ಮತ್ತೆಮತ್ತೆ ಮನಗೆಲ್ಲುವ ಕೇರಳ ಟೂರಿಸಂ!
ಎರಡು ವರ್ಷಗಳ ಹಿಂದೆ ತೆರೆಕಂಡ ಮಂಜುಮೆಲ್ ಬಾಯ್ಸ್ ಎಂಬ ಸುಪರ್ ಹಿಟ್ ಸಿನಿಮಾದಲ್ಲಿ ’ಗುಣ ಕೇವ್ಸ್’ ಎಂಬ ಸ್ಥಳವೇ ಹೀರೋ ಆಗಿತ್ತು! ಕೊಡೈಕೆನಲ್‌ನ ಡೆವಿಲ್ಸ್ ಕಿಚನ್ ಎಂಬ ಗುಹೆಯಲ್ಲಿ ದಶಕಗಳ ಹಿಂದೆ ಕಮಲಹಾಸನ್ ಅಭಿನಯಿಸಿದ್ದ ಗುಣ ಎಂಬ ಚಿತ್ರದ ದೃಶ್ಯಗಳು ಚಿತ್ರೀಕರಣಗೊಂಡಿದ್ದವು. ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಗುಹೆಯ ಹೆಸರು ಗುಣ ಕೇವ್ಸ್ ಎಂದು ಖ್ಯಾತವಾಯ್ತು. ಆ ಸ್ಥಳ ಪ್ರವಾಸಿ ಸ್ಥಳವಾಗಿ ಬದಲಾಯ್ತು. ಮಂಜುಮೆಲ್ ಬಾಯ್ಸ್ ಎಂಬ ಮಲಯಾಳಂ ಚಿತ್ರ ಆ ಸ್ಥಳವನ್ನೇ ಕೇಂದ್ರಪಾತ್ರವನ್ನಾಗಿಸಿ ಸಿನಿಮಾ ಮಾಡಿ ಗೆದ್ದುಬಿಟ್ಟಿತು. ಸಿನಿಮಾ ಮತ್ತು ಪ್ರವಾಸೋದ್ಯಮ ಒಂದಕ್ಕೊಂದು ಹೇಗೆ ಪೂರಕ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ.
ಕೇರಳ ಪ್ರವಾಸೋದ್ಯಮದಿಂದ ಎಷ್ಟು ಕಲಿತರೂ ಮುಗಿಯುವುದಿಲ್ಲ. ಪ್ರವಾಸೋದ್ಯಮ ಖಾತೆಯನ್ನು ರಾಜ್ಯ ಸರಕಾರದ ಅತ್ಯಂತ ಪ್ರಮುಖ ಖಾತೆಗಳಲ್ಲೊಂದು ಎಂದು ಕೇರಳ ಪರಿಗಣಿಸುತ್ತದೆ. ಈ ಹಿಂದೆ ಐ ಎ ಎಸ್ ಅಧಿಕಾರಿ ಅಮಿತಾಬ್ ಕಾಂತ್ ಕೇರಳದಲ್ಲಿ ಮಾಡಿದ ಪ್ರವಾಸೋದ್ಯಮ ಕ್ರಾಂತಿಯ ಬಗ್ಗೆ ಮತ್ತೆ ಹೇಳುವ ಅಗತ್ಯವಿಲ್ಲ. ಆದರೆ ಅಂದು ಬಿರುಸುಗೊಂಡ ಮೊಮೆಂಟಮ್ ತಗ್ಗದೇ ಇರುವ ಹಾಗೆ ಕೇರಳ ಪ್ರವಾಸೋದ್ಯಮ ಪ್ರತಿನಿತ್ಯ ಒಂದಲ್ಲ ಒಂದು ಯೋಜನೆಯನ್ನು ಸಿದ್ಧಪಡಿಸುತ್ತಲೇ ಇರುತ್ತದೆ. ಕಾರ್ಯಗತಗೊಳಿಸುತ್ತಲೇ ಇರುತ್ತದೆ. ಯಾವ ವಿಭಾಗ ನಿಂತ ನೀರಾದರೂ ಪ್ರವಾಸೋದ್ಯಮ ನಿಂತನೀರಾಗಕೂಡದು. ಯಾಕಂದರೆ ಅದೊಂದು ಚಲನಶೀಲ ವಿಭಾಗ. ಭಾರತದ ಯಾವ ರಾಜ್ಯವೂ ಸಿನಿಮಾ ಟೂರಿಸಂ ಎಂಬ ಪರಿಕಲ್ಪನೆ ಮಾಡಿಕೊಂಡಿರಲಿಲ್ಲ. ಕೇರಳ ಇಲ್ಲಿಯೂ ಮೊದಲಿಗನಾಯ್ತು.
ಎರಡು ವರ್ಷಗಳ ಹಿಂದೆ ತೆರೆಕಂಡ ಮಂಜುಮೆಲ್ ಬಾಯ್ಸ್ ಎಂಬ ಸುಪರ್ ಹಿಟ್ ಸಿನಿಮಾದಲ್ಲಿ ’ಗುಣ ಕೇವ್ಸ್’ ಎಂಬ ಸ್ಥಳವೇ ಹೀರೋ ಆಗಿತ್ತು! ಕೊಡೈಕೆನಲ್‌ನ ಡೆವಿಲ್ಸ್ ಕಿಚನ್ ಎಂಬ ಗುಹೆಯಲ್ಲಿ ದಶಕಗಳ ಹಿಂದೆ ಕಮಲಹಾಸನ್ ಅಭಿನಯಿಸಿದ್ದ ಗುಣ ಎಂಬ ಚಿತ್ರದ ದೃಶ್ಯಗಳು ಚಿತ್ರೀಕರಣಗೊಂಡಿದ್ದವು. ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಗುಹೆಯ ಹೆಸರು ಗುಣ ಕೇವ್ಸ್ ಎಂದು ಖ್ಯಾತವಾಯ್ತು. ಆ ಸ್ಥಳ ಪ್ರವಾಸಿ ಸ್ಥಳವಾಗಿ ಬದಲಾಯ್ತು. ಮಂಜುಮೆಲ್ ಬಾಯ್ಸ್ ಎಂಬ ಮಲಯಾಳಂ ಚಿತ್ರ ಆ ಸ್ಥಳವನ್ನೇ ಕೇಂದ್ರಪಾತ್ರವನ್ನಾಗಿಸಿ ಸಿನಿಮಾ ಮಾಡಿ ಗೆದ್ದುಬಿಟ್ಟಿತು. ಸಿನಿಮಾ ಮತ್ತು ಪ್ರವಾಸೋದ್ಯಮ ಒಂದಕ್ಕೊಂದು ಹೇಗೆ ಪೂರಕ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಪ್ರವಾಸಿಗರಿಂದ ಸಿನಿಮಾದವರಿಗೆ ಶೂಟಿಂಗ್ ಲೊಕೇಶನ್ ಸಿಗುತ್ತವೆ. ಸಿನಿಮಾಗಳಿಂದ ಪ್ರವಾಸಿಗರಿಗೊಂದು ಪ್ರವಾಸತಾಣ ಪರಿಚಯವಾಗುತ್ತದೆ. ಇದೊಂದು ಪರಸ್ಪರ ಲಾಭ ತರುವ ಸಂಗತಿ.

ದುರಂತ ಏನೆಂದರೆ, ಬಹುತೇಕ ತಾಣಗಳು ಸಿನಿಮಾದಿಂದ ಖ್ಯಾತವಾದ ನಂತರ ಪ್ರವಾಸಿತಾಣವಾಗೇನೋ ಬದಲಾಗುತ್ತವೆ. ಆದರೆ ಮೂಲಸೌಕರ್ಯಗಳಿಲ್ಲದೇ, ಮೇಲ್ವಿಚಾರಣೆಗಳಿಲ್ಲದೇ ನಾಶವಾಗಿ ಹೋಗುತ್ತವೆ. ಇಲ್ಲಿ ಅಗತ್ಯವಿರೋದು ಸರಕಾರದ ಪಾತ್ರ. ಹಿಂದಿಯ ಥ್ರೀ ಈಡಿಯಟ್ಸ್ ಚಿತ್ರ ತೆರೆಕಂಡ ನಂತರ ಲಡಾಖ್‌ನ ಪಗಾಂಗ್ ಸೋ ಪ್ರವಾಸಿ ತಾಣವಾಗಿ ಬದಲಾಗಿ ಹೋಗಿತ್ತು. ಅಲ್ಲಿನ ಪ್ರವಾಸೋದ್ಯಮ ಅದನ್ನು ಸಮರ್ಥವಾಗಿ ಬಳಸಿಕೊಂಡಿತ್ತು. ಕೇರಳ ಸರಕಾರದ ಮತ್ತು ಪ್ರವಾಸೋದ್ಯಮ ಸಚಿವ ಮಹಮದ್ ರಿಯಾಸ್ ಅವರ ಕುಶಾಗ್ರಮತಿಯನ್ನು ಇಲ್ಲಿ ಮೆಚ್ಚಲೇಬೇಕು. ಮಲಯಾಳಂ ಹಿಟ್ ಚಿತ್ರಗಳಲ್ಲಿ ಬಳಕೆಯಾದ ಕೇರಳದ ಹೊರಾಂಗಣ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸಚಿವರು, ಸಿನಿಮಾ ಟೂರಿಸಂ ಪ್ರಾಜೆಕ್ಟ್ ಎಂಬ ಪರಿಕಲ್ಪನೆಯನ್ನೇ ಹುಟ್ಟು ಹಾಕಿದರು.
ಮೋಹನ್ ಲಾಲ್ ಅಭಿನಯದ ಕಿರೀಟಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಿವೋದಯಂ ಸೇತುವೆಗೆ ಕಿರೀಟಂ ಸೇತುವೆ ಅಂತ ಹೆಸರಿಟ್ಟು, ಒಂದು ಕೋಟಿ ವೆಚ್ಚದಲ್ಲಿ ಅದರ ನವೀಕರಣ ಮಾಡಿಸಿದರು. ಅದಕ್ಕೆ ಪ್ರವಾಸಿತಾಣದ ಮಾನ್ಯತೆ ಕೊಟ್ಟು ಪ್ರಚಾರ ಮಾಡಿದರು. ಇಂದಿಗೆ ಕಿರೀಟಂ ಸೇತುವೆ ನೋಡಲು ಸಹಸ್ರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ರಿಯಾಸ್ ಇಲ್ಲಿಗೇ ನಿಲ್ಲಲಿಲ್ಲ. ಮೂವತ್ತು ವರ್ಷ ಹಿಂದೆ ತೆರೆಕಂಡಿದ್ದ ಮಣಿರತ್ನಂ ನಿರ್ದೇಶನದ ಬಾಂಬೆ ಚಿತ್ರವನ್ನು ನೋಡಿದರು. ಅದರಲ್ಲಿ ಉಯಿರೇ ಗೀತೆ ಚಿತ್ರೀಕರಣಗೊಂಡಿದ್ದ ಕಾಸರಗೋಡಿನ ಬೇಕಲ್ ಕೋಟೆಯತ್ತ ಪ್ರವಾಸಿಗರನ್ನು ಸೆಳೆಯಲು ಪ್ಲಾನ್ ಹಾಕಿದರು. ಚಿತ್ರತಂಡವನ್ನು ಸರಕಾರದ ಜತೆ ಕೈಜೋಡಿಸಲು ಕೇಳಿದರು. ಮನಿಷಾಕೊಯಿರಾಲಾ, ಮಣಿರತ್ನಂ, ಛಾಯಾಗ್ರಾಹಕ ರಾಜೀವ್ ಮೆನನ್ ರನ್ನು ಕರೆದುಕೊಂಡು ಬೇಕಲ್ ಕೋಟೆಗೆ ಹೋಗಿ ಬಾಂಬೆಯ ನೆನಪುಗಳನ್ನು ಮೆಲುಕು ಹಾಕಿಸಿದರು.
ಮೊದಲೇ ಪ್ರವಾಸಿಗರ ಇಷ್ಟತಾಣವಾಗಿದ್ದ ಬೇಕಲ್ ಕೋಟೆಗೆ ಸಿನಿಮಾ ಟೂರಿಸಂ ಪ್ರಾಜೆಕ್ಟ್ ನಿಂದ ಜನಪ್ರಿಯತೆ ರಿನೀವ್ ಆದಂತಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಸಚಿವರ ಗಮನಕ್ಕೆ ಈ ಸಿನಿಮಾ ಟೂರಿಸಂ ಎಂಬ ಕೇರಳದ ಪ್ರಾಜೆಕ್ಟ್ ಬಂದಿಲ್ಲವೇ? ಕರ್ನಾಟಕದ ಅದೆಷ್ಟು ಜಾಗಗಳನ್ನು ಈ ಮಾದರಿಯಲ್ಲಿ ಗುರುತಿಸಬಹುದು. ಚಿತ್ರರಂಗದ ಜತೆಗೆ ಕೂತು ನಟನಟಿ ನಿರ್ದೇಶಕರನ್ನು ಸೇರಿಸಿಕೊಂಡು ಸಿನಿಮಾ ಟೂರಿಸಂ ಪರಿಕಲ್ಪನೆಗೆ ರಾಜ್ಯದಲ್ಲಿ ಚಾಲನೆ ಕೊಟ್ಟ್ರರೆ, ಖಂಡಿತವಾಗ್ಯೂ ಬೊಕ್ಕಸಕ್ಕೆ ಗಣನೀಯ ಆದಾಯ ತಂದುಕೊಡುತ್ತದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೊಳಗಾದ, ಹತ್ತಾರು ಪ್ರವಾಸಿ ತಾಣಗಳಿಗೆ ಆಕ್ಸಿಜನ್ ಸಿಕ್ಕಂತಾಗಿ ಮರುಜೀವ ಬರುತ್ತದೆ. ಸಿನಿಮಾ ಟೂರಿಸಂ ಪ್ರಾಜೆಕ್ಟ್ ರಾಜ್ಯದಲ್ಲಿ ಬೇಗನೆ ಅನುಷ್ಠಾನಗೊಳ್ಳಲಿ.