ಗಾಳಿಪಟ ಸಿನಿಮಾದಲ್ಲಿ ಮಲೆನಾಡೇ ಸೆರೆಯಾಗಿದೆ
ಅನಂತನಾಗ್ ಅವರ ಜತೆ ಗಣೇಶ, ದಿಗಂತ್, ಆರ್.ಕೆ ಮತ್ತು ಇತರರು ಹಂದಿ ಹಿಡಿಯೋ ಸೀನ್‌ಗಳಲ್ಲಿ ಸೆರೆಯಾಗಿರುವ ಆ ಹರಿದ್ವರ್ಣ ಕಾಡು ರೋಚಕವಾದದ್ದು. ಡೈಸಿ ಬೋಪಣ್ಣ ಮಿಂದೇಳುವ ಆ ಕೆರೆ ಮತ್ತು ಹಿಂದಿನ ನೋಟವೂ. ಗಣೇಶ್‌ಗೆ ಅಲ್ಲಿಯೇ ಡೈಸಿ ಬೋಪಣ್ಣರ ಮೇಲೆ ಪ್ರೇಮಾಂಕುರವಾದದ್ದು. 'ಮಿಂಚಾಗಿ ನೀನು ಬರಲು' ಹಾಡಿನಲ್ಲಿ ಬರುವ ಕಾಸರಗೋಡು ಬೀಚ್, ಟ್ರೆಕ್ ಪಾಯಿಂಟ್, ಕಣಿವೆಗಳ ನಡುವಿನ ಹಾದಿ, ಆ ಹುಲ್ಲುಗಾವಲು ಹಾಡಿಗೆ ಕನ್ನಡಿ ಹಿಡಿದಂತಿದೆ.
- ಶಿವನಗೌಡ ಕಿಲುಬನೂರು
ʻವಾಪಸ್ ಬರೋದು ಮರ್ತೋಗ್ಬಿಡ್ಬೇಕು, ಅಂತಾ ಜಾಗಕ್ ಹೋಗಣ... ನಡ್ರಿ ಹೋಗಣ... ನಮ್ ತಾತನ್ ಮನೆಗೆ ಹೋಗಣಾ?... ಅದೇ ಬರಿ ಮೋಡ ತುಂಬ್ಕಂಡಿರತ್ತೆ ಅಂತಿದ್ದಲ್ಲಾ ಆ ಊರಿಗಾ?ʼ ಈ ಸಾಲುಗಳು ಕೇಳ್ತಿದ್ದಂಗೆ ಯಾರಿಗೆ ತಾನೆ ನೆನಪಾಗೋದಿಲ್ಲ ಸಿನಿಮಾ. 2008 ರಲ್ಲಿ ತೆರೆಕಂಡ ಪಕ್ಕಾ ಮನರಂಜನೆಯ ಮೂವಿ. ಆ ಲವ್ ಸೆಂಟಿಮೆಂಟ್, ಅಚ್ಚಳಿಯದ ಸ್ನೇಹ, ಲವಲವಿಕೆಯ ಹಾಡುಗಳು, ಸೂಪರ್ ಡೂಪರ್ ತಾರಾಗಣ, ಆ ಪೋಲಿ ಜೋಕ್ಸ್, ಪಂಚ್ ಡೈಲಾಗ್ಸ್ ಜತೆಗೆ ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯಕ್ಕೂ ಆರಿಸಿಕೊಂಡ ಕಣ್ಮನ ಸೆಳೆಯುವ ಆ ಸುಂದರ ತಾಣಗಳು. ಅಬ್ಬಾ! ನಿಜ ಹೇಳಬೇಕೆಂದರೆ ಸ್ವತಃ ಯೋಗರಾಜ್ ಭಟ್ರು ಕೂಡ ಅಂಥ ಗಾಳಿಪಟ ಮತ್ತೆ ಹಾರಿಸಲಾರರು.
ಇದನ್ನೂ ಓದಿ: ನಿಮಗೂ ಪ್ರವಾಸದಲ್ಲಿ ಲವ್ವಾದರೆ ಅದು ಡಿಡಿಎಲ್‌ಜೆ ಸಿಂಡ್ರೋಮ್!
ಮುಗಿಲ್ ಪೇಟೆಗ್ ಹೋಗಣ?
ದಿಗಂತ್ ಅವರು ಗಣೇಶ್ ಮತ್ತು ಆರ್.ಕೆ ಅವರನ್ನು ತಾತನ ಮನೆಗೆ ಕರೆದುಕೊಂಡು ಬಂದಿದ್ದ ಜಾಗ ಮಂದಾಲಪಟ್ಟಿ. ಅದೇ ಮುಗಿಲು ಪೇಟೆ. ಯಾವಾಗಲೂ ಮೋಡ, ಮುಸುಕು, ಮಂಜಿನಿಂದ ತುಂಬಿಕೊಂಡಂಥ ಪುಷ್ಪಗಿರಿ ಶ್ರೇಣಿಯ ಸುಂದರ ಗಿರಿತಾಣ. ಸಮುದ್ರ ಮಟ್ಟದಿಂದ ಸುಮಾರು 1600 ಮೀಟರ್ ಎತ್ತರದಲ್ಲಿರುವ, ಮಡಿಕೇರಿಯಿಂದ 18 - 20 ಕಿಮೀ ದೂರದಲ್ಲಿರುವ ಈ ಜಾಗದಲ್ಲಿಯೇ ʻಗಾಳಿಪಟʼದ ಬಹುಪಾಲು ಚಿತ್ರೀಕರಣ ನಡೆದಿದ್ದು. ಮಡಿಕೇರಿ ಪ್ರವಾಸದಲ್ಲಿ ಆ ಗಿರಿ-ಪರ್ವತ ಕಣಿವೆಗಳನ್ನು ಮಿಸ್ ಮಾಡೋ ಹಾಗಿಲ್ಲ. ಮುಂದೆ ಬರುವ ಆ ಶಿವನಸಮುದ್ರ ಜಲಪಾತದ ದೃಶ್ಯ ಇನ್ನೂ ಮನಮೋಹಕವಾಗಿದೆ.

ಅನಂತನಾಗ್ ಅವರ ಜತೆ ಗಣೇಶ, ದಿಗಂತ್, ಆರ್.ಕೆ ಮತ್ತು ಇತರರು ಹಂದಿ ಹಿಡಿಯೋ ಸೀನ್‌ಗಳಲ್ಲಿ ಸೆರೆಯಾಗಿರುವ ಆ ಹರಿದ್ವರ್ಣ ಕಾಡು ರೋಚಕವಾದದ್ದು. ಡೈಸಿ ಬೋಪಣ್ಣ ಮಿಂದೇಳುವ ಆ ಕೆರೆ ಮತ್ತು ಹಿಂದಿನ ನೋಟವೂ. ಗಣೇಶ್‌ಗೆ ಅಲ್ಲಿಯೇ ಡೈಸಿ ಬೋಪಣ್ಣ ಅವರ ಮೇಲೆ ಪ್ರೇಮಾಂಕುರವಾದದ್ದು. 'ಮಿಂಚಾಗಿ ನೀನು ಬರಲು' ಹಾಡಿನಲ್ಲಿ ಬರುವ ಕಾಸರಗೋಡು ಬೀಚ್, ಟ್ರೆಕ್ ಪಾಯಿಂಟ್, ಕಣಿವೆಗಳ ನಡುವಿನ ಹಾದಿ, ಆ ಹುಲ್ಲುಗಾವಲು ಹಾಡಿಗೆ ಕನ್ನಡಿ ಹಿಡಿದಂತಿದೆ. ಆರ್.ಕೆ ಮತ್ತು ಭಾವನಾ ರಾವ್ ಅವರು ಜೀಪ್ ನಿಲ್ಲಿಸಿರುವ ಆ ಸೇತುವೆ, ಡ್ಯಾಂ ಮತ್ತು ಸುತ್ತಲಿನ ಜಲಾವೃತ ಜಾಗ ಆ ಮಳೆಯಲ್ಲಿ ನೋವುದೇ ಕಣ್ಣಿಗೆ ಹಬ್ಬ.
ʻನದೀಂ ದೀಮ್ ತನಾʼ ಹಾಡಿನ ದೃಶ್ಯಗಳಂತೂ ಜಸ್ಟ್ ವಾವ್. ಆ ಗಿರಿಗಳ ಏರಿಳಿತ, ದ್ವಾರಗಳು, ಶ್ರೀರಂಗಪಟ್ಟಣ, ಮೈಸೂರು, ತಲಕಾಡು ಭಾಗದ ದೇವಾಲಯ ಒಂಥರಾ ಜಯಂತ ಕಾಯ್ಕಿಣಿ ಅವರ ಲಿರಿಕ್ಸ್‌ಗೆ ಹೇಳಿ ಮಾಡಿಸಿದಂತಿವೆ. ಆಸ್ಪತ್ರೆಯಿಂದ ಮನೆಗೆ ಹೋಗುವ ಮಧ್ಯದಲ್ಲಿ ಆ ಕಿತ್ತೋಗಿರೋ ರಸ್ತೆ, ಅಡ್ಡಾದಿಡ್ಡಿ ಬಿದ್ದಿರೋ ಮರಗಳು, ಅಕ್ಕಪಕ್ಕದಲ್ಲಿ ತೇಗದ, ಅಡಿಕೆ ಮರಗಳು ಮಳೆಗೆ ಮಿಂದೋಗಿರೋದು ನೋಡಿದರೆ ಮಳೆಗಾಲದ ಪ್ರವಾಸದಲ್ಲಿ ಅಂಥದ್ದು ನಮಗೆ ಅನುಭವ ಆಗಿರುತ್ತೆ.
ʻಆಹಾ.. ಈ ಬೆದರು ಗೊಂಬೆಗೆʼ ಹಾಡಿನಲ್ಲಿ ಬಳಸಿಕೊಂಡಿರುವ ಆ ಉಡುಗೆ ತೊಡುಗೆಗೆ ತಕ್ಕಂತೆ ದೃಶ್ಯಗಳನ್ನು ಸೆರೆಹಿಡಿದಿರುವುದು ಸೈ ಎನ್ನುವಂತಿದೆ. ಆ ಬೆದರು ಗೊಂಬೆಗಳು, ಕಾಡು, ನೀರು ಹರಿಯುವ ಕೊಚ್ಚೆ, ವಿವಿಧ ತಳಿಯ ಸಸ್ಯ ಪ್ರಭೇದ ತುಂಬಾ ನೈಸರ್ಗಿಕವಾಗಿ ಕಂಡಿವೆ. ಪ್ರಕೃತಿ ಕವಿತೆಯಲ್ಲಿ ಬೆರೆತಂತಿದೆ. ʻಒಂದೇ ಸಮನೆʼ ಹಾಡಿನ ಲಾಲಿ ಹಾಡಿಗೆ ಆ ಗಿರಿ ಪರ್ವತ ಮಲಗಿದಂತಿದೆ. ಗಣೇಶ್ ಮತ್ತು ಡೈಸಿ ಬೆಂಗಳೂರಿಗೆ ತೆರಳುವಾಗ ಮಧ್ಯ ಟ್ರಾಕುಲಾ ಜತೆಗಿನ ಮೂಕ ಮಾತು ಮತ್ತು ಆ ಘಾಟ್ ಸೆಕ್ಷನ್‌ಗೆ ಇರುವ ಲಿಂಕ್ ಒಂದೊಳ್ಳೆ ದೃಶ್ಯಕಾವ್ಯ ಸೃಷ್ಟಿಸಿದೆ. ಮುಂದೆ ಆ ಮುಖ್ಯ ಭೂಮಿಕೆಯರ ನದಿಯಲ್ಲಿನ ಆ ತೆಪ್ಪದ ಸವಾರಿ, ಪ್ರೀತಿ ವಿನಿಮಯ ಆಗುವಾಗಲೇ ತೆಪ್ಪದ ಹುಟ್ಟಿನ ಆಯ ತಪ್ಪಿರುವುದು, ಕೊನೆಗೆ ಮತ್ತದೇ ಜಲಪಾತ ಪ್ರಪಾತ ಎಲ್ಲಾ ಸೀನ್‌ಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ.

ಗಾಳಿಪಟದಲ್ಲಿ ಛಾಯಾಗ್ರಹಣ, ಹಾಡುಗಳ ದೃಶ್ಯಕಾವ್ಯ ಎಲ್ಲವೂ ಆಯಾ ಪ್ರದೇಶಗಳ ಮುಖೇನ ನಿರ್ಲಿಪ್ತವಾಗಿ ಸೆರೆಹಿಡಿಯಲಾಗಿದೆ. ಸಕಲೇಶಪುರ, ಕಳಸ, ಗುಂಡ್ಲುಪೇಟೆ, ಕೊಳ್ಳೇಗಾಲ, ಮಡಿಕೇರಿ, ತಲಕಾಡು, ತೀರ್ಥಹಳ್ಳಿ, ಕೊಡಚಾದ್ರಿ ಮುಂತಾದ ಸ್ಥಳಗಳಲ್ಲಿ ಮಲೆನಾಡಿನ ಮೈಸಿರಿ ಮಳೆಯಲ್ಲಿ ತೊಳೆದಂತಿದೆ. ಹೀಗಾಗಿ ಗಾಳಿಪಟವನ್ನು ಸ್ನೇಹ, ಪ್ರೀತಿ, ರೊಮ್ಯಾಂಟಿಕ್, ಮನರಂಜನೆ ಜತೆಗೆ ಒಂದೊಳ್ಳೆ ಟೂರಿಸ್ಟ್ ಪರಿಕಲ್ಪನೆಯಲ್ಲಿ ಎಷ್ಟು ಬಾರಿ ನೋಡಿದರೂ ಮತ್ತೆ ಹೊಸತು ಅನಿಸುತ್ತೆ.
ಚಿತ್ರ: ಗಾಳಿಪಟ
ನಿರ್ದೇಶನ: ಯೋಗರಾಜ್ ಭಟ್
ತೆರೆಕಂಡ ವರ್ಷ: 2008
ತಾರಾಗಣ: ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್, ಅನಂತನಾಗ್, ಡೈಸಿ ಬೋಪಣ್ಣ, ಭಾವನಾ ರಾವ್, ನೀತು ಇತ್ಯಾದಿ
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ ಕಾಯ್ಕಿಣಿ, ಹೃದಯ ಶಿವ