Saturday, July 25, 2026
Saturday, July 25, 2026

ಹಿಮಾಲಯದ ಎದೆಯಲ್ಲಿ ಭಾರತೀಯ ವೀರರ ಅಮರ ತಾಣ

ಬರೋಬ್ಬರಿ 76 ದಿನಗಳ ಕಾಲ ಕಾರ್ಗಿಲ್‌ ಯುದ್ಧ ನಡೆಯಿತು. ಆಪರೇಷನ್ ವಿಜಯ್‌, ಆಪರೇಷನ್ ಸಫೇದ್‌ ಸಾಗರ್‌ ಕಾರ್ಯಾಚರಣೆಗಳ ಮೂಲಕ ಭಾರತೀಯ ಸಶಸ್ತ್ರ ಪಡೆಗಳು ಪಾಕ್‌ ನುಸುಳುಕೋರರನ್ನು ಕೊಂದು ಕೆಡವಿದ್ದವು. 1999ರ ಜುಲೈ-26ರಂದು ಭಾರತ ಕಾರ್ಗಿಲ್‌ ಪ್ರದೇಶವನ್ನು ಸಂಪೂರ್ಣ ತನ್ನ ತೆಕ್ಕೆಗೆ ಮರಳಿ ಪಡೆಯಿತು. ಈ ಮಹಾ ವಿಜಯದ ನೆನಪಿಗಾಗಿ ಪ್ರತಿವರ್ಷ ಜುಲೈ-26ನ್ನು ಕಾರ್ಗಿಲ್‌ ವಿಜಯ ದಿವಸ್‌ ಎಂದು ಆಚರಿಸಲಾಗುತ್ತಿದೆ.

ಪ್ರವಾಸದ ವಿಧಗಳ ಪಟ್ಟಿ ಎಳೆದಷ್ಟೂ ಉದ್ದವಾಗುವಂಥದ್ದು. ಅದಕ್ಕೆ ಎಲ್ಲೆಯೆಂಬುದಿಲ್ಲ. ಇತಿಹಾಸ, ವಾಸ್ತುಶಿಲ್ಪ, ಧಾರ್ಮಿಕ, ರಾಜಕೀಯ, ಆರೋಗ್ಯ, ಪರಿಸರ ಹೀಗೆ ಯಾವ ವಿಷಯಕ್ಕೂ ಪ್ರವಾಸ ಎಂಬ ಪದ ಹಚ್ಚಿದರೆ ಅಂಥದ್ದೊಂದು ಪ್ರವಾಸ ವಿಧ ಹುಟ್ಟಿಕೊಳ್ಳುತ್ತದೆ. ತಾಣಗಳನ್ನೂ ಸೃಷ್ಟಿಸಬಹುದು. ಆದರೆ, ಅವುಗಳಿಗೆಲ್ಲಾ ರಾಷ್ಟ್ರದ ಗೌರವದ, ರಾಷ್ಟ್ರ ನಿರ್ಮಾಣದ ಅತ್ಯುನ್ನತ ಸಂಕೇತಗಳು ಎನ್ನಲಾದೀತೇ? ಊಹೂಂ. ಅಂಥ ತಾಣಗಳ ಪಟ್ಟಿ ತೀರಾ ದೊಡ್ಡದೇನಿಲ್ಲ. ದೇಶಕ್ಕಾಗಿ ಕದನದಲ್ಲಿ ಕಾದಾಡಿದ, ರಾಷ್ಟ್ರ ನಿರ್ಮಾಣಕ್ಕೆ ಇಹ-ಪರಗಳನ್ನು ತೇದು ನೀಡಿದ ಮಹನೀಯರ ಕುರುಹು ಇರುವ ತಾಣಗಳು ಮಾತ್ರ ಈ ಪಟ್ಟಿಯವು.

ಇದನ್ನೂ ಓದಿ: ತಂಬುಳಿ ಮನೆ... ಅಜ್ಜಿಯ ಕೈರುಚಿ ನೆನಪಿಸುವ ಮನೆ

ಜಲಿಯನ್‌ವಾಲಾ ಬಾಗ್‌, ಕಾರ್ಗಿಲ್‌ ವಾರ್‌ ಮೆಮೋರಿಯಲ್‌, ಇಂಡಿಯನ್‌ ಗೇಟ್‌, ಲೋಣಾವಾಲಾ ಮೆಮೋರಿಯಲ್‌, ರೆಜಾಂಗ್ ಲಾ ವಾರ್‌ ಮೆಮೋರಿಯಲ್‌, ರಾಜ್‌ ಘಾಟ್‌, ಸ್ಟ್ಯಾಚ್ಯೂ ಆಫ್‌ ಯುನಿಟಿ ಹೀಗೆ ಹಲವು ತಾಣಗಳಿವೆ. ಇಂಥ ತಾಣಗಳು ಇಡೀ ದೇಶ ಇರುವವರೆಗೂ ಇರುವಂಥವು. ಭಾರತಕ್ಕೆ ಹುಟ್ಟು ಮತ್ತು ಗಟ್ಟಿಯಾಗಿ ನಿಂತುಕೊಳ್ಳುವ ತಾಕತ್ತು ನೀಡಿದ ತಾಣಗಳಿವು. ಇಂಥ ತಾಣಗಳತ್ತ ಪ್ರವಾಸಕ್ಕೆ ದೇಶಪ್ರೇಮದ ಪ್ರವಾಸ, ದೇಶದ ಇತಿಹಾಸ ಮನನದ ಪ್ರವಾಸ ಎಂದರೆ ತಪ್ಪಾಗದು. ಈ ತಾಣಗಳಲ್ಲಿ ಒಂದಾದ ʻಕಾರ್ಗಿಲ್‌ ಯುದ್ಧ ಸ್ಮಾರಕʻವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲೇಬೇಕಾದ ಸಮಯ ಪ್ರತಿವರ್ಷದ ಜುಲೈ-26.

Untitled design - 2026-07-25T194357.651

ಜುಲೈ-26 ಕಾರ್ಗಿಲ್‌ ವಿಜಯ ದಿವಸ್‌

ಅದು 1999. ಅದಕ್ಕೂ ಹಿಂದಿನಿಂದಲೇ ಚಳಿಗಾಲದಲ್ಲಿ ಆಗಬಹುದಾದ ಹಿಮಪಾತದ ಕಾರಣದಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಎಲ್‌ಒಸಿಯ ಕೆಲ ಎತ್ತರದ ಮುಂಚೂಣಿ ನೆಲೆಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡುವ ಪದ್ಧತಿ ಇತ್ತು. ಆದರೆ, ಪಾಕ್‌ ತನ್ನ ಪಾಪಿ ಬುದ್ಧಿ ಎಲ್ಲಿ ಬಿಡಬೇಕು. ಈ ಸಂದರ್ಭವನ್ನು ದುರುಪಯೋಗಕ್ಕೆ ಬಳಸಿಕೊಂಡಿತು. ಭಾರತೀಯ ಪ್ರದೇಶದ ಕಾರ್ಗಿಲ್‌, ದ್ರಾಸ್‌, ಬಟಾಲಿಕ್‌ ಮತ್ತು ಮುಷ್ಕೋ ಕಣಿವೆಗಳಲ್ಲಿನ ಎತ್ತರದ ಕೆಲವು ಭಾರತೀಯ ಬಂಕರ್‌ಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡಿತು. ಇದನ್ನು ಮೇ-3ರಂದು ಕಾರ್ಗಿಲ್‌ನ ಗಾರ್ಕೋನ್‌ ಗ್ರಾಮದ ಕುರಿಗಾಹಿ ʼತಾಶಿ ನಾಮ್‌ಗ್ಯಾಲ್‌ʼ ಎಂಬುವವರು ಗಮನಿಸಿದರು. ಭಾರತೀಯ ಸೇನೆಗೆ ಮಾಹಿತಿ ನೀಡಿದರು. ನಂತರ ಭಾರತೀಯ ಸೇನೆಯ ಗಸ್ತು ತಂಡಗಳು ಪರಿಶೀಲನೆ ನಡೆಸಿದಾಗ ಪಾಕ್‌ ಸೇನೆ ಒಳನುಸುಳಿರುವುದು ದೃಢಪಟ್ಟಿತು. ಹೀಗೆ ನುಸುಳಿದ್ದ ಪಾಕ್‌ ಸೇನೆಯನ್ನು ಭಾರತೀಯ ಸೇನೆ ಬಡಿದಟ್ಟಿದ ಸಾಹಸಗಾಥೆ ಜಗತ್ತಿಗೇ ಪರಿಚಯವಾಗಿದೆ.

ಬರೋಬ್ಬರಿ 76 ದಿನಗಳ ಕಾಲ ಕಾರ್ಗಿಲ್‌ ಯುದ್ಧ ನಡೆಯಿತು. ಆಪರೇಷನ್ ವಿಜಯ್‌, ಆಪರೇಷನ್ ಸಫೇದ್‌ ಸಾಗರ್‌ ಕಾರ್ಯಾಚರಣೆಗಳ ಮೂಲಕ ಭಾರತೀಯ ಸಶಸ್ತ್ರ ಪಡೆಗಳು ಪಾಕ್‌ ನುಸುಳುಕೋರರನ್ನು ಕೊಂದು ಕೆಡವಿದ್ದವು. 1999ರ ಜುಲೈ-26ರಂದು ಭಾರತ ಕಾರ್ಗಿಲ್‌ ಪ್ರದೇಶವನ್ನು ಸಂಪೂರ್ಣ ತನ್ನ ತೆಕ್ಕೆಗೆ ಮರಳಿ ಪಡೆಯಿತು. ಈ ಮಹಾ ವಿಜಯದ ನೆನಪಿಗಾಗಿ ಪ್ರತಿವರ್ಷ ಜುಲೈ-26ನ್ನು ಕಾರ್ಗಿಲ್‌ ವಿಜಯ ದಿವಸ್‌ ಎಂದು ಆಚರಿಸಲಾಗುತ್ತಿದೆ.

ಪರಮವೀರರು

ಕಾರ್ಗಿಲ್‌ ಯುದ್ಧದಲ್ಲಿ ರಣಭಯಂಕರರಂತೆ ಅಬ್ಬರಿಸಿ ಪಾಕಿಗಳ ಹುಟ್ಟಡಗಿಸಿದ್ದಕ್ಕಾಗಿ ಕ್ಯಾಪ್ಟನ್‌ ವಿಕ್ರಂ ಬಾತ್ರಾ ಮತ್ತು ಲೆಫ್ಟಿನೆಂಟ್‌ ಮನೋಜ್‌ ಕುಮಾರ್‌ ಪಾಂಡೆ ಅವರಿಗೆ ಮರಣೋತ್ತರ, ರೈಫಲ್‌ಮನ್‌ ಸಂಜಯ್‌ ಕುಮಾರ್‌ ಮತ್ತು ಗ್ರೆನೇಡಿಯರ್‌ ಯೋಗೇಂದ್ರ ಸಿಂಗ್‌ ಯಾದವ್‌ ಅವರಿಗೆ ಜೀವಿತಾವಧಿಯಲ್ಲೇ ಭಾರತೀಯ ಸೇನೆಯ ಅತ್ಯುನ್ನತ ಗೌರವ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು. ಇನ್ನೂ ಹಲವು ಮಹಾನ್‌ ಯೋಧರಿಗೆ ಮಹಾವೀರ ಚಕ್ರ, ವೀರ ಚಕ್ರ, ಶೌರ್ಯ ಪ್ರಶಸ್ತಿಗಳು ಸಂದವು.

Untitled design - 2026-07-25T194426.203

ವಿಜಯದ ಸ್ಮಾರಕ

1999-ಜುಲೈ-26 ಕಾರ್ಗಿಲ್‌ ವಿಜಯ ನಮ್ಮದಾಯಿತು. ಆದರೆ, 527 ಪರಾಕ್ರಮಿ ಯೋಧರು ಈ ಯುದ್ಧದಲ್ಲಿ ಹುತಾತ್ಮರಾದರು. ಅವರ ನೆನಪಿಗಾಗಿ ಸೃಷ್ಟಿಯಾಗಿದ್ದು ʼಕಾರ್ಗಿಲ್‌ ಯುದ್ಧ ಸ್ಮಾರಕʼ. ಇದರ ಗೋಡೆಯ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಲಾಗಿದೆ. ಸ್ಮಾರಕದ ಬಳಿ ಜವಾನ್‌ ಜ್ಯೋತಿಯೊಂದು ಸದಾ ಬೆಳಗುತ್ತಿದೆ. ಆವರಣದಲ್ಲಿ ಆಪರೇಷನ್‌ ವಿಜಯ್‌ ಹೆಸರಿನ ಗ್ಯಾಲರಿ ಸೃಷ್ಟಿಯಾಗಿದೆ. ಇಲ್ಲಿ ಕಾರ್ಗಿಲ್‌ ಯುದ್ಧದ ಛಾಯಾಚಿತ್ರಗಳು, ನಕ್ಷೆಗಳು, ಯುದ್ಧದಲ್ಲಿ ಬಳಸಲಾಗಿದ್ದ ಶಸ್ತ್ರಾಸ್ತ್ರಗಳು, ಯೋಧರು ಬಳಸಿದ್ದ ವಸ್ತುಗಳು ಹಾಗೂ ಕಾರ್ಗಿಲ್‌ ಯುದ್ಧದ ಮಾಹಿತಿಯನ್ನು ಪ್ರದರ್ಶಿಸಲಾಗಿದೆ. ವಿಶೇಷವೆಂದರೆ ಈ ಸ್ಮಾರಕದ ಬಳಿಯಿಂದ ಕಾರ್ಗಿಲ್‌ ಯುದ್ಧದ ಪ್ರಮುಖ ಸ್ಥಳಗಳಾದ ಟೈಗರ್‌ ಹಿಲ್‌, ಟೋಲೋಲಿಂಗ್‌ ಸೇರಿ ಹಲವು ಶಿಖರಗಳನ್ನೂ ಕಾಣಬಹುದು.

ಈ ಸ್ಮಾರಕವನ್ನು ನೋಡುವ ಪ್ರತಿ ಭಾರತೀಯನ ಎದೆಯಲ್ಲೂ ಕಾರ್ಗಿಲ್‌ ವೀರನೊಬ್ಬ ನೆಲೆಸುತ್ತಾನೆ. ಆಪತ್ತುಗಳು ಭಾರತದತ್ತ ಮುಖಮಾಡಿದಾಗಲೆಲ್ಲಾ ಅವುಗಳನ್ನು ಮಟ್ಟ ಹಾಕುವ ದಿಟ್ಟತನ ತುಂಬುತ್ತಾನೆ. ಎಷ್ಟೆಂದರೆ ಭಾರತಕ್ಕಾಗಿ ಎಷ್ಟು ಕಾದಾಡಿದರೂ ʼಯೇ ದಿಲ್‌ ಮಾಂಗೆ ಮೋರ್‌ʼ ಅನ್ನುವಷ್ಟು. ಹಾಗಾಗಿ ಭಾರತೀಯ ಯೋಧ ಮರಣವನ್ನೇ ಗೆದ್ದವನು. ಅವನು ಕಾಲನ ಕಾಲ, ಮಹಾಕಾಲ. ಮುಂದಿನ ಅಸಂಖ್ಯಾತ ತಲೆಮಾರುಗಳಿಗೂ ಕಲಿತನದ ಹೆಗ್ಗುರುತಾಗಿ ಬದುಕುವ ಚಿರಾಯು. ಅಮರ.

ದಾರಿ ಹೇಗೆ?

ಕಾರ್ಗಿಲ್‌ ಯುದ್ಧ ಸ್ಮಾರಕ ಲಡಾಖ್‌ನ ದ್ರಾಸ್‌ ನಗರದ ಬಳಿ, ಶ್ರೀನಗರ–ಲೇಹ್‌ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!