ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಜನಪ್ರಿಯ ಪ್ರವಾಸಿ ತಾಣಗಳು ..
ಅನೇಕ ಪ್ರವಾಸಿ ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ನಾವು ಭೇಟಿ ಕೊಡಲೇಬೇಕು ಅಂದುಕೊಂಡಿರುತ್ತೇವೆ. ಆದರೆ ಹಲವಾರು ಕಾರಣಗಳಿಂದ ಆ ಸ್ಥಳಗಳು ಪ್ರವಾಸಿಗರಿಗೆ ನಿಷೇಧಿತ ವಲಯಗಳಾಗಿಬಿಟ್ಟಿರುತ್ತವೆ. ಕಾಲಾನಂತರದಲ್ಲಿ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿರುತ್ತವೆ. ಅಂತಹ ಟೂರಿಸ್ಟ್ ಸ್ಪಾಟ್ಗಳ ಮಾಹಿತಿ ಇಲ್ಲಿವೆ.
ದೇಶ ಸುತ್ತಬೇಕು ಅಂದುಕೊಳ್ಳುವ ಮುನ್ನ ಅವು ಪ್ರವಾಸಿಗರಿಗೆ ಮುಕ್ತವಾಗಿದೆಯೇ ಎಂಬುದನ್ನು ಸಾಮಾಜಿಕ ಜಾಲತಾಣಗಳಿಂದ ತಿಳಿದುಕೊಳ್ಳಬೇಕಾದ ಕಾಲವಿದು. ಹೌದು, ಪ್ರವಾಸಿತಾಣಗಳು ನಿಷೇಧಿತ ವಲಯಗಳಾಗಲು ಹಲವಾರು ಕಾರಣಗಳಿವೆ. ಕೆಲವೊಮ್ಮೆ ದೇಶಗಳ ನಡುವೆ ಯುದ್ಧ, ನೈಸರ್ಗಿಕ ವಿಕೋಪ ಇಂತಹ ಅನೇಕ ಕಾರಣಗಳಿಂದಾಗಿ ಪ್ರವಾಸಿ ಸ್ಥಳಗಳು ಏಕಾಏಕಿ ನಿರ್ಬಂಧಿತ ಪ್ರದೇಶವಾಗಿ ಮಾರ್ಪಾಟಾಗಿಬಿಟ್ಟಿರುತ್ತವೆ. ಹಾಗೆ ಒಂದು ಕಾಲದಲ್ಲಿ ನಿಷೇಧಿಸಲ್ಪಟ್ಟು ಮತ್ತೊಮ್ಮೆ ಸಂದರ್ಶಕರಿಗೆ ಮುಕ್ತವಾಗಿರುವ ಅತ್ಯಂತ ಆಕರ್ಷಣೀಯ ಸ್ಥಳಗಳ ಪಟ್ಟಿಯನ್ನು ಇಲ್ಲಿವೆ.
ಡುಬ್ರೊವ್ನಿಕ್, ಕ್ರೊಯೇಷಿಯಾ (Dubrovnik, Croatia)
ಯುರೋಪಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಪ್ರಮುಖವಾದುದು ಕ್ರೊಯೇಷಿಯಾದ ಕರಾವಳಿಯಲ್ಲಿರುವ ಗೋಡೆಯಿಂದ ಆವೃತವಾದ ಡಾಲ್ಮೇಷಿಯನ್ ನಗರ. ಇದು ಯುನೆಸ್ಕೋ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಆದರೆ 1991ರಲ್ಲಿ ಯುಗೊಸ್ಲಾವಿಯದಿಂದ ಕ್ರೊಯೇಷಿಯಾ ಸ್ವಾತಂತ್ರ್ಯ ಪಡೆದುಕೊಂಡಾಗ, ಯುಗೊಸ್ಲಾವ್ ಪೀಪಲ್ಸ್ ಆರ್ಮಿ ನಗರದ ಮೇಲೆ ದಾಳಿ ಮಾಡಿ ಹಲವಾರು ತಿಂಗಳುಗಳ ಕಾಲ ಮುತ್ತಿಗೆ ಹಾಕಿತ್ತು. ಇದರ ಪರಿಣಾಮವಾಗಿ ಸಾಕಷ್ಟು ನಾಶ, ನಷ್ಟ, ಸಾವು ನೋವುಗಳು ಸಂಭವಿಸಿದ್ದು, ವರ್ಷಗಳ ಕಾಲ ಡುಬ್ರೊವ್ನಿಕ್ ಪಟ್ಟಣ ಜನವಸತಿಯಿಲ್ಲದೇ ಮಂಕಾಗಿತ್ತು. ಆದರೆ 1995ರಲ್ಲಿ ಶಾಂತಿ ಘೋಷಣೆಯಾದ ನಂತರ, ಜನವಸತಿ ಮೊದಲಿನಂತಾಗಿ ಪ್ರವಾಸಿಗರಿಗೆ ಮುಕ್ತವಾಯಿತು. 2011ರಲ್ಲಿ ಇದನ್ನು ಅತ್ಯಂತ ಜನಪ್ರಿಯ ಟಿವಿ ಸರಣಿ, ಗೇಮ್ ಆಫ್ ಥ್ರೋನ್ಸ್ಗಾಗಿ ಚಲನಚಿತ್ರ ಸೆಟ್ ಆಗಿ ಬಳಸಿದಾಗ ಈ ನಗರ ಮತ್ತೊಮ್ಮೆ ಜನಪ್ರಿಯವಾಯಿತು.

ಟಿಮೋರ್-ಲೆಸ್ಟೆ(Timor-Leste)
ಟಿಮೋರ್ ದ್ವೀಪದ ಪಶ್ಚಿಮ ಭಾಗ ಸೇರಿದಂತೆ ಇಂಡೋನೇಷ್ಯಾದ ಹೆಚ್ಚಿನ ಭಾಗವು ಡಚ್ ವಸಾಹತು ಪ್ರದೇಶವಾಗಿದ್ದರೂ, ಪೂರ್ವ ಟಿಮೋರನ್ನು ಪೋರ್ಚುಗೀಸರು ತಮ್ಮದಾಗಿಸಿಕೊಂಡರು. 1975ರಲ್ಲಿ ದೇಶವು ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆದ ನಂತರ ಇಂಡೋನೇಷ್ಯಾ ಅದರ ಮೇಲೆ ಆಕ್ರಮಣ ಮಾಡಿ, ಅನೇಕ ನಾಶ ನಷ್ಟಗಳಿಗೆ ಕಾರಣವಾಯಿತು. 1999ರಲ್ಲಿ ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಶೇ. 78 ರಷ್ಟು ಜನಸಂಖ್ಯೆ ಸ್ವಾತಂತ್ರ್ಯಕ್ಕಾಗಿ ಮತ ಚಲಾಯಿಸಿದರು. 2002ರಲ್ಲಿ ದೇಶವು ಅಂತಿಮವಾಗಿ ಸ್ವತಂತ್ರವಾಯಿತು. ಅಲ್ಲಿಯವರೆಗೆ ಪ್ರವಾಸಿಗರಿಗೆ ನಿರ್ಬಂಧಿತ ಪ್ರದೇಶವಾಗಿದ್ದ ಟಿಮೋರ್ ,ಇಂದು ಪ್ರಾಚೀನ ಕಡಲತೀರಗಳು, ವಿಶಿಷ್ಟ ಪೋರ್ಚುಗೀಸ್ ಪ್ರಭಾವಿತ ಸಂಸ್ಕೃತಿಯನ್ನು ಹೊಂದಿರುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕರೋಸ್ಟಾ, ಲಾಟ್ವಿಯಾ (Karosta, Latvia)
ಕರೋಸ್ಟಾ ಎಂಬುದು ಲಾಟ್ವಿಯಾದ ಆಧುನಿಕ ಲಿಪಾಜಾದಲ್ಲಿನ ಬಾಲ್ಟಿಕ್ ಸಮುದ್ರದಲ್ಲಿರುವ ಸೋವಿಯತ್ ನೌಕಾ ನೆಲೆಯಾಗಿದೆ. ಇದನ್ನು 1890 ಮತ್ತು 1906ರ ನಡುವೆ ರಷ್ಯಾದ ತ್ಸಾರ್ ಅಲೆಕ್ಸಾಂಡರ್ III ನಿರ್ಮಿಸಿದರು ಮತ್ತು ಸೋವಿಯತ್ ಅವಧಿಯಲ್ಲಿ ಸೋವಿಯತ್ ಬಾಲ್ಟಿಕ್ ನೌಕಾಪಡೆಗೆ ನೆಲೆಯಾಗಿ ಕಾರ್ಯನಿರ್ವಹಿಸಿದರು. 1991ರಲ್ಲಿ ಲಾಟ್ವಿಯಾ ಸ್ವಾತಂತ್ರ್ಯ ಪಡೆದಾಗ ಸೋವಿಯತ್ ಸೈನ್ಯವು ಕರೋಸ್ಟಾವನ್ನು ತೊರೆಯಿತು ಮತ್ತು ನಗರದ ಕೆಲವು ಭಾಗಗಳು ನಾಶವಾದವು. ಆದರೆ ಇಂದು ಇದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದೆ.
ಮೆಡೆಲಿನ್, ಕೊಲಂಬಿಯಾ (Medellin, Colombia)
1988ರಲ್ಲಿ ಟೈಮ್ ನಿಯತಕಾಲಿಕೆಯು ಮೆಡೆಲಿನ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ನಗರ ಎಂದು ಕರೆದಿದೆ. ಎಸ್ಕೋಬಾರ್ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ, ಕುಖ್ಯಾತ ಮಾದಕವಸ್ತು ದೊರೆ ಪ್ಯಾಬ್ಲೊ ಎಸ್ಕೋಬಾರ್ ನಗರವನ್ನು ತನ್ನ ಕೆಟ್ಟ ಕೆಲಸಗಳಿಗೆ ಬಳಸಿಕೊಂಡಿದ್ದನು. ಇದರಿಂದಾಗಿ ಪೊಲೀಸರೊಂದಿಗೆ ಕದನಗಳು, ರಾಜಕೀಯ ಹತ್ಯೆಗಳು, ಬಾಂಬ್ ಸ್ಫೋಟಗಳು ಮತ್ತು ಕೊಲೆಗಳು ಸಾಮಾನ್ಯವಾಗಿದ್ದವು. ಆದರೆ 30 ವರ್ಷಗಳ ಹಿಂದೆ ಎಸ್ಕೋಬಾರ್ ನಿಧನದ ನಂತರ ಮೆಡೆಲಿನ್ ಸಂಪೂರ್ಣವಾಘಿ ಬದಲಾವಣೆಯನ್ನು ಕಂಡಿತು. ಆರ್ಥಿಕವಾಗಿ ಸಾಮಾಜಿಕವಾಗಿ ಬೆಳವಣಿಗೆ ಹೊಂದುವುದರೊಂದಿಗೆ, 2013ರಲ್ಲಿ ನಗರವನ್ನು ಅರ್ಬನ್ ಲ್ಯಾಂಡ್ ಇನ್ಸ್ಟಿಟ್ಯೂಟ್ "ವಿಶ್ವದ ಅತ್ಯಂತ ನವೀನ ನಗರ" ಎಂದು ಹೆಸರಿಸಿತು. ಅಲ್ಲದೆ ಪ್ರವಾಸಿಗರಿಗೆ ಮುಕ್ತವಾಯಿತು.

ಮಾಲ್ಡೀವ್ಸ್
1972ರಲ್ಲಿ ಮಾಲ್ಡೀವ್ಸ್ ಮೊದಲ ಬಾರಿಗೆ ಪ್ರವಾಸಿಗರನ್ನು ಸ್ವಾಗತಿಸಿತ್ತು. ಆದರೆ ಸರ್ಕಾರವು 1978ರಲ್ಲಿ 'ಒಂದು ದ್ವೀಪ, ಒಂದು ರೆಸಾರ್ಟ್' ನೀತಿಯನ್ನು ಜಾರಿಗೆ ತಂದಿತು. ಈ ರೆಸಾರ್ಟ್ಗಳು ಹೆಚ್ಚಾಗಿ ಜನವಸತಿಯಿಲ್ಲದ ದ್ವೀಪಗಳಲ್ಲಿ ನಿರ್ಮಿಸಲ್ಪಟ್ಟವು ಮತ್ತು ಹಿತಾಧೂ(Hithadhoo) ಅಥವಾ ಫುವಹ್ಮುಲಾ(Fuvahmulah)ದಂತಹ ಹೆಚ್ಚು ಜನನಿಬಿಡ ದ್ವೀಪಗಳಿಗೆ ಪ್ರಯಾಣಿಸುವುದು ಕಷ್ಟಕರವಾಗಿತ್ತು. ಆದರೆ 2009ರಿಂದ ಜನವಸತಿ ದ್ವೀಪಗಳಲ್ಲಿರುವ ಸ್ಥಳೀಯರಿಗೆ ಅತಿಥಿಗೃಹಗಳನ್ನು ನಿರ್ಮಿಸಲು ಅವಕಾಶ ನೀಡಿದ್ದೇ ಪ್ರವಾಸಿಗರು ಸ್ಥಳೀಯರೊಂದಿಗೆ ವಸತಿ ಕಂಡುಕೊಂಡರು. ಅಲ್ಲದೆ ಗಡಿಯಿಂದಾಚೆಯಿದ್ದ ದ್ವೀಪಗಳಿಗೆ ಭೇಟಿ ನೀಡಲು ರಾಜಧಾನಿ ಮಾಲೆಯಿಂದ ʻವೇದಿಸ್' ಎಂದು ಕರೆಯಲ್ಪಡುವ ಹಡಗುಗಳನ್ನು ಬಳಕೆ ಮಾಡಲಾಯಿತು. ಇದು ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣಲು ಕಾರಣವಾಯಿತು.

ಅಲ್ಬೇನಿಯಾ(Albania)
20ನೇ ಶತಮಾನದ ಉತ್ತರಾರ್ಧದ ಬಹುಭಾಗವನ್ನು ಅಲ್ಬೇನಿಯಾ ಜಗತ್ತಿನ ಇತರ ಭಾಗಗಳಿಂದ ಪ್ರತ್ಯೇಕವಾಗಿ ಕಳೆಯಿತು. ದೇಶದ ಕಮ್ಯುನಿಸ್ಟ್ ಆಡಳಿತಗಾರ ಎನ್ವರ್ ಹೊಕ್ಷಾ ದೇಶವನ್ನು ದಿವಾಳಿ ಮಾಡಿದನು. ಹೊಕ್ಷಾ1985ರಲ್ಲಿ ನಿಧನರಾದರು. 1990ರಲ್ಲಿ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯಾದಾಗಿನಿಂದ, ದೇಶವು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿನ ಮೆಡಿಟರೇನಿಯನ್ ಬೀಚ್ ರೆಸಾರ್ಟ್ಗಳು, ಬೆರಗುಗೊಳಿಸುವ ಪರ್ವತ ಪಾದಯಾತ್ರೆ ಮತ್ತು ಟಿರಾನಾದಂತಹ ದೊಡ್ಡ ನಗರಗಳನ್ನು ಸುತ್ತುವ ಅನುಭವ ಪ್ರವಾಸಿಗರನ್ನು ಆಕರ್ಷಿಸಿತು.
ಸ್ಪೆರ್ಗೆಬೀಟ್, ನಮೀಬಿಯಾ (Sperrgebiet, Namibia)
ನೈರುತ್ಯ ನಮೀಬಿಯಾದ ದಕ್ಷಿಣ ನಮೀಬ್ ಮರುಭೂಮಿಯಲ್ಲಿಯ ಸ್ಪೆರ್ಗೆಬೀಟ್ ಪ್ರದೇಶವು ವಜ್ರಗಳಿಂದ ಸಮೃದ್ಧವಾಗಿದೆ. 1908ರಲ್ಲಿ ಜಕಾರಿಯಾಸ್ ಲೆವಾಲಾ ಎಂಬ ರೈಲ್ವೆ ಕೆಲಸಗಾರ ಕೋಲ್ಮನ್ಸ್ಕಾಪ್ನಲ್ಲಿ ವಜ್ರವನ್ನು ಕಂಡುಕೊಂಡ ನಂತರ ಸುಮಾರು 21ನೇ ಶತಮಾನದ ಆರಂಭದವರೆಗೆ ಇಡೀ ಪ್ರದೇಶವನ್ನು ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶವನ್ನಾಗಿಸಿತ್ತು. 2004ರಲ್ಲಿ ಸ್ಪೆರ್ಗೆಬಿಯೆಟ್ ಪ್ರದೇಶವನ್ನು 8,500-ಚದರ ಮೈಲಿ (22,000 ಚದರ ಕಿ.ಮೀ) ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಆ ಬಳಿಕ ಇಲ್ಲಿನ ಜಲಚರ ಜೀವಿಗಳು, ಪಕ್ಷಿ, ಪ್ರಾಣಿಗಳ ವೀಕ್ಷಣೆಯ ಕಾರಣದಿಂದ ಪ್ರವಾಸಿಗರಿಗೆ ಮುಕ್ತವಾಗಿಸಲಾಯಿತು.

ಭೂತಾನ್
ಹಿಮಾಲಯದಿಂದಲೇ ಎತ್ತರದಲ್ಲಿರುವ ಭೂತಾನ್ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಮೂಲಕ ಪ್ರಪಂಚದ ಉಳಿದ ದೇಶಗಳಿಂದ ಪ್ರತ್ಯೇಕವಾಗಿ ಉಳಿದಿತ್ತು. ಚೀನಾ ಮತ್ತು ಭಾರತದ ನಡುವೆ ಇರುವ ಈ ಪ್ರದೇಶವು ಅನೇಕ ಆಡಳಿತಾತ್ಮಕ ಸವಾಲುಗಳ ನಡುವೆಯೂ 2012 ಮತ್ತು 2016 ರ ನಡುವೆ ರಾಜ್ಯಕ್ಕೆ ಭೇಟಿ ನೀಡುವವರ ಸಂಖ್ಯೆ 24% ರಷ್ಟು ಹೆಚ್ಚಾಗಿದೆ. ಸದ್ಯ ನಿಸರ್ಗ ರಮಣೀಯ ತಾಣಗಳು, ಅಸಾಧಾರಣ ಬೌದ್ಧ ದೇವಾಲಯಗಳು ಮತ್ತು ಶತಮಾನಗಳಷ್ಟು ಹಳೆಯ ಸಂಪ್ರದಾಯಗಳು ಇನ್ನೂ ಇಲ್ಲಿನವರ ದೈನಂದಿನ ಜೀವನದ ಭಾಗವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಪೂರ್ವ ಬರ್ಲಿನ್, ಜರ್ಮನಿ
ಎರಡನೆಯ ಮಹಾಯುದ್ಧದ ನಂತರ, ಜರ್ಮನಿಯನ್ನು ಸೋವಿಯತ್ ಒಕ್ಕೂಟ ಮತ್ತು ಪಶ್ಚಿಮ ಮಿತ್ರರಾಷ್ಟ್ರಗಳಾಗಿ ಎರಡು ಭಾಗಗಳಾಗಿ ವಿಭಜಿಸಿದವು. 1961ರಲ್ಲಿ ಬರ್ಲಿನ್ ನ ರಾಜಧಾನಿಯನ್ನು ಬರ್ಲಿನ್ ಗೋಡೆ ಕಟ್ಟುವ ಮೂಲಕ ಪೂರ್ವ ಮತ್ತು ಪಶ್ಚಿಮ ಎಂದು ಬೇರ್ಪಡಿಸಲಾಯಿತು. ಈ ಎರಡು ವಲಯಗಳ ನಡುವಿನ ಪ್ರಯಾಣವು ಕಷ್ಟಕರವಾಗಿತ್ತು. ಚೆಕ್ಪಾಯಿಂಟ್ ಚಾರ್ಲಿಯನ್ನು ದಾಟುವುದು ಸಾಧ್ಯವಾಗದೇ ಹೋಯಿತು. 600ಕ್ಕೂ ಹೆಚ್ಚು ಪೂರ್ವ ಜರ್ಮನ್ನರು ಗೋಡೆ ದಾಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆದರೆ 1989ರಲ್ಲಿ ಬರ್ಲಿನ್ ಗೋಡೆ ಬಿದ್ದ ನಂತರದ ದಿನಗಳಲ್ಲಿ ಚೆಕ್ಪಾಯಿಂಟ್ ಚಾರ್ಲಿ ಒಂದು ಜನಪ್ರಿಯ ಆಕರ್ಷಣೆಯಾಯಿತು. ಇಲ್ಲಿ ಮೊದಲಿದ್ದ ಅನೇಕ ತಡೆಗಳು ಮುಕ್ತವಾಗಿ, ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿ ರೂಪುಗೊಂಡಿದೆ.
ಸೊವೆಟೊ, ದಕ್ಷಿಣ ಆಫ್ರಿಕಾ (Soweto, South Africa)
ಜೋಹಾನ್ಸ್ಬರ್ಗ್ನ ನೈರುತ್ಯ ಭಾಗದಲ್ಲಿರುವ ಒಂದು ಪಟ್ಟಣ ಸೊವೆಟೊ. ಮೊದಲ ಮತ್ತು ಎರಡನೆಯ ಮಹಾಯುದ್ಧಗಳು, ವರ್ಣಭೇದ ನೀತಿಯ ವಿರುದ್ಧ ದಂಗೆ ಇವೆಲ್ಲವೂ 1976ರಲ್ಲಿ ಸೊವೆಟೊ ದಂಗೆಯಲ್ಲಿ ಕೊನೆಗೊಂಡಿತು. 1990ರಲ್ಲಿ ವರ್ಣಭೇದ ನೀತಿ ಕೊನೆಗೊಂಡ ನಂತರ, ಸೊವೆಟೊದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ ಹೆಚ್ಚಿನ ನಿವಾಸಿಗಳು ಇನ್ನೂ ಕೆಲಸಕ್ಕಾಗಿ ಜೋಹಾನ್ಸ್ಬರ್ಗ್ಗೆ ಪ್ರಯಾಣಿಸಬೇಕಾಗಿದೆ. ಆದರೂ ಪ್ರವಾಸೋದ್ಯಮವು ಈಗ ಬೆಳೆಯುತ್ತಿರುವ ಆದಾಯದ ಮೂಲವಾಗಿದೆ. ನೆಲ್ಸನ್ ಮಂಡೇಲಾ ಅವರ ಹಳೆಯ ಮನೆಯಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಪ್ರಪಂಚದಾದ್ಯಂತದ ಸಂದರ್ಶಕರು ಬರುತ್ತಿದ್ದಾರೆ. ಇಲ್ಲಿರುವ ಅನೇಕ ಜನಪ್ರಿಯ ತಾಣಗಳಿಗೆ ದೇಶ ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಕಾಲ ಕಳೆದಂತೆ ಪ್ರವಾಸಿಗರಿಗೆ ನಿರ್ಬಂಧಿತ ಪ್ರದೇಶವಾಗಿದ್ದ ಅನೇಕ ತಾಣಗಳು, ಪ್ರವಾಸಿಗರಿಗೆ ಮುಕ್ತವಾಗುವ ಮೂಲಕ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ.