ಗಡಿ ಗಡಿಯಾ ಸೇರಿಸಿ ನೋಡಾ..
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಲಾಭವಾಗಬಹುದು ಅಂದ್ರೆ ಅದು ಪ್ರವಾಸೋದ್ಯಮದಿಂದ ಮಾತ್ರ ಎನ್ನುತ್ತದೆ ಒಂದು ಅಂಕಿಅಂಶ. ನೆರೆ ರಾಜ್ಯದ ಪ್ರವಾಸಿಗರನ್ನು ಸೆಳೆಯುವುದು, ನೆರೆ ರಾಜ್ಯದ ಪ್ರವಾಸಿ ತಾಣವನ್ನು ಸೆಳೆಯುವುದು ಇದು ಸಾಧ್ಯವಾಗಬೇಕು ಅಂದರೆ ಗಡಿ ವಿಚಾರ ಅಡ್ಡಿಯಾಗಬಾರದು. ರಾಜ್ಯ ರಾಜ್ಯಗಳ ನಡುವೆ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ, ಕ್ರೀಡೆ, ಕಲೆ, ಸಂಸ್ಕೃತಿ ಇನ್ನಿತರ ವಿಚಾರಗಳಲ್ಲಿ ಸ್ಪರ್ಧೆ ಇರಲೇಬೇಕು. ಆದರೆ ಪರಸ್ಪರ ದ್ವೇಷ ಸಲ್ಲದು.
ಗಡಿ ಹಬ್ಬ ಎಂಬ ಪದವೇ ಎಷ್ಟು ಸೊಗಸಾಗಿದೆ. ಇದು ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ಗಡಿಯಲ್ಲಿ ನಡೆದ ಒಂದು ಸಂಭ್ರಮ. ಅಸ್ಸಾಂ-ಮಿಜೋರಾಂ ಬಾರ್ಡರ್ ಫೆಸ್ಟ್ ಅಂತಲೇ ಆಚರಿಸಲಾಯಿತು. ಈಶಾನ್ಯ ಭಾರತದ ಎರಡು ಚೆಂದದ ರಾಜ್ಯಗಳು. ಪ್ರಕೃತಿಸೌಂದರ್ಯದಲ್ಲಿ, ಸಂಸ್ಕೃತಿಯಲ್ಲಿ ಅದ್ಭುತವೆನಿಸುವ ಈ ರಾಜ್ಯಗಳು ಅವಳಿಗಳಷ್ಟು ಹೋಲುತ್ತವೆ. ಆದರೆ ಗಡಿರೇಖೆ ಎಂಬ ಗೆರೆ ಎಳೆದುಬಿಟ್ಟರೆ ಮಿತ್ರರೂ ಶತ್ರುಗಳಾಗಿಬಿಡ್ತಾರೆ. ಆ ಗೆರೆಯನ್ನು ತಮ್ಮ ನಿಯಂತ್ರಣ ರೇಖೆ ಅಂದುಕೊಳ್ಳುವ ಬದಲಿಗೆ ಮತ್ತೊಬ್ಬನಿಗೆ ಹಾಕಿದ ನಿಯಂತ್ರಣ ರೇಖೆ ಅಂದುಕೊಳ್ಳುತ್ತಾರೆ. ಆಗ ಶುರುವಾಗುತ್ತದೆ ಸಂಘರ್ಷ. ಮಿಜೋರಾಂ ಮತ್ತು ಅಸ್ಸಾಂ ಕೂಡ ಹಲವು ವರ್ಷಗಳಿಂದ ಗಡಿ ವಿವಾದಕ್ಕೆ ತುತ್ತಾದವು. ಕೆಲವೊಮ್ಮೆ ಸಂಘರ್ಷಗಳೂ ನಡೆದವು. ಪ್ರವಾಸೋದ್ಯಮ ಎರಡು ರಾಜ್ಯಗಳನ್ನು, ದೇಶಗಳನ್ನು ಬೆಸೆಯಬಹುದು ಎಂಬ ಮಾತು ಸುಳ್ಳಲ್ಲ. ಅದೇ ರೀತಿ ಎರಡು ರಾಜ್ಯಗಳ ಬಾಂಧವ್ಯ ಚೆನ್ನಾಗಿದ್ದರೆ ಅದು ಪ್ರವಾಸೋದ್ಯಮಕ್ಕೆ ಲಾಭ ಎಂಬ ಮಾತೂ ನಿಜವೇ! ಈ ನಿಟ್ಟಿನಲ್ಲಿ “ಅಸ್ಸಾಂ–ಮಿಜೋರ್ ಬಾರ್ಡರ್ ಫೆಸ್ಟಿವಲ್” ಬಹಳ ಗಮನಾರ್ಹ ಪ್ರಯತ್ನ. ಗಮನಾರ್ಹವಷ್ಟೇ ಅಲ್ಲ. ಸ್ವಾಗತಾರ್ಹವೂ ಹೌದು. ಉಭಯ ರಾಜ್ಯಗಳ ಬಂಧುತ್ವ, ಶಾಂತಿ ಮತ್ತು ಸೌಹಾರ್ದ ಗಟ್ಟಿಗೊಳಿಸುವ ಹಾದಿಯಲ್ಲಿ ಇದು ಅತ್ಯುತ್ತಮ ಹೆಜ್ಜೆ.

ಈ ಉತ್ಸವದಲ್ಲಿ ಎರಡು ರಾಜ್ಯಗಳ ಜನರು ಒಂದೇ ವೇದಿಕೆಯಲ್ಲಿ ಜತೆಗೂಡಿ ನರ್ತಿಸಿ, ಹಾಡಿ, ಆಡಿ ಸಕಲ ಕೌಶಲಗಳ ಪ್ರದರ್ಶನ ಮಾಡಿದರು. ಇಬ್ಬರ ಸಂಸ್ಕೃತಿಯಲ್ಲಿ ಇರುವ ವೈವಿಧ್ಯವನ್ನು, ಒಗ್ಗಟ್ಟನ್ನು ಆಚರಿಸಿದರು. ಆಹಾರ ಮತ್ತು ವಸ್ತುಗಳನ್ನು ಪರಸ್ಪರ ಹಂಚಿಕೊಮ್ಡರು. ಗಡಿರೇಖೆ ಅಳಿಸಿ ನಾವೆಲ್ಲ ಒಂದು ಎಂಬ ಭಾವ ತೋರ್ಪಡಿಸಿಕೊಂಡರು. ಈ ಕಾರ್ಯಕ್ರಮದ ಟ್ಯಾಗ್ ಲೈನೇ ಹಾಗಿತ್ತು. ’ಗಡಿ ನಮ್ಮನ್ನು ವಿಭಜಿಸಿರಬಹುದು. ಆದರೆ ಜನರ ಹೃದಯಗಳನು ಬೇರ್ಪಡಿಸಲಾಗದು’ ಎಂದು. ಇಂಥ ಒಂದು ನಡೆ ಉಭಯ ರಾಜ್ಯಗಳ ಆರ್ಥಿಕತೆಗೆ, ಪ್ರವಾಸೋದ್ಯಮಕ್ಕೆ ಅದೆಷ್ಟು ಶಕ್ತಿ ತುಂಬುತ್ತದೆ ಎಂದು ಹೇಳಬೇಕಿಲ್ಲ. ಪ್ರವಾಸೋದ್ಯಮಕ್ಕೆ ಹೊಸ ಬಾಗಿಲುಗಳು ತೆರೆದುಕೊಳ್ಳಲು ಇದೇ ಮೂಲವಾಗುತ್ತದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಲಾಭವಾಗಬಹುದು ಅಂದ್ರೆ ಅದು ಪ್ರವಾಸೋದ್ಯಮದಿಂದ ಮಾತ್ರ ಎನ್ನುತ್ತದೆ ಒಂದು ಅಂಕಿಅಂಶ. ನೆರೆ ರಾಜ್ಯದ ಪ್ರವಾಸಿಗರನ್ನು ಸೆಳೆಯುವುದು, ನೆರೆ ರಾಜ್ಯದ ಪ್ರವಾಸಿ ತಾಣವನ್ನು ಸೆಳೆಯುವುದು ಇದು ಸಾಧ್ಯವಾಗಬೇಕು ಅಂದರೆ ಗಡಿ ವಿಚಾರ ಅಡ್ಡಿಯಾಗಬಾರದು. ರಾಜ್ಯ ರಾಜ್ಯಗಳ ನಡುವೆ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ, ಕ್ರೀಡೆ, ಕಲೆ, ಸಂಸ್ಕೃತಿ ಇನ್ನಿತರ ವಿಚಾರಗಳಲ್ಲಿ ಸ್ಪರ್ಧೆ ಇರಲೇಬೇಕು. ಆದರೆ ಪರಸ್ಪರ ದ್ವೇಷ ಸಲ್ಲದು.
ಈ ನಿಟ್ಟಿನಲ್ಲಿ ಅಸ್ಸಾಂ – ಮಿಜೋರ್ ಬಾರ್ಡರ್ ಫೆಸ್ಟ್ ಒಂದು ಇಡೀ ದೇಶಕ್ಕೆ ಮಾದರಿ. ಗಡಿ ವಿವಾದಗಳ ಕಪ್ಪು ನೆರಳಿನಿಂದ ಹೊರಬಂದು, ಶಾಂತಿ ಮತ್ತು ಒಗ್ಗಟ್ಟಿನ ಬೆಳಕಿನತ್ತ ಹೆಜ್ಜೆ ಹಾಕುವ ಮೊದಲ ಪ್ರಯತ್ನ. ಭಾರತವು ವೈವಿಧ್ಯದಲ್ಲಿ ಏಕತೆ ಎಂಬ ಘೋಷವಾಕ್ಯವಿಟ್ಟುಕೊಂಡಿರುವ ದೇಶ. ಇಂಥ ಹಬ್ಬಗಳು ಆ ಘೋಷಕ್ಕೆ ಜೀವ ತುಂಬುವಂಥದ್ದು. ಇತ್ತೀಚೆಗೆ ಕೇರಳದ ಪ್ರವಾಸಿ ತಾಣದ ಒಂದು ಜಾಹೀರಾತನ್ನು ಕರ್ನಾಟಕ ಸರಕಾರ ಪ್ರಕಟಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಇದು ಆರೋಗ್ಯಕರವಲ್ಲ. ಕೇರಳ ಮತ್ತು ಕರ್ನಾಟಕ ಇಬ್ಬರೂ ಒಡಗೂಡಿ, ಮಿಜೋರಾಂ-ಅಸ್ಸಾಂ ಮಾದರಿಯಲ್ಲಿ ಒಂದು ಗಡಿಹಬ್ಬ ಮಾಡುವುದು ಇಂದಿನ ಅವಶ್ಯಕತೆ. ಆ ಒಂದು ಗಡಿ ಹಬ್ಬ ಉಭಯ ರಾಜ್ಯಗಳ ಪಾಲಿಗೆ ಎಂಥ ಮ್ಯಾಜಿಕ್ ಮಾಡಬಹುದು ಎಂದು ಒಮ್ಮೆ ಕರ್ನಾಟಕ ಸರಕಾರ ಯೋಚಿಸಲಿ. ಪ್ರವಾಸೋದ್ಯಮಕ್ಕೆ ಹೊಸ ಕಿಕ್ ಸಿಗದಿದ್ದರೆ ಹೇಳಿ.