• ಅಂಜಲಿ ರಾಮಣ್ಣ

1948ರಲ್ಲಿ ಇಸ್ರೇಲಿನ ಸ್ವಾತಂತ್ರ್ಯದ ಘೋಷಣೆಯ ನಂತರ, ಪ್ರಜೆಗಳು ನಿರ್ದಿಷ್ಟ ಅವಧಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಯಹೂದಿ ಮಹಿಳೆಯರಿಗೂ ಇದರಿಂದ ವಿನಾಯಿತಿ ನೀಡಲಾಗಿಲ್ಲ. ಆದರೆ ಅವರುಗಳು ಪುರುಷರಿಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದೇ ಕಾರಣಕ್ಕಾಗಿ ಪೂರ್ತಿ ಇಸ್ರೇಲಿನಲ್ಲಿ ಯುವಕ ಯುವತಿಯರು ದೊಡ್ಡದೊಡ್ಡ ಭಾರವಾದ ಗನ್ ಹಿಡಿದು ಓಡಾಡುತ್ತಿರುವುದನ್ನು ನೋಡಬಹುದು. ಇಂಥ ಮಿಲಿಟರಿ ಸಿಬ್ಬಂದಿಯನ್ನು ಹೆಜ್ಜೆಹೆಜ್ಜೆಗೂ ಕಾಣುವಾಗ ಕುತೂಹಲದಿಂದ ಮೇಲಿಂದ ಕೆಳಗಿನವರೆಗೂ ನೋಡುವಂತೆ ಆಗುತ್ತದೆ. ಇಸ್ರೇಲಿನಲ್ಲಿ ಹೀಗಿರುವ ಕಡ್ಡಾಯ ಮಿಲಿಟರಿ ಸೇವೆಯ ಬಗ್ಗೆ ಕಾಲೇಜು ದಿನಗಳಿಂದಲೂ ತಿಳಿದಿತ್ತು. ಆದರೆ ಅಟ್ಲಿಟ್ ಬಂಧಿತರ ಶಿಬಿರದಲ್ಲಿ ನನ್ನ ಮಾರ್ಗದರ್ಶಿಯಾಗಿದ್ದ ಯುವತಿ ಎಮಿಲಿ ಹೊಸದೊಂದು ವಿಷಯವನ್ನು ತಿಳಿಸಿಕೊಟ್ಟಳು.

ಇದನ್ನೂ ಓದಿ: ಪ್ರವಾಸದಲ್ಲಿ ಶಾಪಿಂಗ್ ಮಾಡದಿದ್ದರೆ ಶಾಪ ವಿಮೋಚನೆಯಾಗದು!

ಯಹೂದಿ ಧರ್ಮವನ್ನು ಬೆಂಬಲಿಸುತ್ತಿದ್ದ Baron Edmond de Rothschild ಎನ್ನುವ ಫ್ರೆಂಚ್ ಅಧಿಕಾರಿ 1903ರಲ್ಲಿ ಅಟ್ಲಿಟ್ ಎನ್ನುವ ಸಣ್ಣ ಬಂದರು ನಗರವನ್ನು ಕಟ್ಟಿರುತ್ತಾನೆ. ಯಹೂದಿಗಳು ಇಲ್ಲಿ ಬಂದು ನೆಲೆಸಲು ಅನುಕೂಲ ಮಾಡಿಕೊಟ್ಟಿರುತ್ತಾನೆ. ಹಿಟ್ಲರನ ದೌರ್ಜನ್ಯದಿಂದ ನೊಂದುಬೆಂದು ತಪ್ಪಿಸಿಕೊಂಡು ಬರುತ್ತಿದ್ದ ಯಹೂದಿಗಳು ತಮ್ಮ ನೆಲವನ್ನು ಸೇರಿಕೊಳ್ಳುವ ತವಕದಿಂದ ಇಸ್ರೇಲನ್ನು ಬಂದು ತಲುಪುತ್ತಿದ್ದ ಸಂಖ್ಯೆ ಹೆಚ್ಚಿದಾಗ ಅರಬ್ ದೇಶಗಳು ಯಹೂದಿಗಳು ಹಿಂದಿರುಗುವುದನ್ನು ತಡೆಯಲು ಬ್ರಿಟಿಷರ ಮೇಲೆ ಒತ್ತಡ ಹೇರುತ್ತಾರೆ. ಆಗ ಬ್ರಿಟಿಷರು ಇಸ್ರೇಲಿನಲ್ಲಿ ತೆರೆದದ್ದು ಅಟ್ಲಿಟ್ ಬಂಧಿಗಳ ಶಿಬಿರ.

ಅಟ್

ಪ್ಯಾಲೆಸ್ಟೀನ್‌ನ ಅಧಿಕಾರಿಗಳ ಸುಪರ್ದಿಯಲ್ಲಿ ಇದ್ದ ಈ ಶಿಬಿರ ಅಕ್ಷರಶಃ ’ಯಹೂದಿಗಳ ಕಾನ್ಸಂಟ್ರೇಶನ್ ಕ್ಯಾಂಪ್’ ಆಗಿತ್ತು. ಅವರು ಅಲ್ಲಿ ಯಾವ ಪರಿಸ್ಥಿತಿಯಲ್ಲಿ ವಾಸ ಮಾಡಿದ್ದರು ಎನ್ನುವುದನ್ನು ಈಗಿನವರಿಗೆ ಮನವರಿಕೆ ಮಾಡಿಕೊಡಲು ಅವರು ಬಳಸುತ್ತಿದ್ದ ಬಟ್ಟೆ ಮತ್ತು ಇತರೆ ಸಾಮಾನುಗಳನ್ನು ಇಲ್ಲಿ ಹಾಗೇ ಇರಿಸಲಾಗಿದೆ. ನಾಲ್ಕು ಜನರು ಕಾಲು ಚಾಚಲು ಸಾಕಾಗಿದ್ದ ಕೋಣೆಯಲ್ಲಿ ಎಪ್ಪತ್ತರಿಂದ ಎಂಬತ್ತು ಜನರನ್ನು ತುರುಕಲಾಗುತ್ತಿತ್ತು. ಮರಳಿನ ಮೇಲೆ ಒಣಹುಲ್ಲು ಹಾಸಿ ಅದರ ಮೇಲೆ ಇವರ ಕೂರಾಟ, ಮಲಗಾಟ. ನಾಲ್ಕು ಪಾಯಿಖಾನೆಗಳ ಶೌಚಾಲಯಕ್ಕೆ ದಿನಕ್ಕೆ ಒಮ್ಮೆ ಮಾತ್ರ ನಿಗದಿಪಡಿಸಿದಷ್ಟು ಅಳತೆಯ ನೀರನ್ನು ಬಿಡಲಾಗುತ್ತಿತ್ತು. ಒಂದೇ ಹೊತ್ತಿನ ಊಟ, ಅದೂ ಉಸಿರಾಡಲು ಎಷ್ಟು ಸಾಕೋ ಅಷ್ಟು ಮಾತ್ರ. ಪ್ರಾಣಿಗಳ ಸಾಗಾಣಿಕೆಯ ಗೂಡ್ಸ್ ವ್ಯಾಗನ್‍ನಲ್ಲಿ ದಂಡುದಂಡಿನಲ್ಲಿ ಬಂದಿಳಿಯುತ್ತಿದ್ದ ಮಹಿಳೆಯರು, ಪುರುಷರು ಮತ್ತು ಮಕ್ಕಳ ದೇಹಗಳ ಮೇಲೆ ಮೊದಲು DDTಯನ್ನು ಮಳೆಯಂತೆ ಹನಿಸಿ, ನಂತರ ತಲೆ ಬೋಳಿಸಿ, ಪೂರ್ತಿ ವಿವಸ್ತ್ರಗೊಳಿಸಿ ಮತ್ತೊಂದು ಕೋಣೆಯಲ್ಲಿ ಸಮವಸ್ತ್ರ ಹಾಕಿಸಿ, ಫೊಟೋ ತೆಗೆದು, ಅವರಿಗೆ ಒಂದು ಗುರುತಿನ ಸಂಖ್ಯೆಯ ಬ್ಯಾಡ್ಜ್ ಸಿಕ್ಕಿಸಿ ನಂತರ ಮಕ್ಕಳನ್ನು ತಾಯ್ತಂದೆಯರಿಂದ ಬೇರ್ಪಡಿಸಿ ಬೇರೆ ಕೋಣೆಗೆ ವರ್ಗಾಯಿಸಿ, ಆಮೇಲೆ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ, ಬೇರೆ ಬೇರೆ ವಿಭಾಗಕ್ಕೆ ವರ್ಗಾಯಿಸಲಾಗುತ್ತಿತ್ತು. ಹೆಂಗಸರು ಮತ್ತು ಗಂಡಸರು ಇರುವ ಸ್ಥಳಗಳನ್ನು ವಿಷಕಾರಿ ಮುಳ್ಳುಗಳನ್ನು ತಂತಿಗೆ ಸುತ್ತಿ ಅದರಿಂದ ಬೇರ್ಪಡಿಸಲಾಗಿತ್ತು. ನಿಷ್ಪ್ರಯೋಜಕ ವೃದ್ಧರನ್ನು ಮತ್ತೊಂದು ರಹಸ್ಯ ಕೋಣೆಯಲ್ಲಿ ಇರಿಸಲಾಗುತ್ತಿತ್ತು. 1967ರವರೆಗೂ ಈ ಶಿಬಿರವನ್ನು ನಡೆಸಲಾಯಿತು.

ಇಸ್ರೇಲಿನ ಸರ್ಕಾರವು 1987ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ, ಪ್ರವಾಸಿಗರಿಗೆ ಮತ್ತು ಅಧ್ಯಯನ ಮಾಡುವವರಿಗಾಗಿಯೇ ಅಂದು ಅಲ್ಲಿದ್ದ ನಿರಾಶ್ರಿತರು ಇದ್ದ ಸ್ಥಿತಿಯಲ್ಲಿಯೇ ಅಟ್ಲಿಟ್ ಶಿಬಿರವನ್ನು ಪುನರ್ ನಿರ್ಮಾಣ ಮಾಡಿದೆ. ಹಿರಿಯ ಯಹೂದಿಗಳು ಆ ದಿನಗಳಲ್ಲಿ ತಾವು ಉಪಯೋಗಿಸುತ್ತಿದ್ದ ಬಟ್ಟೆ, ಪುಸ್ತಕ, ಬೊಂಬೆ, ಇತರೆ ಆಟಿಕೆಗಳನ್ನು ಮತ್ತು ದೈನಂದಿನ ವಸ್ತುಗಳನ್ನು ಈ ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ ಬೇರ್ಪಟ್ಟ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಹುಡುಕುವ ಭರವಸೆಯಲ್ಲಿ ಬಂಧಿತರು ತಮ್ಮ ಹೆಸರು, ವಿಳಾಸ ಮತ್ತು ತಾವು ಯಾವ ದೇಶದಿಂದ ಇಲ್ಲಿಗೆ ಬಂದರು ಎಂದು ಬರೆದಿದ್ದ ’ಗೀಚು ಫಲಕ’ವನ್ನೂ ಇಲ್ಲಿ ಇಡಲಾಗಿದೆ.

ಇತಿಹಾಸದ ಪಠ್ಯಪುಸ್ತಕದ ಒಂದು ಅಧ್ಯಾಯವನ್ನು ಓದುತ್ತಿದ್ದೇನೆ ಎನ್ನುವ ಹಾಗೆ ವಿವರಣೆ ನೀಡಿದ ಇಪ್ಪತ್ತರ ಯುವತಿ ಎಮಿಲಿ ‘ನಾನು ಇಸ್ರೇಲಿನವಳು. ಆದರೆ ಹುಟ್ಟಿ ಬೆಳೆದದ್ದೆಲ್ಲಾ ನ್ಯೂಯಾರ್ಕ್ ನಗರದಲ್ಲಿ’ ಎಂದಳು. ಅಲ್ಲಿಯ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಓದುತ್ತಿರುವ ಈಕೆ ’ನಾನೀಗ ನ್ಯಾಷನಲ್ ಸರ್ವಿಸ್ ಅವಧಿಯಲ್ಲಿ ಇದ್ದೇನೆ. ಇನ್ನು ಮೂರು ತಿಂಗಳಿಗೆ ಮುಗಿಯುತ್ತದೆ. ನಂತರ ನ್ಯೂಯಾರ್ಕಿಗೆ ಹಿಂದಿರುಗುವೆ’ ಎಂದಳು. ಇಸ್ರೇಲಿಗೆ ಬಂದಾಗಿನಿಂದ ’ನ್ಯಾಷನಲ್ ಸರ್ವಿಸ್’ ಎನ್ನುವ ಪದವನ್ನು ಎರಡನೆಯ ಬಾರಿಗೆ ಕೇಳಿದ್ದು. ಕುತೂಹಲ ಇತ್ತು, ಹಾಗೆಂದರೇನು ಎಂದು ಅವಳನ್ನೇ ಕೇಳಿದೆ. ಹೀಬ್ರೂ ಭಾಷೆಯಲ್ಲಿ Sherut Leumi ಎನ್ನಲಾಗುವ ರಾಷ್ಟ್ರೀಯ ಸೇವೆ ಎನ್ನುವ ಪರಿಕಲ್ಪನೆ ಮತ್ತು ಕೆಲಸ ಇಸ್ರೇಲಿನಲ್ಲಿ ಬಹಳವೇ ವಿಶೇಷ ಎನಿಸುವಂಥದ್ದು.

ಅಟ್ಲೀಟ್_ (1)

ಜಗತ್ತಿನ ಯಾವುದೇ ಮೂಲೆಯಲ್ಲಿರುವ ಯಹೂದಿಯನ್ನು ಇಸ್ರೇಲ್ ತನ್ನ ಪ್ರಜೆ ಎಂದೇ ಪರಿಗಣಿಸುತ್ತದೆ. 17ರಿಂದ 24 ವರ್ಷ ವಯಸ್ಸಿನ ಎಲ್ಲಾ ಯುವಕ ಯುವತಿಯರು ಇಸ್ರೇಲಿಗೆ ಬಂದು ಮಿಲಿಟರಿ ಸೇವೆ ಸಲ್ಲಿಸುವುದು ಕಡ್ಡಾಯ. ಆದರೆ ಅನಾರೋಗ್ಯ ಅಥವಾ ಮಿಲಿಟರಿಗೆ ಬೇಕಾದ ದೈಹಿಕ ಅವಶ್ಯಕತೆಗಳಿಗೆ ಹೊಂದಾಣಿಕೆಯಾಗದವರು ಕಡ್ಡಾಯವಾಗಿ ಇಂಥ ರಾಷ್ಟ್ರೀಯ ಸೇವೆ ಸಲ್ಲಿಸಬೇಕಿರುತ್ತದೆ. ವಾರಕ್ಕೆ 30ರಿಂದ 40 ಗಂಟೆಗಳ ಕಾಲ ಕನಿಷ್ಟ ಒಂದು ಗರಿಷ್ಠ ಎರಡು ವರ್ಷಗಳ ಕಾಲ ಇಸ್ರೇಲಿನಲ್ಲಿ, ಯಹೂದಿಗಳಿಗಾಗಿ, ಧರ್ಮಕ್ಕಾಗಿ ಕೆಲಸ ಮಾಡಬೇಕಿರುತ್ತದೆ. ಟೂರಿಸ್ಟ್ ವೀಸಾದಲ್ಲಿ ಬಂದು ಕೂಡ ಇದರಲ್ಲಿ ಪಾಲ್ಗೊಳ್ಳಬಹುದು.

ಶಾಲೆಗಳಲ್ಲಿ ಹೀಬ್ರೂ ಭಾಷೆ ಕಲಿಸಿಕೊಡುವುದು, ಯಹೂದಿಗಳ ಇತಿಹಾಸ, ಸಂಸ್ಕೃತಿಗಳ ಬಗ್ಗೆ ಪಾಠ ಮಾಡುವುದು, ಶಾಲೆ ಕಾಲೇಜು, ವಿಶ್ವವಿದ್ಯಾಲಯಗಳ ಆಡಳಿತ ವರ್ಗದಲ್ಲಿ ಕೆಲಸ ಮಾಡುವುದು, ಆಸ್ಪತ್ರೆಗಳಲ್ಲಿ ಯಹೂದಿ ವೈದ್ಯಕೀಯ ಪದ್ಧತಿಯ ಬಗ್ಗೆ ಪ್ರಚಾರ ಮಾಡುವುದು, ವಯಸ್ಸಾದವರ ಸೇವೆ ಮಾಡುವುದು, ಕೋರ್ಟುಗಳಲ್ಲಿ ಯಹೂದಿ ಕಾನೂನುಗಳ ಪರಿಚಯಕ್ಕಾಗಿ ಕಾರ್ಯ ನಿರ್ವಹಿಸುವುದು, ಸಂಘರ್ಷದಲ್ಲಿ ಇರುವ ಹದಿಹರೆಯದವರ ಪುನರುಜ್ಜೀವನ ಪ್ರಕ್ರಿಯೆಗೆ ಸಹಾಯ ಮಾಡುವುದು, ಹದಿಹರೆಯದವರ ವ್ಯಕ್ತಿತ್ವ ನಿರ್ಮಾಣಕ್ಕೆ ಕೊಡುಗೆ ನೀಡುವುದು, ಆಂತರಿಕ ಭದ್ರತೆಯಲ್ಲಿ ನಿಗಾ ಸೇವೆ ನೀಡುವುದು, ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುವುದು, ವಲಸೆ ಬರುವ ಯಹೂದಿಗಳಿಗೆ ಸಹಾಯ ಮಾಡುವುದು, ಆರ್ಥಿಕವಾಗಿ ಹಿಂದುಳಿದ ಸಮುದಾಯದವರ ಏಳಿಗೆಗೆ ದುಡಿಯುವುದು, ಅಂಗವಿಕಲರಿಗಾಗಿ, ಮಾನಸಿಕ ಅಸ್ವಸ್ಥರಿಗಾಗಿ ಸಂಘಟನೆ ನಿರ್ಮಿಸಿಕೊಡುವುದು ಹೀಗೆ ಇನ್ನೂ ಹಲವಾರು ಕೆಲಸಗಳನ್ನು ರಾಷ್ಟ್ರೀಯ ಸೇವೆ ಎಂದು ಇಸ್ರೇಲಿ ಸರ್ಕಾರ ಗುರುತಿಸಿದೆ. ಈ ಸಮೂಹಗಳಿಗಾಗಿಯೇ ವಾರ್ಷಿಕ ಬಜೆಟ್‍ನಲ್ಲಿ ಹಣಕಾಸನ್ನು ಸರ್ಕಾರ ನಿಗದಿ ಮಾಡುತ್ತದೆ. ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸುವವರಿಗೆ ನೀಡುವ ಅನುಕೂಲಗಳಂತೆ ಇವರುಗಳಿಗೂ ಸಾಕಷ್ಟು ಸೌಲಭ್ಯವನ್ನು ನೀಡಲಾಗುತ್ತದೆ.

ಮೊದಲೆಲ್ಲ ಬಹಳಷ್ಟು ಯಹೂದಿಯರು ಈ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ ಈ ದಿನಗಳಲ್ಲಿ ಅರಬ್ ನಾಯಕರು ಅವರಿಗೆ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ಭಾಷಣಗಳ ಮೂಲಕ ಮನಃಪರಿವರ್ತನೆ ಮಾಡುತ್ತಿದ್ದಾರೆ. ಅವರ ಸಂಖ್ಯೆ ಮೊದಲು ಎಷ್ಟಿತ್ತು, ಈಗ ಹೇಗೆ ಯಾಕೆ ಇಳಿಮುಖವಾಗಿದೆ ಎನ್ನುವುದಕ್ಕೆ ದಾಖಲೆಗಳೂ ಲಭ್ಯವಿದೆ. ಮೊದಲೆಲ್ಲ ಅರಬ್ ನಾಯಕರು ಅರಬ್ ಯುವಕರಿಗೂ ಇಂಥ ಸೇವೆಗಳಲ್ಲಿ ಇರಲು ಅವಕಾಶ ಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದದ್ದೂ ಇದೆ. ಆದರೆ ಈಗ ಅವಕಾಶ ಇದ್ದರೂ ನಿರಾಕರಿಸುತ್ತಿದ್ದಾರೆ ಎಂದು ಎಮಿಲಿ ನಗುಮೊಗದಿಂದ ಬೀಳ್ಕೊಟ್ಟಳು. ರಾಷ್ಟ್ರೀಯ ಸೇವೆಯ ಬಗ್ಗೆ ತಿಳಿದ ನಂತರ ಮುಂದಿನ ಪ್ರವಾಸವೆಲ್ಲ ಇದನ್ನು ಗಮನಿಸುತ್ತಿದ್ದೆ. ಚುರುಕಾಗಿ, ತನ್ಮಯತೆಯಿಂದ ಯಹೂದಿ ಯುವಕ ಯುವತಿಯರು ಇಂಥ ಕೆಲಸದಲ್ಲಿ ತೊಡಗಿಕೊಳ್ಳುವುದನ್ನು ನೋಡುವಾಗ ’ಕಾಯಕದ ಪರಿಯೆಲ್ಲ ದೇವದರುಶನಕಾಗಿ; ಮಿಗಿಲಾದ ಅನುಭೂತಿ ಕಾಣ್ಕೆ ಸಲುವಾಗಿ; ಶಿವದಾರಿ ಎಂದರದು ಸತ್ಯ ಸಾಕ್ಷಾತ್ಕಾರ; ಅರಿವೆ ಗುರು ಶಿವಪಥಕೆ – ಮುದ್ದುರಾಮ’ ಎಂಬ ಮಾತು ನೆನಪಾಗಿತ್ತು.