಚಾಳಿನಲ್ಲಿರುವ ಮಾರುತಿ/ಆಲಾ ಫ್ಲವರ್ ಪಾರಾ ಎಂಬ ಜೆನ್ ಜಿ ಹುಡುಗನೊಬ್ಬ ಯುಟ್ಯೂಬ್ ಅಲ್ಲಿ ರಾಪರ್ ಆಗಿ ಮಿಂಚಬೇಕು ಎನ್ನುವುದು ಅವನ ಜೀವನದ ಗುರಿಯಾಗಿರುತ್ತದೆ. ಇನ್ನೊಂದು ಕಡೆ ಮಿಲಿಯನ್‌ಗಟ್ಟಲೆ ಫಾಲ್ಲೋವರ್ಸ್ ಇರುವ ಸೌಥ್‌ ಬಾಂಬೆ ಹುಡುಗಿ, ಅವನಿ ಶಾ/ಮಿಸ್ ವ್ಯಾನಿಟಿ ಎಂಬ ಲೈಫ್ ಸ್ಟೈಲ್ ಇನ್ಫ್ಲುಯೆನ್ಸರ್ ಮಾರುತಿಯ ಸರಳತೆಗೆ ಮರಳಾಗಿ, ಶ್ರೀಮಂತ ಹುಡುಗಿ ಇವನ ಪ್ರೀತಿಯಲ್ಲಿ ಬೀಳುತ್ತಾಳೆ.

ಇವರಿಬ್ಬರ ಪ್ರೀತಿ ಎಲ್ಲೆ ಮೀರುತ್ತದೆ. ಅವಳು ಗರ್ಭಿಣಿ ಎಂದು ಗೊತ್ತಾಗುತ್ತದೆ, ಆಗ ಮಾರುತಿಗೆ ಮದುವೆಯಾಗಿ, ಅಪ್ಪನಾಗುವ ಸಂಸಾರದ ಹೊಣೆಗಾರಿಕೆ ಬೇಡವಾಗುತ್ತದೆ. ಇಬ್ಬರ ನಡುವೆ ವೈಮನಸು, ಕೋಪ, ವಾದ ಶುರುವಾಗುತ್ತದೆ. ಇಂಥ ಬಿಗಿ ಪರಿಸ್ಥಿತಿಯಲ್ಲಿ ಮಾರುತಿ, ಅವನಿಯನ್ನು ತನ್ನ ಬೈಕ್ ಹತ್ತಿಸಿ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೊರಡುತ್ತಾನೆ.

Untitled design (46)

ಗೋವಾ ಹೈ-ವೇ ಅಲ್ಲಿ ಬೈಕ್ ಕೆಟ್ಟು, ಅರಣ್ಯ ಪ್ರದೇಶದ ಕೆರೆಯ ದಂಡೆಗೆ ಅಂಟಿ ಕೊಂಡ ನಿರ್ಜನ ಪ್ರದೇಶದಲ್ಲಿದ್ದ ಒಂದು ರೆಸಾರ್ಟ್‌ ನಲ್ಲಿ ರಾತ್ರಿ ಉಳಿದುಕೊಳ್ಳುತ್ತಾರೆ. ಗುಡುಗು, ಸಿಡಿಲು, ಭಾರಿ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ, ಅಲ್ಲಿದ್ದ ಇಪತ್ತು ಅಡಿ ಆಳದ ಈಜು ಕೊಳ ಈ ಜೋಡಿ ಹಕ್ಕಿಗಳಿಗೆ ನರಕ ತೋರಿಸಿ ಬಿಡುತ್ತದೆ. ಈಜು ಕೊಳ ದುರುಸ್ತಿಯಲ್ಲಿದೆ, ಅದರಲ್ಲಿ ಇಳಿಯ ಬೇಡಿ ಎಂದು ಅಲ್ಲಿದ ರೆಸಾರ್ಟ್ ಸಹಾಯಕ ಎಚ್ಚರಿಕೆ ಕೊಟ್ಟರೂ, ಅವನಿ ಈಜು ಕೊಳದಲ್ಲಿ ಇಳಿಯುತ್ತಾಳೆ. ನಂತರ ಕಥೆ ಊಹೆಗೂ ನಿಲುಕದ ತಿರುವು ಪಡೆದುಕೊಳ್ಳುತ್ತದೆ. ಪಕ್ಕದ ಕೆರೆಯಲ್ಲಿದ್ದ ಎರಡು ನರಹಂತಕ ಮೊಸಳೆಗಳು ಇವರಿಬ್ಬರನ್ನು ಆಕ್ರಮಿಸುತ್ತವೆ. ಅಸಹಾಯಕ ಸ್ಥಿತಿಯಲ್ಲಿ ಇವರಿಬ್ಬರಲ್ಲಿ ಯಾರು ಜೀವ ಸಹಿತ ಪಾರುಗುತ್ತಾರೆ, ಈಜು ಬರದ ಮಾರುತಿ ಅದು ಹೇಗೆ ನೀರು ಮತ್ತು ಮೊಸಳೆಯ ನಡುವೆ ಸೆಣೆಸಾಡುತ್ತಾನೆ, ಇವರಿಬ್ಬರಲ್ಲಿ ನಿಜವಾದ ಪ್ರೀತಿ ಇರುತ್ತಾ, ಮುಂತಾದ ಕುತೂಹಲಕಾರಿ ರಣ ಭೀಕರ ದೃಶ್ಯಗಳು, ಮೈ ಬೆವರಿಸುತ್ತವೆ.

ನಾವು ಸಾಮಾನ್ಯವಾಗಿ ಪ್ರವಾಸ ಸುಖಕರವಾಗಲಿ ಎಂದು ಹಾರೈಸುತ್ತೇವೆ. ಹೊರಡುವ ಮುಂಚೆ ದೇವರಲ್ಲಿ ಪ್ರಾರ್ಥಿಸುತ್ತೇವೆ, ಇದಕ್ಕೆ ಕಾರಣ ಇಂಥ ಅನಾಹುತಗಳು ಆಗದಿರಲಿ ಎಂದು. ಅರಿಯದ ಸ್ಥಳಗಳಲ್ಲಿ ಪ್ರವಾಸಕ್ಕೆ ಹೋಗಿ ಅಲ್ಲಿ ಪೆಚಾಟ್ಟಕ್ಕೆ ಸಿಲುಕದಿರಿ ಎಂಬ ಉತ್ತಮ ಸಂದೇಶದ ಈ ಥ್ರಿಲ್ಲರ್ ಸಿನಿಮಾ ಎಲ್ಲರೂ ನೋಡಬೇಕು, ಈ ಚಿತ್ರ ಎಲ್ಲರಲ್ಲೂ ಅರಿವು ಮೂಡಿಸುವಲ್ಲಿ ಗೆದ್ದಿದೆ. ಸಿನಿಮಾ ಅಂದ ಮೇಲೆ ಕೆಲವು ಕಡೆ ಲಾಜಿಕ್ ಕೆಲಸ ಮಾಡಿಲ್ಲವಾದರೂ ನೆಟ್‌ಫ್ಲಿಕ್ಸ್ ನಲ್ಲಿ ‘ತೂ ಯಾ ಮೇʼ ಒಮ್ಮೆ ನೋಡಲೇ ಬೇಕಾದ ಮೂವಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?