ಅವನ ಹೆಸರು ವಾಲ್ಟರ್. ಕೊರಿಯಾದ ಪ್ರವಾಸಿ. ಇನ್ ಸ್ಟಾಗ್ರಾಮ್‌ನಲ್ಲಿ ಆತ ಭಾರತದ ಮಾನ ಹರಾಜು ಹಾಕಿದ್ದಾನೆ. ಹಾಗಂತ ಅವನ ಮೇಲೆ ಕೆರಳಬೇಕಿಲ್ಲ. ಯಾಕಂದ್ರೆ ತಪ್ಪು ಅವನದ್ದೇನೂ ಇಲ್ಲ. ಅವನು ಮಾಡಿದ ಒಂದು ತಪ್ಪೇನೇಂದರೆ ಭಾರತೀಯರನ್ನು ನಂಬಿದ್ದು. ದೆಹಲಿಗೆ ಕಾಲಿಟ್ಟ ಕೂಡಲೇ ಬಕರಾ ಸಿಕ್ಕ ಅಂತ ಆಟೋದವರು ಇನ್ನಿಲ್ಲದಂತೆ ಸುಲಿಗೆಗೆ ಇಳಿದಿದ್ದಾರೆ. ನಗರದೊಳಗಿನ ಯಾವುದೋ ಚಿಕ್ಕ ಪ್ರಯಾಣಕ್ಕೆ ಆಟೋಚಾಲಕ ಕಬಳಿಸಿದ್ದು ಬರೋಬ್ಬರಿ 3800ರುಪಾಯಿ. ದೆಹಲಿಯಿಂದ ಆಗ್ರಾಗೆ ಎಸಿ ಟ್ಯಾಕ್ಸೀಲಿ ಹೋದರೂ ಎರಡು ಸಾವಿರ ಆಗಲ್ಲ. ಅಂಥದ್ರಲ್ಲಿ ನಗರದೊಳಗೆ ಕನಿಷ್ಟಪ್ರಯಾಣಕ್ಕೆ ಇವನಿಂದ ಆ ಪರಿ ಸುಲಿಗೆ ಮಾಡಿದ್ದಾರೆ. ಅಲ್ಲಿಗೇ ಹಗಲು ದರೋಡೆ ನಿಲ್ಲಲಿಲ್ಲ.

ವಯಸ್ಸಾಗಿರೋ ಬಿಳಿಗಡ್ಡದ ವ್ಯಕ್ತಿಯೊಬ್ಬ ಬಂದು, ಇಲ್ಲಿ ಜನರನ್ನು ನಂಬಬೇಡ, ಮೋಸ ಮಾಡ್ತಾರೆ. ನಾನು ನಿಂಗೆ ದೆಹಲಿ ದುನಿಯಾ ತೋರಿಸ್ತೀನಿ ಬಾ ಅಂತ ಕರೆದಿದ್ದಾನೆ. ತನ್ನನ್ನು ತಾನು ಪ್ರೊಫೆಸರ್ ಅಂತ ಪರಿಚಯ ಮಾಡಿಕೊಂಡಿದ್ದಾನೆ ಈ ತಾತ. ಅವನ ವಯಸ್ಸು, ಮಾತು, ಡ್ರೆಸ್ಸು ಎಲ್ಲ ನೋಡಿ ಯಾಮಾರಿದ ಪ್ರವಾಸಿ ವಾಲ್ಟರ್ ಅವನೊಂದಿಗೆ ದೆಹಲಿ ಸುತ್ತಲು ಹೊರಟಿದ್ದಾನೆ. ಅಲ್ಲಿಂದ ಮುಂದೆ ಕೊರಿಯನ್ ಪರ್ಸಿಗೆ ಕತ್ತರಿ ಮೇಲೆ ಕತ್ತರಿ. ಅವನ ಖರ್ಚಲ್ಲೇ ಊಟ ತಿಂಡಿ, ಶಾಪಿಂಗ್, ಸ್ಥಳಭೇಟಿ ಎಲ್ಲವನ್ನೂ ಮಾಡಿಕೊಂಡ ತಾತಪ್ಪ ಸುಮಾರು ಎಂಟು ಸಾವಿರ ಖರ್ಚು ಮಾಡಿಸಿದ್ದಾನೆ.

WALTER

ಇಷ್ಟೊಂದು ಖರ್ಚಾದ ನಂತರ, ನಿಮ್ಮ ಪಾಲಿನ ಖರ್ಚನ್ನು ಶೇರ್ ಮಾಡಿ ಎಂದು ಕೇಳ್ತಾ ಇದ್ದ ಹಾಗೇ, ಅಯ್ಯೋ ನಾನು ಖರ್ಚು ಮಾಡಿದ್ರೆ ನನ್ನ ಹೆಂಡ್ತಿ ನನ್ನನ್ನು ಕೊಂದೇಬಿಡ್ತಾಳೆ ಅಂದಿದ್ದಾನೆ ತಾತ. ಅನ್ಯಮಾರ್ಗವಿಲ್ಲದೇ ಕೊರಿಯನ್ ಪ್ರಜೆ ಹೆಲ್ಪ್ ಹೆಲ್ಪ್ ಅಂತ ಬಾಯಿ ಬಡ್ಕೊಂಡಿದ್ದಾನೆ. ಜನ ಸೇರುತ್ತಿದ್ದ ಹಾಗೆಯೇ ಮುದುಕ ಪರಾರಿ ಆಗಿದ್ದಾನೆ. ಇವೆಲ್ಲವನ್ನೂ ಇಂಚಿಂಚೂ ತನ್ನ ಕ್ಯಾಮೆರಾದಲ್ಲಿ ಲೈವ್ ಆಗಿ ಸೆರೆ ಹಿಡಿದಿದ್ದಾನೆ ಕೊರಿಯನ್ ಯುವಕ. ಆ ನಂತರ ಸ್ಥಳೀಯರು ಆತನ ನೆರವಿಗೆ ಬಂದದ್ದು, ಪೊಲೀಸ್ ಕಂಪ್ಲೇಂಟ್ ಕೊಟ್ಟದ್ದ ಎಲ್ಲವೂ ಆಗಿದೆ. ಇದರ ಹೊರತಾಗಿ ಅವನಿಗೆ ದೆಹಲಿಯಲ್ಲಿ ಸಾಕಷ್ಟು ಸಿಹಿ ಅನುಭವಗಳೂ ಆಗಿವೆ. ಆದರೆ ಭಾರತದಲ್ಲಿ ಮೋಸಗಾರರಿದ್ದಾರೆ, ಇಲ್ಲಿನ ಟ್ಯಾಕ್ಸಿ, ರಿಕ್ಷಾ ಚಾಲಕರು ಸುಲಿಗೆಕೋರರು ಎಂಬ ಅಂಶ ಅತನ ವಿಡಿಯೋ ಮೂಲಕ ಹೈಲೈಟ್ ಆಗಿದೆ. ಇವರು ಮಾಡಿರೋ ಹೀನಕೃತ್ಯಕ್ಕೆ, ಇಡೀ ಭಾರತವನ್ನೇ ಆತ ಹೀಗಳೆದಿದ್ದಾನೆ. ಅದು ಸಹಜವೇ. ಇದೇ ಕಾರಣಕ್ಕೆ ಹೇಳೋದು, ಟ್ಯಾಕ್ಸಿ ಚಾಲಕರು, ಟೂರ್ ಆಪರೇಟರ್ ಗಳು, ಗೈಡ್ ಗಳು, ಹೊಟೇಲ್ ರೆಸಾರ್ಟ್ ನ ಸಿಬ್ಬಂದಿ ಇವರೆಲ್ಲರೂ ಆಯಾ ದೇಶದ ಪ್ರವಾಸೋದ್ಯಮ ರಾಯಭಾರಿಗಳೆಂದು. ಅವರ ನಡವಳಿಕೆ ಮೇಲೆ ದೇಶದ ಮರ್ಯಾದ ನಿಂತಿರುತ್ತದೆ. Sorry Walter!