- ಡಾ.ಕಿರಣ ಅಂಕ್ಲೇಕರ, ಪುಣೆ

ಸಾಮಾನ್ಯವಾಗಿ ಶಿವಮಂದಿರದಲ್ಲಿ ಗರ್ಭಗುಡಿಗೆ ಮುಖಮಾಡಿರುವ ನಂದಿವಿಗ್ರಹ ಇರುವುದು ಸಹಜ. ಅದರಂತೆಯೇ ಈ ಪುರಾತನ ದೇಗುಲದಲ್ಲಿ ಕೂಡ ನಂದಿ ವಿಗ್ರಹವಿದೆ. ಆದರೆ ಅದರ ಆಕಾರ ನೋಡಿದರೆ ನೀವು ಖಂಡಿತ ಅವಾಕ್ಕಾಗುತ್ತೀರಿ. ಅಲ್ಲಿಯ ಪೂಜಾರಿಗಳ ಪ್ರಕಾರ ಮೊದಲು ಈ ನಂದಿ ಚಿಕ್ಕದಾಗಿತ್ತು. ತದನಂತರ ಇದು ಬೆಳೆಯತೊಡಗಿದೆ. ಅದು ಈಗ ಎಷ್ಟು ದೊಡ್ಡದಾಗಿದೆಯೆಂದರೆ ವಿಗ್ರಹದ ಪ್ರದಕ್ಷಿಣೆ ಹಾಕಲು ಸ್ಥಳವಿಲ್ಲ. ಅದರ ಮೈ ಮಂಟಪದ ಕಂಬಗಳಿಗೆ ಒತ್ತಿಕೊಂಡು ಬಿಟ್ಟಿದೆ.

ಭಾರತ ದೇಶವೇ ವಿಸ್ಮಯಗಳ ನಾಡು. ಈ ವಿಸ್ಮಯಗಳೆಲ್ಲೆಲ್ಲಿ ಅಡಗಿವೆ ಎನ್ನುವುದನ್ನು ಹುಡುಕಿ ತೆಗೆಯುವುದೂ ಕೂಡ ಒಂದು ವಿಸ್ಮಯವೇ. ಜಗತ್ತಿನ ವಿಸ್ಮಯಗಳು ಏಳೋ , ಎಂಟೋ ಎಂದು ಪಾಶ್ಚಾತ್ಯರ ಪೂರ್ವಾಗ್ರಹಪೀಡಿತ ಅಭಿಪ್ರಾಯ. ಭಾರತವನ್ನು ವರ್ಷವಿಡೀ ಪರ್ಯಟನೆ ಮಾಡಿದರೆ ಕಣಕಣದಲ್ಲಿ ವಿಸ್ಮಯ ಕಾಣಬಹುದು. ಅಂಥ ಒಂದು ವಿಸ್ಮಯಭರಿತ ಪುಣ್ಯಕ್ಷೇತ್ರ ಯಾಗಂಟಿ.

ಇದನ್ನೂ ಓದಿ: ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ

ವಿಸ್ಮಯದ ಆಗರ ಯಾಗಂಟಿ

ಯಾಗಂಟಿ ಪುಣ್ಯಕ್ಷೇತ್ರ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿದೆ. ಈ ಸ್ಥಳ ಹೈದರಾಬಾದ್ ನಿಂದ ಸುಮಾರು 300 ಕಿಮೀ ದಕ್ಷಿಣಕ್ಕೆ ಇದೆ. ವಿಶಿಷ್ಟ ಪದರು ಪದರಿನ ಕಲ್ಲಿನ ಬೆಟ್ಟದ ತಪ್ಪಲಲ್ಲಿದೆ ಈ ಪುಟ್ಟ ಕ್ಷೇತ್ರ. ಇಲ್ಲಿರುವ ಉಮಾಮಹೇಶ್ವರ ದೇವಾಲಯ, ಪರ್ವತ ಗುಹೆಗಳು, ಬೃಹತ್ ನಂದಿ ವಿಗ್ರಹ, ಸ್ಪಟಿಕ ಸ್ಪಷ್ಟ ಪುಷ್ಕರಣಿಗಳು ವಿಜ್ಞಾನಿಗಳನ್ನು ಚಿಂತನೆಗೆ ತೊಡಗಿಸಿದೆ. ಅಲ್ಲದೇ, ಈ ಊರಿನಲ್ಲಿ ಕಾಗೆಗಳೇ ಇಲ್ಲದಿರುವುದು ಇನ್ನೊಂದು ವೈಚಿತ್ರ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತವೆ. ಒಂದು ಕಥೆಯ ಪ್ರಕಾರ, ತಿರುಪತಿಯ ಶ್ರೀನಿವಾಸಸ್ವಾಮಿ ಮೊದಲು ಭೂಮಿಗೆ ಬಂದಿಳಿದಾಗ ಮೊದಲು ಪಾದವಿಟ್ಟಿದ್ದು ಯಾಗಂಟಿಯಲ್ಲಿ, ಎರಡನೆಯ ಪಾದ ಕಡಪದಲ್ಲಿ ಮತ್ತು ಮೂರನೆಯ ಪಾದ ತಿರುಪತಿಯಲ್ಲಿಟ್ಟನು. ಹಾಗಾಗಿ, ಅಗಸ್ತ್ಯ ಮುನಿಗಳು ಶ್ರೀ ಶ್ರೀನಿವಾಸನ ಮೊದಲ ಪಾದವಿಟ್ಟ ಕ್ಷೇತ್ರದಲ್ಲಿ ಶ್ರೀನಿವಾಸನ ಮೂರ್ತಿ ಪ್ರತಿಷ್ಠಾಪಿಸಬೇಕೆಂದು, ಕಲ್ಲಿನ ಮೂರ್ತಿ ಕೆತ್ತಲಾರಂಭಿಸಿದರು. ಆದರೆ ಕೊನೆಯಲ್ಲಿ, ಆ ಮೂರ್ತಿಯ ಕಾಲಬೆರಳು ಭಂಗವಾಯಿತು. ಆಗ ಅಗಸ್ತ್ಯ ಮುನಿಗಳು ಭಂಗ ವಿಗ್ರಹವನ್ನು ಪ್ರತಿಷ್ಠಾಪಿಸಲಾಗದ ನೋವಿನಿಂದ, ಶಿವಲಿಂಗವನ್ನು ಪೂಜಿಸುತ್ತಾ ಗುಹೆಯೊಂದರಲ್ಲಿ ತಪಸ್ಸು ಮಾಡುತ್ತಾರೆ. ಮುನಿಗಳ ತಪಸ್ಸಿಗೆ ಮೆಚ್ಚಿದ ಶಿವ ಅಗಸ್ತ್ಯರಿಗೆ, ಈ ಸ್ಥಳ ಕೈಲಾಸ ಪರ್ವತದಂತಿದೆ. ಹಾಗಾಗಿ ಇಲ್ಲಿ ಶಿವ ಮಂದಿರ ಕಟ್ಟಲು ಸಲಹೆ ನೀಡುತ್ತಾನೆ. ಭಗವಂತನ ಆಣತಿಗೆ ಒಪ್ಪಿದ ಮುನಿಗಳು, ಶಿವ ಪಾರ್ವತಿಯರಿಬ್ಬರೂ ಇಲ್ಲಿ ಮೂರ್ತಿ ರೂಪದಲ್ಲಿ ನೆಲೆಸಬೇಕೆಂದು ಕೇಳಿಕೊಂಡಾಗ ಶಿವನು ಒಪ್ಪಿಗೆ ನೀಡಿದನು. ಹೀಗೆ ಹತ್ತಾರು ಕಥೆ ಮತ್ತು ಉಪಕಥೆಗಳು ಯಾಗಂಟಿಗೆ ಅಂಟಿಕೊಂಡಿವೆ.

Untitled design - 2026-03-05T100527.316

ಶಿವಲಿಂಗವಿಲ್ಲದ ಶಿವ ದೇವಾಲಯ

ಯಾಗಂಟಿಯಲ್ಲಿರುವ ಪ್ರಮುಖ ದೇವಾಲಯವು ಶಿವ ಪಾರ್ವತಿಯರದು. ವಿಶಿಷ್ಟವೆಂದರೆ ಈ ಮಂದಿರದಲ್ಲಿ ಶಿವಲಿಂಗವಿಲ್ಲ, ಬದಲಿಗೆ ಉಮಾಮಹೇಶ್ವರರ ಬಹುಪುರಾತನ ಮೂರ್ತಿಯಿದೆ. ಶಿವನನ್ನು ಪಾರ್ವತಿ ಸಮೇತನಾಗಿ ವಿಗ್ರಹ ರೂಪದಲ್ಲಿ ಪೂಜಿಸಲ್ಪಡುವ ಪುರಾತನ ದೇವಾಲಯ ಇದೊಂದೇ ಆಗಿರಬೇಕು. ನಂತರ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಹರಿಹರ ಮತ್ತು ಬುಕ್ಕದೇವ ರಾಜರುಗಳು ಈಗಿರುವ ಮಂದಿರವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಭಕ್ತರುಗಳಿಗೆ ಈ ದೇಗುಲದ ಗರ್ಭಗುಡಿಯಲ್ಲಿ ಪ್ರವೇಶ ಮಾಡಿ ಸ್ಪರ್ಶಪೂಜೆ ಮಾಡುವ ಅವಕಾಶವಿದೆ. ಸಾಮಾನ್ಯವಾಗಿ ಶಿವಮಂದಿರದಲ್ಲಿ ಗರ್ಭಗುಡಿಗೆ ಮುಖಮಾಡಿರುವ ನಂದಿವಿಗ್ರಹ ಇರುವುದು ಸಹಜ. ಅದರಂತೆಯೇ ಈ ಪುರಾತನ ದೇಗುಲದಲ್ಲಿ ಕೂಡ ನಂದಿ ವಿಗ್ರಹವಿದೆ. ಆದರೆ ಅದರ ಆಕಾರ ನೋಡಿದರೆ ನೀವು ಖಂಡಿತ ಅವಾಕ್ಕಾಗುತ್ತೀರಿ. ಅಲ್ಲಿಯ ಪೂಜಾರಿಗಳ ಪ್ರಕಾರ ಮೊದಲು ಈ ನಂದಿ ಚಿಕ್ಕದಾಗಿತ್ತು. ತದನಂತರ ಇದು ಬೆಳೆಯತೊಡಗಿದೆ. ಅದು ಈಗ ಎಷ್ಟು ದೊಡ್ಡದಾಗಿದೆಯೆಂದರೆ ವಿಗ್ರಹದ ಪ್ರದಕ್ಷಿಣೆ ಹಾಕಲು ಸ್ಥಳವಿಲ್ಲ. ಅದರ ಮೈ ಮಂಟಪದ ಕಂಬಗಳಿಗೆ ಒತ್ತಿಕೊಂಡು ಬಿಟ್ಟಿದೆ. ಈ ದೇಗುಲದ ಪಕ್ಕದಲ್ಲಿರುವ ಗುಹೆಯೊಂದರಲ್ಲಿ ಶ್ರೀ ಪೋತಲೂರು ವೀರಬ್ರಹ್ಮಸ್ವಾಮಿ ಎಂಬ ಕಾಲಜ್ಞಾನಿ ವಾಸಿಸುತ್ತಿದ್ದರು. ಅವರ ಪ್ರಕಾರ ಕಲಿಯುಗದ ಅಂತ್ಯದ ಹೊತ್ತಿಗೆ ಈ ನಂದಿ ಇನ್ನಷ್ಟು ಬೆಳೆದು, ಜೀವ ತಳೆದು ಕೂಗಲಾರಂಭಿಸಿದಾಗ ಜಗಪ್ರಳಯ ಉಂಟಾಗುತ್ತದೆ.

ಅದೇನೇ ಇರಲಿ, ಈ ಬೃಹದಾಕಾರದ ನಂದಿ ವಿಗ್ರಹ ಮಾತ್ರ ನಮ್ಮ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈ ಮೊದಲೇ ತಿಳಿಸಿದಂತೆ ದೇವಾಲಯದ ಸುತ್ತಲಿನ ಕಲ್ಲಿನ ಪದರಿನ ಬೆಟ್ಟದಲ್ಲಿ ಮೂರು ಗುಹೆಗಳಿವೆ. ಒಂದನೆಯ ಗುಹೆಯ ಒಳಗೆ ಅಗಸ್ತ್ಯ ಮುನಿ ನಿರ್ಮಿತ ಶ್ರೀನಿವಾಸನ ವಿಗ್ರಹವಿದೆ. ಇಲ್ಲಿ ತಲುಪಲು ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಈ ವಿಗ್ರಹದ ಕಾಲಬೆರಳು ಭಂಗವಾಗಿರುವುದರಿಂದ ವಿಶೇಷ ಪೂಜೆ ನಡೆಯುವುದಿಲ್ಲ. ಆದರೆ ವಿಗ್ರಹ ತುಂಬಾ ಸುಂದರವಾಗಿದೆ. ಈ ಗುಹೆಯ ಒಳಗಿನಿಂದ ಇನ್ನೊಂದು ಒಳದಾರಿ ಕಾಣುತ್ತದೆ. ಆ ಗುಹಾಮಾರ್ಗದ ಮೂಲಕ ಹೋದರೆ ತಿರುಪತಿಯನ್ನು ತಲುಪಬಹುದು ಎನ್ನುತ್ತಾರೆ ಪೂಜಾರಿಗಳು. ಆದರೆ ಸದ್ಯಕ್ಕಂತೂ ಯಾರೂ ಆ ಸಾಹಸ ಮಾಡಿರಲಿಕ್ಕಿಲ್ಲ. ಇನ್ನೊಂದು ಗುಹೆಯಲ್ಲಿ ಅಗಸ್ತ್ಯ ಮುನಿಗಳು ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಈ ಗುಹೆ ಒಳಗೆ ಹೋಗಲು ಸ್ವಲ್ಪ ಕಷ್ಟವೇ.. ಚಿಕ್ಕ ಚಿಕ್ಕ ಮೆಟ್ಟಿಲು ಮೇಲ್ಮುಖವಾದುದರಿಂದ ಹತ್ತಲು ಸ್ವಲ್ಪ ಕಷ್ಟವೇ ಆಗುತ್ತದೆ. ಇಲ್ಲಿ ಅಗಸ್ತ್ಯ ಮುನಿಗಳು ಪೂಜಿಸಿದ ಶಿವಲಿಂಗವಿದೆ. ಈ ಲಿಂಗ ಕೂಡ ಸರ್ವಸಾಮಾನ್ಯ ಲಿಂಗದಂತಿರದೆ ಮೂರು ಮುಖಗಳನ್ನು ಹೊಂದಿದೆ.

Untitled design - 2026-03-05T100546.454

ಕಾಗೆಗಳಿಲ್ಲ ಎಂದರೆ ನಂಬ್ತೀರಾ?

ಈ ಕ್ಷೇತ್ರದ ಇನ್ನೊಂದು ವಿಸ್ಮಯ ಎಂದರೆ ದೇವಾಲಯದ ಕಿಲೋಮೀಟರ್ ಆಸುಪಾಸು ಕಾಗೆಗಳೇ ಇಲ್ಲ. ಪಾರಿವಾಳ ಸೇರಿದಂತೆ ಉಳಿದ ಪಕ್ಷಿಗಳನ್ನು ದೇಗುಲದ ಸುತ್ತ ಮುತ್ತ ನೋಡಬಹುದು. ಆದರೆ ಕಾಗೆಗಳಿಲ್ಲ. ಇದಕ್ಕೂ ಸಂಬಂದಿಸಿದ ಕಥೆ ಹೇಳುತ್ತಾರೆ. ಅಗಸ್ತ್ಯ ಮುನಿಯು ಶಿವನನ್ನು ಕುರಿತು ತಪಸ್ಸು ಮಾಡುತ್ತಿರುವಾಗ ಕಾಗೆಗಳು ಬಂದು ಅವರ ತಪಸ್ಸಿಗೆ ಭಂಗ ಉಂಟು ಮಾಡುತ್ತಿದ್ದವು. ಕೋಪಗೊಂಡ ಅಗಸ್ತ್ಯರು ಆ ಭಾಗದಲ್ಲಿ ಕಾಗೆಗಳೇ ಇರದಿರಲಿ ಎಂದು ಶಾಪ ಕೊಟ್ಟರು. ಅದಕ್ಕೇ ಇಲ್ಲಿ ಕಾಗೆಗಳಿಲ್ಲ. ವಿಜ್ಞಾನಿಗಳ ಪ್ರಕಾರ ಈ ಭಾಗದ ಪರ್ವತಗಳ ವಿಶಿಷ್ಟ ತರಂಗಗಳು ಕಾಗೆಗಳನ್ನು ಇಲ್ಲಿ ಬರದಂತೆ ಮಾಡುತ್ತವೆ. ಆದರೆ ಉಳಿದ ಪಕ್ಷಿಗಳಿವೆಯಲ್ಲ ಏನಾದರೇನು? ಕಾಗೆಗಳಂತೂ ಇಲ್ಲ. ಇಲ್ಲಿರುವ ಪುಷ್ಕರಿಣಿ ಎಷ್ಟೊಂದು ಪರಿಶುದ್ಧವಾಗಿದೆಯೆಂದರೆ ಕೊಳದ ತಳ ಸ್ಪಟಿಕದಷ್ಟು ಸ್ಪಷ್ಟ. ಇಲ್ಲಿ ಯಾರಿಗೂ ಇಳಿಯಲು ಅನುಮತಿಯಿಲ್ಲ. ಆದರೆ ಇಲ್ಲಿಂದ ಇನ್ನೊಂದು ಮುಖ್ಯ ಪುಷ್ಕರಿಣಿಗೆ ನೀರು ಹರಿದು ಅಲ್ಲಿ ಭಕ್ತಾದಿಗಳು ಸ್ನಾನ ಮಾಡಿ ದೇಗುಲಕ್ಕೆ ಹೋಗುತ್ತಾರೆ. ದೇವಾಲಯದ ಹಿಂದೆ ಸುಮಾರು 50 ಅಡಿ ಎತ್ತರದ ಪದರು ಕಲ್ಲಿನ ಅಗಲವಾದ ಕಂಬದಂಥ ನಿಸರ್ಗ ನಿರ್ಮಿತ ರಚನೆ ಇದೆ. ಇದರ ತುದಿಗೇರಲು ನುರಿತ ಅನುಭವಿಗಳಿಗೆ ಮಾತ್ರ ಸಾಧ್ಯ. ನೀವು ಏನಾದರೂ ಹರಕೆ ಹೊತ್ತು ಪೂಜಾರಿಗಳಿಗೆ ಸುಮಾರು 600 ರುಪಾಯಿಯ ಪಾವತಿ ಮಾಡಿಸಿದರೆ, ವಾರದಲ್ಲೆರಡು ದಿನ, ಅನುಭವಿಗಳು ಈ ಚಿಕ್ಕ ಶಿಖರ ಕಂಬದ ತುದಿಯವರೆಗೆ ಹತ್ತಿ ಅಲ್ಲಿ ದೀಪ ಹಚ್ಚುತ್ತಾರೆ. ಅಂಥವರ ಮನೋಕಾಮನೆ ನೂರು ಪ್ರತಿಶತ ಸರಿಯಾಗುತ್ತದೆಂದು ಪೂಜಾರಿಗಳ ಅಂಬೋಣ. ಹೀಗೆ ಹಲವು ವಿಸ್ಮಯಗಳ ಸಂಗಮ ಈ ಯಾಗಂಟಿ. ಭಕ್ತಾದಿಗಳಿಗೆ ಧರ್ಮ ಭೋಜನ ಮತ್ತು ಉಳಿದುಕೊಳ್ಳಲು ವ್ಯವಸ್ಥೆಯನ್ನು ದೇವಸ್ಥಾನದ ನಿರ್ವಹಣಾ ಮಂಡಳಿ ಒದಗಿಸಿದೆ.

ಯಾಗಂಟಿ ಎಂದರೇನು?

ಇಷ್ಟೆಲ್ಲಾ ಓದಿ, ʼಯಾಗಂಟಿʼ ಹೆಸರಿನ ಅರ್ಥ ತಿಳಿದುಕೊಳ್ಳದಿದ್ದರೆ ಹೇಗೆ? ಅದಕ್ಕೂ ಒಂದು ಕಥೆ ಇದೆ. ಬಹಳ ಹಿಂದೆ ಈ ಪ್ರದೇಶದಲ್ಲಿ ಚಿಟ್ಟಪ್ಪ ಎಂಬ ಶಿವಭಕ್ತನಿದ್ದನು. ತನ್ನ ಇಷ್ಟದೈವದ ದರ್ಶನ ಯಾವಾಗ ಆದೀತೆಂದು ಹಗಲಿರುಳು ಜಪತಪಗಳಲ್ಲಿ ನಿರತನಾಗಿರುತ್ತಿದ್ದನು. ಹೀಗಿರುವಾಗ ಒಮ್ಮೆ ಅವನಿಗೆ ಒಂದು ಹುಲಿಯ ದರ್ಶನವಾಗುತ್ತದೆ. ಅದನ್ನು ನೋಡಿ ಚಿಟ್ಟಪ್ಪನಿಗೆ, ತನ್ನ ದೊರೆ ಸಾಕ್ಷಾತ್ ಈಶ್ವರನೇ ಹುಲಿಯ ರೂಪದಲ್ಲಿ ಬಂದಿದ್ದಾನೆಂದು ತಿಳಿದು ʼಯಾಗಂಟಿ. . ಯಾಗಂಟಿʼ. (ನಾನು ನೋಡಿದೆ ... ನಾನು ನೋಡಿದೆ ನನ್ನ ದೇವನನ್ನು ) ಎನ್ನುತ್ತಾನೆ. ಅಂದಿನಿಂದ ಈ ಸ್ಥಳ ʼಯಾಗಂಟಿʼ ಎಂದು ಕರೆಯಲ್ಪಟ್ಟಿದೆ.