ಪ್ರವಾಸಿಗರಿಗೆ ನೆಪ ಸೃಷ್ಟಿಸಿಕೊಡಿ!
ಕ್ಯಾಲಿಫೋರ್ನಿಯಾದ ಕೋಚೆಲ್ಲಾ, ಶಿಕಾಗೋದ ಲೋಲ್ಲಪಲೂಜಾ, ಭಾರತದ ಸನ್ ಬರ್ನ್, ಜಪಾನ್ ನ ಫ್ಯೂಜಿ ರಾಕ್ ಇವೆಲ್ಲವೂ ಸಂಗೀತ ನೆಪವಾಗಿಟ್ಟುಕೊಂಡು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ. ಇಂದಿನ ಪೀಳಿಗೆ ಇಂಥದ್ದೊಂದು ಕಾರ್ಯಕ್ರಮವನ್ನು ಮುಖ್ಯವಾಗಿಟ್ಟುಕೊಂಡು ಪ್ರವಾಸವನ್ನು ಪ್ಲಾನ್ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೆ ಟಿಕೆಟ್ ಬುಕ್ ಮಾಡಿಕೊಂಡು ಅದರ ಸುತ್ತ ಆ ದೇಶದ ಇತರ ಪ್ರವಾಸಿ ತಾಣಗಳ ಭೇಟಿಗೆ ಪ್ಲಾನ್ ಮಾಡುತ್ತಿದ್ದಾರೆ. ಮ್ಯೂಸಿಕ್ ಫೆಸ್ಟಿವಲ್ ಮೂಲಕ ಹುಟ್ಟಿಕೊಂಡಿರುವ ಕನ್ಸರ್ಟ್ ಟೂರಿಸಂ ಭವಿಷ್ಯದ ಟೂರಿಸಂ ಅನ್ನಲಾಗುತ್ತಿದೆ.
ಪ್ರವಾಸೋದ್ಯಮ ಕ್ಲಿಕ್ ಆಗಲು ಏನು ಮಾಡಬೇಕು? ಹಳೆಯ ಪ್ರವಾಸಿ ತಾಣಗಳಲ್ಲಿ ಹೊಸತನ ತುಂಬಬೇಕು. ಪ್ರವಾಸಿ ಸ್ಥಳಗಳೇ ಅಲ್ಲದ ಜಾಗಗಳಲ್ಲೂ ಪ್ರವಾಸಿ ಅಂಶಗಳನ್ನು ತುಂಬಿ ಜನ ಬರುವಂತೆ ಮಾಡಬೇಕು. ಅದೇ ಯಶಸ್ಸಿನ ಮೂಲ ತಂತ್ರ ಅನ್ನಬಹುದು. ಉದಾಹರಣೆಗೆ ಕೊಪ್ಪಳ. ಕೊಪ್ಪಳಕ್ಕೆ ಯಾವ ಪ್ರವಾಸಿಯೂ ಸುಮ್ಮಸುಮ್ಮನೆ ಹೋಗುವುದಿಲ್ಲ. ಆದರೆ ಗವಿ ಸಿದ್ದೇಶ್ವರ ಜಾತ್ರೆಯ ಸಮಯದಲ್ಲಿ ಊರಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಾಗರ ಏರ್ಪಡುತ್ತದೆ. ಕೇವಲ ಭಕ್ತಾದಿಗಳು ಮಾತ್ರವಲ್ಲದೇ ಜಾತ್ರೆಯ ಸೊಬಗು, ಜನಜಾತ್ರೆ, ತಿಂಡಿ ತಿನಿಸು, ಸಂಸ್ಕೃತಿ ಅಧ್ಯಯನ ಇತ್ಯಾದಿಗಳ ಸಲುವಾಗಿಯೂ ಪರ ಊರುಗಳಿಂದ ಕೊಪ್ಪಳಕ್ಕೆ ಪ್ರವಾಸಿಗರು ಬರುತ್ತಾರೆ. ಮಾಮೂಲಿ ಊರಾಗಿದ್ದ ಕೊಪ್ಪಳ, ಗವಿಸಿದ್ದೇಶ್ವರ ಜಾತ್ರೆಯಿಂದಾಗಿ ಧಾರ್ಮಿಕ ಪ್ರವಾಸ ಕೇಂದ್ರವಾಗಿ ದೇಶದ ಗಮನ ಸೆಳೆಯುತ್ತದೆ. ಪ್ರವಾಸೋದ್ಯಮಕ್ಕೆ ತನ್ನ ಕೊಡುಗೆ ನೀಡುತ್ತದೆ. ಹಾಗಂತ ಎಲ್ಲೆಡೆ ನೀವು ಜಾತ್ರೆಯಿಂದಲೇ ಸೆಳೆಯಲು ಸಾಧ್ಯವಿಲ್ಲವಲ್ಲ! ಹೀಗಾಗಿ ಒಂದೊಂದು ಪ್ರದೇಶ ಒಂದೊಂದು ಸೆಲ್ಲಿಂಗ್ ಪಾಯಿಂಟ್ ಇಟ್ಟುಕೊಂಡು ಪ್ರವಾಸಿಗರನ್ನು ಆಕರ್ಷಿಸಬೇಕಾಗುತ್ತದೆ.
ಇದನ್ನೂ ಓದಿ: ಕುಂಬಾರನಿಗೆ ವರುಷ-ದೊಣ್ಣೆಗೆ ನಿಮಿಷ!
ಈ ಹಾದಿಯಲ್ಲಿ ಈಗ ಜೆನ್ Z ಪ್ರವಾಸಿಗರನ್ನು ಆಕರ್ಷಿಸುತ್ತರುವುದು ಮ್ಯೂಸಿಕ್ ಫೆಸ್ಟಿವಲ್ ಗಳು. ಕನ್ಸರ್ಟ್ ಟೂರಿಸಂ ಎಂಬ ಕಾನ್ಸೆಪ್ಟ್ ಗೆ ಈಗ ಭಾರೀ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ. ಇದರ ಲಾಭವನ್ನು ಪ್ರವಾಸೋದ್ಯಮ ಪಡೆಯಬೇಕಿದೆ. ವಿಯೆಟ್ನಾಂನ ನೋವಾ ಮ್ಯೂಸಿಕ್ ಫೆಸ್ಟಿವಲ್ ಏಷ್ಯಾದ ಪ್ರವಾಸಿಗರನ್ನು ಸೆಳೆಯುವ ಸಂಗೀತ ಕಾರ್ಯಕ್ರಮವಾಗಿತ್ತು. ದುರಂತ ಸಂಭವಿಸದೇ ಹೋಗಿದ್ದಿದ್ರೆ ಅದರ ಜನಪ್ರಿಯತೆ ಇನ್ನೂ ಎತ್ತರಕ್ಕೆ ಹೋಗಿರುತ್ತಿತ್ತು. ಇಂದಿಗೂ ವಿದೇಶದ ಹಲವಾರು ಮ್ಯೂಸಿಕ್ ಫೆಸ್ಟ್ ಗಳು ಜಗತ್ತಿನ ಪ್ರವಾಸಿಗರ ಗಮನ ಸೆಳೆಯುತ್ತಿವೆ. ಬೆಲ್ಜಿಯಂನ ಟುಮಾರೋಲ್ಯಾಂಡ್ ಫೆಸ್ಟಿವಲ್ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆ.
ಕ್ಯಾಲಿಫೋರ್ನಿಯಾದ ಕೋಚೆಲ್ಲಾ, ಶಿಕಾಗೋದ ಲೋಲ್ಲಪಲೂಜಾ, ಭಾರತದ ಸನ್ ಬರ್ನ್, ಜಪಾನ್ ನ ಫ್ಯೂಜಿ ರಾಕ್ ಇವೆಲ್ಲವೂ ಸಂಗೀತ ನೆಪವಾಗಿಟ್ಟುಕೊಂಡು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ. ಇಂದಿನ ಪೀಳಿಗೆ ಇಂಥದ್ದೊಂದು ಕಾರ್ಯಕ್ರಮವನ್ನು ಮುಖ್ಯವಾಗಿಟ್ಟುಕೊಂಡು ಪ್ರವಾಸವನ್ನು ಪ್ಲಾನ್ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೆ ಟಿಕೆಟ್ ಬುಕ್ ಮಾಡಿಕೊಂಡು ಅದರ ಸುತ್ತ ಆ ದೇಶದ ಇತರ ಪ್ರವಾಸಿ ತಾಣಗಳ ಭೇಟಿಗೆ ಪ್ಲಾನ್ ಮಾಡುತ್ತಿದ್ದಾರೆ. ಮ್ಯೂಸಿಕ್ ಫೆಸ್ಟಿವಲ್ ಮೂಲಕ ಹುಟ್ಟಿಕೊಂಡಿರುವ ಕನ್ಸರ್ಟ್ ಟೂರಿಸಂ ಭವಿಷ್ಯದ ಟೂರಿಸಂ ಅನ್ನಲಾಗುತ್ತಿದೆ.

ಟ್ರಾವೆಲ್ ಇನ್ ಸೈಟ್ ನ ಸಮೀಕ್ಷಾ ವರದಿಯೊಂದು ಇದನ್ನು ಪುಷ್ಟೀಕರಿಸುತ್ತಿದೆ. ವರದಿಯ ಪ್ರಕಾರ, 2026ರಲ್ಲಿ 62 ಶೇಕಡಾ ಜೆನ್ ಝೀ ಯುವಕರು ಸಂಗೀತ ಕಾನ್ಸರ್ಟ್‌ಗಳು ಮತ್ತು ಫೆಸ್ಟಿವಲ್‌ಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಪ್ರವಾಸ ಮಾಡಲು ಪ್ಲಾನ್ ಮಾಡಿದ್ದಾರಂತೆ. ಜಗತ್ತಿನ ಯಾವುದಾದರೂ ಭಾಗದಲ್ಲಿ ಸಂಗೀತ ಕಾರ್ಯಕ್ರಮ ಘೋಷಣೆಯಾಗುತ್ತಿದ್ದಂತೆ ಯುವಕ ಯುವತಿಯರು ವೀಸಾ, ಏರ್ ಟಿಕೆಟ್ ಬುಕ್ ಮಾಡಲು ಮುಂದಾಗುತ್ತಿದ್ದಾರೆ. ಆ ದೇಶದ ಆ ಊರಿಗೆ ಹೋಗಲು ಸಂಗೀತ ಕಾರ್ಯಕ್ರಮವು ನೆಪವಾಗುತ್ತಿದೆ. ಒಂದು ಸಂಗೀತ ಕಾರ್ಯಕ್ರಮವು ಪ್ರವಾಸೋದ್ಯಮದ ಜತೆಗೆ ಸ್ಥಳೀಯ ಆರ್ಥಿಕತೆಗೆ ಒಂದು ದಿಢೀರ್ ಏರಿಕೆ ಕೊಡುತ್ತಿದೆ. ಒಂದು ಅದ್ಭುತ ಅನುಭವ ಕೊಡುವ ಇಂಥ ಪ್ರವಾಸಕ್ಕಾಗಿ ಜೆನ್Z ಮುಗಿಬೀಳುತ್ತಿದೆ. ಇಂಥ ಪ್ರವಾಸಗಳಿಗೆ ಯಾರೂ ಒಬ್ಬೊಬ್ಬರಾಗಿ ಹೋಗುವುದಿಲ್ಲ. ಹೀಗಾಗಿ ಇದು ಸಮೂಹ ಪ್ರವಾಸಕ್ಕೂ ಇಂಬುಕೊಡುತ್ತಿದೆ.
ಹಣಕಾಸಿನ ವಿಚಾರಕ್ಕೆ ಇಂದಿನ ಪೀಳಿಗೆ ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಇದನ್ನು ಗಮನದಲ್ಲಟ್ಟುಕೊಂಡು ವಿದೇಶಗಳು ಹೆಚ್ಚು ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು, ಕಲ್ಚರಲ್ ಫೆಸ್ಟ್ ಗಳನ್ನು ಆಯೋಜಿಸಿ ವಿದೇಶದಲ್ಲಿ ಪ್ರಮೋಷನ್ ಮಾಡುತ್ತಿವೆ. ಇದಿಷ್ಟೂ ವಿಚಾರಗಳ ಸಾರಾಂಶವೇನು? ನಾವು ಇದರಿಂದ ಅರ್ಥ ಮಾಡಿಕೊಳ್ಳಬೇಕಿರೋದೇನು? ನಮ್ಮಲ್ಲೂ ನಮ್ಮ ಸಂಸ್ಕೃತಿ ಬಿಂಬಿಸುವ ಮ್ಯೂಸಿಕ್ ಫೆಸ್ಟ್ ಗಳು ನಡೆಯಬೇಕಿದೆ. ಅವುಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿ ಬೇರೆ ದೇಶದ ಪ್ರವಾಸಿಗರನ್ನು ಸೆಳೆಯಬೇಕಿದೆ. ಅದಕ್ಕೂ ಮುನ್ನ ಡೊಮಸ್ಟಿಕ್ ಮ್ಯೂಸಿಕ್ ಫೆಸ್ಟಿವಲ್ ಗಳು ಹೆಚ್ಚಾಗಬೇಕಿದೆ. ವೈವಿಧ್ಯಗಳ ತವರಾಗಿರುವ ಭಾರತದ ಪ್ರತಿ ಜಾಗಕ್ಕೂ ದೇಶದ ಎಲ್ಲೆಡೆಯಿಂದ ಬಂದು ಸಂಗೀತ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವಂತೆ ಮಾಡಬೇಕಿದೆ. ನಮ್ಮ ಕಲಾವಿದರು ವಿದೇಶಕ್ಕೆ ಹೋಗಿ ಕಾರ್ಯಕ್ರಮ ಕೊಟ್ಟು ಬಂದರೆ ಅಲ್ಲಿರುವ ನಮ್ಮವರಿಗೆ ಸಂತಸ ಸಿಗಬಹುದು. ಕಲಾವಿದರಿಗೆ ಹಣ ಮತ್ತು ಪ್ರವಾಸ ಆಗಬಹುದು. ಆದರೆ ನಮ್ಮ ಕಲಾವಿದರು ಇಲ್ಲಿಯೇ ಕಾರ್ಯಕ್ರಮ ಮಾಡಿ ಜಗತ್ತಿನ ಪ್ರವಾಸಿಗರೆಲ್ಲ ಸಂಗೀತದ ಸಲುವಾಗಿ ಭಾರತಕ್ಕೆ ಬರುವಂತಾದರೆ, ಅದು ಭಾರತ ಪ್ರವಾಸೋದ್ಯಮಕ್ಕಾಗುವ ಲಾಭವಲ್ಲವೇ? ಭವಿಷ್ಯದ ಈ ಪ್ರವಾಸೋದ್ಯಮ ಪರಿಕಲ್ಪನೆಯನ್ನು ಭಾರತ ಸಮರ್ಥವಾಗಿ ಬಳಸಿಕೊಂಡೀತೇ?