ಕೆಲವರಿಗೆ ಅದು ಹುಡುಗಾಟವಾಗಿರುತ್ತದೆ. ಕೆಲವರಿಗೆ ಅದು ವಿಕೃತಿಯಾಗಿರುತ್ತದೆ. ಇನ್ನು ಕೆಲವರಿಗೆ ಅದು ಮಾನಸಿಕ ಸಮಸ್ಯೆಯೂ ಇದ್ದಿರಬಹುದು. ಫೇಕ್ ಅಕೌಂಟ್ ಮೂಲಕ ಮೇಲ್ ಕಳಿಸುವುದು, ಬೇರೆ ಹೆಸರಲ್ಲಿ ನಂಬರ್ ಇಟ್ಟುಕೊಂಡು ಬೆದರಿಕೆ ಕರೆ, ಹುಸಿ ಕರೆ ಮಾಡುವುದು, ಯಾರನ್ನೋ ವಂಚಿಸುವುದು, ಮರುಳು ಮಾಡುವುದು, ಸುಖಾಸುಮ್ಮನೆ ಬಕರಾ ಮಾಡುವುದು ಇತ್ಯಾದಿ. ಆದರೆ ಟ್ರಾವೆಲ್ ಟೂರಿಸಂ ವಿಚಾರದಲ್ಲಿ ಇಂಥ ನಕಲಿ ಆಟಗಳು ಸೀದಾ ನೇಣುಗಂಬಕ್ಕೂ ಕೊಂಡೊಯ್ಯಬಹುದು. ವಿಮಾನಗಳಿಗೆ ಬಾಂಬ್ ಬೆದರಿಕೆ ಮೆಸೇಜ್ ಕಳಿಸುವುದು, ಪ್ರವಾಸಿ ತಾಣಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು, ಅಶಾಂತಿ ಸೃಷ್ಟಿಸುವುದು ಇವೆಲ್ಲ ಭಯೋತ್ಪಾದಕ ಕೃತ್ಯಕ್ಕೆ ಸಮವಾಗಿರುತ್ತದೆ. ಕಳೆದ ವರ್ಷ ನಡೆದ ಅಹಮದಾಬಾದ್ ವಿಮಾನ ದುರಂತ ನಿಮಗೆ ನೆನಪಿರಬಹುದು. ಈ ವಿಚಾರದಲ್ಲಿ ಮಾಡಿದ ತಮಾಷೆಗೆ ಒಬ್ಬಾಕೆ ಸುಮಾರು ಒಂದು ವರ್ಷ ಜೈಲು ನೋಡಿ ಬರುವಂತಾಯ್ತು.
ಇದನ್ನೂ ಓದಿ: ಪ್ರವಾಸಿಗರಿಗೆ ನೆಪ ಸೃಷ್ಟಿಸಿಕೊಡಿ!
ಚೆನ್ನೈನ ರೀನೀ ಜೋಷಿಲ್ಡಾ ಎಂಬ ಟೆಕ್ಕಿಯೊಬ್ಬಳು ವಿಮಾನದಲ್ಲಿದ್ದವರನ್ನು ’ಮೇಲ್’ ಕಳ್ಸಿದ್ದು ನಾನೇ ಅಂತ ’ಮೇಲ್’ ಕಳಿಸಿದ್ದಳು! ಅರ್ಥಾತ್ ಅಹಮದಾಬಾದ್ ವಿಮಾನ ಅಗ್ನಿ ದುರಂತಕ್ಕೆ ನಾನೇ ಕಾರಣ ಎಂದು ಏರ್ ಇಂಡಿಯಾಗೆ ಫೇಕ್ ಮೇಲ್ ಕಳಿಸಿದ್ದಳು. ಆದರೆ ಇಂಥವುಗಳನ್ನು ದೇಶದ ಭದ್ರತಾ ಅಧಿಕಾರಿಗಳು ತಮಾಷೆಯೆಂದು ಪರಿಗಣಿಸಿ ನಿರ್ಲಕ್ಷಿಸುವುದಿಲ್ಲ ಎಂದು ಆಕೆಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಈ ರೀತಿಯ ಸುಮಾರು ನಲವತ್ತಕ್ಕೂ ಹೆಚ್ಚು ಹುಸಿ ಬೆದರಿಕೆಯ ಮೇಲ್ ಗಳನ್ನು ಈ ಹಿಂದೆ ಆಕೆ ವಿವಿಧ ಕಡೆಗಳಲ್ಲಿ ಪ್ರಯೋಗಿಸಿದ್ದಳು. ಆದರೆ ವಿಮಾನಯಾನಕ್ಕೆ ಧಮಕಿ ಹಾಕುವುದು ಅಥವಾ ಹುಸಿಮೇಲ್ ಮಾಡುವುದು ಸಣ್ಣ ಅಪರಾಧವಲ್ಲ. ಹೀಗಾಗಿ ನೇರ ಸೆರೆಮನೆಗೆ ಕಳಿಸಲ್ಪಟ್ಟಳು. ಇದೀಗ ಆಕೆ ಮಾನಸಿಕ ಅಸ್ವಸ್ಥೆಯೆಂಬ ಕಾರಣದಡಿ ಬೇಲ್ ಪಡೆದಿದ್ದಾಳೆ. ಒಂದುವೇಳೆ ಈಕೆ ಅಂತಾರಾಷ್ಟ್ರೀಯ ವಿಮಾನಕ್ಕೆ ಅಥವಾ ವಿದೇಶಿ ವಿಮಾನಕ್ಕೆ ಇಂಥ ಹುಸಿಬೆದರಿಕೆ ಹಾಕಿ ಸಿಕ್ಕಿಬಿದ್ದಿದ್ದರೆ, ಅವಳ ಪರಿಸ್ಥಿತಿ ಇನ್ನೂ ಗಂಭೀರವಾಗಿ ಹೋಗುತ್ತಿತ್ತು. ಇದು ಮಾಹಿತಿತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವವರಿಗೊಂದು ಪಾಠ. ಕಾಲ್, ಮೆಸೇಜ್ ಮತ್ತು ಮೇಲ್ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಪ್ರವಾಸಿ ತಾಣಗಳು, ವಿಮಾನ, ರೈಲು ಇತ್ಯಾದಿಗಳ ವಿಚಾರದಲ್ಲಿ ಹುಡುಗಾಟ ಬೇಡ. ನೂರಾರು ಪ್ರಾಣ ಮತ್ತು ಸಾರ್ವಜನಿ ಆಸ್ತಿಯ ಜತೆಗೆ ಸರಸ ಸರಿಯಲ್ಲ.