Tuesday, July 21, 2026
Tuesday, July 21, 2026

ಸ್ವಾಗತಕ್ಕೆ ದೇಶ ಸಿದ್ಧವಿದೆಯೇ?

ಪ್ರವಾಸೋದ್ಯಮವೆಂದರೆ ಕೇವಲ ಸ್ಮಾರಕಗಳನ್ನು ಕಟ್ಟುವುದಲ್ಲ. ಪ್ರವಾಸಿಗನು ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಮನೆಗೆ ಮರಳುವ ತನಕ ಅವನಿಗೆ ದೊರೆಯುವ ಪ್ರತಿಯೊಂದು ಅನುಭವವೂ ದೇಶದ ಬ್ರ್ಯಾಂಡ್ ಆಗುತ್ತದೆ. ಸ್ವಚ್ಛ ಶೌಚಾಲಯದಿಂದ ಹಿಡಿದು ಉತ್ತಮ ರಸ್ತೆ, ನಗುಮುಖದ ಟ್ಯಾಕ್ಸಿ ಚಾಲಕನಿಂದ ಹಿಡಿದು ತರಬೇತಿ ಪಡೆದ ಪ್ರವಾಸ ಮಾರ್ಗದರ್ಶಕನ ತನಕ ಪ್ರತಿಯೊಬ್ಬರೂ ಭಾರತದ ರಾಯಭಾರಿಗಳೇ.

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ಒಂದು ದೇಶ ಶ್ರೀಮಂತವಾಗಬೇಕಾದರೆ ಅದರ ನೆಲದೊಳಗಿನ ಸಂಪತ್ತಿಗಿಂತ, ಅದರ ನೆಲವನ್ನು ನೋಡಲು ಬರುವ ಜನರ ಸಂಖ್ಯೆ ಹೆಚ್ಚಾಗಬೇಕು ಅಂತ. ಇಂದಿನ ಜಗತ್ತಿನಲ್ಲಿ ಪ್ರವಾಸೋದ್ಯಮವು ಕೇವಲ ಮನೋರಂಜನೆಯ ಉದ್ಯಮವಲ್ಲ; ಅದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಸಂಸ್ಕೃತಿಯ ಪ್ರಚಾರ ಮತ್ತು ಜಾಗತಿಕ ಪ್ರಭಾವದ ಪ್ರಮುಖ ಸಾಧನ.

ಭಾರತದ ವಿಷಯಕ್ಕೆ ಬಂದರೆ, ಪ್ರಕೃತಿ, ಸಂಸ್ಕೃತಿ, ಇತಿಹಾಸ, ಆಧ್ಯಾತ್ಮಿಕತೆ, ಪಾಕಶಾಸ್ತ್ರ, ವೈದ್ಯಕೀಯ ಸೇವೆಗಳು, ಯೋಗ, ಆಯುರ್ವೇದ ಮತ್ತು ಸಾಹಸ ಪ್ರವಾಸೋದ್ಯಮ—ಇವೆಲ್ಲವೂ ಒಂದೇ ದೇಶದಲ್ಲಿ ದೊರೆಯುವ ಅಪರೂಪ ದೇಶ ನಮ್ಮದು. ಆದರೂ, ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತದ ಸ್ಥಾನ ಅದರ ಸಾಮರ್ಥ್ಯಕ್ಕೆ ತಕ್ಕಷ್ಟು ಬೆಳೆದಿಲ್ಲ ಎನ್ನುವುದು ಸತ್ಯ.

ಇದನ್ನೂ ಓದಿ: ಬೆಟ್ಟ ಹತ್ತುವವರಿಗೆ ಅಡ್ಡಗಾಲು ಹಾಕಿ ಬೀಳಿಸುತ್ತಿದೆ ಬುಕಿಂಗ್ ಮಾಫಿಯಾ!

ಇದೇ ವಿಚಾರವನ್ನು ವಿಶ್ವ ಪ್ರವಾಸೋದ್ಯಮ ಮತ್ತು ಪ್ರವಾಸ ಮಂಡಳಿ (WTTC) ತನ್ನ ಇತ್ತೀಚಿನ ವರದಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಒತ್ತಿಹೇಳಿದೆ. ಭಾರತವು ತನ್ನ ಅಂತಾರಾಷ್ಟ್ರೀಯ ಪ್ರವಾಸಿಗರ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾದರೆ, ಮುಂದಿನ ದಶಕದಲ್ಲಿ ವಿಶ್ವದ ಪ್ರಮುಖ ಪ್ರವಾಸೋದ್ಯಮ ಶಕ್ತಿಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತವು ಸದ್ಯಕ್ಕೆ ವಿಶ್ವದ ಪ್ರಮುಖ ಪ್ರವಾಸೋದ್ಯಮ ಆರ್ಥಿಕತೆಗಳ ಪೈಕಿ ಎಂಟನೆಯ ಸ್ಥಾನದಲ್ಲಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ನಾಲ್ಕನೆಯ ಸ್ಥಾನಕ್ಕೇರುವ ಸಾಧ್ಯತೆಯಿದೆ ಎಂದು WTTC ಅಂದಾಜಿಸಿದೆ. ಆದರೆ ಇದು ಸಾಧ್ಯವಾಗುವುದು ದೇಶದ ಮುಂದಿನ ನಡೆಗಳ ಮೇಲೆ ಅವಲಂಬಿತವಾಗಿದೆ.

Untitled design (56)

ಕಳೆದ ಕೆಲವು ವರ್ಷಗಳಲ್ಲಿ ದೇಶೀಯ ಪ್ರವಾಸೋದ್ಯಮ ಅದ್ಭುತವಾಗಿ ಬೆಳೆಯಿತು. ಕೋವಿಡ್ ನಂತರ ಭಾರತೀಯರು ದೇಶದೊಳಗೇ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಲು ಆರಂಭಿಸಿದರು. ಆದರೆ ಈಗ ಮುಂದಿನ ಗುರಿ ವಿದೇಶಿ ಪ್ರವಾಸಿಗರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುವುದು. ಇದರಿಂದ ವಿದೇಶಿ ವಿನಿಮಯ ಆದಾಯ ಹೆಚ್ಚುತ್ತದೆ, ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ಸಿಗುತ್ತದೆ ಮತ್ತು ಭಾರತದ ಜಾಗತಿಕ ಬ್ರ್ಯಾಂಡ್ ಮೌಲ್ಯವೂ ಏರುತ್ತದೆ.

ಆದರೆ ಇಲ್ಲಿ ಕೆಲವು ಸವಾಲುಗಳಿವೆ. ಇಂದಿಗೂ ಅನೇಕ ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತಕ್ಕೆ ಬರಲು ವೀಸಾ, ವಿಮಾನ ಸಂಪರ್ಕ, ನಗರಗಳ ಸ್ವಚ್ಛತೆ, ಪ್ರವಾಸಿ ಸುರಕ್ಷತೆ, ಮಾಹಿತಿ ವ್ಯವಸ್ಥೆ ಹಾಗೂ ಗುಣಮಟ್ಟದ ಮೂಲಸೌಕರ್ಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜಗತ್ತಿನ ಹಲವು ದೇಶಗಳು ಪ್ರವಾಸಿಗರನ್ನು ಸೆಳೆಯಲು ಸುಲಭ ವೀಸಾ, ನೇರ ವಿಮಾನಗಳು, ಪರಿಣಾಮಕಾರಿ ಡಿಜಿಟಲ್ ಸೇವೆಗಳು ಹಾಗೂ ಅತ್ಯುತ್ತಮ ಪ್ರವಾಸಿ ಅನುಭವಗಳನ್ನು ಒದಗಿಸುತ್ತಿರುವಾಗ, ಈ ವಿಷಯದಲ್ಲಿ ಹಿಂದೆಬಿದ್ದಿರುವ ಭಾರತ ಇನ್ನೂ ಹಲವು ಕ್ಷೇತ್ರಗಳಲ್ಲಿ ವೇಗ ಹೆಚ್ಚಿಸಬೇಕಿದೆ.

ಪ್ರವಾಸೋದ್ಯಮವೆಂದರೆ ಕೇವಲ ಸ್ಮಾರಕಗಳನ್ನು ಕಟ್ಟುವುದಲ್ಲ. ಪ್ರವಾಸಿಗನು ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಮನೆಗೆ ಮರಳುವ ತನಕ ಅವನಿಗೆ ದೊರೆಯುವ ಪ್ರತಿಯೊಂದು ಅನುಭವವೂ ದೇಶದ ಬ್ರ್ಯಾಂಡ್ ಆಗುತ್ತದೆ. ಸ್ವಚ್ಛ ಶೌಚಾಲಯದಿಂದ ಹಿಡಿದು ಉತ್ತಮ ರಸ್ತೆ, ನಗುಮುಖದ ಟ್ಯಾಕ್ಸಿ ಚಾಲಕನಿಂದ ಹಿಡಿದು ತರಬೇತಿ ಪಡೆದ ಪ್ರವಾಸ ಮಾರ್ಗದರ್ಶಕನ ತನಕ ಪ್ರತಿಯೊಬ್ಬರೂ ಭಾರತದ ರಾಯಭಾರಿಗಳೇ.

WTTC ವರದಿ ಮತ್ತೊಂದು ಮಹತ್ವದ ಸಂಗತಿಯನ್ನು ಉಲ್ಲೇಖಿಸಿದೆ. ವಿಶ್ವದಾದ್ಯಂತ ಜನರು ಈಗ ಅನುಭವಗಳನ್ನು ಹುಡುಕುತ್ತಿದ್ದಾರೆ. ಅವರು ಕೇವಲ ಪ್ರಸಿದ್ಧ ಸ್ಥಳಗಳನ್ನು ನೋಡಲು ಮಾತ್ರ ಬರುವುದಿಲ್ಲ. ಸ್ಥಳೀಯ ಆಹಾರ, ಜನಪದ ಸಂಸ್ಕೃತಿ, ಗ್ರಾಮೀಣ ಜೀವನ, ಪ್ರಕೃತಿ, ಯೋಗ, ಆರೋಗ್ಯ ಪ್ರವಾಸ, ವನ್ಯಜೀವಿ ಮತ್ತು ಸ್ಥಳೀಯ ಕಥೆಗಳನ್ನು ಅನುಭವಿಸಲು ಬಯಸುತ್ತಾರೆ. ಈ ಎಲ್ಲವೂ ಭಾರತದಲ್ಲಿದೆ. ಇಲ್ಲದಿರುವುದು ಅವುಗಳನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಸಮಗ್ರ ತಂತ್ರ.

Untitled design (58)

ಭಾರತದಲ್ಲಿ ರಾಜ್ಯಗಳ ಪಾತ್ರವೂ ಇಲ್ಲಿ ಮಹತ್ವದ್ದು. ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ, ಈಶಾನ್ಯ ರಾಜ್ಯಗಳು—ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಪ್ರವಾಸಿ ಉತ್ಪನ್ನವನ್ನು ಹೊಂದಿವೆ. ಆದರೆ ರಾಜ್ಯಗಳು ಪರಸ್ಪರ ಸ್ಪರ್ಧಿಸುವುದಕ್ಕಿಂತ, ಭಾರತ ಎಂಬ ಏಕೀಕೃತ ಬ್ರ್ಯಾಂಡ್‌ನಡಿ ವಿಶ್ವ ಮಾರುಕಟ್ಟೆಯಲ್ಲಿ ಒಗ್ಗಟ್ಟಿನಿಂದ ಕಾಣಿಸಿಕೊಳ್ಳುವ ಸಮಯ ಬಂದಿದೆ.

ಜಗತ್ತು ಭಾರತವನ್ನು ನೋಡಲು ಸಿದ್ಧವಾಗಿದೆ. ಆದರೆ ಭಾರತವೂ ಜಗತ್ತನ್ನು ಸ್ವಾಗತಿಸಲು ಸಿದ್ಧವಾಗಿದೆಯೇ? ಇದು ಸದ್ಯದ ಪ್ರಮುಖ ಪ್ರಶ್ನೆ. WTTC ನೀಡಿರುವ ಸಂದೇಶ ಸ್ಪಷ್ಟವಾಗಿದೆ: ಸಾಮರ್ಥ್ಯ ನಮ್ಮಲ್ಲಿದೆ; ಈಗ ಬೇಕಾಗಿರುವುದು ದೂರದೃಷ್ಟಿಯ ನೀತಿಗಳು, ಜಾಗತಿಕ ಮಟ್ಟದ ಮೂಲಸೌಕರ್ಯ, ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮತ್ತು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುವ ಸಂಕಲ್ಪ. ಈ ಅವಕಾಶವನ್ನು ನಾವು ಬಳಸಿಕೊಂಡರೆ, ಭಾರತವು ವಿಶ್ವದ ಅತ್ಯಂತ ಪ್ರಭಾವಶಾಲಿ ಪ್ರವಾಸೋದ್ಯಮ ರಾಷ್ಟ್ರವಾಗಿಯೂ ಹೊರಹೊಮ್ಮುವುದು ನಿಶ್ಚಿತ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!