ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆ ಅಲ್ಲ. ಅದು ಹೊಸ ಸಂಕಲ್ಪಗಳ, ಹೊಸ ಹೊಣೆಗಾರಿಕೆಗಳ ಆರಂಭ. ಕೇವಲ ಪ್ರವಾಸೋದ್ಯಮದ ಬೆಳವಣಿಗೆ ಮಾತ್ರವಲ್ಲದೇ, ಸಮಾಜ, ಸಂಸ್ಕೃತಿ ಮತ್ತು ಪರಿಸರದ ಜವಾಬ್ದಾರಿಯನ್ನೂ ಹೊತ್ತಿರುವ ಪ್ರವಾಸಿ ಪ್ರಪಂಚಕ್ಕೆ ಹೊಸ ಕ್ಯಾಲೆಂಡರ್ ವರ್ಷ ಎಂಬುದು ಮಹತ್ವದ ಘಳಿಗೆ.

ವರ್ಷದ ಮೊದಲ ಸಂಚಿಕೆಯಲ್ಲಿ ನಾವು ನಮ್ಮ ಓದುಗರ ಮುಂದೆ ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುವುದು – ನಮ್ಮ ಧ್ಯೇಯ, ನಮ್ಮ ಮೌಲ್ಯಗಳು ಮತ್ತು ನಮ್ಮ ಬದ್ಧತೆ.

ಪ್ರವಾಸಿ ಪ್ರಪಂಚ ಹುಟ್ಟಿದ್ದು ಕೇವಲ ಪ್ರವಾಸಿ ಸ್ಥಳಗಳ ಪರಿಚಯ ನೀಡಲು ಮಾತ್ರವಲ್ಲ. ಪ್ರವಾಸೋದ್ಯಮದ ಒಳಹೊರಗುಗಳನ್ನು ಅರಿತು, ಅದರ ಅವಕಾಶಗಳು, ಸವಾಲುಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ನಿರಂತರ ಚರ್ಚೆ ನಡೆಸುವ ವೇದಿಕೆಯಾಗಬೇಕೆಂಬ ಕನಸು ಪ್ರವಾಸಿ ಪ್ರಪಂಚದ್ದು. ಪ್ರವಾಸವು ಮನರಂಜನೆಯಷ್ಟೇ ಅಲ್ಲ; ಅದು ಬದುಕಿನ ಅನುಭವ, ಸಂಸ್ಕೃತಿಯ ಸಂವಾದ ಮತ್ತು ಆರ್ಥಿಕತೆಯ ಪ್ರಮುಖ ಅಂಶ ಎಂಬುದನ್ನು ಪ್ರವಾಸಿ ಪ್ರಪಂಚ ಬಲವಾಗಿ ನಂಬಿದೆ.

ಇದನ್ನೂ ಓದಿ: ಮತ್ತೆಮತ್ತೆ ಮನಗೆಲ್ಲುವ ಕೇರಳ ಟೂರಿಸಂ!

ನಮ್ಮ ಪತ್ರಿಕೆಯ ಪ್ರಮುಖ ಮೌಲ್ಯವೆಂದರೆ ನಂಬಿಕೆ. ಓದುಗರಿಗೆ ನೀಡುವ ಪ್ರತಿಯೊಂದು ಮಾಹಿತಿ ಪರಿಶೀಲಿತವಾಗಿರಬೇಕು, ಪ್ರಾಮಾಣಿಕವಾಗಿರಬೇಕು ಮತ್ತು ಸಮಾಜಕ್ಕೆ ಉಪಯುಕ್ತವಾಗಿರಬೇಕು ಎಂಬ ತತ್ತ್ವಕ್ಕೆ ನಾವು ಸದಾ ಬದ್ಧ. ನೂತನ ಕ್ಯಾಲೆಂಡರ್ ವರ್ಷದ ಸಂಕಲ್ಪವೂ ಅದೇ. ಜಾಹೀರಾತುಗಳ ಹೊಳಪಿಗಿಂತಲೂ ನೆಲದ ವಾಸ್ತವಕ್ಕೆ ಆದ್ಯತೆ ನೀಡುವುದು, ಕೇವಲ ಯಶಸ್ಸಿನ ಕಥೆಗಳಷ್ಟೇ ಅಲ್ಲದೆ ಪ್ರವಾಸೋದ್ಯಮದ ಸಮಸ್ಯೆಗಳಿಗೂ ಧ್ವನಿಯಾಗುವುದು ನಮ್ಮ ಗುರಿ.

ಓದುಗರೊಂದಿಗಿನ ನಮ್ಮ ಸಂಬಂಧ ಕೇವಲ ಪತ್ರಿಕೆ–ಓದುಗರ ಸಂಬಂಧವಲ್ಲ; ಇಲ್ಲಿ ಸಂವಾದಕ್ಕೆ ಜಾಗವಿದೆ. ಓದುಗರ ಅಭಿಪ್ರಾಯಗಳು, ಸಲಹೆಗಳು, ಟೀಕೆಗಳು ನಮಗೆ ದಿಕ್ಸೂಚಿ ಇದ್ದಂತೆ . ದಾರಿದೀಪಗಳಿದ್ದಂತೆ. ಪ್ರವಾಸಿ ಪ್ರಪಂಚವನ್ನು ಓದುಗರು ಒಪ್ಪಿಅಪ್ಪಿಕೊಂಡಿರುವುದು ಪತ್ರಿಕೆಯ ವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ. ಹೊಸ ವರ್ಷದಲ್ಲೂ ಆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ನಮ್ಮದು.

ನಮಗೆ ಸ್ಪಷ್ಟವಿದೆ; ಪ್ರವಾಸೋದ್ಯಮದ ಧ್ವನಿಯಾಗಿ ಮುಂದುವರಿಯುವುದು ಎಂದರೆ ಕೇವಲ ಸರ್ಕಾರದ ಯೋಜನೆಗಳನ್ನು ಪ್ರಕಟಿಸುವುದಲ್ಲ. ಸ್ಥಳೀಯ ಸಮುದಾಯಗಳ ಬದುಕು, ಗೈಡ್‌ಗಳ ಸಮಸ್ಯೆಗಳು, ಹೋಮ್‌ಸ್ಟೇ ಮಾಲೀಕರ ಸವಾಲುಗಳು, ಪರಿಸರಕ್ಕೆ ಆಗುತ್ತಿರುವ ಹಾನಿ – ಈ ಎಲ್ಲ ವಿಷಯಗಳನ್ನೂ ನಿರ್ಭೀತಿಯಾಗಿ ಪ್ರಸ್ತಾಪಿಸುವ ಜವಾಬ್ದಾರಿ ನಮ್ಮದು. ಪ್ರವಾಸೋದ್ಯಮ ಬೆಳೆಯಬೇಕು, ಆದರೆ ಅದು ಪರಿಸರ ಮತ್ತು ಸಂಸ್ಕೃತಿಗೆ ಪೂರಕವಾಗಿ ಎಂಬುದು ಪತ್ರಿಕೆಯ ನಿಲುವು ಕೂಡ.

ಹೊಸ ವರ್ಷದಲ್ಲಿ ಜವಾಬ್ದಾರಿಯುತ ಪ್ರವಾಸ, ಸ್ಥಳೀಯ ಪ್ರವಾಸೋದ್ಯಮ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸತತ ಅಭಿವೃದ್ಧಿ ಕುರಿತ ಚರ್ಚೆಗಳಿಗೆ ಹೆಚ್ಚು ಜಾಗ ನೀಡುವ ಉದ್ದೇಶ ಪತ್ರಿಕೆಯದ್ದಾಗಿದೆ . ಯುವ ಬರಹಗಾರರಿಗೆ, ಕ್ಷೇತ್ರದ ಪರಿಣಿತರಿಗೆ ಮತ್ತು ನೆಲಮಟ್ಟದ ಅನುಭವ ಹೊಂದಿದವರಿಗೆ ಪ್ರವಾಸಿ ಪ್ರಪಂಚ ಇನ್ನಷ್ಟು ಅವಕಾಶ ನೀಡುತ್ತದೆ. ಪ್ರವಾಸೋದ್ಯಮದ ಧ್ವನಿಯಾಗಿ ನಿಲ್ಲುವುದನ್ನು ಪ್ರವಾಸಿ ಪ್ರಪಂಚ ಗಟ್ಟಿಯಾಗಿ ಮುಂದುವರಿಸುತ್ತದೆ.

ಸಂತಸದ ಸಂಗತಿಯೇನೆಂದರೆ ವರ್ಷದ ಮೊದಲ ಸಂಚಿಕೆಗೆ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಪ್ರವಾಸಿ ಪ್ರಪಂಚಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಪತ್ರಿಕೆಯನ್ನು ಆರು ತಿಂಗಳಿನಿಂದ ಓದುತ್ತಾ ಸೂಕ್ಷ್ಮವಾಗಿ ನಮ್ಮ ಆಶಯಗಳನ್ನು, ಬರಹಗಳನ್ನು, ಚಟುವಟಿಕೆಗಳನ್ನು ಗಮನಿಸಿದ್ದಾರೆ. ಪ್ರವಾಸಿ ಪ್ರಪಂಚದ ಲೇಖನಗಳ ಗುಣಮಟ್ಟ ಮತ್ತು ಅವು ಮಾಡುತ್ತಿರುವ ಪರಿಣಾಮಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿ ಪ್ರಪಂಚದ ಮೂಲಕವೇ ಪ್ರವಾಸಿಗರ ಹಾಗೂ ಪ್ರವಾಸೋದ್ಯಮದ ಸಮಸ್ಯೆಗಳಿಗೆ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಹೇಳಿದ್ದಾರೆ. ಸಚಿವರಿಗೆ ಪ್ರವಾಸೋದ್ಯಮದ ಅಭಿವೃದ್ಧಿಯತ್ತ ಇರುವ ಕಾಳಜಿ ಹಾಗೂ ಪ್ರವಾಸಿ ಪ್ರಪಂಚದ ವ್ಯಾಪ್ತಿಯ ಮೇಲಿನ ವಿಶ್ವಾಸವನ್ನು ಇದು ಎತ್ತಿತೋರಿಸಿದೆ. ಮಾಧ್ಯಮ ಮತ್ತು ಸಮಾಜ ಪರಸ್ಪರ ವಿರೋಧಿಗಳಂತೆ ಸಾಗುವುದಕ್ಕಿಂತ ಜೋಡೆತ್ತಿನಂತೆ ಸಾಗಿದರೆ ಯಶಸ್ಸು ನಿಶ್ಚಿತ. ಇದು ಪ್ರವಾಸೋದ್ಯಮಕ್ಕಂತೂ ಬಹು ಸೂಕ್ತಮಾತು. ಪ್ರವಾಸಿ ಪ್ರಪಂಚ ಎಲ್ಲ ಪ್ರವಾಸಪ್ರಿಯರಿಗೂ 2026ರ ಶುಭಾಶಯವನ್ನು ಕೋರುತ್ತಾ, ಈ ವರ್ಷ ಅದ್ಭುತ ಪ್ರವಾಸಿವರ್ಷವಾಗಲಿ ಎಂದು ಹಾರೈಸುತ್ತದೆ.