ಪಾಠ ಹೇಳುತ್ತಿದೆ ಸೌದಿಯ ರೋಡ್ ಶೋ
ಕರ್ನಾಟಕ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್ ಅವರಲ್ಲಿ ಸಾಕಷ್ಟು ಕನಸುಗಳಿವೆ, ಯೋಜನೆಗಳಿವೆ, ದೂರದರ್ಶಿತ್ವವೂ ಇದೆ. ಆದರೆ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ಹೆಚ್ಚುವರಿ ಎಂಬಂತೆ ನೀಡಲಾಗಿರುವುದಕ್ಕೋ ಏನೋ, ಇತರ ಖಾತೆಗಳ ಜವಾಬ್ದಾರಿಗಳ ಜತೆಗೆ ಪ್ರವಾಸೋದ್ಯಮ ಖಾತೆಗೆ ನೂರು ಪ್ರತಿಶತ ಗಮನ ಕೊಡುವುದು ಸಾಧ್ಯವಾಗುತ್ತಿಲ್ಲ.
ಒಳ್ಳೆಯ ವಿಷಯಗಳು, ಲಾಭ ತರುವ ಸಂಗತಿಗಳು ಎಲ್ಲಿಂದ ಬಂದರೂ ಬರಮಾಡಿಕೊಳ್ಳಬೇಕು. ತಿಳಿದುಕೊಂಡು ಅಳವಡಿಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕಂತೂ ಇದು ಅತ್ಯವಶ್ಯಕ. ದೇಶದ ಹಾಗೂ ರಾಜ್ಯದ ಪ್ರವಾಸೋದ್ಯಮ ಸಚಿವರು ಇದೇ ಕಾರಣಕ್ಕಾಗಿ ಪ್ರತಿ ತಿಂಗಳು ಒಂದಾದರೂ ದೇಶೀಯ ಹಾಗೂ ವಿದೇಶಿ ಪ್ರವಾಸವನ್ನು ಕೈಗೊಳ್ಳಲೇಬೇಕು. ಪ್ರವಾಸವನ್ನು ಉದ್ಯಮವಾಗಿ ಪರಿಗಣಿಸಿರುವಾಗ ವಿದೇಶೀಯರು ಮತ್ತು ನೆರೆಹೊರೆಯ ರಾಜ್ಯಗಳವರು ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿ ಮಾಡುತ್ತಿದ್ದಾರೆ? ಏನೇನು ಗಿಮಿಕ್ ಮಾಡ್ತಾ ಇದ್ದಾರೆ? ನಾವೆಲ್ಲಿ ಹಿಂದೆ ಬಿದ್ದಿದ್ದೇವೆ? ಅವರ ಯಾವ ಸ್ಟ್ರಾಟಜಿಯನ್ನು ನಾವು ಮೈಗೂಡಿಸಿಕೊಳ್ಳಬಹುದು? ಯಾವುದರಿಂದ ಪ್ರಭಾವಿತರಾಗಬಹುದು ಇವೆಲ್ಲವನ್ನು ತಿಳಿದುಕೊಳ್ಳುವುದಕ್ಕೆ ನಾಲ್ಕುಗೋಡೆಯಿಂದಾಚೆ ದಾಟಿ ಪ್ರವಾಸ ಮಾಡಲೇಬೇಕು.
ಕರ್ನಾಟಕ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್ ಅವರಲ್ಲಿ ಸಾಕಷ್ಟು ಕನಸುಗಳಿವೆ, ಯೋಜನೆಗಳಿವೆ, ದೂರದರ್ಶಿತ್ವವೂ ಇದೆ. ಆದರೆ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ಹೆಚ್ಚುವರಿ ಎಂಬಂತೆ ನೀಡಲಾಗಿರುವುದಕ್ಕೋ ಏನೋ, ಇತರ ಖಾತೆಗಳ ಜವಾಬ್ದಾರಿಗಳ ಜತೆಗೆ ಪ್ರವಾಸೋದ್ಯಮ ಖಾತೆಗೆ ನೂರು ಪ್ರತಿಶತ ಗಮನ ಕೊಡುವುದು ಸಾಧ್ಯವಾಗುತ್ತಿಲ್ಲ. ಮೌಲ್ಯಮಾಪನ ನಡೆಸಿದಾಗ ಮಾರ್ಕ್ಸ್ ಎಷ್ಟು ಬಂತೆಂಬುದು ಮಾತ್ರ ಲೆಕ್ಕಕ್ಕೆ ಬರುತ್ತದೆಯೇ ಹೊರತು, ಅವರಿಗಿದ್ದ ಸವಾಲುಗಳೇನು ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರವಾಸೋದ್ಯಮಕ್ಕೆ ಸರಿಯಾದ ಬಜೆಟ್ ಸಿಕ್ಕಿತ್ತಾ? ಮೂಲಸೌಕರ್ಯ ಅಭಿವೃದ್ಧಿಗೊಳಿಸೋದಕ್ಕೆ ಹಣವಿತ್ತಾ? ಪ್ರಚಾರಕ್ಕೆ ಅಂತ ಒಂದು ದೊಡ್ಡ ಮೊತ್ತವಿತ್ತಾ ಇವೆಲ್ಲ ಪ್ರಶ್ನೆಗಳು ಗೌಣವಾಗಿಬಿಡುತ್ತದೆ. ಸಚಿವರು ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎಂಬುದೊಂದೇ ಕಾಣುತ್ತದೆ. ಹೀಗಾಗಿ ಸಚಿವರು ಮತ್ತು ಪ್ರವಾಸೋದ್ಯಮ ಇಲಾಖೆ, ಸರಕಾರದೆದುರು ಹಟಹಿಡಿದೇ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಉದಾಹರಣೆಯಾಗಿ ಇಲ್ಲೊಂದು ಸಂಗತಿ ಇದೆ. ಸೌದಿ ಅರೇಬಿಯಾದ ಪ್ರವಾಸೋದ್ಯಮ ಎಂದಿಗೂ ಬೋರಲು ಬಿದ್ದೇ ಇಲ್ಲ. ಕೋವಿಡ್ ಬರಲಿ, ಯುದ್ಧ ನಡೆಯಲಿ ಸೌದಿ ಅರೇಬಿಯಾ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ. ಸೌದಿ ಅರೇಬಿಯಾಗೆ ಅತಿ ದೊಡ್ಡ ರೆವಿನ್ಯೂ ತಂದುಕೊಡುವುದರಲ್ಲಿ ಪ್ರವಾಸೋದ್ಯಮದ ಪಾತ್ರ ಪ್ರಮುಖ. ಹೀಗಿದ್ದರೂ ಸೌದಿ ಅರೇಬಿಯಾ ರಿಲ್ಯಾಕ್ಸ್ ಆಗುವುದಿಲ್ಲ. ಇದೀಗ ವಿಶನ್ 2030 ಎಂಬ ಯೋಜನೆ ಮೂಲಕ ಪ್ರವಾಸೋದ್ಯಮವನ್ನು ಇನ್ನೂ ಹಿರಿದಾಗಿಸಲು ಹೊರಟಿದೆ ಸೌದಿ. ಜಗತ್ತಿನ ಬೆಸ್ಟ್ ಟೂರಿಸಂ ಡೆಸ್ಟಿನೇಶನ್ ಆಗಬೇಕೆಂಬ ಹಟ ಹೊತ್ತು ಹೊರಟಿದೆ. ಪ್ರವಾಸೋದ್ಯಮ ಬಲಗೊಳ್ಳಲು ನಮ್ಮ ನಮ್ಮ ಊರುಗಳಲ್ಲೇ ಬೊಂಬಡ ಬಜಾಯಿಸಿದರೆ, ತುತ್ತೂರಿ ಊದಿದರೆ ಅದು ವ್ಯರ್ಥ ಪ್ರಲಾಪದಂತೆ ಕೇಳಿಸಬಹುದು. ಅಂದರೆ, ಭಾರತದ ಪ್ರವಾಸೋದ್ಯಮ ಪ್ರಚಾರ ಆಗಬೇಕಿರೋದು ಹೊರದೇಶಗಳಲ್ಲಿ.
ಕರ್ನಾಟಕದ ಪ್ರವಾಸೋದ್ಯಮ ಪ್ರಚಾರ ಆಗಬೇಕಿರೋದು ಹೊರ ರಾಜ್ಯಗಳಲ್ಲಿ ಮತ್ತು ವಿದೇಶದಲ್ಲಿ. ಸೌದಿ ಅದನ್ನು ಅರ್ಥಮಾಡಿಕೊಂಡಿದೆ. ಅಷ್ಟೇ ಅಲ್ಲ ಸೌದಿ ಅರೇಬಿಯಾಗೆ ಅತಿ ಹೆಚ್ಚು ಪ್ರವಾಸಿಗರು ಬರುವುದು ಎಲ್ಲಿಂದ ಎಂಬುದನ್ನೂ ಸ್ಟಡಿ ಮಾಡಿದೆ. ಹೀಗಾಗಿ ಅದು ಭಾರತದಲ್ಲಿ ಒಂದು ರೋಡ್ ಶೋ ಆಯೋಜಿಸುತ್ತದೆ. ಸೆಪ್ಟೆಂಬರ್ ಹದಿನೈದರಿಂದ ಹತ್ತೊಂಬತ್ತರ ತನಕ ಗುಜರಾತ್, ಹೈದರಾಬಾದ್ ಮತ್ತು ದೆಹಲಿಯಲ್ಲಿ ರೋಡ್ ಶೋ ಮೂಲಕ ತನ್ನ ಪ್ರವಾಸೋದ್ಯಮವನ್ನು ಆಕರ್ಷಕವಾಗಿ ಜಾಹೀರು ಮಾಡಿತು.ಭಾರತದ ಪ್ರಮುಖ ಟ್ರಾವೆಲ್ ಏಜೆನ್ಸಿಗಳು, ಟೂರ್ ಆಪರೇಟರ್ ಗಳು, ವಿಮಾನ ಕಂಪೆನಿಗಳು ಎಲ್ಲರೊಂದಿಗೆ ಸಂಪರ್ಕ ಸಾಧಿಸಿಕೊಂಡಿತು. ಗ್ರೂಪ್ ಇನ್ಸೆಂಟಿವ್ ಟೂರ್ಸ್ ಮತ್ತು MICE- ಮೀಟಿಂಗ್, ಇನ್ಸೆಂಟಿವ್, ಕಾನ್ಫರೆನ್ಸ್, ಎಕ್ಸಿಬಿಷನ್ ಎಂಬ ಕಾನ್ಸೆಪ್ಟ್ ಮೂಲಕ ಟೂರ್ ಆಫರ್ ಪ್ಲಾನ್ ಮಾಡಿತು. ವೆಡ್ಡಿಂಗ್ ಟೂರಿಸಂ ಎಂಬ ಪರಿಕಲ್ಪನೆಗೂ ದೊಡ್ಡ ಮಟ್ಟದ ಪ್ರಚಾರ ನೀಡಬಯಸಿ, ಅದಕ್ಕೂ ಆಫರ್ ಕೊಟ್ಟಿತು. ವಿಂಟರ್ ಟೂರಿಸಂಗೆ ವ್ಯಾಪಕ ಪ್ರಚಾರವನ್ನು ಪ್ಲಾನ್ ಮಾಡಿತು. ಫುಟ್ ಬಾಲ್ ದಂತಕತೆ ಕ್ರಿಸ್ಚಿಯಾನೋ ರೊನಾಲ್ಡೋ ಆಡಿದ ಒಂದು ಮಾತನ್ನೇ ಪ್ರವಾಸದ ಟ್ಯಾಗ್ ಲೈನ್ ಆಗಿ ಬಳಸಿಕೊಂಡಿತು. ‘I came here for football, I stayed for more’ ಎಂಬ ಸಾಲು ಪ್ರವಾಸಿಗರನ್ನು ಸೆಳೆಯಲು ಸಾಕಾಯ್ತು. ಇವೆಲ್ಲವೂ ಸೌದಿಯ ವಿಶನ್ 2030ಯ ಯೋಜನೆಗಳು, ಇಂಥ ದೂರದರ್ಶಿತ್ವ ಇದ್ದಲ್ಲಿ ಮಾತ್ರ ಸಾಧನೆ ಸಾಧ್ಯವಾಗುವುದು. ಭಾರತ ಯಾಕೆ ನಮ್ಮಲ್ಲಿ ಇಷ್ಟೆಲ್ಲ ಇದ್ದಾಗ್ಯೂ ಇಂಥ ಯೋಜನೆಗಳನ್ನು ಹಾಕುತ್ತಿಲ್ಲ? ಪ್ರಶ್ನಿಸಿಕೊಳ್ಳಲೇಬೇಕಾಗಿದೆ. ತಡವಾದರೂ ಸೈ, ಇನ್ನಾದರೂ ಮೈ ಕೊಡವಿ ಎದ್ದು ಪ್ರವಾಸೋದ್ಯಮದಲ್ಲಿ ಭಾರತ ಅಗ್ರೆಶನ್ ತೋರಬಹುದೇ?