Tuesday, April 28, 2026
Tuesday, April 28, 2026

ಡೋಂಟ್ ಕೇರ್ ಎಂದು ಪುಟಿದೆದ್ದ ಪ್ರವಾಸೋದ್ಯಮ

ಸೋಷಿಯಲ್ ಮೀಡಿಯಾ ಇರಬಹುದು, ಟ್ರಾವೆಲ್ ಇಂಡಸ್ಟ್ರಿಯ ಡೇಟಾ ಇರಬಹುದು, ನೀಡುತ್ತಿರುವ ಅಂಕಿಅಂಶ ಒಂದೇ. ಪಶ್ಚಿಮ ಏಷ್ಯಾದ ನಷ್ಟ ಆಗ್ನೇಯ ಏಷ್ಯಾದ ಲಾಭವಾಗಿ ಪರಿಣಮಿಸಿದೆ. ಪ್ರವಾಸಿಗರು ಮೂಗುಮುರಿಯುತ್ತಿದ್ದ ಆಗ್ನೇಯ ಏಷ್ಯಾ ಈಗ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಂಗಾಪೂರ್, ಹಾಂಗ್ ಕಾಂಗ್, ವಿಯೆಟ್ನಾಂ, ತೈವಾನ್, ಚೈನಾ, ಶ್ರೀಲಂಕಾ, ಫಿಲಿಪ್ಪೈನ್ಸ್, ಮಾಲ್ಡೀವ್ಸ್, ಬ್ಯಾಂಕಾಕ್, ಥೈಲ್ಯಾಂಡ್ ದೇಶಗಳ ಪ್ರವಾಸದ ಫೊಟೋಗಳು ರಾರಾಜಿಸತೊಡಗಿವೆ.

ಜಿಂದಗೀ ನಾ ಮಿಲೇಗಿ ದೊಬಾರಾ- ಹೌದು, ಈ ಬದುಕು ಮತ್ತೆ ಸಿಗುವುದಿಲ್ಲ. ಇದು ಮನುಷ್ಯನ ಇಂದಿನ ಮನಸ್ಥಿತಿ. ಆತ ತುಂಬ ದೂರದ ಭವಿಷ್ಯವನ್ನು ಯೋಚಿಸುವುದಿಲ್ಲ. ಮುಂದೆಂದೋ ಸುಖವಾಗಿರಬೇಕೆಂದು ಇಂದು ಕೂಡಿಡುತ್ತಾ ಕೂರುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಮೂಲಗುಣ ಅಂದರೆ, ಜಂಗಮತ್ವದತ್ತ ಹೆಚ್ಚು ಹೊರಳುತ್ತಿದ್ದಾನೆ. ಆತನಿಗೆ ಪ್ರವಾಸ ಬೇಕಾಗಿದೆ. ವಾರಾಂತ್ಯದ ಪ್ರವಾಸ, ವರ್ಷಾಂತ್ಯದ ಪ್ರವಾಸ, ಬೇಸಗೆ ಪ್ರವಾಸ ಹೀಗೆ ಹಲವಾರು ಪ್ರವಾಸಗಳನ್ನು ಪ್ಲಾನ್ ಮಾಡಿಕೊಳ್ಳುತ್ತಲೇ ಇರುತ್ತಾನೆ. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬಷ್ಟು ಆತನಲ್ಲಿ ಪ್ರವಾಸದ ಕ್ರೇಜ್ ಹುಟ್ಟಿಕೊಂಡಿದೆ. ಹೀಗಿರುವಾಗ ಪ್ರಕೃತಿಯೋ ಜಿಯೋಪೊಲಿಟಿಕಲ್ ಸಂಗತಿಯೋ ಅವನಿಗೆ ಅಡ್ಡಗಾಲು ಹಾಕಲು ಬಂದರೆ ಆತನಿಗೆ ಇನ್ನೆಷ್ಟು ನಿರಾಶೆಯಾಗಲಿಕ್ಕಿಲ್ಲ?

ಇದನ್ನೂ ಓದಿ: ಪ್ರವಾಸಿಗರ ರೂಟ್ ಮ್ಯಾಪ್ ಬದಲಿಸಿದ ಯುದ್ಧ

ನಿಜ ಜಗತ್ತು ಇಂದು ಅನಿಶ್ಚಿತತೆಗಳ ಸಾಗರದಲ್ಲಿ ತೇಲುತ್ತಿದೆ. ಪಶ್ಚಿಮ ಏಷ್ಯಾದಂಥ ಪ್ರದೇಶಗಳಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಆತಂಕದ ವಾತಾವರಣ ನಿರ್ಮಿಸಿವೆ. ಮೂರು ತಿಂಗಳುಗಳಿಂದ ಇದು ಪ್ರವಾಸಿಗನ ಕನಸುಗಳಿಗೆ ತಣ್ಣೀರು ಎರಚುತ್ತಲೇ ಇದೆ. ಇದರಿಂದ ಪ್ರವಾಸೋದ್ಯಮದ ಎಲ್ಲ ಅಂಗಗಳೂ ನಷ್ಟ ಅನುಭವಿಸಿದ್ದಾಗಿದೆ. ಆದರೆ ಸೋಲೊಪ್ಪಿಕೊಂಡು ಕೂರೋದು ಸರಿಯೇ? ಇಂಥ ಜಾಗತಿಕ ಸಂಘರ್ಷಗಳು ಸಂಭವಿಸಿದಾಗ ಪ್ರವಾಸೋದ್ಯಮ ಕ್ಷೇತ್ರವೇ ಮೊದಲ ಬಲಿಯಾಗುವುದು ಸಹಜ. ಆದರೆ ಈ ತಿಂಗಳು ಧಿಡೀರ್ ಎಂಬಂತೆ ಪ್ರವಾಸೋದ್ಯಮ ಪುಟಿದೆದ್ದಿದೆ. ಪಶ್ಚಿಮ ಏಷ್ಯಾದ ಯುದ್ಧಕ್ಕೆ ಡೋಂಟ್ ಕೇರ್ ಅನ್ನುತ್ತಿದ್ದಾರೆ ಪ್ರವಾಸಿಗರು. ತಿರುಗೋದಕ್ಕೆ ನಿಮ್ಮ ದೇಶವೇ ಆಗಬೇಕಾ? ನಿಮ್ಮ ದೇಶದ ಮೂಲಕವೇ ಹಾದು ಹೋಗಬೇಕಾ? ಅಜ್ಜಿಯ ಕೋಳಿ ಕೂಗಲಿಲ್ಲವೆಂದರೆ ಬೆಳಗಾಗೋದಿಲ್ವಾ ಎಂದು ಪ್ರಶ್ನಿಸಿ ಬೆನ್ನಿಗೆ ಬ್ಯಾಗ್ ಏರಿಸಿಕೊಳ್ಳಲಾರಂಭಿಸಿದ್ದಾರೆ. ಉದ್ಯಮವನ್ನು ನಾವೇ ಮೇಲಕ್ಕೆತ್ತುತ್ತೇವೆ ಎಂಬಂತೆ ಪ್ರವಾಸಿಗರು ಮನೆಯಿಂದ ಹೊರಬಿದ್ದಿದ್ದಾರೆ. ಭಾರತೀಯ ಪ್ರವಾಸಿಗರು ನಾವಿನ್ನು ನಮ್ಮ ಪ್ರವಾಸದ ಆಸೆಯನ್ನು ಅದುಮಿಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಸಾರಿದ್ದಾರೆ. ಹೌದು. ಇಂದಿನ ಪ್ರವಾಸಿಗರು ಸಂಕಷ್ಟಗಳಿಗೆ ಹೆದರಿ ಮನೆಯಲ್ಲಿ ಕೂರುವವರಲ್ಲ. ಬದಲಾಗಿ, ಪರಿಸ್ಥಿತಿಗೆ ತಕ್ಕಂತೆ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳುವ ‘ಅಡಾಪ್ಟಿವ್’ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಪ್ರವಾಸಿಗರು ತಮ್ಮ ಗಮ್ಯಸ್ಥಾನವನ್ನು ಬದಲಾಯಿಸುತ್ತಿದ್ದಾರೆ. ಅಪಾಯವಿರುವ ವಲಯಗಳ ಬದಲಿಗೆ ಆಗ್ನೇಯ ಏಷ್ಯಾ ಅಥವಾ ಯುರೋಪ್‌ನ ಸುರಕ್ಷಿತ ರಾಷ್ಟ್ರಗಳತ್ತ ಮುಖ ಮಾಡುತ್ತಿದ್ದಾರೆ. ಇದು ಇಂದಿನ ಪ್ರವಾಸಿಗರ ಮನಸ್ಥಿತಿ ಹಾಗೂ ಉತ್ಸಾಹವನ್ನು ತೋರಿಸುತ್ತಿದೆ.

Untitled design - 2026-04-28T172730.847

ಸೋಷಿಯಲ್ ಮೀಡಿಯಾ ಇರಬಹುದು, ಟ್ರಾವೆಲ್ ಇಂಡಸ್ಟ್ರಿಯ ಡೇಟಾ ಇರಬಹುದು, ನೀಡುತ್ತಿರುವ ಅಂಕಿಅಂಶ ಒಂದೇ. ಪಶ್ಚಿಮ ಏಷ್ಯಾದ ನಷ್ಟ ಆಗ್ನೇಯ ಏಷ್ಯಾದ ಲಾಭವಾಗಿ ಪರಿಣಮಿಸಿದೆ. ಪ್ರವಾಸಿಗರು ಮೂಗುಮುರಿಯುತ್ತಿದ್ದ ಆಗ್ನೇಯ ಏಷ್ಯಾ ಈಗ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಂಗಾಪೂರ್, ಹಾಂಗ್ ಕಾಂಗ್, ವಿಯೆಟ್ನಾಂ, ತೈವಾನ್, ಚೈನಾ, ಶ್ರೀಲಂಕಾ, ಫಿಲಿಪ್ಪೈನ್ಸ್, ಮಾಲ್ಡೀವ್ಸ್, ಬ್ಯಾಂಕಾಕ್, ಥೈಲ್ಯಾಂಡ್ ದೇಶಗಳ ಪ್ರವಾಸದ ಫೊಟೋಗಳು ರಾರಾಜಿಸತೊಡಗಿವೆ. ಸುರಕ್ಷಿತವೆನಿಸುವಂಥ ಯುರೋಪಿಯನ್ ದೇಶಗಳಿಗೂ ಪ್ರವಾಸಿಗರು ಧೈರ್ಯದಿಂದ ಹಾರುತ್ತಿದ್ದಾರೆ. ಪ್ರವಾಸಿ ಮನಸುಗಳ ರೆಕ್ಕೆ ಕಟ್ಟಿ ಹಾಕಲಾಗುವುದಿಲ್ಲ. ಅಂತೆಯೇ ವಿದೇಶವಲ್ಲದಿದ್ದರೇನಾಯ್ತು, ಸ್ವದೇಶದಲ್ಲೇ ಸುತ್ತೋಣ ಎಂದು ಒಂದು ವರ್ಗದ ಪ್ರವಾಸಿಗರು ಪ್ಲಾನ್ ಮಾಡುತ್ತಿದ್ದಾರೆ. ಜಾಗತಿಕ ಅಸ್ಥಿರತೆಯು ಇದೀಗ ಪರೋಕ್ಷವಾಗಿ ನಮ್ಮ ದೇಶದ ಪ್ರವಾಸೋದ್ಯಮಕ್ಕೆ ವರದಾನವಾಗಿ ಪರಿಣಮಿಸಿದೆ. ವಿದೇಶ ಪ್ರವಾಸಕ್ಕೆ ಪ್ರತಿರೋಧ ಬಂದರೆ, ಪ್ರವಾಸ ರದ್ದು ಮಾಡುವ ಬದಲು ಗಮ್ಯ ಬದಲಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಪರ್ವತಗಳು, ಕೇರಳದ ಹಸಿರು ಅಥವಾ ರಾಜಸ್ಥಾನದ ವೈಭವದತ್ತ ಧಾವಿಸುತ್ತಿದ್ದಾರೆ. ಇಲ್ಲಿನ ಹೊಟೇಲ್‌ಗಳು, ರೆಸಾರ್ಟ್‌ಗಳು ಮತ್ತು ಪ್ರವಾಸಿ ತಾಣಗಳು ಭರ್ತಿಯಾಗುತ್ತಿವೆ. ಅಚ್ಚರಿಯೆಂಬಂತೆ ದೇಶೀಯ ಪ್ರವಾಸಗಳ ಹೆಚ್ಚಳ ಭಾರತದ ಆರ್ಥಿಕತೆಗೆ ಬಲ ನೀಡಿದೆ. ಟ್ರಾವೆಲ್ ಇನ್ಶೂರೆನ್ಸ್ ಮಾಡಿಸಿಕೊಂಡು ಪ್ರವಾಸ ಹೊರಡುವ ವರ್ಗವೂ ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಪಾಲಿಸಿಗಳಲ್ಲಿ ಪ್ರವಾಸದ ಇನ್ಶೂರೆನ್ಸ್‌ನಲ್ಲಿ ಹೆಚ್ಚಳವಾಗಿದೆ. ಇನ್ನು ಪ್ರವಾಸಿಗರ ಈ ಆಸಕ್ತಿಯನ್ನು ಹಾಗೂ ಜಾಗತಿಕ ಉದ್ವಿಗ್ನತೆಯನ್ನು ಗಮನದಲ್ಲಿ ಇಟ್ಟುಕೊಂಡು ಟ್ರಾವೆಲ್ ಕಂಪೆನಿಗಳು, ವಿಮಾನಯಾನ ಸಂಸ್ಥೆಗಳು ಹತ್ತು ಹಲವು ಆಫರ್ ಕೊಡುವ ಔದಾರ್ಯ ತೋರುತ್ತಿವೆ. ಗ್ರಾಹಕ ಮತ್ತು ಉದ್ಯಮಿ ಇಬ್ಬರ ಮನಸ್ಥಿತಿಗಳೂ ಒಂದೇ ಆದಾಗ ಯಾವ ಬಾಹ್ಯ ಶಕ್ತಿಯೂ ಅವರನ್ನು ತಡೆಗಟ್ಟಲಾರದು ಎಂಬುದಕ್ಕೆ, ಪ್ರವಾಸೋದ್ಯಮ ಪುಟಿದೆದ್ದಿರುವುದೇ ಸಾಕ್ಷಿ. ಯುದ್ಧಸನ್ನದ್ಧ ದೇಶಗಳಿಗೆ ಇದು ಪಾಠವೂ ಹೌದು. ನಾವೇನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ಅರ್ಥವಾಗಬೇಕಿರುವ ಸಮಯ.

ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ತಾತ್ಕಾಲಿಕ ಅಡೆತಡೆಗಳನ್ನು ಉಂಟುಮಾಡಬಹುದೇ ಹೊರತು, ಜಗತ್ತನ್ನು ನೋಡಬೇಕೆಂಬ ಮನುಷ್ಯನ ಹಂಬಲವನ್ನು ತಡೆಯಲು ಸಾಧ್ಯವಿಲ್ಲ. ಎಚ್ಚರಿಕೆ ಮತ್ತು ಜಾಗರೂಕತೆಯೊಂದಿಗೆ ಮುನ್ನಡೆಯುವ ಈ ಪ್ರವೃತ್ತಿ ಪ್ರವಾಸೋದ್ಯಮದ ಭವಿಷ್ಯಕ್ಕೆ ಅತ್ಯಂತ ಶುಭಸೂಚಕವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!