Thursday, June 4, 2026
Thursday, June 4, 2026

ಭಯವಾಗದ ವಾತವಾರಣದಲ್ಲಿ ವಿಪರೀತ ಭಯವಾದಾಗ

ಸಾಮಾನ್ಯವಾಗಿ ಪ್ರವಾಸದಲ್ಲಿ ಫಜೀತಿಯಾಗುವುದೆಂದರೆ ರೈಲೋ, ಬಸ್ಸೋ, ಫ್ಲೈಟೋ ತಪ್ಪಿಹೋಗುವುದು ಅಥವಾ ಕೆಟ್ಟ ಹೊಟೇಲ್ ರೂಂ ಸಿಗುವುದೋ ಅಥವಾ ಕಾರು ಕೆಟ್ಟು ಹೋಗುವುದೋ ಹೀಗೇ ಏನಾದರೂ ಒಂದು ಆಗುವುದು. ಆದರೇ ನನಗೆ ಆದ ಫಜೀತಿ ಬೇರೆ ರೀತಿಯದು.

- ಅರವಿಂದ್‌ ಉಪಾಧ್ಯಾಯ

ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಪ್ರವಾಸ ಹೋಗಿದ್ದೆ. ನನ್ನ ಜತೆ ಬೌದ್ದ ಸ್ವಾಮೀಜಿಯೊಬ್ಬರಿದ್ದರು. ನಾವು ದಿಯೋಮಾಲಿ ಎಂಬ ಊರಿನಲ್ಲಿರುವ ಅವರ ಒಂದು ಕೇಂದ್ರಕ್ಕೆ ಹೋಗುತ್ತಿದ್ದೆವು. ಅದು ಕಾಡಿನ ಮಧ್ಯ ಇರುವ ಒಂದು ಸಣ್ಣ ಊರು. ಸುತ್ತಲೂ ದಟ್ಟವಾದ ಕಾಡು. ಸುಮಾರು ಎರಡು ಕಿಮೀ ಉದ್ದವಿರುವ ರಸ್ತೆಯ ಅಕ್ಕಪಕ್ಕ ಊರು ಬೆಳೆದಿದೆ. ಒಂದೆರಡು ಸಣ್ಣ ಪುಟ್ಟ ಹೊಟೇಲುಗಳನ್ನು ಬಿಟ್ಟರೆ ಅಲ್ಲಿ ಲಾಡ್ಜ್ ಅಂತ ಯಾವುದೂ ಇಲ್ಲ, ಅವರ ಕೇಂದ್ರದಲ್ಲಿ ಅತಿಥಿಗಳಿಗೆ ಅಂತ ರೂಮ್ ಯಾವುದೂ ಇಲ್ಲವಾದ್ದರಿಂದ ನನಗೆ ಅಲ್ಲೇ ಕಾಡಂಚಿನಲ್ಲಿರುವ ಫಾರೆಸ್ಟ್ ಗೆಸ್ಟ್ ಹೌಸಿನಲ್ಲಿ ವ್ಯವಸ್ಥೆ ಮಾಡಿದ್ದರು.

ಈ ಫಾರೆಸ್ಟ್ ಗೆಸ್ಟ್ ಹೌಸ್ ಊರಿನಿಂದ ಸುಮಾರು 2 ಕಿಮೀ ದೂರದಲ್ಲಿದೆ. ಹಳೆಯ ಬ್ರಿಟಿಷ್ ಕಾಲದ ಮರದಲ್ಲಿ ಮಾಡಿದ ದೊಡ್ಡ ಬಂಗಲೆ, ಸುಮಾರು ನಾಲ್ಕೈದು ಎಕರೆ ಜಾಗದ ಮಧ್ಯದಲ್ಲಿದೆ. ಗೇಟಿನಿಂದ ಒಂದು ಅಂಕು ಡೊಂಕು ರಸ್ತೆ ಮನೆಯ ಪೋರ್ಟಿಕೋಗೆ ಬರುತ್ತದೆ. ಅಲ್ಲೇ ಮುಂದೆ ಒಂದಷ್ಟು ದೊಡ್ಡದೊಡ್ಡ ಮರಗಳು. ಕಾಂಪೌಂಡಿನ ಸುತ್ತಲೂ ದಟ್ಟವಾದ ಮರಗಳು. ತುಂಬಾ ಸುಂದರವಾದ ಜಾಗ. ಸಂಜೆ ನಾಲ್ಕು ಗಂಟೆಗೆ ನನ್ನನ್ನು ಅಲ್ಲಿ ತಂದು ಬಿಟ್ಟರು. ಗೆಸ್ಟ್ ಹೌಸಿನ ಮೇಲ್ವಿಚಾರಕ ನನ್ನನ್ನು ಸ್ವಾಗತಿಸಿ ಒಳ್ಳೆಯ ಟೀ ಮಾಡಿಕೊಟ್ಟ, ನಂತರ ಬಂಗ್ಲೋ ನೋಡಿದೆ, ನಾಲ್ಕು ದೊಡ್ಡ ಬೆಡ್ ರೂಮ್, ಪ್ರತೀ ರೂಮಿಗೆ ಟಾಯ್ಲೆಟ್, ಸಿಟ್ ಔಟ್, ದೊಡ್ಡ ಹಾಲು, ಡೈನಿಂಗ್ ರೂಮ್, ಅಡುಗೆ ಕೋಣೆ, ಸ್ಟೋರ್ ರೂಮ್, ಹೀಗೆ ಇನ್ನೂ ಕೆಲವು ಸಣ್ಣಪುಟ್ಟ ರೂಮುಗಳು. ಇಲ್ಲಿ ಒಂದು ವಿಶೇಷವೇನಂದರೆ ಎಲ್ಲ ರೂಮಿಗೂ ಟಾಯ್ಲೆಟ್ ಸೇರಿ ಹೊರಗಿನಿಂದ ಒಂದು ಬಾಗಿಲು ಮತ್ತು ಒಳಗಿನಿಂದ ಒಂದು ಬಾಗಿಲು. ಹೀಗಾಗಿ ಮನೆ ತುಂಬಾ ಬಾಗಿಲುಗಳೇ ಎಂಬಂತಾಗಿತ್ತು.

ಇದನ್ನೂ ಓದಿ: ಪ್ರವಾಸಿ ಛಾಯಾಗ್ರಹಣ: ಸೌಂದರ್ಯ, ಗೌರವ ಮತ್ತು ಪ್ರಜ್ಞೆಯ ಸಮನ್ವಯ

ಹಾಗೇ ಮೇಲ್ವಿಚಾರಕನ ಹತ್ತಿರ ಮಾತನಾಡುತ್ತಾ ರಾತ್ರಿ ಅವರು ಇರುವ ರೂಮ್ ಯಾವುದು ಅಂತ ಕೇಳಿದೆ. ಅದಕ್ಕವರು ಈ ರಾತ್ರಿ ನಾನು ಊರಿಗೆ ಹೋಗಬೇಕು, ಒಂದು ಪೂಜೆ ಇದೆ ಅಂದ. ಹಾಗಾದರೆ ರಾತ್ರಿ ಯಾರು ಇರುತ್ತಾರೆಂದು ಕೇಳಿದೆ. ಯಾರೂ ಇಲ್ಲ ಸರ್ ನೀವು ಇರುತ್ತೀರಲ್ಲ ಅಂದ. ರಾತ್ರಿ ನಾನು ಒಬ್ಬನೆ ಇರಬೇಕಾ ಎಂದು ಪ್ರಶ್ನಿಸಿದೆ. ಅದಕ್ಕವನು ಹೌದು ಸರ್, ಭಯಪಡಬೇಕಾದುದೇನಿಲ್ಲ, ಎಲ್ಲ ಬಾಗಿಲುಗಳನ್ನೂ ಹಾಕಿಕೊಂಡು ಮಲಗಿದರಾಯಿತು ಎಂದ. ಹಾಗೆ ಕೆಲವೊಂದು ಸಾರಿ ಯಾರಾದರೂ ಪ್ರವಾಸಿಗರು ಬರುತ್ತಾರೆ. ಅವರಿಗೆ ಬಾಗಿಲು ತೆರೆದು ಒಂದು ರೂಮ್ ಕೊಟ್ಟರೆ ನಿಮಗೂ ಜತೆ ಆಗುತ್ತದೆ ಅಂದ. ನಾನು ಅದೆಲ್ಲ ಆಗೊಲ್ಲ, ನಾನು ಬಾಗಿಲು ತೆರೆಯೋದಿಲ್ಲ ಅಂದೆ. ಪರ ಊರು, ಪರಭಾಷೆ, ಗುರುತು ಪರಿಚಯವಿಲ್ಲದವರು ಬಂದರೆ ನನ್ನ ಕಥೆ ಏನು ಅಂದೆ. ಅದಕ್ಕವನು ಹೌದಾ, ಪರವಾಗಿಲ್ಲ ಸಾರ್, ನಾನು ಗೇಟಿಗೆ ಬೀಗ ಹಾಕ್ಕೊಂಡು ಹೋಗ್ತೀನಿ, ಬೆಳಗ್ಗೆ ಬೇಗ ಬರ್ತೀನಿ. ನೀವು ಬಾಗಿಲು ಹಾಕ್ಕೊಂಡು ಮಲಗಿ ಅಂದ. ಅವನು ಹೋದ ಮೇಲೆ ಮನೆ ತುಂಬಾ ಇದ್ದ ಎಲ್ಲ ಬಾಗಿಲುಗಳನ್ನು ಭದ್ರ ಪಡಿಸಿ ಮೊಬೈಲ್ ನೋಡುತ್ತ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಒಳಗೇನೋ ಶಬ್ದ ಆದಂತಾಯಿತು. ಹೋಗಿ ನೋಡಿದರೆ ಈತ ಅಡುಗೆ ಮನೆಯಲ್ಲಿ ಏನನ್ನೋ ಹುಡುಕುತ್ತಿದ್ದ. ನನಗೆ ಆಶ್ಚರ್ಯ ಆಗಿ, ಏನ್ಬೇಕಿತ್ತು ಅಂತ ಕೇಳಿದರೆ, ಏನೋ ಮರೆತಿದ್ದೆ ಸಾರ್, ಒಳಗೆ ಹೇಗೆ ಬಂದಿರಿ ಅಂತಾ ಕೇಳಿದ್ದಕ್ಕೆ ಆ ಬಾಗಿಲಿನಿಂದ ಬಂದೆ ಅಂದ. ನೋಡಿದರೆ ಯುಟಿಲಿಟಿ ಬಾಗಿಲು ತೆರೆದಿತ್ತು. ಅವನು ಹೋದ ನಂತರ ಅದನ್ನೂ ಕೂಡ ಒಳಗಿನಿಂದ ಚಿಲಕ ಹಾಕಿಕೊಂಡೆ.

ಸ್ವಲ್ಪ ಹೊತ್ತಿಗೆ ಇಡೀ ಮನೆ ಗೌವ್ ಅನ್ನಲಿಕ್ಕೆ ಶುರುವಾಯಿತು. ಇತ್ತೀಚೆಗೆ ಮನೆಯಲ್ಲಿ ಮಕ್ಕಳಿಗೆ ಇದ್ದಕ್ಕಿದ್ದ ಹಾಗೆ ದೆವ್ವದ ಚಲನಚಿತ್ರಗಳ ಮೇಲೆ ಆಸಕ್ತಿ ಉಂಟಾಗಿ ರಜೆ ಇದ್ದದ್ದರಿಂದ ಪ್ರತಿ ದಿನ ಒಂದು ದೆವ್ವದ ಸಿನಿಮಾ ನೋಡುತ್ತಿದ್ದರು. ಬಹಳಷ್ಟು ಕಥೆಗಳು ಇಂಥದ್ದೇ ಒಂದು ಹಳೇ ಬಂಗಲೆಯಲ್ಲಿ ನಡೆಯುವಂಥದ್ದು. ಅದೆಲ್ಲ ತಲೆಯಲ್ಲಿ ಬಂತು. ಮಕ್ಕಳಿಗೆ ಫೋನ್ ಮಾಡಿ ಮನೆಯನ್ನು ವರ್ಣಿಸಿದೆ. ಮಗಳು ಅಪ್ಪಾ ಯಾವುದಾದರೂ ದೆವ್ವ ಬರಬಹುದು ನೋಡು ಅಂತ ತಮಾಷೆ ಮಾಡಿದಳು. ನನಗೆ ಅದೇ ತಲೆಯಲ್ಲಿ ಉಳಿಯಿತು. ಇಡೀ ಮನೆ ಭೂತ ಬಂಗ್ಲೆಯಂತೆ ಭಾಸವಾಗುತ್ತಿತ್ತು. ಮತ್ತೊಮ್ಮೆ ಇಡೀ ಮನೆಯನ್ನು ಸುತ್ತಿ ಬಂದೆ. ಏನೂ ವಿಶೇಷ ಕಾಣಲಿಲ್ಲ. ಹೊರಗೆ ನೋಡಿದರೆ ಕತ್ತಲಲ್ಲಿ ಏನೂ ಕಾಣಿಸುತ್ತಿರಲಿಲ್ಲ. ದೂರದ ಗೇಟಿನ ಮೂಲಕ ಯಾವುದಾದರೂ ವಾಹನ ಆಗೊಮ್ಮೆ ಈಗೊಮ್ಮೆ ಓಡಾಡುವ ಬೆಳಕು ಕಾಣಿಸುತ್ತಿತ್ತು. ಸುಮ್ಮನೆ ಕುಳಿತೆ. ಒಳಗಿಂದೊಳಗೆ ಒಂಥರ ಚಡಪಡಿಕೆ ಶುರುವಾಯಿತು. ಒಬ್ಬನೆ ಇರಲು ಕಷ್ಟವೆನಿಸಿತು. ಅದೇ ಸಮಯಕ್ಕೆ ಸ್ವಾಮೀಜಿಯ ಫೋನ್ ಬಂತು. ʼಆರ್ ಯು ಕಂಫರ್ಟಬಲ್ʼ ಅಂತ ಕೇಳಿದರು. ಯಾರೂ ಇಲ್ಲ ಒಬ್ಬನೆ ಇದ್ದೀನಿ ಅಂತ ಪರಿಸ್ಥಿತಿ ಹೇಳಿದೆ. ಸ್ವಾಮೀಜಿಗೆ ಅರ್ಥವಾಯಿತು. ಕೂಡಲೇ ಆಶ್ರಮದಿಂದ ಒಬ್ಬರನ್ನು ನನ್ನ ಜತೆ ರಾತ್ರಿ ಇರಲು ಕಳುಹಿಸಿದರು.

Untitled design - 2026-06-04T174414.242

ಅವರು ಬಂದು ಸಾರ್ ನಾನು ಇಲ್ಲಿ ಹಾಲ್‌ನಲ್ಲಿ ಮಲಗುತ್ತೇನೆ, ನೀವು ರೂಮಿನಲ್ಲಿ ಮಲಗಿ ಅಂದರು. ಯಾರೋ ಒಬ್ಬರು ಜತೆಗೆ ಇದ್ದಿದ್ದರಿಂದ ಧೈರ್ಯ ಬಂದು ಮನಸಿಗೆ ಸಮಾಧಾನವಾಯಿತು. ಆಶ್ರಮದಿಂದ ಅವರು ತಂದಿದ್ದ ಊಟ ಮಾಡಿ ಇಬ್ಬರೂ ಮಲಗಿದೆವು. ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು. ಫ್ಲೋರಿಂಗಿನ ಮರ ಕಿರುಗುಟ್ಟುತ್ತಿತ್ತು. ಯಾರೋ ಓಡಾಡಿದ ಹಾಗೆ ಅನ್ನಿಸುತ್ತಿತ್ತು. ಏನೂ ಕಾಣಿಸುತ್ತಿರಲಿಲ್ಲ. ಪಕ್ಕದಲ್ಲೇ ಇದ್ದ ಲೈಟ್ ಸ್ವಿಚ್ ಹಾಕಿದರೆ ಕರೆಂಟ್ ಇರಲಿಲ್ಲ. ಹೆದರಿಕೆಯಾಯಿತು. ಮೊಬೈಲಿನಲ್ಲಿ ಟಾರ್ಚ್ ಆನ್ ಮಾಡುತ್ತಾ ಯಾರದು ಯಾರದು ಅಂತ ಕೂಗಿದೆ. ಟಾರ್ಚ್ ಬಿಟ್ಟು ನೋಡಿದರೆ ಅದೇ ಆಶ್ರಮವಾಸಿ ಟಾಯ್ಲೆಟ್ ಬಾಗಿಲಿನ ಹತ್ತಿರ ನಿಂತಿದ್ದ. ನಾನೇ ಸಾರ್, ಸ್ವಲ್ಪ ಟಾಯ್ಲೆಟ್ ಉಪಯೋಗಿಸಬೇಕಿತ್ತು, ಡಿಸ್ಟರ್ಬ್ ಆಯ್ತಾ ಸಾರ್ ಅಂದರು. ನನಗೋ ಒಂದು ಕಡೆ ಹೆದರಿಕೆ, ಇನ್ನೊಂದು ಕಡೆ ಸಿಟ್ಟು, ನಗು ಎಲ್ಲ ಒಟ್ಟೊಟ್ಟಿಗೆ ಬಂತು. ʼಪರವಾಗಿಲ್ಲʼ ಅಂತ ಹೇಳಿ ಟೈಮ್ ನೋಡಿದೆ, ಮಧ್ಯ ರಾತ್ರಿ ಒಂದು ಗಂಟೆಯಾಗಿತ್ತು. ನಂತರ ಸುಮಾರು ಹೊತ್ತು ಸರಿಯಾಗಿ ನಿದ್ದೆಯೇ ಬರಲಿಲ್ಲ. ಇದ್ದಕಿದ್ದ ಹಾಗೆ ʼಗುಡ್ ಮಾರ್ನಿಂಗ್ ಸಾರ್, ಟೀ ಮಾಡಲʼ ಅಂತ ಕೇಳಿ ಎಚ್ಚರ ಆಯಿತು. ಕಣ್ಣು ಬಿಟ್ಟು ನೋಡಿದರೆ ಅದೇ ಮೆಲ್ವಿಚಾರಕ ನಗುತ್ತಾ ನಿಂತಿದ್ದ. ನನಗೆ ಆಶ್ಚರ್ಯವಾಯಿತು. ಇದ್ದಕಿದ್ದ ಹಾಗೆ ಯಾವಾಗೆಂದರೆ ಆವಾಗ ಧುತ್ ಅಂತ ಪ್ರತ್ಯಕ್ಷ ಆಗುತ್ತಾನಲ್ಲ ಇವನು ಅಂದುಕೊಂಡು "ನೀನು ಹೇಗಯ್ಯ ಒಳಗೆ ಬಂದೆ" ಅಂತ ಕೇಳಿದೆ. "ಮುಂದಿನ ಬಾಗಿಲು ತೆರೆದಿತ್ತು" ಅಂದ. ಬೆಳಗಿನ ಜಾವವೇ ಆಶ್ರಮವಾಸಿ ಬಾಗಿಲು ತೆರೆದು ಆಶ್ರಮಕ್ಕೆ ಹೊರಟುಹೋಗಿದ್ದರು.

ಮುಖ ತೊಳೆದು ಟೀ ಕುಡಿದು ಬಂಗಲೆಯ ಹೊರಗೆ ಸುತ್ತಾಡಿದೆ, ಸುತ್ತಲಿನ ಮರಗಿಡ ನೋಡಿ ಕಾಂಪೌಂಡಿನವರೆಗೂ ಹೋಗಿ ಬಂದೆ. ಬೆಳಗ್ಗಿನ ಬಿಸಿಲಿನಲ್ಲಿ ಬಂಗ್ಲೆ ಸುಂದರವಾಗಿ ಕಾಣುತ್ತಿತ್ತು. ನಿಜವಾಗಿ ಅದೊಂದು ಸುಂದರವಾದ, ನಯನ ಮನೋಹರವಾದ ಜಾಗವಾಗಿತ್ತು. ಆದರೆ ರಾತ್ರಿ ನನ್ನದೇ ಹೆದರಿಕೆಯಿಂದ ಇದು ಭಯಾನಕವಾಗಿ ಕಾಡಿತ್ತು. ಈಗ ಹೇಳಿ ನಿಮಗೆ ಪ್ರವಾಸದಲ್ಲಿ ಈ ಥರ ಫಜೀತಿಯಾಗಿತ್ತೆ?

ಲೇಖಕರು: ಹವ್ಯಾಸಿ ಬರಹಗಾರ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ