ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಎಕ್ಸಿಟ್ ಗೇಟ್ ಬಳಿ ನಿಂತು, ಕೈಯಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಮ್ಯಾಪ್ ಜಾಲಾಡುತ್ತಿರುವ ಆ ವಿದೇಶಿ ಪ್ರವಾಸಿಯ ಮುಖದಲ್ಲಿ ಒಂದು ಬಗೆಯ ನಿಗೂಢ ಆತಂಕವಿದೆ. ಆತನ ಫೋನ್‌ನಲ್ಲಿ ‘ಡಿಜಿಟಲ್ ಇಂಡಿಯಾ’ದ ಮಿಂಚಿನ ವೇಗದ ಭರವಸೆಗಳಿವೆ ನಿಜ, ಆದರೆ ಕಣ್ಣಮುಂದೆ ಕಾಣುತ್ತಿರುವ ಟ್ರಾಫಿಕ್ ಜಂಜಾಟ ಮತ್ತು ಎಲ್ಲಿಗೂ ಹೋಗದ ರಸ್ತೆಗಳ ನಡುವೆ ಆತ ತನ್ನ ದಾರಿ ಹುಡುಕುತ್ತಿದ್ದಾನೆ. ನಮ್ಮ ದೇಶದ ಪ್ರವಾಸೋದ್ಯಮ ಎನ್ನುವುದು ಹಳೆಯ ರೇಡಿಯೋದಲ್ಲಿ ಕೇಳಿಬರುವ ಮಧುರ ಹಾಡಿನಂತಿದೆ. ಭಾವನೆಗಳೇನೋ ಇವೆ, ಆದರೆ ಸಿಗ್ನಲ್ ಮಾತ್ರ ಪದೇಪದೆ ಕೈಕೊಡುತ್ತಿದೆ.

ಇದನ್ನೂ ಓದಿ: ಅಜ್ಜಿಯ ಮನೆಯಲ್ಲಿದ್ದ ಚರ್ಮದ ತುಣುಕಿನ ಮೂಲ ಹುಡುಕಿ ಹೊರಟಾಗ ಕಂಡಿದ್ದೇನು?

ನಾವು ಜಗತ್ತಿಗೆ ಯುಪಿಐ ತಂತ್ರಜ್ಞಾನದ ಪವಾಡವನ್ನು ತೋರಿಸಿ ಬೆರಗುಗೊಳಿಸಿದ್ದೇವೆ. ಟೀ ಕುಡಿದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಸಿಗುವ ಆ ‘ಡಿಜಿಟಲ್ ತೃಪ್ತಿ’, ಅದೇ ಪ್ರವಾಸಿ ಹಂಪಿಯ ಸ್ಮಾರಕದ ಮುಂದೆ ನಿಂತು ಟಿಕೆಟ್ ಬುಕ್ ಮಾಡಲಾಗದೇ ಸರ್ವರ್ ಕಡೆಗೆ ಮುಖ ಮಾಡಿ ನಿಂತಾಗ ಮಂಗಮಾಯವಾಗುತ್ತದೆ. ಹಳೆಯ ಕಾಲದ ಕಲ್ಲಿನ ಕೆತ್ತನೆಗಳ ಮೇಲೆ ಆಧುನಿಕ ತಂತ್ರಜ್ಞಾನದ ಲೇಪನ ಹಚ್ಚುವ ಆತುರದಲ್ಲಿ, ನಾವು ಆ ಕಲ್ಲುಗಳಿಗೂ ಮತ್ತು ಮೊಬೈಲ್ ಸ್ಕ್ರೀನ್‌ಗೂ ನಡುವೆ ಒಂದು ದೊಡ್ಡ ಕಂದಕವನ್ನೇ ತೋಡಿಬಿಟ್ಟಿದ್ದೇವೆ. ಡಿಜಿಟಲ್ ಇಂಡಿಯಾ ಎನ್ನುವುದು ಕೇವಲ ಜಾಹೀರಾತು ಫಲಕಗಳಲ್ಲಿ ನಗುವ ಸುಂದರ ಮುಖವಲ್ಲ, ಅದು ಪ್ರವಾಸಿಯೊಬ್ಬನ ಹತಾಶೆಯನ್ನು ಮರೆಸುವ ಆಪ್ತ ಸ್ಪರ್ಶವಾಗಬೇಕಿತ್ತು.

Untitled design - 2026-03-27T202307.599

ಸಿಂಗಾಪುರ ಅಥವಾ ದುಬೈನ ಬೀದಿಗಳಲ್ಲಿ ನಡೆದಾಗ ಅಲ್ಲಿನ ತಂತ್ರಜ್ಞಾನವು ನಮ್ಮ ನೆರಳಿನಂತೆ ಜತೆಗಿರುತ್ತದೆ. ಅಲ್ಲಿನ ಆಪ್‌ಗಳು ನಿಮ್ಮನ್ನು ಕೇವಲ ಹೋಟೆಲ್‌ಗೆ ಕರೆದೊಯ್ಯುವುದಿಲ್ಲ, ನಿಮ್ಮ ಒಂಟಿತನಕ್ಕೆ ಮಾಹಿತಿಯ ಸಾಂತ್ವನವನ್ನೂ ನೀಡುತ್ತವೆ. ಆದರೆ ನಮ್ಮಲ್ಲಿ ಪ್ರವಾಸೋದ್ಯಮದ ವೆಬ್‌ಸೈಟ್‌ಗಳು ಇಂದಿಗೂ ಹಳೆಯ ಕಾಲದ ಸರಕಾರಿ ಕಚೇರಿಗಳ ಫೈಲ್‌ಗಳಂತೆ ಧೂಳು ಹಿಡಿದಿವೆ. ಸುಂದರ ಫೊಟೋಗಳ ಕೆಳಗೆ ‘ಮಾಹಿತಿ ಲಭ್ಯವಿಲ್ಲ’ ಎಂಬ ಅಕ್ಷರಗಳು ಕಾಣಿಸಿಕೊಂಡಾಗ, ಒಬ್ಬ ಪ್ರವಾಸಿಗೆ ತನ್ನ ಪ್ರವಾಸದ ಕನಸು ಅರ್ಧಕ್ಕೇ ಮುರಿದುಹೋದ ಅನುಭವವಾಗುತ್ತದೆ. ಹಳೆಯ ಮರದ ಟ್ರಂಕ್‌ನಲ್ಲಿದ್ದ ಅಜ್ಜಿಯ ಫೊಟೋ ಅಲ್ಬಮ್‌ನಂತೆ ನಮ್ಮ ಪ್ರವಾಸಿ ತಾಣಗಳ ಮಾಹಿತಿ ಇಂದಿಗೂ ‘ಅಪ್‌ಡೇಟ್’ ಆಗದೆ ಉಳಿದಿರುವುದು ಒಂದು ವಿಪರ್ಯಾಸ.

ತಂತ್ರಜ್ಞಾನ ಎನ್ನುವುದು ಕೇವಲ ಯಂತ್ರವಲ್ಲ, ಅದು ಮನುಷ್ಯರ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ಮಾಧ್ಯಮ. ಪ್ರವಾಸಿಗನೊಬ್ಬ ಭಾರತಕ್ಕೆ ಬರುವುದು ಇಲ್ಲಿನ ಧೂಳು, ಗದ್ದಲ ಮತ್ತು ಅಸ್ತವ್ಯಸ್ತತೆಯ ನಡುವೆಯೂ ಒಂದು ದೈವಿಕ ಅನುಭವವನ್ನು ಹುಡುಕಿಕೊಂಡು. ಆ ಅನುಭವಕ್ಕೆ ಡಿಜಿಟಲ್ ಕವಚವನ್ನು ತೊಡಿಸುವಾಗ ನಾವು ಎಡವುತ್ತಿರುವುದು ಎಲ್ಲಿ? ಸಿಂಗಾಪುರದ ಚಾಂಗಿ ಏರ್‌ಪೋರ್ಟ್‌ನಿಂದ ಹೊರಬಂದ ಕ್ಷಣ ಸಿಗುವ ಆ ‘ಸ್ಮಾರ್ಟ್’ ಅನುಭವ, ಕಾಂಬೋಡಿಯಾದ ಅಂಕೋರ್ ವಾಟ್ ದೇವಸ್ಥಾನದಿಂದ ಹೊರ ಬಂದಾಗ ಸಿಗುವ ಆ ಮ್ಯಾಜಿಕಲ್ ಟಚ್ ನಮ್ಮಲ್ಲಿನ ಪ್ರವಾಸಿ ತಾಣಗಳಲ್ಲಿ ಏಕೆ ಮಾಯವಾಗುತ್ತದೆ? ಈ ಡಿಜಿಟಲ್ ಕಂದಕವನ್ನು ಮುಚ್ಚುವುದು ಕೇವಲ ವೈ-ಫೈ ಅಳವಡಿಸುವುದಲ್ಲ, ಬದಲಾಗಿ ನಮ್ಮ ಅತಿಥಿಗಳಿಗೆ ಗೌರವದ ಜತೆಗೆ ಸರಳತೆಯನ್ನು, ವಾಸ್ತವ ಅನುಭವವನ್ನು ಉಡುಗೊರೆಯಾಗಿ ನೀಡುವುದು.

ಭಾರತವು ಇಂದು 'ಡಿಜಿಟಲ್ ಇಂಡಿಯಾ' ಎಂದು ಜಗತ್ತಿಗೆ ತನ್ನ ತಾಂತ್ರಿಕ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಯುಪಿಐ ಮೂಲಕ ಬೀದಿ ಬದಿಯ ಚಹಾ ಅಂಗಡಿಯಲ್ಲೂ ಡಿಜಿಟಲ್ ಪಾವತಿ ಮಾಡುವ ಕ್ರಾಂತಿ ನಮ್ಮಲ್ಲಾಗಿದೆ. ಆದರೆ, ಇದೇ ತಂತ್ರಜ್ಞಾನದ ಹೊಳಪು ನಮ್ಮ ಪ್ರವಾಸೋದ್ಯಮದ ಹೊಸ್ತಿಲು ತುಳಿದಾಗ ಮಂಕಾಗುವುದೇಕೆ? ಒಬ್ಬ ಪ್ರವಾಸಿ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ ಕ್ಷಣದಿಂದ ಹಿಡಿದು, ಆತ ಇಲ್ಲಿನ ಸ್ಮಾರಕಗಳ ಮುಂದೆ ನಿಲ್ಲುವವರೆಗೆ ಎದುರಿಸುವ ಡಿಜಿಟಲ್ ಕಂದಕ ಅಷ್ಟಿಷ್ಟಲ್ಲ. ಇಂದಿನ ಪ್ರವಾಸಿ 'ಸ್ಮಾರ್ಟ್ ಪ್ರವಾಸಿ'. ಆತ ಕೇವಲ ಕೈಯಲ್ಲಿ ಮ್ಯಾಪ್ ಹಿಡಿದು ಬರುವ ಹಳೆಯ ಕಾಲದ ಪ್ರವಾಸಿಯಲ್ಲ. ಆತ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಸ್ಮಾರ್ಟ್‌ಫೋನ್ ಮೂಲಕವೇ ಯೋಜಿಸುತ್ತಾನೆ. ಆದರೆ ನಮ್ಮ ದೇಶದ ಪ್ರವಾಸಿ ತಾಣಗಳ ಡಿಜಿಟಲ್ ಮುಖವಾಡವನ್ನು ನೋಡಿದಾಗ, ನಾವು ಇನ್ನೂ ಇಪ್ಪತ್ತು ವರ್ಷಗಳ ಹಿಂದಿದ್ದೇವೆ ಅನಿಸುವುದು ಸುಳ್ಳಲ್ಲ.

ಯಾವುದೇ ವಿದೇಶಿ ಅಥವಾ ದೇಶಿ ಪ್ರವಾಸಿ ಮೊದಲು ಹುಡುಕುವುದು ಆಯಾ ಪ್ರವಾಸಿ ತಾಣದ ಅಧಿಕೃತ ವೆಬ್‌ಸೈಟ್. ಆದರೆ ನಮ್ಮ ಹೆಚ್ಚಿನ ರಾಜ್ಯ ಪ್ರವಾಸೋದ್ಯಮ ನಿಗಮಗಳ ವೆಬ್‌ಸೈಟ್‌ಗಳು ಇಂದಿಗೂ 'ಅಪ್‌ಡೇಟ್' ಆಗಿಲ್ಲ. ಸುಂದರವಾದ ಫೊಟೋಗಳಿರುತ್ತವೆ ನಿಜ, ಆದರೆ ಅಲ್ಲಿನ ನೈಜ ಸ್ಥಿತಿ, ತೆರೆದಿರುವ ಸಮಯ, ಪ್ರವೇಶ ದರ ಅಥವಾ ಇತ್ತೀಚಿನ ಬದಲಾವಣೆಗಳ ಬಗ್ಗೆ ನಿಖರ ಮಾಹಿತಿಯಿರುವುದಿಲ್ಲ. ಸಿಂಗಾಪುರ ಅಥವಾ ದುಬೈನಂಥ ದೇಶಗಳಲ್ಲಿ ಅವರ ಅಧಿಕೃತ ಆಪ್‌ಗಳು ಪ್ರವಾಸಿಗನಿಗೆ 'ರಿಯಲ್ ಟೈಮ್' ಮಾಹಿತಿಯನ್ನು ನೀಡುತ್ತವೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಅವುಗಳ 'ಲುಕ್ ಆಂಡ್ ಫೀಲ್' ಬದಲಾಗುತ್ತಲೇ ಇರುತ್ತವೆ. ನಮ್ಮಲ್ಲಿ ವೆಬ್‌ಸೈಟ್‌ಗಳು ಕೇವಲ ಜಾಹೀರಾತು ಫಲಕಗಳಾಗಿ ಉಳಿದುಬಿಟ್ಟಿವೆ.

ಭಾರತದ ಪ್ರಮುಖ ಸ್ಮಾರಕಗಳಿಗೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ಬಂದಿದೆ ಎನ್ನುವುದು ಒಳ್ಳೆಯ ಸುದ್ದಿಯೇ. ಆದರೆ ಅದರ ನಿರ್ವಹಣೆ? ಅನೇಕ ಬಾರಿ ಸರ್ವರ್ ಸಮಸ್ಯೆಗಳು, ವಿದೇಶಿ ಕ್ರೆಡಿಟ್ ಕಾರ್ಡ್‌ಗಳು ಸ್ವೀಕೃತವಾಗದಿರುವುದು ಮತ್ತು ಕ್ಯೂಆರ್ ಕೋಡ್‌ಗಳು ಸರಿಯಾಗಿ ಸ್ಕ್ಯಾನ್ ಆಗದಿರುವುದು ಪ್ರವಾಸಿಗರ ತಾಳ್ಮೆಯನ್ನು ಪರೀಕ್ಷಿಸುತ್ತವೆ. ಸ್ಮಾರಕದ ಎದುರು ನಿಂತು ಟಿಕೆಟ್‌ಗಾಗಿ ಮೊಬೈಲ್‌ನಲ್ಲಿ ಕಸರತ್ತು ಮಾಡುವುದು 'ಡಿಜಿಟಲ್ ಇಂಡಿಯಾ'ದ ಆಶಯಕ್ಕೇ ವಿರುದ್ಧ. ದುಬೈನಲ್ಲಿ ನೀವು ಬುರ್ಜ್ ಖಲೀಫಾ ಅಥವಾ ಯಾವುದಾದರೂ ಮ್ಯೂಸಿಯಂಗೆ ಹೋಗಬೇಕೆಂದರೆ, ನಿಮ್ಮ ಫೋನ್‌ನಲ್ಲಿರುವ ಒಂದೇ ಒಂದು ಕ್ಯೂಆರ್ ಕೋಡ್ ನಿಮ್ಮ ಸಾರಿಗೆಯಿಂದ ಹಿಡಿದು ಪ್ರವೇಶದವರೆಗೆ ಎಲ್ಲವನ್ನೂ ಸರಾಗಗೊಳಿಸುತ್ತದೆ. ಆಯಾ ದಿನ ಯಾವ ಸಮಯದಲ್ಲಿ ಹೋದರೆ ಜನದಟ್ಟಣೆ ಕಮ್ಮಿಯಿರುತ್ತದೆ ಎಂಬುದನ್ನು 'ಲೈವ್' ಹೇಳುತ್ತದೆ.

Untitled design - 2026-03-27T202252.841

ನಾವು 5G ತಂತ್ರಜ್ಞಾನದ ಬಗ್ಗೆ ಮಾತನಾಡುತ್ತೇವೆ, ಆದರೆ ನಮ್ಮ ಅನೇಕ ಐತಿಹಾಸಿಕ ತಾಣಗಳು ಅಥವಾ ಕಾಡಿನ ನಡುವಿನ ಪ್ರವಾಸಿ ತಾಣಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದೇ ಅಪರೂಪ. ಗೂಗಲ್ ಮ್ಯಾಪ್ ನಂಬಿ ಹೋದ ಪ್ರವಾಸಿ, ನೆಟ್‌ವರ್ಕ್ ಇಲ್ಲದೇ ದಾರಿ ತಪ್ಪುವುದು ಸಾಮಾನ್ಯವಾಗಿದೆ. ಪ್ರವಾಸಿ ತಾಣಗಳಲ್ಲಿ 'ಉಚಿತ ವೈ-ಫೈ' ವಲಯಗಳನ್ನು ನಿರ್ಮಿಸುವ ಭರವಸೆಗಳು ಇನ್ನೂ ಕಾಗದದ ಮೇಲೆಯೇ ಇವೆ. ಪ್ರವಾಸಿಗನಿಗೆ ಇಂಟರ್‌ನೆಟ್ ಅಥವಾ ವೈ-ಫೈ ಎನ್ನುವುದು ಇಂದು ಐಷಾರಾಮಿ ಅಲ್ಲ, ಅದು ಕನಿಷ್ಠ ಅವಶ್ಯಕತೆ. ಒಂದು ಪ್ರವಾಸಿ ತಾಣದಲ್ಲಿ ಉಚಿತ ವೈ-ಫೈ ನೀಡಿದರೆ ಆ ಜಾಗದಲ್ಲಿ ನಿಂತು ಜನ ಅವರ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ಆ ತಾಣಕ್ಕೆ ಬಿಟ್ಟಿಯಾಗಿ ಪ್ರಚಾರ ಸಿಕ್ಕಂತಾಗುತ್ತದೆ. ಹೀಗಾಗಿ ಉಚಿತ ವೈ-ಫೈ ನೀಡುವುದರಲ್ಲೂ ಅಪಾರ ಲಾಭವಿದೆ.

ಪ್ರವಾಸಿಗರು ಸ್ಮಾರಕದ ಮುಂದೆ ನಿಂತಾಗ, ಅಲ್ಲಿನ ಕಲ್ಲು-ಮಣ್ಣುಗಳು ಮಾತನಾಡಬೇಕು. ಆಡಿಯೋ ಗೈಡ್‌ಗಳು ಇದನ್ನು ಸಾಧ್ಯವಾಗಿಸುತ್ತವೆ. ಮೊಬೈಲ್ ಅಪ್ಲಿಕೇಶನ್ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರು ತಮ್ಮದೇ ಭಾಷೆಯಲ್ಲಿ (ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ) ಇತಿಹಾಸವನ್ನು ಕೇಳಬಹುದು. ಇದು ಗೈಡ್‌ಗಳಿಲ್ಲದಿದ್ದರೂ ಪ್ರವಾಸವನ್ನು ಅರ್ಥಪೂರ್ಣವಾಗಿಸುತ್ತದೆ. ಕೆಲವು ಸ್ಮಾರಕಗಳು ಇಂದು ಶಿಥಿಲಾವಸ್ಥೆಯಲ್ಲಿವೆ. ಎಆರ್ ತಂತ್ರಜ್ಞಾನದ ಮೂಲಕ ಪ್ರವಾಸಿಗರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಆ ಸ್ಮಾರಕದತ್ತ ಹಿಡಿದಾಗ, ಅದು ಮೊದಲು ಹೇಗಿತ್ತು ಎಂಬ 3D ಚಿತ್ರಣ ಕಣ್ಣಮುಂದೆ ಬರುತ್ತದೆ.

ಉದಾಹರಣೆಗೆ, ಹಂಪಿಯ ವಿಠಲ ದೇವಾಲಯದ ಕಲ್ಲಿನ ರಥದ ಚಕ್ರಗಳು ಹಿಂದೆ ಹೇಗೆ ತಿರುಗುತ್ತಿದ್ದವು ಅಥವಾ ಅದರ ಮೇಲ್ಚಾವಣಿ ಹೇಗಿತ್ತು ಎಂಬುದನ್ನು ಎಆರ್ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ತೋರಿಸಬಹುದು. ಇದು ಕೇವಲ ಮಾಹಿತಿ ನೀಡುವುದಲ್ಲದೇ, ಒಂದು 'ಜೀವಂತ ಅನುಭವ'ವನ್ನು ನೀಡುತ್ತದೆ. ಭಾರತದಲ್ಲಿ ಹೈದರಾಬಾದ್‌ನ ಗೋಲ್ಕಂಡ ಕೋಟೆ ಅಥವಾ ದೆಹಲಿಯ ಕೆಂಪುಕೋಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಈ ವ್ಯವಸ್ಥೆಯಿದೆ. ಆದರೆ, ಕರ್ನಾಟಕದ ಬಾದಾಮಿ, ಐಹೊಳೆ ಅಥವಾ ಪಟ್ಟದಕಲ್ಲುಗಳಂಥ ಸ್ಥಳಗಳಲ್ಲಿ ಇದು ಇನ್ನೂ ಸಾರ್ವತ್ರಿಕವಾಗಿಲ್ಲ. ಸರಕಾರವು ಇಂಥ ತಂತ್ರಜ್ಞಾನವನ್ನು ಪ್ರತಿ ಪ್ರಮುಖ ಪ್ರವಾಸಿ ತಾಣದಲ್ಲಿ ಅಳವಡಿಸಿದರೆ, ಭಾಷೆಯ ಅಡೆತಡೆಯಿಲ್ಲದೆ ಪ್ರವಾಸಿಗರು ಜ್ಞಾನ ಪಡೆಯಬಹುದು. ನಮ್ಮ ಸ್ಮಾರಕಗಳ ಪರಂಪರೆಯನ್ನು ಉಳಿಸಲು ಮತ್ತು ಮುಂದಿನ ಪೀಳಿಗೆಗೆ ದಾಟಿಸಲು ಡಿಜಿಟಲ್ ಮೂಲಸೌಕರ್ಯವು ಅತ್ಯಂತ ಅವಶ್ಯಕವಾಗಿದೆ.

ಪ್ರವಾಸೋದ್ಯಮವನ್ನು ಒಂದು ವ್ಯವಸ್ಥಿತ 'ಉದ್ದಿಮೆ'ಯಾಗಿ ಪರಿವರ್ತಿಸಲು 'ಯೂನಿಫೈಡ್ ಟೂರಿಸಂ ಇಂಟರ್‌ಫೇಸ್' (UTI) ಅತ್ಯಗತ್ಯ. ಸಿಂಗಾಪುರ ಮತ್ತು ದುಬೈ ಮಾದರಿಗಳು ಪ್ರವಾಸಿಗನ ಅನುಭವವನ್ನು ಸುಗಮಗೊಳಿಸುವಲ್ಲಿ ಜಗತ್ತಿಗೆ ಮಾದರಿಯಾಗಿವೆ. ಪ್ರತ್ಯೇಕ ಆಪ್‌ಗಳ ಬದಲು, ಒಂದೇ ವೇದಿಕೆಯಲ್ಲಿ ವಿಮಾನ, ರೈಲು ಟಿಕೆಟ್, ಹೊಟೇಲ್ ಬುಕಿಂಗ್ ಮತ್ತು ಸ್ಥಳೀಯ ಸಾರಿಗೆ (ಮೆಟ್ರೋ ಅಥವಾ ಟ್ಯಾಕ್ಸಿ) ಲಭ್ಯವಾಗಬೇಕು. ಇದು ಪ್ರವಾಸಿಗರಿಗೆ ಗೊಂದಲ ಮುಕ್ತ ಅನುಭವ ನೀಡುತ್ತದೆ. ಕೃತಕ ಬುದ್ಧಿಮತ್ತೆ (ಎಐ) ಬಳಸಿ ಪ್ರವಾಸಿಗನ ಆಸಕ್ತಿಗೆ ತಕ್ಕಂತೆ ಪ್ರವಾಸದ ಪಟ್ಟಿಯನ್ನು (Itinerary) ಸಿದ್ಧಪಡಿಸುವುದು ಮತ್ತು ತುರ್ತು ಸಂದರ್ಭದಲ್ಲಿ (ಆರೋಗ್ಯ ಅಥವಾ ಭದ್ರತೆ) ತಕ್ಷಣದ ನೆರವು ನೀಡುವುದು ಸದ್ಯ. ಯುಪಿಐ ಸಂಯೋಜನೆಯೊಂದಿಗೆ ಸ್ಮಾರಕಗಳ ಟಿಕೆಟ್ ಮತ್ತು ರಿಯಾಯಿತಿ ಕೂಪನ್‌ಗಳನ್ನು ಡಿಜಿಟಲ್ ಆಗಿ ನೀಡುವುದರಿಂದ ಪಾರದರ್ಶಕತೆ ಹೆಚ್ಚುತ್ತದೆ. ಕರ್ನಾಟಕಕ್ಕೆ ಬರುವ ವಿದೇಶಿ ಪ್ರವಾಸಿಗ ಈ ಆಪ್ ಮೂಲಕವೇ ಹಂಪಿ ಎಕ್ಸ್‌ಪ್ರೆಸ್ ಟಿಕೆಟ್, ಅಲ್ಲಿನ ಹೊಟೇಲ್ ಮತ್ತು ಸ್ಥಳೀಯ ಗೈಡ್ ಅನ್ನು ಮುಂಗಡವಾಗಿ ಕಾಯ್ದಿರಿಸುವಂತಾಗಬೇಕು. ಇದರಿಂದ ಪ್ರವಾಸೋದ್ಯಮದ ಆದಾಯ ಹೆಚ್ಚುವುದಲ್ಲದೇ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಮೆಚ್ಚುಗೆಯ ಭಾವನೆ ಮೂಡುತ್ತದೆ.

ತಂತ್ರಜ್ಞಾನ ಎನ್ನುವುದು ಕೇವಲ ಯಂತ್ರವಲ್ಲ, ಅದು ಸೇವಾ ಮನೋಭಾವದ ಭಾಗವಾಗಬೇಕು. ನಾವು 'ಸ್ಮಾರ್ಟ್ ಸಿಟಿ'ಗಳ ಬಗ್ಗೆ ಮಾತನಾಡುವಾಗ 'ಸ್ಮಾರ್ಟ್ ಪ್ರವಾಸಿ ತಾಣ'ಗಳ ಬಗ್ಗೆಯೂ ಯೋಚಿಸಬೇಕು. ಪ್ರವಾಸಿಗನಿಗೆ ಮಾಹಿತಿಯ ಭಿಕ್ಷೆ ಬೇಡುವ ಪರಿಸ್ಥಿತಿ ಬರಬಾರದು. ಬೆರಳ ತುದಿಯಲ್ಲಿ ಎಲ್ಲವೂ ಸಿಗುವಂತಾದಾಗ ಮಾತ್ರ ನಮ್ಮ ಪ್ರವಾಸೋದ್ಯಮವು ಜಾಗತಿಕ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯ. ಡಿಜಿಟಲ್ ಕಂದಕವನ್ನು ಮುಚ್ಚುವುದು ಎಂದರೆ ಕೇವಲ ಕಂಪ್ಯೂಟರ್ ಅಳವಡಿಸುವುದಲ್ಲ; ಪ್ರವಾಸಿಗನಿಗೆ ಭಾರತದ ಪ್ರವಾಸವು ಸುಖಕರವೂ, ಪಾರದರ್ಶಕವೂ ಮತ್ತು ಸ್ಮರಣೀಯವೂ ಆಗುವಂತೆ ಮಾಡುವುದು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದಿಂದ ಭಾರತ ಕಲಿಯಬಹುದಾದ ಪಾಠಗಳೇನು?

ಗೂಗಲ್ ಡೇಟಾ ಪ್ರಕಾರ, ಶೇ. 74ರಷ್ಟು ಪ್ರವಾಸಿಗರು ತಮ್ಮ ಪ್ರವಾಸವನ್ನು ಆನ್‌ಲೈನ್‌ನಲ್ಲಿಯೇ ಯೋಜಿಸುತ್ತಾರೆ. ಆದರೆ ಭಾರತದ ಸರಕಾರಿ ಪ್ರವಾಸಿ ವೆಬ್‌ಸೈಟ್‌ಗಳ 'ಬೌನ್ಸ್ ರೇಟ್' (ವೆಬ್‌ಸೈಟ್ ನೋಡಿ ತಕ್ಷಣ ಹೊರಹೋಗುವುದು) ಹೆಚ್ಚಿದೆ. ಕಾರಣ - ಹಳೆಯ ವಿನ್ಯಾಸ ಮತ್ತು ಮಾಹಿತಿಯ ಅಸ್ಪಷ್ಟತೆ. ಒಬ್ಬ ದೇಶಿ ಪ್ರವಾಸಿ ಕೊಡಗಿನ ಯಾವುದೋ ಒಂದು ಜಲಪಾತ ನೋಡಲು ಹೊರಡುತ್ತಾನೆ. ಸರಕಾರಿ ವೆಬ್‌ಸೈಟ್‌ನಲ್ಲಿ ಅದು 'ಓಪನ್' ಎಂದು ತೋರಿಸುತ್ತದೆ. ಆದರೆ ಅಲ್ಲಿಗೆ ತಲುಪಿದ ಮೇಲೆ ತಿಳಿಯುತ್ತದೆ - ಮಳೆಯ ಕಾರಣದಿಂದ ಆ ಸ್ಥಳವನ್ನು ವಾರಗಳ ಹಿಂದೆಯೇ ಮುಚ್ಚಲಾಗಿದೆ ಎಂದು. ಡಿಜಿಟಲ್ ಮಾಹಿತಿ 'ರಿಯಲ್ ಟೈಮ್'ನಲ್ಲಿ ಅಪ್‌ಡೇಟ್ ಆಗದಿದ್ದರೆ ಅದು ಪ್ರವಾಸಿಗನ ಸಮಯ ಮತ್ತು ಹಣದ ವ್ಯಯಕ್ಕೆ ಕಾರಣವಾಗುತ್ತದೆ.

ತಂತ್ರಜ್ಞಾನ ಎನ್ನುವುದು ಕೇವಲ ಮೊಬೈಲ್ ಸ್ಕ್ರೀನ್ ಮೇಲಿನ ಅಂಕಿ-ಅಂಶಗಳಲ್ಲ. ಅದು ನಮ್ಮ ದೇಶಕ್ಕೆ ಬರುವ ಪ್ರವಾಸಿಗರಿಗೆ ನಾವು ನೀಡುವ 'ಡಿಜಿಟಲ್ ಆತಿಥ್ಯ'. 'ಅತಿಥಿ ದೇವೋ ಭವ' ಎಂಬ ಸಂಸ್ಕೃತಿಯನ್ನು ಇಂದಿನ ಕಾಲಘಟ್ಟದಲ್ಲಿ 'ಡಿಜಿಟಲ್ ದೇವೋ ಭವ' ಎಂಬ ಪರಿಕಲ್ಪನೆಯೊಂದಿಗೆ ಬೆಸೆಯಬೇಕಿದೆ. ಹಂಪಿಯ ಕಲ್ಲಿನ ಕಂಬಗಳಲ್ಲಿ ಅಡಗಿರುವ ಸಂಗೀತ ಅಥವಾ ಅಜಂತಾ-ಎಲ್ಲೋರಾದ ಕೆತ್ತನೆಗಳ ಹಿಂದಿನ ಕಥೆಗಳು ಪ್ರವಾಸಿಗನಿಗೆ ಆತನದ್ದೇ ಭಾಷೆಯಲ್ಲಿ, ಯಾವುದೇ ತಾಂತ್ರಿಕ ಅಡೆತಡೆಯಿಲ್ಲದೆ ತಲುಪಿದಾಗ ಮಾತ್ರ ನಮ್ಮ ಪ್ರವಾಸೋದ್ಯಮಕ್ಕೆ ಜಾಗತಿಕ ಮನ್ನಣೆ ಸಿಗುತ್ತದೆ. ನಾವು ನಿರ್ಮಿಸುವ 'ಯೂನಿಫೈಡ್ ಟೂರಿಸಂ ಇಂಟರ್ಫೇಸ್' ಕೇವಲ ಸಾಫ್ಟ್‌ವೇರ್ ಆಗಿರದೇ, ಪ್ರವಾಸಿಗನ ಹತಾಶೆಯನ್ನು ಮರೆಸಿ ಆತನ ಪ್ರವಾಸದ ಕನಸನ್ನು ನನಸಾಗಿಸುವ ಭರವಸೆಯಾಗಬೇಕು. ಆಗ ಮಾತ್ರ ಭಾರತವು ಕೇವಲ ನೋಡಬೇಕಾದ ದೇಶವಾಗಿ ಉಳಿಯದೇ, ಪದೇ ಪದೆ ಅನುಭವಿಸಬೇಕಾದ 'ಸ್ಮಾರ್ಟ್' ಪ್ರವಾಸಿ ತಾಣವಾಗಿ ಹೊರಹೊಮ್ಮಲು ಸಾಧ್ಯ.