Saturday, September 19, 2026
Saturday, September 19, 2026

ಪ್ರವಾಸಕ್ಕೆ ದುಡ್ಡು ಬೇಕು! ಆದರೆ ಮೊದಲು ಹೊರಡುವ ಮನಸು ಬೇಕು!

‘ವಿದೇಶ ಪ್ರವಾಸ ಎಂದರೆ ಕೈತುಂಬಾ ಹಣ ಇರಬೇಕು’ ಎಂಬುದು ಹಲವರ ಮನಸಿನಲ್ಲಿರುವ ಸಹಜವಾದ ಕಲ್ಪನೆ. ಆದರೆ, ಪ್ರವಾಸಕ್ಕೆ ಹಣಕ್ಕಿಂತ ಮೊದಲು ಬೇಕಾಗುವುದು ಹೊರಡಬೇಕು ಎನ್ನುವ ಮನಸು, ಕುತೂಹಲ ಮತ್ತು ಸಿಕ್ಕ ಸಮಯವನ್ನು ಬಳಸಿಕೊಳ್ಳುವ ಮನೋಭಾವ. ಪ್ರವಾಸವನ್ನು ಬದುಕಿನ ಭಾಗವಾಗಿಸಿಕೊಂಡ ಕೆಲವರ ಅನುಭವಗಳು, ಜಗತ್ತು ಸುತ್ತಲು ದುಡ್ಡೊಂದೇ ಮಾನದಂಡವಲ್ಲ ಎಂಬುದನ್ನು ತೋರಿಸುತ್ತವೆ.

  • ವಿಜಯ್‌ ಕೊಪ್ಪ

ʼಆರಾಮಾಗಿ ದೇಶ ಸುತ್ತುತ್ತಾ ಇದ್ದಾರೆ. ದುಡ್ಡು ಚೆನ್ನಾಗಿ ಇರಬೇಕು!ʼ ವಿದೇಶ ಪ್ರವಾಸದ ಫೊಟೋಗಳನ್ನು ನೋಡಿದಾಗ ಕೆಲವರಿಗೆ ಹೀಗೆ ಅನಿಸುವುದು ಸಹಜ. ಇನ್ನೂ ಕೆಲವರಿಗೆ, ʼಈ ವಿದೇಶ ಪ್ರವಾಸಗಳಿಂದ ಚೆನ್ನಾಗಿ ದುಡ್ಡು ಬರುತ್ತಿರಬೇಕುʼ ಎಂದು ಅನಿಸಬಹುದು. ಕೆಲ ಪರಿಚಿತರು ಕೇಳಿದ್ದು ಇದೆ, ʼನಿಮಗೇನು ಸಾರ್, ಒಂದು ಫಾರಿನ್ ಟ್ರಿಪ್ ಹೋದರೆ ತಿಂಗಳಿಗೆ ಆಗೋ ಅಷ್ಟು ದುಡ್ಡು ಬರತ್ತೆʼ.

ವಿಶ್ವೇಶ್ವರ ಭಟ್ಟರ ಪ್ರವಾಸದ ಬರಹಗಳ ಕೆಳಗೂ ಇಂಥ ಪ್ರತಿಕ್ರಿಯೆಗಳನ್ನು ಆಗಾಗ ನೋಡಿದ್ದೇನೆ. ʼನಿಮಗೆ ದುಡ್ಡಿದೆ, ಅದಕ್ಕೆ ಇಷ್ಟೆಲ್ಲ ಸುತ್ತುತ್ತೀರಿʼ ಎಂಬರ್ಥದ ಮಾತುಗಳಿಗೆ ಅವರು ಹಲವು ಬಾರಿ ಶಾಂತವಾಗಿ ಉತ್ತರಿಸಿದ್ದೂ ಇದೆ. ಅದನ್ನು ಓದುವಾಗ ನನಗೂ ಒಂದು ಆಲೋಚನೆ ಮೂಡುತ್ತದೆ. ಪ್ರವಾಸಕ್ಕೆ ಹಣಕ್ಕಿಂತ ಮೊದಲು ಹೊರಡಬೇಕು ಎನ್ನುವ ಮನಸು ಬೇಕು.

Untitled design (90)

ಮೂರು ವರ್ಷಗಳಿಗೂ ಹೆಚ್ಚು ಸಮಯವಾಯಿತು. ನಾನು ಉದ್ಯೋಗ ಬಿಟ್ಟು ಊರಿಗೆ ಮರಳಿ, ಕೃಷಿಯ ಜತೆ ತೊಡಗಿಸಿಕೊಂಡು, ಮನೆಯವರ ಜತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಆದರೂ ಹಿಂದಿನ ವೃತ್ತಿ ಬದುಕಿನಲ್ಲಿ ಬೆಳೆದ ಅಂತಾರಾಷ್ಟ್ರೀಯ ಸಂಬಂಧಗಳು ಮುಂದುವರಿದಿವೆ. ಆಗಾಗ ಸಮ್ಮೇಳನ, ಸಭೆ, ಉಪನ್ಯಾಸಗಳ ಆಮಂತ್ರಣ ಅಥವಾ ಹಳೆಯ ಪರಿಚಯದವರನ್ನು ಭೇಟಿಯಾಗುವ ಕಾರಣಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ.

ಇವು ಹಣ ಗಳಿಸುವ ಪ್ರವಾಸಗಳೇನಲ್ಲ. ಕೆಲವು ಕಾರ್ಯಕ್ರಮಗಳಲ್ಲಿ ಖರ್ಚಿನ ಒಂದು ಭಾಗ ಸಿಗಬಹುದು, ಕೆಲವು ಕಡೆ ಅದೂ ಇಲ್ಲ. ಉಳಿದದ್ದನ್ನು ಜೇಬಿನಿಂದಲೇ ಹಾಕಬೇಕು. ಆದರೆ, ಒಮ್ಮೆ ಹೊರಟ ಮೇಲೆ ನನ್ನ ಲೆಕ್ಕ ಸ್ವಲ್ಪ ಬೇರೆ!

ಹಣ ಖಂಡಿತ ಬೇಕು. ವಿಮಾನ ಉಚಿತವಲ್ಲ, ಹೊಟೇಲ್ ಉಚಿತವಲ್ಲ. ಆದರೆ ನನ್ನ ಅನುಭವದಲ್ಲಿ ಪ್ರವಾಸದ ಮೊದಲ ಹೆಜ್ಜೆ ಹಣವಲ್ಲ. ಮೊದಲು ಬೇಕಾಗುವುದು ಹೊರಡುವ ಮನಸು. ಕಾರಣ ನಂತರ ಸಿಗುತ್ತದೆ. ಹಣದ ಲೆಕ್ಕ, ಸಮಯ, ಯೋಜನೆ ಎಲ್ಲವೂ ಅದರ ಹಿಂದೆ ಬರುತ್ತವೆ.

ಇತ್ತೀಚೆಗೆ ಪೋರ್ಚುಗಲ್‌ನ ಲಿಸ್ಬನ್‌ಗೆ ಒಬ್ಬರನ್ನು ಭೇಟಿಯಾಗುವ ಕಾರಣಕ್ಕೆ ಹೋಗಿದ್ದೆ. ಮೊದಲ ಬಾರಿ ಪೋರ್ಚುಗಲ್‌ಗೆ ಹೋಗಿದ್ದು! ನನ್ನ ಬಳಿ ಸುಮಾರು ಒಂದೂವರೆ ದಿನ ಸಮಯವಿತ್ತು. ಭೇಟಿ ಮುಗಿಸಿ ಲಿಸ್ಬನ್ ನಗರದ ಪ್ರಮುಖ ಜಾಗಗಳನ್ನು ನೋಡಿದೆ. ಯುರೋಪಿನ ಅನೇಕ ನಗರಗಳ ಒಂದು ಅನುಕೂಲವೆಂದರೆ ನಡೆಯುತ್ತಲೇ ಸಾಕಷ್ಟು ನೋಡಬಹುದು. ಸಾರ್ವಜನಿಕ ಸಾರಿಗೆಯೂ ಚೆನ್ನಾಗಿರುತ್ತದೆ.

ಮರುದಿನ ಬೆಳಗಿನ ವಿಮಾನ. ಇನ್ನೂ ಅರ್ಧ ದಿನ ಉಳಿದಿತ್ತು. ಹೊಟೇಲ್‌ನಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದಿತ್ತು. ಆದರೆ, ಪ್ರವಾಸದಲ್ಲಿದ್ದಾಗ ನನಗೆ ಹಾಗೆ ಸಮಯ ಕಳೆಯಲು ಮನಸಾಗುವುದಿಲ್ಲ. ʼಇಲ್ಲಿಂದ ಇನ್ನೇನು ನೋಡಬಹುದು?ʼ ಎಂದು ಹುಡುಕಿದೆ.

ಸಿಕ್ಕಿದ್ದು ಸಿಂತ್ರಾ ಎಂಬ ಹತ್ತಿರದ ಊರು. ಲಿಸ್ಬನ್‌ನಿಂದ ರೈಲಿನಲ್ಲಿ ಸುಮಾರು ಒಂದು ಗಂಟೆ. ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ರೈಲು ಹತ್ತಿದೆ. ಅಲ್ಲಿಗೆ ಹೋಗಿ ಸಿಕ್ಕಷ್ಟು ಸಮಯದಲ್ಲಿ ಊರು ಸುತ್ತಿ, ಮತ್ತೆ ಲಿಸ್ಬನ್‌ಗೆ ವಾಪಸಾದೆ.

ಇದನ್ನೂ ಓದಿ: ಭಾರತಕ್ಕೆ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಸ್ಥಿರತೆ

ಸಿಂತ್ರಾ ನನ್ನ ಮೂಲ ಪ್ರವಾಸದ ಯೋಜನೆಯಲ್ಲೇ ಇರಲಿಲ್ಲ. ಅದಕ್ಕಾಗಿ ಭಾರತದಿಂದ ಪೋರ್ಚುಗಲ್‌ಗೆ ಹೋಗಿರಲಿಲ್ಲ. ಆದರೆ, ಈಗಾಗಲೇ ಅಲ್ಲಿದ್ದಾಗ, ಕೈಯಲ್ಲಿ ಅರ್ಧ ದಿನವಿದ್ದಾಗ, ಇನ್ನೊಂದು ಹೊಸ ಜಾಗ ನೋಡುವ ಕುತೂಹಲ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಯಿತು.

ಇದು ಒಂದು ಉದಾಹರಣೆ ಅಷ್ಟೇ. ನನ್ನ ಅನೇಕ ಪ್ರವಾಸಗಳಲ್ಲಿ ಹೀಗಾಗಿದೆ. ಕೆಲಸ ಮುಗಿದ ನಂತರ ಸಿಕ್ಕ ಕೆಲವು ಗಂಟೆಗಳನ್ನು ಹೊಟೇಲ್‌ನಲ್ಲಿ ವಿಶ್ರಾಂತಿಗೆ ಬಳಸುವುದಕ್ಕಿಂತ, ಹತ್ತಿರದಲ್ಲಿ ಇನ್ನೇನಿದೆ ಎಂದು ಹುಡುಕಿಕೊಂಡು ಹೊರಟಿದ್ದೇನೆ. ಕೆಲವೊಮ್ಮೆ ನಡೆದುಕೊಂಡು, ಕೆಲವೊಮ್ಮೆ ಬಸ್ ಅಥವಾ ರೈಲು ಹಿಡಿದು, ಯೋಜನೆಯಲ್ಲೇ ಇಲ್ಲದ ಊರು ಅಥವಾ ಜಾಗವೊಂದನ್ನು ನೋಡಿಕೊಂಡು ಬಂದಿದ್ದೇನೆ.

ನಾವು ಎಷ್ಟು ದೂರ ಪ್ರಯಾಣಿಸಿದ್ದೇವೆ ಎನ್ನುವುದಕ್ಕಿಂತ, ಅಲ್ಲಿಗೆ ತಲುಪಿದ ಮೇಲೆ ಸಿಕ್ಕ ಸಮಯವನ್ನು ಎಷ್ಟು ಬಳಸಿಕೊಂಡಿದ್ದೇವೆ ಎನ್ನುವುದೂ ಪ್ರವಾಸದ ಭಾಗವೇ.

ಈ ಹಿಂದೆ ಮೆಕ್ಸಿಕೋದಲ್ಲಿದ್ದಾಗ ಚಿಚೆನ್ ಇಟ್ಜಾ ನೋಡಲು ಒಂದು ದಿನದ ಪ್ರವಾಸ ಬುಕ್ ಮಾಡಿದ್ದೆ. ಬೆಳಗ್ಗೆ ಎಲ್ಲರೂ ಸೇರುವಾಗ ನಮ್ಮ ಗುಂಪಿನಲ್ಲಿ ಇನ್ನೊಬ್ಬ ಭಾರತೀಯರು ಕಾಣಿಸಿದ್ದರು.

ಆದರೆ, ನಮ್ಮ ಪರಿಚಯಕ್ಕೆ ಕಾರಣವಾದದ್ದು ಇನ್ನೂ ಆಸಕ್ತಿಕರ. ನಾವು ಕನ್ನಡದಲ್ಲಿ ಮಾತನಾಡುತ್ತಿರುವುದು ಅವರ ಕಿವಿಗೆ ಬಿತ್ತು! ಚಿಚೆನ್ ಇಟ್ಜಾ ತಲುಪಿದ ನಂತರ ಕುತೂಹಲಕ್ಕೆ ಮಾತು ಶುರುವಾಯಿತು. ಕರ್ನಾಟಕದವರಾ?. ʼಹೌದು!ʼ ಅಲ್ಲಿಂದ ಮಾತು ಮುಂದುವರಿಯಿತು. ಲ್ಯಾಟಿನ್ ಅಮೆರಿಕದಷ್ಟು ದೂರದಲ್ಲಿ ಸಿಗುವ ಭಾರತೀಯರು ಸಾಮಾನ್ಯವಾಗಿ ಅಮೆರಿಕ ಅಥವಾ ಕೆನಡಾದಲ್ಲಿ ನೆಲೆಸಿದವರಿರಬಹುದು ಎಂಬುದು ನಮ್ಮ ಸಹಜ ಊಹೆ. ಅದು ಸುಳ್ಳಾಯಿತು, ಇರಲಿ. ಬೆಂಗಳೂರಿನವರಿರಬಹುದಾ? ಆದರೆ ಅದೂ ತಪ್ಪಾಯಿತು. ಕೊನೆಗೆ ನೋಡಿದರೆ ನಾನು ಕೊಪ್ಪದವನು, ಅವರು ಕುಂದಾಪುರದವರು!

ಸುಮಾರು 16,000 ಕಿಲೋಮೀಟರ್ ದೂರದ ಮೆಕ್ಸಿಕೋದಲ್ಲಿ ಮಾಯನ್ ನಾಗರೀಕತೆಯ ಚಿಚೆನ್ ಇಟ್ಜಾ ಮುಂದೆ ಪಕ್ಕದೂರಿನ ಇಬ್ಬರು ಪರಿಚಯವಾಗಿದ್ದೆವು! ಆದರೆ ನನಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸಿದ್ದು ಅವರ ಪ್ರಯಾಣದ ರೀತಿ.

ಅವರು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವಾಸ ಅವರ ಹವ್ಯಾಸ. ಈ ಪ್ರವಾಸವನ್ನು ಸುಮಾರು ಒಂದು ವರ್ಷ ಮೊದಲೇ ಯೋಜಿಸಿದ್ದರಂತೆ. ಒಂದೇ ಪ್ರಯಾಣದಲ್ಲಿ ಮೆಕ್ಸಿಕೋ, ಪೆರು ಸೇರಿದಂತೆ ನಾಲ್ಕೈದು ದೇಶಗಳನ್ನು ಸೇರಿಸಿಕೊಂಡಿದ್ದರು. ಸೂಕ್ತವಾದ ಮಾರ್ಗ, ಕಡಿಮೆ ಖರ್ಚಿನಲ್ಲಿ ಹೆಚ್ಚು ಜಾಗಗಳನ್ನು ನೋಡುವುದು, ಸಿಗುವ ಸಮಯ, ಎಲ್ಲವನ್ನೂ ಮೊದಲೇ ಲೆಕ್ಕ ಹಾಕಿ ಪ್ರಪಂಚವನ್ನು ಸಾಧ್ಯವಾದಷ್ಟು ನೋಡುವ ಪ್ರಯತ್ನ.

ಅವರ ಜತೆ ಇದ್ದದ್ದು ಒಂದು ಬ್ಯಾಕ್‌ಪ್ಯಾಕ್. ಅದರಲ್ಲೊಂದು ಲ್ಯಾಪ್‌ಟಾಪ್. ಸಮಯದ ವ್ಯತ್ಯಾಸವನ್ನು ಬಳಸಿಕೊಂಡು ಅಗತ್ಯವಿದ್ದಾಗ ಭಾರತದಲ್ಲಿ ಕೆಲಸದ ಸಮಯಕ್ಕೆ ಆನ್‌ಲೈನ್ ಆಗಿ ತಮ್ಮ ಕೆಲಸವನ್ನೂ ಮುಂದುವರಿಸುತ್ತಿದ್ದರು.

ಅವರು ಆಗಲೇ 62ಕ್ಕೂ ಹೆಚ್ಚು ದೇಶಗಳನ್ನು ನೋಡಿದ್ದರು!

Untitled design (91)

ಅವರನ್ನು ನೋಡಿದಾಗ ನನಗೆ ಮತ್ತೆ ಅದೇ ಉತ್ತರ ಸಿಕ್ಕಂತಾಯಿತು. ಪ್ರಪಂಚ ನೋಡಬೇಕು ಎಂಬ ಆಸೆಯಿಂದ ತಮ್ಮ ಸಮಯ, ಕೆಲಸ ಮತ್ತು ಹಣವನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಂಡಿದ್ದರು.

ಇನ್ನೊಂದು ರೀತಿಯ ಪ್ರವಾಸಿಗರನ್ನೂ ನನ್ನ ವೃತ್ತಿ ಬದುಕಿನಲ್ಲಿ ಪರಿಚಯಿಸಿಕೊಂಡಿದ್ದೇನೆ. ಅವರಲ್ಲಿ ಒಬ್ಬರು ಪೋರ್ಚುಗೀಸ್ ಪರಿಚಿತರು. ವಿಚಿತ್ರವೆಂದರೆ, ಪ್ರತಿ ಬಾರಿ ಮಾತನಾಡುವಾಗಲೂ ಅವರು ಬೇರೆ ಬೇರೆ ದೇಶಗಳಲ್ಲಿರುತ್ತಿದ್ದರು! ಒಮ್ಮೆ ಇಂಡೋನೇಷಿಯಾ, ಮತ್ತೊಮ್ಮೆ ಥಾಯ್ಲೆಂಡ್, ಮತ್ತೆ ಇನ್ನೆಲ್ಲೋ.

ಒಮ್ಮೆ ಕುತೂಹಲ ತಡೆಯಲಾಗದೆ ಅವರನ್ನು ಕೇಳಿದೆ. ʼನೀವು ಯಾವಾಗಲೂ ಪ್ರವಾಸ ಮಾಡುತ್ತಲೇ ಇರುತ್ತೀರಲ್ಲ?ʼ. ಅವರು ಹೇಳಿದ ಉತ್ತರ ನನಗೆ ತುಂಬಾ ಇಷ್ಟವಾಯಿತು.ʼಇಲ್ಲ. ನಾನು ಯಾವಾಗಲೂ ಟ್ರಾವೆಲ್ ಮಾಡುತ್ತಿಲ್ಲ. ನಮ್ಮ ಬದುಕನ್ನೇ ಹಾಗೆ ಮಾಡಿಕೊಂಡಿದ್ದೇನೆ.ʼ

ಕೆಲವು ದೇಶಗಳಲ್ಲಿ ಸಿಗುವ ದೀರ್ಘಾವಧಿಯ ವೀಸಾದ ಅವಕಾಶವನ್ನು ಅವರು ಬಳಸಿಕೊಳ್ಳುತ್ತಾರೆ. ಯಾವುದೋ ದೇಶಕ್ಕೆ ಹೋಗಿ ಕೆಲ ತಿಂಗಳು ಅಲ್ಲೇ ಮನೆ ಬಾಡಿಗೆಗೆ ಪಡೆಯುತ್ತಾರೆ. ಸ್ಥಳೀಯ ವಾಹನ ಬೇಕಿದ್ದರೆ ಅದನ್ನೂ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಪ್ರವಾಸಿಗರಂತೆ ಪ್ರತಿದಿನ ಹೊಟೇಲ್ ಬದಲಿಸುವುದಿಲ್ಲ. ಅಲ್ಲೇ ಬದುಕುತ್ತಾರೆ.

ಬೆಳಗ್ಗೆ ಎದ್ದು ತಮ್ಮ ಕೆಲಸ ಮಾಡುತ್ತಾರೆ. ಊಟ, ದಿನಸಿ, ಓಡಾಟ ಎಲ್ಲವೂ ಅಲ್ಲಿನವರಂತೆಯೇ. ಬಿಡುವಾದಾಗ ಆ ಪ್ರದೇಶವನ್ನು ನೋಡುತ್ತಾರೆ. ಕೆಲವು ತಿಂಗಳ ನಂತರ ಮತ್ತೊಂದು ದೇಶ. ಅವರು ಪ್ರವಾಸವನ್ನೇ ತಮ್ಮ ಜೀವನದೊಳಗೆ ಸೇರಿಸಿಕೊಂಡಿದ್ದಾರೆ.

ಇವೆಲ್ಲ ಹೇಳಿದ ಮಾತ್ರಕ್ಕೆ ಪ್ರವಾಸಕ್ಕೆ ಹಣ ಬೇಡ ಎನ್ನಲಾಗದು. ಹಣ ಬೇಕು. ಸಮಯ ಬೇಕು. ಆರೋಗ್ಯ ಬೇಕು. ಕುಟುಂಬ ಮತ್ತು ಕೆಲಸದ ಪರಿಸ್ಥಿತಿಯೂ ಅನುಕೂಲವಾಗಬೇಕು. ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರವಾಸ ಮಾಡಲು ಸಾಧ್ಯವೂ ಇಲ್ಲ.

ಆದರೆ, ಹಣವಿದ್ದರೆ ಮಾತ್ರ ಪ್ರವಾಸ ಸಾಧ್ಯ ಎನ್ನುವುದೂ ಪೂರ್ಣ ಸತ್ಯವಲ್ಲ. ಒಬ್ಬರು ವರ್ಷ ಮುಂಚೆಯೇ ಯೋಜಿಸುತ್ತಾರೆ. ಮತ್ತೊಬ್ಬರು ಒಂದೇ ಬ್ಯಾಕ್‌ಪ್ಯಾಕ್‌ನಲ್ಲಿ ನಾಲ್ಕೈದು ದೇಶ ಸುತ್ತುತ್ತಾರೆ. ಇನ್ನೊಬ್ಬರು ತಮ್ಮ ಕೆಲಸವನ್ನೇ ಜತೆ ತೆಗೆದುಕೊಂಡು ಕೆಲವು ತಿಂಗಳು ಬೇರೆ ದೇಶದಲ್ಲಿ ಬದುಕುತ್ತಾರೆ.

ಉದ್ದೇಶ ಬೇರೆ ಬೇರೆ. ಕೆಲವರು ವಿಶ್ರಾಂತಿಗಾಗಿ ಪ್ರವಾಸ ಮಾಡುತ್ತಾರೆ. ಕೆಲವರು ಹೊಸ ಸ್ಥಳಗಳನ್ನು ನೋಡಲು ಹೋಗುತ್ತಾರೆ. ಇನ್ನೂ ಕೆಲವರು ಆ ಸ್ಥಳಗಳ ಇತಿಹಾಸ, ಸಂಸ್ಕೃತಿ ಮತ್ತು ಬದುಕಿನ ರೀತಿಯನ್ನು ಅರಿಯಲು ಪ್ರಯಾಣಿಸುತ್ತಾರೆ. ಮತ್ತಷ್ಟು ಜನರು ಹೊಸ ಅನುಭವಗಳನ್ನು ಪಡೆಯಲು ಹೊರಡುತ್ತಾರೆ. ಉದ್ದೇಶಗಳು ಬೇರೆಬೇರೆ ಇದ್ದರೂ, ಹಣದಷ್ಟೇ ಮುಖ್ಯವಾದುದು ಕುತೂಹಲ ಮತ್ತು ಮನಸು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?